ಅರ್ಧ ತೆರೆದ ಸ್ಲೈಡಿಂಗ್ ವಿಂಡೋದಿಂದ ತಂಪಾದ ಗಾಳಿ ಬೀಸುತ್ತಿತ್ತು. ಕಿಟಿಕಿ ಬದಿಗೆ ಕಟ್ಟಿದ್ದ ಕರ್ಟನ್ ಅದನ್ನು ಸೂಚಿಸುತ್ತಾ ಅತ್ತಿತ್ತ ಸರಿದಾಡುತ್ತಿತ್ತು. ಹೊರಗೆ ಶುಭ್ರ ಆಕಾಶ, ಹುಣ್ಣಿಮೆ ಚಂದ್ರನ ಬೆಳಕಿಗೆ ಹೊಳೆಯುತ್ತಿತ್ತು. ಹಾಸಿಗೆಯಲ್ಲಿ ಮಲಗಿ ಆಕಾಶವನ್ನೂ ಹಾಗೆ ದೂರ ದೂರದವರೆಗೆ ತಣ್ಣನೆ ಚಾಚಿಕೊಂಡಿರುವ ಬೃಹತ್ ನಗರವನ್ನು ದಿಟ್ಟಿಸುವುದು ಎಷ್ಟೊಂದು ಆಹ್ಲಾದಕರ. ಅರ್ಧರಾತ್ರಿಯಾದರೂ ನಗರ ಇನ್ನೂ ನಿದ್ರಿಸಿಲ್ಲ. ಯಾವಾಗಲೂ ಚಟುವಟಿಕೆಯಿಂದ ಕೂಡಿದ ಇದಕ್ಕೆ ಹಗಲು ರಾತ್ರಿ ಎಂಬ ಭೇದವೇ ಇಲ್ಲ. ಎಲ್ಲಿಂದಲೋ ಹಾರಿ ಬಂದ ಒಂದು ಬಿಳಿಪಾರಿವಾಳ ನನ್ನ ಯೋಚನಾ ಲಹರಿಗೆ ಭಂಗ ತಂದಿತ್ತು. ಕಿಟಿಕಿಯ ಹೊರ ಬದಿ ಕುಳಿತು ಗಾಜನ್ನು ಕುಕ್ಕುತ್ತಿತ್ತು. ಬಹುಷಃ ಬೆಳದಿಂಗಳಿನಲ್ಲಿ ತನ್ನದೇ ಪ್ರತಿಬಿಂಬ ಅದಕ್ಕೆ ಕಾಣುತ್ತಿತ್ತೋ ಏನೋ. ಹಾಸಿಗೆಯಿಂದೆದ್ದು ಕಿಟಿಕಿ ಪಕ್ಕ ಬಂದು ಅದನ್ನೋಡಿಸಲು ಗಾಜಿನ ಮೇಲೆ ಬೆರಳನಿಂದ ತಟ್ಟಿದೆ. ಅರೆಕ್ಷಣ ನನ್ನನ್ನೇ ನೋಡಿ ಹಾರಿ ಹೋಯಿತು.ಅದು ಹಾರಿದ ದಿಕ್ಕನ್ನೇ ದಿಟ್ಟಿಸುತ್ತಾ ಕಿಟಿಕಿ ಗಾಜಿನ ಬಳಿ ನನ್ನ ಮುಖವಿಟ್ಟದ್ದೇ ತಡ ಕರ್ರಗಿನ ಒಂದು ದೊಡ್ಡ ಪಕ್ಷಿಯೊಂದು ಬಂದು ಗಾಜಿಗೆ ಬಡಿಯಿತು. ಹಠಾತ್ತನೆ ಜರುಗಿದ ಈ ವಿದ್ಯಮಾನದಿಂದ ಚಕಿತನಾದ ನಾನು ಹಿಂದಕ್ಕೆ ಸರಿದೆ. ಒಂದರ ಹಿಂದೊಂದರಂತೆ ಮೂರ್ರ್ನಾಲ್ಕು ಪಕ್ಷಿಗಳು ಕಿಟಿಕಿಗೆ ಬಡಿಯ ತೊಡಗಿದವು. ಈಗ ನಿಜಕ್ಕೂ ಭಯವಾಗಲು ಶುರುವಾಯಿತು. ಅರ್ಧ ತೆರೆದ ಕಿಟಿಕಿಯನ್ನು ಮುಚ್ಚಲು ಪ್ರಯತ್ನಿಸಿದೆ. ಅದು ಅಲ್ಲೇ ಸಿಕ್ಕಿ ಹಾಕಿ ಕೊಂಡಿತ್ತು. ನನ್ನೆಲ್ಲಾ ಶಕ್ತಿಯನ್ನು ಒಟ್ಟು ಮಾಡಿ ದೂಡಿದರೂ ಪ್ರಯೋಜನವಾಗಲಿಲ್ಲ. ಕಿಟಿಕಿಯ ಮೇಲೇರಿ ನನ್ನೆರಡೂ ಕೈಗಳನ್ನೂ ಕಾಲನ್ನೂ ಶಕ್ತಿ ಹಾಕಿ ದೂಡಿದೆ. ಕಿಟಿಕಿ ಮುಚ್ಚುವಷ್ಟರಲ್ಲಿ ಮೈಯೆಲ್ಲಾ ಬೆವತಿತ್ತು. ಪುನಃ ಮಲಗಲು ಹಾಸಿಗೆಯ ಬಳಿ ಬಂದೆ. ಅದಾಗಲೇ ನನ್ನ ಗಮನಕ್ಕೆ ಬಂದದ್ದು, ಹಾಸಿಗೆಯಲ್ಲಿ ಯಾವುದೋ ಒಂದು ಆಕಾರ ಚೆನ್ನಾಗಿ ನಿದ್ರಿಸುತ್ತಿದೆ. ಹತ್ತಿರ ಹೋಗಿ ನೋಡಿದರೆ ಪಕ್ಕದ ಫ್ಲಾಟಿನ ಆಂಟಿಯ ದಾಬರ್ಮನ್ ನಾಯಿ. ಅದಕ್ಕೂ ನನಗೂ ಎಳ್ಳಷ್ಟೂ ಆಗಿ ಬರುವುದಿಲ್ಲ. ನನ್ನನು ಕಂಡರೆ ಸಾಕು ಯಾವುದೋ ಆಜನ್ಮ ಶತ್ರು ಅನ್ನುವ ಹಾಗೆ ಬೊಗಳುತ್ತಿತ್ತು. ಒಂದೆರಡು ಸಾರಿ ಕಚ್ಚಲು ಬಂದಿದ್ದು ನೆನಪಿಸಿದರೆ ಈಗಲೂ ಬೆಚ್ಚಿ ಬೀಳುತ್ತೇನೆ. ಇದ್ಯಾಕೆ ಇಲ್ಲಿ ಬಂತು ಅಂತ ಅರ್ಥ ಆಗಲಿಲ್ಲ. ಈಗಲೇ ಹೋಗಿ ಅವರನ್ನು ಚೆನ್ನಾಗಿ ತರಾಟೆಗೆ ತಗೋಬೇಕು ಅಂತ ಸದ್ದು ಮಾಡದೆ ಕಳ್ಳ ಹೆಜ್ಜೆಯನ್ನಿಡುತ್ತಾ ಮೇನ್ ಡೋರ್ ಪಕ್ಕ ಬಂದು ತಿರುಗಿ ನೋಡಿದರೆ ನನ್ನ ಹಿಂದೆಯೇ ಬಂದು ನಿಂತಿದೆ. ಛೂ… ಛೂ ಅಂತ ಅದನ್ನು ಹೆದರಿಸಲು ಪ್ರಯತ್ನಿಸಿದ್ದು ವಿಫಲಗೊಂಡು ನನ್ನ ಮೈಮೇಲೆ ಹಾರಲು ಬಂತು. ಬದುಕಿದೆಯಾ ಬಡಜೀವವೇ ಅಂತ ಡೋರ್ ಓಪನ್ ಮಾಡಿ ಓಡಿದೆ.
ಹಿಂದೆ ತಿರುಗಿ ನೋಡಲು ಧೈರ್ಯ ಸಾಲಲಿಲ್ಲ. ಮೆಟ್ಟಿಲುಗಳಿಳಿಯುತ್ತಾ ಕೆಳಗೆ ಓಡತೊಡಗಿದೆ. ಗಾಬರಿಯಲ್ಲಿ ಎಷ್ಟು ಫ್ಲೋರ್ ಇಳಿದೆ ಎಂಬುದೇ ತಿಳಿಯಲಿಲ್ಲ.ಇಳಿಯುತ್ತಲೇ ಇದ್ದೆ. ನನ್ನ ಮನೆ ಎಷ್ಟನೆ ಫ್ಲೋರಲ್ಲಿ ಇದೆ ಎಂಬ ಗೊಂದಲ ಪ್ರಾರಂಭ ವಾಯಿತು. ಪುನಃ ಮೇಲೇರಿ ಹೋದೆ. ಐದನೇ ಫ್ಲೋರಿನಲ್ಲಿದ್ದೆ ಎಂಬುದು ಗೊತ್ತಾಯಿತು. ಇನ್ನೂ ಕೆಳಕ್ಕೆ ಹೋಗಿ ನೋಡೋಣ ಅಂತ ಇಳಿಯಲು ಶುರು ಮಾಡಿದೆ. ಎರಡನೇ ಫ್ಲೋರ್ ಬಂತು. ಹುಡುಕಾಡುವುದು ವ್ಯರ್ಥ ಅಂತ ಒಂದು ಫ್ಲಾಟಿನ ಮುಂದೆ ನಿಂತು ಬೆಲ್ ಮಾಡಿದೆ. ಬಾಗಿಲು ತೆರೆದದ್ದು ಮಾತ್ರ ನನ್ನನು ಯಾವಾಗಲೂ ಒಂದು ತರ ಆಸೆ ಕಂಗಳಿಂದ ನೋಡುವ ಎದುರು ಮನೆಯ ಹುಡುಗಿ. ಅವಳ ಈ ಸ್ವಭಾವ ಅಕ್ಕ ಪಕ್ಕದವರಿಗೆಲ್ಲ ಗೊತ್ತಾಗಿ ನನ್ನನ್ನು ರೇಗಿಸುತ್ತಾ ಇದ್ದದ್ದು ಅವಳ ಮೇಲೆ ಕೋಪ ಇನ್ನೂ ಹೆಚ್ಚಲು ಕಾರಣವಾಗಿತ್ತು. ಗ್ರಹಚಾರಕ್ಕೆ ಇದು ಅವಳ ಮನೆಯೇ ಆಗಬೇಕೆ?. ಮನಸ್ಸಿಲ್ಲದ ಮನಸ್ಸಿಂದ ಒಳ ನುಗ್ಗಿದೆ.ಒಳ ಹೋಗಿ ನೋಡಿದರೆ ಅವಳ ತಂದೆ, ತಾಯಿ ಇನ್ಯಾರೋ ಅವರ ಸಂಬಂಧಿಕರೆಲ್ಲಾ ನನ್ನನು ಬರ ಮಾಡಿಕೊಂಡರು. ಒಳಗೆ ಕುಳ್ಳಿರಿಸಿ ಚಾ ತಿಂಡಿ ಕೊಟ್ಟು ಸತ್ಕರಿಸಿದರು. ಏನೋ ಎಡವಟ್ಟಾಗಿದೆ ಅಂತ ಸಂಶಯ ಶುರುವಾಯಿತು. ಅದು ಸುಳ್ಳಾಗಲಿಲ್ಲ. ಅಲ್ಲಿದ್ದವರಲ್ಲೊಬ್ಬರು“ ಹನಿಮೂನಿಗೆ ಎಲ್ಲಿ ಹೋಗ್ತೀರಿ ಅಳಿಯಂದ್ರೆ” ಅಂತ ಪ್ರಶ್ನಿಸೋದೇ ? ಭೂಮಿ ಸೀಳಿ ಪ್ರಪಾತಕ್ಕೆ ಬಿದ್ದಂತಾಯಿತು ನನಗೆ. ಏಳಲು ತ್ರಾಣವಿಲ್ಲದೆ ಸೋಫಾದಲ್ಲೇ ಒರಗಿ ಕುಳಿತು ಕೊಂಡೆ. ನನ್ನಿಂದ ಇಂತಹ ತಪ್ಪು ಹೇಗಾಯಿತು ಅಂತ ಅರ್ಥವಾಗಲೇ ಇಲ್ಲ. ಈಗಾಗಲೇ ಇವಳ ಜೊತೆ ನನ್ನ ಮದುವೆ ಆಗಿಹೋಗಿದೆ. ಇನ್ನು ಜೀವನಪೂರ್ತಿ ಇವಳ ಜೊತೆ ಹೇಗೆ ಸಂಸಾರ ಮಾಡುವುದು ಅಂತ ತಿಳಿಯಲೇ ಇಲ್ಲ. ನನ್ನ ಮಾನ ಮರ್ಯಾದೆ ಎಲ್ಲ ಈಗಾಗಲೇ ಹೊರಟು ಹೋಗಿರುತ್ತೆ. ಈಗಲೇ ಮನೆಗೆ ಹೋಗಿ ಅಮ್ಮನ ಹತ್ರ ಪ್ರಿಯಾ ಜೊತೆ ಇರುವ ಲವ್ ಅಫೇರ್ ಹೇಳಿ ಇವಳಿಂದ ಡೈವೋರ್ಸ್ ಕೊಡಿಸಬೇಕು ಅಂತ ಸೋಫಾದಿಂದ ಏಳಲು ಪ್ರಯತ್ನಿಸಿದೆ. ಎಷ್ಟು ಪ್ರಯತ್ನಿಸಿದರೂ ಏಳಲು ಆಗುತ್ತಿಲ್ಲ. ಏನೋ ಒಂದು ಶಕ್ತಿ ನನ್ನನ್ನು ಹಿಡಿದಿಟ್ಟಂತೆ ಭಾಸವಾಯಿತು. ಪಕ್ಕದಲ್ಲೇ ನಿಂತು ಅವಳು ನಕ್ಕಂತೆ ಕಣ್ಣಿಗೆ ಕಟ್ಟ ತೊಡಗಿತು. ಎಲ್ಲರೂ ನನ್ನನ್ನೇ ನೋಡಿ ನಗುತ್ತಿದ್ದಾರೆಯೇ? ಛೆ… ಇದೆಂತಾ ಅವಮಾನ? ನನ್ನ ಅನುಮತಿ ಇಲ್ಲದೆಯೇ ನನ್ನ ಮದುವೆ ಮಾಡಿ ತಮಾಷೆ ನೋಡುತ್ತಿದ್ದಾರೆ. ಮೈ ಎಲ್ಲ ಉರಿಯಿತು. ಗಟ್ಟಿಯಾಗಿ“ ನಿಂಗೆ ಡೈವೋರ್ಸ್ ಕೊಡ್ತೀನಿ, ಇವತ್ತೇ ಕೊಡ್ತೀನಿ, ನೋಡ್ತಾ ಇರು.. ಡೈವೋರ್ಸ್… ಡೈವೋರ್ಸ್…” ಅನ್ನುತ್ತಾ ಕೋಪದಿಂದ ಕಣ್ಣು ಕೂಡ ಬಿಡಿಸಲಾಗದೆ ಒದ್ದಾಡುತ್ತಿರಬೇಕಾದರೆ ಅಮ್ಮನ ಸ್ವರ ಕೇಳಿ ಬಂತು,
“ಏಳೋ, ಏನೋ ಇದು ಬೆಳಬೆಳಗ್ಗೇನೇ ಡೈವೋರ್ಸ್, ಡೈವೋರ್ಸ್ ಅಂತ ಬಡ್ಕೊತಾ ಇದ್ದೀಯ ? ನಿಂಗೆ ಯಾವಾಗಲೋ ಮದುವೆ ಆಗಿದ್ದು? ಅಲ್ಲ ನಮ್ ಗೊತ್ತಿಲ್ದೇನೆ ಏನಾದ್ರು ಮಾಡ್ಕೊಂಡ್ಯ ಹೇಗೆ? “ ಅಂತ ನಸುನಗುತ್ತಾ ನನ್ನ ಭುಜ ಅಲುಗಿಸುತ್ತಾ ಕಾಫೀ ಪಕ್ಕದ ಟೇಬಲಿನ ಮೇಲಿಟ್ಟರು.