ಕಥೆ

ವಶವಾಗದ ವಂಶಿ – 10

ವಶವಾಗದ ವಂಶಿ – 9

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ಕಾಲ್ಪನಿಕ ಕತೆ)

(ಮುಂದುವರಿದ ಭಾಗ..)

ಸಿದ್ದ… ಜೋಯಿಸರು ದಿನವೊಂದನ್ನು ಗೊತ್ತುಮಾಡಿಕೊಟ್ಟಿದ್ದಾರೆ. ಮೂರು ಮಾಸಗಳಷ್ಟೇ ಉಳಿದಿವೆ. ಇನ್ನು ನಮ್ಮ ಕಾರ್ಯವಷ್ಟೇ ಬಾಕಿ ಇರುವುದು.

ಒಡೆಯಾ.. ನಿಮ್ಮ ಅಣತಿಯ ಮೇರೆಗೆ ಯೋಜನೆಯೊಂದನ್ನು ರೂಪಿಸಿಟ್ಟಿದ್ದೇನೆ. ನಿಮ್ಮ ಅನುಮೋದನೆ ದೊರಕಿದರಾಯಿತು.‌ ಕಾರ್ಯಶೀಲರಾಗುತ್ತೇವೆ.

ನನ್ನ ಮನೋ ಇಂಗಿತ ಅರ್ಥೈಸಿಕೊಂಡು ನಾ ಹೇಳುವ ಮೊದಲೇ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳುವವನು ನೀನೊಬ್ಬನೇ. ಆದ್ದರಿಂದಲೇ ನೀನು ನನಗೆ ಪರಮಾಪ್ತನಾಗಿರುವುದು. ಹೇಳು ಅದೇನು ಯೋಜನೆ.?

ಒಡೆಯಾ.. ಯತಿಗಳು ಪೂಜಿಸುವ ವಿಗ್ರಹವಾದ್ದರಿಂದ ಹಾಗು ಅದಕ್ಕೆ ತನ್ನದೇ ಆದ ಚರಿತ್ರೆ ಇರುವುದರಿಂದ ನಮ್ಮವರ್ಯಾರೂ ಅಪಹರಿಸುವುದಕ್ಕೆ ಪೂರ್ಣವಾಗಿ ಒಪ್ಪಲಾರರು. ಅದರ ಮೇಲೆ ಭಯಭಕ್ತಿಗಳಿರುವುದರಿಂದ ಹಿಂಜರಿಯುವರು. ಇಂತಹವರಿಂದ ನಾಳೆಯ ದಿನ ಎಡವಟ್ಟಾದರೆ ನಮ್ಮ ಯೋಜನೆಗೆ ತೊಡಕುಗಳಾಗಬಹುದು. ಆದ್ದರಿಂದ ಆ ದೇವಾಲಯದ ಬಗ್ಗೆ ಪರಿಚಯವಿರದ ಅಪರಿಚಿತರಿಂದ ಈ ಕಾರ್ಯ ಮಾಡಿಸುವ ಯೋಜನೆ ತಯಾರಿಸಿದ್ದೇನೆ.

ಆಗಲಿ. ಇದನ್ನು ಹೇಗೆ ಮಾಡುವೇ? ಮತ್ತೆ ತೆಲುಗರನ್ನು ಕರೆತರುವೆಯಾ?

ಇಲ್ಲ ಒಡೆಯಾ.. ಅದಕ್ಕಾಗಿ ಈ ಬಾರಿ ಸೌರಾಷ್ಟ್ರದ ಕಡೆಯವರನ್ನು ಹುಡುಕಿದ್ದೇನೆ. ಸೌರಾಷ್ಟ್ರದಲ್ಲಿ ಕೆಲ ದರೋಡೆಕೋರರ ಗುಂಪಿದೆ. ದರೋಡೆಯೇ ಇವರ ಪ್ರವೃತ್ತಿ. ದರೋಡೆಗೆ ಹೊರಟರೆ ಇವರಿಗೆ ಮಠಮಂದಿರ, ಅರಮನೆ ಗುಡಿಸಲು ಎನ್ನುವ ಯಾವ ಭೇದಭಾವವೂ ಇಲ್ಲ. ಕೈಗೆ ಸಿಕ್ಕಿದವೆಲ್ಲವನ್ನೂ ಲೂಟಿಗೈಯುವರು. ಅವರಿಂದ ಈ ಕಾರ್ಯ ಮಾಡಿಸಬಹುದು. ಅವರೊಡನೆ ಒಂದುಸುತ್ತು ಮಾತನಾಡಿಬಂದಿದ್ದೇನೆ. ಅವರು ಒಪ್ಪಿದ್ದಾರೆ. ಆದರೆ ಸ್ವಲ್ಪ ಹೆಚ್ಚೇ ಹಣವನ್ನು ಕೇಳಿದ್ದಾರೆ.

ಹೌದೇ.. ಅವರನ್ನು ಯಾವಾಗ ಸಂಧಿಸಿದೆ ಸಿದ್ದಾ..? ಅವರಿಂದ ಹೇಗೆ ಇದನ್ನು ಮಾಡಿಸುವೆ.? ಬಿಡಿಸಿ ಹೇಳು.

ಒಡೆಯಾ.. ಮಾರುವೇಶದಲ್ಲಿ ಶಿವಳ್ಳಿಗೆ ಹೋಗಿದ್ದೆನಲ್ಲಾ ಆಗಲೇ ಈ ಯೋಜನೆ ತಲೆಯಲ್ಲಿತ್ತು. ಹಾಗಾಗಿ ಶಿವಳ್ಳಿಯಿಂದ ಹಾಗೇ ಮುಂದುವರೆದು ಇಡುಗುಂಜಿ, ಗೋಕರ್ಣದ ಮೂಲಕ ಕೊಂಕಣವನ್ನು ಹೊಕ್ಕು, ಅಲ್ಲಿಂದ ಸೌರಾಷ್ಟ್ರಕ್ಕೆ ಹೋಗಿ ಇವರೊಂದಿಗೆ ಸಂಧಿಸಿ ಬಂದಿರುವೆ. ನಾನೊಬ್ಬ ಕೊಂಕಣ ಭಾಗದಲ್ಲಿರುವ ಶ್ರೀಮಂತ ವರ್ತಕನೆಂದೂ, ತನ್ನ ಕಷ್ಟ ಪರಿಹಾರಕ್ಕಾಗಿ ಜ್ಯೋತಿಷಿಗಳು ಹೇಳಿದಂತೆ ಆ ಮೂರ್ತಿಯನ್ನು ಬಯಸುತ್ತಿರುವುದಾಗಿ ಹೇಳಿದ್ದೇನೆ.

ಸರಿ.. ಮುಂದಿನ ಯೋಜನೆ? ಇಲ್ಲಿಗೆ ಹೇಗೆ ತರಿಸುವೆ.??

ಒಡೆಯಾ.. ಅವರು ಅಪಹರಿಸಿಕೊಂಡು ಒಡಬಾಂಡೇಶ್ವರದ ಸಮುದ್ರ ತಟಕ್ಕೆ ಬರುತ್ತಾರೆ. ಅವರಿಗಾಗಿ ದೋಣಿಯೊಂದು ತಯಾರಾಗಿರುತ್ತದೆ. ಅಲ್ಲಿಂದ ಮುಂದೆಸಾಗಿ ಗೋಕರ್ಣದ ಬಳಿ ಅವರಿಂದ ನಮ್ಮವರು ಅದನ್ನು ಪಡೆಯುತ್ತಾರೆ. ಹಾಗೆಯೇ ಅವರು ಸಾಗರ ಮಾರ್ಗದಲ್ಲಿಯೇ ಮುಂದೆ ಸಾಗಿ ಕೊಂಕಣದ ಗೋವಾ ಪಟ್ಟಣದ ಬಳಿ ಸಮುದ್ರದಿಂದ ದಡ ಸೇರುವ ಸಮಯದಲ್ಲಿ ಜಲಸಮಾಧಿಯಾಗುತ್ತಾರೆ.

ಆ ಸಮಯಕ್ಕೆ ನಾನು ನನ್ನ ಪಡೆಯೊಂದಿಗೆ ಶಿವಳ್ಳಿಯ ಮೂಲಕ ಕೊಂಕಣಕ್ಕೆ ಅಶ್ವ ಖರೀದಿಗೆಂದು ಹೊರಡುತ್ತೇನೆ. ಕಳವು ಮಾಡುವ ರಾತ್ರಿ ನಾವು ಶಿವಳ್ಳಿಯ ಹೊರಭಾಗದಲ್ಲಿರುತ್ತೇವೆ. ಒಂದುವೇಳೆ ಅಪಹರಿಸುವ ಸಂದರ್ಭದಲ್ಲಿ ಅಕಸ್ಮಾತ್ ಅವರು ಸಿಕ್ಕಿಹಾಕಿಕೊಂಡರೆ ಇತರರಿಗೆ ತಮ್ಮ ಪರಿಚಯ ಹೇಳುವ ಮೊದಲೇ ಅವರನ್ನು ಮುಗಿಸಿಬಿಡುತ್ತೇವೆ. ಇದರಿಂದ ಅವರು ಯಾರೆಂದೂ ತಿಳಿಯುವುದಿಲ್ಲ ಜೊತೆಗೆ ನಾವು ಅವರನ್ನು ಕೊಂದ ವಿಷಯ ಆಳುಪರರಿಗೂ ತಲುಪುವುದರಿಂದ, ಸಾಮಂತರ ನಾಡಿನ ದೇವಾಲಯವನ್ನು ಕಳ್ಳಕಾಕರಿಂದ ರಕ್ಷಿಸಿದ ಕೀರ್ತಿ ನಿಮ್ಮದಾಗುತ್ತದೆ.

ನಾವಂದುಕೊಂಡಂತೆ ಅವರು ಮೂರ್ತಿಯನ್ನು ಅಲ್ಲಿಂದ ಸಾಗಿಸಿದರೆ ಮುಂದೆ ಗೋಕರ್ಣದ ಬಳಿ ಪಡೆಯಲಾಗುತ್ತದೆ. ನಂತರ ಅದನ್ನು ಯಾಣದ ಬಳಿಯ ದುರ್ಗಮ ಕಾಡುಗಳಲ್ಲಿ ಬಚ್ಚಿಟ್ಟು ಸರಿಯಾದ ಸಮಯ ನೋಡಿ ರವಾನೆ ಮಾಡಬಹುದು. ಅದಕ್ಕೆ ಕೆಲ ಜನರನ್ನು ನೇಮಿಸಿದ್ದೇನೆ.

ಮೂರ್ತಿ ಪಡೆದ ನಂತರ ಅವರನ್ನು ಸಾಗರ ಮುಖಾಂತರವೇ ಕಳುಹಿಸಿ ಗೋವಾಪಟ್ಟಣದ ಬಳಿ ಅವರು ದಡ ಸೇರಬೇಕಾಗುತ್ತದೆ. ಅಲ್ಲಿಂದ ಸೌರಾಷ್ಟ್ರಕ್ಕೆ ಹತ್ತಿರದ ಮಾರ್ಗ. ಆದ್ದರಿಂದ ಅವರು ಈ ಮಾರ್ಗದಲ್ಲೇ ಹೋಗುತ್ತಾರೆ. ಗೋವಾಪಟ್ಟಣದ ಬಳಿ ದಡ ಸೇರುವ ಸಮಯದಲ್ಲಿ ಅವರನ್ನು ಜಲಸಮಾಧಿ ಮಾಡುತ್ತೇವೆ.

ಯಾರೋ ಅನಾಮಿಕರು ಮೃತಪಟ್ಟ ವಿಷಯ ಎಲ್ಲಡೆ ಹರಡುತ್ತದೆ. ಇವರು ದರೋಡೆಕೋರರೆಂದು ಗೋಕರ್ಣದ ದಿಕ್ಕಿನಿಂದ ಬಂದರೆಂದೂ ಗುಲ್ಲೆಬ್ಬಿಸಿ ಅಲ್ಲಿಂದ ಹೊರಡುತ್ತೇವೆ.

ಈ ವಿಷಯ ಆಳುಪರರಿಗೂ ತಲುಪುವುದು. ಆಗಲೇ ದೇವಸ್ಥಾನದ ಕಳವು ಎಲ್ಲೆಡೆ ಪ್ರಚಾರವಾಗಿರುತ್ತದೆ. ಅದೇ ಸಮಯಕ್ಕೆ ದರೋಡೆಕೋರರು ಮೃತಪಟ್ಟ ಸುದ್ದಿಯೂ ತಲುಪಿದರೆ, ಇವರೇ ಅದನ್ನು ದರೋಡೆ ಮಾಡಿರಬೇಕೆಂದು ಇವರ ಮೇಲೆ ಅನುಮಾನ ಅವರಲ್ಲಿ ಅಚ್ಚೊತ್ತುತ್ತದೆ. “ಸಮುದ್ರದಲ್ಲಿ ದೊರೆತ ಮೂರ್ತಿ ಪುನಃ ಸಮುದ್ರ ಸೇರಿತು” ಎಂದು ಸಮುದ್ರದಲ್ಲಿ ಹುಡುಕಾಟ ಶುರುವಾಗುತ್ತದೆ. ಎಲ್ಲರ ಗಮನ ಅಲ್ಲಿರುವಾಗ ಗೋಕರ್ಣದ ಬಳಿ ಅವರಿಂದ ಪಡೆದ ಮೂರ್ತಿಯನ್ನು ನಾವು ಹೆಚ್ಚು ಪರಿಶ್ರಮವಿಲ್ಲದೇ ಇಲ್ಲಿಗೆ ತರಬಹುದು. ಜನಮಾನಸದಲ್ಲಿ ಅಲ್ಲಿಯ ಕಳುವಾದ ಮೂರ್ತಿ ದರೋಡೆಕೋರರು ಲೂಟಿಗಯ್ಯುವಾಗ ಅವರ ಸಮೇತವಾಗಿ ಸಮುದ್ರದಲ್ಲಿ ಮುಳುಗಿತೆಂದು ಅಚ್ಚಳಿಯುವುದರಿಂದ ಇಲ್ಲಿ ಪ್ರತಿಷ್ಠಾಪಿತವಾದಮೇಲೂ ಯಾರಿಗೂ ಅನುಮಾನ ಬಾರದು.

ಭಲೇ ಸಿದ್ದ.. ನಿನ್ನ ಚಾಣಾಕ್ಷತನಕ್ಕೆ ಮೆಚ್ಚಿದೆ. ಇಂತಹದೊಂದು ಯೋಜನೆಯನ್ನು ನಿನ್ನ ಬಿಟ್ಟು ಇನ್ಯಾರೂ ಕಲ್ಪಿಸಲಾರರು. ಈ ಕಾರ್ಯ ಪೂರ್ಣಗೊಳಿಸಲು ಏನೇನು ಬೇಕೋ ಎಲ್ಲವನ್ನೂ ಮಾಡು. ಈ ವಿಷಯದಲ್ಲಿ ಪೂರ್ಣ ಅಧಿಕಾರ ನೀಡಿರುವೆ. ಮುಂದುವರಿ. ಯಶಸ್ವಿಯಾಗು.

ಅಪ್ಪಣೆ ಒಡೆಯಾ.. ಹೋಗಿ ಬರುವೆ..

(ಮುಂದುವರೆಯುವುದು..)

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!