ಕಥೆ

ಮಹಾರವ  – A Sound of Thunder – 3

ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ  ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effect ವಿವರಣೆಗೆ ಇದಕ್ಕಿಂತ ಉತ್ತಮ ಉದಾಹರಣೆ ಪ್ರಾಯಶಃ ಸಿಗಲಾರದು.

ಮಹಾರವ  – A Sound of Thunder – 1

ಮಹಾರವ  – A Sound of Thunder – 2 

ಕಾನನ ಮತ್ತೆ ಮಹಾಮೌನಕ್ಕೆ ಜಾರಿತು. ಮಹಾಪಾತದ ನಂತರ, ಮಹಾ ಶಾಂತಿ. ದುಸ್ವಪ್ನದ ನಂತರ, ಮುಂಜಾನೆ.

ಬಿಲ್ಲಿಂಗ್ಸ್ ಮತ್ತು ಕ್ರೇಮರ್ ಪಥದ ಮೇಲೆಯೇ ಕುಳಿತು ವಾಂತಿ ಮಾಡಿದರು. ಟ್ರಾವಿಸ್ ಮತ್ತು ಲೆಸ್ಪಿರಾನ್ಸ್ , ಹೊಗೆಯಾಡುತ್ತಿರುವ ತಮ್ಮ ಬಂದೂಕುಗಳೊಂದಿಗೆ ಶಪಿಸುತ್ತಾ ನಿಂತರು. ಟೈಮ್ ಮಷೀನ್ ನೊಳಗೆ, ಎಕೆಲ್ಸ್ , ನಡುಗುತ್ತ ಅಂಗಾತ ಬಿದ್ದಿದ್ದ. ಅವನು ಹೇಗೋ ಪಥವನ್ನು ಹುಡುಕಿ, ಯಂತ್ರಕ್ಕ್ಕೆ ಹಿಂದಿರುಗಿದ್ದ.

ನಡೆಯುತ್ತಾ ಬಂದ ಟ್ರಾವಿಸ್, ಎಕೆಲ್ಸ್ ನತ್ತ  ನೋಡಿ, ನಂತರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಿಂದ ಹತ್ತಿಯನ್ನು ತೆಗೆದುಕೊಂಡು, ಉಳಿದವರ ಹತ್ತಿರ ಹಿಂದಿರುಗಿದ.

ಎಲ್ಲ ಶುಚಿಯಾಗಿ.”

ತಮ್ಮ ಶಿರಸ್ತ್ರಾಣಕ್ಕಂಟಿದ ರಕ್ತವನ್ನೆಲ್ಲಾ ಅವರು ಒರೆಸಿದರು. ಅವರೂ ಶಪಿಸಲು ಶುರು ಮಾಡಿದರು. ಮಾಂಸ ಪರ್ವತ ಚಲನೆಯಿಲ್ಲದೆ ಬಿದ್ದಿತ್ತು. ಅದರೊಳಗೆ, ಸದ್ದು ಮಾಡುತ್ತಿದ್ದ ಅಂಗಗಳೆಲ್ಲಾ ತಮ್ಮ ಕೆಲಸ ನಿಲ್ಲಿಸುವುದು ಕೇಳಿಸುತ್ತಿತ್ತು, ಅದರ ಜೀವದ್ರವಗಳು ಕಡೆಯ ಬಾರಿ ಕೋಶದಿಂದ ಗುಲ್ಮದೆಡೆಗೆ ಹೋಗುತ್ತಿದ್ದವು, ಪ್ರತಿಯೊಂದೂ ತನ್ನ ಕಾರ್ಯ ನಿಲ್ಲಿಸುತ್ತಾ, ಶಾಶ್ವತ ನಿಲುಗಡೆಗೆ ಜಾರುತ್ತಿದ್ದವು. ಒಂದು ಕೆಟ್ಟು ನಿಂತ ಗಾಡಿಯ, ಅಥವಾ ಉಗಿಬಂಡಿಯ ಸನಿಹ ನಿಂತ ಭಾವನೆ ಎಲ್ಲರಿಗೂ ಬರುತ್ತಿತ್ತು. ಎಲ್ಲ ಕವಾಟಗಳೂ ತೆರೆದಾಗ ಬರುವ ಸದ್ದುಗಳು, ಅಥವಾ ಎಲ್ಲವನ್ನೂ ಮುಚ್ಚಿದಾಗ ಉಂಟಾಗುವ ಕಂಪನದ ಸದ್ದುಗಳು. ಮುರಿದ ಮೂಳೆಗಳು; ಅದರದೇ ದೇಹದ ಮಹಾ ತೂಕಕ್ಕೆ ಸಿಕ್ಕಿ ಅದರ ಮುಂಗೈಗಳು ಮುರಿದು ಹೋಗಿದ್ದವು. ಮಾಂಸ ಪರ್ವತ  ಕಡೆಯ ಬಾರಿ ಕಂಪಿಸಿತು.

ಮತ್ತೊಂದು ಮಹಾರವ. ಅಲ್ಲಿಯೇ ಇದ್ದ ವೃಕ್ಷದ ದೊಡ್ಡ ಟೊಂಗೆ ಮುರಿದು  ಸತ್ತ  ಟಿರೆಕ್ಸ್  ಮೇಲುರುಳಿತು.

ಆಹ್, ಅಲ್ಲಿ ನೋಡಿ!” ಲೆಸ್ಪಿರಾನ್ಸ್ ತನ್ನ ಕೈಗಡಿಯಾರ ನೋಡುತ್ತಾ, “ಸಮಯಕ್ಕೆ ಸರಿಯಾಗಿ. ಮೂಲದಲ್ಲಿ ಮಹಾವೃಕ್ಷವೇ ಮುರಿದು ಪ್ರಾಣಿಯ ಬಲಿ ತೆಗೆದುಕೊಳ್ಳಬೇಕಿತ್ತು.” ಎರಡೂ ಬೇಟೆಗಾರರತ್ತ ನೋಡಿದ. “ನಿಮಗೆ ವಿಜಯದ ನೆನಪಿಗೆ ಚಿತ್ರವೇನಾದರೂ ಬೇಕೇ?”

ಏನು?”

ನಾವು ವಿಜಯದ ಗುರುತಿಗೆ ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗುವ ಹಾಗಿಲ್ಲ. ಮೂಲದಲ್ಲಿ ದೇಹ ಎಲ್ಲಿ ಬಿದ್ದು ಕೊಳೆಯುವ ಸಾಧ್ಯತೆ ಇತ್ತೋ, ಅಲ್ಲೇ ದೇಹ ಬಿದ್ದಿರಬೇಕು. ಹಕ್ಕಿಗಳು, ಕೀಟಗಳು, ಮತ್ತು ಕ್ರಿಮಿಗಳು ತಮ್ಮ ಕಾರ್ಯವನ್ನು ಅಡ್ಡಿಯಿಲ್ಲದೇ ಮಾಡಲು ಅನುಕೂಲವಾಗುವ ಹಾಗೆ. ಎಲ್ಲವೂ ಸಮತೋಲನದಲ್ಲಿರುವ ಹಾಗೆ. ದೇಹ ಇಲ್ಲೇ ಉಳಿಯುತ್ತದೆ. ನಿಮಗೆ ಬೇಕಾದರೆ ಅದರ ಬಳಿ ನಿಂತು ಒಂದು ಚಿತ್ರ ತೆಗೆದುಕೊಳ್ಳಬಹುದು.”

ಸ್ವಲ್ಪ ಯೋಚಿಸಲು ಪ್ರಯತ್ನ ಮಾಡಿ, ಆಗದೇ,  ಇಬ್ಬರೂ ತಲೆಯಲ್ಲಾಡಿಸಿ, ಬೇಡ ಎಂದು ಹೇಳಿ ಸುಮ್ಮನಾದರು.

ಎಲ್ಲರೂ ಲೋಹದ ಪಥದ ಹಾದಿಹಿಡಿದು ಯಂತ್ರದ ಕಡೆ ನಡೆದರು. ನಿತ್ರಾಣದಿಂದ ಯಂತ್ರದ ಕುರ್ಚಿಗಳ ಮೇಲೆ ಕುಸಿದು ಕುಳಿತರು. ಸತ್ತ ದೈತ್ಯನತ್ತ ಮತ್ತೊಮ್ಮೆ ನೋಡಿದರು, ಅದಾಗಲೇ ಹಕ್ಕಿಗಳು, ಸರೀಸೃಪ ವರ್ಗಕ್ಕೆ ಸೇರುವ ವಿಚಿತ್ರ ಹಕ್ಕಿಗಳು, ಚಿನ್ನದ ಬಣ್ಣದ ಕೀಟಗಳು ಮಿರುಗುವ ಕಾಪಿನ ಮೇಲೆ ತಮ್ಮ ದಾಳಿ ಆರಂಭಿಸಿದ್ದವು. ಟೈಮ್ ಮಷೀನಿನ ನೆಲದ ಮೇಲಾದ ಸದ್ದಿಗೆ ಎಲ್ಲರ ದೇಹವೂ ಸೆಟೆಯಿತು. ಎಕೆಲ್ಸ್ ಅಲ್ಲಿ ನೆಲದ ಮೇಲೆ ನಡುಗುತ್ತಾ  ಕುಳಿತಿದ್ದ.

ನನ್ನದು ತಪ್ಪಾಯಿತು, ಕ್ಷಮಿಸಿಬಿಡಿ,” ಎಕೆಲ್ಸ್ ಕಡೆಗೂ  ಮಾತನಾಡಿದ.

ಮೇಲೇಳು!” ಟ್ರಾವಿಸ್ ಚೀರಿದ.

ಎಕೆಲ್ಸ್ ಮೇಲೆದ್ದ.

ಒಬ್ಬನೇ ಪಥದ ಮೇಲೆ ಆಚೆ ಹೋಗುಬಂದೂಕನ್ನು ಎಕೆಲ್ಸ್ ಎದೆಗೊತ್ತಿ ಟ್ರಾವಿಸ್ ಹೇಳಿದ. “ನೀನು ನಮ್ಮೊಂದಿಗೆ ಯಂತ್ರದಲ್ಲಿ ವಾಪಸು ಬರುತ್ತಿಲ್ಲ. ನಾವು ನಿನ್ನನ್ನು ಇಲ್ಲೇ ಬಿಟ್ಟು ಹೋಗುತ್ತಿದ್ದೇವೆ.”

ಲೆಸ್ಪಿರಾನ್ಸ್ ಟ್ರಾವಿಸ್ ಕೈಯನ್ನು ಹಿಡಿದು. “ಒಂದು ಕ್ಷಣ-“

ನೀನು ಮಧ್ಯೆ ತಲೆಹಾಕಬೇಡ.” ಟ್ರಾವಿಸ್ ತನ್ನ ಕೈಯನ್ನು ಎಳೆದುಕೊಂಡ. “ ಮೂರ್ಖ ನಮ್ಮನ್ನು ಅಲ್ಲೇ ಸಾಯುವ ಹಾಗೆ ಮಾಡುತ್ತಿದ್ದ. ಅದೇನೋ ಪರವಾಗಿಲ್ಲ ಅನ್ನಬಹುದಿತ್ತು. ಆದರೆ ಸಾಧ್ಯವಿಲ್ಲ! ಅವನ ಶೂಗಳನ್ನು ನೋಡು! ಇವನು ಪಥ ಬಿಟ್ಟು ಆಚೆ ಹೋಗಿದ್ದಾನೆ. ನಮ್ಮ ಸರ್ವನಾಶ ಖಂಡಿತ! ಸಾವಿರಾರು ಡಾಲರ್ ಗಳ ಇನ್ಶೂರೆನ್ಸ್ ಹಣ ಹೋಗುತ್ತದೆ! ನಾವು ಯಾರೂ ಪಥ ಬಿಟ್ಟು ಆಚೆ ಈಚೆ ಹೋಗುವುದಿಲ್ಲ ಎಂದು ಖಾತರಿ ಕೊಟ್ಟಿದ್ದೆವು. ಇವನು ಬಿಟ್ಟು ಹೋಗಿದ್ದಾನೆ. ಓಹ್! ಎಂಥ ಮೂರ್ಖ!

ನಾನೀಗ ಸರ್ಕಾರಕ್ಕೆ ವರದಿ ಮಾಡಲೇಬೇಕು. ಅವರು ನಮ್ಮ  ಪ್ರಯಾಣಕ್ಕೆ  ಕೊಟ್ಟ ಪರವಾನಗಿಯನ್ನೇ ರದ್ದು ಮಾಡಬಹುದು. ಅದೆಲ್ಲ ಹಾಳಾಗಿ ಹೋಗಲಿ, ಇವನು ಸಮಯಕ್ಕೆ ಏನು ಮಾಡಿದ್ದನೋ, ಇತಿಹಾಸಕ್ಕೆ ಏನು ಹಾನಿ ಮಾಡಿದ್ದಾನೋ ಯಾರಿಗೆ ಗೊತ್ತು!”

ಸಮಾಧಾನ ಮಾಡಿಕೊ, ಇವನು ಭೂತಕಾಲದಿಂದ ಸ್ವಲ್ಪ ಮಣ್ಣು ತಂದಿದ್ದಾನೆ ಅಷ್ಟೇ.”

ಅದು ನಿನಗೆ ಹೇಗೆ ಗೊತ್ತು?” ಟ್ರಾವಿಸ್ ಕಿರುಚಿದ. “ನಮಗೇನೂ ಗೊತ್ತಿಲ್ಲ! ಎಲ್ಲವೂ ಒಂದು ಮರ್ಮ! ಇಲ್ಲಿಂದ ಹೊರಟುಹೋಗು ಎಕೆಲ್ಸ್!”

ಎಕೆಲ್ಸ್ ಒತ್ತಡದಲ್ಲಿ ತನ್ನ ಅಂಗಿಯನ್ನು ಎಳೆಯುತ್ತಾ, “ನಿಮಗೆ ಎಷ್ಟು ದುಡ್ಡಾದರೂ ಕೊಡುತ್ತೇನೆ. ನೂರು ಸಾವಿರ ಡಾಲರ್ ಗಳಾದರೂ ಸರಿ.”

ಟ್ರಾವಿಸ್ ಎಕೆಲ್ಸ್ ಚೆಕ್ ಬುಕ್ಕಿನ್ನತ್ತ ನೋಡಿ ಉಗಿದ. “ಇಲ್ಲಿಂದ ಹೊರಟು ಹೋಗು. ಟಿರೆಕ್ಸ್ ಪಥದ ಪಕ್ಕದಲ್ಲೇ ಬಿದ್ದಿದ್ದಾನೆ. ಅವನ ಬಾಯಲ್ಲಿ ನಿನ್ನ ಕೈಹಾಕಿ ವಾಪಸು ಬಾ. ಇದು ಮಾಡಿದರೆ ಮಾತ್ರ ನಿನ್ನನ್ನು ವಾಪಸು ಕರೆದುಕೊಂಡು ಹೋಗುತ್ತೇನೆ.”

ಅದು ಅಸಾಧ್ಯ!”

ದೈತ್ಯ ಸತ್ತಾಗಿದೆ ಕಣೋ ಮೂರ್ಖ. ಅದರ ದೇಹದೊಳಗೆ ಗುಂಡುಗಳನ್ನು ಹಾಗೇ ಬಿಡುವ ಹಾಗಿಲ್ಲ. ಅವು ಭೂತಕಾಲಕ್ಕೆ ಸೇರಿದವುಗಳಲ್ಲ; ಅವು ಏನನ್ನು ಬೇಕಾದರೂ ಬದಲಾಯಿಸಬಹುದು. ತಗೋ ನನ್ನ ಕತ್ತಿ. ಅದರ ದೇಹದಿಂದ ಗುಂಡುಗಳನ್ನು ತೆಗೆದುಕೊಂಡು ಬಾ!”

ಕಾನನಕ್ಕೆ ಜೀವ ಬಂದಿತ್ತು, ಹಳೆಯ ಚಿತ್ರ ವಿಚಿತ್ರ ಸದ್ದುಗಳು ಮತ್ತು ಹಕ್ಕಿಗಳ ಕೂಗುಗಳು. ಎಕೆಲ್ಸ್ ನಿಧಾನವಾಗಿ ಆದಿಕಾಲದ ಕಸದ ರಾಶಿಯತ್ತ ನೋಡಿದ, ದುಸ್ವಪ್ನಗಳ ಭೀಭತ್ಸದ ಪರ್ವತದ ಕಡೆಗೆ ನೋಡಿದ. ಎಷ್ಟೋ ಸಮಯದ ನಂತರ, ನಿದ್ದೆಯಲ್ಲಿ ನಡೆಯುವವನಂತೆ ಅವನು ಪಥದ ಮೇಲೆ ನಡೆಯಲು ಎಡೆಮಾಡಿದ.

ನಡುಗುತ್ತಾ, ಕಂಪಿಸುತ್ತಾ, ಕೈಗಳನ್ನು ಮೊಣಕೈ ತನಕ ರಕ್ತಮಾಡಿಕೊಂಡು ಐದು ನಿಮಿಷದ ನಂತರ ಅವನು ಯಂತ್ರಕ್ಕೆ ಹಿಂದಿರುಗಿದ. ಅವನ ತನ್ನ ಕೈಗಳನ್ನು ಅವರತ್ತ ಚಾಚಿದ. ಎರಡೂ ಕೈಗಳಲ್ಲಿ ಕಬ್ಬಿಣದ ಬುಲ್ಲೆಟ್ ಗಳಿದ್ದವು. ತನ್ನ ಕೆಲಸವಾಗುತ್ತಿದ್ದಂತೆ ಅವನು ಕುಸಿದುಹೋದ. ಎಲ್ಲಿ ಕುಸಿದನೋ ಅಲ್ಲೇ ನಿಶ್ಚೇಷ್ಟಿತನಾಗಿ ಬಿದ್ದ್ದಿದ್ದ.

ನೀನು ಅವನ ಕೈಯಲ್ಲಿ ಅದನ್ನು ಮಾಡಿಸುವ ಅವಶ್ಯಕತೆಯಿರಲಿಲ್ಲ,” ಲೆಸ್ಪಿರಾನ್ಸ್  ಹೇಳಿದ.

ಹೌದಾ? ನಿನಗೆ ಹೇಗೆ ಗೊತ್ತು? ಇನ್ನೂ ಏನಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಸಮಯವಿದೆ.” ಟ್ರಾವಿಸ್ ತನ್ನ ಕಾಲಿನಿಂದ ಎಕೆಲ್ಸ್ ಶವದಂತಿದ್ದ ದೇಹಕ್ಕೆ ತಿವಿದ. “ಇವನು ಬದುಕುತ್ತಾನೆ. ಮುಂದಿನ ಸಲ ಇವನು ರೀತಿ ಬೇಟೆಯ ಆಟವಾಡಲು ಹೋಗುವುದಿಲ್ಲ ಅಷ್ಟೇ. ಸರಿ.” ಟ್ರಾವಿಸ್ ತನ್ನ ಹೆಬ್ಬೆರಳನ್ನು ಬಟನ್ ಗಳ  ಕಡೆ ತೋರಿಸಿ, ಲೆಸ್ಪಿರಾನ್ಸ್ ಗೆ ಹೇಳಿದ, “ಸರಿ ಶುರು ಮಾಡು. ವಾಪಸು ಹೋಗೋಣ.”

ಕ್ರಿ. . 1492! 1776! 1812!

ಅವರೆಲ್ಲ ಅವರ ಮುಖ ಮತ್ತು ಕೈಗಳನ್ನು ತೊಳೆದರು. ಅವರ ಅಂಗಿ ಮತ್ತು ಪ್ಯಾಂಟ್ಗಳನ್ನು ಬದಲಿಸಿದರು. ಎಕೆಲ್ಸ್ ಮೇಲೆದ್ದು ಓಡಾಡುತ್ತಿದ್ದನಾದರೂ ಮೌನವಾಗಿದ್ದ. ಹತ್ತು ನಿಮಿಷ ಟ್ರಾವಿಸ್ ಅವನನ್ನು ದುರುಗುಟ್ಟಿಕೊಂಡು ನೋಡುತ್ತಲೇ ಇದ್ದ.

ನನ್ನ ಕಡೆ ಹಾಗೆ ನೋಡಬೇಡ!” ಎಕೆಲ್ಸ್ ಅಳುತ್ತಾ ಹೇಳಿದ. “ನಾನೇನೂ ಮಾಡಿಲ್ಲ.”

ಅದನ್ನು ಯಾರಿಗೆ ತಾನೇ ಹೇಳುವುದಕ್ಕೆ ಸಾಧ್ಯ?”

ಪಥ ಬಿಟ್ಟು ಸ್ವಲ್ಪ ಆಚೆ ಹೋದೆ, ಅಷ್ಟೇ,  ನನ್ನ ಶೂಗಳಿಗೆ ಸ್ವಲ್ಪ ಕೆಸರು ಮೆತ್ತಿಕೊಂಡಿದೆನಾನೇನು ಮಾಡಬೇಕು ಈಗ –  ಸಾಷ್ಟಾಂಗ ಮಾಡಿ ದೇವರ ದಯೆ ಬೇಡಬೇಕೆ?”

ದೇವರ ದಯೆ! ಬೇಕಾಗಬಹುದು. ನಾನೀಗಲೇ ಹೇಳುತ್ತಾ ಇದ್ದೇನೆ ಎಕೆಲ್ಸ್, ನಿನ್ನನ್ನು ನಾನು ಸಾಯಿಸಿದರೂ ಸಾಯಿಸ ಬಹುದು. ನನ್ನ ಬಂದೂಕು ಸಿದ್ಧವಾಗಿದೆ.”

ನಾನು ಮುಗ್ಧ. ನಾನೇನೂ ಮಾಡಿಲ್ಲ!”

ಕ್ರಿ. . 1999! 2019! 2055!

ಮಷೀನ್ ನಿಂತು ಹೋಯಿತು.

ಹೋಗಾಚೆ,” ಟ್ರಾವಿಸ್ ಹೇಳಿದ.

ಅವರು ಹೋದಾಗ ಇದ್ದ ಕೋಣೆ ಅಲ್ಲೇ ಇತ್ತು. ಆದರೆ ಅವರು ಹೋದಾಗ ಇದ್ದ ಹಾಗೆ ಇರಲಿಲ್ಲ. ಅದೇ ಕುರ್ಚಿಯ ಮೇಲೆ ಅದೇ ಸಿಬ್ಬಂದಿ ಕುಳಿತಿದ್ದ. ಆದರೆ ಅದೇ ಕುರ್ಚಿಯ ಮೇಲೆ ಅದೇ ಸಿಬ್ಬಂದಿ ಅದೇ ರೀತಿ ಇರುವ ಹಾಗೆ ಅನಿಸುತ್ತಿರಲಿಲ್ಲ. “ಇಲ್ಲಿ ಎಲ್ಲಾ ಸರಿಯಿದೆ ತಾನೇ?” ಟ್ರಾವಿಸ್ ತೀಕ್ಷ್ಣವಾಗಿ ಕೇಳಿದ.

ಎಲ್ಲ ಸರಿಯಿದೆ. ಸುಸ್ವಾಗತ!”

ಟ್ರಾವಿಸ್ ಮಾತ್ರ ವಿಶ್ರಮಿಸಲಿಲ್ಲ. ಅವನು ಅಲ್ಲಿದ್ದ ಎತ್ತರದ ಕಿಟಕಿಯ ಮೂಲಕ ಆಚೆ ನೋಡುತ್ತಿರುವ ಹಾಗೆ ಕಾಣುತ್ತಿತ್ತು.

ಸರಿ. ಎಕೆಲ್ಸ್, ಆಚೆ ಹೋಗು. ಮತ್ತೆ ಯಾವತ್ತೂ ವಾಪಸು ಬರಬೇಡ.” ಎಕೆಲ್ಸ್  ಗೆ ಚಲಿಸಲು ಆಗಲಿಲ್ಲ.

ಕಿವಿ ಕೇಳಿಸ್ತಾ ಇಲ್ವೇ?” ಟ್ರಾವಿಸ್ ಕೇಳಿದ, “ಏನು ಹಾಗೆ ನೋಡ್ತಾ ಇದ್ದೀಯ?”

ಎಕೆಲ್ಸ್ ಅಲ್ಲಿ ಗಾಳಿಯ ವಾಸನೆಯನ್ನು ಆಘ್ರಾಣಿಸುತ್ತಾ ನಿಂತ, ಗಾಳಿಗೆ ಒಂದು ರೀತಿಯ ರಾಸಾಯನಿಕದ ಅತಿಯಲ್ಲದ ವಾಸನೆಯಿತ್ತು, ರಾಸಾಯನಿಕದ ವಾಸನೆ ಎಷ್ಟು ಕಡಿಮೆ ಇತ್ತು ಎಂದರೆ ಅವನ ಇಂದ್ರಿಯಗಳ ಮೇಲಾಗುತ್ತಿದ್ದ ಅತಿಕ್ಷೀಣ ಉರಿಯಿಂದ ಮಾತ್ರ ಅವನಿಗೆ ಅಲ್ಲೆನ್ನೋ ತೊಂದರೆಯಿದೆ ಎಂದು ಗೊತ್ತಾಗುತ್ತಿತ್ತು. ಗೋಡೆಯ ಮೇಲಿದ್ದ ಬೂದು, ಹಸಿರು, ಕೇಸರಿ ಬಣ್ಣಗಳು, ಅಲ್ಲಿದ್ದ ಪೀಠೋಪಕರಣಗಳು ಎಲ್ಲವೂಎಲ್ಲವೂಆದರೆ ಏನೋ ಬದಲಾಯಿಸಿದೆ ಎಂದು ಮಾತ್ರ ಅವನ ಮನಸಿಗೆ ಅನಿಸುತ್ತ್ತಿತ್ತು. ಅವನ ದೇಹ ಅಲ್ಲೇ ಕಂಪಿಸುತ್ತಿತ್ತು. ಅವನ ಕೈಗಳು ಕಂಪಿಸುತ್ತಿದ್ದವು. ಅವನ ದೇಹದ ಎಲ್ಲ ನರನಾಡಿಗಳಿಂದ ಸ್ಥಳದಲ್ಲಿದ್ದ ವೈಚಿತ್ರ್ಯವನ್ನು ಅವನು ಅನುಭವಿಸುತ್ತಿದ್ದ. ಕೇವಲ ನಾಯಿಯ ಕಿವಿಗೆ ಮಾತ್ರ ಕೇಳಿಸುವ ಶಿಳ್ಳೆಯನ್ನು ಯಾವನೋ ಎಲ್ಲೋ ಹೊಡೆದಾಗ, ಶಿಳ್ಳೆಗೆ ಉತ್ತರವಾಗಿ ನಾಯಿ ಉತ್ತರಿಸಿದಂತೆ; ಅವನ ದೇಹ ಮೌನದಲ್ಲೇ ಅಲ್ಲಿನ ಬದಲಾವಣೆಗಳಿಗೆ ಉತ್ತರವಾಗಿ ಚೀರಿತು. ಅದೇ ಕುರ್ಚಿಯ ಮುಂದೆ ಕುಳಿತ ಅದೇ ಸಿಬ್ಬಂದಿಯು ಬದಲಾಗದ ಹಾಗೆ ಕಂಡರೂ, ಕೋಣೆಯ ಆಚೆ, ಗೋಡೆಯ ಆಚೆ, ಕೋಣೆಯ ಆಚೆಯ ಹಾದಿ, ಜನರೂ  ಎಲ್ಲವೂ ಬದಲಾಗಿದೆ ಎಂದು ಅವನ ಮನಸ್ಸು ಚೀರಿ ಚೀರಿ ಹೇಳುತ್ತಿತ್ತು. ಬಿರುಗಾಳಿಯಲ್ಲಿ ಚದುರಂಗದ ಕಾಯಿಗಳು ಚೆಲ್ಲಾಪಿಲ್ಲಿಯಾಗಿ ಹಾರಾಡುವ ಹಾಗೆ ಎಲ್ಲವೂ ಅಸ್ತವ್ಯಸ್ತವಾಗಿ ಓಡಾಡುತ್ತಿರುವ ಹಾಗೆ ಅವನಿಗೆ ಭಾಸವಾಗುತ್ತಿತ್ತು ….

ಕ್ಷಣ ಅವನಿಗೆ ಕಂಡದ್ದು ಗೋಡೆಯ ಮೇಲಿದ್ದ ಬರಹ, ಅವನು ಬೆಳಿಗ್ಗೆ ಬಂದಾಗ ಇದ್ದ ಅದೇ ಶೈಲಿಯ ಅಕ್ಷರಗಳು. ಆದರೆ,  ಅಕ್ಷರಗಳು ಮಾತ್ರ ಬದಲಾಗಿದ್ದವು:

TYME SEFARI INC.

SEFARIS TU ANY YEER EN THE PAST.

YU NAIM THE ANIMALL.

WEE TAEK YU THAIR.

YU SHOOT ITT.

ಎಕೆಲ್ಸ್ ಒಂದು ಕುರ್ಚಿಗೆ ಕುಸಿದು ಕುಳಿತ. ತನ್ನ ಬೂಟಿಗೆ ಮೆತ್ತಿದ್ದ ಜಿಗುಟಿನತ್ತ ಕೈಯಾಡಿಸಿದ. ಕಂಪಿಸುತ್ತಾ  ಒಂದು ಹೆಂಟೆ ಕೆಸರನ್ನು ಬೂಟಿನಿಂದ ಬಿಡಿಸಿದ. “ಅಯ್ಯೋ! ಸಾಧ್ಯವಿಲ್ಲ. ಇಷ್ಟು ಸಣ್ಣದ್ದರಿಂದ ಇಷ್ಟು ದೊಡ್ಡ ಬದಲಾವಣೆ. ಅಯ್ಯೋ!”

ಕೆಸರಿನಲ್ಲಿ, ತನ್ನ ಹಸಿರು, ಕಪ್ಪು, ಹೊಂಬಣ್ಣದಲ್ಲಿ ಮಿನುಗುತ್ತಾ ಎಕೆಲ್ಸ್ ಕಾಲ್ಕೆಳಗಿನ ಭೂಮಿ ಕುಸಿಯುವಂತೆ ಮಾಡಿದ್ದು : ಒಂದು ಚಿಟ್ಟೆ, ಒಂದು ಅತಿ ಸುಂದರ ಚಿಟ್ಟೆ, ಸತ್ತು ಹೋದ ಒಂದು ಚಿಟ್ಟೆ.

ಇಷ್ಟು ಸಣ್ಣ ಜೀವಿಯಿಂದ! ಒಂದು ಸಣ್ಣ ಚಿಟ್ಟೆಯಿಂದ!” ಎಕೆಲ್ಸ್  ಅಳುತ್ತಾ ಕುಳಿತ.

ಚಿಟ್ಟೆ ನೆಲಕ್ಕೆ ಬಿದ್ದು ಹೋಯಿತು. ಅದ್ಭುತವಾದ ಜೀವಿ, ಸಣ್ಣದಾದರೂ ಕಾಲದೆಲ್ಲೆ ಮೀರಿ ಮಹಾ ಮಹಾ ಪರ್ವತಗಳೂ ಕುಸಿದು ಬೀಳುವ ಹಾಗೆ ಮಾಡಬಲ್ಲ ಶಕ್ತಿಯುಳ್ಳ ಜೀವಿ. ಎಕೆಲ್ಸ್ ತಲೆ ಒಂದು ಕ್ಷಣ ಗಿರಗಿರ ಸುತ್ತಿತು. ಇಷ್ಟು ಸಣ್ಣ ಜೀವಿ ಏನೂ ಬದಲಾಯಿಸಲು ಸಾಧ್ಯವಿಲ್ಲ. ಯಃಕಶ್ಚಿತ್ ಒಂದು ಚಿಟ್ಟೆಯ ಸಾವು ಅಷ್ಟು ಮುಖ್ಯವಾಗಿರಲು ಸಾಧ್ಯವೇ? ಇರಬಹುದೇ?

ಅವನ ಮುಖ ಕೆಂಪಾಗಿ, ಅವನ ಬಾಯಿ ಅದುರುತ್ತ, ಕುರ್ಚಿಯ ಮೇಲೆ ಕುಳಿತಿದ್ದವನನ್ನು ಕೇಳಿತು: “ನಿನ್ನೆ, ಅಧ್ಯಕ್ಷೀಯ ಚುನಾವಣೆಯನ್ನು ಯಾರು ಗೆದ್ದರು?”

ಸಿಬ್ಬಂದಿ ನಗುತ್ತಾ ಹೇಳಿದ, “ಏನು ತಮಾಷೆ ಮಾಡ್ತಾ ಇದ್ದೀರೇ? ನಿಮಗೆ ಗೊತ್ತಿಲ್ಲವೇ ಸಾಕು. ಇನ್ಯಾರು ಗೆಲ್ಲಲು ಸಾಧ್ಯ, ಜರ್ಮನ್ (Deutscher) ನನ್ನು ಬಿಟ್ಟು? ಮೂರ್ಖ, ಹೇಡಿ ಕೀತ್ ಗೆಲ್ಲಲು ಸಾಧ್ಯವೇ? ನಮಗೀಗ ಒಬ್ಬ ಉಕ್ಕಿನ ಮನುಷ್ಯ ಸಿಕ್ಕಿದ್ದಾನೆ, ಒಬ್ಬ ಗಂಡಸು ಸಿಕ್ಕಿದ್ದಾನೆ!” ಎಕೆಲ್ಸ್ ಮುಖ ನೋಡಿ ಸಿಬ್ಬಂದಿ ತನ್ನ ಮಾತು ನಿಲ್ಲಿಸಿದ, “ಏನಾದರೂ ತಪ್ಪಾಗಿದೆಯೇ?”

ಎಕೆಲ್ಸ್ ನರಳಿದ. ನೆಲದ ಮೇಲೆ ಕುಸಿದು ತನ್ನ ಮಂಡಿಗಳ ಮೇಲೆ ಕುಳಿತ. ತನ್ನ ಎರಡೂ ಕೈಗಳಿಂದ ಹೊಂಬಣ್ಣದ ಚಿಟ್ಟೆಯನ್ನು ಹಿಡಿದು, “ನಾವು ಇದನ್ನು ವಾಪಸು ತೆಗೆದುಕೊಂಡು ಹೋಗಲಾಗುವುದಿಲ್ಲವೇ? ಇದಕ್ಕೆ ಜೀವ ಕೊಡಲು ಸಾಧ್ಯವಿಲ್ಲವೇ? ನಾವು ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸಲು ಸಾಧ್ಯವಿಲ್ಲವೇ?” ಎಂದು ಜಗತ್ತನ್ನು, ತನ್ನನ್ನು , ಸಫಾರಿ ಸಿಬ್ಬಂದಿಗಳನ್ನು, ಯಂತ್ರವನ್ನು ಅಳುತ್ತಾ, ಹುಚ್ಚನ ರೀತಿ ಪ್ರಶ್ನಿಸಲು ಪ್ರಾರಂಭಿಸಿದ.

ಅವನು ನಿಶ್ಶ್ಚೇಷ್ಟಿತನಾಗಿ ತನ್ನ ಕಣ್ಣುಗಳನ್ನು ಮುಚ್ಚಿ , ನಡುಗುತ್ತಾ, ಕಾಯುತ್ತಾ ಕುಳಿತ. ಟ್ರಾವಿಸ್ ಕೋಣೆಯಲ್ಲಿ ದೀರ್ಘವಾಗಿ ಉಸಿರೆಳೆದುಕೊಂಡದ್ದನ್ನು ಕೇಳಿಸಿಕೊಂಡ; ಟ್ರಾವಿಸ್ ತನ್ನ ಬಂದೂಕನ್ನು ಸಿದ್ಧಮಾಡಿ, ಸುರಕ್ಷಾ ಬಟನನ್ನು ತೆರೆದು, ಎದೆಗೇರಿಸಿ, ಬಂದೂಕಿನ ಕುದುರೆಯನ್ನು ಎಳೆದ ಸದ್ದನ್ನು ಕೇಳಿದನಷ್ಟೇ, ಮುಂದಿನ ಕ್ಷಣ, ಅಲ್ಲಿ…..

ಮತ್ತೊಂದು ಮಹಾರವ.

ಮುಗಿಯಿತು.

-ಶ್ರೀನಿಧಿ

srinidhi1947@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!