ಕಥೆ

ವಶವಾಗದ ವಂಶಿ – 11

ವಶವಾಗದ ವಂಶಿ – 10

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ಕಾಲ್ಪನಿಕ ಕತೆ)

(ಭಾಗ ಒಂದರಿಂದ ಮುಂದುವರಿದ ಭಾಗ..)

ಅಯ್ಯಾ.. ಆಳುಪರರು ಯಾರಿಗೆ ನಿಷ್ಠರಾಗಿದ್ದಾರೋ ಅವರೇ ಶಿವಳ್ಳಿಯ ದೇವಾಲಯದ ಮೇಲೆ ಸಂಚು ಹೂಡಿರುವುದು.

ಏನು ಹೇಳುತ್ತಿದ್ದೀಯ ಅನಂತೂ..!!! ಆಳುಪರರು ಸಾಮಂತರಾಗಿದ್ದರೂ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಂದುವೇಳೆ ಅವರು ಬಯಸಿ ಕೇಳಿದರೆ ಆಳುಪರರು ಯಾವುದಕ್ಕೂ ಇಲ್ಲವೆನ್ನುವುದಿಲ್ಲ ಎಂದು ಅವರಿಗೂ ತಿಳಿದ ವಿಷಯವೇ. ಹಾಗಿದ್ದೂ ಶಿವಳ್ಳಿಯ ದೇವಾಲಯ ಲೂಟಿ ಮಾಡುವ ಸಂಚು ಹೂಡಿರುವರೇ? ಹಾಗಾದರೆ ಅವರು ನಮ್ಮ ರಾಜರಾದ ಆಳುಪರರ ಜೊತೆ ಸ್ನೇಹಿಗಳಂತೆ ವರ್ತಿಸುವುದು ಕೇವಲ ತೋರ್ಪಡಿಕೆಯೇನು.?

ಇಲ್ಲ ಅಯ್ಯಾ.. ಅವರು ನಮ್ಮ ರಾಜರೊಡನೆ ಎಂದೂ ಭೇದ ಎಣಿಸಿಲ್ಲ. ಅಷ್ಟೇ ಏಕೆ ಅವರ ಹಿರಿಯ ರಾಜರಿಗಾಗಲೀ ಮಹಾಮಂತ್ರಿಗಳಿಗಾಗಲೀ ಈ ವಿಷಯವೇ ತಿಳಿದಿಲ್ಲ.

ಹಾಗಿದ್ದರೆ ಇನ್ಯಾರು? ಯುವರಾಜರದ್ದೇ ಈ ದುಷ್ಟ ಆಲೋಚನೆ?

ಹೌದು ಅಯ್ಯಾ.. ಸದ್ಯಕ್ಕೆ ತಿಳಿದಿರುವ ಪ್ರಕಾರ ಅವರ ಆಲೋಚನೆಯೇ ಇದು. ಆದರೆ ಇದಕ್ಕೆ ಕಾರಣ ನಮ್ಮ ರಾಜರ ಮೇಲಿನ ಹಗೆತನವಾಗಲೀ ಅಥವಾ ಯತಿಗಳ ತತ್ವಗಳ ಮೇಲಿನ ದ್ವೇಶವಾಗಲೀ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಹಾಗಿದ್ದರೆ ಮತ್ತೇಕೆ?

ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಅಯ್ಯಾ..

ಹೌದು ನಮ್ಮ ರಾಜರ ಮೇಲಿನ ಹಗೆತನವಿದ್ದರೆ ಜಾಸ್ತಿ ತೆರಿಗೆ ಹಾಕುವ ಮೂಲಕ ಅಥವಾ ಇನ್ಯಾವುದೋ ಹೊಸ ನೀತಿಗಳನ್ನು ತರುವುದರ ಮೂಲಕ ತೊಂದರೆ ನೀಡುತ್ತಿದ್ದರು.

ಯತಿಗಳ ಮೇಲೆ ದ್ವೇಶವಿದ್ದರೆ ವಿಗ್ರಹ ಕಳವು ಮಾಡುವುದರಿಂದ ಅವರನ್ನು ಅದೆಷ್ಟು ಘಾಸಿಗೊಳಿಸಿದಂತಾಗುವುದು?

ನೀ ಹೇಳುವುದರಲ್ಲೂ ಒಂದು ಅಂಶವಿದೆ ಅನಂತೂ. ಸರಿ ಈ ವಿಷಯ ಹೇಗೆ ತಿಳಿಯಿತು.?

ನಾನು ಬಾರಹಕನ್ಯಾಪುರದಲ್ಲಿದ್ದಾಗ ನನ್ನ ಹುಡುಕಿ ಒಬ್ಬ ಬಂದ. ಅವನ ಮಗನಿಗೆ ಕಾಮಾಲೆಯಾಗಿತ್ತಂತೆ. ದಾರಿಹೋಕನೊಬ್ಬ ಇವನು ಪರಿತಪಿಸುವುದನ್ನು ನೋಡಿ ಔಷಧಿ ನೀಡಿದನಂತೆ. ಹಾಗೆಯೇ ತಾನು ಘಟ್ಟದ ಮೇಲಿನ ಬಯಲುಸೀಮೆಯವನು, ಈ ರಾಜ್ಯದವನಲ್ಲ. ನಿಮ್ಮ ರಾಜರಾದ ಆಳುಪರರು ನಮ್ಮ ರಾಜನಿಗೆ ಸಾಮಂತರು. ನಮ್ಮ ರಾಜ ಶಿವಳ್ಳಿಯ ವೇಣುಗೋಪಾಲ ದೇವಸ್ಥಾನದ ಮೇಲೆ ಏನೋ ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿ ನಮ್ಮನ್ನು ಮಾರುವೇಶದಲ್ಲಿ ಅಲ್ಲಿಯ ದೇವಸ್ಥಾನದ ಮಾಹಿತಿ ಪಡೆಯಲು ಕಳುಹಿಸಿದ್ದರು, ಈ ವಿಷಯ ನಿಮ್ಮ ಅರಸರಿಗೆ ತಲುಪಿಸಿ ಎಂದನಂತೆ. ಅಷ್ಟು ಹೇಳುವುದರೊಳಗೆ ಯಾರೋ ಇಬ್ಬರು ಅವನನ್ನು ಅಲ್ಲಿಂದ ಬೆದರಿಸಿ ಕರೆದುಕೊಂಡು ಹೋದರಂತೆ.

ಇಷ್ಟನ್ನೂ ಬಂದು ನನ್ನ ಬಳಿ ಹೇಳಿದ. ಬಂದವರು ಯಾರು ಎಲ್ಲಿಗೆ ಹೋದರು ಎಂಬ ಮಾಹಿತಿ ಅವನಿಗೆ ತಿಳಿದಿಲ್ಲ.

ಬಹುಶಃ ಕರೆದುಕೊಂಡು ಹೋದವರು ಅವನಮೇಲೆ ಕಣ್ಣಿಟ್ಟಿದ್ದ ಗುಪ್ತಚರರಿರಬೇಕು.

ಈ ವಿಷಯವನ್ನು ನಿರ್ಲಕ್ಷಿಸದೇ ಅವರ ಅರಮನೆಯಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಮಾಹಿತಿ ಕಲೆಹಾಕಲು  ನಮ್ಮವರ ಪಡೆಯೊಂದನ್ನೇ ಕಳುಹಿಸಿದ್ದೆ. ನಮ್ಮ ಅದೃಷ್ಟದಿಂದಲೋ ಅಥವಾ ದೈವಸಂಕಲ್ಪದಿಂದಲೋ ಏನೊ, ಯುವರಾಜನ ಪರಮಾಪ್ತ ಬಂಟ ಸಿದ್ದ ಎಂಬುವವನು ಅರಮನೆಯ ಕುದುರೇಗಾಡಿ ಬಳಸದೇ, ಕುದುರೇ ಗಾಡಿ ಇಟ್ಟುಕೊಂಡು ಮಾರುವೇಶದಲ್ಲಿದ್ದ ನಮ್ಮವನ ಕುದುರೇಗಾಡಿಯಲ್ಲಿ ಶಿವಳ್ಳಿಗೆ ಬಂದನಂತೆ. ಬಹುಶಃ ಯಾರಿಗೂ ತಿಳಿಯಬಾರದೆಂದು ಅರಮನೆಯ ಕುದುರೇಗಾಡಿ ಬಳಸಲಿಲ್ಲವಿರಬೇಕು.

ಈ ಮಾಹಿತಿ ತಲುಪಿದ ಮೇಲೆ ಇಲ್ಲಿ ಅವನ ಚಲನವಲನಗಳ ಮೇಲೆ ಕಣ್ಣಿಡಲು ಮತ್ತೊಂದು ಪಡೆಯನ್ನು ನೇಮಿಸಿದ್ದೆ. ಎರಡು ದಿನ ಶಿವಳ್ಳಿಯ ದೇವಾಲಯ, ಸುತ್ತಮುತ್ತಲ ಊರುಗಳಲ್ಲಿ ಅಲೆದಾಡಿದನಂತೆ. ನಂತರ ಕೊಂಕಣದ ಕಡೆ ನಮ್ಮವರ ಮತ್ತೊಂದು ಕುದುರೇಗಾಡಿಯಲ್ಲಿ ತೆರಳಿದನಂತೆ. ಅಲ್ಲಿ ಗೋಕರ್ಣದಲ್ಲಿ ಒಂದೆರಡು ದಿನ ಇದ್ದು ಸುತ್ತಮುತ್ತಲೆಲ್ಲಾ ತಿರುಗಾಡಿ ಗೋವಾಪಟ್ಟಣಕ್ಕೆ ಹೋದನಂತೆ. ಅಲ್ಲಿ ಒಂದೆರೆಡು ದಿನ ತಂಗಿದ್ದು ತಿರುಗಾಡಿ ನಂತರ ಮತ್ತೊಂದು ಕುದುರೇಗಾಡಿಯ ಮೂಲಕ ಸೌರಾಷ್ಟ್ರದ ಕಡೆಗೆ ಪ್ರಯಾಣ ಬೆಳೆಸಿದನಂತೆ. ಸುಮಾರು ಒಂದು ವಾರದ ಬಳಿಕ ಪುನಹ ಇದೇ ಮಾರ್ಗದಲ್ಲಿ ತನ್ನ ಊರು ಸೇರಿಕೊಂಡಿದ್ದಾನೆ.

ಕೊಂಕಣದಿಂದ ಮರಳುವಾಗಲೂ ನಮ್ಮವರ ಗಾಡಿಯನ್ನೇ ಬಳಸುವಂತೆ ಎಲ್ಲಕಡೆ ಗಾಡಿಗಳನ್ನು ನಿಯೋಜಿಸಿದ್ದೆವು. ಬರುವಾಗಲೂ ಹಲವಾರು ಊರುಗಳಲ್ಲಿ ತಂಗಿ ಸೂಕ್ಷ್ಮವಾಗಿ ಅವಲೋಕಿಸಿ ಹೋದನಂತೆ.

ಬಹುಶಃ ಇವನೂ ಮಾಹಿತಿ ಸಂಗ್ರಹಿಸಲು ಬಂದಿರಬೇಕು. ಆದರೆ ಸೌರಾಷ್ಟ್ರಕ್ಕೆ ಏಕೆ ಹೋದ ಎಂದು ತಿಳಿಯಲು ಅವನು ಕೊಂಕಣದಿಂದ ಹೊರಟ ಕುದುರೆಗಾಡಿಯವನನ್ನು ಹುಡುಕಿ ವಿಚಾರಿಸಿದ್ದಾರೆ. ಸೌರಾಷ್ಟ್ರದ ಹಳ್ಳಿಯೊಂದಕ್ಕೆ ಹೋದನೆಂದೂ ಆ ಹಳ್ಳಿಯಲ್ಲಿ ಕುಖ್ಯಾತವಾದ ಡಕಾಯಿತರ ಪಡೆ ಇದೆಯೆಂದೂ ಅವನಿಂದ ಮಾಹಿತಿ ತಿಳಿಯಿತು. ಪುನಃ ಅವನು ವಾಪಸು ಬಂದ ಗಾಡಿಯಲ್ಲೇ ಆ ಊರಿಗೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಡಕಾಯಿತರು ಇರುವುದು ಖಚಿತವಾಯಿತು. ಅವರಮೇಲೂ ನಮ್ಮವರು ಕಣ್ಣಿಟ್ಟಿದ್ದರು.

ಅವರೂ ಒಮ್ಮೆ ಶಿವಳ್ಳಿಗೆ ಬಂದರು. ಮಾಹಿತಿ ದೊರಕಿದ ಕೂಡಲೆ ಅವರನ್ನು ಬಂಧಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಾಗಿತ್ತು. ಆದರೆ ಅವರು ಯಾವುದೇ ತಯಾರಿಗಳನ್ನು ನಡೆಸದೇ ಕೇವಲ ಯಾತ್ರಾರ್ಥಿಗಳ ಹಾಗೆ ಬಂದಿದ್ದರು.

ಆದರೇನಂತೆ ಬಂಧಿಸಿ ವಿಚಾರಿಸುವುದು ತಾನೇ?

ಅಯ್ಯಾ ನಿಮಗೂ ತಿಳಿದಿದೆ. ಗುಪ್ತಚರರ ಗುಂಪಿಗೆ ಮಾತ್ರ ನನ್ನ ಅಧಿಕಾರ. ಬಂಧಿಸಬಹುದಷ್ಟೇ ಆದರೆ ಬಂಧಿಸಿ ಕಾರಾಗೃಹದ ಸೇನಾಧಿಕಾರಿಗಳಿಗೆ ಹಸ್ತಾಂತರಿಸಬಹುದಷ್ಟೇ. ವಿಚಾರಣೆ ಮಾಡುವ ಅಧಿಕಾರ ನನಗೆ ನೀಡಿಲ್ಲ.

ಮಾರುವೇಶದಲ್ಲಿ ಬಂದು ದೇವಾಲಯದ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸಿದ ವಿಷಯವನ್ನು ಸೂಕ್ಷ್ಮವಾಗಿ ಮಂತ್ರಿಗಳ ಮೂಲಕ ರಾಜರಿಗೆ ಎಂದೋ ತಿಳಿಸಿದ್ದೆ ಅಯ್ಯಾ..

ತಿಳಿಸಿದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲವೇ? ಏಕೆ?

(ಮುಂದುವರೆಯುವುದು…)

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!