ಕಥೆ

ಮಾರುತಿಯ ಟ್ರೀಟ್

ಐ ಫೋನ್-೭ ರ ಅಲಾರಂ ಮಧುರವಾಗಿ ನುಡಿದರೂ ನನಗೆ ಬೆಚ್ಚಿ ಬೀಳುವಂತೆಯೇ ಆಗಿ ಎದ್ದು ಕೂತೆ.  ಬೆಳಿಗ್ಗೆ ಆರು ಗಂಟೆಯಾಯ್ತು ನಿಜ, ಆದರೆ ಹಿಂದಿನ ರಾತ್ರಿ ನನ್ನ ಕಲೀಗಿನ ಫ಼ೇರ್‌‍ವೆಲ್ ಪಾರ್ಟಿಯಿಂದ ಬಂದಿದ್ದು ರಾತ್ರಿ ೧ ಗಂಟೆಗೆ ತಾನೆ?..ಅದನ್ನು ನಮ್ಮ ೨೪x೭ ಲೆಕ್ಕಾಚಾರದ ಐ ಟಿ ಕಂಪನಿಗೆ ಹೇಳುವಂತಿಲ್ಲ.. ಇಲ್ಲಿ ಟೈಮ್ ಅಂದರೆ ಶತಾಯ ಗತಾಯ.. ಕಾರ್ಡ್ ಇನ್ ಮತ್ತು ಔಟ್ ಟೈಮ್‌ನಿಂದ ನಮ್ಮ ತಿಂಗಳ ಜಾತಕವನ್ನೇ ಬರೆದಿಡುತ್ತಾರೆ.

ಎಂದಿನಂತೆ ರೆಡಿಯಾಗುತ್ತಿದಂತೆ ಇನ್ನೈದೇ ನಿಮಿಷದಲ್ಲೇ ಮೊಬೈಲ್ ಫೋನ್ ಮತ್ತೆ ರಿಂಗಣಿಸಿತು… ಈ ಬಾರಿ ನನ್ನ ಕಲೀಗ್ ಮಾರುತಿ.. “ಹಲೋ  ಸ್ಯಾಂಡೀ… ದಿನದಂತೆ ನನ್ನ ಪಿಕಪ್ ಮಾಡುತ್ತೀ ತಾನೇ?” ಎಂಬ  ಪ್ರಶ್ನೆ. “ಹೂ ಕಣೊ, ನಿಂಗೇನು ದಿನಾ ಡೌಟು?” ಎಂದು ರೇಗಿ ಇಟ್ಟೆ. ಒಳ್ಳೆ ಮಾರುತಿ!. ಎಲ್ಲರೂ ಕರೆಯುವಂತೆ ಸಂದೀಪ್ ಕುಮಾರ್ ಆದ ನನ್ನ ಹೆಸರನ್ನು ಸ್ವಲ್ಪ ಐ ಟಿ ಕಲ್ಚರ್ ಮತ್ತು ಸ್ಟೈಲಿನಂತೆ “ಸ್ಯಾಂಡಿ” ಎಂದು ನಾನೇ ಬದಲಾಯಿಸಿಕೊಂಡ ಆರು ತಿಂಗಳ ನಂತರವೇ ಅವನಿಗೆ ಅದು ನಾಲಿಗೆ ತಿರುಗಿದ್ದು.. ಮೊದ ಮೊದಲು “ಸಂದೀ, ಸಂದೀ” ಅನ್ನುತ್ತಿದ್ದ , ಛೇ! ಎಂದು ಹುಳ್ಳಗೆ ನಕ್ಕೆ.

ನನ್ನನ್ನು  ಈ ಕಾಲದ ಸ್ಟೈಲಿಶ್ ‘ಡೂಡ್’  ಎಂದು ಎಲ್ಲರೂ ಕರೆಯಲೆಂದು ನನ್ನ ರೂಪ ಲಕ್ಷಣ, ಮತ್ತು ಲೈಫ್ ಸ್ಟೈಲೆಲ್ಲಾ ಅದಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇನೆ… ಮಾಲ್‌ಗಳಲ್ಲಿ ಅಲೆದು ನನ್ನ ಫೇವರಿಟ್ ಸ್ಪೋರ್ಟ್ಸ್ ಸ್ಟಾರ್ಸ್ , ಮೂವೀ ಸ್ಟಾರ್ಸ್‌ಗಳ ಜಾಹೀರಾತಿನ ಬ್ರ್ಯಾಂಡೆಡ್ ಬಟ್ಟೆಗಳನ್ನು, ರೇ ಬ್ಯಾನ್ ಕನ್ನಡಕಗಳನ್ನೇ ಧರಿಸುವುದು. ಕಿವಿಗೆ  ಹೆಡ್-ಫೋನ್ ಸಿಕ್ಕಿಸಿಕೊಂಡು ರಿಲ್ಯಾಕ್ಸಿಂಗ್ ಬೀಟ್ಸ್ ಸಂಗಿತದೊಂದಿಗೇ ಜಾಗಿಂಗ್ ಮಾಡುವುದು, ನ್ಯಾಚುರಲ್ಸ್ ಸೆಲೂನ್’ನಲ್ಲಿ ಕೂದಲು ಕಟ್ ಮಾಡಿಸಿಕೊಳ್ಳದಿದ್ದರೆ ನನಗೆ ಆ ತಿಂಗಳೆಲ್ಲಾ ಮುಜುಗುರವಾಗುತ್ತಿರುತ್ತದೆ.

ಆದರೆ ಈ ಮಾರುತಿ, ಅದೆಲ್ಲಿ ತಗುಲಿ ಹಾಕಿಕೊಂಡನೋ ನೋಡಿ, ನನ್ನ ಪಕ್ಕದ ಕ್ಯುಬಿಕಲ್‌ನಲ್ಲಿ ಕೂರುವ ಈ ಮಾರುತಿ ರಾವ್ ಯಾವುದೋ ಹಳ್ಳಿ ಕಡೆಯವನು, ಹಾಗೂ ಹೀಗೂ ಕ್ಯಾಂಪಸ್ ರೆಕ್ರೂಟ್‍ಮೆಂಟ್’ನಲ್ಲಿ ತಾನೂ ನನ್ನಂತೆ ಈ ಜನಪ್ರಿಯ ಐ ಟಿ ಕಂಪನಿಗೆ ಫ್ರೆಶರ್ ಆಗಿ ಸೇರಿದ್ದಾನೆ. ನೋಡಕ್ಕೆ ಕರ್ರಗೆ, ಕುಳ್ಳಗೆ, ಸ್ವಲ್ಪ ಬೊಜ್ಜು ಬೇರೆ!.. ಸ್ಮಾರ್ಟ್ ಆಗೇ ಕಾಣಲ್ಲ.., ಗಮಾರನಂತಾ ಗೆಟ್’ಅಪ್. ಏನೋ ಬಡವರ ಬ್ಯಾಕ್‍ ಗ್ರೌಂಡ್‌ನಿಂದ ಬಂದವನು ಅಂದರೂ ಸ್ವಲ್ಪವೂ ನಮಗೆಲ್ಲಾ ಒಗ್ಗದ ವಿಭೂತಿ ಪಟ್ಟೆ, ದೇವಸ್ಥಾನದ ಕುಂಕುಮ ಹಣೆಗಿಟ್ಟುಕೊಂಡು, ದೊಗಲೆ ಪ್ಯಾಂಟ್ ಮೇಲೆ ಚೀಪ್ ಕಾಟನ್ ಶರ್ಟ್ ಧರಿಸಿ, ಇರುವ ಒಂದೇ ಜೋಡಿ ಕಪ್ಪು ಬಾಟಾ ಶೂಸ್ ಹಾಕಿಕೊಂಡು ಆಫೀಸಿಗೆ ಬರುತ್ತಾನೆ.. ನಾನೂ, ನಮ್ಮ ಫ್ರೆಂಡ್ಸ್ ರಾಕೇಶ್(ರಾಕಿ), ಜಗನ್ನಾಥ್(ಜಗ್ಗಿ)  ಮತ್ತು ನಮ್ಮ ಟೀಮ್ ಲೀಡ್ ಮತ್ತು ಸ್ವಲ್ಪ ಸೀನಿಯರ್ ಆದ ಜಾನಕಿ (ಜೆನ್ನಿ) ಎಷ್ಟು ಹೇಳಿದ್ದೇವೆ. ‘ಅಲ್ಲವೋ, ಹಳ್ಳಿ ಲೈಫು ಆಯ್ತು ಮರೀ, ಇದು ಮೆಟ್ರೋ, ನೀನು ಟೆಕ್ಕಿ!…ಸ್ವಲ್ಪ ಸ್ಟೈಲಾಗಿ ನಮ್ ತರಾ ಬಾರೋ’..ಅಂತಾ.. ಊಹೂಂ.. ‘ಸುಮ್ನೆ ಯಾಕೋ ದುಡ್ಡು ವೇಸ್ಟೂ’ ಅಂತಾನಲ್ಲಾ, ಕಂಜೂಸ್ ಪ್ರಾಣಿ!

ಈ ಸಲ ಅವನ ಬರ್ತ್’ಡೇಗೆ ಸರ್ಪ್ರೈಸ್ ಗಿಫ್ಟ್ ಅಂತಾ ‘ನೈಕೀ’ ಶೂಸ್ ಕೊಡಿಸೋಣ ಎಂದು ನಮ್ಮ ಗ್ರೂಪಿನವರೆಲ್ಲಾ ನಿರ್ಧರಿಸಿದ್ದೀವಿ. ಅವನಿಗಾಗಿ ಅಲ್ಲವಾದರೂ ನಮ್ಮ ಜತೆ ಮಾಲ್‍ಗೆ, ಮೂವಿಗೇ, ಪಾರ್ಟೀಗೆ ಬರ್ತಿರ್ತಾನಲ್ಲಾ.. ನಮ್ಮ ಪ್ರೆಸ್ಟೀಜ್‌‌ಗೋಸ್ಕರ! ಸರಿ, ಆಫೀಸನದು ಅಲ್ಲೇ ಮುಗಿಯುತ್ತಾ, ಇಲ್ಲಾ…ಗ್ರಹಚಾರಕ್ಕೆ ಈ ಮಾರುತಿ ಇರುವ ಪಿ.ಜಿ ರೂಮು ನನ್ನ ಮನೆಯ ದಾರಿಯಲ್ಲೆ ಇರಬೇಕಾ?… ಹಾಗಾಗಿ ದಿನಾ ಒಂದೇ ಶಿಫ್ಟ್ ಆದ ನಾವಿಬ್ಬರೂ ನನ್ನ ಕಾರಿನಲ್ಲೇ ಹೋಗಿ ಬರುವುದು ಅಂತಾ ಆಯ್ತು.  ಕಾರ್’ಪೂಲ್ ಮಾಡುವುದು ಪರಿಸರ ಸ್ನೇಹ ಎಂದು ನಮಗೆ ಚೆನ್ನಾಗಿ ಬೋಧಿಸಿದ್ದಾರಲ್ಲಾ!… ಇದಕ್ಕಾದರೂ ಮಾರುತಿಯಿಂದ ದುಡ್ಡು ಪೀಕಿಸಲೇಬೇಕೆಂದು ನಾನು ತಿಂಗಳಿಗಿಷ್ಟು ಅಂತಾ ಚಾರ್ಜ್ ಮಾಡುತ್ತಿದ್ದೇನೆ… ಕೊಡುತ್ತಿದ್ದಾನೆ ಪಾಪಾ!  ಹಾ, ಕಾರು ಯಾವುದು ಅಂದಿರಾ? ..ನಮ್ಮ ಪಪ್ಪಾ ಮಲೆನಾಡಲ್ಲಿ ಎಸ್ಟೇಟ್ ಓನರ್ರು..ಅವರಿಗೇನು ‘ನಾನು ದುಡ್ಡು ಕೊಡ್ತೀನಿ, ದೊಡ್ಡ ಎಸ್.ಯು.ವಿ ತಗೋ’ ಅಂದರೂ, ನಾನು ಈ ಹಾಳು ಸಿಟಿ ಟ್ರಾಫಿಕ್ಕಿನಲ್ಲಿ ಯಾರು ಆ ಪೆಡಂಭೂತದಂತಾ ವ್ಯಾನ್ ಓಡಿಸ್ತಾರೆ.. ಅದಕ್ಕೇ ಮ್ಯಾನೂವರ್ ಮಾಡಲು ಸುಲಭ ಅಂತಾ ಬರೇ ಟಾಟಾ ನ್ಯಾನೋ ಕೊಂಡಿದ್ದೇನೆ.. ಚಿಕ್ಕದು ಸಾಕು ನನಗೆ.. ಮತ್ತು ಮಾರುತಿಗೆ!

ಬೆಳಿಗ್ಗೆ ೮ಕ್ಕೆಲ್ಲಾ ಎದುರಿಗಿನ ಕೆಫೆಯಲ್ಲಿ ಬ್ರೆಡ್’ಟೋಸ್ಟ್, ಕಾಫಿ ಸೇವಿಸಿ ಮೊಬೈಲಿನ ಡ್ಯಾಟಾ ಪ್ಯಾಕ್ ಆನ್ ಮಾಡಿ ಇವತ್ತಿನ ವಾಟ್ಸ್’ಆಪ್ ಮೆಸೇಜು, ಫ಼ೇಸ್ ಬುಕ್ಕಿನ ವಾಲ್’ನಲ್ಲಿರುವ ಅಪ್‍ಡೇಟ್ಸ್, ಲೈಕುಗಳ ಮೇಲೆಲ್ಲಾ ಕಣ್ಣಾಡಿಸಿದೆ..ಹೊಸ ಜೋಕ್ಸ್ ಇದ್ದಾಗ ಮಾತ್ರ ನಕ್ಕೆ.. ಯುದ್ಧ ಅಥವಾ ಟೆರರಿಸಂ ಬಗ್ಗೆ ಭೀಕರ ಚಿತ್ರಗಳು ಅಥವಾ ರಾಜಕಾರಣಿಗಳ ಇತ್ತೀಚಿನ ಸ್ಕ್ಯಾಮ್ ಬಗ್ಗೆ  ಕಾರ್ಟೂನ್ಸ್ ಇದ್ದರೆ ಅದಕ್ಕೆ ತಕ್ಕಂತಾ ನಗುವ ಮತ್ತು ಅಳುವ ಸ್ಮೈಲೀ ಹಾಕಿ ಉತ್ತರಿಸಿ ಅಲ್ಲಿಂದ ಎದ್ದೆ.

ಮಾರುತಿ ಎಂದಿನಂತೆ ಅವನ ಪಿ. ಜಿ. ರೂಮ್ ಕಾರ್ನರ್‌ನಲ್ಲಿ  ಕಾಯುತ್ತಾ ನಿಂತಿದ್ದ…

ಕಾರ್  ಹತ್ತಿದ ಮೇಲೆ ಅವನೇ ವಿಷಯ ಎತ್ತಿದ, “ಸ್ಯಾಂಡೀ, ಇವತ್ತು ರಾಕೀ  ನಮ್ ಕಂಪನಿಗೆ ಸೇರಿ ಒಂದು ವರ್ಷ ಆಯ್ತಲ್ಲಾ.. ಅದಕ್ಕೆಪಾರ್ಟಿ ಕೊಡ್ತಾನೆ…ಫೀನಿಕ್ಸ್ ಮಾಲ್‌ನಲ್ಲಿ , ೭ಗಂಟೆಗೆ ಅಂತಾ ರಿಮೈಂಡರ್ ಕಳಿಸಿದ್ದಾನೆ…ಹೋಗೋಣಲ್ಲಾ?” ನಾನು ಅವನತ್ತ ಒಂದು ಒಣನಗೆ ಹರಿಸಿ ತಲೆಯಾಡಿಸಿದೆ.. ಸರಿ, ಇದೊಂದು ಫೇವರಿಟ್ ಟಾಪಿಕ್ ಇವನಿಗೆ! ನಾವೂ ಹೋಗುತ್ತಿರುತ್ತೇವೆ ಪಾರ್ಟಿಗಳಿಗೆ, ಗೆಳೆಯರು ಒಂದಲ್ಲ ಒಂದು ಚಿಕ್ಕ ಕಾರಣಗಳಿಗೂ ಈ ನಡುವೆ ಕೊಡುವ ಟ್ರೀಟ್‌ಗಳಿಗೆ.. ಆದರೆ ಬೇರೆಯವರು ಕೊಡುವ ಪ್ರತಿ ಪಾರ್ಟೀ ಭೋಜನ ಕೂಟಕ್ಕೂ ಹೋಗಲೇಬೇಕಂತೆ ಈ ಮಾರುತಿಗೆ!…ಅದು ಸೌತ್ ಇಂಡಿಯನ್ ಮೀಲ್ಸ್ ಆಗಿರಲಿ, ನಾರ್ತ್ ಇಂಡಿಯನ್ ರೋಟಿ ಸಬ್ಜಿ ಥಾಲಿ ತರಹವಾಗಿರಲಿ, ಡಾಮಿನೋ ಪಿಜ್ಜಾ ಅಥವಾ ಮ್ಯಾಕ್ಡೊನಾಲ್ಡ್ಸ್ ಬರ್ಗರ್ಸ್ ಆಗಿರಲಿ..ಮಾರುತಿ ಮಾತ್ರ ಎವೆರ್ ರೆಡಿ!!..

ಸರಿ, ಬಂದವನು ತಿಂದು ಸುಮ್ಮನೆ ವಾಪಸ್ ಹೋಗುತ್ತಾನಾ?. ಕೊನೆಯಲ್ಲಿ ಒಂದು ಅಸಹ್ಯಕರ ಅಭ್ಯಾಸ ಬೆಳೆಸಿಕೊಂಡಿದ್ದಾನೆ.. ಅದೆಂದರೆ ಮಿಕ್ಕ ಆಹಾರವನ್ನು ಪಾರ್ಸಲ್ ಮಾಡಿ ತೆಗೆದುಕೊಂಡು ಹೋಗುವುದು!… ನಾವು ನಾಲ್ಕೈದು ಫ್ರೆಂಡ್ಸ್ ಊಟಕ್ಕೆ ಹೋದವೆನ್ನಿ. ತಿನ್ನುತ್ತಾ ತಿನ್ನುತ್ತಾ ಕೊನೆಗೆ ಜಾಸ್ತಿ ಆಗಿಯೇ ಬಿಡುತ್ತದೆ.. ರೋಟಿಗಳು, ಪಲ್ಯ, ದಾಲ್, ಪುಲಾವ್ ಇತ್ಯಾದಿ ಸಹಜವಾಗಿಯೇ ಕೊನೆಯಲ್ಲಿ ಮಿಕ್ಕಿಬಿಡುತ್ತದೆ. ಪಿಜ಼ಾ ಮತ್ತು ಬರ್ಗರ್ಸ್ ಕೂಡಾ ತಿಂದು ಕಟರೆಯಾಗುವಷ್ಟು ತರಿಸುತ್ತಾರೆ…ಮಿಕ್ಕತ್ತಪ್ಪಾ, ಅದಕ್ಕೇನೀಗ?…ಅದನ್ನೆಲ್ಲಾ ಹಾಗೇ ಬಿಟ್ಟು ಖುಶಿ ಖುಶಿಯಾಗಿ ಟಿಪ್ಸ್ ಬಿಟ್ಟು ಪಾನ್ ಹಾಕಿಕೊಂಡು ನಾವು ಎದ್ದರೆ, ಎಲ್ಲಿ ಮಾರುತಿ?…

ಅಗೋ, ಆ ವೈಟರ್ ಹಿಂದೆ ಬಿದ್ದಿರುತ್ತಾನೆ.. ಎಲ್ಲಾ ಪಾರ್ಸಲ್ ಮಾಡಿಕೊಡು ಎಂದು ಮಿಕ್ಕ ಸಾಲ್ಟ್, ಪೆಪ್ಪರ್, ಕೆಚಪ್ ಮತ್ತು ಪೆಪ್ಸಿ, ವಾಟರ್ ಬಾಟಲ್ಸ್ ಸೇರಿಸಿ ಗುಡ್ಡೆ ಹಾಕಿಕೊಂಡ ನಂತರವೇ ಅವನು ಹೊರಕ್ಕೆ ನನ್ನ ಕಾರಿಗೆ ಬರುವುದು! ಕೆಲವು ಹೋಟೆಲ್ಲಿನ ಮ್ಯಾನೇಜ್‌ಮೆಂಟಿನವರು ’ಇಲ್ಲಿ ಪಾರ್ಸಲ್ ವ್ಯವಸ್ಥೆ ಇಲ್ಲ ’ ಎಂದು ಸಿಡುಕಿ ನಮ್ಮ ಬಳಿ ದೂರಿಯೂ ಇದ್ದಾರೆ,, ಆದರೆ ಇವನು ಅದಕ್ಕೆಲ್ಲಾ ಬಗ್ಗುವುದೇ ಇಲ್ಲಾ, ಆಸಾಮಿ… ಹಾಗೂ ಅವನಿಗೆ ಬಹಳ ಸಲ ನಾವೆಲ್ಲಾ ಹೇಳಿಯಾಗಿದೆ..” ಪಾರ್ಟಿ ಮುಗಿದ ಮೇಲೆ ಜಾಲಿಯಾಗಿ ಹಾಯಾಗಿ ಹೊರಡಬೇಕು ಕಣೋ… ಹೀಗೆಲ್ಲಾ ಕಂಗಾಲಿ ತರಹ ಮುಸುರೆ ಎತ್ಕೊಂಡು ಹೋಗಬಾರದು.. ನಮಗೊಂದು ಘನತೆ, ಸೆಲ್ಫ್ ರೆಸ್ಪೆಕ್ಟ್ ಇಲ್ವಾ.”..ಅಂದಾಗ “ತುಂಬಾ ಹಸಿವೆ ಆಗತ್ತೆ ಕಣೋ, ಅವಾಗ ಬೇಕಾಗತ್ತೆ” ಎಂದು ನಾಚಿಕೆಯಿಲ್ಲದೇ ಸಮರ್ಥಿಸಿಕೊಂಡು ದೈನ್ಯತೆಯಿಂದ ನಮ್ಮತ್ತ ನೋಡುತ್ತಾನೆ.

ನಾವೆಲ್ಲ ಸೇರಿ ಅವನ ಈ ಹೊಟ್ಟೆಬಾಕತನ , ಅದರ ಫಲವಾಗಿ ಬಂದಿರುವ ಬೊಜ್ಜಿನ ಬಗ್ಗೆ ಹಲವು ಬಾರಿ ಓಪನ್ನಾಗಿ ನಗಾಡಿದ್ದೇವೆ.. ಅವನು ಮಾತ್ರ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ತೆಪ್ಪಗಿದ್ದುಬಿಡುತ್ತಾನೆ, ಹಾಗಾಗಿ ಹೇಗಾದರೂ ಅವನಿಗೆ ಬುದ್ದಿ ಬರುವಂತೆ ಪಾಠ ಕಲಿಸಬೇಕು ಎಂದು ನಮ್ಮ ಫ್ರೆಂಡ್ಸ್ ಗ್ರೂಪಿನವರಿಗೂ ಇದೆ.. ಅದೇಕೋ ಇವತ್ತಿನ ಪಾರ್ಟಿಯ ನಂತರ ಇವನನ್ನು ಹಿಂಬಾಲಿಸಿ ಹೋಗಿ ಇವನ ಫ್ರಿಜ್ ತೆಗೆದು ಅಲ್ಲಿ ಎಷ್ಟು , ಹೇಗೆ ಈ ಎಂಜಲು ಆಹಾರವನ್ನು ಬಚ್ಚಿಟ್ಟುಕೊಂಡಿದ್ದಾನೆ ಎಂದು ನೋಡಿ ಅಲ್ಲೆ ಇವನಿಗೆ ನಿವಾಳಿಸಿಬಿಡಬೇಕು ಎಂದು ನಿರ್ಧರಿಸಿಕೊಂಡೆ. ಎಂದಿನಂತೆ ದಿನದ ಕೆಲಸ ಎಲ್ಲಾ ಮುಗಿಸಿ ಸಂಜೆ ಢಾಬಾ ಎಕ್ಸ್‌ಪ್ರೆಸ್’ನಲ್ಲಿ ನಮ್ಮ ಗುಂಪು ಸೇರಿತು.

ರಾಕಿ, ಜಗ್ಗಿ  ಮತ್ತು ಜೆನ್ನಿ  ಎಲ್ಲರೂ ಸೇರಿ, ಎಂದಿನಂತೆ ಜೋರು ಜೋರಾಗಿ ಆಫೀಸ್ ಜೋಕ್ಸ್ ಮಾಡುತ್ತಾ. ಯಾರ ಅಫೇರ್, ಯಾರ ಜತೆ, ಇತ್ತೀಚಿನ ಅಪ್ರೈಸಲ್’ನಲ್ಲಿ ಯಾರು ಪ್ರಮೋಶನ್‌ಗೆ ಏನೇನು ಸರ್ಕಸ್ ಮಾಡಿದರು ಎಂಬೆಲ್ಲಾ ವಿಷಯಗಳನ್ನೂ ಬಿಂದಾಸ್ ಆಗಿ ಚರ್ಚೆಮಾಡಿ ಹೊಟ್ಟೆ ತುಂಬಾ ತಿಂದು ಮುಗಿಸುವ ಹೊತ್ತಿಗೆ ಕೊನೆಗೆ ಒಂದು ಚಿಕ್ಕ ರಾಶಿಯಷ್ಟು ವಿವಿಧ ಡಿಶ್‍ಗಳು ಮಿಕ್ಕಿಬಿಟ್ಟವು. ಈ ಬಾರಿ ನಾನು ಸುಮ್ಮನೆಯೆ ಇದ್ದೆ, ಅವನು ಎಲ್ಲವನ್ನು ಕಟ್ಟಿಸಿಕೊಂಡು ಕ್ಯಾರಿ ಬ್ಯಾಗಲ್ಲಿ ಹೊತ್ತು ತರುವವರೆಗೂ.

ಹೊರಟ ಮೇಲೆ ಕಾರಿನಲ್ಲೂ ನಾನು ಶ್ರೀಮದ್ ಗಾಂಭೀರ್ಯದಿಂದ ಇದ್ದುಬಿಟ್ಟೆ. ಅವನನ್ನು ಪೇಯಿಂಗ್ ಗೆಸ್ಟ್ ರೂಮಿನ ಬಳಿ ಡ್ರಾಪ್ ಮಾಡಿ, ಪಕ್ಕದ ರಸ್ತೆಯಲ್ಲೇ ಕಾರ್ ಪಾರ್ಕ್ ಮಾಡಿ, ಮರಳಿ ಅವನ ಕಾಂಪೌಂಡಿಗೆ ಬಂದೆ. ಅವನ ರೂಮಿನ ಹಿಂಭಾಗದಲ್ಲೆ ದೊಡ್ದ ಕಲ್ಯಾಣ ಮಂಟಪವಿದೆ, ಅಲ್ಲಿ ಝಗಮಗ ಸೀರಿಯಲ್ ಲೈಟ್ ಮಿನುಗುತ್ತಿದೆ. ತನ್ನ ಕೈಯ್ಯಲಿ ಇಂದಿನ ಪಾರ್ಸಲ್ ಇದ್ದ ಕ್ಯಾರಿಯರ್ ಬ್ಯಾಗ್ ಇಟ್ಟುಕೊಂಡು ಮಾರುತಿ ಹೊರಗೆ ಬಂದ .ನಾನು ಉಸಿರು ಬಿಗಿ ಹಿಡಿದು ಕತ್ತಲಲ್ಲೆ ಗೋಡೆ ಮರೆಯಲ್ಲಿ ನಿಂತು ಕಾಯುತ್ತಿದ್ದೆ.

ಅಲ್ಲಿ ಒಂದು ಚಿಕ್ಕ ಗೇಟ್ ಇದೆ, ಅದರ ಮೂಲಕ ಮೂರು ಅರ್ಧ ಚಡ್ಡಿ ಹರಿದ, ಶರ್ಟ್ ಕೂಡ ಇಲ್ಲದ ಬಡ ಮಕ್ಕಳು ಇವನತ್ತ ಸಡಗರದಿಂದ ಓಡೋಡಿ ಬಂದವು..

“ಬನ್ರೋ, ಇವತ್ತು ನಾರ್ತ್ ಇಂಡಿಯನ್ನು…ಮೂರೂ ಜನರಿಗೂ ಆಗೋ ತರ ಇದೆ” ಎಂದು ತನ್ನ ಕೈಯಲ್ಲಿದ ಪೇಪರ್ ಪ್ಲೇಟ್ಸ್ ನೆಲದ ಮೇಲೆ ಹರಡಿ ಪಾರ್ಸಲ್ ಬಿಚ್ಚಿ ಒಂದೊಂದೇ ಐಟಮ್ಮನ್ನು ಅವರಿಗೆ ಬಡಿಸುತ್ತಾ ಹೋದ.. ಮಕ್ಕಳು ಸಂತಸದ ಕಲರವ ಮಾಡುತ್ತಾ ಗಬಗಬನೆ ತಿನ್ನಲಾರಂಭಿಸಿದವು. ನನ್ನೆದೆಯಲ್ಲಿ ಕೆಂಡ ಮತ್ತು ಮಂಜುಗೆಡ್ಡೆ ಒಟ್ಟಿಗೆ ಸಂಚಾರವಾದಂತಾಗಿ ಸ್ತಂಭೀಭೂತನಾದೆ. ಕತ್ತಲೆ ಬಿಟ್ಟು ಹೊರಬಂದೆ. ಅವನು ನನ್ನನ್ನು ನೋಡಿಬಿಟ್ಟ. ಬಡಿಸುವುದನ್ನು ನಿಲ್ಲಿಸಿ “ಇದೇನೋ, ಸ್ಯಾಂಡಿ..ನೀನಿಲ್ಲಿ” ಎಂದ . ನಾನು ಆ ಮಕ್ಕಳ ಮುಖದಲ್ಲಿನ ಸಂತಸ ಮತ್ತು ತೃಪ್ತಿಯ ನಗೆಯನ್ನು ನೋಡುತ್ತಿದ್ದೆ..

ಮಾರುತಿ ಪೆಚ್ಚು ನಗೆಯಿಂದ “ಇದೆಲ್ಲಾ, ನಾನು…ಸುಮ್ನೆ..ಯಾಕೆ ಇದೆಲ್ಲಾ ಹೇಳಬೇಕೂಂತಾ…?” ಎಂದು ವೀಕಾಗಿ ವಾದ ಶುರು ಮಾಡಿದ.

ನಾನು ಕೈಯೆತ್ತಿ ತಡೆದೆ, “ಯಾಕೋ ಮಾರುತಿ, ಇಷ್ಟು ದಿನ ಇದನ್ನು ಬಚ್ಚಿಟ್ಟಿದ್ದೆ?..ಈ ಮಕ್ಕಳಿಗೆ ಬಡಿಸ್ತೀನಿ ಅಂತಾ ಒಂದ್ಸಲ  ಹೇಳಿಕೊಳ್ಳಲಿಲ್ಲ.. ನಮ್ಮ ಇನ್ಸಲ್ಟ್’ನೆಲ್ಲಾ ತಡೆದುಕೊಂಡಿದ್ದೆಯಲ್ಲೋ?” ಎಂದು  ಸೋತವನಂತೆ ನೊಂದು ಕೇಳಿದೆ.

ಬೆಳದಿಂಗಳಲ್ಲಿ ಮಾರುತಿಯ ಮುಖದಲ್ಲಿ ಆ ಸೀರಿಯಲ್ ಲೈಟ್ಸ್ ಮಿನುಗಿದಂತಾಯಿತು

“ನೋ ನೋ…ಮಕ್ಕಳು ದಿನಾ ಊಟಕ್ಕೆ ತಿಪ್ಪೆಯಲ್ಲಿ ಕೈಹಾಕಿ ಪರದಾಡೊದು ನನ್ನ ಕಿಟಕಿಯಿಂದ ಕಾಣಿಸೋದು, ಸಂಕಟ ಆಗೋದು…ನನ್ನ ಹಳ್ಳಿ, ಬಡತನ ಎಲ್ಲಾ ಜ್ಞಾಪಕಕ್ಕೆ ಬರೋದು.. ನಾವೋ ಆಫೀಸಿನಲ್ಲಿ ವಾರಕ್ಕೆ ಎರಡು ಮೂರು ಟ್ರೀಟು ಪಾರ್ಟೀ ಅಂತಾ ಹೋಗ್ತಿರ್ತೀವಿ.. ನಮಗೆಲ್ಲಾ ಟ್ರೀಟ್ ಸಿಕ್ಕ ದಿನಾ ಪಾಪಾ ಈ ಮಕ್ಕಳಿಗೂ ನಾನು ಹೀಗೆ ಟ್ರೀಟ್ ಕೊಡ್ತೇನೆ ಅಷ್ಟೆ…ಇ ದೆಲ್ಲಾ ಹೇಳ್ಕೋಬಾರ್ದು ಕಣೋ.. ಅವರವರಿಗೇ ಅರಿವಾಗಬೇಕು. ದಾನವನ್ನು ಒಂದು ಕೈಯಲ್ಲಿ ಮಾಡಿದ್ದು ಇನ್ನೊಂದು ಕೈಗೆ ಗೊತ್ತಾಗಬಾರದು ಅಂತಿದ್ರು ಅಪ್ಪ.” ಎಂದು ವಿವರಿಸಿದ.

” ಹಾಗಾದ್ರೆ ನಾವೂ ಸೇರ್ಕೊಂಡು ಮಾಡ್ತೀವೋ…ಎಲ್ಲಾ ಇಲ್ಲಿಗೇ ಬರ್ತೀವಿ” ಎಂದೆ .

ಮಾರುತಿ ನಿರಾಕರಿಸಿದ,” ಬೇಡ್ರಪ್ಪಾ..ನೀವು ಬರೋದು, ಇಲ್ಲಿ ಇವರ ಜತೆ ಸೆಲ್ಫೀ ತಗೋಳ್ಳೊದು, ಫ಼ೇಸ್‌ಬುಕ್ಕಿನಲ್ಲಿ ಹಾಕಿ ಲೈಕ್ ಪಡೆಯೋದು ಯಾವುದೂ ಬೇಡಾ.. ಎಲ್ಲರೂ ಇದೇ ಮಾಡಬೇಕು ಅಂತಿಲ್ಲಾ.. ಈ ಸಮಾಜ ನಮಗೆ ಇಷ್ಟೆಲ್ಲಾ ಕೊಟ್ಟಿದ್ದಕ್ಕೆ ಯಾವ ರೀತಿಯಲ್ಲಾದರೂ ‘ಪೇ ಬ್ಯಾಕ್ ’ ಮಾಡು ಅಂತಾರೆ.. ಅದಕ್ಕಿಂತಾ ಉತ್ತಮ ಇದು-“ಪೇ ಇಟ್ ಫ಼ಾರ್ವರ್ಡ್” ಅಂತಾ… ಹೀಗೆ ನೀವೂ ಮಾಡಿ ಬೇಕಾದರೆ” ಎಂದು ಸೂಚಿಸಿ ಕೊನೆಗೆ ಕಾರ್ ಬಳಿ ಬಂದು ನನ್ನನ್ನು ಬೀಳ್ಕೊಟ್ಟ..

ಇಂದೇಕೋ ನನ್ನ ಟಾಟಾ ನ್ಯಾನೋ ಕಾರಿಗಿಂತಾ ನಮ್ಮ ಕುಳ್ಳ ಮಾರುತಿ, ಆಂಜನೇಯನಂತೆ ದೈತ್ಯಾಕಾರವಾಗಿ ಬೆಳೆದಂತೆ ನನ್ನ ಕಣ್ಣಿಗೆ ಕಂಡಿತು…..

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!