ನಮ್ಮ ಮದುವೆಯಾಗಿ ಎರಡು ವರ್ಷಗಳಾದುವು ಇಂದಿಗೆ. ಎರಡು ವರ್ಷಗಳ ಹಿಂದೆ ನನ್ನ ಸಹಧರ್ಮಿಣಿಯಾಗಿ ಜೊತೆ ಬಂದವಳು ನಿಶಾ.
“ಚಿ.ತರುಣ್ ಹಾಗೂ ಚಿ.ಸೌ.ನಿಶಾ ಅವರ ವಿವಾಹವನ್ನು ದಿನಾಂಕ ೦೨-೦೨-೨೦೧೫ರಂದು ಘಂಟೆ ೧೨:೧೫ರ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಗುರು-ಹಿರಿಯರ ಸಮ್ಮತಿಯೊಂದಿಗೆ ನಿಶ್ಚಯಿಲಾಗಿದೆ”ಎಂದು ಪುರೋಹಿತರು ಲಗ್ನಪತ್ರಿಕೆ ಓದಿದ ಆ ದಿನ ಅದೇನೋ ಆನಂದ. ಅದೆಷ್ಟೋ ಹೊಸ ಹಸಿ ಕನಸುಗಳು ಆಗಷ್ಟೇ ಪ್ರಸವ ವೇದನೆಯ ನಂತರ ಜನಿಸಿದ ಎಳೆಕೂಸುಗಳಂತೆ ಜನಿಸಿದ್ದವು. ದಾಂಪತ್ಯ ಅಂದರೆ ಹಾಗೆ ಅಲ್ಲವೇ? ಪ್ರತಿಯೊಬ್ಬರಿಗೂ ಸಾವಿರಾರು ಕನಸುಗಳಿರುತ್ತವೆ. ಅಂತೆಯೇ ನನಗೂ ಕೂಡ. ಅರಳಿದ ಕನಸುಗಳನೆಲ್ಲ ಅತ್ಯಂತ ಪ್ರೀತಿಯಿಂದ ಕಾಪಾಡುತ್ತಾ ಕಾಲ ಕಳೆಯುತ್ತಿದ್ದೆ.
ಅವಳಿಗೂ ನನ್ನದೇ ರೀತಿಯ ಕನಸುಗಳಿದ್ದವೋ? ಅರಿಯೆ. ಏಕೆಂದರೆ ನಮ್ಮದು ಅರೇಂಜಡ್ ಮ್ಯಾರೇಜ್. ಹುಡುಗಿ ನೋಡಲು ಹೋದಾಗಲೇ, ಅವಳನ್ನು ಮೊದಲು ಭೇಟಿಯಾದದ್ದು. ಅವಳ ಆಸೆಗಳೇನು? ಅವಳ ಬದುಕಿನ ರೀತಿ ಎಂಥದ್ದು. ಅವಳು ಬಯಸುತ್ತಿರುವ ದಾಂಪತ್ಯ ಜೀವನ ಯಾವ ರೀತಿಯದ್ದು ನನಗೂ ಅರಿವಿರಲಿಲ್ಲ. ಅಂತೂ ನಾವಿಬ್ಬರೂ ಸತಿ-ಪತಿಯರಾಗುವುದು ಖಚಿತವಾಯಿತು.
ನಿಶ್ಚಯದ ನಂತರ ನಮ್ಮ ಮದುವೆಗೆ ಮೂರು ತಿಂಗಳುಗಳ ಕಾಲಾವಕಾಶವಿತ್ತು. ಸಮಯ ಸಿಕ್ಕಾಗೆಲ್ಲ ನಿಶಾ ಜೊತೆ ಮಾತನಾಡುತ್ತಿದ್ದೆ. ಅವಳ ಇಷ್ಟ-ಕಷ್ಟಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಆಕೆ ನನ್ನ ಪ್ರಶ್ನೆಗಳಿಗೇನೋ ಉತ್ತರಿಸುತ್ತಿದ್ದಳು, ಆದರೆ ಎಂದೂ ನನ್ನ ಇಷ್ಟಗಳ ಬಗ್ಗೆ ಒಮ್ಮೆಯೂ ಔಪಚಾರಿಕವಾಗಿಯೂ ಕೇಳುತ್ತಿರಲಿಲ್ಲ. ಎಲ್ಲದರಲ್ಲಿಯೂ ತನ್ನದೇ ಸರಿ ಎಂಬ ವಾದ ಎದ್ದು ಕಾಣುತ್ತಿತ್ತು. ಕೆಲಸದ ಒತ್ತಡದಲ್ಲಿ ಒಮ್ಮೆ ಎಲ್ಲಿಯಾದರೂ ಫೋನ್ ರಿಸೀವ್ ಮಾಡದೇ ಹೋದರೆ, ಜಗತ್ಪ್ರಳಯವಾದಂತೆ ಕೂಗಾಡುತ್ತಿದ್ದಳು. ಅವಳ ಜೊತೆ ಸ್ವಲ್ಪ ಮಾತನಾಡಬಹುದೇ ಎಂದು ನಿಶ್ಚಯದ ದಿನ ಕೇಳಿದಾಗ ಆಕೆ ನಿರಾಕರಿಸಿದ್ದಳು. ಆಗಲೇ ಸಣ್ಣದೊಂದು ಗೊಂದಲ ನನ್ನಲ್ಲಿ ಹುಟ್ಟಿಕೊಂಡಿತ್ತಾದರೂ ಅದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ದಿನ ಕಳೆದಂತೆ ಅವಳ ವರ್ತನೆ ಬೇಸರ ತರಿಸತೊಡಗಿತು. ಮೂರು ತಿಂಗಳು ಸಹಿಸಲಾಗದ ಈಕೆಯನ್ನ, ಬದುಕಿನುದ್ದಕ್ಕೂ ನಾನು ಸಹಿಸಬಲ್ಲೆನೇ? ಎಂಬ ಸಂದೇಹ ಉಂಟಾಯಿತು. ಅದೂ ಅಲ್ಲದೇ ನಾನೇನು ನಿಸ್ವಾರ್ಥಿಯಲ್ಲ; ಅವಳ ಭಾವಗಳಿಗೆ ಸ್ಪಂದಿಸುವ ಪ್ರಯತ್ನ ಪ್ರಾಮಾಣಿಕವಾಗಿ ನಾ ಮಾಡುವಂತೆ ಅವಳಿಂದಲೂ ಒಂದಿಷ್ಟಾದರೂ ನನ್ನ ಕುರಿತಾದ ಕಾಳಜಿಯನ್ನು ಖಂಡಿತ ಅಪೇಕ್ಷಿಸುವವ. ಅದು ಅವಳಿಂದ ಸಿಗುವ ಸಾಧ್ಯತೆಗಳು ತೀರಾ ವಿರಳ ಎಂದರಿತ ನಾನು, ಗೊಂದಲಗಳ ದಂಡಕಾರಣ್ಯದಲ್ಲಿ ಅಲೆಯುತ್ತಿದ್ದೆ.
ಹೀಗೆ ಒಂದು ವಾರ ಕಳೆಯಿತು. ಕೊನೆಗೊಂದು ದಿನ ದೃಢ ಮನಸ್ಸಿನಿಂದ ಮನೆಯವರ ಬಳಿ ವಿಷಯ ತಿಳಿಸಲು ನಿರ್ಧರಿಸಿದೆ. ಅಪ್ಪ,ಅಮ್ಮ ಹಾಗೂ ನೆಂಟಸ್ಥಿಕೆಗೆ ಜೊತೆ ಹೋಗಿದ್ದ ದೊಡ್ಡಪ್ಪ, ದೊಡ್ಡಮ್ಮರನ್ನೂ ಕರೆದು ಎದುರಿಗೆ ಕೂರಿಸಿಕೊಂಡೆ.
“ನಿಶ್ಚಯದ ದಿನದಿಂದ ಇಂದಿನವರೆಗೆ ನಿಶಾ ಜೊತೆ ನಡೆಸಿದ ಸಂಭಾಷಣೆಗಳಿಂದ ನನಗೆ ಅನಿಸುತ್ತಿರುವುದೇನೆಂದರೆ ನಮ್ಮಿಬ್ಬರ ದಾಂಪತ್ಯ ಜೀವನ ಸುಗಮವಾಗಿರಲು ಸಾಧ್ಯವೇ ಇಲ್ಲ ಎಂಬುದು. ಅವಳ ಹಾಗೂ ನನ್ನ ಯೋಚನಾಲಹರಿಗಳಿಗೆ ಒಂದಕ್ಕೊಂದು ತಾಳಮೇಳಗಳಿಲ್ಲ. ಎಲ್ಲ ವಿರುದ್ಧ ಅಭಿಪ್ರಾಯಗಳನ್ನೇ ಹೊಂದಿರುವ ನಾವಿಬ್ಬರು ಜೀವನ ಪರ್ಯಂತ ಜೊತೆ ಇರುವುದು ಬಹುಷಃ ಅಸಾಧ್ಯ. ವಿಭಿನ್ನ ಅಭಿರುಚಿಯಿರುವ ಇಬ್ಬರು ಪರಸ್ಪರ ಹೊಂದಾಣಿಕೆಯಿಂದ ಇರುವುದೇ ದಾಂಪತ್ಯ ಎಂಬುದಾದರೆ ಆ ಹೊಂದಾಣಿಕೆಗೆ ನಾನು ಸಿದ್ಧ. ಆದರೆ ಅವಳ ಜೊತೆಗಿನ ಇಷ್ಟು ದಿನದ ಒಡನಾಟದ ಪ್ರಕಾರ ಅದೇ ಹೊಂದಾಣಿಕೆಗೆ ಅವಳೂ ಸಿದ್ಧವಾಗುವ ಸಂಭವಗಳೇ ಕಾಣುತ್ತಿಲ್ಲ. ಹಾಗಾಗಿ ಇದರ ಕುರಿತಾಗಿ ತುರ್ತಾಗಿ ಒಂದು ನಿರ್ಧಾರಕ್ಕೆ ಬನ್ನಿ. ಅವಳ ಜೀವನದ ಜೊತೆ ಆಟವಾಡುವ ಉದ್ದೇಶ ನನ್ನದಲ್ಲ. ಹಾಗೆಯೇ ನನ್ನ ಜೀವನದಲ್ಲೂ ಆಟವಾಡುವ ಆಸೆ ನನಗಿಲ್ಲ. ಈ ಮದುವೆಯಿಂದ ನನಗೆ ಮಾತ್ರವಲ್ಲ ಅವಳ ಜೀವನವೂ ನೀರಸವಾಗಬಹುದು. ಹಾಗಾಗಿ ಪರಿಸ್ಥಿತಿ ಕೈ ಮೀರುವ ಮುಂಚೆ ಎಚ್ಚೆತ್ತುಕೊಳ್ಳುವುದು ಇಬ್ಬರಿಗೂ ಉತ್ತಮ”ಎಂದೆ.
ಅವರವರಲ್ಲೇ ಮಾತುಕತೆಗಳು ಆರಂಭವಾದುವು. “ಜಾತಕ ಸರಿಯಾಗಿ ಹೊಂದುತ್ತದೆ ಅಂದಿದ್ದರಲ್ಲ ನಮ್ಮ ಜೋಯಿಸರು”ಎನ್ನುತ್ತ ಜೋಯಿಸರಿಗೆ ಫೋನಾಯಿಸಿದರು. ಸ್ವಲ್ಪ ಸಮಯದ ನಂತರ ಕರೆಮಾಡುತ್ತೇನೆಂದ ಜೋಯಿಸರು ಹದಿನೈದು ನಿಮಿಷಗಳ ನಂತರ ಕರೆ ಮಾಡಿದರು. ಅವಳ ಜಾತಕದಲ್ಲಿ ಅದ್ಯಾವುದೋ ಗ್ರಹ ಅದ್ಯಾವುದೋ ಮನೆಯಲ್ಲಿ ಅದೇನೋ ಮಾಡುತ್ತಿದೆ, ಆರು ತಿಂಗಳು ಅದರ ಪ್ರಭಾವ ಇರುತ್ತದೆ, ಆನಂತರ ಸರಿ ಹೋಗುತ್ತಾಳೆ. ಅಲ್ಲದೇ ನಮ್ಮಿಬ್ಬರ ಜಾತಕ ಕೂಡುವಷ್ಟು ಸರಿಯಾಗಿ ಇಲ್ಲಿಯವರೆಗೆ ಯಾವ ಜೋಡಿಗಳ ಜಾತಕವೂ ಕೂಡಿಲ್ಲ. ಈ ಸಣ್ಣ ವಿಚಾರಗಳಿಗೆ ಸಂಬಂಧ ಕಳಕೊಳ್ಳಬೇಡಿ ಮುಂದೆ ಒಳ್ಳೇದಾಗತ್ತೆ ಅಂದರಂತೆ. ಅಲ್ಲಿಗೆ ನಮ್ಮ ಮನೆಮಂದಿಯ ಮನಸುಗಳೆಲ್ಲ ನಿರಾಳವಾದವು. ಆದರೆ ನನ್ನ ಮನಸ್ಸಲ್ಲ.
“ನೋಡಿ, ಜೊತೆ ಬದುಕಲು ಬೇಕಾಗುವುದು ಜಾತಕವಲ್ಲ. ಪ್ರೀತಿ, ನಂಬಿಕೆ, ಹೊಂದಾಣಿಕೆ, ಜವಾಬ್ದಾರಿ, ಆಸೆ, ಕನಸು. ನಾನೇನು ಜಾತಕ ಸುಳ್ಳು ಎನ್ನುತ್ತಿಲ್ಲ. ನಾನು ಕೆಲವು ಕಡೆ ಓದಿದ ಪ್ರಕಾರ, ಜಾತಕ ಬರೆಸುವಾಗ ನಾವು ಹೇಳುವ ಹುಟ್ಟಿದ ಕ್ಷಣ ಒಂದು ಸೆಕೆಂಡು ಹೆಚ್ಚು-ಕಮ್ಮಿಯಾದರೂ ಅದರ ಫಲಾಫಲಗಳು ಬೇರೆಯೇ ಆಗುತ್ತವಂತೆ. ಹೀಗಿರುವಾಗ ಕೇವಲ ಅದನ್ನೇ ನಂಬಿ ಇಬ್ಬರ ಜೀವನವನ್ನು ಪಣಕ್ಕೊಡ್ಡುವ ಜೂಜಿನಂತೆ ‘ಮದುವೆ’ಆಗಬಾರದು. ಅವಳ ನಡವಳಿಕೆಗಳು ಅವಳ ವ್ಯಕ್ತಿತ್ವವನ್ನು, ಅವಳು ಬೆಳೆದು ಬಂದ ರೀತಿಯನ್ನು ಸೂಚಿಸುತ್ತವೆಯೇ ಹೊರತು ಅವಳ ಇಂದಿನ ಗ್ರಹಗತಿಗಳನ್ನಲ್ಲ.”ಎಂದು ಎಷ್ಟೆಷ್ಟೋ ಭಾಷಣ ಬಿಗಿದೆ. ಆದರೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಮೊದಮೊದಲು ಪುಸಲಾಯಿಸಿದರು, ಬೈದರು, ನಂತರ ಕೇಳದಾಗ ಒಂದಿಷ್ಟು ಬ್ಲಾಕ್’ಮೇಲ್’ಗಳು ನಡೆದವು. ಕೊನೆಗೂ ನಾನೇ ಜೋಯಿಸರು ಹೇಳಿದ ಅದ್ಯಾವುದೋ ಗ್ರಹದ ಅದ್ಯಾವುದೋ ಮನೆಯ ಸ್ಥಾನಪಲ್ಲಟಕ್ಕಾಗಿ ಹಾತೊರೆಯುತ್ತ ಕಾಯುವ ಸಂಕಲ್ಪ ತೊಡಬೇಕಾಯಿತು.
ಮದುವೆಯ ದಿನ; ಎಲ್ಲರ ಮೊಗದಲ್ಲೂ ನಗುವಿನ ಹೂ ಅರಳಿತ್ತು. ನನ್ನ ಮನಸ್ಸು ಮಾತ್ರ ಯಾವುದೋ ಅಪರಿಚಿತ ಯಾನಕ್ಕೆ ಸಿದ್ಧನಾದಂತಹ ಭಯದಿಂದ ಆವರಿಸಿತ್ತು. ಜೋಯಿಸರು ಜೋರಾಗಿ ಮಂತ್ರಗಳನ್ನು ಹೇಳುತ್ತಿದ್ದರು. ಕೊನೆಗೂ ಆ ಘಳಿಗೆ ಬಂದಿತು. ಭಾರತೀಯ ಸಂಸ್ಕೃತಿಯ ವೈವಾಹಿಕ ಜೀವನದ ಪವಿತ್ರತೆಯ ಸಂಕೇತವಾದ ಮಾಂಗಲ್ಯ ಕೈಯಲ್ಲಿತ್ತು. ಜೋಯಿಸರ ಮಾತಿನ ಮೇರೆಗೆ ಅವಳ ಕತ್ತಿಗೆ ಬಿಡಿಸಲಾಗದ ಬಾಂಧವ್ಯದ ಸಾಂಕೇತಿಕ ಗಂಟನ್ನು ಹಾಕಿದೆ. ಏಳು ಹೆಜ್ಜೆಗಳನ್ನಿಟ್ಟು ಅಗ್ನಿ ಸಾಕ್ಷಿಯಾಗಿ, ಸುಖ-ದುಃಖಗಳಲ್ಲಿ, ನೋವು-ನಲಿವುಗಳಲ್ಲಿ ಜೊತೆಯಾಗಿರುತ್ತೇನೆ ಎಂಬ ಮಾತು ಕೊಟ್ಟೆ. ಜೊತೆಜೊತೆಗೆ ಈ ಎಲ್ಲ ಮಾತುಗಳನ್ನು ಉಳಿಸಿಕೊಳ್ಳಲು ಬೇಕಾದ ನನ್ನ ಸಹನೆಯ ಮಿತಿಯನ್ನು ವಿಸ್ತರಿಸುವ ಪಣ ತೊಟ್ಟೆ. ನನಗೆ ಅದು ಅತಿ ಅವಶ್ಯಕವಾಗಿತ್ತು.
ಬಹುಷಃ ಅಂದು ತೊಟ್ಟ ಆ ಪಣವೇ ಈಗಲೂ ನಾವಿಬ್ಬರೂ ಜೊತೆಯಲ್ಲಿರಲು ಮುಖ್ಯ ಕಾರಣ. ಆಗಲೇ ಎರಡು ವರ್ಷವಾಯಿತು. ಜೋಯಿಸರ ಪ್ರಕಾರ ಆರು ತಿಂಗಳಿಗೆ ಸ್ಥಾನ ಪಲ್ಲಟ ಮಾಡಬೇಕಿದ್ದ ಗ್ರಹ ಇನ್ನೂ ಅಲ್ಲಾಡುತ್ತಿಲ್ಲ. ಅದೇ ಹಠ, ಅದೇ ಮೊಂಡು ವಾದ, ಅದೇ ಕೋಪ, ಅದೇ ದುಡುಕು. ಎಷ್ಟು ದಿನ ಸಹಿಸಬಲ್ಲೆನೋ? ಮೌನಿಯಾಗಿದ್ದೇನೆ. ನನ್ನೊಳಗೇ ನಾನು ಕಳೆದು ಹೋಗಿದ್ದೇನೆ. ಆ ಕಳೆದು ಹೋದ ನಾನು ಯಾರಿಗೂ ಬೇಡದವ. ಹಾಗಾಗಿ ಹುಡುಕುವ ಪ್ರಯತ್ನವೂ ನಡೆದಿಲ್ಲ.
“ಹಾತೊರೆವೆವು ನಾವು ನಮಗೇನೆ ಮತ್ತೆ ಸಿಗಲು…”ಎಂಬ ಯೋಗರಾಜ್ ಭಟ್ಟರ ಸಾಲುಗಳು ಪದೇ ಪದೇ ಕಾಡುತ್ತವೆ. ನಿಜ. ನಾನು ಕೂಡ ಅತಿಯಾಗಿ ಹಾತೊರೆಯುತ್ತಿದ್ದೇನೆ ನನಗೆ ನಾನೇ ನಾನಾಗಿ ಮತ್ತೆ ಸಿಗಲು.
ನಿಶಾಳಿಗೂ ಮೊದಲು ಬಂದ ಮೂರು ನೆಂಟಸ್ಥಿಕೆಗಳಲ್ಲಿನ ಮೂರೂ ಹುಡುಗಿಯರ ಬಳಿ ಒಮ್ಮೆ ಮಾತನಾಡಿದ್ದೆ, ಎಲ್ಲರೂ ಒಪ್ಪುವಂತಹ ಮನಸುಗಳೇ. ಒಂದಷ್ಟು ವಿಚಾರಸರಣಿಗಳು ಬೇರೆಯೇ ಆಗಿದ್ದರೂ, ಜೊತೆ ಬಾಳಲು ಬೇಕಾದ ತಾಳ್ಮೆ ಹಾಗೂ ಸಾತ್ವಿಕತೆ ಅವರಲ್ಲಿತ್ತು. ಆದರೇನು? ಜಾತಕ ಕೂಡಿ ಬರಲಿಲ್ಲ. ನಿಶಾ ಹಾಗೂ ನನ್ನದು ಅತ್ಯಂತ ಹೊಂದಿಕೊಳ್ಳುವ ಜಾತಕಗಳಂತೆ. ಆದರೆ ಮನಸುಗಳಲ್ಲೇ ಹೊಂದಾಣಿಕೆಯಿಲ್ಲ. ಹಾಗಾದರೆ ಜಾತಕಗಳ ಹೊಂದಾಣಿಕೆ ಎನ್ನುವುದರ ಅರ್ಥ ಏನು? ಜೊತೆಯಾಗಿ ಬಾಳಲು ಇರುವ ಮುಖ್ಯ ಅಗತ್ಯತೆಗಳ ಬಗ್ಗೆ ಗಮನವೇ ಕೊಡದೇ ನಡೆಸುವ ‘ಮದುವೆ’ಗಳಿಗೆ ಬಲಿಯಾಗುವ ಜೀವನಗಳಿಗೆ, ಕಣ್ಣೆದುರೇ ಕೈಜಾರುವ ಅಮೂಲ್ಯ ಕ್ಷಣಗಳಿಗೆ, ಹೊಣೆ ಯಾರು? ಹೀಗೆ ನೂರಾರು ಪ್ರಶ್ನೆಗಳು. ಕೇಳುವುದು ಯಾರಲ್ಲಿ? ಗೊತ್ತಿಲ್ಲ. ಆದರೂ ಕೆಲವರ ಬಳಿ ಕೇಳಿದೆ, ಏನೇನೋ ಅಸಂಬದ್ಧವಾಗಿ ಉತ್ತರಿಸುತ್ತಾರೆ. ಸಮರ್ಪಕ ಉತ್ತರ ಹೊಳೆಯದಿದ್ದಾಗ ಜೋಡಿಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎನ್ನುತ್ತಾರೆ. ಕಣ್ಣೆದುರೇ ಕಳೆದುಕೊಂಡ ನನ್ನ ಬದುಕು ನೋಡುವಾಗ ಅದು ಇದ್ದರೂ ಇರಬಹುದು ಅನಿಸುತ್ತದೆ. ಎಂದಾದರೂ ಒಮ್ಮೆ ಸ್ವರ್ಗಕ್ಕೆ ಹೋದಾಗ ಆ ಮ್ಯಾಚಿಂಗ್ ಸ್ಪೆಶಲಿಸ್ಟ್ ಬಳಿ ಹೇಳಿ ಬರಬೇಕು “ಜೋಡಿ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಮಾಡು ಮಾರಾಯಾ”ಅಂತ.
ಇಷ್ಟಾದರೂ ಅದೇನೋ ಸಣ್ಣ ಆಸೆ. ಸಣ್ಣ ಕನಸು. ಒಂದಷ್ಟು ನನಗಾಗಿ ಬದಲಾಗುತ್ತಾಳೇನೋ ನನ್ನ ನಿಶಾ ಎಂಬ ನನಗೇ ಅರಿಯದ ಕಾಲು ಕೆ.ಜಿ. ಪ್ರೀತಿ ಅವಳ ಮೇಲೆ. ‘ಮದುವೆ’ಎಂಬ ಬಂಧನದ ಚಂದ ಹಾಗೂ ಭಾರತೀಯ ಸಂಸ್ಕೃತಿ ಕಲಿಸುವ ಪಾಠವೇ ಅದು ಅನ್ನಿಸುತ್ತೆ. ಒಲ್ಲದ ಮನಸಿನ ಮೇಲೂ ನಿಲ್ಲದ ಪ್ರೀತಿ. “ಗೆಳತಿ, ನಿನ್ನಲ್ಲಿ ನನಗಿರುವುದೊಂದೇ ಪ್ರಶ್ನೆ,; ನಿನ್ನೆಲ್ಲ ಮೊಂಡುತನವನ್ನು ಸಹಿಸಿಯೂ ತೊರೆದು ಹೋಗಲಾರದೇ ಕುಳಿತ ಈ ಮನಸಿಗೋಸ್ಕರವಾದರೂ ನೀ ಒಂಚೂರು ಬದಲಾಗಲಾರೆಯಾ?”