Featured Uncategorized ಅಂಕಣ

ಮೋದಿಯ ಹಿಂದಿ ಬೇಡ, ಅಂಬೇಡ್ಕರರ ಸಂಸ್ಕೃತ ಇರಲಿ

ಅದೊಂದು ದಿನ ಮಧ್ಯಾಹ್ನ ನಾಲ್ಕು ಗಂಟೆಗೆ ವಾಟ್ಸಾಪ್ ಮೆಸೇಜ್ ಬಂತು. ಸಂಜೆ ಆರು ಗಂಟೆಗೆ ಸರಿಯಾಗಿ ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ ಎಂಬ ವಿಷಯವಿಟ್ಟುಕೊಂಡು ಒಂದು ಹ್ಯಾಷ್ಟ್ಯಾಗ್ ಬಳಸಿ ಟ್ವಿಟ್ಟರ್ ಕ್ಯಾಂಪೇನ್ ಮಾಡುವವರಿದ್ದೇವೆ, ನೀವು ಕೈ ಜೋಡಿಸಬೇಕು ಎಂದು ಬರೆದಿತ್ತು. ಟ್ವಿಟ್ಟರ್ ಕ್ಯಾಂಪೇನ್ಗಳು ಹೇಗೆ ಜರುಗುತ್ತವೆಂದು ಗೊತ್ತಿಲ್ಲದವರಿಗೆ ಈ ಮಾಹಿತಿ: ಯಾವುದಾದರೊಂದು ವಿಷಯದ ಮೇಲೆ ಚಳವಳಿಯನ್ನೋ ಹೋರಾಟವನ್ನೋ ರೂಪಿಸಬೇಕಿದ್ದರೆ ದಿನದ ಒಂದು ನಿರ್ದಿಷ್ಟ ಸಮಯದಲ್ಲಿ ನೂರಿನ್ನೂರು ಜನ ಒಂದೇ ಸಲಕ್ಕೆ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದರೆ ಸಾಕು. ಆದರೆ ಹಾಗೆ ಟ್ವೀಟ್ ಮಾಡುವಾಗ (ಬರೆದ ಸಂಗತಿ ಏನಿದ್ದರೂ ನಡೆಯುತ್ತದೆ. ಚಿತ್ರಗೀತೆಯ ಸಾಲಾದರೂ ಆದೀತು. ಆದರೆ,) ಕಡ್ಡಾಯವಾಗಿ ಆ ಚಳವಳಿಗೆ ಸಂಬಂಧಿಸಿದ ಒಂದು ಹ್ಯಾಷ್ಟ್ಯಾಗ್ (# ಎಂಬ ಸಂಕೇತದಿಂದ ಪ್ರಾರಂಭವಾಗುವ ಶಬ್ದಪುಂಜ)ಅನ್ನು ಬಳಸಲೇಬೇಕು. ಹಾಗೆ ಮಾಡಿದಾಗ, ನೂರು ಮಂದಿ ದೇಶದ ನೂರು ಕಡೆಗಳಲ್ಲಿ ಕೂತು ಆ ಚಳವಳಿಗಾಗಿ ತಮ್ಮ ಒಂದೊಂದು ಟ್ವೀಟುಗಳನ್ನು ಧಾರೆ ಎರೆದರೂ ಅವೆಲ್ಲವೂ ಒಂದಕ್ಕೊಂದು ಪೋಣಿಸಿಕೊಂಡು ದೊಡ್ಡ ಚಳವಳಿಯ ರೂಪ ಪಡೆಯುತ್ತವೆ. ನೂರಾರು ಸಣ್ಣ ಮೀನುಗಳು ದೊಡ್ಡ ಮೀನಿನಾಕಾರದಲ್ಲಿ ಜೊತೆಯಾಗಿ ಒಂದು ಕ್ಷಣಕ್ಕೆ ತಿಮಿಂಗಿಲವನ್ನೇ ಬೆದರಿಸಿ ಓಡಿಸಿದಂತೆ ಈ ಟ್ವೀಟ್ ಚಳವಳಿ ತನ್ನ ಅಸ್ತಿತ್ವ ಸಾರುತ್ತದೆ. ಅಂಥದೊಂದು ಚಳವಳಿಯನ್ನು ಅಂದು ಸಂಜೆ ಹಮ್ಮಿಕೊಳ್ಳೋಣ ಎಂದು ಗೆಳೆಯರೊಬ್ಬರು ಮಾಡಿದ್ದ ಮೆಸೇಜ್ ಅದು. ಅವರಿಗೆ ಫೋನಾಯಿಸಿದೆ. “ನೀವು ಮೆಟ್ರೋದಲ್ಲಿ ಹಿಂದಿ ಭಾಷೆಯ ಹೇರಿಕೆ ಆಗಿದೆ ಎಂದಿದ್ದೀರಿ. ಕನ್ನಡವನ್ನು ಅಳಿಸಿ ಕೇವಲ ಹಿಂದಿಯೊಂದನ್ನೇ ಉಳಿಸಿಕೊಂಡರೆ, ಅಥವಾ ಕನ್ನಡವನ್ನು ಮೂಲೆಗೊತ್ತಿ ಹಿಂದಿ ಇಂಗ್ಲೀಷುಗಳೇ ವಿಜೃಂಭಿಸಿದರೆ ನಿಮ್ಮ ಮಾತಿಗೆ ಅರ್ಥವಿರುತ್ತಿತ್ತು. ಮೂರು ಭಾಷೆಗಳ ಸೂತ್ರದಂತೆ ಹಿಂದಿ ಅಲ್ಲಿದ್ದರೆ ನಿಮ್ಮದೇನು ತಕರಾರು? ಕನ್ನಡದ ಮೇಲೆ ಅಲ್ಲಿ ಹಿಂದಿಯನ್ನು ಹೇರಲಾಗಿದೆ ಎಂದೇಕೆ ನಿಮಗನ್ನಿಸಬೇಕು? ತರಕಾರಿಯಂಗಡಿಯಲ್ಲಿ ಬೆಂಡೆಕಾಯಿ, ಬದನೆಕಾಯಿ, ಹೂಕೋಸು ಇತ್ಯಾದಿ ಎಲ್ಲವನ್ನೂ ಒಂದೊಂದು ಬುಟ್ಟಿಯಲ್ಲಿ ಪ್ರತ್ಯೇಕವಾಗಿ ಇಟ್ಟಿರುವಾಗ ಬೆಂಡೆಕಾಯಿ ಮೇಲೆ ಹೂಕೋಸಿನ ಹೇರಿಕೆಯಾಯ್ತು ಎಂದು ಹೇಳಿದರೆ ಜನ ನಗೋದಿಲ್ವೆ ಸ್ವಾಮಿ?”, ಎಂದೆ. “ಏನ್ರೀ ಮಕ್ಕಳ ಹಾಗೆ ವಾದ ಮಾಡ್ತೀರಿ? ಇವತ್ತು ಹಿಂದಿ ಮೂರನೇ ಸ್ಥಾನದಲ್ಲಿದೆ, ಇನ್ನೆರಡು ವರ್ಷ ಹೋದ್ರೆ ಮೊದಲ ಸ್ಥಾನಕ್ಕೆ ಬಂದು ಕೂರುತ್ತದೆ. ಆಮೇಲೆ ಬೋರ್ಡಿನಿಂದ ಕನ್ನಡವನ್ನು ತೆಗೆದು ಎಸೆಯಲಾಗುತ್ತದೆ” ಎಂದು ಹೆದರಿಸಿದರು. “ಹೌದಾ ಸಾರ್! ಈ ವಿಷಯ ಗೊತ್ತೇ ಇರಲಿಲ್ಲ! ಅಂದ ಹಾಗೆ ನೆರೆ ಪರಿಹಾರನಿಧಿಗೆ ನಿಮ್ಮ ಕಡೆಯಿಂದ ಒಂದು ಸಾವಿರ ರುಪಾಯಿ ದೇಣಿಗೆ ಬೇಕಲ್ಲ!” ಎಂದೆ. “ನೆರೆ? ಎಲ್ಲಿ?”, ಪ್ರಶ್ನೆ ಬಂತು. “ನೋಡಿ ಸಾರ್, ಈಗ ಸಣ್ಣದಾಗಿ ಗಾಳಿ ಬೀಸ್ತಾ ಇದೆ. ಮಳೆಗಾಲ ಬೇರೆ ನೋಡಿ. ಈ ಗಾಳಿಯೇ ದೊಡ್ಡದಾಗಿ ಬಿರುಗಾಳಿಯಾಗಿ ದೊಡ್ಡದೊಂದು ಮೋಡ ತಂದು ಅದು ಈ ಬೆಂಗಳೂರ ಮೇಲೆ ಕುಂಭದ್ರೋಣ ಮಳೆ ಸುರಿದು ನಾಳೆನೋ ನಾಡಿದ್ದೋ ಪ್ರವಾಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಏನು ಗ್ಯಾರಂಟಿ? ನಾಳೆ ಆಗೇ ತೀರಲಿರುವ ಆ ವಿಕೋಪಕ್ಕೆ ಇವತ್ತೇ ಪರಿಹಾರಧನ ಸಂಗ್ರಹಿಸೋಣ ಅಂತ ಹೊರಟಿದ್ದೇನೆ” ಎಂದು ವಿವರಿಸಿದೆ. ತಕ್ಷಣ ಆಸಾಮಿ ಕಾಲು (ನನ್ನದಲ್ಲ, ಫೋನಿನದ್ದು) ಕಟ್ ಮಾಡಿ ಬಿಟ್ಟರು!

ಇವೊತ್ತು ಬಹಳಷ್ಟು ಸಂಘಟನೆಗಳು ಚುನಾವಣೆಗೆ ಇನ್ನೇನು ಐದಾರು ತಿಂಗಳಿವೆ ಎನ್ನುವಷ್ಟರಲ್ಲಿ ಚುರುಕಾಗುತ್ತವೆ; ಮಳೆಗಾಲದ ಅಣಬೆಯಂತೆ ಚಿಗುರುತ್ತವೆ. ಅಥವಾ ಹತ್ತಿಪ್ಪತ್ತು ವರ್ಷಗಳಿಂದ ಜೀವಂತವಿದ್ದರೂ ಕರಡಿಯಂತೆ ನಿದ್ರಿಸಿ ಯಾವುದಾದರೂ ಚುನಾವಣೆ ಆಸುಪಾಸಿನಲ್ಲಿದ್ದಾಗಷ್ಟೇ ಕೆಲವು ವಿಷಯಗಳನ್ನಿಟ್ಟು ಹೋರಾಟಕ್ಕಿಳಿಯುತ್ತವೆ. ಈ ಸಂಘಟಕರ ಉದ್ದೇಶ ಸರಳ ಮತ್ತು ಸ್ಪಷ್ಟ. ನಾವೂ ಇದ್ದೇವೆ ಎಂಬುದನ್ನು ತೋರಿಸಿಕೊಳ್ಳುವುದು ಮೊದಲ ಗುರಿ. ಆ ಮೂಲಕ ತಾವು ಒಂದು ಹೋರಾಟವನ್ನು ಸಂಘಟಿಸಬಲ್ಲ, ಒಂದಷ್ಟು ಜನರನ್ನು ಬಡಿದೆಬ್ಬಿಸಬಲ್ಲ, ಆ ಮೂಲಕ ರಾಜಕೀಯ ಶಕ್ತಿಕೇಂದ್ರಕ್ಕೆ ಬಿಸಿ ಮುಟ್ಟಿಸಬಲ್ಲಷ್ಟು ಶಕ್ತರು ಎಂಬುದನ್ನು ನಿರೂಪಿಸುವುದು ಎರಡನೇ ಗುರಿ. ಹೀಗೆ ಮಾಡಿದಾಗ ಸಹಜವಾಗಿಯೇ ರಾಜಕೀಯ ಪಕ್ಷಗಳು ಇಂಥ ಸಂಘಟಕರನ್ನು ತಮ್ಮ ದುಂಡುಮೇಜಿನ ಮೀಟಿಂಗುಗಳಿಗೆ ಕರೆದು ಹಾಲು-ಬಿಸ್ಕೆಟ್ ಕೊಟ್ಟು ಸುಖಕಷ್ಟ ವಿಚಾರಿಸುತ್ತವೆ. ಇಂಥ ಸಂಘಟನೆಗಳನ್ನು ಚುನಾವಣೆ ಮುಗಿವವರೆಗೆ ಚೆನ್ನಾಗಿ ನೋಡಿಕೊಂಡರೆ ಒಂದಷ್ಟು ಲಾಭ ಮಾಡಿಕೊಳ್ಳಬಹುದು; ಕಡೇ ಪಕ್ಷ ನಷ್ಟ ಮಾಡಿಕೊಳ್ಳದಂತೆ, ಹೆಸರು ಕೆಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬಹುದು ಎಂಬುದು ಆ ಪಕ್ಷಗಳ ಕಾಳಜಿ, ಮುಂದಾಲೋಚನೆ. ಈ ಬಗೆಯ ಚುನಾವಣಾಪೂರ್ವ ಲಾಭಗಳನ್ನು ಮಾಡಿಕೊಳ್ಳಲೆಂದೇ ಹಾತೊರೆವ ಸಂಘಟನೆಗಳು ದೇಶದಲ್ಲಿ ಮಾತ್ರವೇಕೆ, ಕರ್ನಾಟಕದಲ್ಲೂ ಬಹಳ ಇವೆ. ಹಿಂದೆಲ್ಲ ಬೀದಿ ಹೋರಾಟವನ್ನಷ್ಟೇ ಮಾಡಿಕೊಂಡು ಶಕ್ತಿ ಪ್ರದರ್ಶನ ಮಾಡುತ್ತಿದ್ದವರು ಈಗ ಜಾಲತಾಣಗಳಿಗೆ ವರ್ಗಾವಣೆಯಾಗಿದ್ದಾರೆ. ಟ್ವಿಟ್ಟರ್, ಫೇಸ್ಬುಕ್ ಮೂಲಕ ತಮ್ಮ ಪೂರ್ವಯೋಜಿತ ಚಳವಳಿಗಳನ್ನು ರೂಪಿಸುವ ಮೂಲಕ ರಾಜ್ಯದಲ್ಲೊಂದು ಸದ್ದು ಎದ್ದು ಕಂತುವಂತೆ ನೋಡಿಕೊಳ್ಳುತ್ತಿದ್ದಾರೆ.

ಇಲ್ಲವಾದರೆ ನೀವೇ ಯೋಚಿಸಿ. ಮೆಟ್ರೋದಲ್ಲಿ ಹಿಂದಿ ಹೇರಿಕೆ – ಎಂಬುದು ಚಳವಳಿಯ ವಿಷಯವಾ? ನಮ್ಮ ರಾಜ್ಯದ, ಮತ್ತು ದೇಶದ ಬಹುತೇಕ ಎಲ್ಲ ರಾಜ್ಯಗಳ ಅಂಚೆ ಕಚೇರಿ, ಬ್ಯಾಂಕ್ ಕಚೇರಿಗಳಲ್ಲಿ ಮೂರು ಭಾಷೆಗಳಲ್ಲಿ ಸೂಚನಾ ಫಲಕಗಳನ್ನೂ ಕಾಗದ ಪತ್ರಗಳನ್ನೂ ಬರೆಯುವ ಕ್ರಮ ಇದೆ. ಬ್ಯಾಂಕ್ನ ಚಲನ್ನಲ್ಲಿ ಕನ್ನಡ ಇರಲಿಲ್ಲ ಎಂದರೆ ಅದನ್ನು ಕೇಳುವ ಹಕ್ಕು ಕನ್ನಡಿಗನದ್ದು. ಅಂಚೆ ಕಚೇರಿಯ ಸಿಬ್ಬಂದಿ ಕನ್ನಡದಲ್ಲಿ ಜವಾಬು ಕೊಡಲಿಲ್ಲ ಎಂದರೆ ಅದನ್ನು ಆತನ ಬಾಯಿಯಿಂದ ಹೇಳಿಸಿ ಉತ್ತರ ಪಡೆವ ಹಕ್ಕು ಕನ್ನಡಿಗನದ್ದು. ಅಂಥ ಘಟನೆಗಳಾದಾಗ ಖಂಡಿತವಾಗಿಯೂ ಹಿಂದೀ ಹೇರಿಕೆಯನ್ನು ಪ್ರತಿಭಟಿಸಿ ಹೋರಾಟ ಮಾಡೋಣ. ಆದರೆ, ಮೆಟ್ರೋದಲ್ಲಿ ಹಿಂದಿ ಹೇರಿಕೆ ಎಂಬ ವಿಷಯವಿಟ್ಟುಕೊಂಡು ಅದರ ಹೆಸರಲ್ಲಿ ಹೋರಾಟ ಮಾಡುತ್ತ, ಅನುಕೂಲಕ್ಕಿರಲಿ ಎಂದು ಬ್ಯಾಂಕು, ಸೂಪರ್ ಮಾರ್ಕೆಟ್ಟು ಇವನ್ನೆಲ್ಲ ಜೋಡಿಸುತ್ತ; ಅಲ್ಯಾವುದೋ ಗಾಂಧಿ ಬಜಾರಿನ ತರಕಾರಿ ಮಾರೋ ಹೆಂಗಸಿಗೆ ಗ್ರಾಹಕನೊಬ್ಬ ಹಿಂದಿಯಲ್ಲಿ ತರಕಾರಿ ಬೆಲೆ ವಿಚಾರಿಸಿದ ಎಂಬುದನ್ನೇ ಮೊಬೈಲ್ನಲ್ಲಿ ಚಿತ್ರೀಕರಿಸಿ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಮಾಡುತ್ತ ವಿಷಯಕ್ಕೆ ಆಯಾಮಗಳನ್ನು ಜೋಡಿಸಿಕೊಂಡು ಹೋಗುತ್ತಿದ್ದಾರೆ ಎಂದರೆ ಇವರಿಗಿರುವ ಹಿತಾಸಕ್ತಿಗಳು ಬೇರೆ; ಇಲ್ಲಿ ಮಾಡುತ್ತಿರುವ ಹೋರಾಟ ನಾಟಕ ಎಂದೇ ಹೇಳಬೇಕಾಗುತ್ತದೆ.

ಮೊದಮೊದಲು ಹೀಗೆ ಹಿಂದಿಯ ವಿರುದ್ಧ ಉಗ್ರಪ್ರತಾಪ ಮೆರೆದ ಹೋರಾಟಗಾರರು, ಹಿಂದಿಯೊಂದೇ ಏಕೆ, ಇಂಗ್ಲೀಷನ್ನೂ ಬೋರ್ಡಿಂದ ಕೆಳಗಿಳಿಸಲು ಹೋರಾಟ ಮಾಡಿ ಎಂದೊಡನೆ ಮೆತ್ತಗಾದರು. ಇಂಗ್ಲೀಷ್ ಉದ್ಯೋಗದ ಭಾಷೆ, ಅನ್ನ ಕೊಡುವ ಭಾಷೆ, ಅದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂಬ ಒಂದು ವಾದ ಹುಟ್ಟಿತು. ಮೆಟ್ರೋ ಬಳಸುವವರು ದೇಶೀಯರಷ್ಟೇ ಅಲ್ಲ, ವಿದೇಶೀಯರು ಕೂಡ. ಹಾಗಾಗಿ ಅವರಿಗಾಗಿ ಬೋರ್ಡುಗಳು ಇಂಗ್ಲೀಷಿನಲ್ಲಿರಲಿ ಎಂಬ ಅನುಕೂಲಸಿಂಧುತ್ವ ಹುಟ್ಟಿತು. ಬೋರ್ಡಿನಲ್ಲಿ ಮೂರು ಭಾಷೆಗಳಿದ್ದಾಗ, ಮೊದಮೊದಲು ಕೊನೆಯ ಸ್ಥಾನದಲ್ಲಿರುವ ಹಿಂದಿ ನಂತರ ಇಡೀ ಬೋರ್ಡನ್ನು ಆಕ್ರಮಿಸಿಕೊಳ್ಳುತ್ತದೆ ಎಂಬುದೇ ನಿಜವಾದರೆ ಕನ್ನಡ-ಇಂಗ್ಲೀಷ್ ಇವೆರಡೇ ಇದ್ದಾಗ ಕೂಡ ಕನ್ನಡಕ್ಕೆ ಇಂಗ್ಲೀಷಿನಿಂದ ಅಂಥ ಅಪಾಯ ಇದೆ ತಾನೆ? ಇಂಗ್ಲೀಷ್ ಅನ್ನ ಕೊಡೋ ಭಾಷೆ, ಆದ್ದರಿಂದ ವಿರೋಧ ಬೇಡ ಎನ್ನುವುದಾದರೆ ಇಂಗ್ಲೀಷನ್ನು ನೆಚ್ಚಿಕೊಳ್ಳದೆ ಬದುಕು ಕಟ್ಟಿಕೊಂಡಿರುವ ಚೀನಾ, ಜರ್ಮನಿ, ರಷ್ಯ, ಜಪಾನ್, ಕೊರಿಯಾ, ಫ್ರಾನ್ಸ್, ಲ್ಯಾಟಿನ್ ಅಮೆರಿಕಾ, ಸ್ಪೇನ್, ಪೋರ್ಚುಗಲ್, ಡೆನ್ಮಾರ್ಕ್ನಂಥ ದೇಶಗಳು ಬೀದಿಗೆ ಬಿದ್ದಿವೆಯೇ ಎಂದು ಕೇಳಬೇಕಾಗುತ್ತದೆ! ಗ್ರೇಟ್ ಬ್ರಿಟನ್ನ ಒಳಗೇ ಇದ್ದೂ ತಮ್ಮೊಳಗೆ ಇಂಗ್ಲೀಷಿನ ರಕ್ತ ಇಳಿಯದಂತೆ ಛಲದಿಂದ ಬದುಕುತ್ತಿರುವ ಐರಿಷರಿದ್ದಾರೆ. ಇನ್ನೊಂದು ದಿಕ್ಕಿನಿಂದ ಯೋಚಿಸುವುದಾದರೆ, ಭಾರತಕ್ಕೆ ಪ್ರವಾಸಿಗರಾಗಿ ಬಂದು ಹೋಗುವ ಜನರ ಪೈಕಿ ಎರಡನೇ ಅತ್ಯಂತ ದೊಡ್ಡ ವರ್ಗ ಬಾಂಗ್ಲಾ ದೇಶೀಯರದ್ದು. ವಿದೇಶಿಯರಿಗಾಗಿ ಇಂಗ್ಲೀಷ್ ಬೇಕು ಎನ್ನುವವರು ತಮ್ಮ ಲಾಜಿಕ್ ಮುಂದುವರೆಸಿ ಬಾಂಗ್ಲಾ ದೇಶೀಯರಿಗಾಗಿ ಮೆಟ್ರೋಗಳಲ್ಲಿ ಬಾಂಗ್ಲಾ ಭಾಷೆಗೂ ಜಾಗ ಇರಲಿ ಎನ್ನುತ್ತಾರೆಯೇ? ವಿಷಯ ಅತ್ಯಂತ ಸ್ಪಷ್ಟವಾಗಿದೆ. ಕೆಲವೊಂದು ಹೋರಾಟಗಾರರಿಗೆ ಚುನಾವಣೆಯ ಸಮಯ ಹತ್ತಿರ ಬರುತ್ತಿದ್ದಂತೆ ತಮಗೂ ಒಂದು ಅಸ್ಮಿತೆಯಿದೆಯೆಂದು ತೋರಿಸಿಕೊಳ್ಳಬೇಕಾಗಿದೆ. ಆರಸ್ಸೆಸ್ನಂಥ ಸಂಘಟನೆಗೆ ಪರ್ಯಾಯವಾಗಿ ಬೆಳೆಯಬೇಕು; ನಾವೂ ಬೌದ್ಧಿಕ್, ಅಧ್ಯಯನ ಕೂಟ ಇತ್ಯಾದಿಗಳನ್ನು ರಚಿಸಿಕೊಂಡು ಆರೆಸ್ಸೆಸ್ಗೆ ಸಮಾಂತರವಾಗಿ ಬುದ್ಧಿಯ ಮೇಲೆ ಸಂಘಟಿತವಾದ ಪಕ್ಷವಾಗಿ ಬೆಳೆಯಬೇಕು ಎಂಬ ಆಸೆ ಕೆಲವರಿಗಿತ್ತು. ಆದರೆ ಸ್ಥಾಪನೆಯಾಗಿ ಒಂದೂವರೆ-ಎರಡು ದಶಕಗಳೇ ಕಳೆದರೂ ಆರಕ್ಕೇರದೆ ಮೂರಕ್ಕಿಳಿಯದೆ ತ್ರಿಶಂಕು ಸ್ಥಿತಿಯಲ್ಲಿ ನಿಂತಿರುವ ಹೋರಾಟಗಾರರು ಅತ್ತ ಕನ್ನಡವನ್ನು ಸರಳೀಕರಿಸಲು ಹೋಗಿ ಕುಲಗೆಡಿಸಿ ಯಾರ ಗಮನವನ್ನೂ ಸೆಳೆಯದೆ ವಿಫಲರಾದರೆ ಇತ್ತ ರಟ್ಟೆಯ ಬಲ ನೆಚ್ಚಿಕೊಂಡಿರುವ ರಾಜಕೀಯ ವ್ಯಕ್ತಿಗಳಿಗೆ ಘೋಸ್ಟ್ ರೈಟರ್ಸ್ ಎಂಬ ಭೂತ ಬರಹಗಾರರಾಗಿ ಏನೋ ನಾಲ್ಕು ಸಾಲು ಗೀಚಿಕೊಟ್ಟು ದುಡ್ಡು – ಮನೆ – ಕಾರುಗಳನ್ನು ಮಾಡಿಕೊಂಡು ಕಳೆದು ಹೋಗಿದ್ದಾರೆ. ಈ ಬಳಗಗಳಲ್ಲಿ ಹೆಚ್ಚಿನವರಿಗೆ ಹೋರಾಟವೆಂದರೆ ಶೋಕಿ ಅಷ್ಟೆ. ಹಾಗಾಗಿಯೇ ಇವರು ಅರೇಬಿಕ್ ಭಾಷೆಯನ್ನು ಪ್ರಾಥಮಿಕ ಶಾಲೆಗಳಲ್ಲಿ ಕಲಿಸುತ್ತೇವೆಂದು ಸರಕಾರ ಘೋಷಣೆ ಮಾಡಿದಾಗ ಮೌನ ಮುರಿಯರು. ನಾಯಿಕೊಡೆಯಂತೆ ಬೆಳೆಯುತ್ತಿರುವ ಅನ್ಯಭಾಷಾ ಶಾಲೆಗಳ ಬಗ್ಗೆ ಚಕಾರವೆತ್ತರು. ದಿನ ದಿನವೂ ಮುಚ್ಚುತ್ತ ಸಾಗಿರುವ ಕನ್ನಡ ಶಾಲೆಗಳ ದುಸ್ಥಿತಿಯ ಬಗ್ಗೆ ಇವರ ಮಾತೇ ಇಲ್ಲ. ಕನ್ನಡಿಗರಿಗೆ ನಿಜಕ್ಕೂ ಆಗುತ್ತಿರುವ ಅನ್ಯಾಯಗಳ ಬಗ್ಗೆ ಯಾವ ಸೊಲ್ಲೂ ಇಲ್ಲ. ಮೆಟ್ರೋ ಎಂಬ ಮೇಲ್ವರ್ಗ, ಮಧ್ಯಮ ವರ್ಗದ ಜನ ಓಡಾಡುವ ಸಂಚಾರ ವ್ಯವಸ್ಥೆಯಲ್ಲಿ ಯಾರಿಗೂ ಅಷ್ಟೊಂದು ಮುಖ್ಯ ಅನ್ನಿಸದ ಬೋರ್ಡುಗಳ ಭಾಷೆಯ ವಿಷಯವೇ ಇವರಿಗೆ ಮುಖ್ಯವಾಗಿ ಕಾಣಿಸಿಕೊಳ್ಳುವುದರ ಹಿಂದೆ ಹಲವು ಉದ್ದೇಶಗಳು, ಹಿತಾಸಕ್ತಿಗಳು ಇರುವುದು ಸುಸ್ಪಷ್ಟ. ಯಾವ ಹೋರಾಟದಿಂದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದೋ ಮತ್ತು ರಾಜ್ಯ ಸರಕಾರದ ಇಮೇಜಿಗೆ ಧಕ್ಕೆ ತರದೆ ಇರಬಹುದೋ ಅಂಥವಷ್ಟೇ ಇವರಿಗೆ ಇಶ್ಯೂಗಳಾಗಿ ಕಾಣಿಸುತ್ತವೆ. ಅವಕ್ಕಷ್ಟೇ ಇವರ ಕಪ್ಪು ಬಾವುಟಗಳು ಹಾರಾಡುತ್ತವೆ.

ಬಿಡಿ, ಈ ಹಾರಾಟ ಹೋರಾಟಗಳ ಅಸಲಿಯತ್ತನ್ನು ಕೆದಕುತ್ತ ಹೋಗುವ ಬದಲು ನಾವು ಇನ್ನೊಂದು ದಿಕ್ಕಿನತ್ತ, ಇನ್ನೊಂದು ಸಾಧ್ಯತೆಯತ್ತ ಯಾಕೆ ಯೋಚಿಸಬಾರದು ಎಂದು ನೋಡಿದಾಗ ನಮಗೆ ಕಾಣುವುದು ಡಾ. ಬಾಬಾಸಾಹೇಬ್ ಅಂಬೇಡ್ಕರ್. ಅದು 1949ರ ಸಮಯ. ಸೆಪ್ಟೆಂಬರ್ನ ಮೊದಲ ವಾರ. ಭಾರತದ ಸಂವಿಧಾನ ರಚನೆಯಾಗುತ್ತಿದ್ದ ಹೊತ್ತು. ಪ್ರತಿದಿನವೂ ಒಂದಿಲ್ಲೊಂದು ಆರ್ಟಿಕಲ್ ಅನ್ನು ಎತ್ತಿಕೊಂಡು ಅದರ ಬಗ್ಗೆ ಅತ್ಯಂತ ವಿಶದವಾದ ಚರ್ಚೆ ನಡೆಸಿ, ಸಂಸತ್ತಿನ ಒಪ್ಪಿಗೆಯ ಮೇರೆಗೆ ಅವುಗಳನ್ನು ಸಂವಿಧಾನದ ಪುಟಗಳಲ್ಲಿ ಸೇರಿಸಿಕೊಂಡು ಹೋಗುತ್ತಿದ್ದ ಹೊತ್ತು. ಆ ಸಂದರ್ಭದಲ್ಲಿ ಸಂವಿಧಾನದ 310(1)ರ ವಿಧಿಯ ಚರ್ಚೆ ಬಂತು. ಅದು ಭಾರತಕ್ಕೆ ದೇಶಭಾಷೆ ಯಾವುದಾಗಬೇಕೆಂಬುದರ ವಿಷಯವನ್ನು ಚರ್ಚಿಸುವ ವಿಧಿ. ಭಾರತ ಇದುವರೆಗೆ ಆಂಗ್ಲರ ದಾಸ್ಯದಲ್ಲಿ ನಲುಗಿದ್ದು ಸಾಕು; ಇದೀಗ ಅದು ತನ್ನ ಅಸ್ಮಿತೆಯನ್ನು ಮರಳಿ ಪಡೆಯಬೇಕಾದ ಸಂಕ್ರಮಣ ಘಟ್ಟ. ಭಾರತದ ಇತಿಹಾಸ, ಪುರಾಣ, ಸಂಸ್ಕೃತಿಗಳೆಲ್ಲದರ ತಾಯಿಬೇರೂ ಇರುವುದು ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿ. ಭಾರತದ ಇತಿಹಾಸ ಬೇರೆಯಲ್ಲ; ಸಂಸ್ಕೃತದ ಇತಿಹಾಸ ಬೇರೆಯಲ್ಲ. ಹಾಗಾಗಿ ಭಾರತಕ್ಕೆ ಸಂಸ್ಕೃತವೇ ರಾಜಭಾಷೆ, ರಾಜ್ಯಭಾಷೆ ಆಗಲಿ ಎಂದು ಡಾ. ಅಂಬೇಡ್ಕರ್ ಹೇಳಿದರು. ಅವರ ಮಾತುಗಳಿಗೆ ಅಂದು ಸಂಸತ್ತಿನಲ್ಲಿ ಸಹಮತ ಸೂಚಿಸಿದ ಇಬ್ಬರು ಮೇರುವ್ಯಕ್ತಿತ್ವಗಳೆಂದರೆ ಬಿ.ವಿ. ಕೇಸ್ಕರ್ ಮತ್ತು ನಾಜಿರುದ್ದೀನ್ ಅಹಮದ್! ಇಂಥದೊಂದು ಸಂಗತಿ ಭಾರತದಲ್ಲಿ ನಡೆದಿರಲು ಸಾಧ್ಯವೇ ಎಂದು ಮೂಗ ಮೇಲೆ ಬೆರಳಿಡುವಂಥ ವಿರುದ್ಧ ತುದಿಗೆ ನಾವಿಂದು, ಸ್ವಾತಂತ್ರ್ಯ ಪಡೆದ ಕೇವಲ ಎಪ್ಪತ್ತು ವರ್ಷಗಳಲ್ಲಿ ಬಂದು ತಲುಪಿದ್ದೇವೆ! ಭಾರತವನ್ನು ಜೋಡಿಸಬೇಕಾದರೆ, ಇಲ್ಲಿನ ವಿವಿಧ ವರ್ಗ-ಜಾತಿ-ಮತ-ಧರ್ಮಗಳನ್ನು ಒಂದುಗೂಡಿಸಬೇಕಾದರೆ ಎಲ್ಲರ ನುಡಿಗಳಲ್ಲೂ ಅಂತರ್ವಾಹಿನಿಯಾಗಿ ಹರಿಯುತ್ತಿರುವ, ಎಲ್ಲರ ಭಾಷೆಗಳಿಗೂ ತಾಯಿಬೇರಾಗಿರುವ ಸಂಸ್ಕೃತವೇ ಸರಿ ಎಂದು ಡಾ. ಅಂಬೇಡ್ಕರ್ ಅಂದೇ ಯೋಚಿಸಿದ್ದರೆಂದರೆ ಅವರನ್ನು ದಾರ್ಶನಿಕನೆನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಸಂಸ್ಕೃತಪರವಾದ ವಾದವನ್ನು ಖಂಡತುಂಡವಾಗಿ ವಿರೋಧಿಸಿ ಕೊನೆಗೂ ಡಾ. ಅಂಬೇಡ್ಕರ್ ಅವರಿಗೆ ಸೋಲಾಗುವಂತೆ ಮಾಡಿದವರು ಯಾರು ಗೊತ್ತೆ? ಪಂಡಿತ್ ಜವಾಹರ್ ಲಾಲ್ ನೆಹರೂ ಮತ್ತು ಅವರ ಕಾಂಗ್ರೆಸ್ ಪಕ್ಷ!

ಇಂದಿಗೂ ನಾವು 1949ರ ಸೆಪ್ಟೆಂಬರ್ 10ರಿಂದ ಮುಂದಿನ ಐದಾರು ದಿನಗಳ ದ ಹಿಂದು, ಸ್ಟೇಟ್ಸ್ಮನ್, ಹಿಂದೂಸ್ತಾನ್ ಸ್ಟಾಂಡರ್ಡ್, ನ್ಯಾಷನಲ್ ಹೆರಾಲ್ಡ್ ಇತ್ಯಾದಿ ಪತ್ರಿಕೆಗಳನ್ನು ತೆರೆದು ನೋಡಿದರೆ ಆ ಕಾಲದಲ್ಲಿ ಸಂಸತ್ತಿನಲ್ಲಿ ಭಾಷೆಯ ಕುರಿತಾಗಿ ನಡೆದ ಬಿಸಿಬಿಸಿ ಚರ್ಚೆಗಳ ವಿವರಗಳು ಸಿಗುತ್ತವೆ. ಅಂಬೇಡ್ಕರ್ ಅವರಿಗೆ ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿ ಆರಿಸಲು ಇನ್ನೊಂದು ಇಂಗಿತವೂ ಇತ್ತು. ಅದೇನೆಂದರೆ, ಎರಡು ಸಾವಿರ ವರ್ಷಗಳ ಹಿಂದೆ ಸಂಸ್ಕೃತವೇ ಕಾರಣವಾಗಿ ಭಾರತದಲ್ಲಿ ವರ್ಗಸಂಘರ್ಷ ಮೂಡಿತು; ಎರಡು ವರ್ಗಗಳ ನಡುವೆ ಕಂದರ ಹೆಚ್ಚಿತು ಎಂಬುದನ್ನು ಓದಿ, ಅಧ್ಯಯನ ಮಾಡಿ ತಿಳಿದಿದ್ದ ಅಂಬೇಡ್ಕರ್ ಈಗ ಅದೇ ಭಾಷೆಯನ್ನು ಸೇತುವೆಯಾಗಿ ಬಳಸಿ ಭಾರತದ ತರತಮಗಳನ್ನು ಕತ್ತರಿಸಿ ಹಾಕಬೇಕು; ಸಹಬಾಳ್ವೆಯ ನಂದನವನವನ್ನು ಕಟ್ಟಬೇಕು ಎಂದು ಬಯಸಿದ್ದರು. ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿ ಆರಿಸಿದರೆ ದಲಿತರು, ಹಿಂದುಳಿದ ವರ್ಗಗಳ ಜನ ಕೂಡ ಕಾಲಕ್ರಮೇಣ ಆ ಭಾಷೆಯಲ್ಲಿ ಸುಲಲಿತವಾಗಿ ವ್ಯವಹರಿಸುವಂತಾಗುತ್ತದೆ, ಮಾತ್ರವಲ್ಲ ಪ್ರಾಚೀನ ಭಾರತದ ಸಾಹಿತ್ಯವನ್ನು ಅದೇ ಭಾಷೆಯಲ್ಲಿ ಓದಿ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ ಎಂಬ ಆಶಯ ಅವರದಾಗಿತ್ತು. ಸಂಸ್ಕೃತವನ್ನು ಇಷ್ಟಪಟ್ಟು ಕಲಿತಿದ್ದ ಮತ್ತು ಆ ಭಾಷೆಯ ಮೂಲಕವೇ ವೇದ-ಉಪನಿಷತ್ತುಗಳನ್ನು ಯಾವ ಅನುವಾದಗಳ ಸಹಾಯವಿಲ್ಲದೆ ಓದಿ ಅರ್ಥೈಸಿಕೊಳ್ಳಬಲ್ಲವರಾಗಿದ್ದ ಅಂಬೇಡ್ಕರ್ ವೇದಗಳ ಅಧ್ಯಯನ ನಡೆಸಿದ ಬಳಿಕ, ಆರ್ಯರ ಆಗಮನದ ಸಿದ್ಧಾಂತವನ್ನು ತಪ್ಪೆಂದು ಖಡಾಖಂಡಿತವಾಗಿ ಹೇಳಿದರು. ಭಾರತವನ್ನು ಅರ್ಥೈಸಿಕೊಳ್ಳುವ ಸಲುವಾಗಿ ಜೆಂಡ್ ಅವೆಸ್ತಾವನ್ನೂ ಅಧ್ಯಯನ ನಡೆಸಿದ ಅಂಬೇಡ್ಕರ್, ವರ್ಣ ಎಂದರೆ ಉದ್ಯೋಗಕ್ಕೆ ಸಂಬಂಧಿಸಿ ಶಬ್ದ. ಅದಕ್ಕೂ ಮೈಯ ಬಣ್ಣಕ್ಕೂ ಯಾವ ಸಂಬಂಧವೂ ಇಲ್ಲ ಎಂಬ ಹೊಳಹುಗಳನ್ನು ನೀಡಿದರು. ಎರಡು ಸಾವಿರ ವರ್ಷಗಳ ಕಾಲ ಮರಳಿನಡಿ ಮುಚ್ಚಿ ಹೋದ ಗುಪ್ತಚಿಲುಮೆಯಂತಿದ್ದ ಹೀಬ್ರೂ ಭಾಷೆಯನ್ನು ಮತ್ತೆ ಹೊಸದಾಗಿ ಒರತೆ ಎಬ್ಬಿಸಿ ಜೀವಂತಗೊಳಿಸಿದ ಇಸ್ರೇಲಿನ ಬೆನ್ ಯೆಹುಡನಂತೆ ಅಂಬೇಡ್ಕರ್ ಸಾವಿರ ವರ್ಷಗಳ ದೀರ್ಘ ನಿದ್ರೆಗೆ ಜಾರಿದ್ದ ಸಂಸ್ಕೃತವನ್ನು ಎಬ್ಬಿಸಿ ಅದಕ್ಕೆ ರಕ್ತಪೂರಣ ಮಾಡ ಬಯಸಿದ್ದರು. ಹಾಗಾಗಿಯೇ, ಭಾರತದಲ್ಲಿ ಸಂಸ್ಕೃತವೇ ಪ್ರಥಮ ಪ್ರಾಶಸ್ತ್ಯವಿರುವ ಭಾಷೆಯಾಗಲಿ; ಮುಂದಿನ ಹದಿನೈದು ವರ್ಷಗಳ ಕಾಲ ಅದರೊಂದಿಗೆ ಇಂಗ್ಲೀಷೂ ಭಾರತದಲ್ಲಿ ವ್ಯಾವಹಾರಿಕ ಭಾಷೆಯಾಗಿ ಬಳಕೆಯಾಗಲಿ. ಆದರೆ ಹದಿನೈದು ವರ್ಷ ಕಳೆಯುತ್ತ ಇಂಗ್ಲೀಷ್ ಅನ್ನು ಸಂಪೂರ್ಣವಾಗಿ ಬಳಸುವುದನ್ನು ನಿಲ್ಲಿಸಿ ಸಂಸ್ಕೃತವೊಂದರಲ್ಲೇ ದೇಶದ ಸರಕಾರೀ ವ್ಯವಹಾರಗಳು, ಜನರ ವ್ಯವಹಾರಗಳು ನಡೆಯುವಂತಾಗಲಿ ಎಂದು ಡಾ. ಅಂಬೇಡ್ಕರ್ ಆಶಿಸಿದ್ದರು. ಈಗಿನಂತೆ ಬುದ್ಧಿಜೀವಿ ಮನಸ್ಥಿತಿಯ ಪತ್ರಕರ್ತರು ಆಗಲೂ ಇದ್ದರೆಂದು ಕಾಣುತ್ತದೆ. ಅಂಥವನೊಬ್ಬ, ಡಾ. ಅಂಬೇಡ್ಕರ್ ಅವರಲ್ಲಿ ಒಡಕಲು ಪ್ರಶ್ನೆಯೊಂದನ್ನಿಟ್ಟ. ಸಂಸ್ಕೃತವನ್ನು ಭಾರತದ ದೇಶಭಾಷೆಯಾಗಿ ಆರಿಸುತ್ತೀರಾ? ಎಂದು, “ನಿಮಗೇನು ತಲೆ ಕೆಟ್ಟಿದೆಯೇ?” ಎಂಬ ಧಾಟಿಯಲ್ಲಿ ಆತ ಕೇಳಿದಾಗ, ಅದನ್ನು ದಿಟ್ಟವಾಗಿ ಎದುರಿಸಿದ ಅಂಬೇಡ್ಕರ್, “ಸಂಸ್ಕೃತವೇ ದೇಶಭಾಷೆಯಾದರೆ ಏನು ತೊಂದರೆ, ಅದನ್ನು ಹೇಳು” ಎಂದು ಅವನ ಬಾಯಿ ಕಟ್ಟಿ ಹಾಕಿದ್ದರು. ಅಂದು ಅಂಬೇಡ್ಕರ್ ಅವರ ವಾದವನ್ನು ತಿರಸ್ಕರಿಸಿ ಮತ ಹಾಕಿ, ಸಂಸ್ಕೃತ ಭಾರತದ ರಾಜ್ಯಭಾಷೆಯಾಗುವುದನ್ನು ತಪ್ಪಿಸಿದ್ದ ಸಂಸದ ಬಿ.ಪಿ. ಮೌರ್ಯ, 2001ರ ಫೆಬ್ರವರಿ 14ರಂದು ಎನ್.ಸಿ.ಇ.ಆರ್.ಟಿ.ಯ ನಿರ್ದೇಶಕರಿಗೆ ಪತ್ರ ಬರೆದು, “ಅದೊಂದು ಕೆಟ್ಟ ಕ್ಷಣ. ಯಾವ ಅನುಭವ, ತಿಳಿವಳಿಕೆ ಇಲ್ಲದ ಎಳಸು ಹುಡುಗನಂತೆ ಅಂಬೇಡ್ಕರ್ ವಾದವನ್ನು ನಾನು ತಿರಸ್ಕರಿಸಿ, ಅಂದಿನ ಮತದಾನದಲ್ಲಿ ಅವರಿಗೆ ಸೋಲಾಗುವಂತೆ ಮಾಡಿದೆ. ಅಥವಾ ಸೋಲಿಗೆ ಕಾರಣರಾದ ಹಲವರಲ್ಲಿ ನಾನೂ ಒಬ್ಬನಾಗಿದ್ದೆ. ಅದರ ಕುರಿತು ಇಂದು ಯೋಚಿಸಿದಾಗ ವಿಷಾದವೆನಿಸುತ್ತದೆ” ಎಂದರು.

ಇಂದು ನಾವು ಅಂಬೇಡ್ಕರ್ ಅವರನ್ನು ಚೌಕಟ್ಟಿನೊಳಗಿನ ಚಿತ್ರವಾಗಿ ಸರಕಾರೀ ಕಟ್ಟಡಗಳ ಗೋಡೆ ಗೋಡೆಯಲ್ಲಿ ನೇತು ಹಾಕಿದ್ದೇವೆ. ಆದರೆ ಅವರ ಚಿಂತನೆ, ಆಲೋಚನೆಗಳನ್ನೆಲ್ಲ ಗಂಟುಮೂಟೆ ಕಟ್ಟಿ ಅಟ್ಟಕ್ಕೆ ಒಗೆದಿದ್ದೇವೆ. ನಮ್ಮ ಸರಕಾರಗಳಿಗೆ ಇಂದು ಅಂಬೇಡ್ಕರ್ ಅವರ ಹೆಸರು ಬೇಕು; ತತ್ತ್ವಾದರ್ಶಗಳು ಬೇಕಾಗಿಲ್ಲ. ಅವರು ಹೇಳಿದ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಅಳವಡಿಸಿಕೊಳ್ಳುವುದು ಬೇಕಾಗಿಲ್ಲ; ಆದರೆ ಚುನಾವಣಾ ಭಾಷಣಗಳಲ್ಲಿ ಅವರು ಒಂದು ಪ್ರಚಾರ ವಿಷಯವಾಗಿ ಬಂದರೆ ಸಾಕು! ಒಂದು ವೇಳೆ ಆ ದಿನ ಅಂಬೇಡ್ಕರ್ ಅವರ ಮುಪ್ಪುರಿಗೊಂಡ ಚಿಂತನೆಗೆ ತಲೆದೂಗಿ ನೆಹರೂ ಹ್ಞೂ ಅಂದು ಬಿಟ್ಟಿದ್ದರೆ? ಭಾಷಾ ವಿಧಿ ಊರ್ಜಿತವಾಗಿ ಬಿಟ್ಟಿದ್ದರೆ? ಸಂಸ್ಕೃತವೇ ಈ ದೇಶದ ರಾಷ್ಟ್ರಭಾಷೆಯಾಗಿದ್ದರೆ? ಬಹುಶಃ ನಾವು ಇನ್ನೂ ಇನ್ನೂ ದಲಿತ-ಬ್ರಾಹ್ಮಣ ಎನ್ನುತ್ತ ವರ್ಗಸಂಘರ್ಷಗಳ ಅಗ್ನಿಜ್ವಾಲೆಯಲ್ಲಿ ಬೇಯುತ್ತ ಕಾಲ ಕಳೆಯುವ ಪ್ರಮೇಯವೇ ಬರುತ್ತಿರಲಿಲ್ಲವೋ ಏನೋ! ಆದರೂ ಕಾಲ ಮಿಂಚಿಲ್ಲ. ಡಾ. ಅಂಬೇಡ್ಕರ್ ಅವರ ಕನಸನ್ನು ಸಾಕಾರಗೊಳಿಸಲು ಇಂದಿನ ಸರಕಾರವಾದರೂ ಗಟ್ಟಿ ಮನಸ್ಸು ಮಾಡಬೇಕು. ತ್ರಿಭಾಷಾ ಸೂತ್ರ ಎನ್ನುತ್ತ ಎಲ್ಲೆಲ್ಲಿ ಹಿಂದಿಯನ್ನು ತುರುಕಲು ಪ್ರಯತ್ನಗಳು ನಡೆಯುತ್ತಿವೆಯೋ, ಎಲ್ಲೆಲ್ಲಿ ಹಿಂದಿಯ ಹೆಸರಲ್ಲಿ ಗಲಾಟೆಗಳು ಏಳುತ್ತಿವೆಯೋ ಅಲ್ಲೆಲ್ಲ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಅವರ ಕನಸಿನ ಯೋಜನೆಯಾದ ಸಂಸ್ಕೃತವನ್ನು ಜಾರಿಗೊಳಿಸಬೇಕು. ಬರೆಯುವ ಬರಹಗಳು ಹಿಂದಿಯ ಬದಲು ಸಂಸ್ಕೃತದಲ್ಲಿ, ದೇವನಾಗರಿಯಲ್ಲಿರಲಿ. ಬೆಂಗಳೂರಿನ ಮೆಟ್ರೋದಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತದ ಬೋರ್ಡುಗಳು ರಾರಾಜಿಸಲಿ. ಆ ಮೂಲಕ ನಾವು ಹಿಂದಿಯ ಓಟವನ್ನು ತಡೆದಂತೆಯೂ ಆಗುತ್ತದೆ. ಡಾ. ಅಂಬೇಡ್ಕರ್ ಅವರ ಎಂದೆಂದೂ ನನಸಾಗದೆ ಉಳಿದುಹೋದ ಕನಸಿಗೊಂದು ಮುಕ್ತಿ ದೊರಕಿಸಿದ ಪುಣ್ಯವೂ ಸರಕಾರಕ್ಕೆ ಬರುತ್ತದೆ. ಇದೇ ಬಹುಶಃ ನಾವು ನಮ್ಮ ದೇಶಕ್ಕೆ, ನಮ್ಮ ಸಂವಿಧಾನ ಶಿಲ್ಪಿಗೆ ಮತ್ತು ಭಾಷೆಗಳ ತಾಯಿಯಾದ ಸಂಸ್ಕೃತಕ್ಕೆ ಮಾಡಬಹುದಾದ ಬಹುದೊಡ್ಡ ಗೌರವ ಸಮರ್ಪಣೆ.

.

.

ವಿಶ್ವವಾಣಿ (27 ಜೂನ್ 2017) ಪತ್ರಿಕೆಯಲ್ಲಿ ಪ್ರಕಟಿತ ಬರಹ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!