ಕಥೆ

ವಶವಾಗದ ವಂಶಿ – 9

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ  ಕಾಲ್ಪನಿಕ ಕತೆ)

ವಶವಾಗದ ವಂಶಿ – 8

ಯುವರಾಜರೇ ತಾವು ಇಷ್ಟು ಚುರುಕಾಗಿ ಕಾರ್ಯತತ್ಪರರಾದಾಗ ನಾನು ಆಲಸಿಯಾದರೆ ಏನು ಶೋಭೆ?

ಅನುಕೂಲಕರವಾದಂತಹ ದಿನವನ್ನು ಗೊತ್ತುಮಾಡಿಟ್ಟಿದ್ದೇನೆ. ಗ್ರಹಗಳ ಗೋಚಾರದಲ್ಲಿ ಗುರು ಅಸ್ತನಾದಾಗ ದೇವಸ್ಥಾನಗಳಲ್ಲಿ ರಕ್ಷಣಾತ್ಮಕ ಶಕ್ತಿ ಕುಗ್ಗಿರುತ್ತದೆ. ಆಗತಾನೇ ಕೃಷ್ಣಾಷ್ಟಮಿ ಹಾಗು ಕುಂಭಮಾಸದ ಈಶ್ವರನ ಉತ್ಸವ ಮುಗಿದಿರುತ್ತದೆ. ಅವೆರಡೂ ಅಲ್ಲಿ ಅತ್ಯಂತ ಪ್ರಮುಖವಾದವು.

ಇವೆರಡಕ್ಕೂ ಜನಸಾಗರ ಹರಿದುಬರುತ್ತದೆ. ಗುರು ಅಸ್ತವಾಗುವ ಸಮಯ, ಆಗತಾನೇ ಮುಂಗಾರು ಪ್ರಾರಂಭವಾಗಿರುತ್ತದೆ. ಜನಗಳು ಜಾತ್ರೆ, ಉತ್ಸವ, ಹಬ್ಬಹರಿದಿನಗಳನ್ನು ಮುಗಿಸಿ ತಮ್ತಮ್ಮ ಭೂಮಿಯ ಉಳುಮೆಯಲ್ಲಿ ಮಗ್ನರಾಗಿರುತ್ತಾರೆ. ಶಿವಳ್ಳಿ ಆಗ ಜನ ವಿಕೇಂದ್ರಿತವಾಗಿರುತ್ತದೆ.

ಅಮಾವಾಸ್ಯೆಗೆ ಸಮೀಪವಿರುವ, ಗುರು ಅಸ್ತನಾದ ದಿನವೊಂದರ ರಾತ್ರಿ ಆ ಕಾರ್ಯಕ್ಕೆ ಪ್ರಶಸ್ತ ಸಮಯ. ಹೊರಡುವ ದಿನ ನಿಶ್ಚಯಿಸಿ ಹೇಳಿ.  ಈಶ್ವರ, ವೇಣುಗೋಪಾಲ ಸೇರಿದಂತೆ ಅಲ್ಲಿಯ ದೇವರುಗಳಿಗೆ ದೃಷ್ಟಿ ದಿಗ್ಬಂಧನ ಮಾಡಬೇಕು. ನಾಗ ಮುಂತಾದ ಕ್ಷೇತ್ರ ರಕ್ಷಣೆಗಿರುವ ದೈವಗಳಿಗೆ ಸ್ತಂಭನ ಮಾಡಬೇಕು. ಶಿವಳ್ಳಿ ಹಾಗು ಸುತ್ತಮುತ್ತಲಿರುವ ಜನರ ಮೇಲೆ ಸಾಮೂಹಿಕ ಸಂಮೋಹನ ಮಾಡಬೇಕು. ನಂತರವಷ್ಟೇ ನೀವು ಹೊರಡಬೇಕು.

ಆಯ್ತು ಜೋಯಿಸರೇ.. ಇವೆಲ್ಲವನ್ನೂ ಮಾಡುವುದರಿಂದ ಆಗುವ ಅನುಕೂಲಗಳನ್ನು ತಿಳಿಸುವಿರಾ. ತಿಳಿಯುವ ಕುತೂಹಲದಿಂದ ಕೇಳುತ್ತಿದ್ದೇನೆ.

ರಾಜಾ.. ದೃಷ್ಟಿ ದಿಗ್ಬಂಧನದ ಬಗ್ಗೆ ಸರಳವಾಗಿ ಹೇಳುವುದಾದರೆ ಕಣ್ಣನ್ನು ಕಾಣದಂತೆ ಕಟ್ಟುವುದು. ಒಮ್ಮೆ ಕಣ್ಣನ್ನು ಕಟ್ಟಿದರೆ ಯಾರು ಎದುರಿಗೆ ಬಂದಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ತಿಳಿಯುವುದೇ??

ಗೊತ್ತಾಗುವುದಿಲ್ಲ ತಾನೇ?

ಹಾಗೆಯೇ ಅಪಹರಣಕ್ಕೂ ಮೊದಲು ದೃಷ್ಟಿ ದಿಗ್ಬಂಧಿಸಿದರೆ ಅಪಹರಣದ ಸಮಯದಲ್ಲಿ ಆಗಬಹುದಾದ ಅಪಚಾರಗಳು ದೇವತೆಯ ದೃಷ್ಟಿಗೆ ಬರಲಾರದು. ಇದರಿಂದ ಬರಬಹುದಾದ ಶಾಪ ತಪ್ಪುತ್ತದೆ. ಜೊತೆಗೆ ಅಪಹರಣವಾದ ನಂತರ ಮಂತ್ರವೇಷ್ಟರಾದ ಜ್ಯೋತಿಷಿಗಳ ಬಳಿ ಕೇಳಿದರೆ ಅವರು ಅಲ್ಲಿಯ ದೇವತೆಗಳ ಸಹಾಯದಿಂದಲೇ ಏನು ಘಟಿಸಿತೆಂದು ಅವಲೋಕಿಸುವುದು. ಆದ್ದರಿಂದ ಮೊದಲೇ ಅವುಗಳ ದೃಷ್ಟಿ ದಿಗ್ಬಂಧಿಸಿದರೆ ಯಾರು ಅಪಹರಿಸಿದ್ದು, ಎಲ್ಲಿಗೆ ತೆಗೆದುಕೊಂಡು ಹೋದರು ಎಂದು ಯಾವುದೂ ತಿಳಿಯುವುದಿಲ್ಲ.

ಇನ್ನು ಸ್ತಂಭನ ಎಂದರೆ ಚಲಿಸದಂತೆ ಮಾಡುವುದು. ರಾಜಾ.. ನಿಮಗಾಗಲೀ ಕೋಟೆಗಾಗಲೀ ಹೇಗೆ ಕಾವಲುಗಾರರಿದ್ದಾರೋ ಹಾಗೆಯೇ  ದೇವಸ್ಥಾನಗಳ ರಕ್ಷಣೆಗೆಂದು ಕೆಲ ದೈವಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ದೇವಸ್ಥಾನದ ರಕ್ಷಣೆ ಅವುಗಳ ಕರ್ತವ್ಯ. ಅವುಗಳ ಮೇಲೆ ಸ್ತಂಭನ ಪ್ರಯೋಗ ಮಾಡದಿದ್ದರೆ ಅವು ನಿಮ್ಮ ಕಾರ್ಯಕ್ಕೆ ಅಡ್ಡಿಪಡಿಸಬಹುದು. ಅಲ್ಲಿಗೆ ಹೋದಾಗ ನಾಗಗಳು ಅಡ್ಡಪಡಿಸಿದರೆ ಹೇಗೆ ತಾನೇ ಅಪಹರಿಸಲು ಸಾಧ್ಯ? ಯಾರಾದರೂ ಧೈರ್ಯ ಮಾಡುವರೇ? ಜೊತೆಗೆ ಅವು ಬೆಂಬಿಡದೇ ಹಿಂಬಾಲಿಸಲೂಬಹುದು. ಹಾಗಾಗಿ ಅವುಗಳು ಚಲಿಸದಂತೆ ಸ್ತಂಭನವನ್ನು ಮಾಡಲೇಬೇಕು.

ಇನ್ನು ಸಂಮೋಹನವೆಂದರೆ ಮರಳುಮಾಡುವುದು. ಅಂದು ಎಲ್ಲರೂ ನಿದ್ರಾವಶರಾಗುವಂತೆ ಸಾಮೂಹಿಕವಾಗಿ ಎಲ್ಲರಮೇಲೂ ಸಂಮೋಹನ ಪ್ರಯೋಗ ಮಾಡಬೇಕು. ಬಾಲಾದಿ ವೃದ್ಧರೆಲ್ಲರೂ ನಿದ್ರಾವಶರಾಗಿದ್ದರೆ ಸಣ್ಣಪುಟ್ಟ ಶಬ್ಧಗಳಾದರೂ ಎಚ್ಚರವಾಗುವುದಿಲ್ಲ.

ಇಷ್ಟೇ ಅಲ್ಲ ಅದೃಷ್ಯಕರಿಣೀ ಮುಂತಾದ ದೇವತೆಗಳನ್ನು ಒಲಿಸಿ ಅದು ಇಲ್ಲಿಗೆ ತಲುಪುವವರೆಗೂ  ಯಾರ ಕಣ್ಣಿಗೂ ಬೀಳದಂತೆ ರಕ್ಷಿಸಬೇಕು. ಅದೃಷ್ಯಕರಿಣೀ ದೇವತೆಯು ನಾವು ಹೇಳಿದ ವಸ್ತುವನ್ನು ಯಾವ ಜ್ಯೋತಿಷಿ, ಮಾಂತ್ರಿಕನಿಗೂ ಕಾಣದಂತೆ ಮಾಯಮಾಡುವಳು. ಇದರಿಂದ ಮುಂದೆ ಕಳುವಾದ ವಸ್ತು ಎಲ್ಲಿಗೆ ಹೋಯಿತೆಂದು ಯಾರಿಗೂ ಕಂಡುಹಿಡಿಯಲಾಗುವುದಿಲ್ಲ.

ಇಷ್ಟೇ ಅಲ್ಲ ವಾರ್ತಾಳಿ ಎಂಬ ದೇವತೆಯನ್ನು ಇವಳ ರಕ್ಷಣೆಗೆಂದು ಒಲಿಸಬೇಕು. ಇವಳು ಅದೃಷ್ಯಕರಿಣೀ ದೇವತೆಯನ್ನು ಯಾರಾದರೂ ಬಲವಂತವಾಗಿ ವಶಪಡಿಸಿ ಮೂರ್ತಿಯನ್ನು ಹುಡುಕಲು ಪ್ರಯತ್ನಿಸುವವರ ಮೇಲೆ ಮಾರಣಾಂತಿಕ ದಾಳಿ ಮಾಡುವಳು. ಹೀಗೆ ಹತ್ತುಹಲಾವಾರು ಪ್ರಯೋಗಗಳನ್ನು ಮಾಡಿಕೊಂಡೇ ಮುಂದುವರೆಯಬೇಕು. ಅದರ ವ್ಯವಸ್ಥೆಯನ್ನು ನಾನು ಮಾಡುವೆ. ನೀವು ನಿಮ್ಮ ಕಾರ್ಯ ಮುಂದುವರಿಸಿ.

ಆಗಲಿ ಜೋಯಿಸರೇ.. ತಮ್ಮಂತಹ ಎಲ್ಲವನ್ನೂ ತಿಳಿದ ಜ್ಞಾನಿಗಳಿಂದ ಮಾತ್ರವೇ ಇವೆಲ್ಲವೂ ಸಾಧ್ಯ. ನಿಮ್ಮಂತಹವರು ನಮಗೆ ಗುರುಗಳಾಗಿರುವುದು ನಮ್ಮ ಭಾಗ್ಯ.

ಹಾಗೆಯೇ ಮತ್ತೊಂದು ವಿಷಯ ಜೋಯಿಸರೇ.. ಅಪಹರಿಸಿ ಕೆಲ ಸಮಯವಾದನಂತರವೇ ಇಲ್ಲಿ ದೇಗುಲ ನಿರ್ಮಾಣ ಮಾಡುವ ವಿಷಯವನ್ನು ಎಲ್ಲರಿಗೂ ಪ್ರಚುರಪಡಿಸೋಣ. ಯಾರಿಗೂ ಅನುಮಾನ ಬಾರದೆಂದು ಈ ನಿರ್ಧಾರ. ಅಲ್ಲಿ ವಿಗ್ರಹ ಕಳುವಾದ ವಿಷಯ ಸುತ್ತಮುತ್ತಲೆಲ್ಲ ಹರಡಿ ಅದರ ಕಾವು ತಣ್ಣಗಾದಮೇಲೆಯೇ ನಮ್ಮ ದೇಗುಲದ ವಿಷಯ ಪ್ರಚಾರ ಮಾಡಿದರೆ ಯಾರಿಗೂ ಅನುಮಾನ ಬಾರದು. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.

ಹೌದು ರಾಜಾ.. ನಿಮ್ಮ ನಿರ್ಧಾರ ಸರಿಯಾಗಿದೆ. ತಮ್ಮಿಚ್ಛೆಯಂತೇ ಆಗಲಿ..

(ಮುಂದುವರೆಯುವುದು..)

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Jois

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!