ಅಲ್ಲಾ, ಜಿಗ್ರಿ ಒಬ್ಬ ಡ್ರಾಪ್ ಕೊಡ್ತೀನಿ ಬಾರೋ ಅಂತ ಅಷ್ಟ್ ಕರೆದ. ಆಪರೂಪಕೊಮ್ಮೆ ಬರೋ ಬೇಸಿಗೆ ಮಳೆ ತರ ಯಾವಾಗ್ಲಾದ್ರೂ ಒಮ್ಮೆ ಕರುಣೆ ಬಂದು ಆಫೀಸಿನ ಯಾರಾದರೊಬ್ಬ ಪುಣ್ಯಾತ್ಮ ಡ್ರಾಪ್ ಕೇಳ್ದ ಚಾನ್ಸ್ ಮಿಸ್ ಮಾಡ್ಕೊಂಡು, ಮೊಬೈಲು, ಪರ್ಸು, ಲ್ಯಾಪ್ಟಾಪ್ ಅಂತಷ್ಟೇ ಅಲ್ಲದೆ ಇನ್ನು ಯಾವ್ಯಾವ ಜಾಗದ ಮೇಲೋ ಏಕಾಗ್ರತೆ, ರಕ್ಷಣೆ ಎರಡನ್ನು ಮಾಡಿಕೊಳ್ಳುತ್ತಾ ಬಿಎಂಟಿಸಿಯ ಕಿಕ್ಕಿರಿದ ಅಮಾಯಕ ಬಸ್ಸಿನಲ್ಲಿ ಹತ್ತು ಕಿಲೋಮೀಟರ್ ಸಾಗುವ ಯಾತನೆಗೆ ಒಂದು ದಿನಾನಾದ್ರೂ ಸಿಗೋ ಬ್ರೇಕಿಗೆ ಯಾಕೆ ಮಣ್ಣೆರೆಚಿಕೊಂಡೆ ಎಂದನಿಸತೊಡಗಿತ್ತು. ‘ಮದ್ವೆ ಆಗಿ ಹದ್ನಾರು ವರ್ಷ ಆಯ್ತು, ಒಂದ್ ಕಾರು, ಅಟ್ಲೀಸ್ಟ್ ಒಂದ್ ಬೈಕಾದ್ರು ತಗೋಳೋ ಯೋಗ್ಯತೆ ಇಲ್ಲ’ ಎಂಬ ಡೈಲಾಗ್ ಅನ್ನು ಮೊದಲೆಲ್ಲ ತಲೆ ತಗ್ಗಿಸಿ ಹೇಳ್ತಿದ್ದ ನನ್ನಾಕೆ ಇಂದು ಅದೇ ಡೈಲಾಗ್’ನ್ನು ನಾನೇ ತಲೆ ತಗ್ಗಿಸೋ ಹಾಗೆ ಅರಚತ್ತಾಳೆ. ಹೆಸ್ರ ಪಕ್ಕಕೆ ಮಾರಮ್ಮ ಅಂತ ಹೆಸ್ರ್ ಇಡಬೇಕು, ಬಜಾರಿ! ಎಂದು ಅಂದುಕೊಳ್ಳುತ್ತಿರಬೇಕಾದರೆ …
ಉದ್ದ ಕೂದಲನ್ನು ನೀಳವಾಗಿ ಕಟ್ಟಿ, ಹಣೆಯ ಮೇಲೊಂದು ಚಿಕ್ಕದಾದ ಹಾಗು ಚೊಕ್ಕವಾದ ಬಿಂದಿಗೆಯನಿಟ್ಟು, ಹುಬ್ಬುಗಳೆರಡನ್ನು ಗಂಟಿಕ್ಕಿಕೊಂಡು, ಇಡೀ ಸಿಟಿಯ ಕಳವಳವೆಲ್ಲವೂ ಈಕೆಯ ಅಮಾಯಕ ಕಣ್ಣುಗಳ ಒಳಗೇನೆ ಮನೆ ಮಾಡಿಕೊಂಡಿವೆಯೋ ಎಂಬಂತೆ . ಅತ್ತ ಕಡೆಯಿಂದ ಬರುವ ಒಂದೊಂದೇ ಬಸ್ಸುಗಳನ್ನು ಅವುಗಳು ಬಂದು, ನಿಂತು, ಒಳಗಿದ್ದ ನರಮಾನವರನ್ನೆಲ್ಲ ಹೊರ ಕಕ್ಕಿ, ಮತ್ತಷ್ಟು ಜನರನ್ನು ಒಳನುಂಗಿ, ಕೊಂಚ ವಿರಮಿಸಿ, ಮತ್ತದೇ ದಾರಿಯಲ್ಲಿ ಸಾಗುವವರೆಗೂ ನೋಡಿ, ಪುನಃ ಮತ್ತೊಂದು ಬಸ್ಸಿನ ಬೋರ್ಡಿನಲ್ಲಿ ತಾನು ಹೋಗುವ ಏರಿಯಾದ ಹೆಸರನ್ನು ಹುಡುಕುತ್ತಿದ್ದಳು ಆಕೆ. ಗುಲಾಬಿ ಬಣ್ಣದ ಸೀರೆಯನುಟ್ಟು, ಕೆಂಪೆನಿಸುವ ತುಟಿಗಳನ್ನು ಆಗೊಮ್ಮೆ ಈಗೊಮ್ಮೆ ಮುಂಚಾಚಿ ಎಡಕ್ಕೂ ಬಲಕ್ಕೂ ತಿರುಗಿಸುತ್ತಾ, ಬಲ ಹೆಗಲ ಮೇಲಿದ್ದ ವ್ಯಾನಿಟಿ ಬ್ಯಾಗಿನ ಪಟ್ಟಿಯನ್ನು ಸರ ಸರನೆ ಹಿಡಿದೆಳೆಯುತ್ತಿದ್ದಳು. ಥೇಟ್ ಕಬಿ ಅಲ್ವಿದಾ ನಾ ಕೆಹನಾ ಚಿತ್ರದ ರಾಣಿ ಮುಖರ್ಜಿ! ಕಾಲೇಜಿನ ಪುಂಡರಂತೆ ಬಿಟ್ಟ ಕಣ್ಣು ಮುಚ್ಚದೆಯೇ ಅವಳನ್ನೇ ಗುರಾಯಿಸುತಿದ್ದ ನನ್ನನ್ನು ಅಕ್ಕ ಪಕ್ಕದವರು ಕಕ್ಕಾಬಿಕ್ಕಿಯಾಗಿ ನೋಡಿದರು. ‘ಕ್ಯೋ ಚಲ್ತಿ ಹೈ ಪವನ್…’ ಹಾಡುಗಳನ್ನು ತುಟಿಗಳು ಗುನುಗುತ್ತಿದ್ದವು.
ಹದಿಮೂರು ವರ್ಷ ಆಯ್ತು! ಇದೇ ಜಡೇ, ಅವೇ ಕಣ್ಣುಗಳು. ಗೆಳತಿಯರೊಟ್ಟಿಗೆ ಕೂಡಿ ಊರಿನ ಬಸ್ ಸ್ಟ್ಯಾಂಡಿನಲ್ಲಿ ನಿಂತ್ರೆ ಹುಡುಗರ ಕಣ್ಣೆಲ್ಲ ಇವಳ ಮೇಲೆಯೇ. ‘ಓಂ..’ ಮೂವಿ ಸ್ವಲ್ಪ ಮೊದ್ಲೇ ರಿಲೀಸ್ ಆಗಿರ್ತಿದ್ರೆ ಅವತ್ತು ಇವಳನ್ನ ಹಾಗೆ ಗುರಾಯಿಸ್ತಿದ್ದ ಹುಡುಗ್ರೆಲ್ಲಾರಿಗೂ ನಾಲ್ಕ್ ನಾಲ್ಕು ಬಾರ್ಸಿ ಕಳಿಸ್ತಿದ್ದೆ. ಆದ್ರೆ ಇವ್ಳು ಏನ್ ಕಮ್ಮಿನಾ? ಹುಡುಗರು ನೋಡ್ತಾ ಇದ್ದಾರೆ ಅಂತ ಗೊತ್ತಿದ್ರೂ ಅಲ್ಲೇ ನಿಲ್ತಿದ್ಲು! ಊರಿನ ಬಸ್ಸು ಬಂದ್ರೂ ಹತ್ತದೆ ಇದೆ ರೀತಿ ತುಟಿಗಳನ್ನ ಮುಂದಕ್ಕೆ ಮಾಡುತ್ತಾ, ಪಕ್ಕದಲ್ಲಿರೋ ಗೆಳತಿಯರ ಕಿಸಿಕಿಸಿ ಅನ್ನೋ ಸದ್ದಿಗೆ ಬೇಕೂ ಬೇಡವೋ ಎಂಬಂತೆ ಮುಗುಳ್ನಗುತ್ತಾ ಓರೆ ಕಣ್ಣಿನಲ್ಲಿ ನನ್ನ ನೋಡ್ತಾ ಇದ್ಲು!
ಇವಾಗ್ಲೂ ಹಾಗೆ ನೋಡ್ತಾ ಇದ್ದಾಳೆ!! ನನ್ನನೇ. ಅರೆ..ರೆ..ರೆ….. ಮತ್ತೆ ಆಕಡೆ ತಲೆ ಎತ್ತಿ ನೋಡೋ ಧೈರ್ಯ ಮಾತ್ರ ದೇವರಾಣೆ ಇಲ್ಲ. ಪುಕ್ಕಲು ಬಡ್ಡಿಮಗ ನಾನು.
ಅಂತೂ ಇದ್ದಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಅತ್ತ ಕಡೆ ಕಣ್ಣಾಯಿಸಿದೆ. ಆಕೆ ತನ್ನ ವ್ಯಾನಿಟಿ ಬ್ಯಾಗಿನಿಂದ ಫೋನ್ ಅನ್ನು ತೆಗೆದು ನೋಡತೊಡಗಿದಳು. ಇತ್ತ ಕಡೆ ನನ್ನಾಕೆಯ ಫೋನು ರಿಂಗಾಯಿಸಿತು. ಶಿವ ಪೂಜೆಯ ನಡುವೆ ಕರಡಿ ಎಂದು ಗೊಣಗುತ್ತಾ ಇನ್ನೇನು ಫೋನ್ ರಿಸೀವ್ ಮಾಡ್ಬೇಕು ಅನ್ನೋವಷ್ಟರಲ್ಲಿ ಅದು ತಂತಾನೆ ಕಟ್ಟಾಯಿತು. ಬೇಸಿಗೆಯಲ್ಲಿ ಮತ್ತೊಮ್ಮೆ ಮಳೆಯಾದ ಅನುಭವವಾಗಿ, ‘ಆಹಾ…ಒಳ್ಳೆದಾಯಿತು’ ಎನ್ನುತಾ ಫೋನ್ ಅನ್ನು ಜೇಬಿನೊಳಗೆ ಇರಿಸಿದೆ.
ಬಸ್ಸುಗಳ ಹಿಂದೆ ಬಸ್ಸುಗಳು. ಆಕೆಯ ಬಸ್ಸು ಇನ್ನು ಬರಲಿಲ್ಲ. ನನ್ನ ಖುಷಿಗಂತೂ ಪಾರವೇ ಇರಲಿಲ್ಲ.
*******
ಕಾಲೇಜಿನ ದಿನಗಳೇ ಹಾಗೆ. ಯಾವಾಗ ಪ್ರೀತಿ ಹುಟ್ಟುತ್ತೋ, ಅದ್ಯಾವಾಗ ಚಿಗುರುತ್ತೋ, ತಿಳಿದವ ಮಾತ್ರ ಬುದ್ದಿಜೀವಿ! ಬಸ್ ಸ್ಟ್ಯಾಂಡಿನಲ್ಲಿ ನಿಂತ್ಕೊಂಡೆ, ಬರಿ ಕಣ್ಣುಗಳನ್ನೇ ಮಾತಿಗಿಳಿಸಿ, ಎರಡು ವರ್ಷಗಳ ನಂತರ ಪ್ರೀತಿಯ ಪದಗಳನ್ನು ಅವಳಿಗೆ ಉಸುರಿದೆ. ಅವಳೋ ನಕ್ರೆ ಕಿ ರಾಣಿ. ಇವನ್ಯಾವನಪ್ಪ ಜೊಲ್ಲು ಪಾರ್ಟಿ ಎಂಬಂತೆ ನನ್ನ ಮೇಲೆ ಕೆಳಗು ನೋಡಿದ್ಲು.
ತತ್ !! ಈ ಲುಕ್ ಕಾಣಕ್ಕ ನಾನು ಎರಡು ವರ್ಷದಿಂದ ಇವಳನ್ನ ಒಳ್ಳೆ ತಾಜ್ ಮಹಲ್ ತರ ದೂರದಲ್ಲೇ ನಿಂತು ಪ್ರೀತಿಸಿದ್ದು ಅನಿಸತೊಡಗಿತು. ಇನ್ನೇನು ಮನಸ್ಸಾ ಇಚ್ಛೆ ಉಗಿತ್ತಾಳೆ ಅನ್ನೋ ಅಷ್ಟರಲ್ಲಿ ಆಕೆಯ ಗೆಳತಿ ಕಿಸಿ ಕಿಸಿ ಅಂತಾ ನಕ್ಕಾಗಲೇ ಎಲ್ಲೋ ಒಂಚೂರು ಸಂಶಯ ಮಿನುಗಿ ಮರೆಯಾದದ್ದು. ಧೈರ್ಯ ಮಾಡಿ ತಲೆ ಎತ್ತಿ ಆಕೆಯನ್ನು ನೋಡಿದೆ. ಆಗಷ್ಟೇ ತನ್ನ ರೌದ್ರಾವತಾರವನ್ನೆಲ್ಲ ಕಣ್ಣುಗಳಲ್ಲಿ ಸೂಸುತಿದ್ದ ಆಕೆ ಒಂದೇ ಸಮನೆ ಮುಗುಳ್ನಗುತಿದ್ದಾಳೆ! ಕೂಡಲೇ ಒಂಚೂರು ನೋಯದಂತೆ ಒಂದು ಬಾರಿಸಬೇಕೆಂಬ ಸಿಟ್ಟು ಉಲ್ಬಣಿಸಿ ಬಂದರೂ ತಡೆದುಕೊಂಡಿದ್ದೆ ಅಂದು.
ಕ್ಲಾಸು, ಕ್ಯಾಂಟೀನು, ಬಸ್ ಸ್ಟ್ಯಾಂಡಿನಲ್ಲಿ ಶುರುವಾದ ನಮ್ಮ ಪ್ರೇಮದ ಚಿಗುರು ತಿಂಗಳು ಕಳೆಯುವುದರಳೊಗಾಗಿ ನಾನು ಅವರ ಮನೆಯ ಕಾಫಿಯನ್ನು ಹೀರುತ್ತಿರುವಂತೆ ಮಾಡಿತ್ತು. ಆಕೆ ಕಾಫಿಯನ್ನು ತಂದಿದ್ದ ತಟ್ಟೆಯನ್ನು ಎದೆಗವುಚಿಗೊಂಡು ಒಳಮನೆಯ ಮರದ ದೊಡ್ಡ ಬಾಗಿಲಿಗೆ ಓರಗಿಕೊಂಡು ನಿಂತಿದ್ದರೆ, ಆಕೆಯ ಅಪ್ಪ ನನ್ನ ಕಾಫಿಯ ಕೊನೆಯ ಸಿಪ್ಪಿನ ಸರ್ರೆಂಬ ಸದ್ದನ್ನು ಕೇಳಲು ಕಾತರನಾಗಿರುವಂತೆ ಗುರಾಯಿಸುತಿದ್ದ. ಯಾವೂರು,ಯಾರ ಮನೆ ಹೋಗಲಿ ಕೊನೆ ಪಕ್ಷ ನಿನ್ನ ಹೆಸರೇನಯ್ಯ ಅಂತಾನೂ ಕೇಳಲಿಲ್ಲ ಆಸಾಮಿ. ಮುಂದೆ ಮಾವ ಆಗೋನು ಅಂತ ಸುಮ್ನಿದ್ದೆ. ಇಲ್ದೆ ಇದ್ರೆ ‘ನಿಮ್ಮಪ್ಪ ಏನ್ ಮೂಗನ ಅತ್ವಾ ಕೆಪ್ಪನಾ?’ ಅಂತ ಅವಳನ್ನೇ ಕೇಳ್ ಬಿಡ್ತಿದ್ದೆ! ನೋಟ್’ಬುಕ್ ಬೇಕೆಂಬ ನಾಟಕ ಮಾಡಿ ಮನೆ ಹೊಕ್ಕ ನನ್ನನು ಮುಟ್ಟದೆಯೇ ಹೊರ ತಳ್ಳಿದ್ದ ಆಕೆಯ ಅಪ್ಪ. ಚಿಗುರು ಮೀಸೆಯ ಕಳ್ಳಾಟಗಳನೆಲ್ಲ ಬಲ್ಲದಾಗಿದ್ದ ಆ ಹಳೆ ಮೀಸೆಯನ್ನು ಪಳಗಿಸಿಕೊಳ್ಳುವ ಹಾದಿಯನು ಯೋಚಿಸುತ್ತಾ ನನ್ನ ಹಾದಿ ಹಿಡಿದೆ.
‘ಯಾರ್ ಒಪ್ಪಿದ್ರೂ ನನ್ನ್ ಅಪ್ಪ ಒಪ್ಪೋಲ್ವೋ..’ ಎನ್ನುತ್ತಾ ನನ್ನ ಹಸಿರು ಬಣ್ಣದ ಶರ್ಟ್ ಎಲ್ಲ ಒದ್ದೆಯಾಗುವಂತೆ ಅಪ್ಪಿಕೊಂಡು ಅತ್ತಿದ್ದ ಆಕೆ, ‘ಎಲ್ಲಾದ್ರೂ ದೂರ ಓಡೋಗಣ’ ಎಂದು ನನ್ನ ನಿಂತ ನೆಲವನ್ನೇ ಕುಸಿಯುವಂತೆ ಮಾಡಿದ್ದಳು ಅಂದೊಂದು ದಿನ. ಅವ್ರಪ್ಪ ಹಿಟ್ಲರ್ ಆದ್ರೆ ನಮ್ಮಪ್ಪ ಮುಸ್ಸೊಲೊನಿ! ಪ್ರಪಂಚದ ಯಾವುದೇ ಮೂಲೇಲಿದ್ರು ಅಟ್ಟಾಡಿಸಿಕೊಂಡು ಬಂದು ಹೊಡೆಯುತ್ತಾನೆ. ಅದೂ 20 ವರ್ಷ ಹಳೆಯ ಬೆಲ್ಟ್’ನಲ್ಲಿ! ನಾನ್ ಹುಟ್ಟಿದಾಗ ನಂಗೆ ಹೊಡೆಯಲಿಕ್ಕೆ ತಗೊಂಡಿದ್ದಂತಿದ್ದ ಆ ಬೆಲ್ಟು ನಂಗೊಂಥರಾ ಭಯ ಹುಟ್ಟಿಸೋ ನಾಗರ ಹಾವಿನಂತೆ ಆಗಿಬಿಟ್ಟಿತ್ತು. ಅದು ತನ್ನ ಜೀವಿತಾವಧಿಯಲ್ಲಿ ನಮ್ಮಪ್ಪನ ಹೊಟ್ಟೆಯ ಸುತ್ತ ಸುತ್ತಿಕೊಂಡಿದ್ದಕಿಂತ ನನ್ನ ಎಳೆಯ ಚರ್ಮದ ರುಚಿಯ ಮಜವನ್ನೇ ನೋಡಿರುವುದೇ ಜಾಸ್ತಿ!
‘ಮೊದ್ಲು ನಾನು ಓದ್ ಮುಗ್ಸಿ, ಕೆಲ್ಸ ಗಿಲ್ಸ ಅಂತ ಒಂದು ತಗೊಂಡು ಆದ್ಮೇಲೆ ನಾನೇ ನಿಮ್ಮನೆಗೆ ಬಂದು ನಮ್ಮ್ ಮದ್ವೆ ಬಗ್ಗೆ ಮಾತಾಡ್ತೀನಿ’ ಅಂತ ಒಂಚೂರೂ ಗಂಡಸ್ಥನದ ಮಾನವನ್ನು ಉಳಿಸಿಕೊಳ್ಳದೆ ಪುಕ್ಕಲನಂತೆ ಆಕೆಯನ್ನು ಸಮಾಧಾನಿಸಿದ್ದೆ.
ಖಾಲಿ ಜೇಬಿನ ತುಂಬಾ ಒಲವಿನ ಹೂವುಗಳನ್ನೇ ತುಂಬಿಕೊಂಡು ಕಾಲೇಜಿನ ಕೊನೆಯ ವರ್ಷದವರೆಗೂ ಅಲೆದಾಡಿದೆ, ಆಕೆಯ ನಿರ್ಮಲ ಪ್ರೀತಿಯೊಟ್ಟಿಗೆ.
ಕಾಲೇಜಿನ ಕೊನೆಯ ವರ್ಷದ ಅದೊಂದು ದಿನ ಆಕೆಯ ಗೆಳತಿಯೊಬ್ಬಳು ಬಂದು ಇವಳ ಮದುವೆಯ ವಿಚಾರ ಹೇಳಿದಳು. ಮದುವೆಯ ವಿಚಾರ ಮೂರನೆಯವರ ಮುಖೇನ ನನಗೆ ತಿಳಿದಿದ್ದು ಕೊಂಚ ಸಿಟ್ಟನ್ನು ತಂದರೂ ಸದ್ಯಕಂತು ನನ್ನ ಕಣ್ಣಿರೀನ ಕಟ್ಟೆಯನ್ನು ತಡೆಯುವುದರಲ್ಲಿಯೇ ಮಗ್ನನಾಗಿ ಹೋಗಿದ್ದೆ. ಅಂದಿನಿಂದ ಇವಳನ್ನು ಕಾಲೇಜಿನಲ್ಲಾಗಲಿ, ಸಂಗೀತ ಶಾಲೆಯಲ್ಲಾಗಲಿ ಅಥವಾ ಪೇಟೆಯ ಯಾವೊಂದು ಗಲ್ಲಿ ಮೂಲೆಯಲ್ಲೂ ಕಾಣಲಿಲ್ಲ. ನಮ್ಮಿಬ್ಬರ ವಿಚಾರ ತಿಳಿದು ದಪ್ಪ ಮೀಸೆಯ ಅವರಪ್ಪ ಆಕೆಯ ಮದುವೆ ಮಾಡಿಯೇ ತೀರುತ್ತೇನೆನ್ನುತ್ತಾ ಹಠ ಹಿಡಿತು ಕುಳಿತನಂತೆ. ಆತನ ಬೋಳುತಲೆಯ ಮೇಲೆ ರಪ ರಪ ನಾಲ್ಕು ಬಾರಿಸಿ ನನ್ನ ಸಿಟ್ಟನ್ನೆಲ್ಲ ಕಡಿಮೆ ಮಾಡಿಕೊಳ್ಳಬೇಕೆನಿಸಿತು. ದಿನ, ವಾರ, ತಿಂಗಳುಗಳು ಕಳೆದವು. ಪ್ರತಿ ದಿನ ಅತ್ತಿಂದಿತ್ತ ಇತ್ತಿಂದತ್ತ ಹೋಗುವ ಬಸ್ಸುಗಳ ಬಾಗಿಲನ್ನೇ ನೋಡುವುದು ನನ್ನ ಕಾಯಕವಾಗಿ ಹೋಗಿತ್ತು. ಅವಳ ಮನೆ ಹೋಗಲಿ, ಮನೆಯ 1 ಕಿಲೋಮೀಟರ್ ಪರಿಧಿಯೊಳಗೂ ಕಾಲಿಡಲು ಧೈರ್ಯ ಸಾಲುತ್ತಿರಲಿಲ್ಲ. ಅಕ್ವೇರಿಯಂ ಒಳಗಿನ ಮೀನಿನಂತಾಗಿ ಹೋಗಿತ್ತು ಜೀವನ.
ಆಕೆಯ ಮಧುವೆ ಇದ್ದದ್ದು ಪೇಟೆಯ ಕಲ್ಯಾಣ ಮಂಟಪದಲ್ಲಿ. ಮದುವೆಯ ಎರಡು ದಿನ ಮೊದಲೇ ತಿಳಿದಿದ್ದು ನನಗೆ ಅಂದು ಆಕೆಯ ಮದುವೆ ಎನ್ನುವುದು. ಪೇಟೆಯ ಅರ್ಧ ಪಾಲು ಜನರೆಲ್ಲಾ ಅಂದು ಅಲ್ಲಿ ನೆರೆದಿದ್ದರು. ಪುಕ್ಸಾಟ್ಟೆಯಾಗಿ ಸಿಗೋ ಬಾಡೂಟವನ್ನ ಗಡತ್ತಾಗಿ ಬಾರಿಸೋ ಕನಸಲ್ಲಿ. ‘ಬೇಡ ಮಗ, ಅವ್ರಪ್ಪ ನಿನ್ನ ಅಲ್ಲಿ ನೋಡಿದ್ರೆ ಸಿಗ್ದು ತೂರ್ಣ ಕಟ್ ಬಿಡ್ತಾನೆ’ ಎಂದ ಇಬ್ಬರು ಗೆಳೆಯರನ್ನ ಅವ್ರು ನನ್ನ ಕಾಲಿಗೆ ಬೀಳ್ತಿವಿ ಅಂದ್ರೂ ಬಿಡದೆ ಕರೆದುಕೊಂಡು ಹೋದೆ.
ಹೂವಿನ ತೋಟವನ್ನೇ ಕಡಿದು ತಂದಿರೋ ಹಾಗಿತ್ತು ಆ ಮದುವೆಯ ಗತ್ತು. ಪೇಟೆಯ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಈ ಹೂವಿನ ಸಿಂಗಾರಗಳು ಕಣ್ಣು ಕುಕ್ಕುವಂತೆ ಕಾಣುವಂತಿದ್ದವು. ‘ಬಾರೋ ಲೇ .. ನೀನು ಸಾಯೋದಲ್ದೆ ನಮ್ಮನ್ನೂ ಸಾಯಿಸ್ತೀಯ’ ಎನ್ನುತ ಗೆಳೆಯರು ತಮ್ಮ ಕೊನೆಯ ಪ್ರಯತ್ನ ಮಾಡಿದರು. ನಾನು ಧೈರ್ಯ ಮಾಡಿ ಹಾಲಿನ ಒಳಗೆ ಕಾಲಿಟ್ಟೆ. ಸುತ್ತಲಿನ ಜನ, ಅವರ ಅರಚಾಟ, ಬಾಡೂಟದ ಘಮ, ಪುರೋಹಿತರ ಮಂತ್ರವಾದ್ಯ, ನಿಶಾನಿಯ ಸದ್ದು, ಮಧುಮಗ, ಓವರ್ ಆಕ್ಟಿಂಗ್ ಮಾಡುತ್ತಾ ಚೀರಾಡುವ ಫೋಟೋಗ್ರಾಫರ್ಸ್ ಗಳು, ಹೂವಿನ ರಾಶಿ, ಎಲ್ಲವೂ ಕಾಣೆಯಾಗಿ ಆಕೆಯೊಬ್ಬಳೇ ನನ್ನ ಕಣ್ಣರವಿಂದಗಳಿಗೆ ಗೋಚರಿಸತೊಡಗಿದಳು. ಅತ್ತು ಬಾತಿದ್ದ ಕೆನ್ನೆ, ಕಣ್ಣೀರಿನ ತೇವ ಆರದ ಆಕೆಯ ಕಣ್ಣುಗಳು ನನ್ನನು ಇನ್ನೂ ಮಂತ್ರಮುಗ್ದನಂತೆ ಮಾಡಿದವು. ಕೊಂಚ ಹೊತ್ತು ಹಾಗೆಯೇ ಕಳೆದ ನನಗೆ ಇಹಲೋಕದ ಅರಿವು ಬಂದಿದ್ದು ಹಿಂದಿನಿಂದ ಯಾರೋ ಬೆನ್ನಿಗೆ ಜೋರಾಗಿ ಗುದ್ದಿದಾಗ. ಸುತ್ತಲಿನ ವಾತಾವರಣವೆಲ್ಲವೂ ಸ್ತಬ್ದವಾಗಿದೆ. ಮಧುಮಗಳು ಎದ್ದು ನಿಂತಿದ್ದಾಳೆ, ಕಣ್ಣೇರಿನ ಕೋಡಿಯನ್ನು ಹರಿಸುತ್ತ. ನನ್ನೊಟ್ಟಿಗೆ ಬಂದಿದ್ದ ಗೆಳೆಯರಿಬ್ಬರು ಕಾಲ್ಕಿತ್ತು ಬಹಳ ಹೊತ್ತೇ ಆಗಿದಿದ್ದಿರಬಹುದು. ಕೂಡಲೇ ಅವರಪ್ಪ ಚೀರುತ್ತಾ ಅರಚುತ್ತಾ ಇತ್ತ ಕಡೆಯೇ ಬರತೊಡಗಿದ. ಅವನ ಆ ರೌದ್ರಾವತಾರದಲ್ಲಿ ನನ್ನ ಕೊನೆಯ ಕ್ಷಣಗಳನ್ನು ಕಾಣತೊಡಗಿದ್ದೆ…!
**********
ವರ್ಷಗಳಾದರೂ ಬದಲಾಯಿಸದ ಸಿಟಿ ಬಸ್ಸಿನ ಹಾರ್ನಿನ ಸದ್ದಿಗೆ ಬೆಚ್ಚಿಬಿದ್ದ ನನಗೆ ವರ್ತಮಾನದ ಅರಿವಾದದ್ದು ಕೆಲ ಸೆಕೆಂಡುಗಳ ನಂತರವೇ! ಅವಳ ನೀಳ ಜಡೆಯ ಮತ್ತಿನಲ್ಲಿ ಭೂತಕಾಲದ ನೆನಪುಗಳೆಲ್ಲ ಮತ್ತೊಮ್ಮೆ ಕದಕಿ, ಮೆಲುಕು ಹಾಕಿ,ಮನಸ್ಸಿಗೊಂದು ನೆಮ್ಮದಿಯನ್ನು ತಂದಿದ್ದವು. ಕೂಡಲೇ ಅತ್ತ ಕಡೆ ಕಣ್ಣಾಯಿಸಿದ ನನಗೆ ಆಕೆ ಕಾಣಲಿಲ್ಲ. ಬಸ್ಸು ಹತ್ತಿ ಹೋಗಿ ಅದೆಷ್ಟು ಹೊತ್ತಾಯಿತೊ. ನಾನು ನಿಟ್ಟುಸಿರನ್ನು ಬಿಡುತ್ತಾ ಸಿಕ್ಕಿದೊಂದು ಬಸ್ಸನ್ನು ಏರಿ ಮನೆಯ ಹಾದಿಯನ್ನು ಹಿಡಿದೇ. ಮಾರ್ಗ ಮದ್ಯದಲ್ಲಿ ಮೊಬೈಲನ್ನು ತೆರೆದು ನೋಡಿದಾ ಗ ನನ್ನಾಕೆಯ ಎರಡು ಮಿಸ್ಡ್ ಕಾಲ್ ಹಾಗು ಒಂದು ಕುಪಿತಗೊಂಡಿರುವ ಇಮೊಜಿ. ಹೆಂಡತಿಯರ ಸಿಟ್ಟಿನಲ್ಲಿ ಇರುವ ಮಜಾ ಅನುಭವಿಸಿದವನಿಗೆ ಗೊತ್ತು. ಮುಗುಳ್ನಗಲು ಹೋಗಿ ಯಾಕೋ ಜೋರಾಗೆ ನಕ್ಕು ಬಿಟ್ಟೆ. ನಗುವುದೇ ಮಹಾಪರಾಧವೇನೋ ಎಂಬಂತೆ ಬಸ್ಸಿನಲ್ಲಿ ಕಷ್ಟಪಟ್ಟು ಉಸಿರಾಡುತಿದ್ದವರು ನನ್ನ ಗುರಾಯಿಸಿದರು.
ಬಸ್ಸನ್ನು ಇಳಿದು ಮನೆಗೆ ಬಂದ ನನಗೆ ಶಾಕ್, ಆಶ್ಚರ್ಯ,ಆಘಾತ ಅಂತಾರಲ್ಲ ಅಂತದೊಂದು ಕಾಡಿತ್ತು. ಹದಿಮೂರು ವರ್ಷದ ನಂತರ ನನ್ನ ಮಾವಯ್ಯ ಈ ಬಡವನ ಮನೆಗೆ ಬಂದಿದ್ದಾನೆ! ಅದೂ ಮಗಳೊಟ್ಟಿಗೆ ಹರಟೆಯೊಡಿಯುತ್ತ ಕಾಫಿಯ ಒಂದೊಂದೇ ಸಿಪ್ಪನ್ನು ಸರ್ರೆಂಬ ಸದ್ದಿನೊಂದಿಗೆ ಒಳಗೆಳೆದುಕೊಳ್ಳುತ್ತಿದ್ದಾನೆ. ಅಲ್ಲೊಂದು ಇಲ್ಲೊಂದು ಇದ್ದ ತಲೆಗೂದಲು ಈಗ ಪೂರ್ತಿ ಕಣ್ಮರೆಯಾಗಿ ತಲೆ ಅಕ್ಷರ ಸಹ ಬಾಣಲಿಯ ಹೊಳಪನ್ನು ಪಡೆದಿದೆ. ಸಂಗೀತ ಶಾಲೆಯ ತಬಲದ ನೆನಪು ಬಂದು ಒಂದೆರೆಡು ಸದ್ದನ್ನು ಈತನ ತಲೆಯಿಂದಲೇ ತೆಗೆಯಬೇಕೆಂಬ ಮನಸ್ಸಾಯಿತು. ಆದರೆ ಬಿಳಿಯಾದರು ಹುಲಿಯಂತಿದ್ದ ಆತನ ಮೀಸೆ ನನ್ನ ಮಾರ್ಮಿಕತೆಗೆ ಏಕ್ದಂ ವಿರಾಮವನ್ನು ನೀಡಿತ್ತು. ನನ್ನನು ನೋಡಿದೊಡನೆಯೇ ವೈರಿಗಳಿಬ್ಬರನ್ನು ಏಕಾಂಗಿಯಾಗಿ ಬಿಟ್ಟು ಸಿಟ್ಟಿನಿಂದ ಮುಖವನ್ನು ಊದಿಸಿಕೊಂಡು ಚಕಚಕನೆ ಒಳನೆಡೆದ ನನ್ನಾಕೆ ನನ್ನನ್ನು ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ತಳ್ಳಿದಳು. ನಾನು ಮಾವ ಕೂತಿದ್ದ ಸೋಫಾದ ಕಟ್ಟಕಡೆಯ ತುದಿಯಲ್ಲಿ ಹೋಗಿ ಕುಳಿತೆ. ಮುಂದಿನ ಸುಮಾರು ಅರ್ಧ ತಾಸಿನವರೆಗೂ ಯಾರೊಬ್ಬರೂ ತುಟಿಕ್ ಪಿಟಿಕ್ ಅನ್ನಲಿಲ್ಲ. ಹೊರಗಿನಿಂದ ಬಂದ ನೊಣವೊಂದು ಮಾವಯ್ಯ ಕುಡಿದು ಇಟ್ಟಿದ್ದ ಕಪ್ಪಿನ ತಳದ ಕಾಫಿಯ ಸಿಹಿಯನ್ನು ಹೀರತೊಡಗಿತ್ತು. ಮಾವಯ್ಯ ಆ ನೊಣವನ್ನೇ ನೋಡುತ್ತಾ ತಲ್ಲೀನನಾಗಿದ್ದ. ಒಳಗಿದ್ದ ನನ್ನಾಕೆಯ ಕಿವಿಗಳೆಲ್ಲವೂ ಇಲ್ಲಿಯೇ ಇವೆಯಂದು ತಿಳಿದಿದ್ದ ನಾನು ಕೊನೆಗೆ ‘ಹೇಗಿದ್ದೀರ ಅಂಕಲ್’ ಎಂದೇ. ಕೂಡಲೇ ಕೀಲಿ ಗೊಂಬೆಗೆ ಜೀವ ಬಂದಂತೆ ಬಡಬಡನೆ ಒದರುತ್ತಾ ಹೋದ ಆಸಾಮಿ ‘ಈ ಸಾರಿ ಮಳೆ ಕಮ್ಮಿ, ನೋಡಣ ದೇವ್ರು ಅಡಿಸ್ದನ್ಗೆ ಆಗ್ಲಿ’ ಅನ್ನೋವಷ್ಟಲ್ಲಿ ನನ್ನ ಸ್ನಾನ ಮುಗಿದಿರುತಿತ್ತು. ‘ನೀವ್ ರೆಸ್ಟ್ ತಗೋಳಿ, ನಾನು ಫ್ರೆಶ್ ಆಗಿ ಬರ್ತೀನಿ’ ಎನ್ನುತ ಒಳ ನಡೆದಾಗ ನನ್ನಾಕೆ ಮೈದಾಹಿಟ್ಟಿನ ರಾಶಿಯ ಮೇಲೆ ಮೇರಿ ಕೋಮ್’ಳಂತೆ ಹಿಂದಿನ ದಿನದ ಜಗಳದ ಸಿಟ್ಟನ್ನು ವ್ಯಕ್ತ ಪಡಿಸುತ್ತಿದ್ದಳು. ಮೆತ್ತಗೆ ಹೋಗಿ ಆಕೆಯ ಕುತ್ತಿಗೆಯ ಮೇಲೊಂದು ಮುತ್ತನಿಟ್ಟು ಹಿತವಾಗಿ ಅಪ್ಪಿಕೊಂಡಾಗ ಕೊಸರಾಡುತ್ತ ಆಕೆ ‘ಬಸ್ ಸ್ಟ್ಯಾಂಡಿನಲ್ಲಿ ಯಾಕೆ ಹಾಗೆ ಪೊರ್ಕಿ ತರ ನನ್ನ ನೋಡ್ತಾ ಇದ್ದೆ’ ಎನ್ನುತ್ತಾ ನನ್ನ ದಬ್ಬಿದಳು. ಉತ್ತರವನ್ನು ಬದಿಗಿಟ್ಟು ಆಕೆಯ ಅಪ್ಪನನ್ನು ಪಕ್ಕದ ರೂಮಿನಲ್ಲಿ ಕೂರಿಸಿ ಇವಳ ಮುದ್ದಾಡುವ ಸಾಹಸವನ್ನು ಮಿಸ್ ಮಾಡ್ಕೋ ಬಾರ್ದು ಎನ್ನುತ್ತಾ ಮುಂದುವರೆದ ನನಗೆ ಅವಳಪ್ಪನ ಕೆಮ್ಮುವ ಸದ್ದು ಬಚ್ಚಲು ಮನೆಯ ಕಡೆಗೆ ಓಟ ಕೀಳುವಂತೆ ಮಾಡಿತ್ತು…