Featured Uncategorized ಅಂಕಣ

ಕ್ವಿಟ್ ಇಂಡಿಯಾ ಕತೆ – 3: ಸೇನೆ ಸೇರಲೊಪ್ಪದವರ ಗದ್ದೆಗೆ ನೀರು ಹರಿಸಲಿಲ್ಲ ಪರಂಗಿಗಳು

ಕ್ವಿಟ್ ಇಂಡಿಯಾ ಕತೆ – 2

ಎರಡು ವರ್ಷದ ಹಿಂದೆ (2015 ಜುಲೈ) ಆಕ್ಸ್’ಫರ್ಡ್ ಯೂನಿಯನ್ ಎಂಬ ಯುರೋಪಿಯನ್ ಸಂಸ್ಥೆಯೊಂದರ ಚರ್ಚಾಕೂಟದಲ್ಲಿ ಪಾಲ್ಗೊಳ್ಳುತ್ತ ಭಾರತದ ಸಂಸದ ಶಶಿ ತರೂರ್, ಪ್ರಪಂಚದಲ್ಲಿ ನಡೆದುಹೋದ ಎರಡು ಮಹಾಯುದ್ಧಗಳಲ್ಲಿ ಭಾರತ ಇಂಗ್ಲೆಂಡಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅವರು ಹೇಳಿದ ಮತ್ತು ಅಧಿಕೃತ ದಾಖಲೆಗಳಲ್ಲಿ ಉಲ್ಲೇಖವಾಗಿರುವ ಅಂಕಿ-ಅಂಶದ ಪ್ರಕಾರ 1939ರಿಂದ 45ರವರೆಗೆ ಆರು ವರ್ಷಗಳ ಕಾಲ ನಡೆದ ಮಹಾಯುದ್ಧದಲ್ಲಿ ಇಂಗ್ಲೆಂಡ್ ಮತ್ತು ಅದರ ಮಿತ್ರರಾಷ್ಟ್ರಗಳ ಗೆಲುವಿಗಾಗಿ ರಣರಂಗದಲ್ಲಿ ಹೋರಾಡಿದ ಒಟ್ಟು ಭಾರತೀಯರ ಸಂಖ್ಯೆ 25 ಲಕ್ಷ ಎಂದರೆ ನೀವು ನಂಬಲೇಬೇಕು! ಯುದ್ಧ ಮುಗಿದ ಮೇಲೆ ಇಂಗ್ಲೆಂಡ್, ತನಗೆ ಸಹಾಯ ಮಾಡಿದ ದೇಶಗಳಿಗೆ ಯುದ್ಧಪರಿಹಾರ ಎಂದು ಕೊಡಬೇಕಿದ್ದ ದುಡ್ಡಲ್ಲಿ ಭಾರತಕ್ಕೆ ಬರಬೇಕಿದ್ದ ಬಾಬ್ತು 12,405 ಕೋಟಿ ರುಪಾಯಿಗಳು! ಆದರೆ ಅದರಲ್ಲಿ ಕೋಟಿ ಬಿಡಿ, ಒಂದು ದುಗ್ಗಾಣಿಯನ್ನು ಕೂಡ ಪರಂಗಿ ಸರಕಾರ ಭಾರತಕ್ಕೆ ಕೊಡಲಿಲ್ಲ.

ಎರಡನೇ ಮಹಾಯುದ್ಧದ ಪ್ರಸ್ತಾಪ ಈಗ ಯಾಕೆ ಎಂದರೆ, ಭಾರತದಲ್ಲಿ 1940ರಿಂದ 47ರವರೆಗಿನ ಏಳೆಂಟು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ನಡೆದ ಎಲ್ಲ ರಾಜಕೀಯ ಘಟನಾವಳಿಗಳಿಗೂ ಈ ಮಹಾಯುದ್ಧದ ಹಿನ್ನೆಲೆ ಇದೆ. ಹಿಂದಿನ ಭಾಗಗಳಲ್ಲಿ ಓದಿದಂತೆ, ಭಾರತದಲ್ಲಿ 1942ರ ಉತ್ತರಾರ್ಧದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾಗಿದ್ದೇ ಯುರೋಪಿನಲ್ಲಿ ಮಹಾಯುದ್ಧ ನಡೆಯುತ್ತಿದೆ ಎಂಬ ಕಾರಣಕ್ಕೆ. ಇಂಗ್ಲೆಂಡ್ ತನ್ನ ಸುತ್ತಮುತ್ತಲಿನ ದೇಶಗಳ ಜೊತೆ ಹೊಡೆದಾಟಕ್ಕೆ ನಿಂತುಬಿಟ್ಟಿದೆ; ಇಂಥ ಸಂದರ್ಭದಲ್ಲೇ ಭಾರತ ಕೂಡ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು ಎಂಬುದು ಗಾಂಧಿಯವರ ಇಂಗಿತವಾಗಿತ್ತು. ಮುಂಬೈಯಲ್ಲಿ ನಡೆದ ಸಮಾವೇಶದಲ್ಲಿ ಕೂಡ ಅವರು ಅದನ್ನೇ ಸೂಚ್ಯವಾಗಿ ಹೇಳಿದ್ದರು. “ಇದು ಪ್ರತಿಯೊಬ್ಬ ಭಾರತೀಯನ ಬಾಳಿನಲ್ಲಿ ಬರಬಹುದಾದ ಏಕೈಕ ಅವಕಾಶ. ಇದನ್ನು ಕಳೆದುಕೊಳ್ಳಬೇಡಿ. ಮಾಡು ಇಲ್ಲವೇ ಮಡಿ ಎಂಬ ಸಂಕಲ್ಪ ತೊಟ್ಟು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಹೋರಾಟದಲ್ಲಿ ಪಾಲ್ಗೊಳ್ಳಿ” ಎಂದಿದ್ದರು ಗಾಂಧಿ. ಲೋಹ ಕಾದು ಕೆಂಪಗಾದಾಗಲೇ ಸುತ್ತಿಗೆಯಿಂದ ಹೊಡೆಯಬೇಕು ಎಂಬುದು ಅವರ ಮಾತಿನ ಅಂತರಾರ್ಥವಾಗಿತ್ತು. 1942ರ ಅಕ್ಟೋಬರ್ ಹೊತ್ತಿಗೆ ಮುಂಬೈ, ಅಹಮದಾಬಾದ್, ಪುಣೆ, ಕಾನ್ಪುರ್, ದೆಹಲಿ, ವಾರಾಣಸಿ, ಅಲ್ಲಹಾಬಾದ್, ಪಾಟ್ನಾ, ಜೆಮ್‍ಷೆಡ್‍ಪುರ ಮುಂತಾದ ಕಡೆಗಳಲ್ಲಿ ವ್ಯಾಪಕ ಹಿಂಸೆ, ದೊಂಬಿ, ಹೋರಾಟ, ಸತ್ಯಾಗ್ರಹಗಳು ನಡೆಯುತ್ತಿದ್ದವು. ಗಾಂಧಿ, ನೆಹರೂ ಮುಂತಾದ ಕಾಂಗ್ರೆಸ್‍ನ ಪ್ರಮುಖ ನಾಯಕರು ಆಗಸ್ಟ್ ಎರಡನೇ ವಾರದಲ್ಲೇ ಪೊಲೀಸರಿಂದ ಬಂಧಿತರಾಗಿ ಜೈಲುಪಾಲಾಗಿದ್ದರೂ ಸುಚೇತಾ ಕೃಪಲಾನಿ, ಅರುಣಾ ಅಸಫ್ ಅಲಿ, ರಾಮ ಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಮುಂತಾದ ನಾಯಕರು ಪೊಲೀಸರ ಕೈಗೆ ಸಿಗದೆ ತಮ್ಮ ಹೋರಾಟ ಮುಂದುವರಿಸಿದ್ದರು. ಇಡೀ ದೇಶದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಕಾಳ್ಗಿಚ್ಚಿನಂತೆ ಹಬ್ಬಲು ಕಾರಣರಾದವರು ಇವರೇ ಎನ್ನಬೇಕು.

ಭಾರತದಲ್ಲಿ ಪರಿಸ್ಥಿತಿ ಹೀಗೆ ಕೈ ಮೀರಿ ಹೋಗುತ್ತಿದ್ದರೂ ಬ್ರಿಟಿಷರು ಅದನ್ನು ಹಿಂದಿನಂತೆ ಶಕ್ತಿಶಾಲಿಯಾಗಿ ನಿಯಂತ್ರಿಸುವ ಸ್ಥಿತಿಯಲ್ಲಿ ಈಗ ಇರಲಿಲ್ಲ. 1940ರಿಂದಲೂ ಜರ್ಮನ್ನರ ಕೈ ಮೇಲಾಗುತ್ತಿದ್ದುದನ್ನು ಅವರು ಹತಾಶೆಯಿಂದ ನೋಡುತ್ತ ಕೂರುವ ಪರಿಸ್ಥಿತಿ ಬಂದಿತ್ತು. ಬ್ರಿಟಿಷ್ ಮತ್ತು ಫ್ರೆಂಚ್ ಸೇನೆಯ ಮೂರೂಮುಕ್ಕಾಲು ಲಕ್ಷ ಸೈನಿಕರನ್ನು ಜರ್ಮನ್ನರು ಡನ್‍ಕರ್ಕ್ ಮತ್ತು ಕ್ಯಾಲೇ ಎಂಬ ಎರಡು ಬಂದರು ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸುತ್ತುವರಿದು ಭಯದಿಂದ ಕುಸಿದುಹೋಗುವಂತೆ ಮಾಡಿದ್ದರು. ತಮ್ಮನ್ನು ಕೋಟೆಯಂತೆ ಸುತ್ತುವರಿದ ನಾಝಿ ಪಡೆಯಿಂದ ಪಾರಾಗಲು ಇಂಗ್ಲೀಷ್ ಮತ್ತು ಫ್ರೆಂಚ್ ಸೈನಿಕರು ರಾತ್ರಿಬೆಳಗಾಗುವುದರಲ್ಲಿ ಸಿಕ್ಕ ಸಿಕ್ಕ ವರ್ತಕ ದೋಣ /ಹಡಗುಗಳಲ್ಲಿ ರಕ್ಷಣೆ ಬೇಡಿ ಹೇಗೋ ಇಂಗ್ಲೆಂಡಿಗೆ ಹೋಗಿ ಜೀವ ಉಳಿಸಿಕೊಳ್ಳುವ ಪರಿಸ್ಥಿತಿ ಬಂದಿತ್ತು. ಅದಾಗಿ ಮರುವರ್ಷ ಇಂಗ್ಲೆಂಡ್ ಸೇನೆ ಗ್ರೀಸ್, ಕ್ರೀಟ್ ಮತ್ತು ಉತ್ತರ ಆಫ್ರಿಕಾಗಳಲ್ಲಿ ನಡೆದ ಯುದ್ಧಗಳಲ್ಲಿ ದಾರುಣ ಸೋಲು ಕಂಡಿತು. ಅದರ ನಂತರದ ವರ್ಷದಲ್ಲಂತೂ ಅದಕ್ಕೆ ಮುಖಭಂಗವಾಗುವ ಪ್ರಸಂಗಗಳು ಮತ್ತಷ್ಟು ಹೆಚ್ಚಾದವು. ಮಲಯದ ನೆಲದಲ್ಲಿ ಕೇವಲ 25,000ದಷ್ಟಿದ್ದ ಜಪಾನೀಯರ ಸೇನೆ ಬರೋಬ್ಬರಿ 1 ಲಕ್ಷ ಬ್ರಿಟಿಷ್ ಯೋಧರನ್ನು ಮಣ್ಣುಮುಕ್ಕಿಸಿಬಿಟ್ಟರು. ಸಿಂಗಾಪುರದಲ್ಲಿಯೂ ಬ್ರಿಟಿಷರು ಮೊದಲ ಸುತ್ತಿನ ಹೋರಾಟದಲ್ಲಿ ತಮ್ಮ ವಸಾಹತು ನೆಲೆಯನ್ನು ಜಪಾನೀಯರಿಗೆ ಕಳೆದುಕೊಂಡರು. ಅವೆರಡೇ ಅಲ್ಲ, ಪೂರ್ವ ಏಷ್ಯದಲ್ಲಿ ನಡೆದ ಹತ್ತಕ್ಕೂ ಹೆಚ್ಚಿನ ಯುದ್ಧಗಳಲ್ಲಿ ಬಿಳಿಯರು ಜಪಾನೀಯರ ಸೇನೆಗೆ ಸೋತು ತಲೆದಂಡ ಕೊಡುವ ಪರಿಸ್ಥಿತಿ ಬಂತು. ವೈಸ್ ಅಡ್ಮಿರಲ್ ಆಗಿದ್ದ ಜೆಫ್ರಿ ಲೇಟನ್ ತನ್ನ ಮಾತೃನೆಲದ ಸೇನೆಯ ದುರವಸ್ಥೆಯನ್ನು ನೋಡಿ ಹಳಿಯುತ್ತ Man for man, our men were inferior to the Japanese in training and in the moral qualities of audacity, tenacity, discipline and devotion.  (ಜಪಾನೀ ಸೈನಿಕರಿಗೆ ಹೋಲಿಸಿದರೆ ನಮ್ಮವರು ಮುನ್ನುಗ್ಗುವ ಛಲ, ವೀರ, ಶಿಸ್ತು ಮತ್ತು ಶ್ರದ್ಧೆಯ ವಿಷಯಗಳಲ್ಲಿ ಹಿಂದಿದ್ದಾರೆ) ಎಂದು ಷರಾ ಬರೆದ. ಅವುಗಳಲ್ಲಿ ಮುಖ್ಯವಾಗಿ ಸಿಂಗಾಪುರದಲ್ಲಿ ನಡೆದ ಯುದ್ಧವನ್ನು ನಾವು ಗಮನಿಸಬೇಕು. ಆ ಯುದ್ಧ ನಡೆದದ್ದು ಕೇವಲ 70 ದಿನಗಳ ಕಾಲ. ಆ ಎರಡು ತಿಂಗಳು, ಹತ್ತು ದಿನಗಳ ಅವಧಿ ಮುಗಿಯುವಷ್ಟರಲ್ಲಿ ಇಂಗ್ಲೀಷರ ಸೇನೆ ತನ್ನ ಪ್ರತಿಷ್ಠೆ ಕಳೆದುಕೊಂಡು ಅರೆಜೀವವಾಗಿ ಬಿದ್ದಿತ್ತು. “ದ ಸಿಂಗಾಪೂರ್ ಸ್ಟೋರಿ” ಕೃತಿ ಬರೆದ ಲೀ, “ಬ್ರಿಟಿಷರ ಸೇನಾಬಲ ಮಾತ್ರವಲ್ಲ ಅವರ ಗತ್ತುಗಾರಿಕೆ-ಅಹಮ್ಮುಗಳೂ ಮಣ್ಣುಮುಕ್ಕಿದವು” ಎಂದು ಬರೆದಿದ್ದಾರೆ.

ಇಲ್ಲಿ ಇನ್ನೊಂದು ಪ್ರಮುಖ ಸಂಗತಿಯನ್ನೂ ನಾವು ಗಮನಿಸಬೇಕು. ಒಂದಾನೊಂದು ಕಾಲದಲ್ಲಿ ಅತ್ಯಂತ ಶಿಸ್ತಿನ ಸೈನ್ಯ ಎಂದು ಹೆಸರಾಗಿದ್ದ ಬ್ರಿಟಿಷ್ ಸೇನಾಪಡೆ ಹತ್ತೊಂಬತ್ತನೇ ಶತಮಾನದಲ್ಲಿ ಭ್ರಷ್ಟಾಚಾರದಿಂದಾಗಿ ತನ್ನ ಸತ್ವ ಕಳೆದುಕೊಂಡು ಅಧೋಗತಿಗಿಳಿವುದಕ್ಕೆ ಪ್ರಾರಂಭಿಸಿತು. ಮೈ-ಮನಸ್ಸುಗಳನ್ನು ಸಜ್ಜುಗೊಳಿಸಿಕೊಂಡು ಯುದ್ಧಭೂಮಿಯಲ್ಲಿ ಕಾದುವುದಕ್ಕೆ ಸಿದ್ಧರಿರಬೇಕಿದ್ದವರು ಅಧಿಕಾರಿಗಳ ಹುದ್ದೆಗಳಿಗೇರಿ ತಮ್ಮ ವಸಾಹತುಗಳ ಮೇಲೆ ಅಧಿಕಾರ ಚಲಾಯಿಸುವುದಕ್ಕೆ ಸೀಮಿತಗೊಂಡಿದ್ದರು. ಅಧಿಕಾರಶಾಹಿಯ ಎಲ್ಲ ದುರಾಸೆ, ದುಶ್ಚಟ, ದುರ್ಬುದ್ಧಿಗಳೂ ಅವರಲ್ಲಿ ಮನೆ ಮಾಡಿದ್ದವು. ಮಲಯದಲ್ಲಿ ಇನ್ನೇನು ಸೋತು ಶರಣಾಗಬೇಕಾದ ಪರಿಸ್ಥಿತಿ ಇದೆ ಎಂದು ತುರ್ತಾಗಿ ಆಸ್ಟ್ರೇಲಿಯಾದಿಂದ ಸೇನಾ ತುಕಡಿ ಕರೆಸಿದರೆ ಆ ತುಕಡಿಯಲ್ಲಿದ್ದ ಯೋಧರು ಯುದ್ಧದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದು ಬಿಟ್ಟು ಲೂಟಿ, ಅತ್ಯಾಚಾರ, ಕುಡಿತ, ಕಳ್ಳತನ, ಜೂಜು, ಕೊಲೆಗಳಂಥ ಅಪಸವ್ಯಗಳಲ್ಲಿ ತೊಡಗಿಕೊಂಡರಂತೆ. ಮಲಯ ಯುದ್ಧದ ಪ್ರತ್ಯಕ್ಷದರ್ಶಿಯೊಬ್ಬ ಬರೆಯುತ್ತಾನೆ: “ಜಪಾನೀಯರು ದಾಳಿ ಮಾಡಿದಾಗ ಅವರನ್ನು ಎದುರಿಸುವುದನ್ನು ಬಿಟ್ಟು ಬ್ರಿಟಿಷರು ಕಾಲ್ಕಿತ್ತರು. ಅದುವರೆಗೂ ಬಂಗಲೆ ಕಟ್ಟಿಕೊಂಡು, ಕೈಗೊಂದು ಕಾಲಿಗೊಂದು ಎಂಬಂತೆ ಆಳುಗಳನ್ನಿಟ್ಟು ಮಜಾ ಉಡಾಯಿಸುತ್ತಿದ್ದ, ಮೂರು ಹೊತ್ತು ತಿಂದುಂಡು ಆರಾಮಾಗಿದ್ದ ಬ್ರಿಟಿಷರು ಜಪಾನೀ ಸೇನೆ ಬರುತ್ತಿದ್ದಂತೆಯೇ ಭಾರತಕ್ಕೆ ಓಡಿಹೋದರು. ಅಲ್ಲಿ ಹೋದ ಮೇಲೆ ಅಲ್ಲಿನ ಗೂರ್ಖರು, ಸಿಖ್ಖರು, ಮರಾಠರು ಮತ್ತು ಮದರಾಸಿ ರೆಜಿಮೆಂಟಿನ ಯೋಧರನ್ನು ಜಪಾನೀಯರ ಜೊತೆ ಯುದ್ಧ ಮಾಡಲು ಕಳಿಸಿದರು”.

ಮಹಾಯುದ್ಧಕ್ಕೆ ಸಂಬಂಧಿಸಿದ, ಐರೋಪ್ಯ ಇತಿಹಾಸಕಾರರ ಪುಸ್ತಕಗಳನ್ನು ಓದುವಾಗ ನಮ್ಮ ಕಣ್ಣುಗಳಿಗೆ ತಟ್ಟನೆ ಕಾಣುವ ಸಂಗತಿ – ಎರಡನೇ ಮಹಾಯುದ್ಧದಲ್ಲಿ ಭಾರತೀಯರ ಪಡೆಯೇ ಅತಿದೊಡ್ಡ ವಾಲಂಟರಿ ಆರ್ಮಿ – ಅರ್ಥಾತ್, ತಾನಾಗಿ ಮುಂದೆ ಬಂದು ಯುದ್ಧದಲ್ಲಿ ತೊಡಗಿಸಿಕೊಂಡ ಸಮುದಾಯ. 1939ರಲ್ಲಿ 80,000ದಿಂದ ಪ್ರಾರಂಭವಾದ ಸೇನೆಯ ಸಂಖ್ಯೆ ಬೆಳೆಯುತ್ತ ಹೋಗಿ 1945ರ ಆಗಸ್ಟ್ ಹೊತ್ತಿಗೆ 25 ಲಕ್ಷ ಮುಟ್ಟಿತು! ಅತ್ತ ಕಾಬೂಲ್‍ನಿಂದ ಇತ್ತ ಮಯನ್ಮಾರಿನವರೆಗೆ, ಉತ್ತರದಲ್ಲಿ ಚೀನಾದಿಂದ ದಕ್ಷಿಣದಲ್ಲಿ ಶ್ರೀಲಂಕೆಯವರೆಗೆ ಹರಡಿಕೊಂಡಿದ್ದ ಅಖಂಡ ಭಾರತದಲ್ಲಿ ಆಗ ಇದ್ದ ಜನಸಂಖ್ಯೆ ಅಜಮಾಸು 50 ಕೋಟಿ. ಅದರಲ್ಲಿ ಕಾಲು ಕೋಟಿಯಷ್ಟು ಜನ ಬ್ರಿಟಿಷರ ಪರವಾಗಿ ಬಂದೂಕು ಹಿಡಿದು, ಸೊಂಟಕ್ಕೆ ಬುಲೆಟ್ಟುಗಳ ಮಾಲೆ ಹಾಕಿಕೊಂಡು ಯುರೋಪ್, ಏಷ್ಯ ಮತ್ತು ಆಫ್ರಿಕ ಖಂಡಗಳ ವಿವಿಧ ಭಾಗಗಳಲ್ಲಿ ಸಮರನಿರತರಾಗಿದ್ದರು. ಭಾರತೀಯ ಯೋಧರು ಬ್ರಿಟಿಷರು ಮತ್ತು ಮಿತ್ರರಾಷ್ಟ್ರಗಳ ಪರವಾಗಿ ಇಥಿಯೋಪಿಯಾದಲ್ಲಿ ಇಟೆಲಿ ಸೇನೆಯ ವಿರುದ್ಧ ಕಾದಾಡಿದರು. ಇಟಾಲಿಯನ್ ಮತ್ತು ಜರ್ಮನ್ ಸೇನೆಗಳ ವಿರುದ್ಧ ಈಜಿಪ್ಟ್, ಲಿಬಿಯಾ ಹಾಗೂ ಟ್ಯುನೀಷಿಯಾಗಳಲ್ಲಿ ಹೋರಾಡಿದರು. ಇಟೆಲಿಯು ಮಿತ್ರರಾಷ್ಟ್ರಕೂಟಕ್ಕೆ ಶರಣಾದ ಮೇಲೆ ಭಾರತೀಯ ಸೈನಿಕರು ಇಟೆಲಿಯ ನೆಲದಲ್ಲಿ ನಿಂತು ಜರ್ಮನಿಯ ವಿರುದ್ಧ ಸೆಣಸಿದರು. ಹಾಗೆಯೇ ಭಾರತೀಯ ಸೇನೆಯ ಇನ್ನೊಂದು ಭಾಗ ಮಲಯ ಮತ್ತು ಬರ್ಮಾ ನೆಲಗಳಲ್ಲಿ ಜಪಾನೀ ಯೋಧರ ವಿರುದ್ಧವೂ ಬವರದಲ್ಲಿ ಬೆವರು ಹರಿಸಿತು. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಯುದ್ಧದಲ್ಲಿ ತೊಡಗಿಕೊಂಡ ಭಾರತೀಯರಲ್ಲಿ ಅರ್ಧದಷ್ಟು ಜನ ಕೂಡ ಸ್ವಯಂಸ್ಫೂರ್ತಿಯಿಂದ ಮುಂದೆ ಬಂದವರಾಗಿರಲಿಲ್ಲ! ಅವರಿಗೆ ಹೆಚ್ಚು ಸಂಬಳದ ಆಮಿಷ ತೋರಿಸಲಾಗಿತ್ತು. ಮೇಲಿಂದ ಮೇಲೆ ಕಾಡುತ್ತಿದ್ದ ಬರಗಾಲ, ಹೊಟ್ಟೆಬಟ್ಟೆ ಕಟ್ಟಿ ಸರಕಾರಕ್ಕೆ ಕಟ್ಟಬೇಕಿದ್ದ ಭಾರೀ ತೆರಿಗೆ, ದೇಶಾದ್ಯಂತ ಕಾಡುತ್ತಿದ್ದ ನಿರುದ್ಯೋಗ ಸಮಸ್ಯೆ, ಬೆಳೆಯುತ್ತಿದ್ದ ಜನಸಂಖ್ಯೆ – ಇವೆಲ್ಲ ಸಮಸ್ಯೆಗಳಿಂದ ಕೆಸರಲ್ಲಿ ಕಾಲು ಹೂತವರಂತಾಗಿದ್ದ ಭಾರತೀಯ ಯುವಕರಿಗೆ ಆಗ ಕಾಣ ಸುತ್ತಿದ್ದ ಏಕೈಕ ಆಶಾಕಿರಣವೆಂದರೆ ಸೇನೆ! ಒಮ್ಮೆ ಸೈನ್ಯ ಸೇರಿಬಿಟ್ಟರೆ ಹೊಟ್ಟೆಬಟ್ಟೆಗಳ ಚಿಂತೆ ಮಾಡಬೇಕಿಲ್ಲ; ತಿಂಗಳ ಸಂಬಳದಲ್ಲಿ ದೊಡ್ಡ ಭಾಗವನ್ನು ಉಳಿಸಿ ಮನೆಗೆ ಖರ್ಚಿಗೆಂದು ಕಳಿಸಬಹುದು ಎಂಬ ಆಸೆಗಾಗಿ ಸೇನೆ ಸೇರಿ ಎಡ ಬಲ ಮಾಡಿದವರಿದ್ದರು. ಇನ್ನು ಕೆಲವರನ್ನು ಬ್ರಿಟಿಷ್ ಅಧಿಕಾರಿಗಳೇ ಒತ್ತಾಯಪೂರ್ವಕ ಸೇನೆಗೆ ಭರ್ತಿ ಮಾಡಿಕೊಂಡರು. ಹಳ್ಳಿಗಳಲ್ಲಿ ಯುವಕರನ್ನು ವಿವಸ್ತ್ರಗೊಳಿಸಿ, ತಾಸುಗಟ್ಟಲೆ ಬಿಸಿಲಲ್ಲಿ ನಿಲ್ಲಿಸಿ, ಜೈಲಲ್ಲಿ ಹಾಕಿ ಉಪವಾಸ ಕೆಡವಿ, ಒಟ್ಟಾರೆ ಕಾಮಾಟಿಪುರದ ರಕ್ಕಸರು ಎಳೆ ಹುಡುಗಿಯರ ಮೇಲೆ ಏನೆಲ್ಲ ಶಿಕ್ಷೆ ಜಾರಿಗೊಳಿಸಿ ಮೈ ಮಾರಲು ಒಪ್ಪಿಸುತ್ತಾರೋ ಅಂಥ ಎಲ್ಲ ಬಗೆಯ ತಂತ್ರಗಳನ್ನು ಯುವಕರ ಮೇಲೆ ಬಳಸಿ ಸೇನೆ ಸೇರಲು ಒಪ್ಪಿಕೊಳ್ಳುವಂತೆ ಮಾಡಿದರು. ಹರ್ಯಾಣದ ಹಳ್ಳಿಗಳಲ್ಲಿ ಬ್ರಿಟಿಷ್ ಸೇನೆ ಸೇರಲು ಒಪ್ಪದವರ ಗದ್ದೆಗಳಿಗೆ ನೀರಿನ ಸೌಕರ್ಯ ಸಿಗದಂತೆ ನೋಡಿಕೊಳ್ಳಲಾಯಿತು! ಹೀಗೆಲ್ಲ ಮಾಡಿ ಕಟ್ಟಿದ ಸೇನೆಗೆ “ಆಳುವ ಬಿಳಿಯರ ಪರ ಹೋರಾಡಲು ಸ್ವಯಂಸ್ಫೂರ್ತಿಯಿಂದ ಮುಂದೆ ಬಂದ ಸ್ವಾಮಿಭಕ್ತ ಯುವಕರ ದಂಡು” ಎಂಬ ಬಿರುದಾವಳಿ ಅಂಟಿಸಲಾಯಿತು ಎಂಬುದಕ್ಕಿಂತ ಘೋರ ವ್ಯಂಗ್ಯ ಇದೆಯೆ? ಇದೆ! ಬ್ರಿಟನ್ ಇಂಥ ಗಂಡಾಂತರದಲ್ಲಿ ಸಿಕ್ಕಿಕೊಂಡಿದ್ದ ಸಮಯದಲ್ಲಿ ಮಹಾತ್ಮಾ ಗಾಂಧಿ ಭಾರತದಲ್ಲಿ ಆ ಸಾಮ್ರಾಜ್ಯದ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯನ್ನು ಹಮ್ಮಿಕೊಂಡರು ಮತ್ತು ಅದು ಭಾರತದ ಬಹುದೊಡ್ಡ ಸ್ವಾತಂತ್ರ್ಯ ಸಂಗ್ರಾಮ ಎಂಬಂತೆ ಕಾಂಗ್ರೆಸ್ ಇಷ್ಟು ವರ್ಷಗಳಿಂದ ಬಿಂಬಿಸಿಕೊಂಡು ಬಂದಿದೆ ಎಂಬುದು ಬಹುಶಃ ಎಲ್ಲಕ್ಕಿಂತ ದೊಡ್ಡ ವ್ಯಂಗ್ಯ.

(ಮುಂದುವರಿಯುವುದು)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!