Featured ಅಂಕಣ

ಈ ಅಂಕಣ ಒಂದು ರೀತಿ ರಿವಿಜನ್ ಇದ್ದ ಹಾಗೆ

ಸಮಯ ಎಂದೂ ನಿಲ್ಲುವುದಿಲ್ಲ, ಅದರ ಪಾಡಿಗೆ ಅದು ಸಾಗುತ್ತಲೇ ಇರುತ್ತದೆ. ಕೆಲವೊಮ್ಮೆ ದಿನಗಳು ಎಷ್ಟು ಬೇಗ ಉರುಳಿ ಹೋಗುತ್ತಿದೆ ಎಂದೆನಿಸುತ್ತದೆ. ಇನ್ನು ಕೆಲವೊಮ್ಮೆ ಸಮಯ ಸಾಗುತ್ತಲೇ ಇಲ್ಲವೇನೋ, ನಿಂತು ಹೋಗಿದೆಯೇನೋ ಎನ್ನುವ ಭಾವ.  ದಿನಗಳು ಬೇಗ ಉರುಳುತ್ತಿದೆ ಎಂದು ಅನ್ನಿಸುತ್ತಿದೆಯಾದರೆ ಜೀವನ ಸುಗಮವಾಗಿ ಸಾಗುತ್ತಿದೆ ಎಂದರ್ಥ. ನಾವು ನೋವಿನಲ್ಲಿದ್ದಾಗ ಸಮಯ ನಿಂತಿದೆಯೇನೋ ಎಂದು ಅನಿಸುವುದು ಸಹಜ ಆದರೆ ಅದು `ಕಾಲವನ್ನು ತಡೆಯೋರು ಯಾರು ಇಲ್ಲ’ ಎನ್ನುತ್ತಾ ಸಾಗುತ್ತಲೇ ಇರುತ್ತದೆ. ಸದ್ಯಕ್ಕೆ, ನನಗೆ ಸಮಯ ಎಷ್ಟು ಬೇಗ ಕಳೆದು ಹೋಗುತ್ತಿದೆ ಎನಿಸುತ್ತಿದೆ. ಒಂದು ವರ್ಷ ಕಳೆದು ಹೋಗಿದೆ..!! ನಿಜ.. ಕ್ಯಾನ್ಸರ್ ಕುರಿತು ಅಂಕಣಗಳನ್ನು ಬರೆಯುತ್ತಾ ಸುಮಾರು ಒಂದು ವರ್ಷ ಕಳೆದು ಹೋಗಿದೆ.

ಕ್ಯಾನ್ಸರ್ ಕುರಿತು ಅಂಕಣಗಳನ್ನ ಬರೆಯುವುದರ ಕುರಿತು ರೀಡೂ ಟೀಮ್ ಪ್ರಸ್ತಾಪಿಸಿದಾಗ ಇಷ್ಟು ದಿನಗಳ ಕಾಲ ಹಾಗೂ ಇಷ್ಟು ಅಂಕಣಗಳನ್ನು ಬರೆಯಬಹುದು ಎಂದು ನಾನು ಕೂಡ ಊಹಿಸಿರಲಿಲ್ಲ. ಇಷ್ಟೊಂದು ವಿಷಯಗಳು ಸಿಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಕ್ಯಾನ್ಸರ್ ಎನ್ನುವುದು ನಮ್ಮ ಬದುಕಿನ ಎಲ್ಲ ಆಯಾಮಗಳನ್ನು ಸ್ಪರ್ಶಿಸಿ ಬಿಡುತ್ತದೆ. ಹಾಗಾಗಿಯೇ ವಿಷಯಗಳು ಕೂಡ ಸಿಗುತ್ತಾ ಹೋದವು.

ಕ್ಯಾನ್ಸರ್ ನನ್ನ ಬದುಕಿಗೆ ಸಾಕಷ್ಟು ಪಾಠಗಳನ್ನು ನೀಡಿದೆ ಎಂದು ಹಲವು ಬಾರಿ ಹೇಳಿದ್ದೇನೆ. ಕ್ಯಾನ್ಸರ್ ನನಗೆ ಪಾಠವಾಗಿದ್ದರೆ, ಕ್ಯಾನ್ಸರ್ ಕುರಿತು ಬರೆಯಲಾರಂಭಿಸಿದ್ದ ಈ ಅಂಕಣ ಒಂದು ರೀತಿ ರಿವಿಜನ್ ಇದ್ದ ಹಾಗೆ. ಪಠ್ಯ ಪುಸ್ತಕಗಳನ್ನ ಮತ್ತೆ ಮತ್ತೆ ಓದಿ ಅದನ್ನ ಗಟ್ಟಿಗೊಳಿಸಿಕೊಳ್ಳುತ್ತೇವಲ್ಲ  ಹಾಗೆ. ಈ ಅಂಕಣವೂ ಕಲಿತ ಪಾಠವೆಲ್ಲ ಮನಸ್ಸಿನಲ್ಲಿ ಗಟ್ಟಿಯಾಗಿ ತಳವೂರುವಂತೆ ಮಾಡಿವೆ. ಈ ಒಂದು ವರ್ಷದ ಪಯಣ ಸಾಕಷ್ಟು ವಿಷಯಗಳನ್ನು ಕಲಿಸಿಕೊಟ್ಟಿದೆ. ಇಲ್ಲಿ ಬರೆದ ಎಷ್ಟೊ ವಿಷಯಗಳು ಓದುಗರಿಗೆ ಹೇಳಿದ್ದಕ್ಕಿಂತ ನನಗೆ ನಾನೇ ಹೇಳಿಕೊಳ್ಳುವಂತಿತ್ತು. ಈ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಸರ್ವೈವರ್’ಗಳ ಬಗ್ಗೆ ತಿಳಿದುಕೊಳ್ಳುವಂತಾಯಿತು, ಅವರ ಬದುಕು, ಅವರ ಆತ್ಮವಿಶ್ವಾಸ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿತು. ಅವರ ಬದುಕಿನ ಕೆಲ ಸಣ್ಣ ಸಣ್ಣ ಘಟನೆಗಳು, ಅವರ ಕೆಲ ಭಾವಗಳನ್ನು ನೋಡಿದಾಗ, ಇದು ನನಗೂ ಅನಿಸಿತ್ತಲ್ಲವೇ ಎನಿಸಿದ್ದಿದೆ. ಎಷ್ಟೋ ಬಾರಿ ನನ್ನ ಬದುಕನ್ನೇ ಮತ್ತೆ ಅವರಲ್ಲಿ ನೋಡುತ್ತಿರುವೆನೇನೋ ಎಂದು ಅನಿಸಿದೆ..!

 

ಕೆಲ ಲೇಖನಗಳು ನನ್ನದೇ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳವ ನಿಟ್ಟಿನಲ್ಲಿ ಬರೆದಂತಿದೆ. ಎಲ್ಲಾ ಆವಿಷ್ಕಾರಗಳ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ, ಹಾಗೆಯೇ ಕೀಮೋ ಹುಟ್ಟಿನ ಹಿಂದೆ ಕೂಡ ಒಂದು ಕಥೆಯಿರಬೇಕು ಎಂಬ ಕೆಟ್ಟ ಕುತೂಹಲವಿತ್ತು. ಆ ಕುತೂಹಲವೇ ಕೀಮೋ ಹುಟ್ಟಿದ್ದು ವಿಶ್ವಯುದ್ಧದಲ್ಲಿ ಎಂಬ ವಿಷಯವನ್ನು ತಿಳಿದುಕೊಳ್ಳಲು ಹಾಗೂ ಅದರ ಬಗ್ಗೆ ಬರೆಯುವಂತೆ ಮಾಡಿತು. ಕೀಮೋ ಸೈಡ್ ಎಫೆಕ್ಟ್’ಗಳನ್ನ ಸ್ವತಃ ನೋಡಿರುವುದರಿಂದ, ಕ್ಯಾನ್ಸರ್’ಗೆ ಇದಕ್ಕಿಂತ ಉತ್ತಮ ಹಾಗೂ ಸರಳ ಚಿಕಿತ್ಸೆಗಳಿಲ್ಲವೇ ಎಂಬ ಪ್ರಶ್ನೆ ಎಲ್ಲ ಸರ್ವೈವರ್’ಗಳನ್ನ ಕಾಡುವಂಥದ್ದು. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಕುರಿತು ಹೊಸ ಹೊಸ ವಿಷಯಗಳು ಬಂದಾಗೆಲ್ಲ ಕಿವಿಯಿಟ್ಟು ಕೇಳುತ್ತೇವೆ. ಹಾಗಾಗಿಯೇ ಕ್ಲಿನಿಕಲ್ ಟ್ರಯಲ್  ಹಾಗೂ ಇನ್ನಿತರ ಸಂಶೋಧನೆಗಳ ಬಗ್ಗೆ ಬರೆಯುವಂತಾಯಿತು. ಕ್ಯಾನ್ಸರ್’ನ ನಂತರ ಪ್ರತಿ ಸರ್ವೈವರ್ ಸಮಾಜಕ್ಕೆ ಮತ್ತೆ ಹೊಸ ರೀತಿಯಲ್ಲಿ ತಮ್ಮೆಲ್ಲ ನ್ಯೂನತೆಗಳೊಂದಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ, ಆಂತಹ ಸಂದರ್ಭಗಳಲ್ಲಿ ಕೆಲವರು ನಮ್ಮ ಬೆನ್ನೆಲುಬಾಗಿ ನಿಂತರೆ ಕೆಲವರು ನಮ್ಮನ್ನ ಗ್ರಾಂಟೆಡ್ ಆಗಿ ತೆಗೆದುಕೊಳ್ಳುತ್ತಾರೆ. ಈ ಸಂದರ್ಭಗಳಲ್ಲಿ ನಾವು ಸಮಾಜದಿಂದ ಏನನ್ನು ಬಯಸುತ್ತೇವೆ  ಎಂದು ಹೇಳುವುದು ಅನಿವಾರ್ಯ ಎನಿಸಿ ಅದರ ಬಗ್ಗೆ ಬರೆಯಲು ಪ್ರೇರೇಪಿಸಿತು. ಕ್ಯಾನ್ಸರ್’ನ ನಂತರ ಪ್ರತಿ ಸರ್ವೈವರ್’ಗೆ ಹಲವಾರು ರೀತಿಯ ಅನುಭವಗಳಾಗಿರುತ್ತದೆ ಅಂತಹ ಅನುಭವಗಳನ್ನು ಹಂಚಿಕೊಳ್ಳುವ ಸಲುವಾಗಿ, ನಮ್ಮದೇ ಪ್ರಶ್ನೆಗೆ ಉತ್ತರ ಹುಡುಕುವ ಭರದಲ್ಲಿ, ಜನ ನಮ್ಮ ಮುಂದಿಟ್ಟ ಪ್ರಶ್ನೆಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿ ಈ ಲೇಖನಗಳು ಹುಟ್ಟಿಕೊಂಡವು.

 

ಈ ಒಂದು ವರ್ಷದಲ್ಲಿ ಅಂಕಣಗಳ ಮೂಲಕ ಇನ್ನಷ್ಟು ಸರ್ವೈವರ್’ಗಳ ಪರಿಚಯವಾಯಿತು, ಕ್ಯಾನ್ಸರ್’ನಿಂದ ಬಳಲುತ್ತಿರುವವರ ಪರಿಚಯವಾಯಿತು, ಸಾಕಷ್ಟು ಜನ ಅಂಕಣಗಳ ಕುರಿತು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ, ಕೆಲವರಂತೂ “ನೀವು ಈ ಕ್ಯಾನ್ಸರ್ ಬರಹಗಳಿಂದ ಮುಕ್ತರಾಗಿ, ಮನಸ್ಸನ್ನು ಖಿನ್ನಗೊಳಿಸಬಹುದು” ಎಂದವರೂ ಇದ್ದಾರೆ. ’ಬರಹಗಳಿಂದ ಮುಕ್ತರಾಗುವುದಲ್ಲ, ಇಂತಹ ಬರಹಗಳು ನಮ್ಮನ್ನ  ಇನ್ನಷ್ಟು ಮುಕ್ತಗೊಳಿಸುತ್ತದೆ ಎಂದಿದ್ದೆ’ ಹಾಗೆಯೇ ಅವರ ಕಾಳಜಿ ನೋಡಿ ಸಂತೋಷಗೊಂಡಿದ್ದೆ ಕೂಡ. ಅವರ ಕಾಳಜಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಕಡಿಮೆಯೇ! ಅಲ್ಲದೇ, ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸ್’ನಲ್ಲಿ ಈ ಅಂಕಣಗಳ ಕುರಿತು ಮಾತನಾಡುವ ಅವಕಾಶವೂ ದೊರಕಿತು. ‘ಹೊಂಗಿರಣ’ ವಿದ್ಯಾಸಂಸ್ಥೆ  ಯಾವಾಗಲೂ ತನ್ನ ವಿಭಿನ್ನತೆಗೆ ಹೆಸರುವಾಸಿ. ಕಳೆದ ಬಾರಿ ಅವರು ನಡೆಸಿದ ‘ಸಮಾಜೋತ್ಸವ’ದಲ್ಲಿ ರೀಡೂ ಸಮಾಜಮುಖಿಯಾಗಿ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ ಈ ಅಂಕಣದ  ಕುರಿತು ಮಾತನಾಡುವ  ಅವಕಾಶ! ಅದೊಂದು ರೀತಿಯ ಹೊಸ ಅನುಭವವಾಗಿತ್ತು. ಅದಾದ ಕೆಲ ದಿನಗಳ ನಂತರ ಅಲ್ಲಿನ ಪಿ.ಯು.ಸಿ ವಿದ್ಯಾರ್ಥಿಯೊಬ್ಬ ಕರೆಮಾಡಿ, ಕ್ಯಾನ್ಸರ್ ಚಿಕಿತ್ಸೆಯಾದ ರೇಡಿಯೇಷನ್ ಕುರಿತು ಪ್ರಾಜೆಕ್ಟ್’ವೊಂದನ್ನು ಕೈಗೆತ್ತಿಕೊಂಡಿದ್ದು, ಕಡಿಮೆ ಅಪಾಯಕಾರಿ ಹಾಗೂ ಸೈಡ್ ಎಫೆಕ್ಟ್’ಗಳು ಕಡಿಮೆ ಇರುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದೇನೆ ಎಂದಿದ್ದ. ಇಂತಹ ಸಣ್ಣ ವಯಸ್ಸಿನಲ್ಲಿ ಜನರ ಬಗ್ಗೆ, ಕ್ಯಾನ್ಸರ್ ರೋಗಿಗಳ ಬಗ್ಗೆ ತೋರಿದ ಕಾಳಜಿ ಶ್ಲಾಘನೀಯ.

 

ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವಂತಹ ಇಂತಹ ಒಂದು ಕಾರ್ಯವನ್ನು ಎತ್ತಿಕೊಂಡ ರೀಡೂ ಅದರ ಜವಾಬ್ದಾರಿಯನ್ನು ನನಗೆ ವಹಿಸಿತ್ತು. ಅದನ್ನ ಎಷ್ಟರ ಮಟ್ಟಿಗೆ ನಿಭಾಯಿಸಿದ್ದೇನೋ ಗೊತ್ತಿಲ್ಲ. ಆದರೆ ಒಬ್ಬ ವ್ಯಕ್ತಿಯಾಗಿ ಬೆಳೆಯಲು, ಇನ್ನಷ್ಟು ತಿಳಿದುಕೊಳ್ಳಲು ಸಹಾಯಕವಾಗಿದ್ದಂತು ನಿಜ. ಪ್ರತಿ ಕ್ಯಾನ್ಸರ್ ಸರ್ವೈವರ್, ಕ್ಯಾನ್ಸರ್’ಗೆ ಒಳಗಾಗಿರುವಂತವರಿಗೆ ಏನಾದರೂ ಮಾಡಬಯಸುತ್ತಾರೆ. ಅಂತಹ ಸಾಕಷ್ಟು ಸರ್ವೈವರ್ಸ್ ತಮ್ಮದೇ ರೀತಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನನಗೆ ಅಂತಹ ಅವಕಾಶ ಸಿಕ್ಕಿದ್ದು ರೀಡೂನ ಈ ಅಂಕಣಗಳ ಮೂಲಕ. ರೀಡೂ ಟೀಮ್’ನ ಇಂತಹ ಸಮಾಜಮುಖಿ ಕೆಲಸದಲ್ಲಿ ನಾನೂ ಪಾಲುದಾರಳಾಗಿದ್ದಕ್ಕೆ ಹೆಮ್ಮೆ ಇದೆ.!  

 

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!