Featured ಕಥೆ

ದಿ ಪರ್ಫೆಕ್ಟ್ ಮರ್ಡರ್

ಯೂ ಅರ್ ಫಿನಿಷ್ಡ್ ಮಿ. ವ್ಯಾಸರಾವ್

ನಿಮ್ಮ ಪತ್ನಿ ಸುಮಂಗಲಾ ಮರ್ಡರ್ ಮಾಡಿದ್ದು ನೀವೇ …. ಐ ಹ್ಯಾವ್ ಪ್ರೂಫ್ಸ್…

ಇನ್ಸಪೆಕ್ಟರ್ ಪ್ರಕಾಶ್ ಗಂಭೀರನಾಗಿ ನುಡಿದ.

ಅಲ್ಲಿಯವರೆಗೂ ಆಡಿದ ಮಾತುಗಳೆಲ್ಲಾ ಕೇವಲ ಮುನ್ನುಡಿ ಎಂದು ಈಗ ಅರ್ಥವಾಯಿತು. ಸುಮಾರು ಅರ್ಧ ಘಂಟೆಯಿಂದ ಸುಮಂಗಲಾ ಸಾವಿನ ಬಗ್ಗೆ  ಮಾತನಾಡಿದ್ದು, ಅವನ ಇನ್ವೆಸ್ಟಿಗೇಶನ್ ಪ್ರೋಗ್ರೆಸ್ಸ್ ಬಗ್ಗೆ ಮಾತನಾಡಿದ್ದು ಕೇವಲ ಈ ಮಾತುಗಳನ್ನು ಹೇಳಲು ಮುನ್ನುಡಿಯಷ್ಟೇ ಎಂದು ಅರ್ಥವಾಗತೊಡಗಿತು. ದಿಸೆಂಬರ್ ತಿಂಗಳ ಸಾಯಂಕಾಲ ಆರರ ಸಮಯದ ತಣ್ಣನೆಯ ಗಾಳಿ ಕಿಟಕಿಯಿಂದ ಬರುತ್ತಿದ್ದರೂ ಮೈ ಒಮ್ಮೆ ಕಂಪಿಸಿ ಬೆವರತೊಡಗಿತು.

ನಿಮ್ಮ ಪತ್ನಿ ಸುಮಂಗಲಾರನ್ನು ನೀನೇ ಕೊಲೆಮಾಡಿದ್ದಿಯಾ … ನನಗೆ ಬಲವಾದ ಆಧಾರಗಳು ದೊರತಿವೆ.

ಇನ್ಸಪೆಕ್ಟರ್ ಪ್ರಕಾಶ್ ಬಹುವಚನದಿಂದ  ಏಕವಚನಕ್ಕೆ ಇಳಿದಿದ್ದ.

ಆದರೆ   ಅದು ಮುಖ್ಯವಾಗಿರಲಿಲ್ಲ…. ಯಾವಸತ್ಯವನ್ನು ಆರುತಿಂಗಳಿನಿಂದ ಮನದಮೂಲೆಯಲ್ಲಿಟ್ಟುಕೊಂಡು ಹಿಂದೆ ನಡೆದಿದ್ದೆಲ್ಲಾ ಕಹಿಘಟನೆ ಎಂದು ಮರೆಯಲು ಪ್ರಯತ್ನಿಸಿದ್ದೆನೋ ಆ ಸತ್ಯ ಇನ್ಸಪೆಕ್ಟರ್ ಪ್ರಕಾಶ್’ಗೆ ಗೊತ್ತಾಗಿದೆ!

ಒಂದೇ ಕ್ಷಣದಲ್ಲಿ ಇಡೀದೇಹ ಬೆವರಿನಿಂದ ಒದ್ದೆಯಾಯಿತು. ಬಾಯಿ ಒಂದು ಚೂರೂ ಪಸೆಯಿಲ್ಲದಂತೆ ಒಣಗಿತು. ಗಾಬರಿ, ತಲ್ಲಣ, ಭಯದಿಂದ ದೇಹ ಸಾವರಿಕೊಳ್ಳಲಾಗದೆ ಒದ್ದಾಡಿತು. ಇದೆಲ್ಲವನ್ನೂ ಪ್ರಕಾಶ್ ನೋಡುತ್ತಿದ್ದ… ತನ್ನ ತೀಕ್ಷ್ಣಕಣ್ಣುಗಳಿಂದ.

ಇಲ್ಲ… ನಾನೇನೂ ಮಾಡಿಲ್ಲಾ… ನೀವು ಹೇಳುವುದೆಲ್ಲಾ ಸುಳ್ಳು… ಮಾತುಗಳು ಸರಿಯಾಗಿ ಹೊರಡುತ್ತಿಲ್ಲ. ಯಾರೋ ಗಂಟಲಿನಲ್ಲಿ ಗಟ್ಟಿಯಾದ ವಸ್ತುವನ್ನಿಟ್ಟು ಅದುಮುತ್ತಿರುವಂಥಾ ಅನುಭವ.

ಮಿ. ವ್ಯಾಸ.. ಪೊಲೀಸರಿಗೆ ನಿಮಗಿಂತಾ ಬುದ್ಧಿವಂತಿಕೆ ಜಾಸ್ತಿ ಇರುತ್ತದೆ, ಆಧಾರಗಳಿಲ್ಲದೇ ನಾನು ಮಾತನಾಡುವುದಿಲ್ಲ.. ಈಗ ನೀವೇ ಒಪ್ಪಿಕೊಳ್ಳುತ್ತೀರೋ.. ಅಥವಾ ನಮ್ಮ ಇತರೇ ಮೆಥೆಡ್’ಗಳನ್ನ ಉಪಯೋಗಿಸಿದ ಮೇಲೆ ಒಪ್ಪಿಕೊಳ್ಳೂವಿರೋ..

ನೀವುಹೇಳುವುದೆಲ್ಲಾ ಸುಳ್ಳು… ಆ ಮನೆಹಾಳ ಜಯಂತ್.. ನಿಮಗೆ ಏನೋ ಆಫರ್ ಮಾಡಿರಬೇಕು. ನಾನೇ ಕೊಲೆಮಾಡಿದ್ದೇನೆ ಎಂದು ನಿಮ್ಮಹತ್ತಿರ ಆಧಾರ ಏನಿದೆ..?

ಪೋಲೀಸರನ್ನು ಸಿನಿಮಾದಲ್ಲಿ ತೋರಿಸಿರುವಂತೆ ಪೆದ್ದರೆಂದು ತಿಳಿಯಬೇಡ. ನಿಮ್ಮ ಮೇಲೆ ಮೊದಲಿನಿಂದಲೂ ಒಂದು ಕಣ್ಣಿಟ್ಟಿದ್ದೆ. ನಿಮ್ಮ ಕ್ರಡಿಟ್ ಕಾರ್ಡ್ ಸ್ಟೇಟ್ಮಮೆಂಟ್ ನಿಮ್ಮ ಬಗ್ಗೆ ಅನುಮಾನ ಮೂಡಿಸಿತು. ಕಾರ್ಡ್ ಬಳಸಿ ಖರೀದಿಸಿದ ವಸ್ತುಗಳು ನೀವೆಂದೂ ಬಳಸಿರದಂಥದ್ದು. ಇದು ಕೇವಲ ನಿಮ್ಮ ಅಲಬೈ ಸೃಷ್ಟಿಸಿಕೊಳ್ಳವುದಕ್ಕೆ ಎಂದು ನನಗೆ ಕನ್ಫರ್ಮ್ ಆಗಿದೆ…

ಅವನ ಲಾಜಿಕ್ ಕೇಳಿ ಒಂದು ಮನದಲ್ಲಿ ಒಂದು ಸಣ್ಣ ಮೊಂಡು ಧೈರ್ಯ ಮೂಡಿತು ಹಿ ಇಸ್ ನಾಟ್ ಶೂರ್

ಇದರಿಂದ ನಾನೇ ಕೊಲೆಮಾಡಿದೆ ಎಂದು ಸಾಬೀತಾಗದು…

ಪರವಾಗಿಲ್ಲವೇ… ಸಾಫ್ಟ್’ವೇರ್ ಇಂಜಿನಿಯರ್’ಗೆ ವಾದಿಸಲೂ ಬರುತ್ತದೆ. ಅವನ ಧ್ವನಿಯ ವ್ಯಂಗ್ಯ ನನ್ನನ್ನು ಚುಚ್ಚಿತು.

ನಿಮ್ಮಪತ್ನಿ ಸತ್ತಿರುವುದು ಆಕಸ್ಮಿಕ ಎನ್ನುವಂತಿದ್ದು ಯಾರೂ ಸಾಕ್ಷಿಗಳಿಲ್ಲದ ಕಾರಣ ಸಾಂಧರ್ಭಿಕ ಸಾಕ್ಷಿಗಳೇ ಮುಖ್ಯ. ಇಲ್ಲಿ ನನಗೆ ನಿಮ್ಮನ್ನು ಕೊಲೆಗಾರ ಎಂದು ಅನುಮಾನಿಸಲು ಬೇಕಾದಷ್ಟು ಸಾಕ್ಷಿ ಸಿಕ್ಕಿವೆ.  ಕೊಲೆಯಾದ ದಿನ ನಿಮ್ಮ ಸ್ನೇಹಿತನ ಕಾರು ಎರವಲು ಪಡೆದು ಅದಕ್ಕೆ ಮೂರು ನಾಲ್ಕು ಕಡೆ ಪೆಟ್ರೋಲ್ ಹಾಕಿಸಿದ್ದೀರಿ… ಆದರೆ ಓಡಿಸಿದ್ದು ಕೇವಲ ಇಪ್ಪತ್ತು ಕಿ.ಮೀ.”

ನನ್ನ ಡಿಫೆನ್ಸ್ ಮತ್ತೆ ಸ್ಟ್ರಾಂಗ್ ಆಯಿತು… ಇನ್ಸ್ ಪೆಕ್ಟರ್ ಬಳಿ ಬಲವಾದ ಸಾಕ್ಷಿ ಗಳಿಲ್ಲ

ಸುಮಂಗಲಾ ಸತ್ತಾಗ ನಾನು ನಮ್ಮ ಪಕ್ಕದಮನೆಯಲ್ಲಿದ್ದೆ.. ಅವರ ಲ್ಯಾಂಡ್’ಲೈನ್’ನಿಂದ ಸುಮಂಗಲಾ ಜೊತೆ ಮಾತಾಡಿದ್ದೆ ಕೂಡಾ… ಅದು ಅವಳ ಮೊಬೈಲ್’ಬಿಲ್’ನಲ್ಲಿ ಕೂಡಾ ಬಂದಿದೆ…

ಇಲ್ಲೇ ನೀವು ಎಡವಿದ್ದು ವ್ಯಾಸ ರಾವ್… ಸುಮಂಗಲಾ ಮೊಬೈಲ್ ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ನೀವೇ ಫೋನ್ ಮಾಡಿ. ನೀವೇ ಆನ್ ಮಾಡಿ, ಚಾಣಾಕ್ಯ ಬುದ್ಧಿ ತೋರಿಸಿದಿರಿ. ಆದರೆ.. ಇಲ್ಲೇನೀವು ಎಡವಿದ್ದು. ಎಲ್ಲಾ ಪರ್ಫೆಕ್ಟ್ ಆಗಿ ಪ್ಲಾನ್ ಮಾಡಿದ ನೀವು. ಇದರಲ್ಲಿ ಸ್ವಲ್ಪ ಏಮಾರಿದಿರಿ. ಯಾವುದೇ ಕೊಲೆ, ದರೋಡೆ ನಡೆದರೆ ಪೊಲೀಸ್ ಮೊದಲು ನೋಡುವುದು  ವಿಕ್ಟಿಮ್ ಹಾಗೂ ಸಸ್ಪೆಕ್ಟ್ ಇವರ ಮೊಬೈಲ್ ಲೊಕೇಶನ್… ಕೊಲೆಗಾರ ತಾನೇ ಜಾಣ ಎಂದುಕೊಳ್ಳುತ್ತಾನೆ. ಆದರೆ ಪೋಲೀಸ್ ಅವರಿಗಿಂತಾ ಯಾವಾಗಲೂ ಒಂದು ಹೆಜ್ಜೆ ಮುಂದೆ..

‘ಯಾವ ಕೊಲೆಯನ್ನು ನಾನು ಒಂದು ಪರ್ಫೆಕ್ಟ್ ಮರ್ಡರ್ ಎಂದುಕೊಂಡು ಸಮಾಧಾನವಾಗಿದ್ದೆನೋ ಅದೇ ಕೊಲೆ ವಿಚಿತ್ರ ತಿರುವುಗಳೊಂದಿಗೆ ಬಂದು ನನ್ನನ್ನೇ ಸುತ್ತಿಕೊಳ್ಳುತ್ತಿದೆ ಎಂದು ಎನಿಸತೊಡಗಿತು. ಆದರೂ ಒಪ್ಪಿಕೊಳ್ಳಲು ಸಿದ್ಧನಿಲ್ಲ. ಎರಡು ತಿಂಗಳಿನಿಂದ ಮಾಡಿದ ಪ್ಲಾನ್. ಯಾರಿಗೂ ಅನುಮಾನ ಬರದಂಥಾ ಕೊಲೆ. ಕೇವಲ ಒಂದು ಮೊಬೈಲ್ ಲೊಕೇಶನ್’ನಿಂದ ಪ್ರೂವ್ ಆಗುತ್ತಾ. ನನ್ನಂಥಾ ಪರ್ಫೆಕ್ಷನಿಷ್ಟ್’ಗೆ ಸವಾಲಾ..’

ಛಲಬಿಡದಂತೆ ಕೇಳಿದೆ…

ಬರೀ ಸಾಂದರ್ಭಿಕ ಸಾಕ್ಷಿಗಳಿಂದ ನನ್ನನ್ನು ಕೊಲೆಗಾರ ಎಂದು ಪ್ರೂವ್ ಮಾಡಲಾಗದು. ಇನ್ಸ್’ಪೆಕ್ಟರ್… ಕೊಲೆಗೆ ಒಂದು ಮೋಟಿವ್ ಇರಬೇಕಲ್ಲವಾ… ನನಗ್ಯಾವ ಮೋಟಿವ್? ಗಂಡ ಹೆಂಡತಿ ಚೆನ್ನಾಗಿಯೇ ಇದ್ದೆವು. ಅವಳು ಸತ್ತ ಮೇಲೆ ಅವಳ ಹಣ, ಒಡವೆ, ಬಟ್ಟೆಬರೆ ಎಲ್ಲ ಅವಳ ಮನೆಯವರಿಗೆ ವಾಪಸ್ ಮಾಡಿದ್ದೇನೆ. ಇನ್’ಫ್ಯಾಕ್ಟ್ ಅವಳ ಕಾರ್ ಕೂಡಾ ಅವಳ ತಮ್ಮನಿಗೆ ಕೊಟ್ಟು ನಾನು ಬೈಕ್ ನಲ್ಲಿ ತಿರುಗಾಡುತ್ತಿದ್ದೇನೆ.. ಅವಳು ಸತ್ತ ಮೇಲೆ ನಮ್ಮ ಮನೆಯಲ್ಲಿ ಇಂದಿಗೂ ಒಂಟಿಯಾಗಿಯೇ ಇದ್ದೇನೆ.

ಐ ನೋ ಯು ಆರ್ ವೆರಿ ಕ್ಲೆವರ್ ಅಂತಾ…  ಅದನ್ನೂ ಎಸ್ಟಾಬ್ಲಿಷ್ ಮಾಡಿದ್ದೇನೆ. ನಿಮ್ಮ ಹೆಂಡತಿ ಹಾಗೂ ಅವಳ ಬಾಸ್  ಜಯಂತ್ ಇವರ ಮಧ್ಯೆ ಇದ್ದ ಸಂಬಂಧ, ಇದರ ಬಗ್ಗೆ ನಿಮಗೆ ಮಾಹಿತಿ ಇರಲಿಲ್ಲ ಎಂದು ನೀವು ನಿಮ್ಮ ಸ್ಟೇಟ್ಮೆಂಟ್’ನಲ್ಲಿ ಹೇಳಿದ್ದಿರಿ. ಆದರೆ ಕೊಲೆಗೆ ಸುಮಾರು ಹದಿನೈದು ದಿನಗಳ ಹಿಂದೆ ಸುಮಂಗಲಾ, ಜಯಂತ್ ಗೆ ಕಳುಹಿಸಿರುವ  ಮೇಲ್’ನಲ್ಲಿ ನಿಮಗೆ ಅವರಿಬ್ಬರ ಸಂಬಂಧದ ಬಗ್ಗೆ ಮತ್ತೆ ಅನುಮಾನ ಬಂದಿದೆ ಎಂದು ಬರೆದಿದ್ದಾರೆ. ಇದರ ಅರ್ಥ ಅವರ ಸಂಬಂಧದ ಬಗ್ಗೆ ನಿಮಗೆ ಮೊದಲೇ ತಿಳಿದಿತ್ತು. ಅದನ್ನು ನೀವು ನಿಮ್ಮ ಸ್ಟೇಟ್ ಮೆಂಟ್’ನಲ್ಲಿ ಮುಚ್ಚಿಟ್ಟಿದ್ದೀರ. ಇವೆಲ್ಲಾ ಸಾಕು ನಮಗೆ ನಿಮ್ಮನು ಒಳಗೆ ಹಾಕಲು. ನಂತರ ಇದ್ದೇ ಇದೆ ನಮ್ಮ ಮೆಥೆಡ್. ನೀವಾಗಿಯೇ ಒಪ್ಪಬೆಕು ಹಾಗೆ ಮಾಡುತ್ತೇವೆ. ಒಮ್ಮೆ ಕೋರ್ಟ್ ಹತ್ತಿದರೆ, ಹತ್ತುವರ್ಷ ಕೇಸ್ ನಡೆಯುತ್ತೆ ಮತ್ತು ಕನ್ವಿಕ್ಟ್ ಆದರೆ ಇನ್ನು ಹದಿನಾಲ್ಕು ವರ್ಷ ಜೈಲು ಪಾಲು.

ಸಂಪೂರ್ಣವಾಗಿ ಮುಳುಗಿದ್ದೆ… ಯಾವ ಕೊಲೆಯನ್ನು ನಾನು ಪರ್ಫೆಕ್ಟ್ ಮರ್ಡರ್ ಅಂದುಕೋಡಿದ್ದೆನೋ ಅದು ನನ್ನ ಕುತ್ತಿಗೆಗೆ ನೇಣು ಹಗ್ಗ ಬಿಗಿಯುವುದರಲ್ಲಿ  ಸಂಶಯವಿಲ್ಲ ಎನಿಸಿತು. ಒಪ್ಪಿಕೊಳ್ಳದೇ ವಿಧಿಯಿಲ್ಲ. ಇಲ್ಲದಿದ್ದರೆ ನನ್ನನ್ನು ಮನೆಯಿಂದ ಅರೆಸ್ಟ್ ಮಾಡಿಕೊಂಡು ಹೋದರೆ ಇದ್ದ ಮರ್ಯಾದೆಯೂ ಹಾಳು.

ಯೆಸ್ ಇನ್ಸ್’ಪೆಕ್ಟರ್ .. ಸುಮಂಗಲಾಳನ್ನು ನಾನೇ ಕೊಲೆಮಾಡಿದೆ…. ಅವಳು ಮಾಡಿದ ಕೆಲಸಕ್ಕೆ ತಕ್ಕ ಶಾಸ್ತಿಯಾಗಲೆಂದು ಇದೇ ಕೈಯಾರ ಅವಳನ್ನು ಕೊಂದೆ. ಮನೆಯವರ ವಿರೋಧದ ನಡುವೆಯೂ ಅವಳನ್ನು ಪ್ರೀತಿಸಿ ಮದುವೆಯಾದೆ. ಅವಳಿಗಾಗಿ ನನ್ನ ತಂದೆ ತಾಯಿಯಿಂದ ದೂರವಾದೆ. ಆದರೂ ಹುಚ್ಚನಂತೆ ಪ್ರೀತಿಸುತ್ತಿದ್ದೆ. ಅವಳಿಗೆ ಅದ್ಯಾವುದೂ ಬೇಕಾಗಿರಲಿಲ್ಲ. ನನಗಿಂತ ಅವಳಿಗೆ ಕೆರಿಯರ್ ಮುಖ್ಯವಾಗಿತ್ತು. ಅದಕ್ಕೆ ಅಡ್ಡಿಯಾಗುತ್ತೆ ಎಂದು ನಮ್ಮ ಪ್ರೇಮದ ಕುಡಿ ಸಹಿತ ತೆಗೆಸಿಕೊಡಿದ್ದಳು. ಕೆಲಸದಲ್ಲಿ ಮುಂದುವರೆಯಲು ನಮ್ಮ ಪ್ರೇಮದ ಪರಿಧಿಯನ್ನು ದಾಟಿ ಅವಳ ಬಾಸ್ ಜಯಂತ್’ನೊಂದಿಗೆ ಅಫೇರ್ ಇಟ್ಟುಕೊಂಡಳು. ನನಗೆ ಮೊದಲಬಾರಿಗೆ ವಿಷಯ ತಿಳಿದು ಗಲಾಟೆ ಮಾಡಿದಾಗ ಹೇಗೋ ಅತ್ತು ಕರೆದು ಕನ್ವಿನ್ಸ್ ಮಾಡಿದ್ದಳು. ನಾನೂ ನಂಬಿಬಿಟ್ಟೆ… ಒಂದೆರಡು ತಿಂಗಳಿನಲ್ಲೇ ಹಳೇ ಚಾಳಿ ಪ್ರಾರಂಭಿಸಿದಾಗ ತಡೆಯಲಾಗಲಿಲ್ಲ…. ಡಿಸೈಡ್ ಮಾಡಿದೆ. ಅವಳನ್ನು ಕೊಂದು ಜಯಂತ್’ನನ್ನು ಜೈಲಿಗೆ ಕಳುಹಿಸಬೇಕೆಂದು…. ಟು ಮಂಥ್ಸ್…  ಎರಡು ತಿಂಗಳು… ಪ್ಲಾನ್ ಮಾಡಿದೆ. ಇದೊಂದು ಪರ್ಫೆಕ್ಟ್ ಮರ್ಡರ್ ಅಂದುಕೊಂಡಿದ್ದೆ. ಮಿಸ್ ಆಯಿತು…. ನೋ ರಿಗ್ರೆಟ್ಸ್….

ಸುಮಾರು ಆರುತಿಂಗಳಿನಿಂದ ಮನದೊಳಗಿದ್ದ ಸತ್ಯ ಹೊರಬಿದ್ದಿತ್ತು… ಹೇಳುವಾಗ ಇದ್ದ ಆವೇಶ ನಿಧಾನವಾಗಿ ಕಡಿಮೆಯಾಯಿತು. ಮುಗಿಸಿದಾಗ ಅದೇನೋ ಸಮಾಧಾನ. ತಲೆಯೆತ್ತಿ ಇನ್ಸ್’ಪೆಕ್ಟರ್ ಕಡೆ ನೋಡಿದೆ… ಅವನು ಯಾವುದೇ ಭಾವನೆಗಳಿಲ್ಲದೇ ತನ್ನ ಡಿಜಿಟಲ್ ರೆಕಾರ್ಡರ್ ಅನ್ನು ಜೇಬಿಗಿಳಿಸುತ್ತಿದ್ದ. ಅವನಿಗೆ ಇದೊಂದು ಕ್ಲೋಸೆಡ್ ಕೇಸ್…. ಆದರೆ ಅವನ ಮೌನ  ಅದೇಕೋ ಅನುಮಾನ ತರುತ್ತಿತ್ತು.

ಏನು ಮಾಡುತ್ತೀರಿ ವ್ಯಾಸ ರಾವ್? ಮುಂದಿನ ಎಲ್ಲಾ ಜೀವನ ನಿಮಗೆ ಜೈಲೇ ಗತಿ. ನಿಮ್ಮ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು. ಪರ್ಫೆಕ್ಟ್ ಪ್ಲಾನಿಂಗ್. ಪೋಲೀಸರಿಗೂ ಇಷ್ಟು ಚೆನ್ನಾಗ್ಗಿ ಪ್ಲಾನ್ ಮಾಡಲಿಕ್ಕೆ ಬರುವುದಿಲ್ಲ…

ಅವನ ಮಾತುಗಳಲ್ಲಿ ಏನೋ ಇದೆ ಅನಿಸತೊಡಗಿತು. ಅವನು ಕೇಸ್ ಮುಗಿತೆಂಬ ಭಾವನೆ ತೋರಿಸುತ್ತಿಲ್ಲ. ಮತ್ತೆನೋ ಬೇಕೆಂದು ಹೇಳಲು ಕಾಯುತ್ತಿದ್ದಾನೆ ಎನಿಸಿತು. ಧೈರ್ಯ ಮಾಡಿ  ಕೇಳಿಯೇ ಬಿಟ್ಟೆ.

ನನ್ನನ್ನು ಈ ಕೇಸ್’ನಿಂದ ಬಚಾವ್ ಮಾಡಿ. ಆ ಜಯಂತ್’ನನ್ನು ಒಳಗಡೆ ಹಾಕಿ. ನಿಮಗೇನು ಬೇಕು. ಹೇಳಿ.

ಅಷ್ಟು ಬೇಗ ಆಫರ್ ಮಾಡುತ್ತೇನೆಂದು ತಿಳಿದಿರಲಿಲ್ಲ ಅವನಿಗೆ, ಒಂದು ಕ್ಷಣ ಕಕ್ಕಾಬಿಕ್ಕಿಯಾದ.. ಅವನಿಗೆ ಯೋಚನೆಮಾಡಲೂ ಅವಕಾಶವನ್ನೀಯದೆ… ನನ್ನಬಳಿ ಇಪ್ಪತ್ತು ಲಕ್ಷ ಇದೆ … ಎಲ್ಲಾ ಕೊಡುತ್ತೇನೆ… ಸೇವ್ ಮಿ… ಇನ್ಸ್’ಪೆಕ್ಟರ್  ಮತ್ತೆ ಗಾಬರಿಯಾದ. ಇಪ್ಪತ್ತು ಲಕ್ಷ ಸಣ್ಣ ಮೊತ್ತವಲ್ಲ. ನನಗೆ ಬಿಡುಗಡೆ ಬೇಕಿತ್ತು… ಎಟ್ ಎನಿಕಾಸ್ಟ್…

ಅವನ ಗಾಬರಿ ಗಂಭೀರತೆಯನ್ನು ಪಡೆಯಿತು. ಒಂದೆರಡು ಕ್ಷಣ ಯಾವ ಮಾತನ್ನೂ ಆಡದೇ ನನ್ನೇ ನೋಡತೊಡಗಿದ. ಭಯಪಡುವ ಸರದಿ ನನ್ನದಾಯಿತು. ಒಂದುಕ್ಷಣ ನಾನೇನಾದರೂ ಅವಸರ ಪಟ್ಟೆನಾ ಎನಿಸಿತು. ಆದದ್ದಾಗಲಿ ಎಂದು ಅವನೆಡೆಗೆ ಧೈರ್ಯದಿಂದ ನೋಡಿದೆ. ಯಾವುದೇ ಭಾವನೆಗಳಿಲ್ಲದೇ…. ತನ್ನ ಮುಂದಿದ್ದ ನೀರಿನ ಲೋಟವನ್ನು ತಿರುಗಿಸುತ್ತಾ… ನೋ ಕ್ಯಾಷ್…. ನೀನು ಮಾಡಿದ ಕೊಲೆಯನ್ನು ನಾನು ಮುಚ್ಚಿಹಾಕಲು ನೀನು ನನ್ನ ಹೆಂಡತಿಯನ್ನು ಕೊಲೆಮಾಡಬೇಕು.….”

ಒಂದು ಕ್ಷಣ ಬಾಂಬ್ ಬಿದ್ದವನಂತೆ ಬೆಚ್ಚಿ ಬಿದ್ದೆ… ಇಡೀ ದೇಹ ಮತ್ತೆ ಕಂಪಿಸ ತೊಡಗಿತು.

ನಿಮ್ಮ ಹೆಂ…ಡತಿ ಯನ್ನು …. ಕೊಲ್ಲಬೇಕಾ…

ಯಾವಾಗಲೋ ನೋಡಿದ ಹಿಚ್ ಕಾಕ್ ಸಿನಿಮಾದ ಪ್ರಸಂಗ ಇಲ್ಲಿ ಮರುಕಳಿಸಿದಂತಾಯಿತು..

ಯೆಸ್.. ನಿನಗಿರೋದು ಒಂದೇದಾರಿ … ನಿನ್ನ ಕೇಸಿನ ಯಾವುದೇ ಮಾಹಿತಿಗಳೂ ಈವರೆಗೆ ಸರಿಯಾಗಿ ರೆಕಾರ್ಡ್ ಆಗಿಲ್ಲ. ನೀನೊಪ್ಪಿದರೆ ಅದೆಲ್ಲಾ ನಿನಗೆ ವಾಪಸ್ ಮಾಡಿ ಕೇಸ್ ಕ್ಲೋಸ್ ಮಾಡಿ, ಜಯಂತ್ ಅನ್ನು ಕೋರ್ಟ್’ಗೆ ಪ್ರೊಡ್ಯೂಸ್ ಮಾಡ್ತೇನೆ..  ಮುಂದಿನದು ಕೋರ್ಟ್ ಡಿಸೈಡ್ ಮಾಡುತ್ತೆ. ಇಲ್ಲಾಂದ್ರೆ ನಿನಗೆ ಗೊತ್ತಿದೆ….ನಿನಗೇನು ಆಗುತ್ತದೆ ಅಂತ… ಟೇಕ್ ಇಟ್ ಆರ್ ಲೀವ್ ಇಟ್..

ಅವನ ಮಾತುಗಳನ್ನು ಅರಗಿಸಿಕೊಳ್ಳಲು ಸ್ವಲ್ಪ ಹೊತ್ತೇ ಬೇಯಿತು….

ನನ್ನಿಂದಾಗದು…. ನನ್ನಿಂದ ಇನ್ನೊಂದು ಕೊಲೆ …. ನೆವರ್… ನಾನು ಮಾಡಿದ ಕೊಲೆಗೆ ಕಾರಣ ಇದೆ… ಆದರೆ ನನ್ನಿಂದ ಯಾವ ಅಮಾಯಕರೂ ಸಾಯಬಾರದು…

ಇನ್ಸ್ ಪೆಕ್ಟರ್ ಸ್ವಲ್ಪ ಮೆತ್ತಗಾದ…

ನೋಡು ವ್ಯಾಸ… ನನ್ನ ಕಥೆಯೂ ನಿನ್ನಂತೆಯೇ… ಪೋಲೀಸ್ ಕೆಲಸದಲ್ಲಿದ್ದರೂ ಹೆಂಡತಿಯನ್ನು ಸಂಭಾಳಿಸಲಾಗಲಿಲ್ಲ. ನನ್ನ ಸ್ವಂತ ಸೋದರಮಾವನ ಮಗಳು. ಮರ್ಯಾದೆ ಪ್ರಶ್ನೆ… ಮೂರುಬಾರಿ ಬೇರೆ ಬೇರೆಯವರೊಂದಿಗೆ ಹಿಡಿದಿದ್ದೇನೆ. ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ಅಪ್ಪ ಅಮ್ಮ ಈ ವಿಚಾರ ತಿಳಿದರೆ ಎದೆಒಡೆದು ಸಾಯುತ್ತಾರೆ. ನನಗೆ ಅವಳಿಂದ ಮುಕ್ತಿ ಬೇಕಾಗಿದೆ. ನಿನ್ನ ಕೇಸ್ ಇನ್ವೆಸ್ಟಿಗೆಶನ್ ಮಾಡಬೇಕಾದರೆ ನನಗೆ ಈ ಐಡಿಯಾ ಬಂತು. ನೀನು ಮಾಡಿದ ಪ್ಲಾನಿಂಗ್, ಎಗ್ಸಿಕ್ಯೂಶನ್ ಎಲ್ಲಾ ಬ್ರಿಲ್ಲಿಯೆಂಟ್….ಅದಕ್ಕೇ ನಿನ್ನನ್ನು ಸೆಲೆಕ್ಟ್ ಮಾಡಿದೆ..

ಅವನ ಮಾತುಗಳಲ್ಲಿ ಯಾವುದೋಒಂದು ಕಹಿಸತ್ಯ ಅಡಗಿದೆ ಎನಿಸಿದರೂ… ಮನಸ್ಸು ಒಪ್ಪುತ್ತಿಲ್ಲ..

ಒಂದುಕೊಲೆಯನ್ನು ಅರಗಿಸಿಕೊಳ್ಳಲು ಇನ್ನೊಂದುಕೊಲೆ.. ನೆವರ್…

ನೋಡು ವ್ಯಾಸ ನನಗೆ ಇದನ್ನು ಯಾರಾದರೂ ಪ್ರೊಫೆಷನಲ್ ಕಿಲ್ಲರ್’ಗೆ ಕೊಟ್ಟು ಮಾಡಿಸುವುದು ಸುಲಭ. ಆದರೆ ನಿನಗೇ ಯಾಕೆ ಕೇಳುತ್ತಿದ್ದೀನೆಂದರೆ.. ನೀನೂ ನನ್ನಂತೆಯೇ ನೊಂದವನು… ನೀನು ನನಗೆ ಸಹಾಯ ಮಾಡು ನಾನು ನಿನ್ನನು ಬಚಾವ್ ಮಾಡುತ್ತೇನೆ.. ನಾನೂ ಸಿಕ್ಕಿಹಾಕಿಕೊಳ್ಳಲ್ಲ… ನಿನ್ನಮೇಲೆ ಯಾರಿಗೂ ಅನುಮಾನ ಬರಲ್ಲ…

ನೀವು ಹಿಚ್ ಕಾಕ್ ಸಿನೆಮಾ ನೋಡಿ ಈ ಪ್ಲಾನ್ ಮಾಡಿಲ್ಲ ತಾನೇ…

ಅದೆಲ್ಲಾ ನಿನಗ್ಯಾಕೆ … ನಿನ್ನಮುಂದೆ ಎರಡು ದಾರಿ ಇದೆ.. ನಾನು ಹೇಳಿದಂತೆ ಕೇಳಿ ಜೀವನದಲ್ಲಿ ಸಂತೋಷವಾಗಿರುತ್ತೀಯೋ ಅಥವಾ ಜೈಲಿನಲ್ಲಿ ಕಳೆಯುತ್ತೀಯೋ ಯೊಚನೆ ಮಾಡು… ನಾನು ಮೊದಲೇ ಹೇಳಿದೆನಲ್ಲಾ ಟೇಕ್ ಇಟ್ ಆರ್ ಲೀವ್ ಇಟ್.. ಅಪ್ಪಟ ಪೋಲೀಸ್ ಶೈಲಿಯಲ್ಲಿ ಗದರಿದ. ನನಗೆ ಯೋಚನೆಮಾಡಲು ಅವಕಾಶವನ್ನೀಯದೆ, ನನ್ನ ಆಲೋಚನೆ ಹಾಗೂ ಆಯ್ಕೆಗಳನ್ನು ಸೀಮಿತಗೊಳಿಸುತ್ತಿದ್ದಾನೆ ಎನಿಸತೊಡಗಿತು.

ಒಂದು ಕೊಲೆಯನ್ನು ಅರಗಿಸಕೊಳ್ಳಲು ಇನ್ನೊಂದು ಕೊಲೆ… ಜೀವನ ಅಥವಾ ಜೈಲ್? ಅಕಸ್ಮಾತ್ ಕೊಲೆ ಮಾಡಿದಮೇಲೆ ಮತ್ತೆ ನನ್ನನು ಆ ಕೊಲೆಯ ಅಪರಾಧಿ ಎಂದು ಹಿಡಿದರೆ..? ನನ್ನಮೇಲೆ ಯಾವುದೇ ಆಧಾರ ಇಲ್ಲವೆಂದು ಈ ರೀತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಸಲು ಆಡುತ್ತಿರುವ ನಾಟಕವಾ?’

ಏನು ಯೋಚನೆ ಮಾಡುತ್ತಿರುವೆ ವ್ಯಾಸ… ನಿನಗೆ ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲ. ಸೋ ಅಕ್ಸೆಪ್ಟ್ ಮೈ ಆಫರ್.

ಕೆಲಸ ಮುಗಿದಮೇಲೆ ನನ್ನನ್ನು ಆ ಕೊಲೆಯೂ ಮಾಡಿದೆ ಎಂದು ಕೇಸ್ ಜಡಿದರೆ? ಅಥವಾ ಎನ್ ಕೌಂಟರ್ ಮಾಡಿದರೆ… ನಿಮ್ಮನ್ನು ನಂಬುವುದು ಹೇಗೆ?

ಅಂಥಾ ಸಂಧರ್ಭ ಬಂದರೆ ನೀವು ನನ್ನನ್ನೂ ಸೇರಿಸಿಕೊಂಡೇ ಮುಳುಗುತ್ತೀರೆಂದೂ ನನಗೆ ಗೊತ್ತು… ಇದೊಂದು ನಂಬಿಕೆಯ ಆಟ. ವ್ಯಾಸ, ಇದರಲ್ಲಿ ಇಬ್ಬರೂ ಕಳ್ಳರೇ. ಇಬ್ಬರಲ್ಲಿ ಒಬ್ಬರು ತಪ್ಪುಮಾಡಿದರೂ ಇಬ್ಬರೂ ಸಿಕ್ಕಿ ಹಾಕಿಕೊಳ್ಳುತ್ತೇವೆ. ಇದು ಇಬ್ಬರಿಗೂ ನೆಸಸಿಟಿ. ನನಗೆ ಬೇರೆ ದಾರಿಹುಡುಕುವುದು ಸುಲಭ ನಿನಗೆ ಬೇರೆ ದಾರಿ ಇಲ್ಲ.

ನನಗೆ ಯಾವುದೇ ದಾರಿಯೂ ಇರಲಿಲ್ಲ… ಇನ್ಸ್’ಪೆಕ್ಟರ್ ತನ್ನ ಪೊಲೀಸ್ ಬುದ್ದಿ ಚೆನ್ನಾಗಿಯೇ ಉಪಯೋಗಿಸಿದ್ದ.

ಓ ಕೆ.. ಬೇರೆ ದಾರಿಯಿಲ್ಲ ಹಾಗಾಗಿ ಒಪ್ಪುತ್ತೇನೆ… ಬಟ್ ಒನ್ ಕಂಡೀಶನ್.. ಪ್ಲಾನ್ ನಾನೇ ಮಾಡುತ್ತೇನೆ. ನನ್ನ ಎಗ್ಸಿಟ್ ಪ್ಲಾನ್ ನನಗೆ ಮಾತ್ರ ಗೊತ್ತಿರುತ್ತದೆ ಹಾಗೂ ನಿಮ್ಮ ಬಳಿ ನನ್ನ ಬಗ್ಗೆ ಇರುವ ಎಲ್ಲಾ ದಾಖಲೆಗಳ ಕಾಪಿ ಬೇಕು. ಎಲ್ಲಾ ಡಾಕ್ಯುಮೆಂಟ್ಸ್’ಗಳನ್ನು ಕೂಲೆಯಾದ ತಕ್ಷಣ ನನಗೆ ಕೊಡಬೇಕು.

ಇನ್ಸ್‘ಪೆಕ್ಟರ್ ಮಾತಾಡದೇ ಒಪ್ಪಿದ.

ಎರಡನೇ ಬಾರಿಗೆ ಪರ್ಫೆಕ್ಟ್ ಮರ್ಡರ್‘ಗಾಗಿ ಪ್ಲಾನ್ ಮಾಡತೊಡಗಿದೆ. ಈ ಬಾರಿ ಮೊದಲಿಗಿಂತಾ ಚುರುಕಾಗಿದ್ದೆ.

ಇನ್ಸ್‘ಪೆಕ್ಟರ್‘ನ ಹೆಂಡತಿ ಇಲ್ಲದಿದ್ದಾಗ  ಅವನ ಮನೆ ಎಲ್ಲಾ ಸುತ್ತಾಡಿ ಮಾಹಿತಿ ಸಂಗ್ರಹಿಸಿದೆ. ಸುಮಾರು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ನಂತರ ಪ್ಲಾನ್ ರೆಡಿಯಾಯಿತು. ಇನ್ಸ್‘ಪೆಕ್ಟರ್ ಯಾವುದೇ ಥರ ಕೇಳಿದರೂ ಪ್ಲಾನ್ ಏನು ಎಂದು ಹೇಳಲಿಲ್ಲ. ಕೇವಲಪ್ಲಾನ್ ರೆಡಿ… ನಾಳೆ ರಾತ್ರಿ ಒಂಭತ್ತು ಘಂಟೆಗೆ ನಿಮ್ಮ ಮನೆಗೆ ಬರುತ್ತೇನೆ. ಪಾರ್ಟಿ ಮಾಡೋಣ. ನಿಮ್ಮ ಹೆಂಡತಿಯೂ ಮನೆಯಲ್ಲಿಯೇ ಇರಬೇಕು. ಎಂದಷ್ಟೇ ಹೇಳಿದೆ.

ಪ್ಲಾನ್ ಪ್ರಕಾರ ಒಂಭತ್ತಕ್ಕೆ ಇನ್ನೂ ಐದು ಹತ್ತು ನಿಮಿಷ ಇರುವಂತೆಯೇ ಅವನ ಮನೆ ಸೇರಿದೆ.ಇನ್ಸ್‘ಪೆಕ್ಟರ್  ಮನೆಗೆ ಬರುವುದು ಇನ್ನೂ ತಡ ಎಂದು ಗೊತ್ತಿತ್ತು. ನನಗೆ ಬೇಕಾಗಿದ್ದೂ ಅದೇ.

ಪ್ರಕಾಶ್…. ಯಾರೋ ಹಳೆಯ ಸ್ನೇಹಿತನಂತೆ ಕೂಗಿದೆ.

ಯಾರೂ….? ಬಂದೆ.. ಒಂದುನಿಮಿಷ…. ಒಳಗಿನಿಂದ ಮಂಜುಳವಾದ ಧ್ವನಿಯೊಂದು ಬಂದಿತು.. ಮತ್ತೊಂದು ಕ್ಷಣದಲ್ಲಿ ಅವಳು ಬಂದು ನನ್ನ ಮುಂದಿದ್ದಳು.

ಒಂದುಕ್ಷಣ ಮಾತೇ ಹೊರಡಲಿಲ್ಲ. ಸೌಂದರ್ಯದ ಬಗ್ಗೆ ವ್ಯಾಖ್ಯಾನೆ ಬರೆಯಲು ಇವಳಿಗಿಂತಾ ಇನ್ನಾವ ಹೆಣ್ಣೂ ಬೇಕಾಗಿಲ್ಲ ಎನಿಸಿತು. ಅವಳ ವ್ಯಕ್ತಿತ್ವದಲ್ಲಿಯೇ ಒಂದುತೆರನಾದ ಆಕರ್ಷಣೆ. ಅವಳೆದುರಿಗೆ ನಿಂತ ಗಂಡಸರ್ಯಾರೂ ಅವಳನ್ನು ಆರಾಧನಾ ದೃಷ್ಠಿಯಲ್ಲದೇ ಇನ್ನಾವತೆರಾದಲ್ಲೂ ನೋಡಲಾರ ಅಂಥಾ ಮೋಡಿ. ಅಷ್ಟು ಬಾರಿ ಅವರ ಮನೆಗೆ ಬಂದಿದ್ದರೂ ಅವಳ ಫೋಟೋ ಎಲ್ಲೂ ಇರಲಿಲ್ಲ.. ಮೊದಲಬಾರಿಗೆ ನೋಡಿದ ನನಗೆ ಒಂದುಕ್ಷಣ ಏನು ಮಾತಾಡಬೇಕೆಂದೂ ತಿಳಿಯಲಿಲ್ಲ.

ಇಂಥವಳನ್ನು ನಾನು ಕೊಲ್ಲಬೇಕಾ….

ಇವರು ಇನ್ನೂ ಬಂದಿಲ್ಲಾ.. ಇನ್ನೇನು ಬರುವ ಸಮಯ… ಮತ್ತೆ ಆ ಧ್ವನಿ ವಾಸ್ತವಕ್ಕೆ ಎಳೆಯಿತು.

ನಾನು ಅವನ ಹಳೆಯ ಸ್ನೇಹಿತ ರಾತ್ರಿ ಮನೆಯಲ್ಲಿ ಸಿಗೋಣ ಬಾ ಎಂದಿದ್ದ ಸ್ವಲ್ಪ ಮುಂಚೆ ಬಂದೆ. ಪರವಾಗಿಲ್ಲ ಆಮೇಲೆ ಬರುತ್ತೇನೆ.

ಒಳಗಡೆ ಬನ್ನಿ. ಸ್ಟೇಶನ್ ಬಿಟ್ಟಿದ್ದೇನೆ ಎಂದು ಫೋನ್ ಮಾಡಿದ್ದರು. ಕೂತಿರಿ ಬರುತ್ತಾರೆ.   ಏನು ತೆಗೆದುಕೊಳ್ಳುತ್ತೀರಿ? ಕಾಫಿ,, ಟೀ…

ಏನೂ ಬೇಡ ಪ್ರಕಾಶ್ ಬರಲಿ. ಕಷ್ಟಪಟ್ಟು ನಾರ್ಮಲ್ ಆಗಿರಲು ಪ್ರಯತ್ನಿಸಿದೆ. ಅವಳ ವಿನಯ, ಆದರ ನನಗೆ ಮುಜುಗರತರತೊಡಗಿತು.

ಪ್ರಕಾಶ್ ಜೀಪಿನ ಸದ್ದು ಕೇಳಿ ಸಮಾಧಾನವಾಯಿತು.

“ಒಹ್! ವ್ಯಾಸ. ಬಂದೆಯಾ… ಬಾ… ಬಾ…. ಒಂದುನಿಮಿಷ ಬಂದೆ…. ಲೇ… ಡ್ರಿಂಕ್ಸ್ ತೆಗೆದಿಡು…. ಮೈ ಫ್ರೆಂಡ್ ಹ್ಯಾಸ್ ಕಮ್… ಎಂದು ಒಂದೇ ಉಸಿರಿಗೆ ಹೇಳಿ ಮಹಡಿ ಹತ್ತಿದ.

ಕೆಲವೇಕ್ಷಣದಲ್ಲಿ ಟೇಬಲ್ ಸಿದ್ದವಾಯಿತು. ಅವಳಿಗೆ ಇದೆಲ್ಲಾ ಮಾಮೂಲು ಎಂಬುವಂತೆ ಎಲ್ಲಾ ತಂದಿಟ್ಟು ಪ್ರಕಾಶ್ ಬರುವಷ್ಟರಲ್ಲಿ ಮಾಯವಾದಳು.

ಹೇಳು ವ್ಯಾಸ… ಏನು ಪ್ಲಾನ್ ಮಾಡಿದ್ದೀಯ? ನನಗಂತೂ ಎಗ್ಸೈಟ್ ಆಗುತ್ತಾ ಇದೆ…

ಮೊದಲು ಒಂದು ಪ್ರಶ್ನೆ. ನಿಮ್ಮ ಹೆಂಡತಿಯನ್ನು ನೋಡಿದರೆ ಅಂಥವರಲ್ಲಾ ಅನಿಸುತ್ತದೆ” ಅನುಮಾನದಿಂದಲೇ ಕೇಳಿದೆ.

ಅದೇ ಅವಳ ಟ್ರಂಪ್ ಕಾರ್ಡ್… ವ್ಯಾಸಾ… ಎಲ್ಲರೂ ಅವಳ ಈ ನಾಟಕದಿಂದಲೇ ಮೋಸಹೋಗುತ್ತಾರೆ… ಅದನ್ನೆಲ್ಲಾ ಕಟ್ಟಿಕೊಂಡು ನಿನಗೇನಾಗಬೇಕು..? ನಿನ್ನ ಕೆಲಸ ಮಾಡಿ ನಿನ್ನ ಫೈಲ್ ತೆಗೆದುಕೊಂಡು ನಡಿ. ನಿನಗಿಲ್ಲಿ ಕರೆಸಿರುವುದು ಸರಿ–ತಪ್ಪುಗಳ ವ್ಯಾಖ್ಯಾನಕ್ಕಲ್ಲ…

ಅವನ ಧ್ವನಿಯಲ್ಲಿದ್ದ ಗಡಸುತನ ನನ್ನ ಬಾಯಿ ಮುಚ್ಚಿಸಿತು.. ಸುಮಾರು ಅರ್ಧಘಂಟೆ ಮಾತಿಲ್ಲ… ನಿಧಾನವಾಗಿ ನಶೆ ಏರತೊಡಗಿತ್ತು. ಪ್ರಕಾಶ್ ನಶೆಯ ಉತ್ತುಂಗಕ್ಕೆ ತಲುಪಿದ್ದ…

ನೀನೂ ಮೋಸ ಹೋದೆಯಲ್ಲವಾ… ಅವಳ ಮೃದುವಾದ ಮಾತು, ವಿನಯ ಎಲ್ಲಾ ಒಂದು ನಾಟಕ. ಆ ಮುಖದಹಿಂದೆ ಒಂದು ಭಯಾನಕ ಮುಖ ಇದೆ ಎಂದು ಯಾರಿಗೂ ಊಹಿಸಲಿಕ್ಕೂ ಸಾಧ್ಯವಾಗದು. ನಮ್ಮ ಅಪ್ಪಅಮ್ಮನನ್ನೂ ಮರುಳು ಮಾಡಿಬಿಟ್ಟಿದ್ದಾಳೆ. ತಾನು ಅತಿಶಯ ಸುಂದರಿ ಎಂದು ಅವಳಿಗೆ ವಿಪರೀತ ಹೆಮ್ಮೆ. ಗಂಡಸರೆಂದರೆ ತಾನು ಕುಣಿಸಿದಂತೆ ಕುಣಿಯುವ ಗೊಂಬೆಗಳು, ತನ್ನ ಸೌಂದರ್ಯದಿಂದ ಎಂಥವರನ್ನೂ ಮರುಳು ಮಾಡಬಲ್ಲೆ ಎಂಬ ಅಹಂಕಾರ ಅವಳಲ್ಲಿ ತುಂಬಿ ತುಳುಕತ್ತಿದೆ. ನಾನು ಅವಳಿಗೆ ತಕ್ಕವನಲ್ಲ.. ಕೇವಲ ಕುಟುಂಬದ ಮರ್ಯಾದೆಗೋಸ್ಕರ ಮದುವೆಯಾದೆ ಎಂದು ನನ್ನ ಮಾನ ಕಳೆಯುತ್ತಿರುತ್ತಾಳೆ. ಅವಳು ಒಬ್ಬ ಮಹತ್ತ್ವಾಕಾಂಕ್ಷಿ. ಅವಳಿಗೆ ಬೇಕಾಗಿರುವುದು ಹಣ!”

“ಬಿಸನೆಸ್ ಮ್ಯಾಗ್ನೆಟ್ ದಿವಾಕರ ಬಾಬು ಇವಳ ಮೂರನೇ ಸಂಗಾತಿ. ಇಡೀ ಡಿಪಾರ್ಟ್’ಮೆಂಟ್ ನಲ್ಲಿ ನಾನೊಬ್ಬ ಗುಗ್ಗು ಥರ. ಇವಳ ನಿಜಸ್ವರೂಪ ತಿಳಿದರೆ ಇವಳಪ್ಪ, ನನ್ನ ಸೋದರಮಾವ ಎದೆಯೊಡೆದು ಸಾಯುತ್ತಾರೆ. ನಮ್ಮ ಇಡೀ ಕುಟುಂಬದ ಮರ್ಯಾದೆ ಮೂರಾಬಟ್ಟೆಯಾಗುತ್ತದೆ. ನನಗೆ ಈ ನರಕದಿಂದ ಬಿಡುಗಡಬೇಕು. ಫ್ಲೀಸ್… ಇಲ್ಲಾಂದ್ರೆ ನಾನು ಹುಚ್ಚನಾಗುತ್ತೇನೆ…

ಅಮಲಿನಲ್ಲಿ ಇನ್ನು ಏನೇನೋ ಬಡಬಡಿಸತೊಡಗಿದ… ಅವನನ್ನು ತಡೆಯಲು ಪ್ರಯತ್ನಿಸುತ್ತಾ..

ಕಂಟ್ರೋಲ್… ಕಂಟ್ರೋಲ್..

ನೀನು ಅವಳನ್ನು ಕೊಂದಮೇಲೆಯೇ.. ನನ್ನ ಕಷ್ಟಗಳೆಲ್ಲಾ ತೀರವುದು…. ಎದ್ದು ನನಗೆ ಕೈ ಮುಗಿಯಹೊರಟ.. ನಶೆ ಜಾಸ್ತಿಯಾಗಿ ಹಾಗೆಯೇ ಸೋಫಾದಲ್ಲಿ ಕುಸಿದುಬಿದ್ದ..

ಎಲ್ಲಿದ್ದಳೋ ಅವನ ಹೆಂಡತಿ ಪ್ರತ್ಯಕ್ಷ ವಾದಳು

ಒಂದು ಕ್ಷಣ ಭಯವಾಯಿತು.. ’ನಾವು ಮಾತನಾಡಿಕೊಂಡಿದ್ದು ಕೇಳಿಸಿಕೊಂಡಳಾ..’

ಕ್ಷಮಿಸಿ ಸರ್, ಇವರದು ದಿನಾ ಇದೇ ಗೋಳು, ಯಾರಾದರೂ ಸ್ನೇಹಿತರನ್ನು ಕರೆಯುತ್ತಾರೆ ಪಾರ್ಟಿ ಮಾಡಲು … ಅವರಿಗಿಂತಾ ಮೊದಲೇ ತಾವೇ ಔಟ್ ಆಗಿಬಿಡುತ್ತಾರೆ. ಕೊಂಚ ಇವರನ್ನು ರೂಂ ತನಕ ಕರೆದೊಯ್ಯಲು ಸಹಾಯ ಮಾಡುತ್ತೀರಾ?

ನಾರ್ಮಲ್ ಆಗಿ ಮಾತನಾಡಿದಳು.ಬಹುಶಃ ನಮ್ಮ ಮಾತುಗಳು ಅವಳ ಕಿವಿಗೆ ಬಿದ್ದಿರಲಿಕ್ಕಿಲ್ಲ..

ಖಂಡಿತಾ ಮೇಡಂ… ಇವತ್ತು ಸ್ವಲ್ಪ ಜಾಸ್ತಿನೇ ಆಯಿತು ಅನಿಸುತ್ತೆ… ಅದಕ್ಕೇ..

ನಿಮ್ಮನ್ನು ಮೊದಲು ನೋಡಿರಲೇ ಇಲ್ಲ… ಪ್ರಕಾಶನನ್ನು ಎಬ್ಬಿಸಲು ಪ್ರಯತ್ನಿಸುತ್ತಾ ಕೇಳಿದಳು. ನಾನೂ ಅವನನ್ನು ಎರಡೂ ಕೈ ಗಳಿಂದ ಎಬ್ಬಿಸಲು ಪ್ರಯತ್ನಿಸಿದೆ ಆದರೆ ನಾನೇ ಕೊಂಚ ಜೋಲಿ ಹೊಡೆದೆ. ನಶೆ ನನಗೂ ಕೊಂಚ ಏರಿತ್ತು.

ಸ್ವಲ್ಪ ಮಖ ತೊಳೆದುಕೊಂಡು ಬರಲೇ.. ನನಗೂ ಸ್ವಲ್ಪ ನಾರ್ಮಲ್ ಆಗಬೇಕು..

ಪ್ಯಾಸೇಜ್’ನಲ್ಲಿ ಸಿಂಕ್ ಇದೆ. ಬಿಸಿನೀರು ಕೂಡಾ ಬರುತ್ತದೆ.

ಅವಳ ವಿನಯ ನನ್ನನ್ನು ಮತ್ತಷ್ಟು ಕುತೂಹಲಕ್ಕೀಡುಮಾಡಿತು. ಇವಳು ನಿಜವಾಗಿಯೂ ಹೀಗೆಯಾ ಅಥವಾ ಪ್ರಕಾಶ್ ಹೇಳಿದಂತೆ ನಾಟಕ ಮಾಡುತ್ತಿದ್ದಾಳಾ, ತಿಳಿಯುತ್ತಿಲ್ಲ. ಒಂದು ಥರಾ ಕನ್’ಫ್ಯೂಷನ್. ತಣ್ಣನೆಯ ನೀರಿನಲ್ಲಿ ಮುಖ ತೊಳೆದಾಗ ಒಂದುರೀತಿಯ ಸಮಾಧಾನ. ಮುಂದೇನು ಮಾಡಬೇಕೆಂದು ಗೊತ್ತಿದ್ದರೂ ಧೈರ್ಯ ಸಾಲದೆ ಒಂದೆರಡು ನಿಮಿಷ ಅಲ್ಲಿಯೇ ಇದ್ದೆ.

ತಿರುಗಿ ಬಂದಾಗ… ಪ್ರಕಾಶ್ ಏನೋ ಬಡಬಡಿಸುತ್ತಿದ್ದ. ಅವನ ಪತ್ನಿ ಅವನನ್ನು ಸಮಾಧಾನಪಡಿಸುತ್ತಿದ್ದಳು.

ಅವನನ್ನು ಅಲ್ಲಿಂದ ಸಾಗಿಸಲು ನಡೆದ ಪ್ರಯತ್ನ ವ್ಯರ್ಥವಾಗಿ ಅಲ್ಲಿಯೇ ಕುಸಿದೆ. ನನಗೆ ಇದು ನಿತ್ಯದ ಕೆಲಸ. ಹೇಗೋ ಮ್ಯಾನೇಜ್ ಮಾಡ್ತೀನಿ ಬಿಡಿ… ನೀವು ಹೊರಡಿ ಸರ್. ಕ್ಷಮಿಸಿ, ನಿಮಗೆ ಊಟದ ವ್ಯವಸ್ಥೆ ಮಾಡಲಾಗಲಿಲ್ಲ. ಅವಳ ಕಣ್ಣಂಚಿನಲ್ಲೊಂದು ಸಣ್ಣ ಹನಿ ಉದುರಿತು.

ನನ್ನ ಮನಸ್ಸು ಕೂಗಿ ಹೇಳತೊಡಗಿತು ಇವಳಂಥವಳಲ್ಲಾ

ಆದರೂ, ಬಿಡುಗಡೆಗಾಗಿ ಸ್ವಾರ್ಥ ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಿತು.

ಮಕ್ಕಳು ಮಲಗಿದ್ದಾರೇನೋ…” ನನ್ನ ಕೆಲಸಕ್ಕೆ ಕೊಂಚ ಸಮಯ ಬೇಕಿತ್ತು, ಹಾಗಾಗಿ ಅವಳೊಂದಿಗೆ ಮಾತು ಮುಂದುವರಿಸಬೇಕಾಗಿತ್ತು.

ಆ ಭಾಗ್ಯ ನಮಗಿಲ್ಲ ಬಿಡಿ. ಒಂದು ವಿಧಕ್ಕೆ ಒಳ್ಳೆಯದೇ ಆಯಿತು.. ಇವರ ಲೀಲೆಗಳನ್ನು ನೋಡಿ ಅವರೂ ಹಾಳಾಗುತ್ತಿದ್ದರೇನೋ…

ಒಂದು ಕ್ಷಣ ಅವಾಕ್ಕಾದೆ. ಅಂದರೇ….?

ಏನು ಸರ್… ಬಾಲ್ಯ ಸ್ನೇಹಿತ ಅಂತೀರಿ ಇವರ ಬಗ್ಗೆ ತಿಳಿದಿಲ್ಲವಾ…ಮತ್ತೆ ಕೆದಕಿ ನನ್ನ ಮನದಾಳದ ನೋವನ್ನು ಹೆಚ್ಚಿಸಬೇಡಿ. ನೀವು ಹೊರಡಿ. ಇಲ್ಲದಿದ್ದರೆ ನಾಳೆ ಬೆಳಗ್ಗೆಯಿಂದ ನನ್ನ ನಿಮ್ಮ ನಡುವೆ ಸಂಬಂಧ ಇದೆ ಎಂದು ಕಾಟ ಕೊಡಲು ಪ್ರಾರಂಭಿಸುತ್ತಾನೆ.

ಅವಳ ಧ್ವನಿಯ ನೋವು ನನ್ನನ್ನು ಕಲಕಿತು. ನನಗೆ ತಿಳಿಯದಂಥಾ ವಿಚಾರವೊಂದು ಈ ಸಂಸಾರದಲ್ಲಿದೆ. ಅದನ್ನು ತಿಳಿಯದೆ ನಾನು ನನ್ನ ಕೆಲಸ ಮಾಡಬೇಕೋ ಬೇಡವೋ ನಿರ್ಧರಿಸುವುದು ಸರಿಯಲ್ಲ ಎಂದು ತಿಳಿದು: ಮೇಡಂ… ನನ್ನನ್ನು ನಿಮ್ಮ ಹಿತೈಷಿ ಎಂದು ತಿಳಿಯಿರಿ ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ ಹೇಳಿ ಮಾಡುತ್ತೇನೆ.

ನನ್ನನ್ನು ಸಾಯಿಸಬೇಕೆಂದು ಬಂದಿದ್ದೀರಲ್ಲ ಆ ಕೆಲಸ ಮಾಡಿ ಮುಗಿಸಿ ಬಿಡಿ.. ಗಂಭೀರಳಾಗಿ ನುಡಿದಳು.

ಒಂದು ಕ್ಷಣ ಗರಬಡಿದವನಂತೆ ನಿಂತೆ. ಬಾಯಿಂದ ಯಾವುದೇ ಮಾತುಗಳೂ ಹೊರಡುತ್ತಿಲ್ಲ. ‘ನನ್ನ ಉದ್ದೇಶ್ಯ ಇವಳಿಗೆ ತಿಳಿದಿದೆ….

ಪ್ಲೀಸ್ … ನನ್ನನ್ನು ಸಾಯಿಸಿಬಿಡಿ … ನನಗೂ ಈ ಮನುಷ್ಯನೊಂದಿಗೆ ಜೀವನ ಸಾಕಾಗಿದೆ. ಆತ್ಮಹತ್ಯೆ ಮಹಾಪಾಪ ಎಂದು ನನ್ನ ಅತ್ತೆ ಹೇಳುತ್ತಿದ್ದರು. ಹಾಗಾಗಿ ಅದಕ್ಕೆ ಪ್ರಯತ್ನಿಸಲಿಲ್ಲ… ಅಗೋ ಆ ರೂಂನಲ್ಲಿ ಇನ್ನೊಂದು ರಿವಾಲ್ವರ್ ಇದೆ ತಂದು ನನ್ನನ್ನು ಸಾಯಿಸಿಬಿಡಿ. ಇನ್ನು ಈ ನರಕದಲ್ಲಿ ಬದುಕಿರಲಾರೆ.. ಪ್ಲೀಸ್…” ಎದ್ದು ನಿಂತು ಕೈ ಮುಗಿದಳು

ಎಂಥಾ ವಿಪರ್ಯಾಸ! ಯಾರನ್ನು ಸಾಯಿಸು ಎಂದು ಪ್ರಕಾಶ್ ಕೇಳಿದ್ದನೋ… ಅವಳೇ ನನ್ನೆದುರಿಗೆ ನಿಂತು ನನ್ನನ್ನು ಸಾಯಿಸು ಎನ್ನುತ್ತಿದ್ದಾಳೆ.

ಇಡೀ ಪ್ರಸಂಗವೇ ಗೋಜಲಮಯವಾಗುತ್ತಿದೆ. ‘ನಿಜಕ್ಕೂ ಪ್ರಕಾಶ್.. ಸರಿಇಲ್ಲವಾ… ಪ್ರಪಂಚದ ಪರಿವೆ ಇಲ್ಲದೇ ಮಲಗಿರುವ ಅವನು ಸರಿಯಾ. ಅಥವಾ ಕಣ್ಣಲ್ಲಿ ನೀರು ತುಂಬಿಕೊಂಡು ಇವನ ಕಾಟ ತಡೆಯಲಾಗದು.. ಸಾಯಿಸಿಬಿಡಿ ಎಂದು ಹೇಳುತ್ತಿರುವ ಇವಳು ಸರಿಯಾ…. ಒಂದೂ ತಿಳಿಯದು. ನಿಮಗೆಲ್ಲೋ ತಪ್ಪು ಗ್ರಹಿಕೆಯಾಗಿದೆ ನಾನು ಅದಕ್ಕಾಗಿ ಬಂದಿಲ್ಲ… ನನ್ನ ಒಳಮರ್ಮ ಮುಚ್ಚಿಡಲು ಪ್ರಯತ್ನಿಸುತ್ತಾ ತೊದಲಿದೆ.

ನನಗೆಲ್ಲಾ ತಿಳಿಯಿತು ಸರ್… ನೀವು ಫ್ರೆಶ್ ಅಗಲು ಹೋದಾಗ ಇವರು ಎಲ್ಲಾ ಅಮಲಿನಲ್ಲಿ ಬಡಬಡಿಸಿದರು.. ಇವರ ಯಾವುದೇ ಹಿಂಸೆಯಿಂದ ನಾನು ಸಾಯಲಿಲ್ಲ ನೋಡಿ ಅದಕ್ಕೇ ನಿಮ್ಮಂಥಾ ಪ್ರೊಫೆಶನಲ್ ಕಿಲ್ಲರ್ ಅನ್ನು ನೆಮಿಸಿದ್ದಾರೆ. ನಿಮ್ಮ ಕೆಲಸ ಮುಗಿಸಿ ಹೊರಡಿ ಇಲ್ಲದಿದ್ದರೆ ನಿಮಗೆ ದುಡ್ಡು ಸಿಗುವುದಿಲ್ಲ.

ಮುಚ್ಚಿಡಲು ಬೇರಾವ ಮಾರ್ಗವೂ ಇರಲಿಲ್ಲ.. ನನ್ನ ಕಥೆಯನ್ನು ಸಂಕ್ಷಿಪ್ತವಾಗಿ ವಿವರಿಸಿದೆ.

ನೀವು ಸರಿಇಲ್ಲ ನಿಮ್ಮಿಂದ ದೂರವಾಗಲು ಇನ್ನಾವ ಮಾರ್ಗವೂ ತಿಳಿಯದೆ ಈ ನಿರ್ಧಾರಕ್ಕೆ ಬಂದನೆಂದು ಹೇಳಿದ. ನನಗೂ ಯಾವದೇ ದಾರಿ ಇರಲಿಲ್ಲ. ನನ್ನ ಪತ್ನಿಯ ಕೊಲೆ ಆಪಾದನೆಯಿಂದ ಮುಕ್ತನಾಗಲು ನನಗಿದ್ದಿದ್ದು ಇದೊಂದೇ ದಾರಿ. ನನ್ನನ್ನು ಕ್ಷಮಿಸಿಬಿಡಿ. ನಾನೂ ಇವನಂತೆ ಒಬ್ಬ ನೀಚ.

ನೀವಲ್ಲದಿದ್ದರೆ ಇನ್ನೊಬ್ಬರು ಬರುತ್ತಾರೆ. ಯಾರೂ ಇಲ್ಲದಿದ್ದರೆ ಇವರೇ ಒಂದುದಿನ ನನ್ನನ್ನು ಸಾಯಿಸುತ್ತಾರೆ. ಸಾವು ನನಗೆ ನಿಶ್ಚಿತ. ಇಂದು ಬರುತ್ತದೋ ನಾಳೆಯೋ ಎಂದು ಕಾಯುವುದು ಮಾತ್ರ ನನ್ನ ಕೆಲಸ. ನನ್ನ ಸಾವಿನಿಂದ ನಿಮಗೆ ಉಪಕಾರವಾಗುತ್ತದೆ ಎಂದರೆ ಈಗಲೇ ಮುಗಿಸಿಬಿಡಿ. ಈ ಕಾಮುಕನ ಬಲೆಗೆ ಇನ್ನೆಷ್ಟು ಹೆಣ್ಣುಮಕ್ಕಳು ಬಲಿಯಾಗುತ್ತಾರೋ. ನಾನು ನೋಡಲಾರೆ…

ಅಂದರೇ ಪ್ರಕಾಶ್… ಸರಿ ಇಲ್ಲವಾ…

ಏನು ಹೇಳಲಿ ಸರ್… ಪ್ರಪಂಚದಲ್ಲಿರುವ ಹೆಣ್ಣುಮಕ್ಕಳೆಲ್ಲಾ ತನ್ನ ಭೋಗಕ್ಕೇ ಇರುವವರೆಂದು ತಿಳಿದಿರುವ ವ್ಯಕ್ತಿ. ಮಾವನ ಮಗ ಎಂದು ಮದುವೆ ಮಾಡಿದರು.. ಕುಟುಂಬದ ಮರ್ಯಾದೆಗೆ ಧಕ್ಕೆ ಬರಬಾರದೆಂದು ನಾನೂ ಇವರ ವಿಕೃತಿಗಳನ್ನು ಸಹಿಸಿಕೊಂಡು ಬರುತ್ತಲೇ ಇದ್ದೇನೆ. ನಮ್ಮ ತಂದೆ ನನಗೆ ಬೇಕಾದಷ್ಟು ಆಸ್ತಿ ಕೊಟ್ಟಿದ್ದರು. ಅವರು ತೀರಿಕೊಂಡು ಎರಡುತಿಂಗಳಾಯಿತು ಅದನ್ನು ಅನುಭವಿಸಲು ಮಾಡುತ್ತಿರುವ ನಾಟಕ. ಇವರ ನಿಜಾಂಶ ತಿಳಿದರೆ, ಅತ್ತೆ ಮಾವ  ಎದೆಯೊಡೆದು ಸಾಯುತ್ತಾರಷ್ಟೆ. ಆ ಹಿರಿಜೀವಗಳಿಗಾಗಿ ನಾನು ಎಲ್ಲಾ ಅನುಭವಿಸಿಕೊಂಡು ಸುಮ್ಮನಿದ್ದೆ. ಇನ್ನು ತಡೆಯಲಾಗದು..

ಪ್ರಪಂಚದ ಪರಿವಿಲ್ಲದೇ ಮಲಗಿದ್ದ ಪ್ರಕಾಶ್..

ಅದ್ಯಾಕೋ ಪ್ರಕಾಶನ ಬಗ್ಗೆ ಅಸಹ್ಯ ಭಾವನೆ ಹುಟ್ಟತೊಡಗಿತು. ‘ದೇವತೆಯಂತಹ ಹೆಂಡತಿಯನ್ನು ಕೊಲ್ಲಿಸುತ್ತಿದ್ದಾನಲ್ಲಾ… ಎಂದು ಹಾಗೆಯೇ ನನ್ನ ಬಗ್ಗೆಯೂ ಅಸಹ್ಯ ಭಾವನೆ. ನನ್ನ ಸ್ವಾರ್ಥಕ್ಕಾಗಿ ಒಂದು ಹೆಣ್ಣು ಜೀವವನ್ನು ಕೊಲೆಮಾಡಲು ಹೊರಟಿದ್ದೆ.. ನೋ… ನೇಣುಗಂಬ ಏರಿದರೂ ಈ ಪಾಪಿ ಕೆಲಸ ಮಾಡಲಾರೆ

ಧಡಕ್ಕನೆ ಅಲ್ಲಿಂದೆದ್ದೆ. ಅವಳು ಇನ್ನೂ ಅಳುತ್ತಲೇ ಇದ್ದಳು. ಅವಳಿಗೆ ಸಮಾಧಾನ ಮಾಡುವ ಅರ್ಹತೆ ಕಳೆದುಕೊಂಡಿದ್ದೆ.

ನಾನು ಹೊರಡುತ್ತೇನೆ ಮೇಡಂ … ಸಾಧ್ಯವಾದರೆ ನನ್ನ ಕ್ಷಮಿಸಿಬಿಡಿ…

ಒಂದುನಿಮಿಷ… ಮಧ್ಯಾಹ್ನ ಊಟಕ್ಕೆ ಬಂದಾಗ ಒಂದು ಬ್ಯಾಗ್ ಕೊಟ್ಟಿದ್ದರು.. ಅದರಲ್ಲಿ ನಿಮ್ಮ ಡಾಕ್ಯುಮೆಂಟ್’ಗಳಿರಬೇಕೇನೋ ನೋಡಿಬಿಡಿ. ನಿಮ್ಮದೇ ಆಗಿದ್ದರೆ ತೆಗೆದುಕೊಂಡು ಎಲ್ಲಿಯಾದರೂ ದೂರ ಹೋಗಿಬಿಡಿ ಇಲ್ಲದಿದ್ದರೆ ಈ ಪಾಪಿ ನಿಮ್ಮನ್ನೂ ಬಿಡುವುದಿಲ್ಲ.

ಅವಳು ತಂದಿತ್ತ ಬ್ಯಾಗ್’ನಲ್ಲಿ ನನ್ನ ವಿರುದ್ಧ ಪ್ರಕಾಶ್ ಸಂಗ್ರಹಿಸಿದ್ದ ಸಾಕ್ಷ್ಯಗಳೆಲ್ಲವೂ ಇತ್ತು. ನನಗೆ ಪುನರ್ಜನ್ಮವಾಗುವುದರಲ್ಲಿ ಸಂದೇಹವೇ ಇಲ್ಲ.. ಸಮಯ ನೋಡಿದೆ. ಹನ್ನೊಂದಾಗಲು ಇನ್ನೂ ಹತ್ತು ನಿಮಿಷ ಬಾಕಿಯಿತ್ತು. ಇನ್ನು ಹೊರಡುವುದೊಂದೇ ಬಾಕಿ.

ಆದರೂ ಸಮಾಧಾನವಿಲ್ಲ.. ‘ಈ ಸಮಸ್ಯೆಗೆ ನನ್ನ ಬಳಿ ಪರಿಹಾರವಿದೆ ಯಾವ ಪ್ಲಾನ್’ನಿಂದ ಪ್ರಕಾಶ್’ನ ಹೆಂಡತಿಯನ್ನು ಮುಗಿಸಲು ಬಂದಿದ್ದೆನೂ, ಅದೇ ಪ್ಲಾನ್’ನಿಂದ ಅವನನ್ನೇ ಮುಗಿಸಿದರೆ…? ಈ ನೀಚನಿಗೆ ಇದೇ ಸರಿಯಾದ ಶಿಕ್ಷೆ!

ಮನಸ್ಸನ್ನು ಅತ್ತಿತ್ತ ಓಡಲು ಬಿಡಲಿಲ್ಲ… ಮೈಮನಗಳ ಶಕ್ತಿಯನ್ನೆಲ್ಲಾ ಒಟ್ಟು ಗೂಡಿಸಿ ಪ್ರಕಾಶ್ನನ್ನು ಎತ್ತಿ ಹಿಡಿದು ತೇಗದ ಮರದ ಸೋಫಾ ಪಟ್ಟಿಗೆ ಕುಟ್ಟಿದೆ. ಧಡಾಲ್… ಎಂದು ಸೋಫಾ ಪಟ್ಟಿ ಮುರಿಯಿತು. ಪ್ರಕಾಶನ ಕುತ್ತಿಗೆ ಲಟಕ್ಕನೆ ಮುರಿಯಿತು. ನಶೆಯಲ್ಲಿಯೇ ಪ್ರಾಣಕಳೆದುಕೊಂಡ. ಯಾವ ವಿರೋಧವನ್ನೂ ವ್ಯಕ್ತಪಡಿಸದೇ ಪ್ರಕಾಶನ ಹೆಂಡತಿ ನೋಡುತ್ತಲೇ ಇದ್ದಳು.

ಇನ್ನರ್ಧ ಘಂಟೆಯಲ್ಲಿ ನಾನು ಅಲ್ಲಿಗೆ ಬಂದಿದ್ದೆ ಎಂಬ ಕುರುಹುಗಳನ್ನೆಲ್ಲಾ ಮುಗಿಸಿದೆ. ನೋಡುವವರಿಗೆ ಪ್ರಕಾಶ್ ಕುಡಿದು ಮೇಲಿನಿಂದ ಬಿದ್ದು ಸತ್ತಿರುವಂತಿತ್ತು.

ನನ್ನೆಲ್ಲಾ ಕೆಲಸ ಮುಗಿಸಿ ಹೊರಡಲನುವಾದೆ. ಪ್ರಕಾಶನ ಹೆಂಡತಿ ಥ್ಯಾಂಕ್ಸ್ ಎಂಬ ಭಾವದಲ್ಲಿ ಕೈ ಮುಗಿದಳು.

ಇನ್ನು ನಿಮ್ಮ ಜೀವನದ ಕಹಿಅಧ್ಯಾಯ ಮುಗಿಯಿತು ಮೇಡಂ. ಇವನ ಸಾವಿನ ಗೊಂದಲಗಳೆಲ್ಲಾ ಮುಗಿದಮೇಲೆ ಇವನ ನೆನಪೂ ಬರದಷ್ಟು ದೂರಹೋಗಿ ಜೀವನ ಸಾಗಿಸಿ ನಾನಿನ್ನು ಬರುತ್ತೇನೆ..

ನಿಮ್ಮ ಉಪಕಾರ ಈ ಜನ್ಮದಲ್ಲಿ ಮರೆಯಲಾರೆ. ಯಾವ ಜನ್ಮದ ಅಣ್ಣನೋ ನೀವು. ಒಂದುನಿಮಿಷ ಇರಿ.. ಹೊರಗಡೆ ಛಳಿ ಇದೆ. ಕೊಂಚ ಕಾಫಿ ಕೊಡುತ್ತೀನಿ. ಕುಡಿದು ಹೊರಡುವರಂತೆ.

ಆವಳು ಕೊಟ್ಟ ಕಾಫಿ ಕುಡಿಯುತ್ತಿದ್ದಂತೆಯೇ.. ಅದೇನೋ ಮಂಪರು… ಅದು ಕುಡಿದ ಮದ್ಯದ ನಶೆಯಲ್ಲ… ಬೇರೇನೋ….

’ಕಾಫಿಗೆ ಏನೋ ಬೆರೆತಿದೆ.

ಅವಳೆಡೆ ತಿರುಗಿನೋಡಿದೆ.

ನ..ಗು..ತ್ತಿ..ದ್ದ..ಳು..!!!

ಯೂ ಆರ್ ಅ ಫೂಲ್ ಮಿ. ವ್ಯಾಸ….”

ನನ್ನ ಮಾತಿಗೆ ಮರಳಾಗಿ ಈ ಪ್ರಕಾಶ್’ನನ್ನು ಸಾಯಿಸಿ ನನಗೆ ಉಪಕಾರ ಮಾಡಿದ್ದೀಯ. ಈ ಗೂಬೆಯ ಜೊತೆ ಯಾರು ಸಂಸಾರ ಮಾಡುತ್ತಾರೆ. ನಾನೇ ಎಂದಾದರೂ ಸಾಯಿಸಿಬಿಡುತ್ತಿದ್ದೆ. ಥ್ಯಾಂಕ್ಸ್! ನೀನೇ ಆ ಕೆಲಸ ಮಾಡಿದ್ದೀಯ. ಇನ್ನು ನಾನು ನನ್ನ ಲೈಫ್ ಹಾಯಾಗಿ ಯಾರೊಂದಿಗಾದರೂ ಕಳೆಯಬಹುದು.

ತಲೆ ಎಲ್ಲಾ ಗಿರ್ರನೆ ಸುತ್ತಿದಂತಾಯಿತು. ಪ್ರಕಾಶ್ ಹೇಳಿದ್ದೆಲ್ಲಾ ಸತ್ಯ! ಇವಳು ಒಬ್ಬ ಮಾಯಾಂಗನೆ! ಈಗೇನು ಮಾಡಲಿ..

ಯು ನೋ.. ನಾನೀಗ ಪೋಲೀಸರಿಗೆ ಫೋನ್ ಮಾಡಲಿದ್ದೇನೆ. ನಿಮ್ಮ ಹೆಂಡತಿಯ ಕೊಲೆಕೇಸಿನ ಫೈಲನ್ನು ಪಡೆಯಲು ನೀವು ಪ್ರಕಾಶ್’ನನ್ನು ಕೊಂದು ಪರಾರಿಯಾಗಲು ಯತ್ನಿಸುತ್ತಿರುವಾಗ ನಾನು ನಿಮ್ಮ ತಲೆಗೆ ಏಟು ಹಾಕಿ ಎಚ್ಚರ ತಪ್ಪಿಸಿ ಬೀಳಿಸಿದ್ದೇನೆ ಎಂದು ಹೇಳಲಿದ್ದೇನೆ. ಇನ್ನು ಮೂರು ಘಂಟೆಗಳಕಾಲ ನಿಮಗೆ ಎಚ್ಚರ ಇರುವುದಿಲ್ಲ. ಅಷ್ಟರಲ್ಲಿ ನಿಮ್ಮನ್ನು ಪೋಲೀಸರು ಅರೆಸ್ಟ್ ಮಾಡಿರುತ್ತಾರೆ. ನಿಮ್ಮ ಹೆಂಡತಿಯ ಕೊಲೆ ಸಾಕ್ಷ್ಯಗಳೊಂದಿಗೆ.”

ಕಣ್ಣ ಮುಂದಿನ ಅವಳ ಆಕೃತಿ ಅಸ್ಪಷ್ಟವಾಗತೊಡಗಿತು. ಎದ್ದು ನಿಲ್ಲಲು ಪ್ರಯತ್ನಿಸಿದೆ.

ಧಡಾಲ್…

ತಲೆಯ ಹಿಂಭಾಗದಲ್ಲಿ ಬಲವಾದ ಪೆಟ್ಟು ಬಿತ್ತು.. ನನ್ನ ಕಣ್ಣುಗಳು ಮುಚ್ಚತೊಡಗಿದವು….

ಪ್ರಕಾಶ್’ನ ಪತ್ನಿ ನನ್ನ ಕಿವಿಯಲ್ಲಿ ನಿಧಾನವಾಗಿ ಉಸುರಿಸಿದಳು “ಯೂ ಆರ್ ಫಿನಿಶ್ಡ್ ಮಿ. ವ್ಯಾಸ…..”

  • ವಾಸುದೇವ್ ಮೂರ್ತಿ ಪಿ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!