Uncategorized ಕಥೆ

ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು

ನನ್ನ ಪಾತ್ರದ ಸಂಭಾಷಣೆ ಸರಳವಾಗಿದ್ದರೂ,ಕ್ರೂರ ರೂಪದ್ದಾಗಿತ್ತು. ಸ್ವಭಾವದಲ್ಲಿ ಮೃದು ಆಗಿದ್ದರೂ ಬಣ್ಣ ಹಚ್ಚಿದರೆ ಪರಕಾಯ ಪ್ರವೇಶ ಮಾಡುವದನ್ನು ಸ್ವಲ್ಪ ಮಟ್ಟಿಗೆ ಕರಗತ ಮಾಡಿಕೊಂಡಿದ್ದೆ. ನನ್ನ ಪಾತ್ರದ ಸಮಯ ಬಂದಾಗ ಸನ್ನೆ ಮಾಡುವ ಮಂಜಣ್ಣನನ್ನೇ ನೋಡುತ್ತಾ ಕುಳಿತಿದ್ದೆ. ಕೈಯಲ್ಲಿದ್ದ ಟೀ ಕಪ್ಪು ಖಾಲಿ ಆಗಿದ್ದು,ಅಲ್ಪ ಸ್ವಲ್ಪ ಟೀ ತುಟಿಗೆ ತಾಗಿತ್ತು. ಕನ್ನಡಿ ನೋಡಿ ಬಣ್ಣ ಸರಿ ಮಾಡಿಕೊಳ್ಳನ ಎನ್ನುವಷ್ಟರಲ್ಲಿ ಸನ್ನೆ ಬಂದಿತ್ತು. ಮೈಯಲ್ಲಿ ಪಾತ್ರದ ಛಾಯೇ,ದ್ವನಿ ಸ್ವಲ್ಪ ಗದರಿಸಿ ಸಂಭಾಷಣೆಯನ್ನು ಸರಾಗವಾಗಿ ಹೇಳುತ್ತಿದ್ದಂತೆ ಕಿವಿಗೆ ಸಿಳ್ಳೆಯ ಇಂಪು.

ಎರಡೇ ನಿಮಿಷದಲ್ಲಿ ಮರಳಿ ಬಂದಿದ್ದೆ, ಜನ ನಾನು ಮರೆಯಾದಂತೆ ಸದ್ದು ಕಡಿಮೆ ಮಾಡಿದರು, ಮತ್ತೊಂದು ಟೀ ಕಪ್ ತೆಗೆದುಕೊಂಡು ಬ್ಯಾಗ್’ನಿಂದ ಫೋನ್ ತೆರೆದಿದ್ದೆ. ನಾಲ್ಕೈದು ಮಿಸ್ ಆದ ಕಾಲ್’ಗಳು, ಅವಳು ಯಾವತ್ತೂ ನನ್ನ ಕೆಲಸದ ಸಮಯದಲ್ಲಿ ಕರೆ ಮಾಡಲ್ಲ. ಆದರೆ ಇವತ್ತು ಕರೆಯಲು ಬಂದಿವೆ ಅಂದ್ರೆ ಏನೂ ಸಮಸ್ಯೆ ಇರಬೇಕು. ಮಂಜಣ್ಣನಿಗೆ ಸನ್ನೆ ಮಾಡಿ ಕೇಳಿದೆ ನನ್ನ ಮುಂದಿನ  ದೃಶ್ಯಕ್ಕೆ  ಸಮಯ ಇದೇಯಾ? ಇಲ್ಲಾ ಬೇಗ ಬಟ್ಟೆ ಬದಲಾಸುವಂತೆ ಸೂಚನೆ. ಮುಂದಿನ ದೃಶ್ಯದಲ್ಲಿ ನನ್ನ ಪಾತ್ರದ ಸಂಭಾಷಣೆ ಹೆಚ್ಚಾಗಿಯೇ ಇತ್ತು. ಕರೆಯನ್ನು ಮರೆತು ಕಲೆಯ ಕಡೆಗೆ ಗಮನ ಹರಿಸಿದೆ. ನನ್ನ ಪಾತ್ರದ ಸಾವಿನ  ನಂತರ ನಾನು  ಕೆಲವು ನಿಮಿಷಗಳ ಕಾಲ ಹೆಣದ ರೂಪದಲ್ಲಿಯೇ  ಇರಬೇಕಾದ ಸನ್ನಿವೇಶ. ಆಗ ನೆನಪಾಗಿದ್ದು ಅವಳ ಕರೆಗಳು.

******

ಮನೆಗೆ ಬರುವಾಗ ಎಷ್ಟು ಸಾರಿ ಕರೆ ಮಾಡಿದರು ತೆಗೆಯದೆ ಇರುವ ಅವಳು ಬಾಗಿಲು ತೆರೆದು ಕಾಯುತ್ತಿದ್ದಳು. ಸಿಟ್ಟು ಬಂದಿರೋದಕ್ಕೆ ಸಾಕ್ಷಿಯಾಗಿ  ಮೇಜಿನ ಮೇಲೆ ಇರುವ ಹಾಸ್ಪಿಟಲ್ ಫೈಲ್, ಕಣ್ಣೀರಿಟ್ಟು ಬತ್ತಿದ್ದ ಕಣ್ಣುಗಳು,ಮುಂದೆ ಇದ್ದರು ನನ್ನನ್ನು ನೋಡದ ರೀತಿಯಲ್ಲಿ ಅವಳು ಕುಳಿದ್ದಳು, ಹೆಗಲ ಮೇಲಿನ ಬ್ಯಾಗನ್ನು ಕೆಳಗೆ ಇರಿಸಿ ಅವಳ ಹತ್ತಿರ ಹೋದೆ. ಅಷ್ಟರಲ್ಲೇ ಅವಳು ಆಕ್ರಂದನ ಹೊರಹಾಕಿ ಅಳಲು ಶುರುಮಾಡಿದಳು. ಮಾತುಗಳಿಗೆ ಅಲ್ಲಿ ಜಾಗ ಇರಲಿಲ್ಲ,ಸಂತೈಸುವಷ್ಟು ವ್ಯವಧಾನ ನನ್ನಲ್ಲಿ ಇರಲಿಲ್ಲ. ಅವಳ ಜೊತೆ ಕುಳಿತು ತಲೆ ಮೇಲೆ ಕೈಯಾಡಿಸಿದೆ. ಅರ್ಧ ಗಂಟೆಯ ನಂತರ ಮೊದಲ ಮಾತು,”ನನಗೆ ಮಗು ಬೇಕು”.

******

ಕಲಿತದ್ದು ಕಂಪ್ಯೂಟರ್ ಆದರೂ,ನನಗೆ ಗೊತ್ತಿರುವುದು ಅಭಿನಯ ಮಾತ್ರ. ಅದರಲ್ಲೇ ಏನಾದ್ರೂ ಸಾಧನೆ ಮಾಡುವ ಭಾವನೆಯನ್ನು ಅವಳು ಅರ್ಥ ಮಾಡಿಕೊಂಡಿದ್ದಳು. ನಂತರ ಮೂರೂ ವರುಷ ಸಣ್ಣ ಪುಟ್ಟ ಅಭಿನಯ, ನಾಟಕ. ಹೆಸರು ಚೆನ್ನಾಗಿ ಇದ್ದರು ಹಣಕಾಸು ಮಾತ್ರ ಅಷ್ಟಕ್ಕೇ ಅಷ್ಟೇ. ಸ್ವಲ್ಪ ದಿನ ಮಗುವಿನ ವಿಚಾರವೇ ಇಲ್ಲದೆ ಕಾಲ ಕಳೆದ ನಮಗೆ,ಮಗು ಬೇಕು ಅನ್ನಿಸಿದಾಗ ಕಂಡದ್ದು ನಮ್ಮ ಅಸಹಾಯಕ ವೃತ್ತಿ, ಕಾಡುವ ಪ್ರವೃತ್ತಿ. ಮುಂದೆ ನೋಡೋಣ ಅಂಥ ಇಲ್ಲಿವರೆಗೂ ಬಂದಿದ್ದೆವು. ಸಹನೆಯ ಕಟ್ಟೆಯನ್ನ ಇಬ್ಬರು ಸೇರಿಯೇ ಕಟ್ಟಿದ್ದೆವು,ಅದನ್ನ ಉಳಿಸಿಕೊಂಡು ಹೋಗುವಲ್ಲಿ ಎಡವಿದೆವು. ನಾನು ಕೆಲಸದ ಸಮಯದಲ್ಲಿ ಅವಳಿಗೆ ಆರೋಗ್ಯದಲ್ಲಿ ಏರುಪೇರಾಗಿದೆ, ಆಘಾತಕಾರಿಯಾದ ಯಾವುದೇ ಸಮಸ್ಯೆ ಇಲ್ಲದಿದ್ದರೂ,ಅವಳು ತಾಯಿಯಾಗುವ ದಿನಗಳು ಕಡಿಮೆಯಾಗುತ್ತಿವೆ ಎಂಬುವುದು ಚಿಂತೆಗೆ ಕಾರಣವಾಗಿತ್ತು.

ರಾತ್ರಿ ಅವಳ ಯಾವ ಪ್ರಶ್ನೆಗೂ ಉತ್ತರಿಸಲು ಆಗದ ನಾನು, ಭರವಸೆ ಮಾತ್ರ ಕೊಟ್ಟಿದ್ದೆ. ಲ್ಯಾಪ್ಟಾಪ್ ಕೈಯ್ಯಲ್ಲಿ ಹಿಡಿದು ರೇಸುಮೆ ರೆಡಿ ಮಾಡಿಕೊಂಡೆ. ಹಳೆಯ ಯಾವುದಾದರೂ ಗೆಳೆಯರ ಸಹಾಯದಿಂದ ಪೂರ್ಣ ಪ್ರಮಾಣದ ಕೆಲಸಕ್ಕೆ ತಯಾರಿ ನಡೆಸಿದ್ದೆ. ಟೀ ಕಪ್’ನೊಂದಿಗೆ ಬಂದ ಅವಳು ಹೆಗಲ ಮೇಲೆ ಕೈ ಇಟ್ಟು ಮತ್ತೆ ನೀನು ಅಭಿನಯ ಮಾಡಬಹುದು ಆದರೆ ….. ಸಮಾಧಾನದಿಂದ ಅವಳ ಕೈ ಸವರಿ ನೋಡೋಣಾ ಅಂಥ ಸನ್ನೆ ಮಾಡಿದೆ. ಒಲ್ಲದ ಮನಸ್ಸಿಗೆ ಎ.ಸಿ ಆಫೀಸಿನ ರುಚಿ ತೋರಿಸಿ ಕೆಲಸದ ಹುಡುಕಾಟ ಶುರುವಾಯಿತು.

ಸಂಜೆಗೆ ಒಂದು ಪಾತ್ರದ ಅಭಿನಯಕ್ಕೆ ಎಲ್ಲಾ ತಯಾರಿ ಆಗಿದ್ದು, ಅವಳ ಅನುಮತಿಗೆ ಕಾದಿದ್ದೆ. ನನ್ನ ತಯಾರಿಯನ್ನ ಅವಳೇ ಮಾಡಿ ಬ್ಯಾಗ್ ಜೊತೆ ಅವಳು ರೆಡಿಯಾಗಿ ಬಂದಿದ್ದಳು. ನನ್ನ ಪಾತ್ರದ ಅವಧಿ ಬಂದಾಗ ಅವಳು ಮೊದಲ ಸಾಲಿನಲ್ಲಿ ಕುಳಿತಿದ್ದಳು, ಎರಡೇ ಸಾಲು ಅವಳನ್ನೇ ನೋಡುತ್ತಾ ಹೇಳಿ ಬಿಟ್ಟೆ “ಬದುಕು ಜಟಕಾಬಂಡಿ,ವಿಧಿ ಅದರ ಸಾಹೇಬ, ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು………

ಸಂಗಡಿಗರು :

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು

ಪದ ಕುಸಿಯೆ ನೆಲವಿಹುದು ಮಂಕುತಿಮ್ಮ

ಪದ ಕುಸಿಯೆ ನೆಲವಿಹುದು ಮಂಕುತಿಮ್ಮ

Facebook ಕಾಮೆಂಟ್ಸ್

ಲೇಖಕರ ಕುರಿತು

Anand Rc

ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ
ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು
ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!