ಕಥೆ

    ಕೃಷ್ಣ-ರುಕ್ಮಣಿ ಪರಿಣಯ-1

ಆಧಾರ:-ಮಹಾಭಾರತ

ಅದು ಅಂತಪುರ..ವೈಭವದಿಂದ ಕಾಣಿಸುತ್ತಿದೆ..!! ಗೋಡೆ,ಗೋಡೆಯಲ್ಲಿನ ಚಿತ್ರಗಳು,ಶಯನ ಪಲ್ಲಂಗ,ಕಂಬಗಳು,ಗವಾಕ್ಷಿಗಳು ಎಲ್ಲವೂ ಶ್ರೀಮಂತಿಕೆಯಿಂದ ಕೂಡಿದೆ..!! ತೆರೆದಿಟ್ಟ ಗವಾಕ್ಷಿಗಳ ಮೂಲಕ ಬರುತ್ತಿರುವ ತಂಪಾದ ಗಾಳಿಗೆ ಪರದೆಗಳು ನರ್ತಿಸುತ್ತಿದ್ದವು..ಇಂತಹ ಸುಂದರವಾದ ಅಂತಪುರದಲ್ಲಿ ಚಿತ್ರಪಟವೊಂದು ಕಾಣಿಸುತ್ತಿದೆ..!! ಅದರಲ್ಲಿ ಚಿತ್ರವೊಂದು ಬಿಡಿಸಲಾಗಿದೆ..!! ಸುರಸುಂದರಾಂಗ..ಶ್ಯಾಮಲ ವರ್ಣ..!! ವದನದಲ್ಲಿ ಮಂದಹಾಸ..ಕಣ್ಣುಗಳಲ್ಲಿ ತೇಜಸ್ಸು..!! ಕೈಯಲ್ಲಿ ಕೊಳಲು ಹಿಡಿದಿದ್ದಾನೆ..ನಿಜವಾಗಿಯೂ ಜೀವ ತಳೆದು ಬಂದಂತೆ ಅದ್ಭುತವಾಗಿದೆ..!! ಯಾರ ಚಿತ್ರವದು..?! ದ್ವಾರಕ ನಗರಾಧೀಶ ವಾಸುದೇವನದ್ದು..!! ಅವಳು ಅದನ್ನೇ ಒಲವಿನ ನೋಟದಿಂದ ನೋಡುತ್ತಿದ್ದಾಳೆ….!! ಸುತ್ತ ಮುತ್ತಲಿನ ಪರಿಸರದ ಜ್ಞಾನವಿಲ್ಲ….ತನ್ನದೇ ಪ್ರಣಯ ಲೋಕದಲ್ಲಿ ವಿಹರಿಸುತ್ತಿದ್ದಾಳೆ..!! ಅವಳಾರು ವಿಧರ್ಭ ರಾಜ್ಯದ ಭೀಷ್ಮಕ ರಾಜನ ಮಗಳು ರುಕ್ಮಿಣಿ..!! ನೋಡಲು ಸುಂದರಿ..ಅಪ್ಸರೆ..!! ವರ್ಣಿಸಲು ಪದಗಳೇ ಸಿಗಲ್ಲ..ಅಷ್ಟು ಸೌಂದರ್ಯವತಿ..!! ಅಸಲಿಗೆ ಅವಳು ಶ್ರೀಕೃಷ್ಣನನ್ನು ನೋಡಿಯೇ ಇಲ್ಲ..!! ಅವನ ಸಾಹಸ ವೀರ ಪರಾಕ್ರಮ,ವಿವಿಧ ಲೀಲಾವಳಿಗಳನ್ನು ಚಿಕ್ಕಂದಿನಿಂದಲೇ ತ್ರಿಲೋಕ ಸಂಚಾರಿ ನಾರದರಿಂದ ಕೇಳುತ್ತಾ ಬೆಳೆದವಳು..!! ಕ್ರಮೇಣ ಕೃಷ್ಣನನ್ನು ಆರಾಧಿಸತೊಡಗಿದ್ದಳು..ಅಂದು ರಾಜ ಸಭೆ ನಡೆಯುತ್ತಿತ್ತು..ಭೀಷ್ಮಕ ರಾಜ ಗಂಭೀರ ವದನರಾಗಿ ಸಿಂಹಾಸನದಲ್ಲಿ ಕುಳಿತಿದ್ದಾರೆ..ಅವರ ಎದುರು ಕೆಳಗೆ ಎಡ ಭಾಗ ಮತ್ತು ಬಲ ಭಾಗದಲ್ಲಿ ಅನೇಕ ಮಂತ್ರಿಗಳು ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗಿದ್ದಾರೆ..ತಂದೆ ಭೀಷ್ಮಕರ ಸಮೀಪ ಮಗ ರುಕ್ಮ ಕುಳಿತಿದ್ದಾನೆ..ರಾಣಿ,ಯುವರಾಣಿ ಮೇಲಿನ ಮಹಡಿಯಲ್ಲಿ ನಿಂತಿದ್ದವರು ರಾಜ ಸಭೆಯನ್ನು ನೋಡುತ್ತಿದ್ದರು..ಅದೇ ಸಮಯದಲ್ಲಿ ದೂತನೊಬ್ಬ ಬಂದವನು ಒಂದು ವಿಷಯವನ್ನು ಅರುಹಿದ..”ಮಹಾರಾಜ..ಮಥುರಾ ರಾಜ್ಯದ ರಾಜ ಕಂಸರವರನ್ನು ಅವರ ಅಳಿಯ ಕೃಷ್ಣ ಎಂಬವನು ಕೊಂದಿದ್ದಾನೆ..ಸೆರೆಯಲ್ಲಿ ಇದ್ದ ಅಜ್ಜ ಉಗ್ರಸೇನ,ತಂದೆ ವಸುದೇವ ಮತ್ತು ತಾಯಿ ದೇವಕಿ ಅವರನ್ನು ಬಿಡುಗಡೆಗೊಳಿಸಿದ್ದಾನೆ..!! ಆಮೇಲೆ ಅಜ್ಜ ಉಗ್ರಸೇನರನ್ನು ಪುನಃ ಮಹಾರಾಜರನ್ನಾಗಿ ಮಾಡಿದ್ದಾನೆ..!!” ಕಂಸನ ಮಿತ್ರನಾದ ರುಕ್ಮ ಆಸನದಿಂದ ಎದ್ದು ನಿಂತು ಅಬ್ಬರಿಸಿದ..ಅವನ ವದನ ಕೋಪದಿಂದ ಕೆಂಪು ಕೆಂಪಾಗಿತ್ತು..”ಏನೆಂದೆ..?! ನನ್ನ ಮಿತ್ರ ಕಂಸನನ್ನು ಕೃಷ್ಣ ಕೊಂದನೇ..ಇಲ್ಲ..ಇದು ಸುಳ್ಳು ಸುದ್ಧಿ..!! ಹಾಗೆ ನಡೆಯಲು ಸಾಧ್ಯವೇ ಇಲ್ಲ..?! ಮಹಾ ಪರಾಕ್ರಮಿ ವೀರ ಕಂಸನೆಲ್ಲಿ..ಈ ಹುಡುಗ ಕೃಷ್ಣನೆಲ್ಲಿ..?!” “ಸುಳ್ಳಲ್ಲ..ಪ್ರಭೂ..ನಿಜ..” ಎಂದ ದೂತ ಶ್ರೀಕೃಷ್ಣ ಕಂಸನನ್ನು ಕೊಂದ ಬಗೆಯನ್ನು ವಿವರಿಸಿದ..ಅಲ್ಲಿ ನೆರೆದಿದ್ದವರೆಲ್ಲ ವಾಸುದೇವನ ಪರಾಕ್ರಮದ ಬಗ್ಗೆ ಕೇಳಿ ಅಚ್ಚರಿ ಪಟ್ಟರು..ಭೀಷ್ಮಕ ಮಹಾರಾಜರು ಸಿಟ್ಟಿನಿಂದ ಕುದಿಯುತ್ತಿರುವ ಮಗನನ್ನು ಸಮಾಧಾನ ಪಡಿಸಿದರು..ಇದನ್ನೆಲ್ಲ ಮಹಡಿ ಮೇಲಿನಿಂದ ಕೇಳಿಸುತ್ತಿದ್ದ ಯುವರಾಣಿ ರುಕ್ಮಿಣಿಯ ಮನಸ್ಸು ಮಧುಸೂದನನ ಸುತ್ತಲೂ ಸುತ್ತತೊಡಗಿತ್ತು..ತನ್ನ ತಂದೆ,ತಂಗಿ ಮತ್ತು ಬಾವನನ್ನು ಸೆರಮನೆಯಲ್ಲಿರಿಸಿ ಹಿಂಸೆ ನೀಡಿದ್ದು ತಪ್ಪಲ್ಲವೇ..?! ಅಂತಹ ಕ್ರೂರಿ ಕಂಸನನ್ನು ಕೃಷ್ಣ ಕೊಂದ್ದಿದ್ದರ ತಪ್ಪೇನು..?! ಹೋಗಿ ಹೋಗಿ ಕಂಸನಂತವರನ್ನೇ ಮಿತ್ರರನ್ನಾಗಿ ಮಾಡಿಕೊಂಡಿದ್ದಾನೆ..!! ಈ ಅಣ್ಣನಿಗೆ ಬುದ್ಧಿಯೇ ಇಲ್ಲ..!! ಏನೂ ಹೇಳಲಾಗದೆ ಮಾತನಾಡದೆ ಮನಸ್ಸಲ್ಲೇ ಬೈದವಳು ಅಂತಃಪುರದತ್ತ ನಡೆದಿದ್ದಳು..!! ಇದರ ನಂತರ ಕೃಷ್ಣನ ಮೇಲಿನ ಪ್ರೀತಿಯ ಆರಾಧನೆ ಇನ್ನೂ ಹೆಚ್ಚಾಗಿತ್ತು..!!

  “ಯುವರಾಣೀ..” ಎನ್ನುತ್ತಾ ಬಂದು ವಂದಿಸಿದ ಸೇವಕಿಯನ್ನು ನೋಡಿ ಎಚ್ಚೆತ್ತಳು ರುಕ್ಮಿಣಿ..!! ಹಣೆಗೆ ಚುಂಬಿಸುತ್ತಿರುವ ಮುಂಗುರುಳನ್ನು ಸರಿಸುತ್ತಾ “ಏನು..?!” ಎಂದು ಸೇವಕಿಗೆ ಕೇಳಿದಳು..”ಮಹಾರಾಜರು ಮತ್ತು ಯುವರಾಜರು ನಿಮ್ಮ ವಿವಾಹದ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡೆ..ಅದನ್ನು ನಿಮಗೆ ತಿಳಿಸಿ ಹೋಗೋಣವೆಂದು ಬಂದೆ..” ಎಂದು ವಿಷಯ ತಿಳಿಸಿದಳು

ಆ ಸೇವಕಿ..ರುಕ್ಮಿಣಿಗೆ ಅಚ್ಚರಿ ಉಂಟಾಗಿತ್ತು..”ಹೌದೇ..ಏನೆಂದು ಮಾತನಾಡುತ್ತಿದ್ದರು..?!” ಎಂದು ಕುತೂಹಲದಿಂದ ಪ್ರಶ್ನಿಸಿದಳು ರುಕ್ಮಿಣಿ..!! “ಸರಿಯಾಗಿ ಗೊತ್ತಿಲ್ಲ..ಯುವರಾಣಿ..ವಿವಾಹದ ವಿಷಯವಂತೂ ಹೌದು..!!” “ಆಯಿತು..ನೀನಿನ್ನು ಹೋಗು..ಅದೇನೆಂದು ನಾನೇ ತಿಳಿದುಕೊಳ್ಳುತ್ತೇನೆ..” ಎಂದು ರುಕ್ಮಿಣಿ ಹೇಳಿದವಳು ವೇಗವಾಗಿ ಅಂತಪುರದಿಂದ ಹೊರ ಬಂದವಳು ರಾಜಸಭೆಯತ್ತ ಹೆಜ್ಜೆ ಹಾಕಿದಳು..

  “ರುಕ್ಮಿಣಿಗೆ ಶ್ರೀಕೃಷ್ಣನೇ ಯೋಗ್ಯನಾದ ವರ ಎಂದು ನನಗೆನಿಸುತ್ತದೆ..ಅದು ಮಹಾರಾಣಿಯವರ ಆಸೆಯೂ ಕೂಡ..”ಎಂದ ಭೀಷ್ಮಕ ಪತ್ನಿಯತ್ತ ನೋಡಿ ನಸು ನಕ್ಕರು..ರಾಣಿ ಸುಧಾಮತಿ ಹೌದೆಂಬಂತೆ ತಲೆಯಾಡಿಸಿದರು..”ರುಕ್ಮಿಣಿ ಕೃಷ್ಣನನ್ನೇ ಪ್ರೀತಿಸುತ್ತಾ ಬಂದಿದ್ದಾಳೆ ಎಂದು ಅವಳ ವರ್ತನೆಯಿಂದ ತಿಳಿಯಿತು..ಹಾಗಾಗಿ ಇನ್ನು ತಡ ಮಾಡುವುದು ಬೇಡ..ಕೃಷ್ಣನಿಗೆ ಈ ಸುದ್ದಿಯನ್ನು ತಿಳಿಸುವುದು ಉತ್ತಮ” ಎಂದರು ಸುಧಾಮತಿ..ರುಕ್ಮ ಏನನ್ನೂ ಹೇಳದೆ ಸುಮ್ಮನೆ ಕುಳಿತಿದ್ದ..”ರುಕ್ಮ ನೀನು ಏನೂ ಹೇಳುತ್ತಿಲ್ಲವಲ್ಲ..ಯಾಕೆ ನಿನಗೆ ಈ ವಿವಾಹ ಸಂಬಂಧ ಇಷ್ಟವಿಲ್ಲವೆ..?!” ಮಗನೊಡನೆ ಪ್ರಶ್ನಿಸಿದರು ಭೀಷ್ಮಕ..”ಇಲ್ಲ..ಸ್ವಲ್ಪನೂ ಇಷ್ಟವಿಲ್ಲ..ನನ್ನ ಮಿತ್ರ ಕಂಸನನ್ನು ಕೊಂದವನಿಗೆ ಮುದ್ದಿನಿಂದ ಸಾಕಿದ ತಂಗಿಯನ್ನು ಕೊಡುವುದೇ..ಅದು ಅಸಾಧ್ಯ..!!..ನನ್ನ ಮಿತ್ರರ ಶತ್ರು ನನಗೂ ಕೂಡ ಶತ್ರುನೇ..?!” “ನನ್ನ ಪ್ರಾಣ ಗೆಳೆಯ ಚೇದಿ ರಾಜ್ಯದ ರಾಜ ಶಿಶುಪಾಲ ಅವನೇ ರುಕ್ಮಿಣಿಗೆ ಎಲ್ಲ ರೀತಿಯಲ್ಲೂ ಯೋಗ್ಯನಾದ ವರ..!!” ರುಕ್ಮನ ಮಾತು ಕೇಳಿ ಅಲ್ಲಿದ್ದವರೆಲ್ಲರೂ ಬೆಚ್ಚಿ ಬಿದ್ದರೆ ಆಗ ತಾನೇ ಅಲ್ಲಿಗೆ ಬಂದಿದ್ದ ರುಕ್ಮಣಿಗೆ ಈ ಮಾತು ಕೇಳಿಸಿ ಆಘಾತವಾಗಿತ್ತು..!! “ಅಲ್ಲ..ಅದು ಸಾಧ್ಯವಿದೆಯಾ..?! ರುಕ್ಮಿಣಿಗೆ ಇದು ಇಷ್ಟವಾಗಬೇಕಲ್ಲವೇ..ಅವಳ ಮಾತನ್ನು ಕೇಳುವುದು ಒಳ್ಳೆಯದು..” ಎಂದ ತಾಯಿಯ ಮಾತಿಗೆ ರುಕ್ಮ ಹೇಳಿದ,” ಅದರ ಅಗತ್ಯವಿಲ್ಲ..ನಾನು ತೀರ್ಮಾನಿಸಿ ಆಗಿದೆ..ಶಿಶುಪಾಲನೇ ಎಲ್ಲ ರೀತಿಯಿಂದಲೂ ಅವಳಿಗೆ ಯೋಗ್ಯ ಪತಿ..!! ಹಾಗಾಗಿ ಅವಳೊಡನೆ ಏನೂ ಕೇಳುವ ಅಗತ್ಯವಿಲ್ಲ..!!” ಎಂದ ರುಕ್ಮ ತಂದೆಯ ಕಡೆ ನೊಡಿ “ಪಿತಾಶ್ರೀ..ಶಿಶುಪಾಲನಿಗೆ ವಿವಾಹದ ಕುರಿತು ಈಗಾಗಲೇ ಸುದ್ದಿ ಮುಟ್ಟಿಸಿದ್ದೇನೆ…ಅವನ ಒಪ್ಪಿಗೆ ಸಿಕ್ಕಿದ ಕೂಡಲೇ ವಿವಾಹ..!! ” ಎಂದು ಯಾರ ಮಾತನ್ನು ಕೇಳದೆ ಅಲ್ಲಿಂದ ಎದ್ದು ಹೋದ..ಎಲ್ಲರೂ ಅವನು ಹೇಳಿದ ಮಾತುಗಳಿಂದ ಇನ್ನೂ ಹೊರಗೆ ಬಂದಿರಲಿಲ್ಲ..ರುಕ್ಮಣಿಯಂತೂ ಏನು ಮಾತನಾಡಬೇಕೆಂದು ತಿಳಿಯದೆ ನಿಂತಿದ್ದಳು..ಅವಳ ಮಧುಸೂಧನನ ಮೇಲಿನ ಮಧುರ ಆರಾಧನೆ,ಪ್ರೇಮ ಎಲ್ಲವೂ ನುಚ್ಚು ನೂರಾಗುವುದರಲ್ಲಿತ್ತು..!! ಇದನ್ನೆಲ್ಲ ತಡೆಯುವುದು ಹೇಗೆ..?! ದುಃಖದಿಂದ ಅಂತಪುರದಲ್ಲಿ ಕುಳಿತಿರಬೇಕಾದರೆ ಭೀಷ್ಮಕರು ಬಂದರು..”ಪಿತಾಶ್ರೀ..” ಎಂದು ಅವರನ್ನು ತಬ್ಬಿಕೊಂಡಳು..ಅವರು ಸಮಾಧಾನ ಪಡಿಸಲೆಂದು ಅವಳ ತಲೆಯನ್ನು ಸವರಿದರು..”ನನಗೆ ಶಿಶುಪಾಲರನ್ನು ವಿವಾಹವಾಗಲು ಇಷ್ಟವಿಲ್ಲ..ನಾನು ಇಷ್ಟಪಟ್ಟಿದ್ದು ಯಾರನ್ನು ಎಂದು ನಿಮಗೆ ತಿಳಿದಿದೆಯಲ್ಲ ಪಿತಾಶ್ರೀ..ಮತ್ತೆ ಯಾಕೆ ಈ ಹಠವೆಲ್ಲ..” ಎಂದು ಅಳುತ್ತಾ ನುಡಿದಳು ರುಕ್ಮಿಣಿ..”ರುಕ್ಮನ ತೀರ್ಮಾನವನ್ನು ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ..ಇಲ್ಲಿ ನಾನು ಅಸಹಾಯಕ ಮಗಳೇ..ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿಬಿಡು” ಎಂದವರ ಮಾತಲ್ಲಿ ನೋವು ತುಂಬಿತ್ತು..ಅವಳನ್ನು ಸಂತೈಸಿ ಹೋದರು..ಅದೇ ಚಿಂತೆಯಲ್ಲಿ ಆ ದಿನವನ್ನು ಕಳೆದಳು ರುಕ್ಮಣಿ.

      ರುಕ್ಮ ಕಳುಹಿಸಿದ ಓಲೆ ಶಿಶುಪಾಲನಿಗೆ ತಲುಪಿ ಅವನು ಸಂತಸದಿಂದ ಒಪ್ಪಿಗೆ ಸೂಚಿಸಿ ಉತ್ತರ ಬರೆದು ಕಳುಹಿಸಿದ್ದ..ಖುಷಿಗೊಂಡ ರುಕ್ಮ ಈ ವಿಷಯವನ್ನು ತಿಳಿಸಲು ರುಕ್ಮಿಣಿಯ ಅಂತಪುರಕ್ಕೆ ಹೋದ..ಅವಳ ತಾವರೆ ಮುಖ ಬಾಡಿದ್ದು ಏನೋ ಧೀರ್ಘವಾದ ಆಲೋಚನೆಯಲ್ಲಿದ್ದಳು..”ರುಕ್ಮಿಣಿ..” ಎಂದ ಸಹೋದರನ ಸ್ವರಕ್ಕೆ ಎಚ್ಚೆತ್ತಳು..”ಶಿಶುಪಾಲ ಈ ಕಲ್ಯಾಣಕ್ಕೆ ಒಪ್ಪಿದ್ದಾನೆ..ಈವತ್ತೇ ಅಲ್ಲಿಂದ ಹೊರಟಿದ್ದಾನೆ..ನಾವು ಈ ಕೂಡಲೇ ಮದುವೆ ಸಿದ್ದತೆಗೆ ತೊಡಗಬೇಕು..” ಎಂದ..ರುಕ್ಮಿಣಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ..ಸುಮ್ಮನೆ ತಲೆಯಲ್ಲಾಡಿಸಿದವಳ ಕಂಗಳು ಕೊಳದಂತಾಗಿತ್ತು..ಅದನ್ನು ಗಮನಿಸುವ ಸ್ಥಿತಿಯಲ್ಲಿ ರುಕ್ಮ ಇರಲಿಲ್ಲ..ಅಲ್ಲಿಂದ ಸರಿದು ಹೋದ..ರುಕ್ಮಿಣಿ ತುಂಬ ಸಮಯ ಕಣ್ಣೀರು ತುಂಬಿದ ಕಂಗಳಿಂದ ನಿಂತಿದ್ದವಳು ಮುಂದೇನು ಎಂಬುದಾಗಿ ಯೋಚಿಸುತ್ತಿರಬೇಕಾದರೆ ಸೇವಕಿ ಬಂದವಳು “ಯುವರಾಣಿಯವರೇ..ಸುನಂದ ಅವರು ನಿಮ್ಮನ್ನು ಕಾಣಲು ಬಂದಿದ್ದಾರೆ..” ಎಂದಳು..ರುಕ್ಮಿಣಿ ಸೇವಕಿಗೆ ಯಾರಾದರೂ ಬಂದರೆ ತಿಳಿಸೆಂದು ಹೇಳಿ

ಅರಮನೆಯ ಮುಂಭಾಗಕ್ಕೆ ಬಂದಳು..ಸುಮಾರು ಮಧ್ಯ ವಯಸ್ಸಿನ ಬ್ರಾಹ್ಮಣರೊಬ್ಬರು ಅರಮನೆಯ ಸಮೀಪದಲ್ಲಿ ಇದ್ದ ಬೃಹದಾಕಾರದ ಮರವೊಂದರ ಬಳಿ ನಿಂತಿದ್ದರು..ಅವಳು ಸುತ್ತಲೂ ನೋಡಿದಳು.ಯಾರ ಗಮನಾನೂ ತನ್ನತ್ತ ಇಲ್ಲ..!! ಕಳ್ಳ ಹೆಜ್ಜೆಯಿಡುತ್ತಾ ಮರದ ಸಮೀಪಕ್ಕೆ ನಡೆದವಳು ಅಲ್ಲಿ ನಿಂತಿದ್ದ ಸುನಂದರಿಗೆ ನಮಿಸಿ ತಾನು ಕರೆಸಿದ ಕಾರಣವನ್ನು ತಿಳಿಸಿದಳು..”ನಿಮ್ಮಿಂದ ನನಗೊಂದು ಉಪಕಾರ ಆಗಬೇಕು ಗುರುಗಳೇ..” ಎಂದ ರುಕ್ಮಿಣಿಯ ಮಾತಿಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು..”ಏನದು..?! ತಾಯಿ..” ಅದಕ್ಕವಳು “ಸ್ತ್ರೀ ಧರ್ಮದಲ್ಲಿ ಸ್ತ್ರೀ ಒಬ್ಬ ಪುರುಷನನ್ನು ತನ್ನ ಪತಿಯೆಂದು ಸ್ವೀಕಾರ ಮಾಡಿದ ಮೇಲೆ ಅವಳು ಇನ್ನೊಬ್ಬ ಪುರುಷನ ಬಗ್ಗೆ ಮನಸಲ್ಲಿ ಆಲೋಚಿಸಲ್ಲ..ಅಷ್ಟೇ ಯಾಕೆ ಅವನ ಕಡೆ ಕಣ್ಣೆತ್ತಿ ಕೂಡ ನೋಡಲ್ಲ..” “ಹೌದು ತಾಯಿ..ಅದನ್ನು ನನಗ್ಯಾಕೆ ಹೇಳುತ್ತಿದ್ದೀರಿ..?!” ಪುನಃ ಅಚ್ಚರಿ ಪಡುತ್ತಾ ಕೇಳಿದರು ಸುನಂದರು..”ಅದು..ಅಣ್ಣ ನನ್ನ ವಿವಾಹವನ್ನು ಚೇದಿರಾಜ್ಯದ ರಾಜ ಶಿಶುಪಾಲನ ಜೊತೆ ಮಾಡಲು ತೀರ್ಮಾನಿಸಿದ್ದಾನೆ..ಆದರೆ ನನಗೆ ಈ ವಿವಾಹ ಇಷ್ಟವಿಲ್ಲ..” ಎಂದಳು ರುಕ್ಮಿಣಿ.. “ಅದು ಯಾಕೆ..?!” ಎಂದ ಅವರ ಪ್ರಶ್ನೆಗೆ “ನಾನು ವಸುದೇವ ನಂದನನನ್ನು ಮನಸಾ ನನ್ನ ಪತಿಯೆಂದು ಸ್ವೀಕರಿಸಿದ್ದೇನೆ..ಇನ್ನು ಅವರ ವಿನಹ ಬೇರೆಯ ಪುರುಷರ  ಬಗ್ಗೆ ಯೋಚಿಸುವುದೇ ಇಲ್ಲ..!!” ಎಂದು ತಿಳಿಸಿದವಳು ಅವರ ಕೈಗೆ ಒಂದು ಓಲೆಯನ್ನು ಕೊಟ್ಟು ಇದನ್ನು ಶ್ರೀಕೃಷ್ಣನಿಗೆ ಕೊಡಬೇಕೆಂದು ಹೇಳಿದಳು..ಯಾರಿಗೂ ಅನುಮಾನ ಬರಬಾರದೆಂದು ತಮಗೆ ಈ ವಿಷಯ ತಿಳಿಸಿದೆನೆಂದು ನನಗೆ ಸಹಾಯ ಮಾಡಬೇಕೆಂದು ಕೇಳಿಕೊಂಡಳು..”ಯುವರಾಣಿ..ನೀವೇನು ಚಿಂತಿಸಬೇಡಿ..ಈ ಓಲೆ ಖಂಡಿತಾ ಶ್ರೀಕೃಷ್ಣನಿಗೆ ತಲುಪಿಸುತ್ತೇನೆ..ಆದರೆ ನಿಮ್ಮ ಈ ನಿವೇದನೆಯನ್ನು ಕೃಷ್ಣ ತಿರಸ್ಕರಿಸಿದರೆ..?!” ಇದನ್ನು ಕೇಳಿ ರುಕ್ಮಣಿಯ ಮುಖದಲ್ಲಿ ಚಿಂತೆಯ ಕಾರ್ಮೋಡ ಕವಿದುವು..”ಎಲ್ಲ ಪ್ರತಿವ್ರತ ಸ್ತ್ರೀಯರು ತಮ್ಮ ಪತಿಯನ್ನೇ ದೇವರೆಂದು ಕೊಂಡವರು..ಅವರಿಗೆ ಪತಿಯ ವಿನಹ ಬೇರೆ ಪ್ರಪಂಚವಿಲ್ಲ..ಎಲ್ಲಿಯಾದರೂ ಪತಿ ತೀರಿಕೊಂಡರೆ ತಾವೂ ಪ್ರಾಣತ್ಯಾಗ ಮಾಡುವವರೇ ವಿನಹ ಇನ್ನೊಂದು ಪುರುಷನ ಬಗ್ಗೆ ಆಲೋಚಿಸುವುದಿಲ್ಲ..ಅವನನ್ನು ಇಷ್ಟಾನೂ ಪಡುವುದಿಲ್ಲ..ಹಾಗೆಯೇ ಅವರಂತೆ ನಾನೂ ಕೂಡ..” ಎಂದವಳಿಗೆ ಸುನಂದರು ಭರವಸೆ ನೀಡಿದರು..”ಹಾಗೇನು ಆಗಲ್ಲ..ತಾಯಿ..ಎಲ್ಲವೂ ಒಳ್ಳೆಯದಾಗುತ್ತದೆ..” ಎಂದು ಹೇಳಿದವರು ಅಲ್ಲಿಂದ ತೆರಳಿದರು..ರುಕ್ಮಿಣಿ ಯಾರ ಕಣ್ಣಿಗೆ ಬೀಳದಂತೆ ಮೆಲ್ಲನೆ ಅಂತಪುರ ಸೇರಿದಳು.

                                                                      *********************************************

ಅದು ದ್ವಾರಕಾ ಅರಮನೆಯ ಮುಂದಿನ ಸುಂದರ ಉದ್ಯಾನ..!! ಅಲ್ಲಿ ಸುಮಧುರವಾಗಿ ಕೊಳಲುಗಾನ ಕೇಳಿಸುತ್ತಿದೆ..!! ಆ ಸುಂದರ ಉದ್ಯಾನದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡಗಳು..

ಅದರಲ್ಲಿ ಅರಳಿ ನಿಂತು ನಗುತ್ತಿರುವ ಹೂಗಳು,ಅವುಗಳ ಜೊತೆ ತಾವೂ ಇದ್ದೇವೆಯೆಂದು ಕಾಣಿಸುತ್ತಿರುವ ವಿಷ್ಣುಪ್ರಿಯ ತುಳಸಿ ಗಿಡಗಳು,ಉದ್ಯಾನದ ಮಧ್ಯ ಭಾಗದಲ್ಲಿರುವ ಸರೋವರದಲ್ಲಿ ಸಂಚರಿಸುತ್ತಿರುವ ಶ್ವೇತ ವರ್ಣದ ಹಂಸಗಳು ಎಲ್ಲವೂ ಸುಮಧುರ ಕೊಳಲು ಗಾನಕ್ಕೆ ತನ್ಮಯರಾಗಿದ್ದಾರೇನೋ ಎಂಬಂತೆ ಕಾಣಿಸುತ್ತಿದ್ದವು..ಉಯ್ಯಾಲೆಯಲ್ಲಿ ಒಂದು ಕಾಲನ್ನು ತೊಡೆಯ ಮೇಲೆ ಹಾಕಿಕೊಂಡು ಇನ್ನೊಂದು ಕಾಲನ್ನು ಕೆಳಗೆ ಇಳಿಬಿಟ್ಟು ಕುಳಿತಿದ್ದು ಕಣ್ಣುಗಳನ್ನು ಮುಚ್ಚಿದ್ದು ಕೈಗಳಲ್ಲಿ ವೇಣುವನ್ನು ನುಡಿಸುವುದರಲ್ಲಿ ಮಗ್ನನಾಗಿದ್ದಾನೆ ವೇಣುಗೋಪಾಲ..!! ಶ್ಯಾಮಲ ವರ್ಣದ ಮೈ ಬಣ್ಣ..ಸುಂದರ ದೈವೀ ಕಳೆಯ ವದನ..!! ಶಿರದಲ್ಲಿನ ಹೊಳೆಯುವ ಕಿರೀಟದಲ್ಲಿ ಶೋಭಿಸುತ್ತ ವೇಣು ಗಾನಕ್ಕೆ ತಲೆದೂಗುತ್ತಿರುವ ಚಂದದ ನವಿಲು ಗರಿಗಳು..!! ಸಂಜೆಯ ಸೂರ್ಯನ ಕಿರಣಗಳು ಕೃಷ್ಣನ ಮುಖಕ್ಕೆ ಬೀಳುತ್ತಿದ್ದು ತೇಜೋಮಯವಾಗಿ ಹೊಳೆಯುತ್ತಿದ್ದವು..ಪಕ್ಷಿಗಳ ಕಲರವವೂ ಜೊತೆಗಿದ್ದು ಮುರಳೀ ಗಾನಕ್ಕೆ ತಾವೂ ಜೊತೆಗೂಡಿದ್ದು ವಿಶೇಷ ವಾತಾವರಣ ಸೃಷ್ಠಿಯಾಗಿತ್ತು..ಇದಾವುದರ ಅರಿವಿಲ್ಲದೆ ತನ್ನದೇ ಮುರಳಿಯಗಾನ ಲೋಕದಲ್ಲಿ ಮುಳುಗಿ ಹೋಗಿದ್ದಾನೆ ಶ್ರೀಕೃಷ್ಣ..!!

       ಅಸಲಿಗೆ ಶ್ರೀಕೃಷ್ಣನ ಜನನದ ವೃತ್ತಾಂತ ಒಂದು ಅಚ್ಚರಿ..!! ಯಾದವ ಕುಲದ ರಾಜ ವಸುದೇವ ಮತ್ತು ದೇವಕಿಯ ವಿವಾಹದ ನಂತರ ಅವರನ್ನು ತನ್ನ ರಥದಲ್ಲಿ ಕುಳ್ಳಿರಿಸಿ ಮಥುರೆಯತ್ತ ಪ್ರಯಾಣ ಮಾಡುತ್ತಿದ್ದ ದೇವಕಿಯ ಅಗ್ರಜ ಕಂಸ..!! ಆಗ ಇದ್ದಕ್ಕಿದ್ದಂತೆ ಒಂದು ಅಶರೀರವಾಣಿ ಕೇಳಿಸಿತ್ತು..”ಕಂಸ..ಇಲ್ಲಿ ಕೇಳು..!! ನೀನು ಈಗ ಕರೆದುಕೊಂಡು ಹೋಗುತ್ತಿರುವ ನಿನ್ನ ಮುದ್ದಿನ ಅನುಜೆ ದೇವಕಿಯ ಎಂಟನೆಯ ಗರ್ಭದಲ್ಲಿ ಜನಿಸುವವನಿಂದ ನಿನ್ನ ಮರಣ..ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ..!!” ಈ ಅಶರೀರವಾಣಿಯನ್ನು ಕೇಳಿದ ವಸುದೇವ ಮತ್ತು ದೇವಕಿ ಅಚ್ಚರಿಯಿಂದ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು..ಕಂಸನ ಸ್ಥಿತಿಯನ್ನಂತೂ ಕೇಳುವುದೇ ಬೇಡ..!! ಮೂಲತಃ ಅವನು ಒಳ್ಳೆಯವನಲ್ಲ..ಸದಾ ಅನ್ಯಾಯ,ಅನಾಚಾರಗಳನ್ನು ಮಾಡಿಕೊಂಡು ಬಂದವನು..!! ಅಂತವನ ಕ್ರೂರತೆಯನ್ನು ಸೂಸುವ ಕಣ್ಣುಗಳು ಸಿಟ್ಟಿನಿಂದ ಕೆಂಪಗಾದರೆ ಹಲ್ಲುಗಳು ಕಟ ಕಟನೆ ಕಡಿದುವು..ಕೈಗಳು ಬಿಗಿದುಕೊಂಡವು..”ಏನು ನನ್ನ ತಂಗಿಯ ಮಗನಿಂದ ನನ್ನ ಸಾವೇ..!! ಅದು ನನಗೆ..!!” ಎಂದು ಜೋರಾಗಿ ಗಹಿ ಗಹಿಸಿ ನಕ್ಕವನು ತನ್ನ ದಪ್ಪನೆಯ ಮೀಸೆಯನ್ನು ತಿರುವುತ್ತಾ ಘರ್ಜಿಸಿದ..”ಅದು ಹೇಗೆ ದೇವಕಿಯ ಮಗನಿಂದ ನನಗೆ ಸಾವು ಬರುತ್ತದೆ..ನಾನು ನೋಡುತ್ತೇನೆ..!!” ಎಂದು ಅವಳನ್ನು ಕೊಲ್ಲಲು ಖಡ್ಗವೆತ್ತಿದ..ಆದರೆ ವಸುದೇವ ಅದನ್ನು ತಡೆದ..”ಭಾವ..ನಿನ್ನ ತಂಗಿಗೆ ಹುಟ್ಟುವ ಮಗುವಿನಿಂದ ತಾನೆ ನಿನಗೆ ಅಪಾಯ..ಅದಕ್ಕಾಗಿ ಏನೂ ತಪ್ಪು ಮಾಡದ ನಿನ್ನ ತಂಗಿಯನ್ನು ಕೊಲ್ಲಲು ಹೊರಟಿರುವೆ ಏಕೆ..?!”ಎಂದು ವಸುದೇವ ಹೇಳಿದ..ಕಂಸ ಎತ್ತಿದ ಖಡ್ಗವನ್ನು ಕೆಳಗಿಳಿಸಿ ಅನುಜೆಯತ್ತ ನೋಡಿದ..ದೇವಕಿ ಭಯದಿಂದ ನಡುಗುತ್ತಿರುವ ವಸುದೇವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು..ಅವಳ ಕಣ್ಣುಗಳಲ್ಲಿ ಹೆದರಿಕೆ ಎದ್ದು ಕಾಣಿಸುತ್ತಿತ್ತು..”ನಮಗೆ ಹುಟ್ಟುವ ಮಕ್ಕಳನ್ನು ನಿನಗೆ ಕೊಡುತ್ತೇನೆ..ಸಾಲದೇ..ಇನ್ನಾದರೂ ನಮ್ಮನ್ನು ಬಿಟ್ಟು ಬಿಡು..” ಬಿನ್ನವಿಸಿಕೊಂಡ ವಸುದೇವ..ಅವನ ಮಾತಿಗೆ ಸ್ವಲ್ಪ ತಣ್ಣಗಾದ ಕಂಸ..ಆದರೆ “ಇವರನ್ನು ಎಳೆದುಕೊಂಡು ಹೋಗಿ ಸೆರೆಮನೆಗೆ ತಳ್ಳಿ..” ಎಂದು ತನ್ನ ಹಿಂಬಾಲಿಸುತ್ತಿರುವ ಸೈನಿಕರಿಗೆ ಆಜ್ಞಾಪಿಸಿದ..ವಸುದೇವ ದೇವಕಿಯರು ಎಷ್ಟೇ ಕೇಳಿಕೊಂಡರೂ ಬೇಡಿಕೊಂಡರೂ ಅವನ ಕ್ರೂರತನ ತುಂಬಿರುವ ಹೃದಯಕ್ಕೆ ಅದು ನಾಟಲಿಲ್ಲ..ಸೈನಿಕರು ಬಂದವರು ಇಬ್ಬರನ್ನೂ ಎಳೆದುಕೊಂಡು ಹೋದರು..ಅರಮನೆ ತಲುಪುತ್ತಿದ್ದಂತೆ ವಸುದೇವ ದೇವಕಿಯರು ಸೆರೆಮನೆಗೆ ತಳ್ಳಲ್ಪಟ್ಟರು..ಇದನ್ನು ವಿರೋಧಿಸಿದ ತನ್ನ ತಂದೆ ಮಹಾರಾಜ ಉಗ್ರಸೇನರನ್ನು ಸೆರೆಮನೆಗೆ ತಳ್ಳಿದ..ಆ ನಂತರ ಕಂಸ ವಸುದೇವ ದಂಪತಿಗಳಿಗೆ ಹುಟ್ಟಿದ ಮಕ್ಕಳನ್ನು ಕೊಲ್ಲುತ್ತಾ ಬಂದ..ಇನ್ನು ಏಳನೆಯ ಮಗು ಜನಿಸುವುದರಲ್ಲಿತ್ತು..ಆದರೆ ವಿಧಾತನ ಬರಹವೇನೋ..ಅಲ್ಲ ಮಹಾವಿಷ್ಣುವಿನ ಮಾಯೆಯೋ..!! ಏಳನೆಯ ಮಗು ವಸುದೇವನ ಇನ್ನೊಬ್ಬ ಪತ್ನಿ ರೋಹಿಣಿಯ ಗರ್ಭಕ್ಕೆ ಸ್ಥಳಾಂತರವಾಗಿತ್ತು..ಇದಾವುದೂ ಕಂಸನ ಅರಿವೆಗೆ ಬರಲೇ ಇಲ್ಲ..!! ಹಾಗೆ ರೋಹಿಣಿ ಬಲರಾಮನಿಗೆ ಜನ್ಮವಿತ್ತಳು..ಅವನು ಗೋಕುಲದಲ್ಲಿ ಬೆಳೆಯತೊಡಗಿದ್ದ.

ಅಂದು ಅಷ್ಟಮಿ ತಿಥಿಯ ರೋಹಿಣಿ ನಕ್ಷತ್ರದ ದಿನ ಮಧ್ಯರಾತ್ರಿ ಶ್ಯಾಮಲ ವರ್ಣದ ದೈವೀ ತೇಜಸ್ಸಿನಿಂದ ಕೂಡಿದ ಮುದ್ದಾದ ಗಂಡು ಮಗುವಿನ ಜನನವಾಯಿತು..!! ಆ ಮಗವೇ ಮಹಾವಿಷ್ಣುವಿನ ಅವತಾರ ಶ್ರೀಕೃಷ್ಣ..!! ಆ ರಾತ್ರಿಯ ಹೊತ್ತು ಸೆರೆಮನೆಯ ಕಾವಲುಗಾರರು ಮೈ ಮೇಲೆ ಎಚ್ಚರವಿಲ್ಲದಂತೆ ಬಿದ್ದುಕೊಂಡಿದ್ದರು..ಬಾಗಿಲುಗಳು ಒಂದೊಂದಾಗಿ ತನ್ನಿಂದ ತಾನೇ ತರೆದುಕೊಂಡವು..ಕೃಷ್ಣನ ಜನನದ ಮೊದಲು ಮಹಾವಿಷ್ಣು ದೇವಕಿಯ ಕನಸಲ್ಲಿ ಪ್ರತ್ಯಕ್ಷನಾಗಿ ತಾನು ಮಗುವಿನ ರೂಪದಲ್ಲಿ ನಿನ್ನ ಗರ್ಭದಲ್ಲಿ ಹುಟ್ಟಿ ಬರುತ್ತೇನೆ ಎಂದೂ ಮುಂದೆ ಏನೇನು ಮಾಡಬೇಕೆಂದೂ ಹೇಳಿ ಮಾಯವಾಗಿದ್ದ..ಅದರಂತೆ ವಸುದೇವನು ಆಗ ತಾನೇ ಹುಟ್ಟಿದ ಮಗುವನ್ನು ಅಲ್ಲೇ ಇದ್ದ ಬುಟ್ಟಿಯಲ್ಲಿ ಮಲಗಿಸಿ ಅದನ್ನು ತೆಗೆದುಕೊಂಡು ಸೆರೆಮನೆಯಿಂದ ಹೊರ ಬಂದಾಗ ಬೆಚ್ಚಿ ಬಿದ್ದಿದ್ದ..ಜೋರಾಗಿ ಸುರಿಯುತ್ತಿರುವ ಮಳೆ..ಫಳಕ್ಕನೆ ಮಿಂಚುವ ಮಿಂಚಿಗೆ ಇಡೀ ಪ್ರಪಂಚವೇ ನಡುಗುವಂತೆ ಆರ್ಭಟಿಸುವ ಗುಡುಗು..ಅದಕ್ಕೆ ತಾನೂ ಜೊತೆಗೆ ಇದ್ದೇನೆ ಎಂದು ಜೊತೆಯಾದ ವಾಯುದೇವ..!! ಇಡೀ ವಾತಾವರಣವೇ ಭಯಾನಕವಾಗಿತ್ತು..!! ಮಗುವನ್ನು ಹಿಡಿದುಕೊಂಡು ವಸುದೇವ ಹೋಗುವುದಾದರೂ ಹೇಗೆ..?! ಆ ಸಮಯದಲ್ಲಿ ಮಗುವಿಗೆ ನೀರು ಸೋಕದಂತೆ ಆದಿಶೇಷ ಕೊಡೆಯಂತೆ ತನ್ನ ಹಡೆಯನ್ನು ಹಿಡಿಯಲು ಬಂದ..ವಸುದೇವ ಮುಂದಕ್ಕೆ ಹೆಜ್ಜೆಯಿಟ್ಟ..ಸಾಗುತ್ತಾ ಯಮುನ ನದಿಯ ದಡಕ್ಕೆ ಬಂದ..ಯಮನಾ ನದಿ ಭೋರ್ಗರೆದು ಹರಿಯುತ್ತಿತ್ತು..ಇನ್ನೊಂದು ದಡ ಸೇರಬೇಕಾದರೆ ನದಿಯನ್ನು ದಾಟಬೇಕಿತ್ತು..ಹೇಗೆ..?! ಆದರೆ ಆಗಲೇ ಒಂದು ಅಚ್ಚರಿ ಎದುರಾಗಿತ್ತು..ನದಿ ಇಭ್ಬಾಗವಾಗಿ ದಾರಿ ಮಾಡಿ ಕೊಟ್ಟಿತು..ಆ ದಾರಿಯಲ್ಲಿ ಹೆಜ್ಜೆಯಿಟ್ಟು ಮಗುವಿದ್ದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಮುನ್ನಡೆದ..ಗೋಕುಲವನ್ನು ತಲುಪಿ ತನ್ನ ಮಿತ್ರ ನಂದನ ಮನೆಗೆ ಹೋದ..ಅಲ್ಲಿ ಅವನ ಪತ್ನಿ ಯಶೋದೆ ಆಗ ತಾನೆ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಳು..ಆದರೆ ಅಲ್ಲಿ ಇರುವ ಯಾರಿಗೂ ಆ ಸಮಯದಲ್ಲಿ ಎಚ್ಚರವಿರಲಿಲ್ಲ..ವಸುದೇವ ತನ್ನ ಮಗುವನ್ನು ಯಶೋದೆಯ ಬಳಿ ಮಲಗಿಸಿ ಅವಳ ಬಳಿ ಮಲಗಿದ್ದ ಹೆಣ್ಣು ಮಗವನ್ನು ಎತ್ತಿಕೊಂಡು ಹಿಂತಿರುಗಿದ..ಅವನು ಸೆರೆಮನೆಗೆ ಬಂದ ಕೂಡಲೇ ಎಲ್ಲವೂ ಮೊದಲಿನಂತಾಗಿತ್ತು..ಸೆರಮನೆಯ ಬಾಗಿಲುಗಳು ಮುಚ್ಚಿಕೊಂಡವು..ಸಂಕೋಲೆಗಳು ಸುತ್ತಿಕೊಂಡವು..ಆ ಹೆಣ್ಣು ಮಗು ಜೋರಾಗಿ ಅಳತೊಡಗಿತ್ತು..ಎಚ್ಚರವಿಲ್ಲದಂತೆ ಮಲಗಿದ್ದ ಕಾವಲುಗಾರರು ಎದ್ದು ಕಂಸನಿಗೆ ಸುದ್ದಿ ಮುಟ್ಟಿಸಿದರು..ಸಂತಸದಿಂದ ಬಂದ ಕಂಸ ಆ ಮಗುವನ್ನು ಕೊಲ್ಲಲು ಮುಂದಾದ..ಆದರೆ ಅದು ಸಾಧ್ಯವಾಗಲಿಲ್ಲ..ಅವನ ಕೈಯಿಂದ ತಪ್ಪಿಸಿದ ಆ ಮಗು ಮಾಯವಾಗಿ ಮಾಯೆ ಪ್ರತ್ಯಕ್ಷಳಾದಳು..”ಎಲವೋ ಮೂಢ ಕಂಸ..!! ನಾನು ನಿನ್ನ ಶತ್ರು ಎಂದು ತಿಳಿದೆಯಾ..?!” ಎಂದು ಜೋರಾಗಿ ನಕ್ಕವಳು “ನಿನ್ನ ಶತ್ರು ಈಗಾಗಲೇ ಹುಟ್ಟಿದ್ದಾನೆ..ಬೇರೆ ಸ್ಥಳದಲ್ಲಿ ಬೆಳೆಯುತ್ತಿದ್ದಾನೆ..ಹಾಗಾಗಿ ನಿನ್ನ ಸಾವು ಅವನಿಂದಲೇ ಮುಂದೆ  ಖಚಿತ..!!” ಹೇಳಿ ಮಾಯವಾಗಿದ್ದಳು..ಕಂಸ ಆಘಾತಗೊಂಡಿದ್ದ.

      ಆದರೆ ಕಂಸ ಕೈ ಚೆಲ್ಲಿ ಕುಳಿತುಕೊಳ್ಳಲಿಲ್ಲ..ತನ್ನ ಗೂಢಾಚಾರಿಗಳ ಮೂಲಕ ಗೋಕುಲದಲ್ಲಿ ಕೃಷ್ಣನ ಇರುವಿಕೆಯನ್ನು ತಿಳಿದುಕೊಂಡು ಅವನನ್ನು ಕೊಲ್ಲಲು ರಾಕ್ಷಸರನ್ನು ಕಳುಹಿಸಿದ್ದ..ಮೊದಲು ಪೂತನಿ ಎಂಬ ರಾಕ್ಷಸಿ ಬಂದಿದ್ದಳು..ಸುಂದರವಾದ ತರುಣಿಯ ರೂಪದಲ್ಲಿ ಬಂದು ಆಗ ತಾನೇ ತೊಟ್ಟಿಲಲ್ಲಿ ಕೈ ಕಾಲುಗಳನ್ನು ಆಡಿಸುತ್ತಾ ನಗುತ್ತಿರುವ ಕೃಷ್ಣನನ್ನು ಎತ್ತಿ ಸ್ತನ್ಯಪಾನ ಮಾಡಿಸತೊಡಗಿದ್ದಳು..ವಿಷ ತುಂಬಿದ ಹಾಲಿನಿಂದ ಅವನನ್ನು ಕೊಲ್ಲುವ ಉದ್ದೇಶ ಆಕೆಯದು..ಆದರೆ ಕೃಷ್ಣ ಅವಳ ವಿಷಪೂರಿತ ಹಾಲಿನ ಜೊತೆಗೆ ಅವಳ ರಕ್ತವನ್ನು ಹೀರುತ್ತಾ ಅವಳನ್ನು ಕೊಂದ..ಮೊದಲ ಸೋಲಿಗೆ ಕಂಸನಿಗೆ ಸಿಟ್ಟು ಬಂದರೂ ಧೃತಿಗೆಡಲಿಲ್ಲ..ಶಕಟಾಸುರನೆಂಬ ರಕ್ಕಸನನ್ನು ಕಳುಹಿಸಿದ..ಗಾಡಿಯ ರೂಪದಲ್ಲಿ ಬಂದ ಅವನನ್ನು ಕೃಷ್ಣ ತನ್ನ ಪುಟ್ಟ ಕಾಲುಗಳಿಂದ ಒದ್ದು ಸಂಹರಿಸಿದ..ಹೀಗೆ ರಾಕ್ಷಸರು ಒಬ್ಬೊಬ್ಬರಂತೆ ಬಂದವರು ಹತರಾಗುತ್ತಾ ಹೋದರು..ಇದರ ನಡುವೆ ಕೃಷ್ಣ ನಂದ ಯಶೋದೆಯರ ಮಗನಾಗಿ ಗೋಕುಲದಲ್ಲಿ ಬೆಳೆಯತೊಡಗಿದ್ದ..ಅವನು ಆಡದ ಆಟವಿಲ್ಲ..ಮಾಡದ ತುಂಟತನವಿಲ್ಲ..!! ಯಾವಾಗಲೂ ಅವರಿವರ ಮನೆಯಲ್ಲಿ ಬೆಣ್ಣೆ ಕದಿಯುತ್ತಾ ಎಲ್ಲರನ್ನೂ ಆಟವಾಡಿಸುತ್ತಾ ಇರುವ ತುಂಟತನದ ಕೃಷ್ಣನನ್ನು ಕಂಡರೆ ಗೋಕುಲವಾಸಿ ಜನಕ್ಕೆ ಅಚ್ಚುಮೆಚ್ಚು..ಅವೆಲ್ಲರೆಲ್ಲರ ಮುದ್ದಿನ ಕಣ್ಮಣಿ..!! ದಿನಾ ಗೋಕುಲದ ಗುಡ್ಡಗಾಡು ಪ್ರದೇಶಗಳಿಗೆ ಗೋವುಗಳನ್ನು ಮೇಯಿಸಲು ತೆರಳುತ್ತಿದ್ದ ಕೃಷ್ಣ..!! ಆ ಸಮಯದಲ್ಲಿ ಗೋವುಗಳು ತಮ್ಮಷ್ಟಕ್ಕೆ ಮೇವಿನ ಕಾರ್ಯದಲ್ಲಿ ತೊಡಗಿದ್ದರೆ ಕೃಷ್ಣ ಸುಮಧರವಾಗಿ ಕೊಳಲನ್ನು ನುಡಿಸುತ್ತಿದ್ದ..ಆಗ ಆ ಪ್ರದೇಶದ ಸುತ್ತಮುತ್ತಲಿರುವ ಗೋಪಿಕಾ ಸ್ತ್ರೀಯರು ತಮ್ಮ ಕಾರ್ಯಗಳನ್ನು ಮರೆತು ಅವನ ಕೊಳಲನಾದಕ್ಕೆ ಮೈ ಮರೆತು ನರ್ತಿಸುತ್ತಿದ್ದರು..ಹಾಗಾಗಿ ದಿನಾ ಅವನ ಕೊಳಲು ಗಾನ ಕೇಳಲು ಬರುವರು..ಮೈ ಮರೆತು ನರ್ತಿಸುವರು..!! ಅಲ್ಲದೆ ಮೇಯುತ್ತಿದ್ದ ಗೋವುಗಳು ಕೂಡ ತಮ್ಮ ಮೇವು ಕಾರ್ಯವನ್ನು ನಿಲ್ಲಿಸಿ ಅವನ ಕೊಳಲ ಗಾನಕ್ಕೆ ಮೈಮರೆಯುತ್ತಿದ್ದವು..

ಮುಂದುವರೆಯುವುದು…

Facebook ಕಾಮೆಂಟ್ಸ್

ಲೇಖಕರ ಕುರಿತು

Vinod Krishna

ಸಾಫ್ಟ್’ವೇರ್ ಕಂಪೆನಿಯಲ್ಲಿ ಉದ್ಯೋಗದ ನಡುವಿನ ಬಿಡುವು..ಆ ಸಮಯದಿ ಬರವಣಿಗೆಯತ್ತ ಹೆಚ್ಚು ಒಲವು..
ತನ್ನದೇ ಶೈಲಿಯಲ್ಲಿ ಗೀಜಿ ರಚಿಸಲ್ಪಟ್ಟ ಕಥೆಗಳು ಹಲವು..ಅವುಗಳಲ್ಲಿ ಕಿರುಚಿತ್ರವಾದವುಗಳು ಕೆಲವು..
ಮಿಕ್ಕಂತೆ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಿನೆಮಾ ವೀಕ್ಷಣೆ,ಹಾಡನ್ನು ಕೇಳುವುದು ಇತರ ಹವ್ಯಾಸಗಳು..
ದೇವರ ಸ್ವಂತ ನಾಡಿನ ಕಾಸರಗೋಡು ಜಿಲ್ಲೆಯ ಕುಂಟಂಗೇರಡ್ಕ ಎಂಬ ಪುಟ್ಟ ಊರು ಹುಟ್ಟೂರು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!