Uncategorized

ವಲಸಿಗರಾರಲ್ಲ?, ವಲಸೆಯು ನಿಂತರೆ ಬದುಕಿಲ್ಲ !

ನಮ್ಮೂರಿನವರಲ್ಲ, ಸದ್ಯಕ್ಕೆ ನಮಗೆ ಉಪಯೋಗವಿಲ್ಲೆಂದಾಕ್ಷಣ, ನಮಗಾಗಿ ಈ ತನಕ ದುಡಿಯುತ್ತಿದ್ದವರನ್ನು ಮರೆತೇ ಬಿಟ್ಟೇವೆ? ಅವರನ್ನು, ಅವರ ಭಾವನೆಯನ್ನು ನಿರ್ಲಕ್ಷಿಸುವಷ್ಟು ಕೃತಘ್ನರಾಗಿಬಿಟ್ಟಿತೇ ನಮ್ಮ ನಾಗರೀಕ ಸಮಾಜ? ಈ ಭಾವನೆ, ಕರೋನಾ ಹೋರಾಟದಲ್ಲಿ ಶ್ರಮಿಕರನ್ನು ನಡೆಸಿಕೊಂಡ ರೀತಿ ನೋಡಿ, ನನ್ನಂತೆ ಬಹುತೇಕರಿಗೆ ಅನಿಸಿರಲೇಬೇಕು. ಯಾರೀ ವಲಸಿಗರು? ಕಾರ್ಮಿಕರು? ಈ ಬವಣೆ ಭಾರತಕ್ಕಷ್ಟೇ ಸೀಮಿತವೇ? ಬೇರೆಡೆ ಇಂತಹ ಸಮಸ್ಯೆಗಳಿಲ್ಲವೇ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇದನ್ನೇ ತುಸು ಕೆದುಕಿ ಕೊಂಚ ಆಳಕ್ಕೆ ನನ್ನೊಂದಿಗೆ ನಿಮ್ಮನ್ನೂ ಕರೆದೊಯ್ಯುವ ಪ್ರಾಮಾಣಿಕ ಪ್ರಯತ್ನವೇ ನನ್ನ ಈ ಬರಹ.

ಕೋವಿಡ್ ದಾಳಿಗೆ ತತ್ತರಿಸಿ ವಿಶ್ವವೆಲ್ಲ ನಲುಗಿ ಹೋಗಿರುವ ದಿನಗಳಲ್ಲಿ ಮನಕಲಕುವ, ಊಹಿಸಲಾರದ ಹಲವು ದಾರುಣ ಚಿತ್ರಣಗಳ ಮರೆವಣಿಗೆ ಸಾಗಿಬಂದಿದೆ. ಇದರಲ್ಲಿ ಒಂದು ವಲಸೆ ಕಾರ್ಮಿಕರ ಕರುಣಾಜನಕ ಪರಿಸ್ಥಿತಿ, ಮತ್ತವರ ಛಲ, ಅವರನ್ನು ನಮ್ಮ ಸಮಾಜ ನಡೆಸಿಕೊಂಡ ಪರಿ. ಜಗತ್ತಿನಾದ್ಯಂತ ಸರ್ಕಾರಗಳು ಹಠಾತ್ತನೆ ಹೊರಡಿಸಿದ ನಿರ್ಬಂಧ ಇಂತಹ ಸ್ಥಿತಿಗಳ ಜನಕನಾದರೂ, ಸುತ್ತ ಮುತ್ತಲಿನವರ ಯೋಗ ಕ್ಷೇಮದ ಹೊಣೆ ನಾಗರೀಕ ಸಮಾಜದ್ದೂ ಕೂಡಾ. ಅದಕ್ಕಾಗಿಯೇ, “ಈ ಸಮಾಜ ನಡೆಸಿಕೊಂಡ ಪರಿ”, ಎಂದು ನಾನು ಉಲ್ಲೇಖಿಸಿರುವುದು.
” ಏನು ಪ್ರಪಂಚವಿದು! ಏನು ಧಾಳಾಧಾಳಿ!। ಏನದ್ಭುತಾಪಾರ ಶಕ್ತಿ ನಿರ್ಘಾತ ।। ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?। ಏನರ್ಥವಿದಕೆಲ್ಲ? ಮಂಕುತಿಮ್ಮ।। ” ಎಂಬ ಡಿವಿಜಿಯವರ ಕಗ್ಗದ ಸಾಲುಗಳು ಈ ಅನಿಶ್ಚಿತೆಯ ಸ್ವರೂಪವನ್ನು ಬಿಚ್ಚಿಡುತ್ತದೆ ಅನಿಸುತ್ತಿದೆ.

ಇದರಲ್ಲಿ ಕೆಲ ವಲಸಿಗರು ಉತ್ತಮ ಉದ್ಯೋಗ, ಸಂಪಾದನೆಯಿಂದ ತಾವಿರುವ ಊರಿನಲ್ಲಿ ನೆಲೆಯೊಂದನ್ನು ಕಟ್ಟಿಕೊಂಡಿದ್ದರೂ, ಬಹುತೇಕರು ತಾತ್ಕಾಲಿಕ ಉದ್ಯೋಗ ಅರಸಿ ಬಂದವರು. ಇವರಿಗೆ ತಾವು ಕೆಲಸ ಮಾಡುತ್ತಿರುವ ಕಟ್ಟಡಗಳೋ, ಕಾರ್ಖಾನೆಗಳೋ, ಹೋಟೆಲಗಳೇ ಅವರ ನೆರಳಿನ ನೆಲೆಯಾಗಿದ್ದವು. ಈ ಪರಿಸ್ಥಿತಿಯಲ್ಲಿ ಹಠಾತ್ತನೆ ಬಂದಪ್ಪಳಿಸಿದ ಕೋವಿಡ್ ದಾಳಿಯ ನಿಯಂತ್ರಣಕ್ಕೆ ಲಾಕ್ಡೌನ್ ನಿರ್ಬಂಧ ಘೋಷಿಸಿದ ಸರ್ಕಾರದ ನೆಡೆ, ವಲಸಿಗರ ಬದುಕು ಮತ್ತವರ ಸೂರು ಎರಡನ್ನೂ ಹಠಾತ್ತನೆ ಕಸಿದುಕೊಂಡಿತು ಎಂಬುದು ಅತಿಶಯವಲ್ಲ. ಆದರೆ ಕೆಲಸವಿಲ್ಲಾ ಎಂದಾಕ್ಷಣ ಅವರನ್ನ ನೋಡಿಕೊಳ್ಳಲಾಗದಷ್ಟು, ಕೆಲ ದಿನಗಳ ಆಸರೆ ನೀಡಲಾಗದಷ್ಟು ಸ್ವಾರ್ಥಿಯಾಯಿತೇ ನಮ್ಮ ಸಮಾಜ?

“ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಎಂದು ಹದಿನೈದನೇ ಶತಮಾನದಲ್ಲಿ ಕನಕದಾಸರು ಹೇಳಿಲ್ಲವೇ? ನಾನಾ ವೃತ್ತಿಯಲ್ಲಿ ಮನುಜ ತೊಡಗಿಕೊಳ್ಳುವುದು ಹಸಿವು, ಮಾನ ಉಳಿಸಿಕೊಳ್ಳುವುದ್ದಕ್ಕಾಗಿ ಎಂಬ ರಹಸ್ಯ ಇದರಲ್ಲಿ ಅಡಕವಾಗಿದೆ. ಆಹಾರ, ಉದ್ಯೋಗ, ಗುಣಮಟ್ಟದ ಬದುಕಿನ ಹುಡುಕಾಟಗಳಲ್ಲಿ ಮನುಷ್ಯ ಮುಂಚಿನಿಂದಲೂ ಚಲನಶೀಲ. ಇದರ ಪರಿಣಾಮವೇ ವಲಸೆ! ಪ್ರಾಣಿ ಪಕ್ಷಿಗಳಿಗೂ ವಲಸೆ ಬದುಕಿನ ಅವಿಭಾಜ್ಯ ಅಂಶ. ಜಾಗತೀಕರಣದ ನೆರಳಲ್ಲಿ ದಾಪುಗಾಲಿಡುತ್ತಿರುವ ಜಗತ್ತು, ಜಾಗತಿಕ ಆರ್ಥಿಕತೆ, ಈ ವಲಸೆಯ ವೇಗ, ಧಾವಂತವನ್ನು ಹೆಚ್ಚಿಸಿದೆ. ಆಧುನಿಕ ತಂತ್ರಜ್ಞಾನ ಜಗವನೇ ಮನೆಯಂಗಳವಾಗಿಸಿ, ವಲಸೆಯ ನಿಜಸ್ವರೂಪ, ಪರಿಣಾಮಗಳನ್ನು ಮರೆಮಾಚಿಸಿತಷ್ಟೇ! ಹಠಾತ್ತನೇ ಬಂದಪ್ಪಳಿಸಿದ ಕೋವಿಡ್ ಕಂಟಕ ಮುಸಕನ್ನು ಸರಿಸಿದೆ.

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO)ಯ ಅಂಕಿ ಅಂಶಗಳ ಪ್ರಕಾರ 73% ರಷ್ಟು ವಲಸಿಗರು ಕಾರ್ಮಿಕರು. ಇವರೆಲ್ಲರೂ ಒಂದಲ್ಲ ಒಂದು ರೀತಿಯ ಶ್ರಮಿಕರೇ! ಅಂದಾಜಿನಂತೆ, ಜಗತ್ತಿನಾದ್ಯಂತ 244 ಮಿಲಿಯನ್ (24 ಕೋಟಿ )ಯಷ್ಟು ದಾಖಲಿತ ವಲಸಿಗರಿದ್ದಾರೆ, ಜಗತ್ತಿನ ಒಟ್ಟು ಜನಸಂಖ್ಯೆಯ 3.3% ರಷ್ಟು. ಇದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಹೋದ ದಾಖಲಿತ ಶ್ರಮಿಕ ವರ್ಗದ ಅಂಕಿ ಅಂಶ ಮಾತ್ರ. ಒಂದು ರಾಜ್ಯದಿಂದ ಇನ್ನೊಂದಕ್ಕೆ, ಒಂದೂರಿಂದ ಇನ್ನೊಂದ್ದಕ್ಕೆ ಉದ್ಯೋಗ, ಬದುಕು ಅರಸಿ ಹೋದವರ ಸಂಖ್ಯೆಯ ಅಂದಾಜು ಜಗತ್ತಿನ ಯಾವ ದೇಶಗಳೂ ಕರಾರುವಕ್ಕಾಗಿ ಇಟ್ಟಿರಲಿಕ್ಕಿಲ್ಲದಿದ್ದರೂ, ಇಂತಹ ವಲಸಿಗರ ಸಂಖ್ಯೆ, ಖಂಡಿತ ಅಂತರಾಷ್ಟ್ರೀಯ ವಲಸಿಗರ ಅಂದಾಜಿನ ಹತ್ತಿಪ್ಪತ್ತು ಪಟ್ಟಿನಷ್ಟು ಹೆಚ್ಚಿರುವುದರಲ್ಲಿ ಯಾವುದೇ ಸಂಶಯವಿಲ್ಲ!

ಗೆಲುವು ಅನುಮಾನವೆಂದು ರಾಜಕೀಯ ಬದುಕಿಗಾಗಿ ಇನ್ನೊಂದೂರಿಗೆ ಗುಳೆಹೋಗುವ ಅಧಿಕಾರಶಾಹಿ ರಾಜಕಾರಣಿಗಳಿಂದ ಹಿಡಿದು, ಒಪ್ಪೊತ್ತಿನ ಊಟಕ್ಕಾಗಿ ತನ್ನೂರು, ತನ್ನವರನ್ನೂ ತೊರೆದು ಬಹುದೂರದ ನಗರಗಳಲ್ಲಿ ಜೀವ ಸವೆಸಿ, ಬದುಕು ಕಟ್ಟಿಕೊಳ್ಳಬಯಸುವ ದಿನಗೂಲಿ ಕಾರ್ಮಿಕರ ತನಕ ಎಲ್ಲರೂ ವಲಸಿಗರೇ! ಉತ್ತಮ ಉದ್ಯೋಗದ ಹಂಬಲದಲ್ಲಿ ದೂರದ ಅಮೆರಿಕಾದಲ್ಲಿ ಸದ್ಯ ಬದುಕುತ್ತಿರುವ ನಾನೂ ಒಬ್ಬ ವಲಸಿಗ. ಇಲ್ಲಿಯೂ ಸುಮಾರು 1.5 ಕೋಟಿಯಷ್ಟು ದಾಖಲಿತ ವಲಸಿಗರಿದ್ದಾರೆ. ಸುಮಾರು 50 ಲಕ್ಷದಷ್ಟು ನಿಯಮಬಾಹಿರ ವಲಸೆ ಕಾರ್ಮಿಕರೂ ಇಲ್ಲಿದ್ದಾರೆ ಎಂಬುದು ಒಂದು ಅಂದಾಜು. 2001ರ ಜನಗಣತಿಯ ಪ್ರಕಾರ ಭಾರತದಲ್ಲಿನ ಅಧಿಕೃತ ವಿದೇಶಿ ವಲಸೆ ಕಾರ್ಮಿಕರು 2%. ಆದರೆ ಅಂದಿಗೇ, ಸುಮಾರು 84% ಜನರು ಒಂದೇ ರಾಜ್ಯದಲ್ಲಿದ್ದರೂ ಅವರೂರಿಂದ ಇನ್ನೊಂದೂರಿಗೆ ಬದುಕನ್ನರಸಿ ಹೋದ ಶ್ರಮಿಕರು. 12% ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋದವರು. ಇದರಿಂದ ತಿಳಿಯುವದೆಂದರೆ ನಮ್ಮ ನಿಮ್ಮ ನಡುವೆ ಇರುವ ಬಹುತೇಕರು ಶ್ರಮಿಕರು, ವಲಸಿಗರೇ!

ಇವರ್ಯಾರೂ ಮೋಜು ಮಸ್ತಿಗಾಗಿಯೇ ಊರು ಬಿಟ್ಟವರಲ್ಲ! ಅವರೆಲ್ಲರದ್ದೂ ಬದುಕು, ಬದುಕಿನ ಗುಣಮಟ್ಟ ಹೆಚ್ಚಿಸಿಕೊಳ್ಳುವ ತುಡಿತವೇ. ಸೋಲಿನ ನೀರಿಕ್ಷೆಯಿಂದ ಇನ್ನೊಂದು ಕ್ಷೇತ್ರಕ್ಕೆ ನುಗ್ಗಿಯೋ, ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿಯೋ, ವಿಜಯಲಕ್ಷ್ಮೀ ವರಿಸಿ, ಚಲಾವಣೆಯಲ್ಲಿರುವ ರಾಜಕಾರಣಿಗಳದ್ದೂ ಇದೆ ಉದ್ದೇಶ! ಆದರೆ ಇವರು ತಮ್ಮದೋ, ತಮ್ಮ ಮಕ್ಕಳದೋ ಬದುಕು ಕಟ್ಟುವ ಹವಣಿಕೆಯಲ್ಲಿ ಹಲವರ ಬದುಕು ಕಸಿಯುತ್ತಾರೆಂಬುದೇ ವಿಪರ್ಯಾಸ.

ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಹಪಾಹಪಿ ನನಗಿಲ್ಲ. ಜಗತ್ತಿನ ಹೆಚ್ಚಿನ ಸರ್ಕಾರಗಳು ನಿರ್ಬಂಧ ಹೇರಿದ್ದು, ದಿಕ್ಕೇ ತೋಚದೇ. ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಿಸಿಕೊಂಡು ಸಾಂಕ್ರಾಮಿಕ ಮಾರಿಯೊಂದಿಗೆ ಹೋರಾಡುವ ಹಂಬಲವೇ ಹೊರತು, ಜನಜೀವನವನ್ನು ಹಾಳುಗೆಡವುವ ಉದ್ದೇಶ ಜಗತ್ತಿನ ಯಾವುದೇ ಸರ್ಕಾರಗಳದ್ದೂ ಇದ್ದಿರಲಿಲ್ಲ. ಭಾರತ ಸರ್ಕಾರವೂ ಇದಕ್ಕೆ ಹೊರತೇನಲ್ಲ! ಇಂತಹ ನಿರ್ಬಂಧಗಳಲ್ಲೊಂದಾದ ಅಂತರಾಷ್ಟ್ರೀಯ ವಿಮಾನಯಾನ ನಿರ್ಬಂಧ, ವೈಯಕ್ತಿಕವಾಗಿ ನನ್ನ ಜೀವಮಾನದಲ್ಲಿ ಮರೆಯಲಾಗದ ಕಹಿ ನನಗೂ ಕರುಣಿಸಿದೆ. ನಾನು, ನಮ್ಮವರೆಂದುಕೊಂಡ ನಮ್ಮೂರಿನ ಜನರೇ ನಮ್ಮ ನೆರವಿಗೆ ಬಂದರಲ್ಲದೇ, ಸರಕಾರ ನನಗೆ ನನಗೂ ನೆರವಾಗಲಿಲ್ಲ. ವಿಷಮ, ಸಂಧಿಗ್ದ ಸಂದರ್ಭಗಳಲ್ಲಿ ಸರ್ಕಾರಗಳು ಹೆಚ್ಚಿನ ಜನಜೀವನವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದ್ದರೂ, ಸಂವಹನದ ಮಾಧ್ಯಮ ಜನರೇ ತಾನೇ? ನಾವು ಕಷ್ಟದಲ್ಲಿದ್ದರೂ, ನಮಗಿಂತ ಕಷ್ಟದಲ್ಲಿರುವ ಸುತ್ತಲಿನ ಶ್ರಮಿಕರ ಬೆನ್ನಿಗೆ ನಿಂತು, ಧೈರ್ಯ ತುಂಬಿ ನಿಮ್ಮೊಂದಿಗಿದ್ದೇವೆಂದು ಜೊತೆಯಾಗುವ ಜವಾಬ್ದಾರಿ ನಮಗಿರಬೇಕಲ್ಲವೇ? ಹಾಗಿರುವಾಗ ಸರ್ಕಾರ ಮತ್ತು ವ್ಯವಸ್ಥೆಯನ್ನೇ ದೂರುತ್ತಲಿರುವುದು ಎಷ್ಟು ಸರಿ?

ಸಾಮಾಜಿಕ ಜಾಲ ತಾಣಗಳಾದಿಯಾಗಿ, ಸುದ್ದಿ ಮಾಧ್ಯಮಗಳು, ಸರ್ಕಾರದ ವಿರೋಧಿಗಳೂ ಮನಕಲಕುವ ವರದಿಗಳನ್ನು ಚಿತ್ರೀಕರಿಸಿ ಚಿತ್ರ ವಿಚಿತ್ರವಾಗಿ ವರದಿ ಮಾಡಿದ್ದು, ನೋವು ಹರಡಿದ್ದು ಅಕ್ಷಮ್ಯ. ತಮ್ಮಿಂದಾದ ಸಹಾಯ ಒದಗಿಸಿ, ಸರ್ಕಾರದ ಕದ ತಟ್ಟುವುದನ್ನು ಬಿಟ್ಟು, ಸರ್ಕಾರದ ವೈಫಲ್ಯ ಎತ್ತಿ ತೋರಿಸುವದೇ ನಮ್ಮ ಕಾಯಕವೆಂಬಂತೆ ನಡೆದುಕೊಂಡದ್ದು ಸಮಂಜಸವಲ್ಲ. ಇಂತಹದಕ್ಕೇ ಡಿವಿಜಿಯವರು ಹೇಳಿದ್ದಿರಬೇಕು, “ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ। ಕೊರತೆಯೊಂದನು ನೀನು ನೆನೆನೆದು ಕೆರಳಿ ।। ಧರೆಯಲ್ಲವನು ಶಪಿಸಿ ಮನದಿ ನರಕವ ನಿಲಿಸಿ । ನರಳುವುದು ಬದುಕೇನೋ ಮಂಕುತಿಮ್ಮ।।” ಎಂದು.

ಒಬ್ಬರಿಗೊಬ್ಬರು ಬೆರಳು ಮಾಡದೇ, ಅವರವರಿಗಾಗುವಷ್ಟು ಯಥೋಚಿತ ಸಹಾಯ ವಲಸಿಗರಿಗೆ ಮಾಡಬಹುದಿತ್ತು. ವಲಸಿಗರೂ ಪರಿಸ್ಥಿತಿಯ ವಿಷಮತೆ ಅರಿತು, ಜವಾಬ್ದಾರಿಯುತವಾಗಿ ನಡೆದುಕೊಳ್ಳುವಲ್ಲಿ ಕೂಡ ಕೆಲವೊಮ್ಮೆ ವಿಫಲರಾದಂತೆ ಅನಿಸುತ್ತದೆ. ಅನಾವಶ್ಯಕವಾಗಿ ನಾವು ಹೋಗಲೇಬೇಕೆಂದು ರಚ್ಛೆ ಹಿಡಿದ್ದಿದ್ದೂ, ಹಾಗೂ ಹೀಗೋ ತಮ್ಮೂರು ಸೇರಿದೊಡನೆ ಎಲ್ಲಡೆ ತಿರುಗಿ ಆತಂಕ ಸೃಷ್ಟಿಸಿದ್ದ ಕೋವಿಡ್ ಪ್ರವರ್ತಕರೂ ಅಲ್ಲಲ್ಲಿ ಕಾಣಿಸಿಕೊಂಡರು. ಅದೇನೇ ಇದ್ದರೂ ಸಾಮಾಜಿಕ ಜಾಲತಾಣಗಳಾದಿಯಾಗಿ, ಸುದ್ದಿ ಮಾಧ್ಯಮಗಳು ರೋಚಕ ಚಿತ್ರ, ವಿಡಿಯೋ ತುಣುಕಗಳನ್ನ ಸುದ್ದಿ ಮಾಡಲು ತೋರಿದಷ್ಟು ಆಸಕ್ತಿ, ನೆರವಾಗುವಲ್ಲಿ ತೋರದಿದ್ದದು ಅಮಾನವೀಯ. ಇಂತಹ ಸುದ್ದಿ ಹಬ್ಬಿಸಿ, ನಾವು ನಮ್ಮದೇ ಮುಖದ ಮೇಲೆ ಉಗುಳಿಕೊಂಡಂತಾಗಿದೆ. ಭಾರತದ ಆರಂಭದ ಕರೋನಾ ವಿರುದ್ಧದ ಹೋರಾಟಕ್ಕೆ ಬೆರಗುಗೊಂಡಿದ್ದ ಜಗತ್ತಿನ ಅನ್ಯ ರಾಷ್ಟ್ರಗಳಿಗೆ ನಮ್ಮತ್ತ ಬೊಟ್ಟು ಮಾಡಲು ನಾವೇ ಅವಕಾಶ ಮಾಡಿ ಕೊಟ್ಟವೇನೋ ಎನಿಸುತ್ತದೆ.

ಅದೇನೇ ಇದ್ದರೂ, ಈ ತರದ ಗೊಂದಲಗಳಿಗೆ ಅವಕಾಶ ಕೊಟ್ಟು ಕಾರ್ಮಿಕರಿಂದ ಅವರ ಬದುಕನ್ನೂ, ಉದ್ಯಮಗಳಿಂದ ದುಡಿಯುವ ಕೈಗಳನ್ನೂ ಕಸಿದುಹಾಕಲು ನಾವೇ ಇಂಬು ಕೊಟ್ಟಂತಾಗಿದ್ದು ವಿಷಾದದ ಪರಿಸ್ಥಿತಿ. ಹಾಗಾಗಿ ಬಹುತೇಕ ಉದ್ಯಮಗಳು ತೆರೆದರೂ ಅವಗಳಿಗೆ ಹಿಂದಿನ ಸಾಮರ್ಥ್ಯದಲ್ಲಿ ಉತ್ಪಾದಿಸುವ, ಉದ್ಯೋಗಾವಕಾಶ ಒದಗಿಸುವ ಶಕ್ತಿ ಉಳಿದಿರುವುದು ಅನುಮಾನ.

ಅಮೆರಿಕಾದಂತ ಮುಂದುವರಿದ ದೇಶದಲ್ಲಿಯೂ ನಿರುದ್ಯೋಗಿಗಳ ಸಮಸ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕರೋನಾ ಸಾಂಕ್ರಾಮಿಕದ ಹೊಡೆತ ಎರಡು ತಿಂಗಳಲ್ಲಿ ಸುಮಾರು ನಾಲ್ಕು ಕೋಟಿ ಜನರನ್ನು ನಿರುದ್ಯೋಗಿಗಳಾಗಿಸಿದೆ. ಅಂದರೆ ದೇಶದ ಒಟ್ಟು ಜನಸಂಖ್ಯೆಯ 12% ರಷ್ಟು ಮಂದಿ ದಾಖಲಿತ ನಿರುದ್ಯೋಗಿಗಳು. ಈ ಸಂಖ್ಯೆ ಕೆನಡಾ ದೇಶದ ಒಟ್ಟು ಜನಸಂಖ್ಯೆಗಿಂತಲೂ ಅಧಿಕವೆಂದರೆ ಜೀವನಕ್ಕಾಗಿ ಹೋರಾಡುತ್ತಿರುವವರ ಸಂಕಷ್ಟ ಎಷ್ಟು ಕರಾಳವಿರಬಹುದು. ಕರೋನಾ ಹೊಡೆತಕ್ಕೆ ಸಿಕ್ಕಿದ ಮುಂದುವರಿದ ಸಂಪದ್ಭರಿತ ದೇಶಗಳ ಚಿತ್ರಣವೇ ಹೀಗಿದ್ದರೆ, ಭಾರತದಂತಹ ಅತ್ಯಧಿಕ ಜನಸಂಖ್ಯೆಯ ಅಭಿವೃದ್ಧಿಶೀಲ ರಾಷ್ಟ್ರಗಳ ಪರಿಸ್ಥಿತಿ ಹೇಗಾಗಬಹುದು ಊಹಿಸುವುದೂ ಅಸಾಧ್ಯ. ಆ ದೃಷ್ಟಿಯಲ್ಲಿ ಅಂತಹ ಸಮೂಹ ಸಾಂಕ್ರಾಮಿಕ ಪರಿಸ್ಥಿತಿ ತಲುಪದಂತೆ ಕಾಪಾಡುವುದು ಸರ್ಕಾರದಷ್ಟೇ ನಾಗರೀಕರ, ನಮ್ಮೆಲ್ಲರ ಕರ್ತವ್ಯ ಕೂಡಾ.

ಮನೆಗೆ ಬೆಂಕಿ ಬಿದ್ದಾಗಲಾದರೂ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಭಿನ್ನಾಭಿಪ್ರಾಯ ಮರೆತು, ಬೆಂಕಿ ನಂದಿಸಲು ಒಂದಾಗಬೇಕು. ಬೆಂಕಿ ಹಾಕಿದ ಕೀಡಿಗೇಡಿಯ ಗುಣಾವಾಗುಣಗಳನ್ನು ಗುಣಗುಣಿಸಿ ಕೂಡುವ ಕಾಲ ಇದಲ್ಲ. ರಚನಾತ್ಮಕ ಬದ್ಧತೆ ಸರ್ಕಾರ ನಡೆಸುವವರಾದಿಯಾಗಿ, ವಿರೋಧ ಪಕ್ಷ, ಅಧಿಕಾರಿ ವರ್ಗ, ಸಮಸ್ತ ನಾಗರೀಕರಲ್ಲೂ ಇರಬೇಕಾಗಿದ್ದು ಈ ಹೊತ್ತಿನ ಆದ್ಯತೆ. ಈ ಸಮಯದಲ್ಲೂ ಹುಳುಕು ಹುಡುಕಿ ಬೇಳೆ ಬೇಯಿಸಿಕೊಳ್ಳುವವರನ್ನು ಬಡಿದೆಚ್ಚರಿಸಿ ರಾಷ್ಟ್ರ, ಸಮಾಜದ ಹಿತಕ್ಕಾಗಿ ಚಿಂತಿಸುವಂತೆ ಮಾಡುವುದು ನಾಗರೀಕರ ಕರ್ತವ್ಯ. ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರುಗಳು, ಉದ್ಯೋಗಪತಿಗಳು, ಚಲನಚಿತ್ರ ನಟರು, ಇನ್ನಿತರ ಕಳಕಳಿಯ ನಾಗರೀಕರು ಅಲ್ಲಲ್ಲಿ ತಮ್ಮದೇ ಸ್ವಂತ ಶ್ರಮ, ವೆಚ್ಚದಲ್ಲಿ ಶ್ರಮಿಕರನ್ನು ಅವರವರ ಊರು ತಲುಪಿಸುವ, ಅವರಿಗೆ ಊಟ ವಸತಿ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಇಂತಹ ಪ್ರಯತ್ನಗಳು ಹೆಚ್ಚು ಹೆಚ್ಚು ಸುದ್ದಿಯಾಗಿ ಇತರರಿಗೆ ಪ್ರೇರಣೆಯಾಗುವ ಬದಲು, ಶ್ರಮಿಕರ ಬವಣೆಯನ್ನೇ ವಿಜೃಂಭಿಸುವ ಪ್ರಯತ್ನ ಖಂಡನೀಯ. ಅವರ ಜೊತೆ ನಿಂತು ಧೈರ್ಯ ತುಂಬಿ ಬದುಕನುಳಿಸಿ ಬದುಕು ಕಟ್ಟಿಕೊಡುವ, ಕಟ್ಟಿಕೊಳ್ಳುವ ಕಾಯಕಕ್ಕೆ ನಾವೆಲ್ಲ ಮುಂದಾಗಬೇಕು.

ಗುಂಡಪ್ಪನವರು ಇನ್ನೊಂದು ಕಡೆ ಹೇಳಿದಂತೆ “ವಹಿಸು ಕೆಲ ಭಾರಗಳ, ಸಹಿಸು ಕೆಲ ನೋವುಗಳ। ಪ್ರಹರಿಸರಿಗಳನನಿತು ಯುಕ್ತಕಗಳನರಿತು ।। ಮಹಿಯ ನಾಟಕದೀ ನೀಂ ಮನಸಿಟ್ಟು ಕುಣಿ ಕುಣಿದು । ವಿಹರಿಸಾತ್ಮಾಲಯದಿ ಮಂಕುತಿಮ್ಮ ।।” . ಬದುಕು ಕಟ್ಟಿಕೊಳ್ಳುವ ಮನುಷ್ಯನ ಹೋರಾಟದಲ್ಲಿ ನೋವು ನಲಿವುಗಳು ಸಾಮಾನ್ಯ. ಇದರಲ್ಲಿ ಕೆಲವು ನೋವುಗಳನ್ನು ನಾವೆಲ್ಲರೂ ಸಹಿಸಿಕೊಂಡೆ ಮುನ್ನುಗ್ಗಿ ಜಯಿಸಬೇಕಾಗಿದ್ದು ಕೂಡಾ ಜೀವನದ ಕಹಿ ಸತ್ಯ.

ವಲಸಿಗರು ಅವರವರ ಊರು ತಲುಪಿದಾಕ್ಷಣ ಅವರು ಸುರಕ್ಷಿತರೂ ಅಲ್ಲ, ಬದುಕು ಸುಗಮವಾಗಲಿಕ್ಕೂ ಇಲ್ಲ. ಹಾಗಾಗುವುದಿದ್ದರೆ ಅವರು ಕೆಲಸ, ಬದುಕು ಅರಸುತ್ತಾ ವಲಸೆ ಬರುತ್ತಲೇ ಇರಲಿಲ್ಲ! ಹೀಗಿರುವಾಗ ಅವರಿಂದ ಒಂದಲ್ಲ ಒಂದು ರೀತಿಯಲ್ಲಿ ಉಪಕೃತರಾದ ನಾವು ನೀವೆಲ್ಲ ನೆರವಿಗೆ ನಿಲ್ಲಬಹುದಿತ್ತು. ಹಂತ ಹಂತವಾಗಿ ಅವರನ್ನು ಕರೆಸಿಕೊಳ್ಳುವ ಯೋಜಿತ ಸರ್ಕಾರಿ ವ್ಯವಸ್ಥೆ ಸಫಲವಾಗುವತ್ತ, ವಲಸೆ ಕಾರ್ಮಿಕರಾದಿಯಾಗಿ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅವರ ಶ್ರಮದ ಫಲವುಂಡವರೆಲ್ಲ ಶ್ರಮಿಸಿದ್ದರೆ, ಭಾರತದಲ್ಲಿನ ಜೀವ ಮತ್ತು ಜೀವನದ ನಡುವಿನ ಹೋರಾಟದ ಸಾಫಲ್ಯ ಹೆಚ್ಚುತ್ತಿತ್ತು. ಸಾಂಕ್ರಾಮಿಕ ಹರಡುವಿಕೆ ಇನ್ನಷ್ಟು ಹತೋಟಿಯಲ್ಲಿರುತ್ತಿತ್ತು.ಆ ಮೂಲಕ ನಾವೂ ಬದುಕಿ ನಮ್ಮವರನ್ನೂ ಬದುಕಿಸುವ ಹೋರಾಟ ಅರ್ಥಪೂರ್ಣವಾಗಿರುತಿತ್ತು ಎಂದು ನಿಮಗೂ ಅನಿಸುತ್ತಿಲ್ಲವೇ?

***********************************
ಜಿ. ಪ್ರತಾಪ್ ಕೊಡಂಚ , ಫಿಲಡೆಲ್ಫಿಯಾ.
pratap.kodancha@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!