Featured ಅಂಕಣ

ಕೀಮೋಥೆರಪಿ ಜನಿಸಿದ್ದು ವಿಶ್ವ ಯುದ್ಧದಲ್ಲಿ…

         ಈ ಶೀರ್ಷಿಕೆಯನ್ನು ನೋಡಿ ಆಶ್ಚರ್ಯವಾಗಿರಬಹುದು. ಮಿಲಿಯನ್’ಗಟ್ಟಲೇ ಜನರನ್ನ ಬಲಿ ತೆಗೆದುಕೊಂಡ ವಿಶ್ವಯುದ್ಧಕ್ಕೂ, ಮಹಾಮಾರಿ ಕ್ಯಾನ್ಸರ್’ನಿಂದ ಮುಕ್ತಗೊಳಿಸುವ ಕೀಮೋಥೆರಪಿಗೂ ಎಂತಹ ಸಂಬಂಧ ಎಂಬ ಪ್ರಶ್ನೆ ಉದ್ಭವವಾಗಿರಬಹುದು. ಆದರೆ ಇದು ಅಕ್ಷರಶಃ ಸತ್ಯ. ಕೀಮೋಥೆರಪಿ ಎಂಬ ಕ್ಯಾನ್ಸರ್ ಚಿಕಿತ್ಸೆ ಹುಟ್ಟಿದ್ದೇ ವಿಶ್ವಯುದ್ಧದಿಂದ. ಕಾಲದ ವೈಶಿಷ್ಟ್ಯವೇ ಅಂತದ್ದು. ಒಂದು ಕಾಲಕ್ಕೆ ಸಂಜೀವಿನಿ ಎನಿಸಿದ್ದು, ಕಾಲಾನಂತರ ಮಾರಕವಾಗಬಹುದು, ಮಾರಕ ಎನಿಸಿದ್ದು ಸಂಜೀವಿನಿ ಆಗಬಹುದು. ಸುಮಾರು ನೂರು ವರ್ಷಗಳ ಹಿಂದೆ ನಡೆದ ಆ ಭಯಾನಕ ಸಾವು, ನೋವುಗಳ ಮಧ್ಯೆ, ದ್ವೇಷ –ಸೇಡು, ಅಸ್ತ್ರ – ಪ್ರತ್ಯಾಸ್ತ್ರಗಳ ನಡುವೆ ಜನಿಸಿದ್ದೇ ಕೀಮೊಥೆರಪಿ ಎಂಬ ಕ್ಯಾನ್ಸರ್ ಚಿಕಿತ್ಸೆ.

    ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಮೊದಲನೇ ಮಹಾಯುದ್ಧ ಮಿಲಿಯನ್’ಗಳಷ್ಟು ಜನರನ್ನು ಬಲಿ ತೆಗೆದುಕೊಂಡಿದೆ. ಆ ಸಾವು-ನೋವುಗಳು ಇಂದಿಗೂ ಜನರನ್ನ ಬೆಚ್ಚಿ ಬೀಳಿಸುತ್ತವೆ. ಆ ಸಾವು-ನೋವುಗಳಿಗೆ ಇನ್ನಷ್ಟು ಕೊಡುಗೆ ನೀಡಿದ್ದು ಇಂಡಸ್ಟ್ರಿಯಲ್ ಕೆಮಿಸ್ಟ್’ಗಳು.

     ಜುಲೈ ೧೯೧೭ರಲ್ಲಿ ಬೆಲ್ಜಿಯಂನ ಸೈನಿಕರಿಗೆ ಮೈಯ್ಯೆಲ್ಲಾ ತುರಿಕೆಯಾಗಲಾರಂಭಿಸಿತು. ಅದಾಗಿ ಕೆಲ ಹೊತ್ತಿಗೆ ಮೈ ಮೇಲೆ ಗುಳ್ಳೆಗಳು, ಹುಣ್ಣುಗಳಾಗತೊಡಗಿತ್ತು. ಕೆಲವರಿಗೆ ಕೆಮ್ಮಿನಲ್ಲಿ ರಕ್ತ ಬರಲಾರಂಭಿಸಿತ್ತು. ಆ ಸೈನಿಕರುಗಳ ಮೇಲೆ ‘ಮಸ್ಟರ್ಡ್ ಗ್ಯಾಸ್’ ಎಂಬ ರಾಸಾಯನಿಕ ಅಸ್ತ್ರವನ್ನು ಉಪಯೋಗಿಸಲಾಗಿತ್ತು. ಮಸ್ಟರ್ಡ್ ಗ್ಯಾಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುವುದಾಗಿದ್ದರಿಂದ ಗ್ಯಾಸ್ ಮಾಸ್ಕ್’ಗಳು ಉಪಯೋಗಕ್ಕೆ ಬರಲಿಲ್ಲ. ಸಂಪೂರ್ಣವಾಗಿ ದೇಹ ಮುಚ್ಚುವಂತೆ ಬಟ್ಟೆ ಧರಿಸಿದ್ದ ಸೈನಿಕರು ಕೂಡ ಇದರಿಂದ ಬಚಾವಾಗಲು ಸಾಧ್ಯವಾಗಲಿಲ್ಲ. ಸುಮಾರು ೬ ವಾರಗಳವರೆಗೆ ನರಳಿ-ನರಳಿ ಸಾಯಬೇಕಿತ್ತು. ಅದು ನಿಜಕ್ಕೂ ಭಯಾನಕ ಸಾವಾಗಿತ್ತು. ಮಸ್ಟರ್ಡ್ ಗ್ಯಾಸ್’ನ ಮೊದಲ ಬಳಕೆಯಲ್ಲೇ ಸುಮಾರು ೧೦,೦೦೦ ಜನ ಸೈನಿಕರು ಸತ್ತಿದ್ದರು. ಮೊದಲ ಮಹಾಯುದ್ಧದ ಕೊನೆ ಎನ್ನುವಷ್ಟರಲ್ಲಿ ಸಾವಿರ ಸಾವಿರ ಜನರನ್ನು ಕೊಂದಿದ್ದಷ್ಟೇ ಅಲ್ಲದೇ, ಸಾಕಷ್ಟು ಸೈನಿಕರನ್ನು ಅಂಗವಿಕಲರನ್ನಾಗಿ ಮಾಡಿತ್ತು. ಜೊತೆಗೆ ಒಂದು ಭಯವನ್ನು ಕೂಡ ಹುಟ್ಟು ಹಾಕಿತ್ತು.

       ಮಸ್ಟರ್ಡ್ ಗ್ಯಾಸ್ ಎನ್ನುವುದು ಫ್ರಿಟ್ಸ್ ಹೇಬರ್ ಎಂಬ ಒಬ್ಬ ನಿಷ್ಣಾತ ಕೆಮಿಸ್ಟ್’ನ ಆವಿಷ್ಕಾರ. ಫ್ರಿಟ್ಸ್ ಹೇಬರ್ ಕಂಡು ಹಿಡಿದ ಫರ್ಟಿಲೈಸರ್ ಆತನ ಅತ್ಯುತ್ತಮ ಕೊಡುಗೆಗಳಲ್ಲೊಂದು. ಇದಕ್ಕಾಗಿ ಆತನಿಗೆ ನೊಬೆಲ್ ಪ್ರಶಸ್ತಿ ಕೂಡ ಸಂದಿದೆ. ಆದರೆ ಆತ ಕಂಡು ಹಿಡಿದ ಈ ವಿಷಕಾರಿ ಅನಿಲ, ಆತನ ಸಾಧನೆಗಳಿಗೆ ಒಂದು ಕಪ್ಪು ಚುಕ್ಕೆಯಂತಿದೆ. ಯುದ್ಧದ ನಂತರವೂ ಆತ ಈ ವಿಷಕಾರಿ ಅನಿಲದ ಬಳಕೆಯನ್ನ ಉತ್ತೇಜಿಸಿದ್ದ.

   ೨ ದಶಕಗಳ ನಂತರ ೨ನೇ ವಿಶ್ವಯುದ್ಧ ಇನ್ನೇನು ಆರಂಭವಾಗುವುದು ಎನ್ನುವಾಗಲೇ ಮತ್ತೆ ಮಸ್ಟರ್ಡ್ ಗ್ಯಾಸ್ ಬಳಸಿದರೆ ಎಂಬ ಭಯ ಕಾಡುವುದಕ್ಕೆ ಆರಂಭವಾಗಿತ್ತು. ಆದಕ್ಕಾಗಿಯೇ ಮಿತ್ರ ರಾಷ್ಟಗಳು ಇದಕ್ಕೊಂದು ಅಂಟಿ-ಡೋಟ್’ನ್ನು ಕಂಡು ಹಿಡಿಯಲು ಮುಂದಾದವು. ಈ ನಿಟ್ಟಿನಲ್ಲಿ ಯೇಲ್ ವಿಶ್ವವಿದ್ಯಾನಿಲಯದ ಲೂಯಿಸ್ ಗುಡ್ಮನ್ ಹಾಗೂ ಆಲ್ಫ್ರೆಡ್ ಗಿಲ್ಮನ್ ಮಸ್ಟರ್ಡ್ ಗ್ಯಾಸ್’ನಿಂದ ಹಾನಿಗೊಳಗಾದ ಸೈನಿಕರ ಮೆಡಿಕಲ್ ರೆಕಾರ್ಡ್ಸ್ ನೋಡಲಾರಂಭಿಸಿದರು. ಆಶ್ಚರ್ಯಕರವೆಂಬಂತೆ ಎಲ್ಲರಲ್ಲೂ ಬಿಳಿ ರಕ್ತ ಕಣಗಳ ಕೊರತೆ ಎದ್ದು ಕಾಣುತ್ತಿತ್ತು, ಮಸ್ಟರ್ಡ್ ಗ್ಯಾಸ್ ಬಿಳಿ ರಕ್ತ ಕಣಗಳನ್ನು ಕೊಲ್ಲಬಹುದು ಎಂದಾದಲ್ಲಿ, ಕ್ಯಾನ್ಸರಸ್ ಜೀವಕೋಶಗಳನ್ನು ಕೂಡ ಕೊಲ್ಲಬಹುದೇನೋ ಎಂದು ಅಂದಾಜಿಸಿದರು. ಪ್ರಾಣಿಗಳ ಮೇಲಿನ ಯಶಸ್ವಿ ಪ್ರಯೋಗಗಳ ನಂತರ ಮನುಷ್ಯನ ಮೇಲೆ ಪ್ರಯೋಗ ಮಾಡಬಯಸಿದರು. ಆಗ ಸಿಕ್ಕಿದ್ದೇ ಜೆ.ಡಿ.

         ಜೆ.ಡಿ. ಲಿಂಫೋಮಾದಿಂದ ಬಳಲುತ್ತಿದ್ದ, ಆತನ ದವಡೆಯಲ್ಲಾಗಿದ್ದ ಟ್ಯೂಮರ್’ನಿಂದಾಗಿ ಆತನಿಗೆ ಆಹಾರ ಸೇವಿಸುವುದು ಕಷ್ಟವಾಗುತ್ತಿತ್ತು. ಅಲ್ಲದೇ ಲಿಂಫ್’ನೋಡ್ಸ್’ಗಳಲ್ಲಿ, ಆರ್ಮ್’ಪಿಟ್’ನಲ್ಲಿ ಟ್ಯೂಮರ್’ಗಳು ಎಷ್ಟು ದೊಡ್ಡದಾಗಿದ್ದವು ಎಂದರೆ ಅತನಿಗೆ ಕೈಕಟ್ಟಿಕೊಳ್ಳಲೂ ಆಗುತ್ತಿರಲಿಲ್ಲ. ನಿದ್ರಿಸುವುದೂ ಕಷ್ಟವಾಗಿತ್ತು. ಡಾಕ್ಟರ್’ಗಳು ಏನೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿ ನೋಡಿಯಾಗಿತ್ತು. ಇನ್ನು ಏನೂ ಮಾಡಲು ಸಾಧ್ಯವಿಲ್ಲವೆಂದೇ ಆಗಿತ್ತು. ಬೇರೆ ಯಾವ ದಾರಿ ಕಾಣದ ಜೆ.ಡಿ.  ಈ ಮಸ್ಟರ್ಡ್ ಥೆರಪಿಯ ಬಗ್ಗೆ ಕೇಳಲ್ಪಟ್ಟು ಅದಕ್ಕೆ ಒಪ್ಪಿಕೊಂಡಿದ್ದ. ಇದನ್ನೂ ನೋಡಿದರಾಯಿತು ಎಂದು.

         ೨೭ ಆಗಸ್ಟ್ ೧೯೪೨ರ ದಿನ ಬೆಳಿಗ್ಗೆ ೧೦ಗಂಟೆಗೆ “ಸಿಂಥೆಟಿಕ್ ಲಿಂಫೋಸಿಡಲ್ ಕೆಮಿಕಲ್” ನ ಮೊದಲ ಇಂಜೆಕ್ಷನ್’ನ್ನು ಆತನಿಗೆ ನೀಡಲಾಯಿತು. ಮಸ್ಟರ್ಡ್ ಗ್ಯಾಸ್’ನ ತಯಾರಿಕೆಯಲ್ಲಿ ಬಳಸುವ ನೈಟ್ರೋಜನ್ ಮಸ್ಟರ್ಡ್ ಎಂಬ ಸಂಯುಕ್ತವೇ ಈ ಸಿಂಥೆಟಿಕ್ ಲಿಂಫೋಸಿಡಲ್ ಕೆಮಿಕಲ್. ೨ನೇ ಮಹಾಯುದ್ಧದ ಸಮಯವಾದ್ದರಿಂದ ಈ ಪ್ರಯೋಗವನ್ನು ಬಹಳ ಗೌಪ್ಯವಾಗಿ ಇಡಲಾಗಿತ್ತು. ಜೆ.ಡಿ.ಯ ಮೆಡಿಕಲ್ ರೆಕಾರ್ಡ್’ಗಳಲ್ಲಿ ಕೂಡ ಇದನ್ನು ‘ಸಬ್’ಸ್ಟೆನ್ಸ್ ಎಕ್ಸ್’ ಎಂದಷ್ಟೇ ನಮೂದಿಸಲಾಗಿತ್ತು. ದಿನಗಳ ಕಳೆದ ಹಾಗೆ ಹಲವು ಬಾರಿ ಸಬ್’ಸ್ಟೆನ್ಸ್ ಎಕ್ಸ್’ನ್ನು ಪಡೆದ ನಂತರ ಅತನ ಸ್ಥಿತಿ ಮೊದಲಿಗಿಂತ ಉತ್ತಮವಾಗತೊಡಗಿತ್ತು. ಆತ ಆರಾಮವಾಗಿ ಆಹಾರ ಸೇವಿಸುತ್ತಿದ್ದ, ನಿದ್ರೆ ಮಾಡುತ್ತಿದ್ದ. ಆತನ ನೋವು  ಕೂಡ ಕಡಿಮೆಯಾಗಿತ್ತು.

  ಇಂದು ಕೇವಲ ತನ್ನ ಇನಿಷಿಯಲ್ಸ್’ಗಳಿಂದಲೇ ಗುರುತಿಸಲ್ಪಡುವ ಜೆ.ಡಿ.ಯ ಬದುಕು ಹಾಗೂ ಸಾವು ಎರಡೂ ಕೂಡ ಕ್ಯಾನ್ಸರ್ ಚಿಕಿತ್ಸೆಗೆ ನೀಡಿದ ಕೊಡುಗೆ ಅಪಾರ. ಮೊದ-ಮೊದಲು ಚಿಕಿತ್ಸೆ ತುಂಬಾ ಪರಿಣಾಮಕಾರಿಯಾಗಿ ಕಂಡು ಬಂದರೂ ಆತ ಬದುಕುಳಿಯಲಿಲ್ಲ. ಆದರೆ  ಜೆ.ಡಿ. ಮೇಲಾದ ಈ ಪ್ರಯೋಗ ಐತಿಹಾಸಿಕವಾಗಿ ಪರಿಣಮಿಸಿತು. ಈಗ ನಾವು ಕೀಮೋಥೆರಪಿ ಎನ್ನುವ ಚಿಕಿತ್ಸಾ ಕ್ರಮಕ್ಕೆ ಇದು ನಾಂದಿಯಾಯಿತು.

                ೨ನೇ ವಿಶ್ವಯುದ್ಧದ ನಂತರ ಪ್ರೊಫೆಸರ್ ಅಲೆಕ್ಸಾಂಡರ್ ಹ್ಯಾಡೋ ನೈಟ್ರೋಜನ್ ಮಸ್ಟರ್ಡ್ ಮೇಲೆ ಕೆಲಸ ಮಾಡಿ ಒಂದು ಮಹತ್ತರವಾದ ಘಟ್ಟವನ್ನು ತಲುಪುತ್ತಾರೆ. ನೈಟ್ರೋಜನ್ ಮಸ್ಟರ್ಡ್’ನ ಅಣು ವಿನ್ಯಾಸವನ್ನು ಸ್ವಲ್ಪ ಸ್ವಲ್ಪವೇ ಬದಲಾಯಿಸಿ ಪ್ರಯೋಗ ಮಾಡುವ ಹ್ಯಾಡೋ, ಆ ಸಂಯುಕ್ತದಲ್ಲಿ ಎರಡು ಕ್ಲೋರಿನ್ ಪರಮಾಣು ಇರುವುದು ಬಹಳ ಅವಶ್ಯಕವಾದುದು, ಅದಿಲ್ಲದಿದ್ದರೆ ನೈಟ್ರೋಜನ್ ಮಸ್ಟರ್ಡ್ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಕಂಡು ಹಿಡಿದರು. ಹ್ಯಾಡೋ ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ಮಾಡಿದರು. ಅವರ ಆ ಸಂಶೋಧನೆಗಳೇ ಕೀಮೋಥೆರಪಿ ಎಂಬ ಕ್ಯಾನ್ಸರ್ ಚಿಕಿತ್ಸೆಯ ಒಂದು ಹೊಸ ಯುಗವನ್ನು ಹುಟ್ಟು ಹಾಕಿತು.

     ಹ್ಯಾಡೋನ ಸಂಶೋಧನೆಗಳು ಮತ್ತಷ್ಟು ಹೊಸ ರೀತಿಯ ಕೀಮೋಥೆರಪಿ ಚಿಕಿತ್ಸೆಗಳನ್ನು ಕಂಡು ಹಿಡಿಯುವಲ್ಲಿ ಸಹಾಯಕವಾಗಿದೆ. ಮಸ್ಟರ್ಜೆನ್, ಮಸ್ಟೈನ್, ಮೆಕ್ಲೋರೆಥಮೈನ್ ಹೈಡ್ರೋಕ್ಲೋರೈಡ್ ಇವೆಲ್ಲಾ ನೈಟ್ರೋಜನ್ ಮಸ್ಟರ್ಡ್’ನ ಬಗೆಗಳೇ. ಇವುಗಳನ್ನು ಲಿಂಫೋಮ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹಾಗೂ ಬ್ರೆಸ್ಟ್ ಕ್ಯಾನ್ಸರ್’ಗಳಲ್ಲಿ ಇದನ್ನ ಪ್ಯಾಲಿಯೇಟಿವ್ ಕೀಮೋಥೆರಪಿಯಾಗಿ ಬಳಸಲಾಗುತ್ತದೆ. ಕ್ಯಾನ್ಸರ್ ಗುಣಮುಖವಾಗುವುದು ಸಾಧ್ಯವಿಲ್ಲದಿದ್ದಾಗ ಈ ಪ್ಯಾಲಿಯೇಟಿವ್ ಕೀಮೋಥೆರಪಿ ಮಾಡುತ್ತಾರೆ, ಕ್ಯಾನ್ಸರ್’ನ ತೀವ್ರತೆಯನ್ನು ಕಡಿಮೆ ಮಾಡಿ, ಇರುವಷ್ಟು ದಿನ ಸ್ವಲ್ಪ ಮಟ್ಟಿಗಾದರೂ ಆರಾಮವಾಗಿ ಇರುವಂತೆ ಮಾಡಲು..!

       ನೈಟ್ರೋಜನ್ ಮಸ್ಟರ್ಡ್’ನ್ನು ನೇರವಾಗಿ ಬಳಸದೇ ಇದ್ದರೂ, ಅದರ ಉತ್ಪನ್ನಗಳನ್ನ ಇಂದಿಗೂ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಕ್ಯಾನ್ಸರ್ ಗುಣಪಡಿಸಲು ಸಹಕಾರಿಯಾಗಿದೆ ಎನ್ನುವುದು ಎಷ್ಟು ನಿಜವೋ, ಇವು ವಿಷಕಾರಿ ಎನ್ನುವುದು ಕೂಡ ಅಷ್ಟೇ ಸತ್ಯ. ಇವು ಕ್ಯಾನ್ಸರ್ ಗುಣಪಡಿಸಲು ಸಹಾಯಕಾರಿಯಾಗಿರುವುದಷ್ಟೇ ಅಲ್ಲ, ಕ್ಯಾನ್ಸರ್’ನ್ನು ಉಂಟು ಮಾಡಲೂಬಹುದು. ಹಾಗಾಗಿ ನೈಟ್ರೋಜನ್ ಮಸ್ಟರ್ಡ್’ನಿಂದ ಔಷಧ ತಯಾರಿಸುವವರು ಬಹಳ ಎಚ್ಚರಿಕೆಯಿಂದರಬೇಕು. ಎಲ್ಲಾ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು. ಡ್ರಗ್ಸ್ ಡಾಟ್’ಕಾಮ್ ಅವರ ಪ್ರಕಾರ ಮಸ್ಟರ್ಜನ್ ಬಳಸಿ ಕ್ಯಾನ್ಸರ್’ಗೆ ಚಿಕಿತ್ಸೆ ನೀಡಿದ ಸಂದರ್ಭಗಳಲ್ಲಿ ಮತ್ತೊಮ್ಮ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು, ಹಾಗಾಗಿಯೇ ಇಂಟರ್’ನ್ಯಾಷನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರೀಸರ್ಚ್ ಇದನ್ನು ‘Cancer causing agent’ ಎಂದು ಕರೆದಿದೆ.

      ಅದೇನೆ ಇರಲಿ, ಕ್ಯಾನ್ಸರ್ ಬಗ್ಗೆ, ಕೀಮೋಥೆರಪಿ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದು ವಿಷಕಾರಿಯಲ್ಲದ, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದೇ ಗುಣಪಡಿಸುವ ಉತ್ತಮ ಚಿಕಿತ್ಸೆಗಳು ಭವಿಷ್ಯದಲ್ಲಿ ಬರಲಿ ಎಂದು ಆಶಿಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!