ಮನೆಯ ಅಂಗಳದ ತುದಿಯಲ್ಲಿನ ಒಲೆಗೆ ನಿನ್ನೆ ರಾತ್ರಿ ಹಚ್ಚಿದ್ದ ಬೆಂಕಿ ಇನ್ನೂ ಆರಿರಲಿಲ್ಲ. ಒಳಗೆ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಬಡಬಡಾಯಿಸುತ್ತಲಿತ್ತು. ಕಂಬನಿಯ ಒರೆಸಿಕೊಂಡ ಕೈ ಒದ್ದೆಯಾಗಿಯೇ ಇತ್ತು. ಆದರೂ ಮುಖದ ಮೇಲೆ ನಗುವೊಂದು ಮೂಡಲೇಬೇಕಿತ್ತು. ಅವಳು ಸೋತಿದ್ದಳು. ಬಾಡಿದ ಮುಖದ ಮೇಲೆ ಮೂಡುತ್ತಿದ್ದ ನಗು ಮನದ ಭಾವನೆಯ ಪ್ರತಿಫಲನವಂತೂ ಅಲ್ಲವಾಗಿತ್ತು. ಆದರೂ ಅವಳು ನಗಬೇಕಿತ್ತು. ಅದು ಅಪ್ಪನಿಗಾಗಿ ಮತ್ತು ವಿಪರೀತ ಪ್ರೀತಿಸುತ್ತಿದ್ದ ಅಮ್ಮನಿಗಾಗಿ. ಅವಳು ಅಲ್ಲಿಯೇ ಜಗುಲಿಯ ಮೇಲೆ ಕೂತಿದ್ದಳು. ಅಪ್ಪ ಅಂಗಳದ ಒಲೆಯ ಮುಂದೆ ನಿಂತು ಅಡಿಕೆ ಬೆಂದಿದೆಯೋ ಇಲ್ಲವೋ ನೋಡುತ್ತಿದ್ದ. ಅಮ್ಮ ಅಡುಗೆ ಮನೆಯಲ್ಲಿದ್ದಳು. ಕೊಟ್ಟಿಗೆಯಲ್ಲಿ ಸಣ್ಣ ಕರು ಒಂದು ಅಂಬಾ ಅನ್ನುತ್ತಿತ್ತು. ಅವಳ ಕಣ್ಣು ಜಗುಲಿಯ ಗೋಡೆಗೆ ನೇತು ಹಾಕಿದ್ದ ಆ ಗಡಿಯಾರವನ್ನೇ ನೋಡುತ್ತಿತ್ತು.ಅವಳ ಮುಖದ ಮೇಲೆ ಯಾವುದೋ ನಿರೀಕ್ಷೆಯ ಭಾವವಿದೆ ಜೊತೆಗೆ ಎದೆಬಡಿತ ಜೋರಾಗಿದೆ. ಅವಳು ಮಾತನಾಡುತ್ತಿಲ್ಲ. ಯಾಕೋ ದೇವರ ಮನೆಗೆ ಹೋಗಬೇಕೆನ್ನಿಸಿ ಸೀದಾ ದೇವರ ಕೋಣೆಯ ಹೊಕ್ಕು ದೇವರ ಪೀಠಕ್ಕೆ ಮುಖ ಮಾಡಿ ಸುಮ್ಮನೇ ಕುಳಿತುಬಿಟ್ಟಳು. ಒಂದು ನಿಟ್ಟುಸಿರು ಹೊರಹೊಮ್ಮಿತ್ತು. ದೇವರೆಂದರೇ ದೂರ ನಿಲ್ಲುತ್ತಿದವಳು ಅವನೆದುರಿಗೆ ಮಂಡಿಯೂರಿ ಸುಮ್ಮನಾಗಿ ಬಿಟ್ಟಿದ್ದಳು. ಅವಳಿಗೇ ಈ ಬದಲಾವಣೆಯ ಅರಿವಿರಲಿಲ್ಲ. ಓಡಿ ಹೋಗಿ ಅಮ್ಮನನ್ನು ಅಪ್ಪಿಕೊಳ್ಳಬೇಕು ಅನ್ನಿಸುತ್ತಿತ್ತು, ಆದರೆ ಆಗುತ್ತಿರಲಿಲ್ಲ. ಅಪ್ಪನ ಮಡಿಲ ಮೇಲೆ ಮಲಗಿ ಒಂದು ಸಣ್ಣ ಸಮಯ ಕಣ್ಣು ಮುಚ್ಚಬೇಕು ಅನ್ನಿಸುತ್ತಿತ್ತು. ಆದರೆ ಅದ್ಯಾವುದೂ ಆಗುತ್ತಿರಲಿಲ್ಲ. ಅವಳಿಗೆ ಜೋರಾಗಿ ಅಳಬೇಕು ಅನ್ನಿಸುತ್ತಿದೆ. ಆದರೆ ಅಮ್ಮ ಕಾರಣ ಕೇಳಿದರೆ ಉತ್ತರಿಸುವ ಧೈರ್ಯವಂತೂ ಇರಲಿಲ್ಲ. ಉಮ್ಮಳಿಸಿ ಬಂದ ಅಳುವನ್ನು ಅದುಮಿಟ್ಟುಕೊಂಡು ಮತ್ತೆ ಮೌನವಾದಳು.
ಅವಳು ಕನಸು ಕಂಡಿದ್ದಳು. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಕನಸು ಅದು. ಅಪ್ಪನ ಬೆವರಿನ ಹಣದಿಂದ ಓದುತ್ತಿರುವ ನಾನು ಮುಂದೊಂದು ದಿನ ಚೆನ್ನಾಗಿ ಓದಿ, ಕೆಲಸ ಮಾಡಿ ಅವರನ್ನು ಅವರ ಇಳಿವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಅದು. ಅಪ್ಪನೆಂದರೆ ಅವಳ ಭಾವನೆಯ ಮೂಲವಾಗಿದ್ದ. ಅಮ್ಮನೆಂದರೆ ಪ್ರಪಂಚವಾಗಿತ್ತು. ಕ್ಷಣಕ್ಕೊಮ್ಮೆ ಮನೆಯ ಗೋಡೆಗೆ ಅಂಟಿದ್ದ ಗಡಿಯಾರವನ್ನು ಅವಳು ನೋಡುತ್ತಿದ್ದಳು. ಮಗಳು ಮನೆಯ ಅರಳಿಸುತ್ತಾಳೆಂಬ ಆ ಭರವಸೆಯೇ ಅಪ್ಪನ ಕನಸಾಗಿತ್ತು. ಅಮ್ಮನ ನಿಟ್ಟುಸಿರ ತುದಿಯಾಗಿತ್ತು. ಮಗಳು ದೊಡ್ಡವಳಾಗಿದ್ದಾಳೆ ಆದರೂ ಅಮ್ಮನೇ ದಿನವೂ ಸ್ನಾನ ಮಾಡಿಸಬೇಕಿತ್ತು, ತಲೆ ಬಾಚಬೇಕಿತ್ತು. ಅಮ್ಮ ಮಗಳ ಸ್ನಾನದ ಮನೆಯ ಪಯಣ ಮುಗಿಯುವಷ್ಟರಲ್ಲಿ, ಅಪ್ಪ ಬಿಸಿ ಬಿಸಿ ‘ಚಾ‘ ಮಾಡಿ ತರುತ್ತಿದ್ದ. ಅವಳು ಅಪ್ಪ ಅಮ್ಮನ ಉಸಿರಾಗಿದ್ದಳು. ಅಮ್ಮ, ಮಗಳು ಮುಡಿದುಕೊಳ್ಳಲಿ ಎಂದು ಹೂವು ಬೆಳೆಸುತ್ತಿದ್ದಳು. ಅಪ್ಪ, ಮಗಳು ಸಂಭ್ರಮಿಸಲಿ ಎಂದು ತನ್ನ ಸಂಭ್ರಮವ ಮರೆತುಬಿಟ್ಟಿದ್ದ.
ಅವಳು ಯೋಚಿಸುತ್ತಿದ್ದಳು. ಅವಳಿಗೆ ನಾಳೆಯದ್ದೇ ಯೋಚನೆ. ಕ್ಷಣಕ್ಕೆ ಅವನು ನೆನಪಾದ. ಪ್ರೀತಿಯ ಅರಮನೆಯಲ್ಲಿ ಇವಳನ್ನಿಟ್ಟು ಸಾಕುವವ ಅವನು. ಅವನನ್ನು ಪ್ರೀತಿಸುತ್ತಿದ್ದಳು. ಅವನೂ ಕೂಡ ಅವಳಲ್ಲಿ ಬೆರೆತು ಹೋಗಿದ್ದ. ಅಪ್ಪನನ್ನು ಹೊರತುಪಡಿಸಿ ಅವಳು ತಬ್ಬಿಕೊಂಡಿದ್ದು ಅವನನ್ನು ಮಾತ್ರ. ಅವಳ ಉಸಿರಲ್ಲಿ ಅವನ ಉಸಿರೂ ಇತ್ತು. ಅವನು ನೆನಪಾದ. ಮೊದಲ ಬಾರಿಗೆ ‘ಅವನು ನೆನಪಾಗಬಾರದಿತ್ತು‘ ಅನ್ನಿಸಿತ್ತು. ಅಮ್ಮನೊಡನೆಯ ಇಷ್ಟು ದಿನದ ಜೀವನ ಕಣ್ಣೆದುರು ಬಿಡಿಬಿಡಿಯಾಗಿ ಹಾದು ಹೋಗುತ್ತಿತ್ತು. ಅಪ್ಪನೊಡನೆಯ ತೀವ್ರ ಬಂಧವನ್ನು ತೊರೆದು ಹೊರಡಬೇಕೇ ಅನ್ನಿಸುತ್ತಿತ್ತು. ಹಾಗಾಗಿ ಕ್ಷಣಕ್ಕೆ ಅವನೂ ನಗಣ್ಯನಾಗಿ ಬಿಟ್ಟಿದ್ದ. ವಾರದ ಹಿಂದೆ ಅಜ್ಜನ ಮನೆಗೆ ಹೊರಡುವಾಗ ಅಮ್ಮ ತನ್ನನ್ನು ಬೀಳ್ಕೊಟ್ಟಿದ್ದು ನೆನಪಾಯಿತು. ಎರಡು ದಿನ ಮನೆ ಬಿಟ್ಟು ಹೊರಡಲು ತಯಾರಾಗಿದ್ದ ಮಗಳನ್ನು ಕಳುಹಿಸಿಕೊಡುವಾಗ ಅಮ್ಮನ ಕಣ್ಣು ಒದ್ದೆಯಾಗಿತ್ತು. ಹೇಳದೇ ಹೊರಡಲು ತಯಾರಾಗಬೇಕಿದ್ದ ಈ ಕ್ಷಣ ಯಾಕೋ ಕಠಿಣ ಅನ್ನಿಸುತ್ತಿತ್ತು. ಬದುಕು ಸುಂದರ ಅನ್ನಿಸುತ್ತಿದ್ದ ಆ ಕ್ಷಣ ಕಲ್ಪನೆಯೇನೋ ಅನ್ನಿಸಿ ಕೂಸು ಮರುಗುತ್ತಿದ್ದಳು. ಗಡಿಯಾರದ ಮುಳ್ಳು ಅವಳಿಗೆ ಹೊರಡು ಎಂದು ಸಂಜ್ಞೆ ನೀಡುತ್ತಿತ್ತು. ಉಸಿರುಗಟ್ಟಿ ಹಿಡಿದುಕೊಂಡು ಎದ್ದಳು. ಅಪ್ಪ ಅಂಗಳದಲ್ಲಿ ಯಕ್ಷಗಾನ ಪದ ಹಾಡುತ್ತಲೇ ಇದ್ದ. ಭಾವನೆಯ ತೊಯ್ದಾಟಕ್ಕೆ ಜೀವ ವಿಪರೀತ ಸ್ಪಂದಿಸುತ್ತಿತ್ತು. ಹಾಗಾಗಿ ಮುಖ ಬಾಡಿತ್ತು. ಅಮ್ಮನೆದೆರು ಒಮ್ಮೆಲೆ ಹೋಗಿ ನಿಲ್ಲಲು ಅಳುಕಿತ್ತು. ಅಮ್ಮನ ಮನಸ್ಸು ಕೂಸಿನ ಮುಖದ ಮೇಲೆ ನಗುವನ್ನು ಮಾತ್ರ ಇಚ್ಚಿಸುತ್ತಿತ್ತು. ಅದು ಅವಳಿಗೂ ಗೊತ್ತಿತ್ತು. ತನ್ನ ಕೋಣೆಯ ಸೇರಿ ಹೊರಡಲು ಸಿದ್ಧಳಾಗತೊಡಗಿದಳು. ಈಗ ಮನಸ್ಸಿನಲ್ಲಿ ಅಳುಕೆಂಬ ಹುಳು ಬೀಡು ಬಿಟ್ಟಿತ್ತು. ಅವನು ಮೋಸ ಮಾಡಿದರೆ? ತನ್ನನ್ನು ಬೇರೆಯಾರಿಗಾದರೂ ಮಾರಿ ಬಿಟ್ಟರೆ? ದೂರದ ಗೊತ್ತಿಲ್ಲದ ಊರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಿಟ್ಟರೆ? ಇಲ್ಲ. ಅವನು ಹೀಗೆ ಮಾಡಲು ಸಾಧ್ಯವಿಲ್ಲ ಅನ್ನಿಸಿತು. ಮನಸ್ಸು ಕೆಲವೊಮ್ಮೆ ಆಸೆಗಳ ವಿರುದ್ಧ ಚಲಿಸಲು ಶುರು ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವಳಿಗೂ ಹಾಗೇ ಆಯಿತು. ಅವನು ಜೀವವನ್ನು ಆವರಿಸಿರುವ ಗೆಳೆಯನಾಗಿದ್ದ. ಅವನು ಚಂದದ ಕನಸುಗಳನ್ನು ಅವಳೊಳಗೆ ಬಿತ್ತಿರುವವನಾಗಿದ್ದ . ಅವನು ಕಾರಣವಿಲ್ಲದೆ ಬರುತ್ತಿದ್ದ ಅವಳ ಸಿಟ್ಟಿಗೆ ಬಲಿಯಾಗುತ್ತಿದ್ದವನಾಗಿದ್ದ . ಎಲ್ಲಕ್ಕಿಂತ ಮುಖ್ಯವಾಗಿ ಅವಳ ಉಸಿರು ಅವನು. ಅವನ ಅನುಮಾನಿಸುವುದು ದೇವರಿಗೆ ಮಾಡುವ ಮೋಸ ಅನ್ನಿಸಿತು. ಅಳುಕನ್ನು ಆಳಕ್ಕಿಳಿಸಿದಳು. ಪ್ರೀತಿ ಉಮ್ಮಳಿಸಿ ಬಂತು. ಸಂಭ್ರಮಿಸಲೋ ಇಲ್ಲ ಪರಿತಪಿಸಲೋ ಎಂದು ಅರಿಯದೇ ಮತ್ತೆ ಮೌನಿಯಾದಳು. ಅವನ ಸೇರಲೇಬೇಕೆಂದು ನಿರ್ಧರಿಸಿದಳು. ಮನಸ್ಸು ಚಡಪಡಿಕೆಯಿಂದ ತೊಯ್ದಾಡುತ್ತಿದ್ದರೆ, ಮುಖ ಅಮ್ಮ ಬಯಸುತ್ತಿದ್ದ ನಗುವ ಹೊತ್ತು ನಿಂತಿತ್ತು. ಈಗ ಮತ್ತೆ ಅವನು ನೆನಪಾದ. ಅವನ ಸೇರುವ ತವಕ ಚೂರು ಹೆಚ್ಚಾಯಿತು. ಅಪ್ಪ ಅಮ್ಮನನ್ನು ಬಿಟ್ಟು ಹೊರಡಲು ಸಿದ್ಧಳಾದಳು.
ಮಗಳ ತಯಾರಿ ನೋಡಿ ಅಮ್ಮ ಖುಷಿಪಟ್ಟಳು. ಎಷ್ಟು ದೂರ ಹೊರಟೆ ಎಂದಳು? ಉತ್ತರಿಸಬೇಕಾದವಳು ತಡವರಿಸಿದಳು. ತಯಾರಿಸಿಕೊಂಡು ಬಂದಿದ್ದ ಉತ್ತರವ ಹೇಳಲು ಅಮ್ಮನ ಮುಗ್ಧತೆ ಅಡ್ಡಿಪಡಿಸಿದಂತಿತ್ತು. ಗಡಿಯಾರವ ನೋಡಿದಳು, ಮತ್ತೆ ಅವನು ನೆನಪಾದ. ‘ನನ್ನವನ ಕೂಡಲು ಹೊರಟೆ ಅಮ್ಮ‘ ಅಂದು ಬಿಡಲೇ ಅನ್ನಿಸಿತು. ಮೋಸ ಮಾಡುವುದನ್ನು ಸಾರಿ ಹೇಳಲು ಮರ್ಕಟ ಮನಸ್ಸು ಬಿಡಲಿಲ್ಲ. ಪೇಟೆಗೆ ಹೋಗಿ ಬರುವೆ ಅಂದಳು. ಅಮ್ಮ ಯಾಕೆ ಕೇಳಲಿಲ್ಲ. ಅಂಗಳದಲ್ಲಿದ್ದ ಅಪ್ಪ ಒಳಜಗುಲಿಗೆ ಬಂದು ಅಂಗಿ ಕಿಸೆಯಲ್ಲಿದ್ದ ಹಣ ತಡಕಾಡಿದ. ಇಷ್ಟು ಹಣ ಸಾಕಾಗೊಲ್ಲ ಎಂದು ಕೆಳಗಿನ ಮನೆಯ ತಮ್ಮನ ಬಳಿ ಕೈ ಸಾಲ ಮಾಡಿ ತಂದು ಮಗಳ ಕೈಗಿಟ್ಟ. ಇವನ್ನೆಲ್ಲ ಗಮನಿಸಿದ ಅವಳಿಗೆ ತಾನು ಈ ಇಬ್ಬರು ಮುಗ್ಧರಿಗೆ ಮಾಡಲು ಹೊರಟಿರುವ ಘಾಸಿಯ ಪರಿಣಾಮ ಚೂರು ತಿಳಿಯಿತು. ‘ಯಾಕಿಷ್ಟು ನಂಬುತ್ತೀರಿ ನನ್ನನ್ನು?’ ಎಂದು ಕೇಳೋಣ ಅನ್ನಿಸಿತು. ಸತ್ಯ ಹೇಳಲು ಅಂಜಿಕೆಯ ಮುಖವಾಡ ಬಿಡಲಿಲ್ಲ. ಅವಳು ಹಣವನ್ನು ಬೇಡ ಅನ್ನಲಿಲ್ಲ. ಅಮ್ಮನ ಮುಖ ನೋಡಿದಳು. ಅಮ್ಮ ನಗುತ್ತಿದ್ದಳು. ಅಪ್ಪ ಮತ್ತೆ ಯಕ್ಷಗಾನ ಪದವನ್ನು ಹಾಡುತ್ತಲೇ ತಲೆಯಲ್ಲಾಡಿಸಿದ. ‘ನಾನು ಹೊರಟೆ‘ ಅಂದಳು. ನಾನು ಆಡುತ್ತಿರುವ ಕೊನೆಯ ಮಾತು ಇದೇ ಎಂದು ಹೇಳಿ ಹೊರಡೋಣ ಅನ್ನಿಸಿತು, ಆದರೂ ಹೇಳಲು ಆಗಲಿಲ್ಲ. ಅಮ್ಮನನ್ನು ಅಪ್ಪಿಕೊಂಡಳು. ಕಣ್ಣಲ್ಲಿ ಹನಿ ನೀರು ಗೊತ್ತಿಲ್ಲದೇ ಜಿನುಗುತ್ತಿತ್ತು. ಹೋಗಿ ಬರುವೆ ಅಮ್ಮ ಅನ್ನೋಣ ಅನ್ನಿಸಿತ್ತು, ಆದರೆ ಮತ್ತೆ ಬರದ ನಾನು ಈ ಮಾತು ಹೇಳಬಾರದು ಅನ್ನಿಸಿ ಹೊರಟಳು. ಮನೆಯ ಅಂಗಳ ದಾಟಿ ಹೊರಡುವಾಗ ಬಾಲ್ಯದಲ್ಲಿ ತಾನು ಕುಣಿದಾಡಿದ ಈ ನೆಲದ ಋಣವೇ ತೀರಿ ಹೋಯಿತು ಅನ್ನಿಸಿ ಅಭಾರಮನ್ನಣೆ ಸಲ್ಲಿಸಿ ಹೊರಟಳು. ಮನೆಗೆ ಮಾತ್ರವಲ್ಲದೆ ಹುಟ್ಟಿಸಿದ ಅಪ್ಪ ಅಮ್ಮನಿಗೂ ವಿದಾಯ ಹೇಳಿ ಅವನ ಸೇರಲು ಪಯಣಿಸಿದಳು.
ಮಗಳಿಗಾಗಿ ಮಲ್ಲಿಗೆ ಹೂವಿನ ಮಾಲೆಯನ್ನು ಕಟ್ಟುತ್ತಿದ್ದ ಅಮ್ಮನಿಗೆ ಇವಳ ಪಡೆದ ನಾನೇ ಧನ್ಯ ಎಂಬ ಭಾವ ಆವರಿಸಿತ್ತು. ಅಪ್ಪ ಸಂಜೆ ಬಸ್’ಗೆ ಬರುವ ಮಗಳನ್ನು ಕರೆದುಕೊಂಡು ಬರಲು ಬಸ್ ಸ್ಟ್ಯಾಂಡ್’ಗೆ ಹೊರಡುವ ತಯಾರಿ ನಡೆಸಿದ್ದಾನೆ.ಊರಿಗೆ ಪೇಟೆಯಿಂದ ತಲುಪುವ ಕೊನೆಯ ಬಸ್ ಅದು. ಅಮ್ಮ ಬಾಗಿಲಲ್ಲಿಯೇ ನಿಂತಿದ್ದಳು. ಅಪ್ಪ ಬಿರುಸಾದ ಹೆಜ್ಜೆಯನಿಟ್ಟು ಊರ ಬಸ್ ಸ್ಟ್ಯಾಂಡ್ ಕಡೆ ಹೊರಟ. ಮಗಳು ಬೇಗ ಮನೆ ತಲುಪಲಿ ಎಂದು ಅಮ್ಮ ದೇವರಿಗೆರಡು ತುಪ್ಪದ ದೀಪ ಹಚ್ಚಿದಳು. ಮಗಳು ಮನೆ ಬಿಟ್ಟಾಗಿತ್ತು. ಆದರೆ ಅಮ್ಮ ಮಗಳನ್ನು ನಂಬಿದ್ದಳು. ಜೊತೆಗೆ ದೇವರನ್ನೂ ನಂಬಿದ್ದಳು.ಅಪ್ಪ ತಲುಪುವಷ್ಟರಲ್ಲೇ ಊರಿನ ಕೊನೆಯ ಬಸ್ ಊರಿಗೆ ಬಂದಾಗಿತ್ತು. ಮಗಳ ಹುಡುಕತೊಡಗಿದ. ಆತನಿಗೆ ಅವಳೆಲ್ಲೂ ಕಾಣಲಿಲ್ಲ. ಆತನ ಹುಡುಕಾಟ ತೀವ್ರವಾಯಿತು. ಅಲ್ಲಿ ಅದೇ ಬಸ್’ನಿಂದ ಇಳಿದ ಹಲವರ ಬಳಿ ವಿಚಾರಿಸಿದ. ಅವಳು ಈ ಬಸ್ ಹತ್ತಿ ಬರಲೇ ಇಲ್ಲ ಎಂಬ ಮಾಹಿತಿ ಕೂಡ ಆತನಿಗೆ ದೊರೆಯಿತು. ಚಡಪಡಿಸಿದ. ಮಗಳ ಮುದ್ದು ಮುಖ ಕಣ್ಣೆದುರಿಗೆ ಬಂತು. ಉಮ್ಮಳಿಸಿ ಬಂದ ಅಳುವನ್ನು ಅವುಡುಗಚ್ಚಿ ತಡೆದುಕೊಂಡ.
ಏನು ಮಾಡಲಿ ಎಂದು ತೋಚದೇ ಅಲ್ಲೇ ಕುಳಿತುಬಿಟ್ಟ. ಸ್ವಲ್ಪ ಸಮಯದ ನಂತರ ಮನೆಗೆ ಓಡಿದ. ಹೆಂಡತಿ ಬಾಗಿಲಲ್ಲೇ ನಿಂತಿದ್ದಳು. ಮಗಳೆಲ್ಲಿ ಎಂಬ ಪ್ರಶ್ನೆಗೆ ಉತ್ತರಿಸಲಾರದ ಸ್ಥಿತಿಯಲ್ಲಿ ಆತನಿದ್ದ. ಬಸ್’ಗೆ ಮಗಳು ಬಂದಿಲ್ಲವೆಂದು ಹೇಳಿ ಯಾರ್ಯಾರಿಗೋ ಫೋನ್ ಮಾಡಿದ. ಸೊರಗಿಹೋದ. ಮಗಳೆಲ್ಲಿ ಹೋದಳು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸ್ಥಿತಿಯಲ್ಲಿ ಆತನಿರಲಿಲ್ಲ. ಹೆಂಡತಿ ಅಳುತ್ತಲೇ ಇದ್ದಳು. ಆಚೀಚೆ ಮನೆಯವರು ಬಂದರು. ಸಮಾಧಾನಿಸುವ ನಾಟಕವನ್ನಾಡಿದರು. ಬೆಳಿಗ್ಗೆ ಅಪ್ಪ ಮಗಳ ರೂಮ್’ಗೆ ಹೋದ. ಮಗಳು ಮೊಬೈಲ್ ಕೂಡ ಬಿಟ್ಟು ಹೋಗಿದ್ದಳು. ಅಪ್ಪನ ಯೋಚನೆ ಮಗಳ ಇರಾದೆಯನ್ನು ತಲುಪಿತ್ತು. ತೀವ್ರವಾಗಿ ಮೌನಿಯಾಗಿ ತನ್ನವಳನ್ನು ತಬ್ಬಿಕೊಂಡ. ಮಗಳು ಓಡಿ ಹೋಗಿದ್ದಾಳೆ ಎಂಬ ಸುದ್ದಿಯನ್ನು ಅವನು ಹೇಳದಿದ್ದರೂ ಅಮ್ಮ ಅದನ್ನು ಅರಿತಿದ್ದಳು. ಸುದ್ದಿ ಸಮಾಜವನ್ನು ಅಪ್ಪಳಿಸಿತು. ಓಡಿ ಹೋದವಳು ಹೆತ್ತವರ ಸುಖವನ್ನೂ ಜೊತೆಗೆ ತೆಗೆದುಕೊಂಡು ಹೋಗಿದ್ದಳು. ಅವಳಿಗೆ ಪ್ರೀತಿ ಮುಖ್ಯವಾಗಿತ್ತು ಆದರೆ ಹೆತ್ತವರದ್ದಲ್ಲ. ಇವರು ಅವಳನ್ನು ಪ್ರಶ್ನಿಸದೇ ಬೆಳೆಸಿದರು, ಅದು ಅವಳಿಗೆ ಸಲಿಗೆಯಾಯಿತು. ಪ್ರೀತಿಸುತ್ತಿದ್ದೇನೆ ಎಂದು ಒಂದು ಮಾತನ್ನು ಅವಳು ಹೇಳಬಹುದಿತ್ತು ಎಂದು ಅಮ್ಮ ಅಪ್ಪನ ಬಳಿ ಸದಾ ಹೇಳುತ್ತಿದ್ದಳು. ಅಪ್ಪ ಸೋತುಹೋದ. ಅಮ್ಮ ಸೊರಗಿ ಹೋದಳು. ಸಮಾಜ ಬೆಂಬಲಿಸದೇ ಹಿರಿಯ ಜೀವಗಳನ್ನು ಕಿತ್ತು ತಿಂದಿತು. ಮನೆಯ ತುಂಬಿರುತ್ತಿದ್ದ ನಗುವನ್ನು ಮಗಳೇ ಜೊತೆಗೊಯ್ದಳು. ಅವಳನ್ನು ಮರೆಯಲು ಹೆತ್ತ ಕರುಳು ಪ್ರಯತ್ನಿಸಲೂ ಇಲ್ಲ. ಜೊತೆಗೆ ಮರೆಯಲು ಸಮಾಜವೂ ಬಿಡಲಿಲ್ಲ.
ಅಪ್ಪ ಅದೇ ಅಂಗಳದ ತುದಿಯಲ್ಲಿ ತನ್ನವಳನ್ನು ತನ್ನ ಕಾಲಮೇಲೆ ಮಲಗಿಸಿಕೊಂಡು ದಿನವೂ ಸಮಾಧಾನಿಸುತ್ತಲೇ ಇದ್ದ. ಜೀವದಲ್ಲಿ ಬೆರೆತವಳು ಅವಳಾಗಿದ್ದಳು. ಆದರೆ ಬದುಕನ್ನು ನಿಂತ ನೀರಾಗಿಸಿ ಯಾವುದೋ ಲೋಕಕ್ಕೆ ಹೋದಳು. ಇಲ್ಲಿದ್ದ ಅಪ್ಪ ಅಮ್ಮ ಇಬ್ಬರೂ ಮೌನಿಯಾದರು. ಸಮಾಜ ಗಹಗಹಿಸಿ ನಗುತ್ತಲೇ ಇತ್ತು.