ಹೇಳಿ ಕೇಳಿ ಮಧ್ಯರಾತ್ರಿಯ ಹೊತ್ತು..ಕಾಲ್ಗೆಜ್ಜೆಯ ಸದ್ದಿಗೆ ಸುಬ್ಬಣ್ಣನವರು ತುಸು ಬೆದರಿದರು. ಗದ್ದೆಗೆ ನೀರು ಹಾಯಿಸುವ ವಿಷಯದಲ್ಲಿ ಅವರು ಆಳುಗಳನ್ನು ನಂಬದೇ ತಾವೇ ಖುದ್ದಾಗಿ ಬರಲು ಕಾರಣವಿತ್ತು.ಎರಡು ಮೂರು ಬಾರಿ ನೀರು ಹಾಯಿಸಲೆಂದು ಗೊತ್ತು ಮಾಡಿದ ಆಳುಗಳು ಮೋಟಾರು ನಿಲ್ಲಿಸದೇ ಹಾಗೆಯೇ ಮಲಗಿಬಿಟ್ಟಿದ್ದರು. ಇದರಿಂದ ನೀರು ಪೋಲಾಗಿದ್ದಲ್ಲದೇ ಬೆಳೆಗೂ ಹಾನಿಯಾಗಿತ್ತು.ಅದಕ್ಕಾಗಿ ಸ್ವಲ್ಪ ಕಷ್ಟವಾದರೂ ಸುಬ್ಬಣ್ಣನವರು ಸ್ವತಃ ಗದ್ದೆಗೆ ನೀರು ಹಾಯಿಸಲು ಬರುತ್ತಿದ್ದರು.ವಾರದಲ್ಲಿ ಎರಡು ಮೂರು ದಿನ ವಿದ್ಯುತ್ ಪೂರೈಕೆ ಸರಿಯಾಗಿ ಇರುತ್ತಿರಲಿಲ್ಲವಾದ್ದರಿಂದ ರಾತ್ರಿಯೇ ಗದ್ದೆಗೆ ನೀರು ಹಾಯಿಸಬೇಕಿತ್ತು.ಸುಬ್ಬಣ್ಣನವರ ಕಬ್ಬಿನ ಗದ್ದೆಯ ಹಾದಿಯಲ್ಲಿ ನಡೆದು ಹೋಗುತ್ತಿದ್ದ ಪಾರಿಯ ಕಾಲ್ಗೆಜ್ಜೆಯ ಸದ್ದು ತೀರಾ ಹತ್ತಿರದಿಂದ ಕೇಳುವಂತಾದಾಗ ಅವರು ಬೆದರಿ ಬೋರಿನ ಮನೆಯ ಹಿಂದೆ ಅವಿತುಕೊಂಡರು.ಲೈಟಿನ ಬೆಳಕಿನಲ್ಲಿ ಪಾರಿಯ ಮುಖ ಸ್ಪಷ್ಟವಾಗಿ ಕಂಡಿತು.ಪಾರಿ ಹೋಗುವುದನ್ನು ಇಣುಕಿ ನೋಡುತ್ತಿದ್ದ ಸುಬ್ಬಣ್ಣನವರು ಇಷ್ಟೊತ್ತಿನಲ್ಲಿ ಇವಳು ಹೋಗುತ್ತಿರುವುದಾದರೂ ಎಲ್ಲಿಗೆ? ಎಂದು ತಲೆ ಕೆರೆದುಕೊಂಡು ಮೆಲ್ಲಗೆ ಪಾರಿಯನ್ನು ಹಿಂಬಾಲಿಸಿದರು.ಪಾರಿ ನೇರವಾಗಿ ಹೋಗಿ ಬಾವಿಯ ಹತ್ತಿರ ನಿಂತಾಗಲೇ ಸುಬ್ಬಣ್ಣನವರಿಗೆ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಾಳೆಂದು ಅರಿವಾದದ್ದು..ಅಂತಹ ಕೊರೆಯುವ ಚಳಿಯಲ್ಲಿಯೂ ಸುಬ್ಬಣ್ಣನವರು ಬೆವೆತು ಹೋದರು.ತೊದಲುತ್ತಲೇ “ಪಾ..ಪಾರೀ..” ಎಂದು ಹಿಂದಿನಿಂದ ಬಂದ ಧ್ವನಿ ಕೇಳಿ ಬೆಚ್ಚಿ ಹಿಂದೆ ತಿರುಗಿ ನೋಡಿದಳು ಪಾರಿ. ಬೆಳದಿಂಗಳಿದ್ದಿದ್ದರಿಂದ ಹಿಂದೆ ನಿಂತ ಮನುಷ್ಯ ಸುಬ್ಬಣ್ಣನವರು ಎಂದು ತಿಳಿಯಿತು. ಬಿಕ್ಕಿದಳು ಪಾರಿ. ಸುಬ್ಬಣ್ಣನವರಿಗೆ ಅವಳ ಹೀನಾಯ ಸ್ಥಿತಿ ಅರ್ಥವಾಗಿತ್ತು.”ಇಲ್ಲೆ ನಿಲ್ಲುದು ಬ್ಯಾಡ..ನಡೀ ಮೊದಲ ಬೋರಿನ್ ಮನಿಗೆ..ಅಲ್ಲೇ ಮಾತಾಡೋನು..ನೀ ಹಿಂಗ ಬಾವಿಗೆ ಬಿದ್ರ ಎಲ್ಲಾ ನೆಟ್ಟಗ ಆಗ್ತದನೂ ಹುಚ್ಚಿ..ನಡೀ ನಡೀ..ನಾ ಅದಿನಿ..ನೀ ಚಿಂತಿ ಮಾಡಬ್ಯಾಡ..”ಅನ್ನುತ್ತ ಪಾರಿಯ ಕೈ ಹಿಡಿದು ಬೋರಿನ ಮನೆಗೆ ಕರೆದುಕೊಂಡು ಹೋಗಿ ಕುಡಿಯಲು ನೀರು ಕೊಟ್ಟರು.ಪಾರಿ ಏನೋಂದು ಮಾತಾಡಲಿಲ್ಲ.ಅತ್ತು ಅತ್ತು ಹೈರಾಣಾಗಿದ್ದ ಪಾರಿಗೆ ಮಾತನಾಡಲು ಶಕ್ತಿಯೇ ಕುಂದಿದಂತಾಗಿತ್ತು.ಅರ್ಥ ಮಾಡಿಕೊಂಡ ಸುಬ್ಬಣ್ಣನವರು “ಪಾರೀ..ನಂಗೊತ್ತವ್ವಾ ನಿನ್ ಸಂಕ್ಟ ಏನಂತ..ನೀ ಹೆದರಬ್ಯಾಡ..ನನ್ ಮಗಳಂತಾಕಿ ನಿನ್ ಬಾಳೆ ಹಿಂಗಾಗಾಕ ನಾನೂ ಗೌಡನ್ ಜೋಡಿ ಕೈ ಜೋಡ್ಸಿಬಿಟ್ಟೆ..ಅದ ಪಾಪಕ್ಕ ನೋಡ ನನ್ ಮಗಳು ನನ್ ಕೈ ಬಿಟ್ ಹೋದ್ಲು..ನೀ ಕಣ್ಣೀರ ಹಾಕಬ್ಯಾಡವ್ವಾ..ಈ ಮಂದಿ ನಿನ್ ಬಾಳೆ ನೆಟ್ಟಗ ಆಗಾಕ ಬಿಡಂಗಿಲ್ಲ..ಹಂಗಂತ ನೀ ಸತ್ರ ಏನಾಕೈತಿ ಹೇಳ? ಮಾದೇವಸ್ವಾಮಿಗೆ ಇನ್ನೊಂದ್ ಮದುವಿ ಮಾಡಾಕ ಸಲೀಸ ದಾರಿ ಸಿಗತೈತಿ ಅಷ್ಟ..ಅವಾ ಮದುವಿ ಮಾಡ್ಕಂಡು ಹಾಳಾಗಿ ಹೋಗ್ಲಿ ಬಿಡವ್ವಾ..ಮನಸಿಲ್ದವ್ನ ಜೋಡಿ ನೀ ಬಾಳೆ ಮಾಡುದ ಬ್ಯಾಡ..ನಿಮ್ಮಪ್ಪಗೂ ನಿನ್ ಮತ್ತ ಮನಿ ಸೇರ್ಸಸ್ಕೊಳಾಕ ಮನ್ಸಿಲ್ಲ ಅಂತ ಕಾಣ್ತದ..ನೀ ನಿಮ್ಮಪ್ಪನ್ ಜೋಡಿ ಸಂಜಿಮುಂದ ಅಳಕೊಂತ ಮಾತಾಡಿದ್ ಸುದ್ದಿನ ಪಕ್ಕದ್ ಮನಿ ತುಂಗವ್ವಾ ನಮ್ಮನಿಯಾಕಿ ಮುಂದ ಹೇಳ್ತಿದ್ಲ..ನೀ ಅಳಬ್ಯಾಡವ್ವಾ..ಹುಟ್ಸಿದ್ ದೇವ್ರು ಹುಲ್ ಮೇಯ್ಸಲ್ಲವ್ವಾ..ದೇವ್ರದಾನ..” ಎಂದು ಪಾರಿಯ ತಲೆ ಸವರಿ ನಿಟ್ಟುಸಿರು ಬಿಟ್ಟರು.ಪಾರಿ ರೆಕ್ಕೆ ಮುರಿದ ಹಕ್ಕಿಯಂತಾಗಿದ್ದಳು..
ಬೆಳಿಗ್ಗೆ ನಾಲ್ಕು ಗಂಟೆಯಾಗುತ್ತ ಬಂದಿತ್ತು.ಬಂದಿತ್ತು.ಸುಬ್ಬಣ್ಣನವರ ತಲೆಯಲ್ಲಿ ವಿಚಾರವೊಂದು ಸುಳಿಯಿತು.ಪಾರಿ ಗೋಡೆಗೊರಗಿ ಕಣ್ಮುಚ್ಚಿದ್ದಳು.”ಪಾರೀ..ಲಘೂನ ಏಳವ್ವಾ..ನಾ ಹೇಳದಂಗ ಮಾಡು..ದೇವ್ರದಾನ..ಈಗ್ ನಡೀ”ಎಂದು ಅವಳ ಕೈಹಿಡಿದೆಬ್ಬಿಸಿ ಬೋರಿನ ಮನೆಯ ಮುಂದೆ ನಿಲ್ಲಿಸಿದ್ದ ತಮ್ಮ ಬೈಕನ್ನು ತಿರುಗಿಸಿ ” ಲಘೂನ ಹತ್ತವ್ವಾ..ಬೆಳಕ ಹರಿಯೋ ಹೊತ್ತು..”ಎಂದಾಗ ಪಾರಿ ಪಿಳಿ ಪಿಳಿ ಕಣ್ಣು ಬಿಟ್ಟಳು.ಅವಳಿಗೆ ಏನೊಂದೂ ಅರ್ಥವಾಗಲಿಲ್ಲ.ಸುಬ್ಬಣ್ಣನವರಿಗೆ ಅವಳ ತಳಮಳ ಅರ್ಥವಾಯಿತು.”ಪಾರೀ..ನೀ ನನ್ ಮಗಳಿದ್ದಂಗವ್ವಾ..ಕೇಡ ಮಾಡಲ್ಲವ್ವಾ..ನಾ ಮಾಡಿರೋ ಪಾಪಾ ತೊಳ್ಕೊಳಾಕ ದೇವ್ರ ಈ ದಾರಿ ತೋರ್ಸ್ಯಾನ..ನೀ ಏನೂ ಚಿಂತಿ ಮಾಡದಂಗ ಲಘೂನ ಹತ್ತವ್ವಾ..ಯಾರರ ನೋಡಿದ್ರ ಬ್ಯಾರೆ ಏನರ ಆದೀತು..”ಎಂದು ಅವಸರಿಸಿದರು.ಪಾರಿ ಮಾತನಾಡದೇ ಬೈಕ್ ಹತ್ತಿ ಕುಳಿತಳು..
ಬೈಕನ್ನು ಜೋರಾಗಿಯೇ ಓಡಿಸಿದ ಸುಬ್ಬಣ್ಣನವರು ಹಳ್ಳಿಯಿಂದ ದೂರವಿದ್ದ ರೈಲು ನಿಲ್ದಾಣ ತಲುಪಿದಾಗ ಬೆಳಗಿನ ಆರು ಗಂಟೆಯಾಗಿತ್ತು.ಅಷ್ಟೇನೂ ಜನರಿರಲಿಲ್ಲ.ಪಾರಿಯನ್ನು ಬೆಂಚ್ ಮೇಲೆ ಕುಳ್ಳಿರಿಸಿದ ಸುಬ್ಬಣ್ಣನವರು ಸ್ಟೇಷನ್ ಮಾಸ್ಟರ್ ರೂಮಿನತ್ತ ದೌಡಾಯಿಸಿದರು.ಅಷ್ಟೊತ್ತಿಗಾಗಲೇ ಟ್ರೇನ್ ಒಂದು ಪೋಂವ್ ಎನ್ನುವ ಶಬ್ದದೊಂದಿಗೆ ಬರುವುದು ದೂರದಿಂದ ಕಾಣುತ್ತಿತ್ತು.ಸುಬ್ಬಣ್ಣನವರು ಸ್ಟೇಷನ್ ಮಾಸ್ಟರ್ ಅವರೊಂದಿಗೆ ಏನೋ ಮಾತನಾಡುತ್ತಿದ್ದರು.ಸ್ಟೇಷನ್ ಮಾಸ್ಟರ್ ಪ್ಲಾಟ್ ಫಾರಂಗೆ ಬಂದು ನಿಂತ ರೈಲಿನತ್ತ ಕೈ ತೋರಿಸುತ್ತಿದ್ದು ಪಾರಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಪಾರಿಗೆ ಏನು ನಡೆಯುತ್ತಿದೆ ಎನ್ನುವುದರ ಅರಿವಿರಲಿಲ್ಲ.ಸುಬ್ಬಣ್ಣನವರು ಅವಸರಿಸಿ ಬಂದು ಪಾರಿಯನ್ನು ಲಗುಬಗೆಯಿಂದ ಒಂದು ರೈಲು ಡಬ್ಬಿಗೆ ಹತ್ತಿಸಿದರು.ಆಳಿಗಳಿಗೆ ಮರುದಿನ ವಾರದ ಕೂಲಿ ಕೊಡಲೆಂದು ತೆಗೆದು ಇಟ್ಟುಕೊಂಡಿದ್ದ ಐನೂರರ ಮೂರು ನೋಟುಗಳನ್ನು ಕಿಸೆಯಿಂದ ತೆಗೆದು ಅವಳ ಕೈಗೆ ತುರುಕಿ “ಮುಂದಿನ ಸ್ಟೇಷನ್ದಾಗ ಏನಾರ ಹೊಟ್ಟಿಗೆ ತಿನ್ನವ್ವಾ..ಟಿಕೀಟು ತಗಳಾಕ ವ್ಯಾಳೆ ಇಲ್ಲ..ಮುಂದ ಯಾರರ ಚೆಕ್ ಮಾಡಾಕ ಬಂದ್ರ ರೊಕ್ಕಾ ಕೊಡು..ಟಿಕೀಟು ಕೊಡ್ತಾರ.ಇಲ್ಲಾ ಅಂದ್ರ ಇಲ್ಲ.ಹುಷಾರವ್ವಾ..ನೀ ಹೆದರಬ್ಯಾಡ..ನಿನ್ ಕರ್ಕಂಡು ಹೋಗಾಕ ಬರ್ತಾರ..ಅವ್ರ ಬಂದು ನಿನ್ನ ಇಳಿಸ್ಕೊಂತಾರ..” ಎಂದು ಮಾತನಾಡುತ್ತಿರುವಾಗಲೇ ರೈಲು ನಿಧಾನವಾಗಿ ಚಲಿಸತೊಡಗಿತು.”ಹುಷಾರವ್ವಾ ಪಾರಿ..ಸೀಟಿನ್ಯಾಗ ಹೋಗಿ ಕುಂತ್ಕಾ..” ಎಂದು ಇನ್ನೂ ಏನೇನೋ ಮಾತನಾಡುತ್ತಿದ್ದ ಸುಬ್ಬಣ್ಣನವರ ಮಾತುಗಳು ರೈಲು ಚಲಿಸಿದಂತೆ ಪಾರಿಯ ಕಿವಿಗೆ ಕೇಳದಾದವು.ಪಾರಿಗೆ ಕೈ ಮಾಡಿದ ಸುಬ್ಬಣ್ಣನವರ ಕಣ್ಣುಗಳು ಒದ್ದೆಯಾದವು.ರೈಲಿನ ಬೋರ್ಡು ಬೆಂಗಳೂರಿನ ಕಡೆಗೆ ಹೋಗುವ ರೈಲು ಎಂದು ತೋರಿಸುತ್ತಿತ್ತು..
ತಾನು ಎಲ್ಲಿಗೆ ಹೋಗುತ್ತಿದ್ದೇನೆ ಅನ್ನುವ ಅರಿವು ಕೂಡಾ ಪಾರಿಗೆ ಇರಲಿಲ್ಲ.ಖಾಲಿಯಿದ್ದ ಸೀಟಿನಲ್ಲಿ ಬಂದು ಕುಳಿತು ಕಿಟಕಿಯಾಚೆ ದೃಷ್ಟಿ ಹೊರಳಿಸಿದಳು.ರೈಲು ಜೋರಾಗಿ ಓಡುತ್ತಿತ್ತು.ಸುಬ್ಬಣ್ಣನವರು ಕೊಟ್ಟ ಹಣವನ್ನು ಸೆರಗಿನ ತುದಿಗೆ ಗಂಟುಹಾಕಿಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡು ಸೀಟಿಗೊರಗಿ ಕಣ್ಮುಚ್ಚಿದಳು.ಆಯಾಸದಿಂದ ಬಳಲಿದ್ದ ಪಾರಿಗೆ ಹತ್ತು ನಿಮಿಷದಲ್ಲಿ ನಿದ್ದೆಯಾವರಿಸಿತು.
ಸುಬ್ಬಣ್ಣನವರು ನೆಮ್ಮದಿಂದ ಉಸಿರು ಬಿಟ್ಟರು.ಬೈಕನ್ನು ಊರಿನತ್ತ ತಿರುಗಿಸಿದರು.ಪೆಟ್ರೋಲ್ ಖಾಲಿಯಾಗಿದ್ದರಿಂದ ದಾರಿಯಲ್ಲಿ ಬಂಕ್ ಒಂದರಲ್ಲಿ ಪೆಟ್ರೋಲ್ ಭರ್ತಿ ಮಾಡಿಸಿಕೊಂಡು ಬೈಕನ್ನು ಸ್ವಲ್ಪ ಜೋರಾಗಿಯೇ ಓಡಿಸಿ ಮನೆ ಸೇರಿದರು.ಒಂದೊಂದು ದಿನ ಸುಬ್ಬಣ್ಣನವರು ರಾತ್ರಿ ನೀರು ಹಾಯಿಸಲು ಹೋದಾಗ ಬೋರಿನ ಮನೆಯಲ್ಲಿಯೇ ಮಲಗಿ ಬೆಳಿಗ್ಗೆ ತಡವಾಗಿ ಮನೆಗೆ ಬರುತ್ತಿದ್ದರಾಗಿದ್ದರಿಂದ ಅವರ ಹೆಂಡತಿ ಏನನ್ನೂ ಕೇಳದೇ ಚಹ ತಂದಿಟ್ಟು ಅಡಿಗೆ ಮನೆಗೆ ಹೋಗಿ ರೊಟ್ಟಿ ಹಿಟ್ಟನ್ನು ಕಲಿಸತೊಡಗಿದರು.ಸುಬ್ಬಣ್ಣನವರಿಗೆ ಚಹದ ಕಡೆ ಗಮನವಿರಲಿಲ್ಲ.ಮೊಬೈಲ್ ಗಾಗಿ ತಡಕಾಡುತ್ತಿದ್ದರು.ಕಪಾಟು,ಕಿಡಕಿ,ಮನೆಯ ಎರಡು ರೂಮು,ಮಂಚದ ಕೆಳಗೆ ಎಲ್ಲ ಕಡೆ ಹುಡುಕಿದರೂ ಮೊಬೈಲ್ ಪತ್ತೆ ಇಲ್ಲ.ಮೊದಲೇ ಅಷ್ಟು ದೂರದಿಂದ ಬೈಕ್ ಓಡಿಸಿಕೊಂಡು ಬಂದಿದ್ದರಿಂದ ಅವರಿಗೆ ಆಯಾಸವಾಗಿತ್ತು.ಕುರ್ಚಿಯ ಮೇಲೆ ಒಂದು ಕ್ಷಣ ಕುಳಿತು ಕಣ್ಮುಚ್ಚಿಕೊಂಡು ನೆನಪಿಸಿಕೊಂಡರು.ಮೊಬೈಲ್’ನ್ನು ಅವರು ಬೋರಿನ ಮನೆಯಲ್ಲಿಯೇ ಮರೆತು ಬಂದಿದ್ದು ನೆನಪಾಗಿ ಅಲ್ಲಿ ನಿಲ್ಲದೇ ಬೈಕ್ ಹತ್ತಿ ಮತ್ತೆ ಹೊಲದ ಕಡೆ ಜೋರಾಗಿ ಓಡಿಸಿದರು. ರೊಟ್ಟಿ ಮಾಡಿಟ್ಟು ಎದ್ದು ಬಂದ ಅವರ ಹೆಂಡತಿಗೆ ದಿನವೊಂದಕ್ಕೆ ಏಳೆಂಟು ಬಾರಿ ಚಹ ಕುಡಿಯುವ ಸುಬ್ಬಣ್ಣನವರು ಚಹದ ಲೋಟ ಮೂಸಿಯೂ ನೋಡದೇ ಹೋದದ್ದು ಆಶ್ಚರ್ಯವಾಯಿತು.ಏನೋ ಮುಖ್ಯ ಕೆಲಸವಿರಬೇಕೆಂದು ಲೋಟ ಎತ್ತಿಕೊಂಡು ಒಳನಡೆದರು.
ಬೋರಿನ ಮನೆಯಲ್ಲಿ ಮೊಬೈಲ್ ಅನಾಥವಾಗಿ ಬಿದ್ದಿತ್ತು.ಒಂದೇ ಉಸಿರಿಗೆ ಒಳ ಹೋದ ಸುಬ್ಬಣ್ಣನವರು ಮೊಬೈಲ್ ಕಿಸೆಯಲ್ಲಿನ ಪುಟ್ಟ ಡೈರಿ ತೆಗೆದು ಅದರಲ್ಲಿದ್ದ ವ್ಯಕ್ತಿಯೊಬ್ಬನ ಮೊಬೈಲ್ ಸಂಖ್ಯೆಗೆ ಕರೆ ಮಾಡತೊಡಗಿದರು.ಈಗಲೂ ಅವರ ಕೈಗಳು ನಡುಗುತ್ತಿದ್ದವು.ಮೊಬೈಲ್ ಕಿವಿಗಿಟ್ಟುಕೊಂಡ ತಕ್ಷಣ “ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ” ಎಂದು ಹೆಣ್ಣು ಧ್ವನಿಯೊಂದು ಕೇಳಿ ಬಂದಾಗ ಸುಬ್ಬಣ್ಣನವರು ನೆಲದ ಮೇಲೆ ಕುಸಿದು ಕುಳಿತರು.ಪಾರಿಯನ್ನು ಒಬ್ಬಳನ್ನೇ ಕಳಿಸಿ ತಪ್ಪು ಮಾಡಿಬಿಟ್ಟೆನಾ ಎನಿಸತೊಡಗಿತ್ತು ಅವರಿಗೆ.ಮತ್ತೊಮ್ಮೆ ಅದೇ ನಂಬರಿಗೆ ಕರೆ ಮಾಡಿದರು.ಮತ್ತದೆ ಹೆಣ್ಣು ಧ್ವನಿ “ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ” ಎಂದು ಉಲಿದಾಗ ಸುಬ್ಬಣ್ಣನವರಿಗೆ ದಾರಿಯೇ ಕಾಣದಂತಾಗಿ ಕಣ್ಣಿಗೆ ಕತ್ತಲು ಕವಿದಂತಾಯಿತು.ಏಕೆಂದರೆ ಪಾರಿಯನ್ನು ಕರೆದುಕೊಂಡು ಹೋಗಲು ಬರುವ ವ್ಯಕ್ತಿಯ ಫೋನ್ ನಂಬರ್ ಅದಾಗಿತ್ತು..!
ಮುಂದುವರಿಯುವುದು..