ಕಥೆ

ಡೀಲ್ ಭಾಗ ೩

ಡೀಲ್ ಭಾಗ ೨

“ಪ್ರಮೀಳಾ..!!ನನ್ನ ಜೊತೆನೇ ಕಲಿಯುವವಳು,ದೂರದ ಊರು ಆದ್ದರಿಂದ ನೀವ್ಯಾರು ಅವಳನ್ನು ನೋಡಿಲ್ಲ ಮಮ್ಮೀ, ನಮ್ಮ ಮನೆಗೆ ಇದುವರೆಗೂ ಬಂದಿಲ್ಲ,,,ಪರೀಕ್ಷೆಗೂ ಮುಂಚೆ ನನ್ನಲ್ಲಿ ಇರುವ ಭಯ ಕಂಡು ನಾ ಫೇಲ್ ಆಗುತ್ತೇನೋ,ಪಾಸ್ ಆಗುತ್ತೇನೋ ಅನ್ನೊದನ್ನೇ ಚಿಂತೆ ಮಾಡೋದನ್ನು ಕಂಡು ನನ್ನನ್ನು ಸಮಾಧಾನ ಪಡಿಸುತ್ತಿದ್ದಳು,ಅವತ್ತು ಕ್ಲಾಸ್ ಕಟ್ ಮಾಡಿ ಕ್ಯಾಂಟಿನ್ ಹೋಗಿದ್ದ ಉದ್ದೇಶಾನು ಅದೇ ಆಗಿತ್ತು..”ನೋಡು,ಶ್ಯಾಮ್,ನೀನು ಪರೀಕ್ಷೆ ಹತ್ತಿರ ಬರುವಾಗ ಈ ರೀತಿ ಭಯ ಪಟ್ಟರೇ ಏನರ್ಥ,ಮೊದಲೇ ಚೆನ್ನಾಗಿ ಓದಿದ್ದರೆ,ಈವಾಗ ಇಷ್ಟು ತಲೆಕೆಡಿಸಿಕೊಳ್ಳುವ ಪ್ರಮೇಯನೇ ಬರುತ್ತಿರಲಿಲ್ಲ ಅಲ್ವಾ!?” ಪ್ರಮೀಳ ಮಾತಿಗೆ ಸಿಟ್ಟು ಬಂದರೂ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿದ್ದು ಅನಿವಾರ್ಯವಾಗಿತ್ತು..ಅವಳು ಮುಂದುವರಿಸಿ” ನನ್ನಿಂದ ಏನು ಸಹಾಯವಾದರೂ ಮಾಡುತ್ತಿದ್ದೆ ನಿಂಗೆ ನೋಡು ಈ ವಿಷಯದಲ್ಲಿ ಯಾರಿಗೂ ಏನೂ ಮಾಡೋಕೆ ಆಗಲ್ಲ ನಿಜ ಆದರೂ ಸಹಾಯ ಮಾಡುವವ ಒಬ್ಬ ಇದಾನೇ ನಾ ಹೇಳಿದ್ರೆ ಮಾಡ್ಬಹುದು,ನೀ ಮಾತ್ರ ನಿನ್ನ ಮತ್ತು ನಿನ್ನ ಅಪ್ಪನ ಕನಸಿಗೆ ಸ್ವಲ್ಪ ಅಡ್ಜೆಸ್ಟ್’ಮೆಂಟಿಗೆ ರೆಡಿ ಆದ್ರೆ ಆಯ್ತು!!..” ಪ್ರಮೀಳ ಹೇಳ್ತಾನೇ ಇದ್ದಳು, ನೋಡೇ ನಮಗೆ ನಮ್ಮವರಿಗೆ ಒಳ್ಳೆಯದಾಗುತ್ತೆ ಅನ್ನೋದಾದ್ರೆ ಚಿಕ್ಕ ಚಿಕ್ಕ ತಪ್ಪುಗಳು ಮಾಡ್ಬೇಕಾಗುತೆ,ಮೋಸ,ವಂಚನೆ,ಕಾಪಟ್ಯ ಇಲ್ಲದೇ ಈ ಜಗತ್ತಿನಲ್ಲಿ ಯಾರೂ ಜೀವಿಸಲು ಸಾಧ್ಯವಿಲ್ಲ, ಹಾಗೊಂದು ವೇಳೆ ಆದರೂ ನಿನ್ನ ಆಸೆಗಳನ್ನು ತ್ಯಜಿಸಿ ನಿರಾಶಾವಾದಿ ಆಗ್ಬೇಕಾಗುತ್ತೆ ಕಣೇ”

.”ಅಯ್ಯೋ,ನಾನೇ ತಲೆ ಕೆಟ್ಟಿರುವಾಗ ನಿನ್ನದೇನೆ ಇದು ಪ್ರವಚನ ಒಂದೂ ಅರ್ಥ ಆಗ್ತಿಲ್ಲ” ಅಂದೆ,

ಸರಿಯಾಗಿ ಕೇಳಿಸಿಕೋ, ರಾಕೇಶ್ ಇದಾನಲ್ವ ಅವನತ್ತಿರ ಹೋಗಿ ಸಹಾಯ ಕೇಳುವ, ನಮಗೆ ಈ ಬಾರಿ ಪರೀಕ್ಷೆಯಲ್ಲಿ ಪಾಸ್ ಆಗುವ ಭರವಸೆ ಇಲ್ಲ, ನಮಗೆ ಹೇಗಾದರೂ ಸಹಾಯ ಮಾಡು ಅಂತ..!!

ನನಗಂತೂ ಹುಚ್ಚೇ ಹಿಡಿಯುತ್ತೇ ಅನ್ನೋವಷ್ಟು ಟೆನ್ಷನ್ ಆಗಿತ್ತು “ಇದೇನೆ, ನಮ್ಮ ಸಮಸ್ಯೆಯನ್ನು ಹೋಗಿ ಒಬ್ಬ ವಿದ್ಯಾರ್ಥಿ ಹತ್ತಿರ ಹೇಳಿದ್ರೆ,ಅದ್ಯಾಗೇ ಸರಿ ಹೋಗುತ್ತೆ!?” ನಾನಂತೂ ಕೋಪದಲ್ಲಿ ಕೇಳಿದ್ದೆ.. “ನೋಡು ಶ್ಯಾಮ್, ರಾಕೇಶ್ ಮೊದಲೇ ಹೆಣ್ಣನ್ನು ಕಂಡರೆ ಬಾಯ್ಬಿಡ್ತಾನೆ ಅದೇನೋ ಗ್ಯಾಂಗ್ ಇಟ್ಟಿದ್ದಾನಲ್ವ,ನನ್ನ ಮೆಡಿಕಲ್ ಫ್ರೆಂಡ್ ಹೇಳಿದ್ಲು ಕಳೆದ ವರ್ಷ ಅವಳ ಪಭ್ಲಿಕ್ ಪರೀಕ್ಷೆಗೆ ಇವನ ಕೃಪಾಕಟಾಕ್ಷ ಇತ್ತಂತೆ ಅದರಿಂದಾನೇ ಅವನು ಅಷ್ಟು ಅಂಕ ತಗೋಂಡಿದ್ದಂತೆ..!!

ನೋಡು ಪ್ರಮೀಳ ನನಗಂತೂ ಇನ್ನೂ ಅರ್ಥವಾಗಿಲ್ಲ ಅವನ್ಯಾರೇ ದೇವ್ರ, ಅಲ್ಲ ದೆವ್ವಾನ ಅಲ್ಲ ಡೈರೆಕ್ಟರ್   ಶಂಕರ್’ನ ರೋಬೋ ನಾ ಎಗ್ಸಾಮ್ ಹಾಲ್’ಗೆ  ಬಂದು ಕಣ್ಣಿನಲ್ಲೇ ಉತ್ತರ ತೋರಿಸ್ತಾನ.!?..ಇದೇನೇ ತಲೆ ಬಿಸಿಯ ಎಡೆಯಲ್ಲೂ ನಿನ್ನ ಕಾಮಿಡಿ!?.. “ಅಯ್ಯಯ್ಯೋ ಪೆದ್ದಿ,ಪೆದ್ದಿ,ನಿನಗಿನ್ನೂ ತಲೆಗೆ ಹತ್ತಿಲ್ವ,ಅವನು ದೇವ,ದೆವ್ವ,ರೋಬೋ ಅಲ್ಲ ಅವನು ಕಳ್ಳ..ಯಾರೂ ಮುಟ್ಟೋಕೆ ಸಾಧ್ಯವಿಲ್ಲದ ಪರೀಕ್ಷಾ ಪ್ರಶ್ನೆಪತ್ರಿಕೆ ನಾವು ಅವನು ಹೇಳಿದಂತೆ ಕೇಳಿದರೆ ಅವನು ಕದ್ದು ತರ್ತಾನೇ ಅದರಿಂದ ಈಸಿಯಾಗಿ ಪಾಸ್ ಆಗ್ಬಹುದಲ್ವ!!??

ನನಗಂತೂ ಶಾಕ್ ಮೇಲೆ ಶಾಕ್ ಆಗ್ತಾ ಇತ್ತು “ಏನೇ ಇದು,ಪಾಸ್ ಆಗಿ ನಮ್ಮ ಭವಿಷ್ಯವನ್ನು ಉತ್ತಮವಾಗಿಸ ಬೇಕೆಂದಿರುವವಳನ್ನ ಜೈಲಲ್ಲಿ ಕೂರಿಸೋ ಪ್ಲಾನಾ ನಿಂದು ಹ್ಹಾ ಏನ್ ಕಥೆ”..”ನಾವ್ಯಾಕೆ ಜೈಲಿಗೆ ಹೋಗೋದೆ ಮಂಕು,!??ಸಿಕ್ಕಿ ಬಿದ್ರೆ ಅವನು ಹೋಗ್ತಾನೆ ಅಷ್ಟೇ..!!

ಅವಳ ಈ ಮಾತು ನಾನು ಯೋಚ್ನೇನೆ ಮಾಡಿಲ್ಲ “ಹೌದಲ್ವ,ನಾವ್ಯಾಕೆ ಹೋಗೋದು ಅವನೇ ಹೋಗ್ತಾನೆ,ಅದ್ ಸರಿ ಕಣೇ,ಅಷ್ಟು ರಿಸ್ಕ್ ತಗೊಂಡು ಅವನು ಆ ಕೆಲ್ಸಾ ಮಾಡ್ತಾನೆ ಅಂದ್ರೆ ಅವನಿಗೆ ತುಂಬಾ ಹಣ ಕೊಡ್ಬೇಕಾಗುತ್ತೆ ಅಲ್ವ!!?” ಪಪ್ಪಾನ ಆಸೆಯ ಜೀವಂತಿಕೆಯಿರಿಸುವ ಕೊನೆ ಆಸೆಯ ಚಿಗುರು ಎಂಬಂತೆ ನನ್ನಲ್ಲೂ ಅದೇ ಕಡೆ ವಾಲುವ ಹಾರ್ಮೋನ್ ಉತ್ಪತ್ತಿಯಾಯಿತೋ ಏನೋ ನನಗಂತು ಸರಿ ಗೊತ್ತಾಗಿಲ್ಲ..”ಇಲ್ಲ ಕಣೇ ಅವನಿಗೆ ಹಣ ಬೇಡ,ಬೇರೇನೇ..”  “ಬೇರೇನೇ!?

“ಹೌದು,ಬೇರೇನೇ!..

“ಬೇರೆ ಅಂದ್ರೆ ಏನು!?”

*ನಮ್ಮ ಸಂಪತ್ತು!!!”* ಪ್ರಮೀಳ ಕುಳಿತ ಚೇರ್’ಗೆ ಒರಗಿಕೊಂಡೇ ಮುಸಿ ಮುಸಿ ನಗುತ್ತಿದ್ದಳು,ನನಗಂತೂ ಅಸ್ಪಷ್ಟತೆಯಲ್ಲಿ ಗಂಭೀರ ಚಿಂತನೆ ಬೇಕಾಗಿರಬಹುದೆಂಬ ದಿಗಿಲಾಯಿತು.. “ನಮ್ಮ ಸಂಪತ್ತು ಅಂದ್ರೆ ಏನೇ,!?” ಇನ್ನೊಮ್ಮೆ ಕೇಳಿದೆ “ಹೇಳೆ ಪ್ರಮೀಳ ಸರಿಯಾಗಿ…”

“ಹೇ,ಲೂಸು,ನಮ್ಮ ಸಂಪತ್ತು ಅಂದ್ರೆ ಸ್ವಲ್ಪ ಸಮಯ ನಮ್ಮನ್ನೇ ಅವನಿಗೆ ಕೋಡೋದು ಅಷ್ಟೇ..ಪರವಾನಿಗೆ ಇಲ್ಲದೇ ವಾಹನ ಚಲಾವಣೆ ಅಷ್ಟೇ!!”

ಪ್ರಮೀಳಳ ಆ ಕ್ಷಣದ ನಗುವಿನ ಮಾತು ನನ್ನಲ್ಲಿ ಉಕ್ಕಿ ಬಂದ ಕೋಪವನ್ನು ಎರಡರಷ್ಟು ಮಾಡಿತ್ತು ಅಲ್ಲಿಂದ ಅದು ಹೇಗೆ ಮೇಲೆ ಎದ್ದಿದ್ದೇನೋ ಗೊತ್ತಿಲ್ಲ ಕ್ಯಾಂಟಿನ್ ಮಾಲೀಕ ಕುಳಿತಿಂದಾನೇ “ಅರಾಮಾಗಿ  ಏಳು ತಂಗಿ” ಅಂದಿದ್ದ..ಕಾಫಿದ್ದು ಬಿಲ್ ಕೊಡದೇ ನಾನಂತೂ ಸೀದಾ ಎದ್ದು ಬಂದೆ ಪ್ರಮೀಳ ನನ್ನ ಹಿಂದೆ ಕೂಗೋದು ಜಾಸ್ತಿಯಾದಾಗ ನಿಂತೆ ಅಷ್ಟೇ..!.

“ಎಲ್ಲಾ ಸರಿ ಕೇಳಿ ಆಮೇಲೆ ಹೋಗ್ಬೇಕು,ಅವಸರವೇ ಅಪಾಯ,ನಾ ಇನ್ನೂ ಪೂರ್ತಿ ಹೇಳಿಲ್ಲ ಅಷ್ಟರಲ್ಲಿ ಓಡಿ ಬಂದಾಯ್ತು ನಿಂಗೆ” ಕೋಪ ಸ್ಥಾನ ಪಲ್ಲಟವಾಗಿತ್ತೋ ಏನೋ ಅವಳಲ್ಲಿತ್ತು.. “ಇನ್ನೇನು ಇದೆ, ಫೇಲ್ ಆದ್ರೆ,ರೀ ಎಗ್ಸಾಮ್ ಇದೆ ಅದರಲ್ಲಿ ಬರ್ದು ನೋಡ್ತಿನಿ, ಇಲ್ಲಾಂದ್ರೆ ನೆಕ್ಟ್ ಇಯರ್ ಕಂಪ್ಲೀಟ್ ಮಾಡ್ತೀನಿ, ಈ ತರ ಮೈ ಮಾರಿ ಪರೀಕ್ಷೆ ಬರೆಯುವ ಅಗತ್ಯ ನನಗಿಲ್ಲ, ಗೊತ್ತಾಯ್ತಾ!!?”

“ಥತ್, ನಿನ್ನ ನಾ ಅವನ ಬೇಡಿಕೆ ಹೇಳಿದೆ ಅಷ್ಟೇ ಕಣೇ,ಅದರಲ್ಲಿ ನಾ ಮಾಡಿರುವ ಪ್ಲಾನ್ ಕೇಳಿದ್ಯಾ ನೀನು!!??

“ಸರಿ,ನಿನ್ನ ಪ್ಲಾನ್ ಏನು..!? ನಾನಂತೂ ಕೋಪದಲ್ಲೇ ಕೇಳಿದ್ದೆ..”  “ನೋಡು,ಶ್ಯಾಮ್ ಮೊದಲು ಹೋಗಿ ಅವನಲ್ಲಿ ವಿಷಯ ಹೇಳಿ,ವ್ಯವಹಾರ ಕುದುರಿಸುವ,ಅವನು ಪ್ರಶ್ನೆ ಪತ್ರಿಕೆ ತಂದ್ಕೊಟ್ಟ ಮೇಲೆ,,ಅವನ್ಯಾರೋ ನಾವ್ಯಾರೋ…ಬಟ್ ಅವನಲ್ಲಿ  ಹೋದಾಗ ಅವನೇನೆ ಅಂದ್ರೂ ಹೂಂ ಹೇಳ್ಬೇಕು ಸರಿನಾ..ಒಂದು ಸಲ ನಮ್ಮ ಕೆಲಸ ಆದ್ಮೇಲೆ, ಬಿಸಾಕಿದ ಮಾತನ್ನು ಕಟ್ಟಿ ನಮಗೇನ್ ಆಗೋಕೆ ಇದೆ ಹೇಳು,,ಏನಂತೀಯ!!,?..ಪ್ರಮೀಳಾಳ ಮುಖ ಗೆಲುವಿನಿಂದ ಕೂಡಿತ್ತು..

“ನೀನು ಹೇಳಿದ್ದು ಸರಿ, ಮಾಡ್ಬಹುದು ಅನ್ಸುತ್ತೆ, ಬಟ್ ಶ್ಯೂರಿಟೀ ಇಲ್ದೆ ಬ್ಯಾಂಕ್’ನಲ್ಲಿ ವೈಟ್ ವ್ಯವಹಾರ ಮಾಡಲ್ಲ..ಇವನು ಬ್ಲ್ಯಾಕ್ ಕೆಲಸ ಮಾಡ್ತಾನ..!?”ನನ್ನ ಗೊಂದಲ ಹೇಳಿದೆ..”ನೋಡು ಶ್ಯಾಮ್, ಹುಡ್ಗೀರ ವಿಕ್ನೆಸ್ಸು ಆ ವಯ್ಯನಿಗೆ, ನಂಬ್ತಾನೆ ಅಂತ ನನಗನ್ನಿಸುತ್ತೆ..ಹಾ,ಇನ್ನೊಂದು ವಿಷ್ಯ ಇದು ನಂಗೆ ಬೇಡ ಕೇವಲ ನಿನಗಾಗಿ ಮಾತ್ರ..ನನಗೆ ಧೈರ್ಯ ಇದೆ ಪರೀಕ್ಷೆ ಬರೆಯೋದು ಅಲ್ದೇ ನಂಗೆ ಮುಂದೆ ಏನೂ ಕನಸೂ ಇಲ್ಲ, ವುಡ್ ಬೀ ಅಮೇರಿಕಾದಿಂದ ಬರ್ತೀದಾನೆ,,ಎಗ್ಸಾಮ್ ಆದ್ಮೇಲೆ ಮ್ಯಾರೇಜ್ ಇದೆ ನಂದು..!!”

ಪ್ರಮೀಳಾಳ ಮಾತು ನನಗೂ ಹಿಡಿಸಿತು, ಯಾರು ಮಾಡಿದ ಪುಣ್ಯಾನೋ ಈ ರೀತಿ ಒಂದು ದಾರಿ ಕಾಣ್ತೀದೆ ಅಂತ ಮರುದಿನ ಬೆಳಿಗ್ಗೆ ರಾಕೇಶನ ಭೇಟಿಯಾಗಿ ವಿಷಯ ಹೇಳಿ, ಅಳುವಂತೆ ನಾಟಕ ಕೂಡ ಮಾಡಿದೆವು,ಪಪ್ಪಾ!!

ಇದೆಲ್ಲಾ ಕೇಳ್ತಿದ್ದ ದಂಪತಿಗಳಿಬ್ಬರೂ ಭಯಾನಕ ಚಿತ್ರ ನೋಡುವವರಂತೆ ಚಿತ್ತ ತಿರುಗಿಸದೇ ಕೇಳುತ್ತಾ ಇದ್ದರು..ನಟರಾಜ ಅದೇನೋ ಯೋಚ್ನೇ ಮಾಡುತಿದ್ದ,ತಲೆಯಲ್ಲಿ ನೂರು ಆಲೋಚನೆಗಳು ಲಗಾಮಿಲ್ಲದ ಕುದುರೆಯಂತೆ ಓಡುತ್ತಾ ಇತ್ತು,ಇವರು ಅವನಿಗೆ ಸುಳ್ಳು ಹೇಳಿ ಪತ್ರಿಕೆ ತರಿಸಿದ ಮೇಲೆ ಈವಾಗ ಫಲಿತಾಂಶ ಬಂದಾಗ ಯಾಕೆ ಹೇಳ್ತಾ ಇದ್ದಾಳೆ,ಅದೂ ಅಲ್ದೆ ಈ ವಿಷಯ ಮೊದಲೇ ನಮಗೆ ಯಾಕೆ ತಿಳಿಸಿಲ್ಲ!?ಅದಕ್ಕೂ ಮುಂಚೆ ಯಾವ ವ್ಯೂಹದಲ್ಲಿ ಬಿದ್ದಿದ್ದಾಳೆ ಶ್ಯಾಮಲೆ ಅಷ್ಟು ಹೊತ್ತಿದ್ದ ತಲೆ ಒಮ್ಮೆಲೇ ಭಾರವಾದಂತೆ ಆಗಿ ನಟರಾಜ ಹುಬ್ಬಿನ ಸ್ವಲ್ಪ ಮೇಲೆ ಒಂದು ಕೈ ಇಟ್ಟು ಅಲ್ಲೇ ಇದ್ದ ಸೋಫಾಕ್ಕೆ ದೊಪ್ಪನೇ ಬಿದ್ದ, ವ್ಯವಸ್ಥಿತ ಮನೆಯಲ್ಲೂ ಬಂದು ಸೇರಿದ ಧೂಳು ಕಣಗಳ ಒಂದು ಗುಂಪು ಪ್ಯಾನ್ ಗಾಳಿಯೊಂದಿಗೆ ಲೀನವಾಯಿತು…”ಏನಾಯ್ತು ರೀ..!!? ರೇಣುಕಾದೇವಿ ತುಂಬಾನೇ ಸೀರಿಯಲ್ ನೋಡುವವಳು ಶಾಕಿಂಗ್ ನ್ಯೂಸ್ ಕೇಳಿದ್ರೆ ತಟ್ಟನೇ ಬರುವ ಹೃದಯಾಘಾತವೇನಾದ್ರು ಬಂತಾ!?ಅನ್ನೋ ರೀತಿ ಉಪಚರಿಸಿದಳು..

“ಅಲ್ಲಾ,ಪುಟ್ಟಾ,ನೀನು ಅವನಿಗೆ ಸುಳ್ಳು ಹೇಳೋದು ಅಂತ ಆದ್ಮೇಲೆ ಯಾಕೆ ಹೆದರುತ್ತೀಯ!?ಇದೇ ವಿಷಯ ಈ ಮೊದಲೇ ಯಾಕೆ ನಮಗೆ ಹೇಳಿಲ್ಲ!!?ಜವಾಬ್ದಾರಿ ಹಾಗು ಮನೆಯ ನಿರ್ವಾಹಕನ ಗತ್ತು ಅವನ ಸ್ವರದಲ್ಲಿತ್ತು!

“ಸಾರಿ,ಪಪ್ಪಾ,ನಾ ಮೊದಲು ಹೇಳೋದು ಬಿಡಿ ಈವಾಗಲೂ ಹೇಳುವವಳಲ್ಲ,ನನ್ನ ಸ್ಥಿಮಿತ ಕಳೆದು ಅದಾಗಿಯೇ ಹೊರಬಂತು..!

ಅಂತಹ ಚಕ್ರವ್ಯೂಹದಲ್ಲಿ ಬಿದ್ದಿದ್ದೇ ಪಪ್ಪಾ..!! ಅಳುವಿನ ಎಪಿಸೋಡು ಜಾಹಿರಾತು ಇಲ್ಲದೇ ಪ್ರಸಾರವಾಗುವ ಧಾರವಾಹಿಯಾಯಿತು…

“ಏನಮ್ಮಾ!?ನೀ ಎಲ್ಲಾ ವಿಷಯ ಸರಿಯಾಗಿ ಹೇಳು!!! ಈ ಬಾರಿ ದಿಗಿಲುಗೊಂಡಿದ್ದು ತಾಯ್ತನ..!!

ಗಟ್ಟಿ ಮನಸ್ಕಳಾದಂತೆ ಶ್ಯಾಮಲೆ ಸೋಫಾದಲ್ಲಿ ಸರಿಯಾಗಿ ಕುಳಿತು,ಎಲ್ಲಾ ವಿಷಯ ಹೆತ್ತವರಿಗೆ ಹೇಳ ಬೇಕೆಂಬ ನಿಶ್ಚಯ ಮಾಡಿದವಳಂತೆ ತನ್ನ ಪೂರ್ಣ ನೆನಪುಗಳನ್ನು ಸುಮಾರು ಎರಡು ಮೂರು ತಿಂಗಳುಗಳ ಹಿಂದಕ್ಕೆ ಸರಿಸಿದಳು…

ಗಡಿಯಾರ ಸರಿಯಾಗಿ ಸಾಯಂಕಾಲ ನಾಲ್ಕು ಇಪ್ಪತ್ತು ತೋರಿಸುತ್ತಾ ಇತ್ತು…!!!!!

“ನೋಡೆ ಶ್ಯಾಮ್, ನಾಳೆ ನಾಡಿದ್ದು ಪತ್ರಿಕೆ ನಮ್ಮ ಕೈ ಸೇರುತ್ತೆ,ಆಮೇಲೆ ಪರೀಕ್ಷೆಗೆ ಇರೋದು ಬೆರಳೆಣಿಕೆಯ ದಿನಗಳು ಎಷ್ಟು ಸಾಧ್ಯನೋ ಅಷ್ಟು ಓದಿಕೋ,ಏನೆಲ್ಲಾ ನಡೆದಿದೆಯೋ ಅದು ಸಧ್ಯಕ್ಕೆ ಮರೆತು ಬಿಡು, ನಿನ್ನ ಪೂರ್ಣ ಮನಸ್ಸು ಓದಿನಲ್ಲಿರಲಿ ಸರೀನಾ!!? ಅವಳ ಪ್ರೇರಣಾ ಭಾಷಣವನ್ನು ಮುಗಿಸಿದಳು..!

“ಅಲ್ಲ ಕಣೇ ಪ್ರಮೀ,ಅಷ್ಟು ಸೆಕ್ಯೂರ್ ಪ್ರಶ್ನೆ ಪತ್ರಿಕೆ ಅದ್ಯಾಗೆ ಅವನು ಕದ್ದು ತರೋದು, ನೋಡೇ ನಾನಂತು ನಂಬೋದಿಲ್ಲ,ಈಗೀನ ಕಾಲದಲ್ಲಿ ಅದೂ ಹೊರಗಿನ ಕಂಪೌಂಡಿಗೂ ಸಿಸಿ ಕ್ಯಾಮ್ ಇರುವಾಗ ಅದ್ಯಾಗೆ ಒಳಗೆ ಹೋಗ್ತಾರೆ ಅವ್ರು, ಹಾಗೇನಾದ್ರೂ ಒಳಗೆ ಹೋದ್ರೆ ಅಲ್ಲಿ ಪ್ರಶ್ನೆ ಪತ್ರಿಕೆ ಇರೋ ಜಾಗ ಹೇಗೇ ಗೊತ್ತಾಗುತ್ತೆ!.?ಗೊತ್ತಾದ್ರೂ ಅದು ಲಾಕ್ ಆಗಿರುವ ಕಬ್ಬೋರ್ಡ್ ಹೇಗೆ ಒಡಿತಾರೆ..ಸಿಸಿ ಕ್ಯಾಮ್ ಒಳ್ಳೆ ಸಿನಿಮಾ ತರ ಶೂಟ್ ಮಾಡಿರುತ್ತೆ!!ಬೆಳಿಗ್ಗೆನೇ ಇಶ್ಯೂ ದೊಡ್ಡದಾಗುತ್ತೆ,ಪೋಲೀಸ್ ಅದು ಇದೂ ಬಂದು ಅವನು ಸಿಕ್ಕಿ ಬೀಳ್ತಾನೇ ನೋಡ್ಕೊ!!

“ಆ ಸೀನೆ ಇಲ್ಲಮ್ಮಾ!,ಅವರ ಕದಿಯುವ ಸ್ಟೈಲೇ ಚೇಂಜ್ ಕಣೇ,ನಿನ್ನ ಎಲ್ಲಾ ಪ್ರಶ್ನೆ ನನ್ನ ತಲೆಯಲ್ಲೂ ಕೊರೀತಾ ಇತ್ತು,ನಿನ್ನೆ ಸಂಜೆ ಕಾಡಿ ಬೇಡಿ ಅದ್ಯಾಗೆ ಅಂತ ತಿಳ್ಕೊಂಡೆ ಗೊತ್ತಾ!!?..ಪ್ರಮೀಳಾಲ್ಲಿ ಅಲೆಗ್ಸಾಂಡರ್’ನ ಗೆಲುವಿನಿಗಿಂತ ಹೆಚ್ಚು ಗೆಲುವಿನ ಹರ್ಷ ಕಾಣುತ್ತಿತ್ತು..

“ಹೇಗೆ!?ಪ್ಲೀಸ್ ಹೇಳು!!?

“ಅವರು ಈ ತರ ಕದಿತಾರಂತೆ……….

“ಅವರಲ್ಲಿ ಇರೋದೆಲ್ಲ ಕಂಪ್ಯೂಟರ್ ಸೈನ್ಸ್ ಹುಡ್ಗರು,ತಂತ್ರಜ್ಞಾನದ ದುರ್ಬಳಕೆಯೂ ಗೊತ್ತಿದೆ ಅವರಿಗೆ,ಅವರ ಕೇಡಿತನ ಎಷ್ಟಿದೆಯೆಂದರೆ ನಾ ಕೇಳಿ ಮೂರ್ಛೆ ಹೋಗದ್ದು ಒಂದು ಬಾಕಿ!!!!!

“ಹೌದಾ”..ನನಗಂತೂ ಪ್ರಮೀಳ ಮುಂದೆ ಏನ್ಹೇಳ್ತಾಳೆ ಅನ್ನೋದೆ ಕುತೂಹಲವಾಗಿತ್ತು…

“ಹೌದು ಕಣೇ,ಎಂತಹ ಕಿಲಾಡಿಗಳು ನೋಡು,ಆ ಬಿಲ್ಡಿಂಗ್ ಸಿಸಿ ಕ್ಯಾಮೆರ ಕವರೇಜ್’ನಲ್ಲಿರುತ್ತೆ,ಇವರು ಏನೂ ರಿಸ್ಕ್ ತಗೊಳದೇ ಭರ್ತಿ ಅರ್ಧ ಗಂಟೆ ಸಿಸಿ ಕ್ಯಾಮೆರಾ ಜಾಮ್ ಮಾಡ್ತಾರೆ ( *ವಿ.ಸೂ-ಸುರಕ್ಷಾ ದೃಷ್ಟಿಯಿಂದ ಅದರ ವಿಶ್ಲೇಷಣೆ ಕೊಡುತ್ತಿಲ್ಲ*)..ನಂತರ ರಾಜಾರೋಷವಾಗಿ ಒಳಗೆ ನುಗ್ಗಬಹುದಲ್ವ!?”..

“ಸ್ಟಾಪ್ ,ಸ್ಟಾಪ್, ಅದು ಹೇಗೆ ಸೆಕ್ಯೂರಿಟಿ ಗಾರ್ಡ್ ಇರ್ತಾರೆ ಅಲ್ವ!?ಹೇಗೆ ಹೋಗ್ತಾರೆ ಒಳಗೆ..!???” ನಾನು ಪೂರ್ತಿ ಭಾವುಕಳಾಗಿ ಕೇಳಿದ್ದೆ..

“ಹಾ ಅದು ಸರಿ,ಯಾವುದೇ ನಾಯಿಗೆ ಬಿಸ್ಕತ್ ಹಾಕಿ ಮರುಳು ಮಾಡ್ಬಹುದಂತೆ,ಇವರು ಜೊತೆ ಆರು ಮಂದಿ ಅದರಲ್ಲಿ ಒಳಗೆ ಹೋಗೋರು ಎರಡು ಮಂದಿ,ಒಬ್ಬ ಸಿಸಿ ಕ್ಯಾಮೆರದ ಕಡೆ ನೋಡ್ಕೋಂಡ್ರೆ,ಒಬ್ಬ ಕಂಪ್ಲೀಟ್ ಬಿಲ್ಡಿಂಗ್ ಹೊರಗಡೆ ಕಾವಲಿರುತ್ತಾನೆ,..ಇನ್ನಿಬ್ಬರು ಏನೂ ಗೊತ್ತಿಲ್ಲದವರಂತೆ ಬಂದು ಸೆಕ್ಯೂರಿಟಿಗೆ ಎಣ್ಣೆ ಆಸೆ ತೋರ್ಸಿ ತಬ್ಬಿಬ್ಬು ಮಾಡ್ತಾರೆ,ಎಷ್ಟು ಸಣ್ಣ ಗ್ಯಾಪ್ ಸಿಕ್ರು ಇಬ್ಬರು ಒಳಗೆ ಹೋಗಿ ಆಗುತ್ತೆ,,!!! ಒಂದು ಉಸಿರು ಆಗೇನೆ ಹೆಸರಿಲ್ಲದಂತೆ ಪಂಚಭೂತದಲಿ ಸೇರಿತು ಪ್ರಮೀಳದ್ದು

“ಉಫ್,ಏನೇ ಇದು ಥೇಟ್ ಸಿನಿಮಾ ತರನೇ ಇದೆ ಇವರ ಪ್ಲಾನ್,ಒಂದು ಮಿಸ್ ಆದ್ರೂ ಫ್ಲಾಪ್ ಆಗಲ್ವ!?

ಏನೋ ನಾನೇ ಕದಿತಿದೀನಿ ಅನ್ನೋ ಫೀಲ್’ನಲ್ಲಿ ಹೇಳಿದೆ..

“ಹೌದು ಕಣೇ,ಸಿನಿಮಾ ತರನೇ, ಆದ್ರೆ ನೋಡು ಸಿನಿಮಾದಲ್ಲಿ ಎಲ್ಲಾ ಸುಳ್ಳು ಇರಲ್ಲ ಕಣೇ ಯಾರೋ ಮೊದಲು ಮಾಡಿದ್ದ,ಬರೆದಿದ್ದ ಯೋಚ್ನೆಗೆ ರೂಪ ಆಕಾರ ಕೊಡ್ತಾರೆ ,ರುಚಿಗೆ ತಕ್ಕಂತೆ ಉಪ್ಪು ಖಾರ ಮಾತ್ರ ಸೇರಿಸ್ತಾರೆ, ಅದಕ್ಕೆ ನೋಡು ಈಗೀಗ ಟಿವಿಲೀ ಬರೋ ಪ್ರತಿ ಬ್ರೇಕಿಂಗ್ ನ್ಯೂಸ್’ನ ಅಡಿ ಬರಹ *ಸಿನಿಮೀಯ ರೀತಿ* ಅನ್ನೋ ಪದ ಸೇರಿರುತ್ತೆ ಅಲ್ವ!?.ಬಟ್ ಈ ಕಳ್ನನ್ನ್ ಮಕ್ಳಾ ತಲೆ ಸಿನಿಮಾದವ್ರಿಗೂ ಸಿಕ್ಕಿಲ್ಲ ಅನ್ಸುತೆ ಕಣೇ,,ಅವ್ರು ಪ್ರಶ್ನೆ ಪತ್ರಿಕೆ ಎಲ್ಲಿ ಇಡೋದೂಂತ ಬೆಳಗ್ಗೇನೆ ಚೆಕ್ ಮಾಡ್ತಾರೆ ಅಂತೆ ಅಂದ್ರೆ ನಮ್ಮ ಕಾಲೇಜಿನ ಪ್ರಿನ್ಶಿಪಾಲರ ಮಗಳು ಈ ಗ್ಯಾಂಗಿನ ಒಬ್ಬಳ ಲವ್ವರ್,ಅವಳ ಸಹಾಯದಿಂದ ಪ್ರಿನ್ಶಿಪಾಲರ ಶರ್ಟ್’ಗೆ ಪೆನ್ ಕ್ಯಾಮೆರ ಸಿಕ್ಕಿಸ್ತಾರೆ,ಪಾಪ ನಮ್ಮ ಪ್ರಿನ್ಶಿಪಾಲ್ ಮರೆವು ಜಾಸ್ತಿ ನೋಡು ಆ ವಯ್ಯ ಸೀದಾ ತನ್ನ ಪಾಕೆಟ್’ನಲಿ ಒಂದು ಪೆನ್ ಜಾಸ್ತಿ ಇದ್ರೂ ಗೊತ್ತಾಗಲ್ಲ,,,ಅವರು ಪೇಪರ್ ಇಟ್ಟ ಜಾಗ ಯಾವುದೆಂದು ತಿಳಿಯಲು ಯಾವ ರೂಮ್’ಗೆ ಹೋಗ್ತಾರೋ ಮೊದಲು ಅದನ್ನ ಲ್ಯಾಂಡ್ ಮಾರ್ಕ್ ಮಾಡಿರ್ತಾರೆ,ಯಾಕಂದ್ರೆ ಪೆನ್ನ್ ಕ್ಯಾಮೆರ ಕಿಸೆಯಲ್ಲಿ ಇರೋದ್ರಿಂದ ಎಲ್ಲಾ ಕ್ಲೀಯರ್ ಆಗಿ ವಿಡಿಯೋ ಆಗಲ್ಲ ನೋಡು..ಯಾವುದು ಲ್ಯಾಂಡ್ ಮಾರ್ಕ್ ಅಂತ ಮಾಡಿರ್ತಾರೋ ಒಳಗೋದ ಮೇಲೆ ಮೊದಲು ಅದನ್ನು ಹುಡುಕ್ತಾರೆ,

ರೂಮಿನ ಪೈಂಟ್ ಕಲರ್, ಅಲ್ಲಿರುವ ಕಡತಗಳ ಪೆಟ್ಟಿ ಅಥವಾ ಅಲಮಾರ,ಕಬ್ಬೋರ್ಡ್ ಅಥವಾ ಇನ್ನೇನಾದರೂ ಒಂದು ಲ್ಯಾಂಡ್ ಮಾರ್ಕ್ ತರ ಮಾಡ್ತಾರೆ,ಅದನ್ನು ಅವರು ಐದು ನಿಮಿಷದೊಳಗೆ ತಿಳಿದುಕೊಳ್ತಾರೆ..ಆಮೇಲೆ ಅದೇ ವಿಡೀಯೋದಲ್ಲಿ ಎಲ್ಲಿ ಇಡ್ತಾರೆ ಅಂತ ಚೆನ್ನಾಗಿಯೇ ತೋರಿಸಿರುತ್ತೆ ನೋಡು,,ಕುಖ್ಯಾತ ಕಳ್ಳ ಚೈನ್ ಕೃಷ್ಣನಲ್ಲಿ ತರಬೇತಿ ಪಡೆದೋರು ಅದ್ಯಾವ ಬೀರುನೇ ಆಗಿರಲಿ ಒಂದೈದು ನಿಮಿಷದಲ್ಲಿ ತೆರೆಸುವಷ್ಟು ನೈಪುಣ್ಯ ಇದೆಯಂತೆ ಇವರಿಗೆ..ಅಲ್ಲಿಂದ ಪ್ರಶ್ನೆ ಪತ್ರಿಕೆ ಇರುವ ಜಾಗ ನೋಡಿ,ಅದರ ಓಪನ್ ಮಾಡಿ ಪ್ರಶ್ನೆ ಪತ್ರಿಕೆ ತರೋದು ಹೇಗೆಂದು ಕೇಳಿದ್ರೆ ನಿಜವಾಗ್ಲೂ ಅವ್ರಿಗೆ ನೀನೆ ಸಲ್ಯೂಟ್ ಹೊಡಿತೀಯ ಆ ತರ ಅವ್ರ ಸ್ಟೈಲ್,ತುಂಬಾನೇ ಕಷ್ಟ ಹಾಗೂ ಬುದ್ಧಿವಂತಿಕೆಯಿಂದ ಮಾತ್ರ ಅವರು ಸಿಕ್ಕಿ ಬಿದ್ದಿಲ್ಲ ಇದುವರೆಗೂ..!!

“ಹೇಗೆ ತರ್ತಾರೇ ಪ್ರಶ್ನೆ ಪತ್ರಿಕೆ,ಅದರಲ್ಲಿ ಇರೋದನ್ನು ಒಂದನ್ನು ಎಳೆದು ತರ್ತಾರೆ ತಾನೆ..!??ನಾನು ಎಲ್ಲಾ ಗೊತ್ತು ಅನ್ನೋ ರೀತಿ ಉಡಾಫೆಯ ಉತ್ತರ ನೀಡಿದೆ…

“ಅಲ್ಲ,ಅವ್ರು ಪ್ರಶ್ನೆ ಪತ್ರಿಕೆ ಹಾಗಲ್ಲ ತರೋದು,,!”

“ಮತ್ತೆ ಹೇಗೆ?”

“ಡಿಎಸ್ಎಲ್ಆರ್,..!!!

ಅವರ ಚಾಣಾಕ್ಷತನ ಎಷ್ಟರವರ್ಗೆ ಅಂದ್ರೆ,ಮೊದಲ ಪ್ಲಾನೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರೋದು ಅನುಮಾನ ಕೂಡ ಬರಬಾರದು ಆ ರೀತಿ ಕಾರ್ಯನಿರ್ವಹಿಸುತ್ತಾರೆ,ಒಂದು ಸಣ್ಣ ತಪ್ಪಾದರೂ ಕಂಬಿ ಎಣಿಸುವ ಸಂದಿಗ್ಧತೆ ಬರಬಹುದು!!..

ಅದಿಕ್ಕೆ ಅವರು ಯಾವುದೇ ಪೇಪರ್ ಅಲ್ಲಿಂದ ಹೊರ ತರುವುದಿಲ್ಲ,ಬದಲಾಗಿ ಹೈ ಡೆಫಿನಿಷನ್ ಡಿಎಸ್ಎಲ್ಆರ್ ಕ್ಯಾಮ್’ನಲ್ಲಿ ಒಂದು ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸುತ್ತಾರೆ,ಆಮೇಲೆ ಆ ವಿಡೀಯೋ ನೋಡಿ ಸಿಸ್ಟಮ್ನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗಿತಾರೆ,ಯಾವೊಬ್ಬನಿಗೂ ಅನುಮಾನ ಬರೋದಿಲ್ಲ,ಅಸಲಿಯತ್ತಿನಲ್ಲಿ ಯಾವ ಕಳ್ಳತನಕ್ಕೂ ಪುರಾವೆ ಇಲ್ಲ ಅಲ್ವೇ!!…

ಯಾವುದೋ ಪತ್ತೆದಾರಿ ಕಾದಂಬರಿ ಓದುವವರಂತೆ ನಾನು ಪ್ರಮೀಳಾಲ ಮಾತಿಗೆ ಕಿವಿಯಾಗುತ್ತಿದ್ದೆ, ಒಂದೇ ಭಯ ನನ್ನ ತಲೆಯಲ್ಲಿ ಸುತ್ತಿ ಸುತ್ತಿ ಬರುತ್ತಿತ್ತು,ಇಷ್ಟು ಕಷ್ಟ,ಬುದ್ಧಿವಂತಿಕೆ,ಸಮಯ ವ್ಯಯಿಸಿ ಕೇವಲ ಒಬ್ಬಳಿಗಾಗಿ ಕೊಡುವುದಾದರೇ ನಾನು ತಾನೇ ಅವನಿಗೆ ಮೋಸ ಮಾಡಲು ಸಾಧ್ಯವೇ..!?

“ಅಲ್ಲ ಕಣೇ ಪ್ರಮೀಳ,ನನಗೇನೋ ಇದು ಬೇಡಾಂತ  ಫೀಲ್ ಆಗ್ತಿದೆ ಕಣೇ,ಇಷ್ಟು ಕ್ಲವರ್ ಬಾಯ್ಸನ್ನು ಹೇಗೆ ವಂಚಿಸೋದು,ಇವರ ಬುದ್ದಿ ಜೇಮ್ಸ್ ಕ್ಯಾಮರೂನಿಗೂ ಇಲ್ಲ ಅನ್ಸುತೆ, ನನಗಂತೂ ಸಕತ್ ಭಯ ಶುರುವಾಗಿದೆ ಕಣೇ..!! “ಪೆಚ್ಚು ಮೋರೆಯಲ್ಲಿ ನನ್ನ ಆತಂಕವನ್ನು ವ್ಯಕ್ತಪಡಿಸಿದೆ…

“ಹೇಯ್ ಹುಚ್ಚಿ, ಹಾಗೇನು ಮಾಡ್ಬಿಟ್ಟೀಯಾ!,ನನಗಂತೂ ಒಂದೂ ಗೊತ್ತಿಲ್ಲ,ಅವನಲ್ಲಿ ಹೆಲ್ಪ್ ಕೇಳಿ,ಕಾಡಿ ಬೇಡಿ ಕದಿಯುವ ಟಾಪ್ ಸೀಕ್ರೇಟನ್ನು ಕೇಳಿ ಬಂದಿದ್ದೀನಿ,ಈವಾಗೇನಾದ್ರು ನಮ್ಗೆ ಬೇಡ ಅಂದ್ರೆ ನಾವೇ ಅವನ ಸ್ಫೈ ಮಾಡೋದೂಂತ ತಿಳ್ಕೊಂಡು ಅವನ ಏರಿಯಾದ ಗೂಂಡಗಳನ್ನು ಬಿಟ್ಟು ನನ್ನನ್ನಂತು ಎತ್ಬಿಡ್ತಾನೆ…ನೀ ಸುಮ್ನಿರು ಹೇಗೂ ನಾಳೆ ಕೊಡ್ತಾನೆ ಅಲ್ವ,ಕೊಡ್ಲಿ…ಅದೇನೇನ್ ಹೇಳ್ತಾನೋ ಕೇಳೋಣ,ಆಮೇಲೆ ಎಗ್ಸಾಂ ಮುಗಿದ್ ಮೇಲೆ ತಲೆ ಮರೆಸಿಕೊಂಡ್ರೆ ಆಯ್ತು,ಹೇಗೂ ನಾನು ಪರೀಕ್ಷೆ ಆದ್ಮೇಲೆ ಮ್ಯಾರೇಜ್ ಆಗ್ತೀನಿ ಆಮೇಲೆ ಯುಎಸ್ ಹೋದ್ರೆ ಆಯ್ತು, ನೀ ಸ್ವಲ್ಪ ಕಾಯಿಸಿ,ಕಾಡಿಸಿ ತಲೆ ತಪ್ಪಿಸಿಕೋ!!

“ಅಷ್ಟಕ್ಕೂ ಅವನ ಕಂಡೀಶನ್ ಏನೂಂತನೇ ಗೊತ್ತಿಲ್ಲ ಅಲ್ವ,ನಾ ಜಸ್ಟ್ ವಿಷಯ ಹೇಳ್ದೆ,ಮರು ಮಾತಾಡದೇ ಎರಡು ದಿನದಲ್ಲಿ ಪೇಪರ್ ಕೈ ಸೇರುತ್ತೆ *ಡೀಲ್* ಆಮೇಲೆ ಮಾತಾಡೋಣ ಅಂದ!!! ..

ಊರಿನಲ್ಲಿರುವ ಎಲ್ಲಾ ನಯವಂಚಕರ ಸೊಬಗು ಪ್ರಮೀಳಾಳ ಮಂಡೆಯೊಳಗೆ ಸುಭದ್ರವಾಗಿ ಕೂತಿದೆಯಾ ಅನ್ನೋ ಸಂಶಯದೊಂದಿಗೆ ಇವಳ ಕೊನೆ ಮಾತು ಕಾಡಿದ್ದವು..

*ಏನದು ಡೀಲ್* ..!?”ಗೊತ್ತಿಲ್ಲ ಕಣೇ,ಪೇಪರ್ ಕೊಡೋವಾಗ ಹೇಳ್ತೀನಿ ಅಂದಿದ್ದಾನೆ ನೋಡೋಣ ನಡಿ.,ಕ್ಲಾಸಿಗೆ ಹೋಗೋಕೆ ಮನಸ್ಸಿಲ್ಲ ಹಾಗೇನೆ ಯಾರಾದ್ರೂ ಬಕ್ರ ಸಿಕ್ತಾನ ನೋಡ್ತೀನಿ ರೋಡ್ನಲ್ಲಿ ಲಿಪ್ಟ್ ಕೋಡೋಕೆ,!!” ನಾನಂತೂ ಗೊಂದಲದ ಗೂಡಾಗಿದ್ದೆ ಪ್ರಮೀಳ ನನ್ನ ಕಣ್ಣಿಗೆ ಜೀವನವನ್ನು ಅದೆಷ್ಟು ಸಿಂಪಲ್ ಮತ್ತು ನಾಜೂಕಾಗಿ ತೆಗೆದುಕೊಂಡಿದ್ದಾಳೋ ಅವಳಿಗೆ ಮಾತ್ರ ಸಾಧ್ಯ ಅನ್ನುವ ಗುಣಗಳಿದ್ದವು ಮಾತು ನಡಿಗೆ ಎಲ್ಲದರಲ್ಲೂ…..!!!!

ಅದೇ ಸಂಜೆ ನಾನು ಮತ್ತೇ ಪ್ರಮೀಳ ಗೆಳೆಯನ ಬರ್ತ್’ಡೇ ಪಾರ್ಟಿಯಲ್ಲಿ ಮೀಟಾಗಿದ್ವಿ,ಆ ರಾತ್ರಿ ಲೇಟಾಗಿದ್ದ ಕಾರಣ ಅದೇ ಪಪ್ಪಾ ನಾ ರೋಡ್ ಬ್ಲಾಕ್ ಅಂತ ಸುಳ್ಳು ಹೇಳಿದ್ದೆ ನಿಮ್ಮಹತ್ರ, ಅಲ್ಲಿನೂ ನಾನು ನಾಳೆಯ ಡೀಲ್ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದೆ,ಅವಳೇನೂ ಆಗಿಲ್ಲ ಅನ್ನೋ ತರಾನೇ ಕೂಲ್ ಕೂಲ್ ಅಂತ ಕುಡಿಯೋಕೆ ಕೊಡುತ್ತಿದ್ದಳು…!!!!

ಶ್ಯಾಮಲೆ ತಾಳೆಗರಿಯಲ್ಲಿ ಬರೆದಿಟ್ಟ ಕಾವ್ಯದ ಎಸಲನ್ನು ಬಿಡಿಸಿಟ್ಟಂತೆ ಒಂದೊಂದೇ ಸತ್ಯಗಳನ್ನು ಹೇಳುತ್ತಿದ್ದಳು,,ನಟರಾಜ್ ದಂಪತಿಗಳು ಅಮೂರ್ತ ಕಲ್ಪನೆಗಳ ಶ್ರಾದ್ಧದ ಕಾರ್ಯಕ್ರಮಕ್ಕೆ ಮನಸ್ಸನ್ನು ಅನುವುಗೊಳಿಸುತ್ತಿದ್ದರು…

ಮಕ್ಕಳು ಅದೆಷ್ಟು ನಮಗೆ ನಂಬಿಕೆ ಬರಿಸಿ ಇಡ್ತಾರೆ ಅಂದ್ರೆ ಅವರ ಸುಳ್ಳುಗಳನ್ನು ನಾವು ಪರಮಸತ್ಯ ಅಂತ ಒಪ್ಪಿಕೊಂಡು ಬಿಡ್ತೀವಿ,ಪಾಪ ಅವರೂ ಪರಿಸ್ಥಿತಿಗೆ ಸುಳ್ಳು ಹೇಳ್ತಾರೆ ನಾವು ಕುರುಡು ಪ್ರೇಮ ಇಟ್ಕೋತೀವಿ,ತಪ್ಪುಗಳು ಸಮ ತೂಗುವಾಗ ಕೆಸರೆರೆಚಾಟ ಸಮಂಜಸವಲ್ಲ..!!!

(ಮುಂದುವರೆಯುವುದು…)..

-ಅವಿಜ್ಞಾನಿ

www.facebook.com/ngolipadpu1

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!