ಸಿಟಿಯ ಬಿಸಿಲಲ್ಲೇ ಹುಟ್ಟಿ ಬೆಳೆದಿದ್ದ ರಾಹುಲ್’ಗೆ ಹಾರರ್ ಮೂವಿಗಳೆಂದರೆ ಪಂಚಪ್ರಾಣ. ಪ್ರೀತಿ, ಪ್ರೇಮ, ಪ್ರಣಯ ಎಂಬ ಅಳಿಯ ಅಲ್ಲ ಮಗಳ ಗಂಡನೆನಿಸಿಕೊಳ್ಳುವ ಚಿತ್ರಗಳೆಂದರೆ ಆತ ಉರಿದುಬೀಳುತ್ತಿದ್ದ. ಬಿಟ್ಟಿಯಾಗಿ ಅಂತಹ ಚಿತ್ರದ ಟಿಕೆಟ್ ದೊರೆತರೂ ಹೋಗದೆ ಇರುವಂತಹ ಆಸಾಮಿ. ಆದರೆ ಸಿಟಿಯಲ್ಲಿ ಯಾವುದೇ ಇಂಗ್ಲಿಷ್ ಹಾರರ್ ಚಿತ್ರಗಳೂ ಬಂದರೂ ಬೆಂಬಿಡದೆ ನೋಡುವ ಖಯಾಲಿ. ಚಿತ್ರದ ಪೋಸ್ಟರ್ ನೋಡಿಯೇ ಗಡಗಡ ನಡುಗುವ ಒಂದಿಷ್ಟು ಸ್ನೇಹಿತರನ್ನು ಅವರು ಅಕ್ಷರ ಸಹ ಕಾಲಿಗೆ ಅಡ್ಡ ಬೀಳುತ್ತೀನಿ ಬಿಡಪ್ಪ ಎಂದರೂ ತಾನೇ ಖುದ್ದಾಗಿ ಅಷ್ಟೂ ಜನರಿಗೆ ಟಿಕೆಟ್ ಕೊಂಡು, ಜೊತೆಗೆ ಒಂದಿಷ್ಟು ಪಾಪ್ ಕಾರ್ನ್ ಹಾಗು ಪೆಪ್ಸಿಯನ್ನೂ ಕೊಂಡು ಚಿತ್ರ ಮಂದಿರಕ್ಕೆ ಎಳೆದುಕೊಂಡು ಹೋಗುತ್ತಿದ್ದ. ಕಿವಿ ಸಿಡಿದು ಹೋಗುವ ಶಬ್ದದೊಂದಿಗೆ ಎದೆ ಜಲ್ಲ್ ಎನಿಸುವ ದೃಶ್ಯಗಳ ಕುತೂಹಲ ಒಂದೆಡೆಯಾದರೆ, ಊರಿಗೆ ದೊಡ್ಡದಾದ ಮೀಸೆ ಗಡ್ಡವನ್ನು ಬಿಟ್ಟು ನಿಮಿರುವ ತನ್ನ ಉತ್ತರಕುಮಾರ ಸ್ನೇಹಿತರು ಕಣ್ಮುಚ್ಚಿ ಕಿವಿಗೆ ಕೈಯ್ಯ ಬೆರಳುಗಳನ್ನು ಚುಚ್ಚಿ ಪಡುವ ಪಾಡಿನ ಮಜಾ ಇನ್ನೊಂದೆಡೆ. ಆ ಸ್ನೇಹಿತರೋ ಈತ ತುತ್ತು ಕೊಡಿಸಿ ಟಿಕೆಟ್ ಅನ್ನೂ ಕೊಡಿಸಿದ ಎಂಬ ಒಂದೇ ಕಾರಣಕ್ಕೆ ಮಾತ್ರ ತಮ್ಮ ದೇಹವನ್ನು ಸಿನಿಮಾ ಮಂದಿರದ ಒಳಗಿರಿಸಿ ಮನಸ್ಸನ್ನು ಊರ ದೇವಾಲಯದ ದೇವರ ಮುಂದಿರಿಸುತ್ತಾರೆ ವಿನಹಃ ಗೆಳೆತನದ ಗಟ್ಟಿತನವನ್ನೂ ಪ್ರದರ್ಶಿಸುವುದಕ್ಕಂತೂ ಅಲ್ಲವೇ ಅಲ್ಲ. ಅಂತೂ ತಿಂಗಳಿಗೆ ಎರೆಡೆರಡು ಅಮಾವಾಸ್ಯೆಯನ್ನು ಕಾಣುತ್ತಿದ್ದರು ಆತನ ಸ್ನೇಹಿತರು. ಒಂದು ಚಂದ್ರ ಕಾಣೆಯಾದಗ ಆದರೆ ಮತ್ತೊಂದು ರಾಹುಲ್’ನ ಬಿಟ್ಟಿ ಟಿಕೆಟ್ಟು ಸಿಕ್ಕಾಗ!
ಆ ತಿಂಗಳು ರಾಹುಲ್’ನ ಆಫೀಸಿನ ಸಹೋದ್ಯೋಗಿ ಕಮ್ ಬೆಸ್ಟ್ ಫ್ರೆಂಡ್’ನ ಮದುವೆ ಸೆಟ್ಟೇರಿತ್ತು. ಮದುಮಗ ಮದುವೆಯ ಒಂದು ತಿಂಗಳ ಮೊದಲೇ ರಜೆ ಹಾಕಿ ಊರಿಗೆ ಹೋದರಿಂದ ಇತರ ಸ್ನೇಹಿತರಾದಿಗಳಿಗೆ ಕಾಗದ ಹಂಚುವ ಕೆಲಸ ಒಂದೆಡೆಯಾದರೆ, ಮದುಮಗನ ಊರು ಮಲೆನಾಡಿನ ದಟ್ಟಾರಣ್ಯದ ಪುಟ್ಟ ಗೂಡಿನೊಳಗೆ ಅವಿತಿರುವಂತಿರುವಾಗ ಮದುವೆಯ ಮನೆಗೆ ಸಿಟಿಯಿಂದ ತಲುಪಬೇಕಾದ ಬಹುಮಖ್ಯ ವಸ್ತುಗಳೆಲ್ಲವನ್ನೂ ಊರಿನಿಂದ ಬರುವ ಯಾರೊಟ್ಟಿಗಾದರೂ ಹೊರಿಸಿ ಕಳಿಸುವ ಜವಬ್ದಾರಿಯೂ ರಾಹುಲ್’ನ ಮೇಲಿದ್ದಿತು. ಇಷ್ಟೆಲ್ಲಾ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿರುವ ಆಸಾಮಿ ಮದುವೆಯ ಎರಡು ದಿನ ಮೊದಲು ಬರುತ್ತೀನಿ ಎಂದರೆ ಕೇಳಬೇಕಾ. ಮದುಮಗನ ಅಮ್ಮನೇ ಖುದ್ದಾಗಿ ಫೋನಾಯಿಸಿ ಹದಿನೈದು ದಿನ ಮೊದಲೇ ಬರುವಂತೆ ಹೇಳುತ್ತಾರೆ. ಸರಿ ಎನ್ನುತ್ತಾ ಕೊನೆಗೆ ಒಂದಿಷ್ಟು ಕಳ್ಳ ನೆಪವನ್ನು ಕ್ರೋಢೀಕರಿಸಿ ಜೊತೆಗೆ ಗೆಳೆಯನ ಮದುವೆಯ ನೆಪವನ್ನೂ ಒಡ್ಡಿ ಎರಡು ವಾರಗಳ ಭರಪೂರ ರಜೆಯನ್ನು ಆಫೀಸಿನಿಂದ ಗಿಟ್ಟಿಸಿಕೊಂಡ.
ಅದು ಮಳೆಗಾಲ ಹಾಗು ಚಳಿಗಾಲ ಪರಸ್ಪರ ಸಂಧಿಸುವ ವಿಶಿಷ್ಟವಾದ ಮಾಸ. ಬಿಟ್ಟುಬಿಟ್ಟು ಹೊಡೆಯುವ ಹಿಂಗಾರಿನ ಮಳೆ ಒಂದೆಡೆಯಾದರೆ ಮೈ ಕೊರೆಯುವ ಚಳಿ ಮತ್ತೊಂದೆಡೆ. ಮಲೆನಾಡಿನ ದಟ್ಟಾರಣ್ಯದ ಕಿರಿದಾದ ಗುಂಡಿಬಿದ್ದ ರಸ್ತೆಯಲ್ಲಿ ಆಮೆನಡೆಯಲ್ಲಿ ದಿನಕೊಮ್ಮೆ ಬರುವ ಬಸ್ಸು ರಾಹುಲ್ನನ್ನು ಮದುಮಗನ ಊರಿನ ಮಣ್ಣಿನ ದಾರಿಯ ಮುಂದೆ ತಂದು ನಿಲ್ಲಿಸಿತು. ಹಸಿರು ಸಾಗರದೊಳಗೆ ಕಷ್ಟ ಪಟ್ಟು ನುಗ್ಗಿದ ಆ ಮಣ್ಣಿನ ರಸ್ತೆಯೊಂದೆ ಮನೆ ತಲುಪಲು ಸದ್ಯಕ್ಕೆ ರಾಹುಲನಿಗೆ ಸಿಕ್ಕ ಏಕೈಕ ಸುಳಿವು. ಬ್ಯಾಗನ್ನು ಹೆಗಲ ಮೇಲೇರಿಸಿಕೊಂಡು ಸಿಳ್ಳೆಯಾಕುತ್ತಾ ಆತ ಮುನ್ನೆಡೆದ. ಸೂರ್ಯನ ಒಂದಿಷ್ಟು ಬೆಳಕನ್ನು ಜಪ್ಪಯ್ಯ ಅಂದರೂ ಬಿಡಲೊಲ್ಲೆವು ಎಂಬಂತೆ ಬೆಳೆದಿದ್ದ ಸಾಗರ ಸಂಖ್ಯೆಯ ಮರಗಳ ಕಣ್ ಕೊರೆಸುವಿಕೆ ಸಾಕು ಸಾಕಪ್ಪ ಎನಿಸುತಿತ್ತು. ಜೊತೆಗೆ ಕೆಲ ಹೊತ್ತಿನ ಮುಂಚಷ್ಟೇ ಭೋರ್ಗರೆದಿದ್ದ ಮಳೆರಾಯ ಕಾಡಿನ ಹಸಿರಿನೊಟ್ಟಿಗೊಳಗೂಡಿ ವಿಭಿನ್ನ ಬಗೆಯ ಪರಿಮಳವನ್ನು ಸೃಷ್ಟಿಸಿದ್ದ . ಅದೂ ಸಹ ಕೆಲ ಸಮಯದ ನಂತರ ತಲೆ ನೋವನ್ನು ತರಿಸುತ್ತಿತ್ತು. ಒಟ್ಟಾರೆ ಯಾವೆಲ್ಲ ಮಿತವಾಗಿ ಹಿತವಾಗಿರಬೇಕಿತ್ತೋ ಅವುಗಳೆಲ್ಲ ಇಂದು ಹೆಚ್ಚಾಗಿ ಚುಚ್ಚಿ ಸತಾಯಿಸುತ್ತಿವೆ. ಅಂತೂ ಒಂದು ತಾಸು ನೆಡೆದ ನಂತರ ಸಿಕ್ಕ ಮತ್ತೊಂದು ರಹದಾರಿಯ ಮುಂದೆ ಒಣಗಿದ ಮಾವಿನ ತೋರಣವನ್ನು ಕಂಡಾಗ ಮಾತ್ರ ಈ ದಿಕ್ಕಿನಲ್ಲಿ ಜನಗಳಿರಬಹುದೆಂಬ ಒಂದಿಷ್ಟು ಸುಳಿವು ರಾಹುಲ್’ಗೆ ಸಿಕ್ಕಿತು. ನಿಲ್ಲುತ್ತಾ, ಏದುಸಿರು ಬಿಡುತ್ತಾ, ಮತ್ತೆ ಬೇಗಬೇಗನೆ ನೆಡೆಯುತ್ತಾ ಅಂತೂ ನಾಲ್ಕೈದು ಮನೆಗಳಿರುವ ಜಾಗವೊಂದನ್ನು ಕಂಡಾಗ ತಾನು ದಾರಿ ತಪ್ಪಿದೆನೆಂದು ಕಾಡುತಿದ್ದ ಆತಂಕ ಆತನಲ್ಲಿ ಕೊಂಚ ಕಡಿಮೆಯಾಯಿತು.
ಇನ್ನೇನು ಆ ಪುಟ್ಟ ಊರ ಒಳಗೆ ಕಾಲಿಡಬೇಕು ಅನ್ನುವಷ್ಟರಲ್ಲಿ ಕಿವಿಯ ತಮಟೆಗಳೇ ಛಿದ್ರವಾಗುವಂತಹ ಭಯಂಕರ ಸದ್ದಿಗೆ ಬೆಚ್ಚಿ ಬಿದ್ದ ರಾಹುಲ್. ಹುಲಿಗಳೂ ಬಾಲಮುದುಡಿ ಜಾಗಕೀಳುವಂಥಹ ಶ್ವಾನ ದಳಗಳವು. ಬಣ್ಣ ಬಣ್ಣದ ಬಟ್ಟೆ ಹಾಗು ಬೆನ್ನಿನ ಮೇಲೆ ನೇತಾಕಿಕೊಂಡಿದ್ದ ಬ್ಯಾಗನ್ನು ಕಂಡು ತಮ್ಮ ಕಲ್ಪನೆಗೆ ತಕ್ಕಂತೆ ಏನೋ ಒಂದು ವಿಷಜಂತುವನ್ನು ಕಲ್ಪಿಸಿಕೊಂಡತೆ ಆ ನಾಯಿಗಳು ಅಷ್ಟ ದಿಕ್ಕೂಗಳಿಂದಲೂ ರಾಹುಲ್ನನ್ನು ಘೇರಾವ್ ಮಾಡಿದವು. ಅವುಗಳ ಆಳೆತ್ತರದ ದೇಹಸಿರಿ, ಕ್ಷಣಾರ್ಧದಲ್ಲಿ ಭೇಟೆಯನ್ನು ಕತ್ತರಿಸಿ ಹಾಕಬಹುದಾದ ಚೂಪಾದ ಭಯಂಕರವಾದ ಹಲ್ಲುಗಳು, ನೋಟದಲ್ಲೇ ವೈರಿಯನ್ನು ಮೂರ್ಛೆ ತಪ್ಪಿಸಬಲ್ಲವಂತಹ ಆ ರೌದ್ರ ಕಣ್ಣುಗಳು ಅಂತಹ ತಣ್ಣನೆಯ ವಾತಾವರಣದಲ್ಲಿಯೂ ರಾಹುಲ್’ನ ಮೈಬೆವರುವಂತೆ ಮಾಡಿದವು. ಪ್ರತಿ ಕ್ಷಣಕ್ಕೂ ಅರಚುತ್ತಾ ಇಂಚಿಚೆ ಮುಂಬರುತ್ತಿದ್ದ ಶ್ವಾನ ದಳಗಳ ವೃತ್ತ ಇನ್ನೇನು ರಾಹುಲ್ನನ್ನು ಆವರಿಸಿದವು ಅನ್ನುವಷ್ಟರಲ್ಲಿ ಅತ್ತಕಡೆಯಿಂದ ಓಡೋಡಿ ಬಂದ ವ್ಯಕ್ತಿಯೊಬ್ಬ ವೃತ್ತವನ್ನು ಚದುರುವಂತೆ ಮಾಡಿದ. ಆದರೆ ತೋರ್ಪಡಿಕೆಗಷ್ಟೇ ಓಡುವಂತೆ ನಟಿಸಿದ ಆ ಗುಂಪು ಕತ್ತಿನ ಕೂದಲನ್ನು ನಿಮಿರಿಸಿ ದೂರದಲ್ಲಿ ಗುರ್ರ್ ಎನ್ನುತ ಸದ್ದುಮಾಡುತ್ತಲೇ ಇದ್ದವು. ಅವುಗಳ ನೋಟದಲ್ಲಿ ಏನೋ ಒಂದು ಬಗೆಯ ಕಿಚ್ಚು ಎದ್ದು ಕಾಣುತ್ತಿತ್ತು. ಅವುಗಳಿಗೆ ಮಾತು ಬಲ್ಲದಾಗಿದ್ದಿದ್ದರೆ ಬೆಚ್ಚಿ ಬೀಳುವ ಸತ್ಯವೊಂದನ್ನು ಅಲ್ಲಿ ಬಾಯಿ ಬಿಡುತ್ತಿದ್ದವೇನೋ ಯಾರು ಬಲ್ಲರು?!
ರಾಹುಲ್’ನ ಆಗಮನವನ್ನೇ ಕಾಯುತ್ತಿದ್ದ ಆ ವ್ಯಕ್ತಿ ತಾನು ಮದುಮಗನ ಸಂಬಂಧಿಯೆಂದೂ ಬಹಳ ಬಾರಿ ಫೋನಾಯಿಸಿದರೂ ಆತನ ಮೊಬೈಲ್ನಿಂದ ಯಾವುದೇ ಉತ್ತರ ಬರಲಿಲ್ಲವೆಂದು ಹೇಳಿದಾಗ ಉತ್ತರವಾಗಿ ರಾಹುಲ್ ದಾರಿಯುದ್ದಕ್ಕೂ ಒಂದಿನಿತು ಸಿಗ್ನಲ್ನ ಸುಳಿವು ಸಿಗಲಿಲ್ಲ ಎನ್ನುತ ಮೊಬೈಲ್ನನ್ನು ತೆಗೆದು ನೋಡುತ್ತಾನೆ, ಅಷ್ಟೂ ಪಾಯಿಂಟ್ಗಳ ಸಿಗ್ನಲ್ ಮೊಬೈಲ್ ನ ಒಂದು ತುದಿಯಲ್ಲಿ ಕಾಣುತ್ತಿದೆ! ನಾಯಿಗಳ ಸದ್ದಿಗೆ ಎದೆಬಡಿತ ಒಂದೇ ಸಮನೆ ಏರುತ್ತಿರುವಾಗ ರಾಹುಲ್ನಿಗೆ ಸದ್ಯಕ್ಕೆ ಬೇರ್ಯಾವ ಯೋಚನೆಯೂ ಆತನಲ್ಲಿ ಬರುವುದಿಲ್ಲ. ಏನೋ ಮೊಬೈಲ್ ನ ತೊಂದರೆ ಇರಬೇಕೆಂದು ಸುಮ್ಮನಾಗುತ್ತಾನೆ. ಮದುವೆಯ ಮನೆಯ ಒಳಗೆಲ್ಲ ಒಂದು ಸುತ್ತು ಸುತ್ತಿ, ಮದುಮಗ ಎಲ್ಲೆಂದು ವಿಚಾರಿಸಿ, ಆತ ಪಟ್ಟಣಕ್ಕೆ ಹೋಗಿದ್ದಾನೆಂದು ತಿಳಿದು ಮಧ್ಯಾಹ್ನದ ಊಟವನ್ನು ಮಾಡಿ ಹಾಗೆಯೆ ಒಂದು ನಿದ್ರೆಗೆ ಜಾರುತ್ತಾನೆ.
ಸಂಜೆ ಕಣ್ಣು ತೆರೆದಾಗ ಸಮಯ ಐದಾಗಿದ್ದಿತು. ಎದ್ದು ರೆಡಿಯಾಗಿ ಹೊರಗೆ ಬಂದ ರಾಹುಲ್’ಗೆ ಮಲೆನಾಡಿನ ಘಮಘಮಿಸುವ ಕಾಫಿಯ ಕಪ್ಪು ಸಿಕ್ಕಿ ಕ್ಷಣಕಾಲ ಕಾಲವೇ ಮರೆತುಹೋದಂತಿತ್ತು. ಒಂದೆರೆಡು ಕೆಜಿಯಷ್ಟು ಕಾಫಿಪುಡಿಯನ್ನು ಮನೆಗೆ ತೆಗೆದುಕೊಂಡು ಹೋಗುವುದಾಗಿ ಕೇವಲ ಮೊಬೈಲ್ನ ಸದ್ದಿನಲ್ಲಿ ಪರಿಚಯವಿದ್ದ ಮದುಮಗನ ಅಮ್ಮನಿಗೆ ಹೇಳಿ ಮನೆಯಿಂದ ಹೊರಬಂದ. ಮದುವೆಯ ಮನೆಯ ಕೆಲವೇ ಜನರ ಸದ್ದಿನಲ್ಲಿ ತನ್ನ ಮನೆಯಿಂದ ಬಂದ ಹಲವು ಮಿಸ್ಡ್ ಕಾಲ್’ಗಳು ಆತನಿಗೆ ತಿಳಿಯಲೇ ಇಲ್ಲ. ಮನೆಯಿಂದ ಕೊಂಚ ದೂರಕ್ಕೆ ಬಂದು ಸುತ್ತಲೂ ಯಾವುದೇ ಹುಲಿಯಾಕಾರದ ನಾಯಿಗಳು ಇಲ್ಲವೆಂದು ಖಚಿತಪಡಿಸಿಕೊಂಡು ಮನೆಗೆ ಫೋನಾಯಿಸಿದ. ಅತ್ತ ಕಡೆಯಿಂದ ಅಮ್ಮ ‘ಹಲೋ‘ ಎಂಬ ಸ್ವಾಗತಸೂಚಕವನ್ನೂ ಬಳಸದೆ ಒಂದೇ ಉಸಿರಿನಲ್ಲಿ ಕಳವಳಗೊಂಡಂತೆ ಮಾತುಗಳನ್ನು ಮುಂದುವರಿಸಿದಳು. ಆಕೆ ಇಂದು ಮದ್ಯಾಹ್ನ ಮಲಗಿದ್ದಾಗ ಏನೋ ಕೆಟ್ಟ ಕನಸ್ಸೊಂದು ಬಿದ್ದಂತಾಗಿ, ಅದರ ವರ್ಣನೆಯನ್ನೇನು ಅಷ್ಟಾಗಿ ಮಾಡದೆ, ರಾಹುಲ್ ಮದುವೆ ಮುಗಿಯುವವರೆಗೂ ಎಲ್ಲೂ ದೂರ ಸುತ್ತಲು ಹೋಗದಂತೆ ಹೇಳುತ್ತಾಳೆ. ಅಮ್ಮನನ್ನು ನೋಯಿಸಬಾರದು ಎಂದೆಣಿಸಿ ‘ಸರಿ‘ ಎನ್ನುವ ಮೊದಲೇ ಆತನಿಗೆ ದೂರ ದೂರದ ಮಂಜು ಕವಿದಿದ್ದ ಬೆಟ್ಟಗಳು ಕೈ ಬೀಸಿ ಕರೆದಂತಾಗುತ್ತದೆ. ಒಂದೊಳ್ಳೆ ಟ್ರೆಕಿಂಗ್ ಮಾಡಿದರಾಯಿತು ಎಂದುಕೊಂಡು ಒಳಗೊಳಗೇ ಸಂತೋಷಪಟ್ಟುಕೊಂಡ. ಅಮ್ಮ ಇನ್ನೂ ಏನೋ ಹೇಳುತ್ತಿರುವಾಗಲೇ ಫೋನ್ ಇದ್ದಕ್ಕಿದಂತೆ ಕಟ್ ಆಯಿತು. ಫೋನನ್ನು ನೋಡಿದ ರಾಹುಲ್ ಬೆಳಗ್ಗೆ ಕಂಡಂತೆ ಒಂದಿನಿತು ಸಿಗ್ನಲ್ ಅದರಲ್ಲಿ ಕಾಣುವುದಿಲ್ಲ. ಆತ ನಿಜವಾಗಿಯೂ ಏನೋ ಫೋನಿನಲ್ಲಿ ತೊಂದರೆ ಇರಬಹುದೆಂದು ಊಹಿಸಿ ಮನೆಯ ಒಳಗೆ ಹೋಗಲು ತಿರುಗಿದನಷ್ಟೆ, ರಕ್ತವೆ ಸಿಡಿದು ಹೊರಬರುವಂತೆ ಕೆಂಪಾಗಿದ್ದ ಕಣ್ಣುಗಳನ್ನು ಹೊತ್ತಿಸಿ ಗುರ್ರ್ ಎನ್ನುತ್ತಾ ರಾಹುಲ್ನನ್ನೇ ನೋಡುತ್ತಾ ನಿಂತಿತ್ತು ಬೆಳಗ್ಗೆ ಕಂಡ ನಾಯಿಗಳೆಲ್ಲದಕ್ಕಿಂತ ದೊಡ್ಡದಾದ ನಾಯಿಯೊಂದು!
ಆದರೆ ರಾಹುಲ್ ಈ ಬಾರಿ ಹೆದರದೆ, ಇತರ ಯಾರನ್ನೂ ಸಹಾಯಕ್ಕೆ ಕರೆಯದೆ ನಾಯಿಯ ಕಣ್ಣಿನಲ್ಲಿ ಕಣ್ಣನ್ನಿಟ್ಟೆ ನೋಡಿದ. ಕೆಲಕಾಲ ಗುರ್ರೆಂದು ಸದ್ದು ಮಾಡುತ್ತಿದ್ದ ಆ ನಾಯಿ ಇದ್ದಕ್ಕಿದ್ದಂತೆ ತಣ್ಣಗಾಗಿ ಕಾಲಿನಿಂದ ಮಣ್ಣನು ಪರಪರನೆ ಕೆರೆಯುತ್ತ ಎತ್ತಲೋ ಮುಖ ಮಾಡಿ ಕೂಗತೊಡಗಿತು. ನಾಯಿಯೊಂದು ಅಷ್ಟೆಲ್ಲ ಅರಚಿದರೂ ಮನೆಯ ಯಾರೊಬ್ಬರೂ ಹೊರಗೆ ಬಾರಲಿಲ್ಲ. ನಾಯಿಯು ಮುಖ ಮಾಡಿ ಕೂಗುತ್ತಿದ್ದ ದಿಕ್ಕಿನೆಡೆ ಎತ್ತರವಾದ ಪರ್ವತವೊಂದು ಏಕಾಂತವಾಗಿ ನಿಂತಿದ್ದಿತು. ಮಧ್ಯಾಹ್ನದ ಮೇಲೆ ಮೋಡಗಳು ಒಂದಿಷ್ಟು ಚದರಿ ಸೂರ್ಯನ ತಿಳಿ ರಶ್ಮಿಗಳು ಕಾಣತೊಡಗುತ್ತಿರುತ್ತವೆ. ಇನ್ನು ಸೂರ್ಯಾಸ್ತವಾಗಲು ಒಂದು ತಾಸಿರುವಾಗ ಬೇಗನೆ ಹೋದರೆ ಆ ಬೆಟ್ಟದ ಮೇಲೆ ನಿಂತು ಆನಂದಿಸಬಹುದು ಎಂದೆಣಿಸಿ, ಅಲ್ಲದೆ ನಾಯಿಯು ಆಕಡೆಯೆ ತಿರುಗಿ ಕೂಗುತ್ತಿದ್ದರಿಂದ ಚಿತ್ರಗಳಲ್ಲಿ ತೋರಿಸುವಂತೆ ಏನೋ ಒಂದು ಪತ್ತೇದಾರಿ ವಿಷಯ ಅಲ್ಲಿರಬಹುದು ಎಂದು ತನ್ನಲ್ಲೇ ಅಂದು ಕೊಳ್ಳುತ್ತಾನೆ. ಧೈರ್ಯವೆಲ್ಲ ಒಟ್ಟುಗೂಡಿಸಿ ನಾಯಿಯ ಬಳಿಗೆ ನೆಡೆಯುತ್ತಾನೆ. ನಾಯಿ ತಾನು ಮೊಗ ಮಾಡಿ ಕೂಗುತ್ತಿದ್ದ ದಿಕ್ಕಿನಲ್ಲಿಯೇ ನೆಡೆಯುತ್ತದೆ. ರಾಹುಲ್ ಅದನ್ನು ಹಿಂಬಾಲಿಸುತ್ತಾನೆ. ಹೋಗುವ ಮುನ್ನ ನಾಯಿ ರಾಹುಲನ್ನು ಆತ ಕಡೆ ಬರಬಾರದೇನೋ ಎಂಬಂತೆ ನೆಲವನ್ನು ಪರಪರ ಕೆರೆಯುತ್ತಾ ಸೂಚನೆಯನ್ನು ನೀಡುತ್ತಿರುತ್ತದೆ. ಆದರ ಸೂಚನೆಯ ಅರಿವು ರಾಹುಲ್ಗೇನಾದರೂ ಆಗಿದ್ದಿದ್ದರೆ ಅಕ್ಷರ ಸಹ ಆತ ತಲೆ ಸುತ್ತಿ ಬಿದ್ದುಬಿಟ್ಟಿರುತ್ತಿದ್ದ! ಬೆಟ್ಟವನ್ನು ಏರುವ ಮುನ್ನ ಮನೆಯವರಿಗೆ ಒಂದು ಮಾತು ಹೇಳುವುದನ್ನೂ ಲಕ್ಷಿಸಿ ಜಿಗ್ಗು ಮುಳ್ಳುಗಳನ್ನು ಬಿಡಿಸಿಕೊಳ್ಳುತ್ತಾ ಆತ ಮುನ್ನೆಡೆದ. ಕೆಲ ಹೊತ್ತು ಸದ್ದು ಮಾಡದೇ ರಾಹುಲ್ನ ಮುಂದೆಯೇ ನೆಡೆದ ಆ ಹುಲಿಯಾಕಾರದ ನಾಯಿ ಒಮ್ಮೆಲೇ ‘ಕಯ್ಯಂಯೋ’ ಎಂದು ಸದ್ದು ಮಾಡುತ್ತಾ ಹಿಂದಕ್ಕೆ ಓಡುತ್ತಾ ಮರೆಯಾಯಿತು. ಯಾಕೋ ರಾಹುಲನಿಗೆ ಅಲ್ಲಿಂದಲೇ ವಾಪಸ್ಸು ಹೋಗುವ ಮನಸ್ಸಾದರೂ ಇನ್ನೇನು ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದ ಬೆಟ್ಟದ ತಪ್ಪಲು ಆತನನ್ನು ಕೈ ಬೀಸಿ ಕರೆದಂತಾಯಿತು.
ರಾಹುಲ್ ಬೆಟ್ಟದ ತಪ್ಪಲನ್ನು ತಲುಪಿದಾಗ ಸೂರ್ಯದೇವ ಅಷ್ಟರಲ್ಲಾಗಲೇ ಕರಗಿ ಮರೆಯಾಗಿದ್ದನು. ಕೆಲನಿಮಿಷಗಳ ಕಾಲ ಅತ್ತಲೇ ನೋಡುತ್ತಾ ನಿಂತ ರಾಹುಲ್ ಇನ್ನೇನು ಎದ್ದು ಹೋರಡಬೇಕು ಎಂದು ಹಿಂತಿರುಗುವಾಗಲೇ ಕಣ್ಣೇ ಕಪ್ಪಾಗುವಂತಹ ಕತ್ತಲೆ ಕಾಡನ್ನು ಆವರಿಸಿರುತ್ತದೆ! ನಿಮಿಷಗಳ ಅಂತರದಲ್ಲಿಯೇ ಬದಲಾವಣೆಯಾದ ಪರಿಸರವನ್ನು ಕಂಡು ದಿಗ್ಭ್ರಾಂತನಾದ ಆತ ತಾನು ಏರಿ ಬಂದ ದಾರಿಯ ದಿಕ್ಕನ್ನು ನೆನಪಿಸಿಕೊಳ್ಳುತ್ತಾನೆ. ತನ್ನ ಕೈಗಳೇ ಕಾಣದಷ್ಟು ಕತ್ತಲೆಯ ಒಳಗೆ ಯಾವುದೊ ಒಂದು ಊಹೆಯ ಮೇಲೆ ಕೆಳಗಿಳಿಯುತ್ತಾ ಸಾಗುತ್ತಾನೆ. ಜೊತೆಗೆ ಅಲ್ಲಿಯವರೆಗು ಬೆಳಕನ್ನು ಸೂಸುತ್ತಿದ್ದ ಮೊಬೈಲ್ ಇದ್ದಕಿದಂತೆ ಸ್ವಿಚ್ ಆಫ್ ಆಗುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅದನ್ನು ಆನ್ ಮಾಡಲು ಆತನಿಗೆ ಆಗುವುದಿಲ್ಲ. ಮುಂದೇನು ಮಾಡಬೇಕೆಂದು ಅರಿಯದ ರಾಹುಲ್ ಆದದ್ದು ಆಗಲಿ ಎನುತ ಸಿಕ್ಕ ಸಿಕ್ಕ ಮರ ಜಿಗ್ಗುಗಳಿಗೆಲ್ಲ ಗುದ್ದಿಕೊಳ್ಳುತ್ತ ದಿಕ್ಕುಕೆಟ್ಟವನಂತೆ ನಡೆಯತೊಡಗುತ್ತಾನೆ. ಅದೆಷ್ಟೋ ಘಂಟೆಗಳ ಕಾಲ ನೆಡೆದ ಆತ ಕೊನೆಗೆ ತಾನು ದಾರಿ ತಪ್ಪಿದೆನೆಂದು ಮನಗಂಡ ಮೇಲೆ ಕೊಂಚ ಹೊತ್ತು ಸುಧಾರಿಸಿಕೊಳ್ಳಲು ಅಲ್ಲಿಯೇ ಕೂರುತ್ತಾನೆ. ಧಟ್ಟ ಆರಣ್ಯದ ಕಪ್ಪು ಬೆಳಕಿನಲ್ಲಿ ಎತ್ತ ಹೋಗಬೇಕೆಂದು ಆತನಿಗೆ ತೋಚುವುದಿಲ್ಲ. ಮುಂದೇನು ಮಾಡುವುದೆಂದು ತೋರದೆ, ಮೊಬೈಲ್ನನ್ನು ಒಂದೆರೆಡು ಬಾರಿ ಆನ್ ಮಾಡಲು ಪ್ರಯತ್ನಿಸಿ ಸಾಧ್ಯವಾಗದೆ ಅದನ್ನು ಶಪಿಸುತ್ತಾ ಕೂರುತ್ತಾನೆ.
ಒಂಡೆದೆರಡು ತಾಸು ಅಲ್ಲಿಯೇ ಕೂತ ನಂತರ ಇದ್ದಕ್ಕಿದಂತೆ ಯಾರೋ ಓಡುತ್ತಿರುವ ಸದ್ದನ್ನು ಕೇಳಿ ರಾಹುಲ್ ಚಕಿತನಾಗುತ್ತಾನೆ. ಸದ್ದನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಆತನಿಗೆ ಆ ಹೆಜ್ಜೆಗಳ ಸದ್ದು ತನ್ನೆಡೆಯೆ ಬರುತ್ತಿದ್ದೆ ಎಂಬುದರ ಅನುಭವವಾಗುತ್ತದೆ. ಸದ್ದು ಹತ್ತಿರವಾದಂತೆ ತಾನು ಕೂತಿದ್ದ ನೆಲವೇ ನಡುಗುತ್ತಿದ್ದ ಅನುಭವ! ಈ ಭಯಾನಕ ಓಟ ಯಾವುದೇ ಆನೆಯಾಕಾರದ ಜೀವಿಯಿಂದ ಮಾತ್ರ ಸಾಧ್ಯ. ಆದರೆ ಅದರ ಪ್ರತಿ ಹೆಜ್ಜೆಯ ನಡುವಿನ ಅಂತರ ಹಾಗು ವೇಗ ಅದು ನಾಲ್ಕು ಕಾಲಿನ ಜೀವಿಯೊಂದಕ್ಕೆ ಹೋಲಿಕೆಯಾಗುತ್ತಲೇ ಇಲ್ಲ! ರಾಹುಲ್ ತಾನು ನಿಂತಲ್ಲಿಂದ ಎದ್ದು ನಿಲ್ಲುತ್ತಾನೆ. ಅಲ್ಲಿಯವರೆಗು ಓಡೋಡಿ ಬರುತ್ತಿದ್ದ ಆ ಹೆಜ್ಜೆಗಳ ಸದ್ದು ಒಮ್ಮೆಲೆ ನಿಧಾನಗೊಳ್ಳುತ್ತದೆ. ಮಳೆಯ ದಿನಗಳಾದರಿಂದ ಒಣಗಿದ ದರಗುಗಳು ಅಷ್ಟೇನೂ ಇಲ್ಲದಿದ್ದರೂ ಹೆಜ್ಜೆಯ ಸಪ್ಪಳ ಸ್ಪಷ್ಟವಾಗಿ ಆತನಿಗೆ ಕೇಳುತ್ತಿರುತ್ತದೆ. ನಿದಾನವಾಗಿ ಹೆಜ್ಜ್ಜೆಗಳ ಸದ್ದು ಹತ್ತಿರವಾಗುತ್ತವೆ. ರಾಹುಲ್ ನಿಧಾನವಾಗಿ ಒಂದೊಂದೇ ಹೆಜ್ಜೆಗಳನ್ನು ಹಿಂದಿಡತೊಡಗುತ್ತಾನೆ. ಕೂಡಲೇ ಆತನಿಗೆ ಯಾರೋ ತನ್ನಿಂದೆ ನಿಂತಿದ್ದಾರೆ ಎಂದೆನಿಸಿ ಹಿಂದಿರುದಿದ್ದರೆ ಕೆಲವು ಹೊತ್ತಿನ ಮುಂಚೆಯಷ್ಟೇ ತನಗೆ ಎದುರಾಗಿದ್ದ ದೈತ್ಯ ನಾಯಿ ಗರಬಡಿದಂತೆ ಅಲ್ಲಿ ನಿಂತಿರುತ್ತದೆ! ರಾಹುಲ್ಗೆ ಎದೆ ಸಿಡಿದಂತ ಅನುಭವವಾಗುತ್ತದೆ. ತನ್ನ ಕಿವಿಗಳಿಗೆ ಕೇಳಿಸುವಂತಹ ಎದೆಬಡಿತ ಅದಾಗಿರುತ್ತದೆ. ತನ್ನ ಹಿಂದೆಯೇ ನಿಂತತ್ತಿಂದ ಆ ನಾಯಿ ನಿಧಾನವಾಗಿ ರಾಹುಲ್ನ ಮುಂಬದಿಗೆ ಬಂದು ಆ ಭಯಂಕರ ಸದ್ದು ಬರುತ್ತಿದ್ದ ಕಡೆ ಮುಖ ಮಾಡಿ ನಿಲ್ಲುತ್ತದೆ. ಅಲ್ಲಿಯವರೆಗೂ ಮುಂದಡಿಯಿಟ್ಟು ಬರುತ್ತಿದ್ದ ಆ ಸದ್ದು ನಾಯಿಯನ್ನು ಕಂಡು ಒಮ್ಮೆಲೇ ನಿಂತುಬಿಡುತ್ತದೆ. ನೋಡ ನೋಡುತ್ತಿದಂತೆ ಬೆಳಗ್ಗೆ ಕಂಡ ನಾಯಿಗಳ ಗುಂಪು ಆ ಕತ್ತಲೆಯ ಹುತ್ತದಿಂದ ಒಂದೊಂದಾಗಿಯೇ ವೃತ್ತಾಕಾರದಲ್ಲಿ ಬಂದು ನಿಲ್ಲುತ್ತವೆ. ಅವುಗಳ ಕಣ್ಣು ಆ ಗಾಢ ಕತ್ತಲೆಯಲ್ಲೂ ಕೆಂಪಗೆ ಹೊಳೆಯುತ್ತಿರುವಂತೆ ರಾಹುಲ್ನಿಗೆ ಭಾಸವಾಗುತ್ತದೆ. ಅವುಗಳು ಸುತ್ತುವರೆದ ಮದ್ಯದಲ್ಲಿ ಯಾರೋ ನಿಂತಿರುವಂತೆ ಕಾಣುತ್ತದೆ. ಆದರೆ ಯಾರು ಇಲ್ಲ! ಅದೆಷ್ಟೇ ಗಟ್ಟಿ ಮನಸ್ಸಿನವನಾದರೂ ರಾಹುಲ್ ಆ ಕ್ಷಣ ಮಾತ್ರ ಅಕ್ಷರ ಸಹ ನಡುಗತೊಡಗುತ್ತಾನೆ. ತನ್ನ ಮುಂದಿದ್ದ ನಾಯಿ ಆ ಅದೃಶ್ಯ ಆಕಾರದೆಡೆ ಮುಖಮಾಡಿ ನೆಲವೇ ಅದುರುವಂತೆ ಕೂಗುತ್ತದೆ. ಆ ಕೂಗು ಕಾಡಿಗೆ ಕಾಡೇ ಬೆಚ್ಚಿ ಬೀಳುವಂತಿರುತ್ತದೆ.
ರಾಹುಲ್’ಗೆ ಗಟ್ಟಿಯಾಗಿ ಉಸಿರಾಡಲೂ ಧೈರ್ಯ ಸಾಲುವುದಿಲ್ಲ. ತನ್ನ ರಕ್ಷಕನಂತೆ ನಿಂತಿದ್ದ ನಾಯಿಯಿರದಿದ್ದರೆ ಏನಾಗುತ್ತಿತೋ ಎಂದನಿಸುತ್ತದೆ. ಆ ಕೊರೆಯುವ ಚಳಿಯಲ್ಲೂ ಬಟ್ಟೆಯಲ್ಲ ಒದ್ದೆಯಾಗುವಂತೆ ಆತ ಬೆವತಿರುತ್ತಾನೆ. ಒಮ್ಮೆ ಜೋರಾಗಿ ಕೂಗಿಕೊಳ್ಳಲೂ ಆತನಿಗೆ ಆಗುತ್ತಿಲ್ಲ. ಎಷ್ಟೇ ಶತಪ್ರಯತ್ನ ಮಾಡಿದರೂ ಅದು ಸಾಧ್ಯವಾಗುತ್ತಿಲ್ಲ. ಕೂಡಲೇ ತನ್ನ ಮುಂದಿದ್ದ ಆ ನಾಯಿ ಕಾಲುಗಳಿಂದ ನೆಲವನ್ನು ಪರಪರನೆ ಕೆರೆದು ಕುತ್ತಿಗೆಯ ಜುಟ್ಟನು ನಿಮಿರಿಸಿ ಆ ಅದೃಶ್ಯ ಆಕಾರವನ್ನು ಸುತ್ತುವರೆದಿದ್ದ ನಾಯಿಗಳ ಕಡೆ ಬೌಗುಡುತ್ತ ನೆಗೆಯುತ್ತದೆ. ಇದಕ್ಕಿದಂತೆ ಚದುರಿದ ಆ ಗುಂಪು ಸಿಕ್ಕ ಸಿಕ್ಕ ಕಡೆ ಓಡಿ ಮರೆಯಾಗುತ್ತದೆ. ನಾಯಿಗಳ ಗುಂಪು ಕಾಣೆಯಾದ ನಂತರ ತುಸು ಹೊತ್ತು ಅಲ್ಲಿಯೇ ನಿಂತಿದ್ದ ಆ ದೊಡ್ಡ ನಾಯಿ ನಿಧಾನವಾಗಿ ತನ್ನ ಬಲಕ್ಕೆ ತಿರುಗಿ ಇಳಿಯತೊಡಗುತ್ತದೆ. ರಾಹುಲ್ ಆ ನಾಯಿಯನ್ನೇ ಹಿಂಬಾಲಿಸುತ್ತಾನೆ. ಹೀಗೆ ಆ ನಾಯಿಯ ಹಿಂದೆ ಸಾಗುತ್ತ ಒಂದತ್ತು ನಿಮಿಷವಾಗಿರಬಹುದು ಅಷ್ಟೇ. ಇದ್ದಕ್ಕಿದಂತೆ ಬೆಟ್ಟದ ಮೇಲಿನಿಂದ ಆ ದೈತ್ಯ ಸದ್ದು ತನ್ನೆಲ್ಲ ಶಕ್ತಿಯನ್ನು ಬಳಸಿ ಓಡಿ ಬಂದಂತಹ ಸದ್ದು ರಾಹುಲ್’ಗೆ ಕೇಳಿಸುತ್ತದೆ. ಶ್ವಾಸಕೋಶಗಳೇ ಕಕ್ಕಿ ಹೊರಗೆ ಬರುವೆವೋ ಎಂಬಂತಹ ಎದುಸಿರು, ಅದರೊಟ್ಟಿಗೆ ಕೈಬಳೆ ಹಾಗು ಕಾಲ್ಗೆಜ್ಜೆಯ ನಾದವೂ ಮೂಡತೊಡಗಿರುತ್ತದೆ! ಕೆಲನಿಮಿಷಗಳ ಮೊದಲೇ ಅಷ್ಟೂ ನಾಯಿಗಳನ್ನು ಹಿಮ್ಮೆಟ್ಟಿಸಿದ್ದ ನಾಯಿ ಕುಯ್ ಗುಡುತ್ತಾ ಪುನ್ಹ ಎತ್ತಲೋ ಓಡತೊಡಗುತ್ತದೆ. ರಾಹುಲ್ ಸಹ ಆ ನಾಯಿಯು ಓಡಿದ ದಿಕ್ಕಿನಲ್ಲೇ ಓಡತೊಡಗುತ್ತಾನೆ. ಓಟದ ರಭಸಕ್ಕೆ ಕಲ್ಲು ಮುಳ್ಳುಗಳು ತರಚಿ ಆತನ ಕೈ ಕಾಲುಗಳೆಲ್ಲ ರಕ್ತ ಮಯವಾಗುತ್ತದೆ. ಆದರೆ ಓಟ ಮಾತ್ರ ಆತ ನಿಲ್ಲಿಸಲಿಲ್ಲ. ಒಂದೆರೆಡು ಬಾರಿ ಹಾದಿಯಲ್ಲಿ ಸಿಕ್ಕ ಸಣ್ಣಪುಟ್ಟ ಗುಂಡಿಯೊಳಕ್ಕೂ ಕಾಲಿಟ್ಟು ನಾಲ್ಕೈದು ಸುತ್ತು ಉರುಳಿ ಬಿದ್ದರೂ ಗಮನಿಸದೆ, ದೇವರ ನಾಮಗಳನ್ನು ಜಪಿಸುತ್ತಾ ರಾಹುಲ್ ಓಡತೊಡಗುತ್ತಾನೆ.ರಾಹುಲ್’ನ ಮೈಯ ರೋಮುಗಳೆಲ್ಲ ವಿದ್ಯುತ್ತ್ ಹರಿದಂತೆ ನಿಮಿರಿ ನಿಂತಿದ್ದವು.
ಒಳದಾರಿಗಳಲ್ಲಿ ಕಳ್ಳರಂತೆ ಓಡುತ್ತಾ ಸಾಗಿದ ನಾಯಿ ಕೊನೆಗೂ ಬಲ್ಬು ಲೈಟುಗಳಿಂದ ಕೂಡಿದ ಊರೊಂದಕ್ಕೆ ರಾಹುಲ್ ನನ್ನು ತಂದು ನಿಲ್ಲಿಸುತ್ತದೆ. ಆದರೂ ಹಿಂದುರಿಗಿ ನೋಡಲು ಆತನಿಗೆ ಧೈರ್ಯ ಸಾಲುತ್ತಿರಲಿಲ್ಲ. ತಾನು ಓಡುತ್ತಾ ಬಂದು ನಿಂತ ಆ ಊರು ತುಸು ದೊಡ್ಡದಾಗಿಯೇ ಇರುತ್ತದೆ. ಬೀದಿ ದೀಪಗಳು, ಅಂಗಡಿ ಮುಂಗಟ್ಟುಗಳು ಅಲ್ಲಲಿ ಕಾಣಸಿಗುತ್ತವೆ. ಆದರೆ ಯಾವೊಬ್ಬ ನರಪಿಳ್ಳೆಯೂ ಅಲ್ಲಿ ಕಾಣಸಿಗುವುದಿಲ್ಲ. ಆದರೆ ಅಲ್ಲಿಯವರೆಗೂ ತನ್ನ ಮುಂದಿದ್ದ ಆ ನಾಯಿ ಮಾತ್ರ ಕಣ್ಮರೆಯಾಗಿರುತ್ತದೆ! ನಾಯಿಯ ಬಗ್ಗೆ ಹೆಚ್ಚಾಗಿ ಚಿಂತಿಸದೆ ನಿಧಾನವಾಗಿ ಆ ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿರುವಾಗ ಹಿಂದಿನಿಂದ ಯಾರೋ ಬಂದು ರಾಹುಲ್ನ ಹೆಗಲನ್ನು ಅದುಮಿ ಹಿಡಿದಂತಾಗುತ್ತದೆ.
ರಾಹುಲ್ ತನ್ನ ಧೈರ್ಯವನ್ನೆಲ್ಲ ಬಳಸಿ ಹಿಂತಿರುಗಿ ನೋಡುತ್ತಾನೆ. ಆ ಹೊಸ ಊರಿನಲ್ಲಿ ಅಪರಾಹ್ನ ನಾಯಿಗಳಿಂದ ರಕ್ಷಿಸಿದ್ದ ಮದುಮಗನ ಸಂಬಂಧಿ ‘ಹಾಯ್, ನೀವು ರಾಹುಲ್ ಅಲ್ವ?’ ಎಂದು ಕೇಳುತ್ತಾನೆ. ಆತನ ಪ್ರೆಶ್ನೆಯಲ್ಲಿ ಮೊದಲ ಬಾರಿಯ ಸಂಭಾಷಣೆಯ ನಯ ವಿನಯ ಅಡಗಿದಂತಿರುತ್ತದೆ. ಕೆಲ ಘಂಟೆಗಳ ಹಿಂದಷ್ಟೇ ಸಿಕ್ಕ ಆ ವ್ಯಕ್ತಿ ಮತ್ತೊಮ್ಮೆ ಏಕೆ ತನ್ನನು ಹೊಸಬನಂತೆ ಕಾಣುತ್ತಿದ್ದಾನೆ ಎಂದು ರಾಹುಲ್ನಿಗೆ ದಿಗ್ಬ್ರಮೆಯಾಗುತ್ತದೆ. ಅಲ್ಲದೆ ಆತ ಇಷ್ಟು ರಾತ್ರಿಯಲ್ಲಿ ಈ ಊರಿನಲ್ಲಿ ಏನು ಮಾಡುತ್ತಿದ್ದಾನೆ ಎಂಬುದರ ಮೇಲೂ ಸಂಶಯ ಮೂಡುತ್ತದೆ. ಆತ ಮಾತು ಮುಂದುವರೆಸುತ್ತಾ ‘ಎಲ್ಲಿ ಸಾರ್ ನೀವು, ನೆನ್ನೆಯಿಂದ ನಿಮ್ಮ್ ನಂಬರ್ ಗೆ ಕಾಲ್ ಮಾಡಿ ಮಾಡಿ ಸಾಕಾಯಿತು. ಹೊಸ ಊರು, ಹೊಸ ದಾರಿ.. ಎಲ್ಲ್ ಕಳೆದೋದ್ರು ಅಂತ ನಾನು ನಿಮ್ಮನ್ನ ಹುಡುಕೊಂಡು ಹೊರಟೆ, ಇಲ್ಲೇ ಸಿಕ್ಕಿದ್ರಿ ನೋಡಿ‘ ಎನ್ನುತ್ತಾ ಕೈ ಕುಲುಕಲು ಮುನ್ನುಗ್ಗುತ್ತಾನೆ. ರಾಹುಲ್’ನ ರಕ್ತಮಯ ಕೈ ಹಾಗು ಕಾಲುಗಳನ್ನು ಕಂಡು ಹೆಚ್ಚೇನು ಚಕಿತನಾಗದೇ ಮುಗುಳ್ನಗೆಯ ನೋಟವನು ಆತ ಬೀರುತ್ತಾನೆ.
ರಾಹುಲ್’ಗೆ ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದಂತ ಅನುಭವ. ತಾನು ಮಧ್ಯಾಹ್ನ ಮಾತಾಡಿಸಿದ್ದ ವ್ಯಕ್ತಿ ಇವನೆಯೇ. ಕಿಂಚಿತ್ತೂ ವ್ಯತಾಸವಿಲ್ಲ. ಆದರೂ ಧೈರ್ಯ ಮಾಡಿ ಆತನ್ನಲ್ಲಿ ಹೇಳಿಯೇ ಬಿಡುತ್ತಾನೆ. ತಾನು ಬಸ್ಸಿನಿಂದ ಇಳಿದು ಮದುಮಗನ ಮನೆಗೆ ಹೊರಟಿದ್ದು, ಅಲ್ಲಿನ ಆ ವಿಚಿತ್ರ ನಾಯಿಗಳ ಕಾಟ, ತಾನು ಪಕ್ಕದಲ್ಲಿದ್ದ ಬೆಟ್ಟಕ್ಕೆ ಹತ್ತಿದ್ದು, ಮೊಬೈಲ್ ಇದ್ದಕ್ಕಿಂತೆ ಆಫ್ ಆದದ್ದು, ಕೊನೆಗೆ ನಾಯಿಗಳಲ್ಲೊಂದು ತನಗೆ ದಾರಿ ತೋರಿಸಿದ್ದು, ನಂತರ ಒಂದು ಅದೃಶ್ಯ ದೈತ್ಯ ಹೆಜ್ಜೆ ತನ್ನನ್ನು ಅಟ್ಟಿಸಿಕೊಂಡು ಬಂದಿದ್ದು ಇವೆಲ್ಲವನ್ನು ಹೇಳುವಷ್ಟರಲ್ಲೇ ಆ ವ್ಯಕ್ತಿ ತರ ತರನೇ ನಡುಗಲು ಶುರುವಿಟ್ಟುಕೊಂಡಿರುತ್ತಾನೆ. ಅಳುವ ಸ್ವರದಲ್ಲಿ ‘ಸಾರ್, ನೀವು ಹೋಗಿದ್ದು ಒಂಟಿ ಬೆಟ್ಟದ್ ಪಕ್ಕದಲ್ಲಿರೋ ಹಾಳ್ ಸ್ಮಶಾನದ ಜಾಗಕ್ಕೆ ಸಾರ್! ಊರಿಗೆ ಬರೋ ಹೊಸ ಜನ್ರನ್ನ ದಾರಿ ದಾರಿ ತಪ್ಪಸ್ತಾಳೆ ಸಾರ್ ಅವ್ಳು! ಆಗ್ಲೇ ಹತ್ತಾರು ಜನಾನ ಬಲಿ ತಗೊಂಡಿದ್ದಾಳೆ ಸಾರ್.. ಅಯ್ಯೋ, ನೀವ್ ಯಾಕ್ ಸಾರ್ ಆಕಡೆ ಹೋದ್ರಿ‘ ಎನ್ನುತ್ತಾ ರೋಧಿಸತೊಡಗುತ್ತಾನೆ ಆತ. ಆದರೆ ತಾನು ಬಸ್ಸಿಳಿದು ಓದ ದಿಕ್ಕಿನಲ್ಲಿ ಸವೆದ ದಾರಿಯಿದ್ದು, ಮೂರ್ನಾಲ್ಕು ಮನೆಗಳು ಇದ್ವಲ್ಲ, ನಿಮ್ಮನ್ನೂ ಆ ಮೆನೇಲಿ ನೋಡಿದ್ನರಿ, ಎನ್ನುತ್ತಾನೆ ರಾಹುಲ್. ಆಗ ಆ ವ್ಯಕ್ತಿಯಿಂದ ಬಂದ ಉತ್ತರವನ್ನು ಕೇಳಿ ರಾಹುಲನಿಗೆ ತಲೆ ಸುತ್ತು ಬರುವಂತಾಗುತ್ತದೆ. ಏಕೆಂದರೆ ಆತ ಮಧ್ಯಾಹ್ನದಿಂದ ಸಂಜೆಯವರೆಗೂ ಮಲಗೆದ್ದು ಬಂದ ಜಾಗದಲ್ಲಿ ಯಾವುದೇ ಮನೆಗಳಿರದೆ ಅಲ್ಲಿದ್ದದ್ದು ನಾಲ್ಕೈದು ಹಾಳುಬಿದ್ದ ಘೋರಿಗಳಾಗಿರುತ್ತವೆ!!
ಸ್ವಿಚ್ ಆಫ್ ಆಗಿದ್ದ ಫೋನು ಕೂಡಲೇ ಟ್ಯೂಬ್ ಲೈಟಿನಂತೆ ಮಿನುಗತೊಡಗುತ್ತದೆ. ಇನ್ನೇನು ಆನ್ ಆಯಿತು ಎನ್ನುವಷ್ಟರಲ್ಲಿ ಜೀವವೇ ಕಳೆದುಕೊಂಡಂತೆ ಒಂದೇ ಕ್ಷಣದಲ್ಲಿ ಪುನಃ ಆಫ್ ಆಗಿ ಬಿಡುತ್ತದೆ! ಶಾಂತವಾಗಿದ್ದ ಜಾಗದಲ್ಲಿ ಇದ್ದಕಿದಂತೆ ವಿಪರೀತ ಗಾಳಿ! ಮದುಮಗನ ಸಂಬಂಧಿ ಇನ್ನು ಇಲ್ಲಿ ನಿಲ್ಲುವುದು ಬೇಡವೆಂದು ಆಗೋ ಅಲ್ಲಿ ಮದುಮಗನ ಮನೆ ಕಾಣುತ್ತಿದೆಯೆಂದು ಚಪ್ಪರ ಕಟ್ಟಿದ್ದ ಮನೆಯನ್ನು ತೋರಿಸುತ್ತಾ, ಮನೆಯವರೆಲ್ಲ ನಿನ್ನೆಯಿಂದ ಚಿಂತಾಗ್ರಸ್ತರಾಗಿ ಕಾಯುತ್ತಿದ್ದಾರೆ ಎನ್ನುತ್ತಾ ಬೇಗನೆ ಆತ್ತ ಕಡೆ ನಡೆಯಲು ಹೇಳುತ್ತಾನೆ. ತನ್ನ ಕಿವಿಗಳೆ ನಂಬಲಾಗದಂತಹ ಸುದ್ದಿಯನ್ನು ಕೇಳಿ ಅಕ್ಷರ ಸಹ ಹೆದರಿ ಹೈರಾಣಾಗಿದ್ದ ರಾಹುಲ್ ಆ ವ್ಯಕ್ತಿಗಿಂತ ಮೊದಲೇ ಮದುಮಗನ ಮನೆಯೆಡೆ ಧಾವಿಸುತ್ತಾನೆ.
ಮನೆಯ ಕಡೆಗೆ ಧಾವಿಸುತ್ತಿದ್ದ ರಾಹುಲ್ ಆ ಭಯಾನಕ ಘಳಿಗೆಯಲ್ಲಿಯೂ ತನ್ನ ಹಿಂದೆ ಬರುತ್ತಿದ್ದ ವ್ಯಕ್ತಿಯ ಹೆಸರೇನೆಂದು ಕೇಳಬಯಸುತ್ತಾನೆ. ಅದಕ್ಕೆ ಮರುತ್ತರವಾಗಿ ಕೀರಲು ಧ್ವನಿಯಲ್ಲಿ ರೋಧಿಸಿದ ಸದ್ದು ಹಿಂದಿನಿಂದ ಬರಲು ರಾಹುಲ್ ಅತ್ತ ಕಡೆ ತಿರುಗುತ್ತಾನಷ್ಟೆ, ಮತ್ತೊಮ್ಮೆ ಸಿಡಿಲು ಬಡಿದಂತಹ ಅನುಭವ ಆತನಿಗೆ! ಅಲ್ಲಿಯವರೆಗೂ ತನ್ನ ಬಳಿ ಮಾತಾಡುತ್ತಿದ್ದ ವ್ಯಕ್ತಿಯ ದೇಹ ಪೂರ್ತಿಯಾಗಿ ತಾನು ಇಳಿದು ಬಂದ ಬೆಟ್ಟದ ಕಡೆಗೆ ತಿರುಗಿರುತ್ತದೆ, ಆದರೆ ರುಂಡ ಮಾತ್ರ ರಾಹುಲ್ನನ್ನೇ ಧಿಟ್ಟಿಸಿ ನೋಡುತ್ತಿರುತ್ತದೆ!! ‘ಓ..ಡಿ.. ಓಡಿ‘ ಎನ್ನುತ್ತಾ ಕರ್ಕಶ ಸ್ವರದಿಂದ ಅರಚುತ್ತಿದ್ದ ಆತನನ್ನು ಕಂಡು ಮತಿ ಕೆಟ್ಟವರಂತೆ ರಾಹುಲ್ ಚೀರುತ್ತಾ ಹೆಜ್ಜೆಯನ್ನು ಹಿಂದಿಡತೊಡಗುತ್ತಾನೆ. ನೋಡ ನೋಡುತ್ತಲೇ ಆ ವ್ಯಕ್ತಿಯ ಕಾಲನ್ನು ಯಾರೋ ಹಿಡಿದೆಳೆಯುತ್ತಾರೆ! ಆದರೆ ಯಾರೆಂದು ಎಷ್ಟೇ ಪ್ರಯತ್ನಪಟ್ಟರೂ ಕಾಣುವುದಿಲ್ಲ, ಕಾಲ್ಗೆಜ್ಜೆ, ಕೈಬಳೆ ಹಾಗು ಏದುಸಿರಿನ ಸದ್ದನ್ನು ಬಿಟ್ಟು. ಆ ಎಳೆತದ ರಭಸಕ್ಕೆ ಆ ವ್ಯಕ್ತಿ ಜೋರಾಗಿ ನರಳುತ್ತಾ ಕೆಳಗೆ ಬೀಳುತ್ತಾನೆ. ಆತನ ನರಳುವಿಕೆಯಲ್ಲಿ ಹೆಣ್ಣು ಧ್ವನಿಯೊಂದೂ ಮಿಶ್ರಣಗೊಂಡಿರುವುದು ಕೊಂಚ ಗಮನವಿಟ್ಟು ಆಲಿಸಿದ್ದರೆ ಕೇಳುತಿತ್ತು. ಆ ಅದೃಶ್ಯ ಆಕಾರ ಆತನನ್ನು ದರದರನೆ ಕಾಡಿನೊಳಗೆ ಎಳೆದುಕೊಂಡು ಹೋಗಿ ಮರೆಯಾಗುತ್ತದೆ. ನರಳುವಿಕೆಯ ಸದ್ದು ಮಾತ್ರ ಬಹು ಸಮಯದವರೆಗೂ ಮಾರ್ದನಿಸುತ್ತಲೇ ಇರುತ್ತದೆ.
ರಾಹುಲ್ ಒಂದೇ ಉಸಿರಿನಲ್ಲಿ ಮದುಮಗನ ಮನೆಯ ಕಡೆ ಓಡುತ್ತಾನೆ. ರಾಹುಲ್ನನ್ನು ಕಂಡು ಮನೆಯವರಿಗೆಲ್ಲ ಸಂತೋಷ ಹಾಗು ಭಯ ಒಟ್ಟೊಟ್ಟಿಗೆ. ರಾಹುಲ್ ಕೊಂಚ ಸಮಯ ಸುಧಾರಿಸಿಕೊಂಡ ಮೇಲೆ ಬೆಳಗಿನಿಂದ ನಡೆದ ಒಂದೊಂದೇ ವಿಷಯವನ್ನು ಹೇಳಿ ಕೊನೆಗೆ ನನ್ನ ಕಣ್ಣ ಮುಂದೆಯೇ ನಿಮ್ಮ ಸಂಭಂದಿ ಯುವಕನನ್ನು ಆ ಅದೃಶ್ಯ ಭೀಭತ್ಯ ಆಕಾರ ಎಳೆದುಕೊಂಡು ಹೋಗಿ ಗುಡ್ಡದಲ್ಲಿ ಮರೆಯಾಯಿತು ಎನ್ನುತ್ತಾ ಅಕ್ಷರ ಸಹ ಸಣ್ಣ ಮಕ್ಕಳಂತೆ ಅಳಲು ಶುರುವಿಡುತ್ತಾನೆ. ಕೊಂಚ ಹೊತ್ತು ಸಾವಧಾನವಾಗಿ ಆಲಿಸಿದ ಮನೆಯವರು ಕೊನೆಗೆ ರಾಹುಲ್ನನ್ನು ಸಮಾಧಾನ ಪಡಿಸುತ್ತಾ ಮನೆಯ ಒಂದು ಮೂಲೆಯಲ್ಲಿ ಹಾರವನ್ನಾಕಿ ನೇತಾಕಿದ್ದ ವ್ಯಕ್ತಿಯ ಫೋಟೋವನ್ನು ತೋರಿಸುತ್ತಾರೆ. ರಾಹುಲ್ ತಾನಿದ್ದಲ್ಲಿಂದ ಎದ್ದು ಆ ಫೋಟೋದ ಬಳಿ ಹೋಗಿ ನೋಡಿದರೆ ಅದು ತಾನು ಸ್ವಲ್ಪ ಹೊತ್ತು ಮುಂಚೆ ಕಂಡ ವ್ಯಕ್ತಿಯ ಫೋಟೋವೇ ಆಗಿರುತ್ತದೆ!! ಆಗ ಮೆನೆಯವರಲ್ಲೊಬ್ಬರು ಆತ ಮದುಮಗನ ಸೋಧರ ಸಂಬಂಧಿಯೆಂದೂ ಆತ ಕಾಲವಾಗಿ ಅದಾಗಲೇ ಒಂದು ತಿಂಗಳಾಗಿದೆ ಎಂದು ತಿಳಿಸುತ್ತಾರೆ!! ಅಲ್ಲದೆ ಆತ ಹೀಗೆ ದಾರಿ ತಪ್ಪಿದ ಅನೇಕರನ್ನು ನಾಯಿಯ ರೂಪದಲ್ಲಿ ಅಥವಾ ಮತ್ಯಾವುದೋ ರೂಪದಲ್ಲಿ ಬಂದು ರಕ್ಷಿಸುತ್ತಾನೆ ಎಂದು ತಿಳಿಸುತ್ತಾರೆ. ರಾಹುಲ್ ಮುಂದೇನನ್ನೂ ಕೇಳಲು ಅಥವ ಹೇಳುವ ಸ್ಥಿತಿಯಲ್ಲಿರುವುದಿಲ್ಲ. ಯಾವುದೇ ಭಾವವೂ ಆತನಿಂದ ಆ ಕ್ಷಣದಲ್ಲಿ ಹೊರಹೊಮ್ಮುವುದಿಲ್ಲ. ಅಲ್ಲಿಯವರೆಗೂ ತನ್ನ ಗೆಳೆಯನ ಸುಳಿವು ಕಾಣದೆ ಆತ ಎಲ್ಲಿ ಎನ್ನುತ್ತಾ ಮೆತ್ತಗೆ ನೆರೆದಿದ್ದವರನ್ನು ಕೇಳುತ್ತಾನೆ. ಯಾರೊಬ್ಬರೂ ಏನನ್ನು ಹೇಳುವುದಿಲ್ಲ. ಅಲ್ಲಿಯವರೆಗೂ ಗಿಜಿ ಗಿಜಿ ಗುಟ್ಟುತ್ತಿದ್ದ ಆ ಗುಂಪು ಕೂಡಲೇ ಗಾಢಮೌನದಲ್ಲಿ ಲೀನವಾಗುತ್ತದೆ. ರಾಹುಲ್ ಮತ್ತೊಮ್ಮೆ ತನ್ನ ಗೆಳೆಯ ಎಲ್ಲಿದ್ದಾನೆ ಎಂದು ಜೋರಾಗಿ ಕೇಳುತ್ತಾನೆ. ಯಾರೊಬ್ಬರಿಂದಲೂ ಯಾವುದೇ ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ. ಬದಲಾಗಿ ಅಲ್ಲಿದ್ದ ಒಂದಿಷ್ಟು ಹೆಂಗಸರ ಕೂದಲುಗಳು ತನಗೆ ತಾವೇ ಬಿಚ್ಚಿಕೊಂಡು ಮುಖವನ್ನು ಆವರಿಸಿಕೊಳ್ಳುತ್ತವೆ!! ಒಂದೆರೆಡು ಗಂಡಸರು ತಮ್ಮ ಮೈಯ್ಯ ಮೇಲಿನ ವಸ್ತ್ರವನ್ನೆಲ್ಲ ಕಳಚಿ ಜೋರಾದ ಕೀಚಲು ಧ್ವನಿಯನ್ನು ಸೂಸುತ್ತಾ ಮನೆಯಿಂದ ಹೊರಗೋಡಿ ಕತ್ತಲೆಯಲ್ಲಿ ಮರೆಯಾಗುತ್ತಾರೆ! ಅಷ್ಟೂ ಹೆಂಗಸರುಗಳು ತನ್ನ ಕಾಲನ್ನು ನೆಲಕ್ಕೆ ಗುದ್ದುತ್ತ ತಮ್ಮ ಕೆಂಪಾದ ಕಣ್ಣುಗಳಿಂದ ರಾಹುಲ್ನನ್ನು ದುರುಗುಟ್ಟು ನೋಡುತ್ತಾ ಸುತ್ತುವರೆಯುತ್ತಾರೆ…
ರಾಹುಲ್ ‘ಬೇಡ,..ಬೇಡ‘ ಎನ್ನುತ್ತಾ ವಿಲವಿಲ ಒದ್ದಾಡ ತೊಡಗುತ್ತಾನೆ. ಚಳಿಗೆ ಒದೆದುಕೊಂಡಿದ್ದ ಓದಿಕೆ ಮಂಚದಿಂದ ಕೆಳಗೆ ಬಿದ್ದಿರುತ್ತದೆ. ಮೈಯೆಲ್ಲಾ ಬೆವರುಮಯ! ಮಧ್ಯಾಹ್ನ ಕೊಂಚ ವಿಶ್ರಾಂತಿಗೆಂದು ಮಲಗಿದ್ದ ರಾಹುಲ್ ಮೊದಲ ಬಾರಿಗೆ ಬಿದ್ದ ಈ ಭಯಾನಕ ಕನಸ್ಸಿಗೆ ಅಕ್ಷರ ಸಹ ನಲುಗಿ ಹೋಗಿರುತ್ತಾನೆ! ಕಣ್ಣು ತೆರೆದು ಅದೆಷ್ಟೋ ನಿಮಿಷಗಳ ನಂತರ ರಾಹುಲ್ನಿಗೆ ನಿಜ ಜಗತ್ತಿನ ಅರಿವವಾಗುತ್ತದೆ. ತನ್ನ ಗೆಳೆಯರನ್ನು ಪುಕ್ಕಲರು ಎಂದು ಅಣಕಿಸುತ್ತಿದ್ದ ಈತ ಇಂದು ಕೇವಲ ಕನಸ್ಸೊಂದಕ್ಕೆ ಈ ಮಟ್ಟಿನ ಭಯಬೀತಿಗೊಂಡಿದ್ದು ಮಾತ್ರ ತನ್ನ ಮೇಲೆ ಆತನಿಗೆ ನಗು ಬರಿಸುವಂತಿರುತ್ತದೆ. ಕಿಟಕಿಯಿಂದ ಮನೆಯ ಹೊರಗೆ ನೋಡುತ್ತಾನೆ, ಅದಾಗಲೇ ಮಳೆರಾಯ ಮತ್ತೊಂದು ಸುತ್ತು ಭೇಟಿಕೊಟ್ಟು ಮರೆಯಾಗಿರುತ್ತಾನೆ. ಗಡಿಯಾರದಲ್ಲಿ ಘಂಟೆ ಐದನ್ನು ತೋರಿಸುತ್ತಿರುತ್ತದೆ. ಮಂಚದಿಂದ ಎದ್ದು ರೆಡಿಯಾಗಿ ಮನೆಯಿಂದ ಕೊಂಚ ದೂರ ಬಂದು ದಿಗಂತವರೆಗೆ ಹಬಿದ್ದ ಹಸಿರು ಸಿರಿಯನ್ನು ನೋಡತೊಡಗುತ್ತಾನೆ. ಜೊತೆಗೆ ತನ್ನ ಕನಸ್ಸಿನಲ್ಲಿ ಕಂಡ ಬೆಟ್ಟವೇನಾದರೂ ಅಲ್ಲಿ ಇರಬಹುದಾ ಎಂದೂ ಅರಸುತ್ತಾನೆ. ಆದರೆ ಅದೇ ಬಗೆಯ ಇನ್ನೂ ಎತ್ತರವಾದ ಹಾಗು ಧಟ್ಟವಾದ ಕಾಡಿನಿಂದ ಆವರಿಸಿದ ಬೆಟ್ಟವೊಂದು ಅಲ್ಲಿಯೇ ಇರುತ್ತದೆ.! ಆ ಬೆಟ್ಟವನ್ನು ಕಂಡು ಒಂದೇ ಕ್ಷಣಕ್ಕೆ ಹೃದಯ ಬಡಿತ ನಿಂತತಾದದ್ದು ಮಾತ್ರ ಸುಳ್ಳಲ್ಲ. ಅಲ್ಲಿಯವರೆಗೂ ಸೈಲೆಂಟ್ ಮೋಡಿನಲ್ಲಿಟ್ಟಿದ್ದ ತನ್ನ ಮೊಬೈಲ್ ಅನ್ನು ತೆಗೆದು ನೋಡುತ್ತಾನೆ, ಅಮ್ಮನಿಂದ ಮೂವತ್ತೆರೆಡು ಮಿಸ್ಸೇಡ್ ಕಾಲ್ ಗಳು! ಕೊಂಚ ಚಕಿತಗೊಂಡ ಆತ ಕೂಡಲೇ ಅಮ್ಮನ ನಂಬರ್’ಗೆ ಫೋನಾಯಿಸುತ್ತಾನೆ. ಅತ್ತ ಕಡೆಯಿಂದ ಬಂದ ಧ್ವನಿ ಮಾತ್ರ ತನ್ನ ಗೆಳೆಯ ಮದುಮಗನದ್ದಾಗಿರುತ್ತದೆ! ಹಿನ್ನಲೆಯಲ್ಲಿ ತನ್ನ ಅಮ್ಮ ಅಳುತ್ತಿರುವ ಸದ್ದು ಸ್ಪಷ್ಟವಾಗಿ ರಾಹುಲ್ ಗೆ ಕೇಳುತ್ತಿರುತ್ತದೆ. ರಾಹುಲ್ ಮಾತನಾಡುವ ಮೊದಲೇ ಮದುಮಗ, ರಾಹುಲನಿಗೆ ಆತ ಕೂಡಲೇ ಎಲ್ಲಿದ್ದರೂ ಮರುಮಾತನಾಡದೆ ಬಸ್ಸೊಂದನ್ನು ಹಿಡಿಸು ಸಿಟಿಗೆ ವಾಪಸ್ಸು ಬರಬೇಕೆಂದು, ತಾನು ಮದುವೆಯಾಗಲು ಇಚ್ಛಿಸಿದ್ದ ಹುಡುಗಿ ತನ್ನ ಸೋಧರ ಸಂಭಂದಿ ಹುಡುಗನೊಬ್ಬನನ್ನು ಇಷ್ಟಪಡುತ್ತಿದ್ದಳೆಂದೂ, ತನ್ನೊಟ್ಟಿಗೆ ಆಕೆಯ ಮಧುವೆ ನಿಶ್ಚಿತವಾದ ಕೆಲ ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡಳ್ಳೆಂದೂ, ಅಲ್ಲದೆ ಆಕೆ ಇಷ್ಟ ಪಟ್ಟ ಹುಡುಗನನ್ನೂ ಅಂದರೆ ತನ್ನ ಸೋಧರ ಸಂಭಂಧಿಯನ್ನೂ ಬಲಿ ತೆಗೆದುಕೊಂಡು ತನ್ನನ್ನೂ ಮುಗಿಸಲು ಕಾಡುತ್ತಿದ್ದಾಳೆಂದೂ, ಅಲ್ಲದೆ ನನ್ನ ಮದುವೆಗೆ ಸಹಾಯ ಮಾಡಿದ ಪ್ರತಿಯೊಬ್ಬರನ್ನೂ ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಕಾಡುತ್ತಿದ್ದಾಳೆಂದು, ತಾನು ಒಂದು ತಿಂಗಳ ಮೊದಲೇ ಆಫೀಸಿಗೆ ರಜೆಹಾಕಿ ಊರಿಗೆ ಕಾರಿನಲ್ಲಿ ಬರುವಾಗ ಅಪಘಾತವಾಗಿ ನಿನ್ನೆಯವರೆಗೂ ಕೋಮಾದಲ್ಲಿ ಇದ್ದೇನೆಂದು, ಇಂದಿನವರೆಗೂ ರಾಹುಲ್ ನೊಟ್ಟಿಗೆ ತಾನು ಒಂದು ಮಾತನ್ನೂ ಆಡಿಲ್ಲವೆಂದು ಹೇಳುತ್ತಾನೆ. ಅಲ್ಲದೆ ಪ್ರಸ್ತುತ ರಾಹುಲ್ ಎಲ್ಲಿದ್ದಾನೆಂದು ಯಾರಿಗೂ ತಿಳಿದಿಲ್ಲವೆಂದು, ನೆನ್ನೆಯಿಂದ ಆತನನ್ನು ಸಂಪರ್ಕಿಸಲು ಶತಪ್ರಯತ್ನ ಮಾಡುತ್ತಿದ್ದಾರೆಂದೂ ಸಹ ಹೇಳುತ್ತಾನೆ!! ರಾಹುಲ್ ಮರುತ್ತರವಾಗಿ ಏನೋ ಹೇಳಲು ಶುರುವಿಡುವ ಮೊದಲೇ ಶಾರ್ಟ್ ಸರ್ಕ್ಯೂಟ್ ನ ಸದ್ದಿನಂತೆ ಆತನ ಮೊಬೈಲ್ ಬಗೆ ಬಗೆಯ ಸದ್ದನ್ನು ಮಾಡುತ್ತಾ ಆಫ್ ಆಗಿ ಬಿಡುತ್ತದೆ! ತನ್ನ ಹಿಂದೆ ಯಾರೋ ಬಂದು ನಿಂತಿರುವ ಖಾತರಿ ರಾಹುಲ್ ನಿಗೆ ಅದಾಗಲೇ ಆಗಿರುತ್ತದೆ. ಹಿಂದೆ ತಿರುಗಲು ಬೇಕಾದ ಧೈರ್ಯವಾಗಲಿ, ಶಕ್ತಿಯಾಗಲಿ ಮಾತ್ರ ಆತನಲ್ಲಿ ಇಲ್ಲವಾಗಿರುತ್ತದೆ….!