ಕಥೆ

ಮಹಾರವ  – A Sound of Thunder – 1

ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ  ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effect ವಿವರಣೆಗೆ ಇದಕ್ಕಿಂತ ಉತ್ತಮ ಉದಾಹರಣೆ ಪ್ರಾಯಶಃ ಸಿಗಲಾರದು.

ಗೋಡೆಯ ಮೇಲಿನ ಬರಹ ಜಾರುತ್ತಿರುವ ನೀರಿನ ಹರಿವಿನ ಹಿಂದೆ ಕದಲುತ್ತಿರುವಂತೆ ಕಾಣುತ್ತಿತ್ತು. ಎಕೆಲ್ಸ್ ನೋಟಕ್ಕೆ ಅವನ ಕಣ್ರೆಪ್ಪೆಗಳು ಅರೆಕ್ಷಣ ಅಡ್ಡಿ ಮಾಡಿದವು, ಅಂಧಕಾರದಲ್ಲಿ ಅವನ ಮನಸಿನಲ್ಲಿ ಬರಹ ಸುಡುತ್ತಿತ್ತು:

TIME SAFARI, INC.

SAFARIS TO ANY YEAR IN THE PAST.    (ಭೂತ ಕಾಲದ ಯಾವುದೇ ವರ್ಷಕ್ಕೆ ಸಫಾರಿಗೆ ಕರೆದೊಯ್ಯುತ್ತೇವೆ.)

YOU NAME THE ANIMAL.                         (ಪ್ರಾಣಿಯ ಹೆಸರು ನೀವು ಹೇಳಿ)

WE TAKE YOU THERE.                               (ನಿಮ್ಮನ್ನಲ್ಲಿಗೆ ಕರೆದುಕೊಂಡು ಹೋಗ್ತೇವೆ)

YOU SHOOT IT.                                             (ನೀವು  ಬೇಟೆಯಾಡಿ)

ಓದುತ್ತಾ ಓದುತ್ತಾ ಎಕೆಲ್ಸ್ ಗಂಟಲಿನಲ್ಲಿ ಬಿಸಿಯುಗುಳು ತುಂಬಿತು; ಅವನದನ್ನು ನುಂಗಿ ಒಳತಳ್ಳಿದ. ಅವನು ಗಾಳಿಯಲ್ಲಿ ತನ್ನ ಕೈ ಎತ್ತಿ ಬೀಸುವಾಗ ಬಾಯ ಸುತ್ತಲ ಸ್ನಾಯುಗಳೆಲ್ಲವನ್ನೂ ಸೆಳೆದು ಮುಖದಲ್ಲಿ ನಗು ಮೂಡಿಸಿದ. ತನ್ನ ಕೈಯಲ್ಲಿದ್ದ ಹತ್ತು ಸಾವಿರ ಡಾಲರ್ನ ಚೆಕ್ಕನ್ನ ಸಫಾರಿಯ ಸಿಬ್ಬಂದಿಗೆ ತೋರಿಸಿದ.

ಸಫಾರಿ ನಾನು ವಾಪಸು ಬರುವ ಖಾತ್ರಿ ಕೊಡುತ್ತದೆಯೇ?”

ಅದಕ್ಕೆ ಸಿಬ್ಬಂದಿ, “ಡೈನೋಸಾರ್ಗಳ ವೀಕ್ಷಣೆಗೆ ಬಿಟ್ಟು ನಾವು ಬೇರೆ ಯಾವುದೇ ರೀತಿಯ ಖಾತ್ರಿ ಕೊಡುವುದಿಲ್ಲ. ಇವರು ಮಿ. ಟ್ರಾವಿಸ್, ಭೂತಕಾಲಕ್ಕೆ  ನಿಮ್ಮನ್ನು ಕರೆದೊಯ್ಯುವ ಮಾರ್ಗದರ್ಶಕ. ಇವರು ನಿಮಗೆ ಯಾವುದಕ್ಕೆ ಮತ್ತು ಯಾವಾಗ ಹೇಗೆ ಗುಂಡು ಹೊಡೆಯಬೇಕು ಅನ್ನುವುದನ್ನು ಹೇಳುತ್ತಾರೆ. ಅವರು ಗುಂಡು ಹಾರಿಸಬೇಡಿ ಎಂದರೆ ಹಾರಿಸುವ ಹಾಗಿಲ್ಲ. ಒಂದು ವೇಳೆ ನೀವು ಎಚ್ಚರಿಕೆ ಮೀರಿದರೆ, ಹತ್ತು ಸಾವಿರ ಡಾಲರ್ ಗಳ  ದಂಡ ಕಟ್ಟಬೇಕಾಗುತ್ತದೆ, ಇದರ ಜೊತೆಗೆ ವಾಪಸು ಬಂದ ಮೇಲೆ ಸರ್ಕಾರ ನಿಮ್ಮನ್ನು ಬಂಧಿಸಲೂಬಹುದು.”

ಎಕೆಲ್ಸ್ ಬೃಹತ್ ಕಚೇರಿಯಲ್ಲಿ ಅಸ್ತವ್ಯಸ್ತವಾಗಿದ್ದ, ಸದ್ದು ಮಾಡುತ್ತಿದ್ದ ಯಂತ್ರಗಳು, ಕಬ್ಬಿಣದ ಬಾಕ್ಸುಗಳತ್ತ ನೋಡಿದ, ಕ್ಷಣಕ್ಷಣಕ್ಕೂ ಬದಲಾಗುವ ಬೂದು, ಹಸಿರು, ಕೇಸರಿ ಬಣ್ಣಗಳ ಬೆಳಕು ಚೆಲ್ಲುತ್ತಿದ್ದ ಬಲ್ಬುಗಳ ಕಡೆ ನೋಡಿದ. ಜಗತ್ತಿನ ಎಲ್ಲ ಸಮಯ, ಎಲ್ಲ ಶತಮಾನಗಳು, ಎಲ್ಲ ವರ್ಷಗಳು, ಎಲ್ಲ ತಿಂಗಳು, ದಿನ, ಗಂಟೆಗಳ ವಿವರಗಳ ಬರೆದ ಪುಸ್ತಕದ ರಾಶಿಯ ಒಟ್ಟು ಹಾಕಿ ಆಕಾಶದೆತ್ತರಕ್ಕೆ ಪೇರಿಸಿ ಬೆಂಕಿ ಹಾಕಿದರೆ ಬರುವ ಸದ್ದು ಕೇಳುತ್ತಿರುವ ಹಾಗೆ ಎಕೆಲ್ಸ್ ಗೆ ಭಾಸವಾಗುತ್ತಿತ್ತು.

ಅಲ್ಲಿದ್ದ ಒಂದು ಮಹಾಯಂತ್ರವನ್ನು ನೋಡಿದಾಗ ಅವನ ಮನದಲ್ಲಿ, ಮಾನವನ ಕೈಯ ಒಂದು ಸಣ್ಣ ಸಂಜ್ಞೆಗೆ ಜ್ವಾಜಲ್ಯಮಾನವಾಗಿ ಸುಡುವ ಉರಿಯನ್ನು ಸುಂದರ ದೀಪವನ್ನಾಗಿಸುವ ಶಕ್ತಿಯಿರುವ ಹಾಗೆ ಭಾಸವಾಯಿತು. ಕ್ಷಣ ಎಕೆಲ್ಸ್ ಗೆ ಜಾಹಿರಾತಿನಲ್ಲಿದ್ದ ಪದಗಳು ನೆನಪಾದವು: ಭೂತಕಾಲದ ಬೂದಿಯಿಂದ, ಧೂಳಿನಿಂದ, ಇದ್ದಲಿನಿಂದ, ಮೇಲೇರುವ ಅಗ್ನಿವರ್ಣದ ಬೆಂಕಿಮೊಸಳೆಯಂತೆ (Salamander), ಹಳೆಯ ದಿನಗಳು, ಸಮೃದ್ಧಿಯ ದಿನಗಳಿಗೆ, ನೀವು ಹೋಗಬಹುದು; ಗುಲಾಬಿ ಹೂಗಳು ಗಾಳಿಯಲ್ಲಿ ಕಂಪು ಹರಡಿ, ಬಿಳಿಯ ಕೂದಲು ಕಪ್ಪಾಗಿ, ಮುಖದ ಸುಕ್ಕುಗಳು ಮಾಯವಾಗಿ; ಸರ್ವವೂ, ಸರ್ವಸ್ವವೂ  ಬೀಜರೂಪಕ್ಕೆ  ಹಿಂದಿರುಗಿ, ಸಾವಿನಿಂದ ದೂರ ಓಡಿ, ಆದಿಕಾಲಕ್ಕೆ ಆತುರದಿಂದ ಹಿಂದಿರುಗಿ, ಸೂರ್ಯ ಪಡುವಣದ ಆಗಸದಲ್ಲಿ ಹುಟ್ಟಿ , ಭವ್ಯ ಮೂಡಣದಲ್ಲಿ ಮುಳುಗುವಂತಾಗಿ, ಪ್ರತಿಯೊಂದೂ ಸೃಷ್ಟಿಯ ಆದಿಗೂ  ಮುಂಚಿನ ಸಮಯಕ್ಕೆ ಹೋಗುವುದನ್ನು ನೀವು ನೋಡುವ ಹಾಗೆ ನಾವು ಮಾಡುತ್ತೇವೆ. ಕೇವಲ ಒಂದು ಕೈ ಕೆಲವು ಗುಂಡಿಗಳನ್ನು ಒತ್ತಬೇಕಷ್ಟೇ, ಸೃಷ್ಟಿ ರಹಸ್ಯವನ್ನು ಕೇವಲ ಒಂದು ಕೈಯ ಚಲನೆಯಿಂದ ಅರಿಯಲು ಸಾಧ್ಯ.   

ನಂಬಲಸಾಧ್ಯ.” ಎಕೆಲ್ಸ್ ನೀಳ ಉಸಿರು ಬಿಡುತ್ತಿದ್ದಾಗ ಯಂತ್ರದ ಬೆಳಕು ಅವನ ಸಣ್ಣ ಮುಖದ ಮೇಲೆ ಹೊಳೆಯುತ್ತಿತ್ತು. “ನಿಜವಾಗಿಯೂ, ಟೈಮ್ ಮಷೀನ್.” ನಂಬಲಾಗದವನಂತೆ ತಲೆಯಾಡಿಸುತ್ತಾ ಎಕೆಲ್ಸ್, “ ಯಂತ್ರ ಯೋಚನೆಗೆ ತಳ್ಳುತ್ತಿದೆ, ಒಂದು ವೇಳೆ ಚುನಾವಣೆಯ ಫಲಿತಾಂಶ ಕೆಟ್ಟದಾಗಿದ್ದರೆ, ಇವತ್ತು ನಾನು ಫಲಿತಾಂಶದಿಂದ ದೂರ ಹೋಗುವುದಕ್ಕಾಗಿ ಟೈಮ್ ಮಷೀನಿನ ಹತ್ತಿರ ಓಡಿ ಬರುವ ಹಾಗಾಗುತ್ತಿತ್ತು. ದೇವರ ದಯೆ, ಕೀತ್ ಗೆದ್ದ. ಅವನು ಅಮೇರಿಕಾ ಕಂಡಿರುವ ಅತ್ಯುತ್ತಮ ಅಧ್ಯಕ್ಷನಾಗುವುದರಲ್ಲಿ ಸಂದೇಹವಿಲ್ಲ.”  

ಅದಕ್ಕೆ ಸಿಬ್ಬಂದಿ, “ಸತ್ಯ, ನಾವು ಅದೃಷ್ಟವಂತರು. ಒಂದು ವೇಳೆ ಜರ್ಮನ್ (Deutscher) ಏನಾದರೂ ಒಳ ಬಂದಿದ್ದರೆ ಸರ್ವಾಧಿಕಾರಿಯ ಕಾಲ ಕೆಳಗೆ ನಾವು ನರಳಬೇಕಾಗುತ್ತಿತ್ತು. ಪ್ರತಿಯೊಂದಕ್ಕೂ ವಿರೋಧಿಗಳು ಹುಟ್ಟಿಕೊಂಡಿದ್ದಾರೆ, ಶಾಂತಿಯ ವಿರುದ್ಧ,  ಕ್ರೈಸ್ತರ ವಿರುದ್ಧ, ಮಾನವತೆಯ ವಿರುದ್ಧ, ವಸ್ತುನಿಷ್ಠತೆ, ವಿಚಾರವಾದಗಳ ವಿರುದ್ಧ, ಪ್ರತಿಯೊಂದರ ವಿರುದ್ಧವೂ ಮಾತನಾಡುವ ಜನರಿದ್ದಾರೆ. ಬಹಳ ಜನ ನಮಗೆ ಕರೆ ಮಾಡಿ, ಹಾಸ್ಯವೆನಿಸಿದರೂ ಗಂಭೀರವಾಗಿ ಹೇಳುತ್ತಾ ಇದ್ದರು, ಒಂದು ವೇಳೆ ಜರ್ಮನ್ ಏನಾದರೂ ಅಧ್ಯಕ್ಷನಾದರೆ ನಾವು ೧೪೯೨ಕ್ಕೆ ಹೋಗಲು ನಿಮ್ಮ ಟೈಮ್ ಮಷೀನ್  ನೆರವು ಬೇಕು ಅಂತ. ಜನರ ಪಲಾಯನಕ್ಕೆ ಸಹಾಯ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶವಲ್ಲ, ಬರೀ ಸಫಾರಿ ಆಯೋಜಿಸುವುದು. ಅದಿರಲಿ, ಹೇಗಿದ್ದರೂ ಕೀತ್ ಈಗ ಅಧ್ಯಕ್ಷನಾಗಿದ್ದಾನೆ. ನಾವು ತಲೆ ಕೆಡಿಸಿಕೊಳ್ಳಬೇಕಾಗಿರುವುದು -“

ನನ್ನ ಡೈನೋಸಾರಿಗೆ ಗುಂಡು ಹೊಡೆಯುವುದರ ಬಗ್ಗೆ ,” ಎಕೆಲ್ಸ್ ಅವನ ವಾಕ್ಯವನ್ನು ಸಂಪೂರ್ಣಗೊಳಿಸಿದ.

ಟೈರಾನೋಸಾರಸ್ ರೆಕ್ಸ್. ಕ್ರೂರ ಗೌಳಿ (lizard), ಇತಿಹಾಸದ ನಂಬಲಸಾಧ್ಯ ದೈತ್ಯ. ಪತ್ರದ ಮೇಲೆ  ರುಜು ಮಾಡಿ. ನಿಮಗೇನಾದರೂ ಆದರೆ, ನಾವು ಜವಾಬ್ದಾರರಲ್ಲ. ಡೈನೋಸಾರುಗಳು ಯಾವಾಗಲೂ ಹಸಿದಿರುತ್ತವೆ.”

ಏನು ನನಗೆ ಭಯ ಪಡಿಸುವುದಕ್ಕೆ  ಪ್ರಯತ್ನ ಪಡ್ತಾ ಇದ್ದೀರಾ?”, ಎಕೆಲ್ಸ್  ಕೋಪದಿಂದ ಹೇಳಿದ.

ಸತ್ಯವಾಗಿಯೂ ಹೌದು. ದೈತ್ಯಾಕಾರವನ್ನು ನೋಡಿದ ಗಾಬರಿಯಲ್ಲಿ ಗುಂಡು ಹಾರಿಸುವವರನ್ನು ಅಲ್ಲಿಗೆ ಕಳಿಸಲು ನಾವು ಸಿದ್ಧರಿಲ್ಲ. ಹೋದ ವರ್ಷ ಸಫಾರಿ ನಾಯಕರು, ಒಂದು ಡಜನ್ ಬೇಟೆಗಾರರು ಸತ್ತಿದ್ದಾರೆ. ನಾವು ಇಲ್ಲಿ ಮಕ್ಕಳಾಟವಾಡುತ್ತಿಲ್ಲ, ಒಬ್ಬ ಬೇಟೆಗಾರ ತನ್ನ ಜೀವಮಾನದಲ್ಲೊಮ್ಮೆ ಅನುಭವಿಸಲು ಸಾಧ್ಯವಿರುವಂತಹ ರೋಚಕತೆಯನ್ನು ಕೊಡುತ್ತಿದ್ದೇವೆ. ಕಾಲಚಕ್ರವನ್ನು ೬೦ ಮಿಲಿಯನ್ ವರ್ಷಗಳಷ್ಟು ಹಿಂದೆ ತಿರುಗಿಸಿ ಎಲ್ಲ ಕಾಲದಲ್ಲೂ ನೆನಪಲ್ಲಿ ಉಳಿಯುವಂತಹ ಆಟ ಕಟ್ಟಿಕೊಡುತ್ತಿದ್ದೇವೆ. ನಿಮ್ಮ ಚೆಕ್ ಇನ್ನೂ ಇಲ್ಲೇ ಇದೆ. ಬೇಡ ಅನ್ನುವುದಾದರೆ ಹರಿದು ಹಾಕಿ.” ಎಕೆಲ್ಸ್ ಚೆಕ್  ಕಡೆ  ಒಂದು ಸಲ ನೋಡಿದ. ಅವನ ಬೆರಳುಗಳು ಅದುರುತ್ತಿದ್ದವು.

ಗುಡ್ ಲಕ್,” ಎಂದು ಹೇಳಿದ ಸಿಬ್ಬಂದಿ ಮಾರ್ಗದರ್ಶಕನ ಕಡೆ ತಿರುಗಿ, “ಮಿ. ಟ್ರಾವಿಸ್, ಇಲ್ಲಿಂದ ನಿಮ್ಮ ಜವಾಬ್ದಾರಿ.”

ಗುಪ್ತಗಾಮಿನಿ ಹರಿದಂತೆ ಮೌನವಾಗಿ ಇಬ್ಬರೂ ತಮ್ಮ ಬಂದೂಕುಗಳನ್ನು ತೆಗೆದುಕೊಂಡು ದೈತ್ಯ ಯಂತ್ರದ ಕಡೆ, ಬೆಳ್ಳಿಯ ಬಣ್ಣದ ಲೋಹದ ಗೂಡಿನ ಕಡೆಗೆ, ಜ್ವಾಜಲ್ಯಮಾನ ಬೆಳಕಿನ ಕಡೆಗೆ ನಡೆದರು.

ಮೊದಲು ದಿನ, ನಂತರ ರಾತ್ರಿ, ಮತ್ತೆ ದಿನ ಮತ್ತು ರಾತ್ರಿ, ನಂತರ ದಿನರಾತ್ರಿದಿನರಾತ್ರಿ. ವಾರ, ತಿಂಗಳು, ವರ್ಷ, ದಶಕ! ಕ್ರಿ.. 2055. ಕ್ರಿ.. 2019. ಕ್ರಿ.. 1999! 1957!!!!! ಯಂತ್ರ ಘರ್ಜಿಸಿತು.

ಅವರೆಲ್ಲ ಅವರ ಆಮ್ಲಜನದ ಹೆಲ್ಮೆಟ್ಗಳನ್ನು ಧರಿಸಿ ತಮ್ಮ ಸೂಟಿನಲ್ಲಿದ್ದ ಅಂತಸ್ಥ ಭಾಷಕಗಳನ್ನು ಪರೀಕ್ಷಿಸಿ ಸರಿಯಿದೆಯೇ ಎಂದು ಖಾತ್ರಿ ಪಡಿಸಿಕೊಂಡರು.

ಎಕೆಲ್ಸ್ ತನ್ನ ಸೀಟಿನಲ್ಲಿ ಮಿಸುಕಾಡುತ್ತಿದ್ದ, ಮುಖ ಬಿಳಿಚಿ, ಅವನ ದವಡೆಗಳು ಕಚ್ಚಿಕೊಂಡ್ಡಿದ್ದವು. ಕ್ಷಣ ಅವನ ಕೈಗಳು ಅದುರಿದ ಅನುಭವವಾಯಿತು, ಅವನು ಕೆಳಗೆ ನೋಡಿದಾಗ ಅವನ ಎರಡೂ ಕೈಗಳು ಬಂದೂಕನ್ನು ಗಟ್ಟಿಯಾಗಿ ಹಿಡಿದಿರುವುದು ಕಾಣಿಸಿತು. ಯಂತ್ರದಲ್ಲಿ ಎಕೆಲ್ಸ್ ನ್ನು ಬಿಟ್ಟು ಮಂದಿಯಿದ್ದರು. ಸಫಾರಿಯ ನಾಯಕ  ಟ್ರಾವಿಸ್, ಅವನ ಸಹಾಯಕ, ಲೆಸ್ಪಿರಾನ್ಸ್, ಮತ್ತು ಇನ್ನಿಬ್ಬರು ಬೇಟೆಗಾರರು, ಬಿಲ್ಲಿಂಗ್ಸ್ ಮತ್ತು ಕ್ರೇಮರ್. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತಿದ್ದರು, ವರ್ಷಗಳು ಅವರ ಸುತ್ತ ಹಾರಿ ಹೋಗುತ್ತಿದ್ದವು.

ಬಂದೂಕುಗಳಿಂದ ಡೈನೋಸಾರುಗಳನ್ನು ಕೊಲ್ಲುವುದಕ್ಕೆ ಸಾಧ್ಯವೇ?” ಎಕೆಲ್ಸ್ ಬಾಯಿಂದ ಮಾತುಗಳು ಅನಿಯಂತ್ರಿತವಾಗಿ ಹೊರಬಂದವು.

ನೀವು ಸರಿಯಾಗಿ ಹೊಡೆದರೆ ಮಾತ್ರ,” ಟ್ರಾವಿಸ್ ತನ್ನ ರೇಡಿಯೋದಿಂದ ಉತ್ತರಿಸಿದ. “ಕೆಲವು ಡೈನೋಸಾರುಗಳಿಗೆ ಎರಡು ಮೆದುಳುಗಳಿರುತ್ತವೆ. ಒಂದು ತಲೆಯಲ್ಲಿ, ಮತ್ತೊಂದು ಮೆದುಳು ಬಳ್ಳಿಯ ಕೊನೆಯಲ್ಲಿ. ಮೆದುಳು ಬಳ್ಳಿಗೆ ಹೊಡೆಯುವುದು ಅದೃಷ್ಟವಿದ್ದರೆ ಮಾತ್ರ ಸಾಧ್ಯ. ಸಾಧ್ಯವಾದರೆ ನಿಮ್ಮ ಮೊದಲೆರಡು ಗುಂಡುಗಳನ್ನು ಅದರ ಕಣ್ಣುಗಳಿಗೆ ಹೊಡೆಯಿರಿ, ಕಣ್ಣು ಹೋದ ನಂತರ ಮೆದುಳಿಗೆ ಗುರಿಯಿಡಿ.”

ಯಂತ್ರ ಊಳಿಟ್ಟಿತು. ಸಮಯ ಹಿಂದೆ ಹಿಂದೆ ಚಲಿಸುತ್ತಿದ್ದ ಚಲನಚಿತ್ರದಂತಿತ್ತು. ಸೂರ್ಯರನ್ನು ಹಿಂಬಾಲಿಸುತ್ತ ದಶಕೋಟಿ ಚಂದ್ರರು ಓಡುತ್ತಿದ್ದರು. ಎಕೆಲ್ಸ್ ಹೇಳಿದ, “ಒಂದು ಕ್ಷಣ ಯೋಚನೆ ಮಾಡಿ. ಇಲ್ಲಿಯ ತನಕ ಭೂಮಿ ಕಂಡ ಪ್ರತಿಯೊಬ್ಬ ಬೇಟೆಗಾರನೂ ಇಂದು ನಮ್ಮನ್ನು ನೋಡಿದರೆ ಅಸೂಯೆ ಪಡುತ್ತಿದ್ದನು. ಜಾಗದ ಮುಂದೆ ಆಫ್ರಿಕಾ ಇಲಿನೋಯ್ ನಂತೆ ಕಾಣಿಸುತ್ತದೆ.”

ಯಂತ್ರದ ಚೀರಾಟ ನಿಧಾನವಾಗಿ ಪಿಸುಮಾತಿನಂತಾಯಿತು. ಯಂತ್ರ ನಿಂತಿತು.

ಜಾರಿ ಹೋಗುತ್ತಿದ್ದ ಸೂರ್ಯ ಆಗಸದಲ್ಲಿ ಸುಮ್ಮನೆ ನಿಂತ.

ಯಂತ್ರವನ್ನು ಆವರಿಸಿದ್ದ ಹೊಗೆ ಸರಿದು ಹೋಯಿತು ಅವರು ತಮ್ಮ ಗಮ್ಯ ಮುಟ್ಟಿದ್ದರು, ತೊಡೆಯ ಮೇಲೆ ನೀಲಿ ಲೋಹದ ಬಂದೂಕಗಳನ್ನಿಟ್ಟುಕೊಂಡ ಮೂರು ಬೇಟೆಗಾರರು ಮತ್ತು ಇಬ್ಬರು ಸಫಾರಿ ಸಿಬ್ಬಂದಿ, ಅತ್ಯಂತ ಪ್ರಾಚೀನ ಕಾಲಕ್ಕೆ ಬಂದು ಸೇರಿದ್ದರು.

ಕ್ರಿಸ್ತ ಇನ್ನೂ ಹುಟ್ಟಿಲ್ಲ,” ಟ್ರಾವಿಸ್ ಹೇಳಿದ. “ದೇವರ ಬಳಿ ಮಾತನಾಡುವುದಕ್ಕೆ ಮೋಸಸ್ ಇನ್ನೂ ಬೆಟ್ಟಗಳ ಹತ್ತಿಲ್ಲ. ಪಿರಮಿಡ್ಗಳು ಇನ್ನೂ ಭೂಮಿಯ ಒಳಗಿವೆ, ಜನರು ಭೂಮಿಯ ಅಗೆದು, ಬಂಡೆಗಳ ಕಡೆದು ನಿಲ್ಲಿಸುವುದಕ್ಕೆ ಕಾಯುತ್ತಿವೆ. ಅಲೆಕ್ಸಾಂಡರ್, ಸೀಸರ್, ನೆಪೋಲಿಯಾನ್, ಹಿಟ್ಲರ್ಯಾರೂ ಅಸ್ತಿತ್ವದಲ್ಲೇ ಇಲ್ಲ.” ಎಕೆಲ್ಸ್ ತಲೆಯಾಡಿಸಿದ.

ದಟ್ಟ ಕಾನನದತ್ತ ತೋರಿಸಿ ಟ್ರಾವಿಸ್ ಹೇಳಿದ, “ಅಧ್ಯಕ್ಷ ಕೀತ್ ಬರುವುದಕ್ಕೂ ಅರವತ್ತು ಮಿಲಿಯನ್ ಎರಡು ಸಾವಿರ ಐವತ್ತೈದು ವರ್ಷಗಳ ಮುಂಚಿನ ಕಾಡಿದು.”

ದಟ್ಟ ಹಸಿರ ಕಾಡಿನೊಳಗೆ, ಹಾವಿನಂತೆ, ಹರಿವ ಝರಿಯ ಮೇಲೆ, ಬೃಹತ್ ಈಚಲ ಮರಗಳ ನಡುವೆ ಹಾಸಲ್ಪಟ್ಟಿದ್ದ ಲೋಹದ ಪಥವನ್ನು ಟ್ರಾವಿಸ್ ಎಲ್ಲರಿಗೂ ತೋರಿಸಿ, “ ಪಥವನ್ನು  ನಮ್ಮ ಸಫಾರಿ ನಿಮ್ಮ ಬಳಕೆಗಾಗಿ ಹಾಕಿದೆ, ಇದು ಭೂಮಿಗಿಂತ ಆರು ಇಂಚು ಮೇಲೆ ತೇಲುತ್ತಿದೆ. ಒಂದು ಸಣ್ಣ ಹುಲ್ಲು ಕಡ್ಡಿ, ಹೂವು, ಅಥವಾ ಮರವನ್ನೂ ಸಹ ಇದು ತಾಕಿಲ್ಲ. ಇದು ಪ್ರತಿಲೋಮ ಗುರುತ್ವದ ಗುಣಗಳನ್ನು ಹೊಂದಿರುವ ಲೋಹ. ಭೂತಕಾಲವನ್ನು ನೀವು ಯಾವುದೇ ರೀತಿ ಮುಟ್ಟದೇ ಇರಲು ಇದನ್ನು ಹಾಕಿರುವುದು. ಪಥದ ಮೇಲೆ ಇರಿ. ಆಚೆ ಈಚೆ ಹೋಗಬೇಡಿ. ಮತ್ತೆ ಹೇಳುತ್ತಿದ್ದೇನೆ. ಆಚೆ ಈಚೆ ಹೋಗಬೇಡಿ. ಯಾವುದೇ ಗಂಡಾಂತರ ಬಂದರೂ, ಏನೇ ಆದರೂ ಅಷ್ಟೇ!! ನೀವೇನಾದರೂ ಬಿದ್ದಿರೋ, ಅದಕ್ಕೆ  ದಂಡ ಕಟ್ಟಬೇಕಾಗುತ್ತದೆ. ನಾನು ಹೇಳದೆ ಯಾವ ಪ್ರಾಣಿಗೂ ಗುಂಡು ಹಾರಿಸಕೂಡದು.”

ಯಾಕೆ?” ಎಕೆಲ್ಸ್ ಕೇಳಿದ.

ಮುಂದುವರಿಯುವುದು

-ಶ್ರೀನಿಧಿ

srinidhi1947@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Team readoo kannada

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!