ಕಥೆ ಕವಿತೆ

ಇಬ್ಬನಿಯಲಿ ಅವಳ ಕಂಡಾಗ..

ಅರೆ ಮಲೆನಾಡಿನ ಸುಂದರ ತಾಣವದು. ಸುತ್ತಲೂ ಹಸಿರು. ಹಸಿರಿನ ನಡುವೆ ಹಸಿರಾಗಿ ನಿಂತಿರುವ ಸುಂದರ ಬೆಟ್ಟ. ಬೆಟ್ಟದ ಮೇಲೂಂದು ದುರ್ಗಾಂಬಿಕೆಯ ಮಂದಿರ. ಬೆಳಗ್ಗೆ ಎದ್ದೊಡನೆ ಬೆಟ್ಟ ಏರಿದರೆ ಸಾಕು ಕವಿತೆ ಗೀಚಲು ಎಲ್ಲಿಲ್ಲದ ಹುಮ್ಮಸ್ಸು ಬರುತ್ತಿತ್ತು. ಸ್ವಲ್ಪ ಹೊತ್ತು ಆರೋಗ್ಯಕ್ಕಾಗಿ ಅಲ್ಲೇ ತಾಲೀಮು ನಡೆಸಿ ಆಮೇಲೆ ಕವಿತೆಯನ್ನು ಬರೆಯಲು ದಿಬ್ಬದ ಕಲ್ಲಿನ ಮೇಲೆ ಕುಳಿತೆ.  ಆಗ ತಾನೆ  ಅರುಣೋದಯದ ಪ್ರಥಮ ಕಿರಣಗಳು ಭೂಮಿಯನ್ನು ಸ್ಪರ್ಶಿಸುತ್ತಿದ್ದವು.

ಗೂಡು ಬಿಟ್ಟು ಹೊರ ಬರುತ್ತಿದ್ದ ಹಕ್ಕಿಗಳ ಕಲರವ ಇಂಚರ ಇಂಪಾಗಿ ಕೇಳುತ್ತಿತ್ತು. ಇದರ ಜೊತೆಗೆ ಇಬ್ಬನಿಗೆ ಮೈಯೊಡ್ಡಿ ನಿಂತ ಗಿಡ ಮರಗಳು. ಹಸಿರು ಹುಲ್ಲಿನ ಮೇಲೆ ಹೊಳೆಯುತ್ತಿರುವ ಮಂಜಿನ ಹನಿಗಳು, ನಿಧಾನವಾಗಿ ಅರಳುತ್ತಿರುವ ಹೂವುಗಳು, ಸೂರ್ಯನ ಹೊಂಗಿರಣಗಳೊಂದಿಗೆ ಸರಸವಾಡುತ್ತಿದ್ದ ಮೋಡಗಳು, ಇವಿಷ್ಟೇ ಸಾಕಾಗಿತ್ತು ನನ್ನ ಕವನಗಳಿಗೆ ಸ್ಪೂರ್ತಿ ತುಂಬಲು…

ಆದರೆ ಅವಳು ಎಲ್ಲಿಂದ ಬಂದಳೋ ತಿಳಿಯಲಿಲ್ಲ….
ಆಗ ತಾನೆ ಭೂಮಿಯನ್ನು ಸ್ಪರ್ಶಿಸಿದ್ದ ರವಿಯ ಹೊಂಗಿರಣಗಳೊಂದಿಗೆ ಮಿನುಗುತ್ತಾ ಅಪ್ಸರೆಯಂತೆ ನನ್ನ ಮುಂದೆ ಕಾಣಿಸಿಕೊಂಡಳು. ಒಂದು ಕ್ಷಣ ಕವಿತೆ ಗೀಚುವುದನ್ನು ನಿಲ್ಲಿಸಿದೆ. ಅವಳೇ ಕಾವ್ಯವಾಗಿ ನನ್ನ ಮುಂದೆ ಕಂಡಾಗ ಕವಿತೆಗೆ ಬೆಲೆಯೆಲ್ಲಿ..? ಅವಳ ಸೌಂದರ್ಯದ ಮುಂದೆ ನನ್ನ ಕವನದ ಸಾಲುಗಳೇ ಒಂದು ಕ್ಷಣ ಸ್ಥಬ್ಧವಾಗಿ ಹೋದವು. ಮುಂಜಾನೆಯ ತಂಗಾಳಿಯಲಿ ಹಾಯಾಗಿ ಹಾರುತ್ತಿರುವ ರೇಷಿಮೆಯಂತಹ ಕೂದಲುಗಳು ಅವಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡಿದ್ದವು. ತಿದ್ದಿ ತೀಡಿದ ಮೀನಿನಂತಹ ಸುಂದರ ಕಣ್ಣುಗಳು. ಬಳ್ಳಿಯಂತೆ ಬಳುಕುವ ಸಣ್ಣ ನಡು.

ಟ್ರ್ಯಾಕ್ ಸೂಟ್ ಹಾಕಿಕೊಂಡು ಮೇಲೊಂದು ಜಾಕೇಟ್ ಹೊದ್ದು ಮುಂಜಾನೆಯ ಆ ಮಂಜಿನಲ್ಲಿ ಮಿಂದು ಅವಳು ಜಾಗಿಂಗ್ ಮಾಡುತ್ತಿದ್ದ ಆ ಪರಿಯನ್ನು ಕಂಡ ಕೂಡಲೇ ಮೈ ಮನಗಳು ರೋಮಾಂಚನವಾದಂತಾಯಿತು. ಕೈಯಲ್ಲಿದ್ದ ಪೆನ್ನು ಪೇಪರ್ ಅಲ್ಲೇ ಪಕ್ಕದಲ್ಲಿ ಬಿಟ್ಟು ಆ ಚೆಲುವೆಯನ್ನು ಹಿಂಬಾಲಿಸ ತೊಡಗಿದೆ..

ಆಕೆಯನ್ನು ಹಿಂಬಾಲಿಸಿ ಇನ್ನು ಎರಡು ನಿಮಿಷವೂ ಆಗಿರಲಿಲ್ಲ..

“ಜೀ….ತೋಡಾ ಸುನೋ ಜೀ…. ಆಪ್ಸೆ ಕುಚ್ ಬಾತ್ ಕರ್ನಾ ಹೈ”

ನಾನು ಕೂಗಿ ಹೇಳಿದೆ.

“ರೀ ಯಾಕ್ರಿ… ನನ್ನ ಹಿಂದೆನೇ ಬರ್ತಾ ಇದಿರಾ….? ಹೋಗ್ರಿ ಎಲ್ಲಾದ್ರೂ.. ಒಂಟಿ ಹುಡುಗಿ ಸಿಕ್ಳು ಅಂತ ನಿಮ್ಮಂತಹ ಹುಡುಗರು ಹಿಂದೆನೇ ಬಂದ್ ಬಿಡ್ತಿರಾ..?”

ಆ ಹುಡುಗಿ ಓಡುವುದನ್ನು ನಿಲ್ಲಿಸಿ ಕನ್ನಡದಲ್ಲೇ ಹೇಳಿದಳು..
“ರೀ ನಿಮ್ಮ ಹತ್ರ ಸ್ವಲ್ಪ ಮಾತಾಡ್ ಬೇಕಿತ್ತು…..”
ನಾನು ಇನ್ನು ಮಾತು ಮುಗಿಸಿರಲಿಲ್ಲ
ಅಷ್ಟರಲ್ಲಿ ಅವಳು

“ಹುಡುಗಿ ಚನ್ನಾಗಿದಾಳೆ…. ಅಂತ ಏನಾದ್ರೂ ಹಿಂದೆ ಬಂದ್ರೆ ಮೈಯಲ್ಲಿರೋ ದೆವ್ವ ಬಿಡಿಸಿ ಬಿಡ್ತೀನಿ”

ಕೋಪದಿಂದ ಗುಡುಗಿದಳು.

ಏನೋ ಹೇಳಲು ಬಂದವನು ಅವಳ ಮಾತಿಗೆ ತಬ್ಬಿಬ್ಬಾಗಿ ಹೋದೆ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ..
“ಮುಂಜಾನೆ ಎದ್ದ ತಕ್ಷಣ ಸುಂದರ ವಾಗಿರೋದನ್ನೇ ನೋಡಬೇಕು ಅಂತ ಅಮ್ಮ ಹೇಳ್ತಾ ಇದ್ರೂ… ನೀವೂ ಸಹ ಸುಂದರವಾಗಿದ್ದೀರಲ್ಲ ಅದಕ್ಕೆ ಹಿಂಬಾಲಿಸಿದೆ. ಇವತ್ತು ಒಂದೊಳ್ಳೆ ಕೆಲಸಕ್ಕೆ ಮಾಡಬೇಕು ಅಂತ ಇದೀನಿ, ಮನಸ್ಸು ಖುಷಿ ಇದ್ರೆ ತಾನೆ ಯಶಸ್ಸು ಸಿಗೋದು.? ಅದರಲ್ಲೂ ಬೆಳ್ಳಂಬೆಳಗ್ಗೆ ನಿಮ್ಮಂತಹ ಸುಂದರ ಹುಡುಗಿ ದರ್ಶನವಾದರೆ ಮನಸ್ಸು ಸಂತೋಷದಿಂದ ಹಾರಾಡುತ್ತಿರುತ್ತದೆ… ಅಲ್ಲವೇ..?
ನಾನು ಸೌಮ್ಯವಾಗಿಯೇ ಹೇಳಿದೆ.
ಅವಳು ಕಣ್ಣು ಗುಡ್ಡೆಗಳನ್ನು ದೊಡ್ಡದಾಗಿಸಿಕೊಂಡು ಕೋಪದಿಂದ ನನ್ನತ್ತ ಕೆಕ್ಕರಿಸಿ ನೋಡುತ್ತಾ ಹೇಳಿದಳು
“ಹೇ…ಅಲ್ಲಾ….!!!!  ನಿಮಗೇನಾದ್ರೂ ಲೂಸಾ…..!!! ನೀವು ಖುಷಿಯಾಗಿರ್ಬೇಕು ಅಂತ ನನ್ನ ಫಾಲೋ ಮಾಡ್ತೀರಾ.. ನನ್ನನ್ನು ಬಿಟ್ಟು  ಸುಂದರವಾಗಿರೋ ಈ ಬೆಟ್ಟ, ಗುಡ್ಡ, ಈ ಹಸಿರಾಗಿರೋ ಭೂಮಿ , ಅದರ ಮೇಲೆ ಬಿದ್ದಿರೋ ಇಬ್ಬನಿ, ಇವನ್ನ ನೋಡ್ಕೊಂಡು ಬಿದ್ದಿರಿ. ಆಗ ನಿಮ್ಮ ಮನಸ್ಸು ಹಾಯಾಗಿರುತ್ತದೆ. ನನ್ನ ಹಿಂದೆ ಬಂದ್ರೆ ನಿನಗೆ ಹಿಡಿದಿರೋ ದೆವ್ವ ಬಿಡಿಸಿ ಬಿಡ್ತೀನಿ…. ಹುಷಾರ್…!!!

ಅವಳ ಮಾತು ಏರು ಧ್ವನಿಯಲ್ಲೇ ಇತ್ತು.

“ರೀ… ಏನ್ರೀ ಇದು ನಿಮ್ಮ ಮುಖ ಇಷ್ಟೊಂದು ಸುಂದರ…!! ಬಯ್ಯೋವಾಗಲೂ ನೀವು  ಎಷ್ಟು  ಸುಂದರವಾಗಿ ಕಾಣಿಸ್ತೀರಾ ಗೊತ್ತಾ….? ನಿಮ್ಮ ಆ ಕೋಪದ ಕಣ್ಣುಗಳು, ಬಯ್ಯುವಾಗ ಬಹು ಸುಂದರವಾಗಿ ಕಾಣುವ ಆ ನಾಸಿಕ. ಚಿಟ್ಟೆಯಂತೆ ಬಡಿಯುತ್ತಿರುವ ಕಣ್ಣು ರೆಪ್ಪೆಗಳು, ಮುದ್ದಾಗಿ ಕಾಣುತ್ತಿರುವ ತುಟಿಗಳು, ಮುಖದ ಮೇಲೆ ನೀವು ತೋರುತ್ತಿರುವ ಆ ಕೋಪದ ಭಾವನೆಗಳು. ತುಂಬಾ ಎಕ್ಸೆಲೆಂಟ್ ಕಣ್ರೀ…. ರೀ ಪ್ಲೀಸ್ ಸ್ವಲ್ಪ ಕೋಪಿಸ್ಕೊಂಡೇ ಇರ್ತಿರಾ….? ಇನ್ನೂ ಸ್ವಲ್ಪ ನೋಡಬೇಕು ಅಂತ ಅನಿಸುತ್ತಿದೆ”

ನಾನು ಪ್ರೀತಿಯಿಂದಲೇ ಹೇಳಿದೆ..

ಅವಳು ತಕ್ಷಣ ಕೋಪವನ್ನು ಕೃತಕವಾಗಿ ಸ್ವಲ್ಪ ಕಡಿಮೆ ಮಾಡಿಕೊಂಡು ನನ್ನತ್ತ ಕೊಂಕು ನೋಟ ಬೀರುತ್ತಾ ಮತ್ತೆ ಜಾಗಿಂಗ್ ಮುಂದುವರೆಸಿದಳು…
ಇಬ್ಬನಿ ತುಬಿರುವ ಪ್ರಕೃತಿಯ ಮಧ್ಯೆ ಆ ಹುಡುಗಿ ಜಾಗಿಂಗ್ ಮಾಡುತ್ತಿರುವುದನ್ನು ನೋಡಿದಾಗ ಮನಸು ಯಾಕೋ ಉಲ್ಲಾಸದಿಂದ ಕುಣಿಯಿತು. ಬೆಟ್ಟದ ತುಂಬಾ ಆವರಿಸಿರುವ ಆ ಮಂಜಿನ ನಡುವೆ ಅವಳ ಪಯಣಕ್ಕೆ ನಾನೂ ಜೊತೆಯಾಗಬೇಕು ಎಂದೆನಿಸಿತು. ಬಿಡಲಿಲ್ಲ ಮತ್ತೆ ಅವಳನ್ನು ಹಿಂಬಾಲಿಸಿದೆ. ಅವಳನ್ನು ಓವರ್ ಟ್ಯಾಕ್ ಮಾಡಿ ಜೊತೆಯಲ್ಲೇ ಓಡುವಂತೆ ವೇಗವನ್ನು ಹೆಚ್ಚಿಸಿಕೊಂಡೆ. ಅವಳು ನನ್ನತ್ತ ಗಮನಕೊಡದೆ ಮೌನವಾಗಿಯೇ ಓಟ ಆರಂಬಿಸಿದ್ದಳು. ಅವಳ ಮೌನ ತುಂಬಿದ ಮುಖ ಸೌಂದರ್ಯದಿಂದ ಶೋಭಿಸುತ್ತಿತ್ತು.

“ರೀ…. ಇಲ್ಲಾರೀೕ…. ನಾನು ಆಗ ಹೇಳಿದ್ದು ತಪ್ಪು, ಕೋಪದಲ್ಲಿರುವುದಕ್ಕಿಂತಲೂ ನೀವು ಮೌನವಾಗಿ ಇದ್ದಾಗಲೇ ತುಂಬಾ ಸುಂದರವಾಗಿ ಕಾಣಿಸುತ್ತೀರಿ. ಒಂಥರಾ… ಹಾಲಿನಲ್ಲಿ ಅದ್ದಿ ತೆಗೆದ ಗೊಂಬೆಯಂತೆ ಬಿಡ್ರಿ ನೀವು..”

ನನ್ನ ಮಾತು ಕೇಳಿದೊಡನೆ ಮತ್ತೆ ಜಾಗಿಂಗ್ ನಿಲ್ಲಿಸಿದಳು…
“ನಾನು ಯಾವಾಗ ಹೆಂಗಾದ್ರೂ ಕಾಣ್ತೀನಿ…ಅದನ್ನ ಕಟ್ಕೊಂಡು ನಿಮಗೇನಾಬೇಕ್ರಿ.. ನಿಮಗೇನೋ ಹುಚ್ಚು .. ಇನ್ನೊಂದು ಐದು ನಿಮಿಷ ಇರಿ ಸಾಕು. ಹಿಂದೆ ನಮ್ಮಣ್ಣನೂ ಸಹ ಜಾಗಿಂಗ್ ಮಾಡ್ತಾ ಬರ್ತಾ ಇದಾನೆ…. ನಿನಗೇನೋ ಇವತ್ತು ಗ್ರಹಚಾರ ಕಾದಿದೆ..”

“ರೀ…. ನಿಮ್ಮ ಅಣ್ಣ ಬರ್ತಾನೆ ಅಂದಾಕ್ಷಣ ನಾನು ಹೆದರ್ಕೊ ಬೇಕಾ… ?  ಸ್ವಲ್ಪ ಸೌಮ್ಯವಾಗಿ ಪ್ರೀತಿಯಿಂದ ಮಾತಾಡಿ ಸಾಕು, ನಾನೇ ಹೋಗ್ತೀನಿ…”

“ಆಯ್ತು ಮಹಾರಾಯ ನೀನಿನ್ನು ಇಲ್ಲಿಂದ ಹೋಗ್ಬಹುದು….ಸುಮ್ಮನೆ ಗಲಾಟೆ ಬೇಡ “

ಸೌಮ್ಯವಾಗಿ ಕೈ ಜೋಡಿಸಿ ಹೇಳಿದಳು
ಇನ್ನು ಅವಳನ್ನು ಸತಾಯಿಸಲು ಮನಸ್ಸಾಗಲಿಲ್ಲ.. ತಕ್ಷಣ ಅಲ್ಲಿಂದ ಹಿಂದಿರುಗಿ ಓಡಲಾರಂಬಿಸಿದೆ.

“ಮೂದೇವಿ… ಯಾವ್ದೋ.. ಕೋತಿಯಿದು, ಭಾಯಿ ಜಾನ್ ಹೆಸರು ಹೇಳಿದ ಕೂಡಲೇ, ಹೆಂಗೆ ಹೆದರ್ ಕೊಂಡು ಓಡ್ತಾ ಇದೆ ನೋಡು..”

ನನ್ನ ಕಿವಿಗೆ ಕೇಳುವಂತೆ ಗೊಣಗಿಕೊಂಡಳು ಆ ಹುಡುಗಿ. ನಾನು ಜಾಣ ಕಿವುಡನ್ನು ಪ್ರದರ್ಶಿಸಿ ಅಲ್ಲಿಂದ ಕಾಲ್ಕಿತ್ತೆನು…. ಸ್ವಲ್ಪ ದೂರ ನಿಂತು ಆ ಹುಡುಗಿಯನ್ನೇ ನೋಡುತ್ತಾ ನಿಂತೆ. ಅವಳು ಹಿಂದಿರುಗಿ ನೋಡದೇ ತನ್ನ ಓಟವನ್ನು ಮುಂದುವರೆಸಿದ್ದಳು. ಮುಂದೆ ಮುಂದೆ ಹೋಗುತ್ತಿದಂತೆ ಇಬ್ಬನಿಯ ವಾತಾವರಣದಲ್ಲಿ ಅವಳೂ ಸಹ ಆ ಮುಸುಕಿನಲ್ಲಿ  ಮುಸುಕಿ ಹೋದಳು…

ಮಾರನೆಯ ದಿನ….

ಅದೇ ಬೆಟ್ಟ, ಅದೇ ಹಸಿರು, ಅದೇ ಇಬ್ಬನಿ, ಅದೇ ಹಕ್ಕಿಗಳ ಇಂಚರ, ಮತ್ತದೇ ಸೂರ್ಯನ ಕಿರಣಗಳು ಭೂಮಿಯನ್ನು ಆಗ ತಾನೆ ಸ್ಪರ್ಶಿಸಲಾರಂಭಿಸಿದ್ದವು. ನೆನ್ನೆ ನಿಲ್ಲಿಸಿದ ಕವಿತೆಯನ್ನು ಮತ್ತೆ ಬರೆಯಲು ಲೇಖನಿಯನ್ನು ಹಿಡಿದು ಕುಳಿತೆ…

ಅರೆ ….!!! ಮತ್ತೆ ಅದೇ ಹುಡುಗಿ…ಇಬ್ಬನಿಯಲಿ ಓಡುತ್ತಾ ನನ್ನ ಕಡೆಗೇ ಬರುತ್ತಿದ್ದಳು.
ನಾನು ಕುಳಿತು ಬರೆಯುತ್ತಿದ್ದ ದಿಬ್ಬದ ಕಡೆಗ ನಡೆದು ಬಂದಳು. ಏನೂ ಮಾತನಾಡದೇ ನನ್ನನ್ನೇ ಗಮನಿಸುತ್ತಾ ನಿಂತಳು…
ನಾನು ಕಣ್ಣೆತ್ತಿ ಅವಳ ಕಡೆಗೆ ನೋಡಿದೆ.
ಮುಂಜಾನೆಯ ಆ ಇಬ್ಬನಿಯ ನಡುವೆ ಅವಳು ಸುಂದರ ಗೊಂಬೆಯಂತೆ ಕಂಗೊಳಿಸಿದಳು. ಮತ್ತದೇ ಟ್ರ್ಯಾಕ್ ಸೂಟ್ ಮೇಲೊಂದು ಜಾಕೆಟ್ ಹೊದ್ದಿದ್ದಳು. ಆದರೆ ಅದರ ಬಣ್ಣವೊಂದು ಬದಲಾಗಿತ್ತು.
ನಾನು ಅವಳ ಕಡೆ ನೋಡದೇ ಹಾಗೇ ತಲೆ ತಗ್ಗಿಸಿ ಅರ್ಧಕ್ಕೆ ನಿಲ್ಲಿಸಿದ್ದ ನಿನ್ನೆಯ ಕವಿತೆಯ ಸಾಲುಗಳನ್ನು ಬರೆಯಲಾರಂಭಿಸಿದೆ.
ಅವಳು ಅಲ್ಲಿಂದ ಕದಲಿಲ್ಲ. ತದೇಕ ಚಿತ್ತದಿಂದ ನನ್ನನ್ನೇ ನೋಡುತ್ತಿದ್ದಳು. ಮಾತಿಲ್ಲ, ಕತೆಯಿಲ್ಲ. ಗಾಳಿಯೊಂದಿಗೆ ಹಾರಾಡುತ್ತಿದ್ದ ತನ್ನ ತಲೆಗೂದಲನ್ನು ಸರಿಪಡಿಸಿಕೊಂಡಳು. ನನ್ನಿಂದ ಮತ್ತೇನನ್ನೋ ನಿರೀಕ್ಷಿಸುತ್ತಿರುವಂತೆ ಕಂಡಿತು.ಅವಳು ನಿಂತಲ್ಲಿಂದ ಸ್ವಲ್ಪವೂ ಕದಲಲದೇ, ಮಾತನಾಡದೇ ಮೌನವಾಗಿಯೇ ನಿಂತಿದ್ದಳು. ಹಾಗೆ ನಿಂತಿದ್ದ  ಅವಳನ್ನು ಮತ್ತೆ ಸತಾಯಿಸಬೇಕೆನಿಸಿತು.
ನಾನು ಮತ್ತೆ ಕವಿತೆ ಬರೆಯುವುದನ್ನು ನಿಲ್ಲಿಸಿದೆ. ನಾನೇ ಈ ಸ್ಥಳದಿಂದ ಬೇರೆಡೆಗೆ ಓಡಲು  ನಿರ್ಧರಿಸಿಕೊಂಡೆ, ಅವಳು ನನ್ನ ಹಿಂದಯೇ  ಹಿಂಬಾಲಿಸಿ ಬಂದರೆ ನನ್ನನ್ನು ಮೆಚ್ಚಿಕೊಂಡಿರುವಳೆಂದೇ ಅರ್ಥ. ಸುಂದರ ಶಿಲ್ಪ ಕಲಾಕೃತಿಯಂತೆ ನಿಂತಿರುವ ಅವಳೆಡೆಗೆ ಲಕ್ಷ್ಯವನ್ನು ಕೊಡದೇ ಬೆಟ್ಟದ ತುಂಬಾ ಆವರಿಸಿರುವ ಆ ಇಬ್ಬನಿಯನ್ನು ಭೇದಿಸಿಕೊಂಡು ನಾನು ಓಡಲಾರಂಭಿಸಿದೆ. ಅವಳೂ ಸಹ ನನ್ನ ಬೆನ್ನ ಹಿಂದೆಯೇ ಹಿಂಬಾಲಿಸುತ್ತಿದ್ದಳು.

“ರೀ… ಯಾಕೆ ನನ್ನ ಹಿಂಬಾಲಿಸುತ್ತಿದ್ದೀರಾ…?”
ನಾನು ಓಡುವುದನ್ನು ನಿಲ್ಲಿಸಿ ಕೇಳಿದೆ,

ಅದಕ್ಕೆ ಅವಳು…

“ಮುಂಜಾನೆಯ ಈ ವಾತಾವರಣದಲ್ಲಿ ಸುಂದರವಾಗಿರೋದನ್ನು ನೋಡಿದರೆ, ಒಳ್ಳೆಯವರ ಹತ್ತಿರ ಮಾತನಾಡಿದರೆ ಮನಸ್ಸು ದಿನ ಪೂರ್ತಿ ಉಲ್ಲಾಸ ವಾಗಿರುತ್ತದೆಯಂತೆ. ಹಾಗಂತ ಅಮ್ಮಿ ಜಾನ್ ಹೇಳ್ತಾ ಇದ್ರು”

ನಿನ್ನೆ ನಾನು ಹೇಳಿದ್ದ ನನ್ನದೇ ಡೈಲಾಗ್ ನನಗೇ ತಿರುಗಿಸಿ ಹೇಳಿದಳು..

“ಏನ್ರಿ…. ಇದು, ಇಷ್ಟೊಂದು ಬದಲಾವಣೆ, ಇದ್ದಕ್ಕಿದ್ದಂತೆ ನನ್ನ ಮೇಲೆ ಈ ರೀತಿಯಾಗಿ ಕರುಣೆ, ಪ್ರೀತಿ, ಮಮಕಾರ, ಒಟ್ಟಿಗೆ ಉಕ್ಕಿಬರುತ್ತಿದೆಯಲ್ಲಾ..? ನಿನ್ನೆ ದೆವ್ವ ಬಿಡಿಸುತ್ತೇನೆಂದು ಬೈದವರು ಈಗ ನೀವೇ ಬೇತಾಳದಂತೆ ಹಿಂದೆ ಬಿದ್ದಿದ್ದೀರಲ್ಲಾ…?”

ಅಂದೆ

ಅವಳು ಮೌನ ಮುರಿದಳು
“ಅದಕ್ಕೆ ಕಾರಣ ಏನೆಂದು ನಿಮಗೂ ಗೊತ್ತಿದೆಯಲ್ಲಾ…. ಕಲ್,  ಆಪ್ ಕ ದೋಸ್ತ್ ಇಮ್ರಾನ್ ಭಾಯಿ ಘರ್ ಆಯೇಥೆ… ಎಲ್ಲಾ ವಿಷಯಾನೂ ಹೇಳಿದ್ರು… ಅಷ್ಟಕ್ಕೂ ನಾನು ನಿಮ್ಮ ಹಿಂದೆ ಬಿದ್ದದ್ದು ನಿಮ್ಮನ್ನು ಕ್ಷಮೆ ಕೇಳಲೆಂದು ಅಷ್ಟೆ, ನಿನ್ನೆ ನಾನು ನಿಮ್ಮ ಪೂರ್ವಾಪರ ವಿಚಾರಿಸದೇ, ಏನೋ ಹೇಳಲು ಬಂದ ನಿಮ್ಮ ಮಾತನ್ನೂ ಕೇಳುವ ತಾಳ್ಮೆ ತೋರಲಿಲ್ಲ. ನಾನು ಹಾಗೆ ವರ್ತಿಸಿದ್ದು ನನಗೆ ತಪ್ಪೆಂದು ತಿಳಿಯಿತು. ನೀವು ನನ್ನನ್ನ ಒಪ್ಪಿದರೂ ಸಂತೋಷವೇ, ಹುಡುಗಿಯ ಗುಣ ಇಷ್ಟವಾಗಿಲ್ಲ ಎಂದು ತಿರಸ್ಕರಿಸಿದರೂ ಸರಿಯೆ.. ನಿಜವಾಗಿ ಹೇಳ್ತೀನಿ ಮೊನ್ನೆ ಭಾನುವಾರ ನನ್ನ ನೋಡೋಕೆ ಬಂದ ಗಂಡು ನೀವೇ ಅಂತ ನನಗೆ ಗೊತ್ತಿಲ್ಲ. ನನ್ನನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ ಅಪ್ಪ, ಅಜ್ಜಿ ಕಣ್ಣಮುಂದೆನೇ ಇರುವಾಗ,  ನಿಮ್ಮನ್ನು ಸರಿಯಾಗಿ ನೋಡಲು ಆಗಲಿಲ್ಲ. ಆ ದಿನ ಕಾಫಿ ಕೊಡುವಾಗ ನಿಮ್ಮನ್ನ ಒಂದೆರೆಡು ಸೆಕೆಂಡ್ ನೇರವಾಗಿ ನೋಡಿದ್ದು ಬಿಟ್ಟರೆ, ಮತ್ತೆ ನಿಮ್ಮನ್ನ ಎಲ್ಲರ ಮುಂದೆ ನೇರವಾಗಿ ನೋಡುವಂತಹ ಧೈರ್ಯ ನನಗೆ  ಬರಲಿಲ್ಲ. ಆದ್ದರಿಂದ ನಿಮ್ಮ ರೂಪವಾಗಲಿ, ಮುಖದ ಗುರುತಾಗಲಿ ನನ್ನ ಮೆದುಳಿನಲ್ಲಿ ರಿಜಿಸ್ಚರ್ ಆಗಲೇ ಇಲ್ಲ. ಇಲ್ಲದಿದ್ದರೆ ನಿನ್ನೆ ಬೆಳಗ್ಗೆ ನಾನು ಈ ರೀತಿ ವರ್ತಿಸುತ್ತಿರಲಿಲ್ಲ.”

ಆ ಹುಡುಗಿ ಸೌಮ್ಯವಾಗಿ ಹೇಳಿದಳು..

” ಇಲ್ಲ ನಿಮ್ಮದೇನು ತಪ್ಪಿಲ್ಲ. ತಪ್ಪೆಲ್ಲಾ ನನ್ನದು ಮತ್ತು ಈ ತರ್ಲೆ ಐಡಿಯಾ ಕೊಟ್ಟ ಇಮ್ರಾನ್ ನದು. ಪೊರ್ಕಿ ತರ ಹುಡುಗಿಯನ್ನು ಹಿಂಬಾಲಿಸಿದರೆ ಯಾರು ತಾನೆ  ಸುಮ್ಮನಿರದ್ದಾರು ಹೇಳಿ ..? ಅದು ಹಾಗೆ ಇರಲಿ  ನಿಮಗೆ ಗೊತ್ತಿರುವಂತೆ ನಾನೂ ಇಮ್ರಾನ್  ಬೆಂಗಳೂರಿನಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡೋದು. ಇಮ್ರಾನ್ ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದನು. ಅಷ್ಟೇ ಅಲ್ಲ ಇಮ್ರಾನ್  ನನಗೆ ಅತ್ತೆಯ ಮಗ, ನಿನಗೆ ದೊಡ್ಡಪ್ಪನ ಮಗ, ನನಗೆ ನನ್ನು ಮನೆಯಲ್ಲಿ  ಹುಡುಗಿ ನೋಡಲು ತಯಾರಿ ನಡೆಸಿದ್ದರು. ಇಮ್ರಾನ್ ಮನೆಗೆ ಬಂದಾಗ ನಿಮ್ಮ ಬಗ್ಗೆ ಹೇಳಿದ.  ಹುಡುಗಿ ಇಂಜಿನಿಯರಿಂಗ್ ಮುಗಿಸಿದ್ದಾಳೆ. ನೋಡಲು  ತುಂಬಾ ಸುಂದರವಾಗಿದ್ದಾಳೆ. ನಿನಗೆ ಜೋಡಿ ಸರಿ ಹೊಂದುತ್ತೆ, ನಿಮ್ಮ ಮನೆಗೆ ಸರಿಹೊಂದುತ್ತಾಳೆ ಅಂತ. ಹುಡುಗಿಯ ಮನೆಯವರು ತುಂಬಾ ಸಂಪ್ರದಾಯಸ್ಥರು ಒಂದು ಸಾರಿ ನಮ್ಮ ಹಳ್ಳಿಗೆ ಬಂದು ನೋಡಿಕೊಂಡು ಹೋಗಿ ಅಂತ ಮನೆಯವರನ್ನೆಲ್ಲಾ ಒಪ್ಪಿಸಿದ. ಅವನು ಹೇಳಿದಂತೆಯೇ ನಾನು ಕಂಪನಿಗೆ ಮೂರು ದಿನ ರಜೆ ಹಾಕಿ ನಿಮ್ಮನ್ನು ಈ ಭಾನುವಾರ ನೋಡಲು ಬಂದಿದ್ದು… ನಿಮ್ಮನ್ನ ನೋಡಿದ್ದು ಗೊತ್ತೇ ಇದೆಯಲ್ಲಾ….ರೀ ನಿಜ ಹೇಳಬೇಕೆಂದರೆ ನಿಮ್ಮನ್ನ ನೋಡಿದ ಆ ಕ್ಷಣದಿಂದಲೇ ನನಗೆ ನಗು ತಡೆಯಲಾಗಲಿಲ್ಲ….ಅಬ್ಬಾ……!!! ಎಂತಹ ಸನ್ನಿವೇಶವದು”

ಅಷ್ಟು ಹೇಳಿ ನಾನು ಗಹ ಗಹಿಸಿ ನಗಲಾರಂಭಿಸಿದೆ.

“ಜೀ.. .ಚುಪ್ ರಹೋ ಜಿ…ಯಾಕ್ರಿ ನಗ್ತಿರಾ….? ಏನಾಯ್ತು, ಸ್ವಲ್ಪ ನನಗೂ ಹೇಳಿ ನಕ್ಕು ಬಿಡಿ”

ನನ್ನ ನಗುವಿಗೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ ಆ ಹುಡುಗಿ ಕೇಳಿದಳು.

ಹಾಗೆ ಕೇಳುವಾಗ ಅವಳ ಸುಂದರ ಮುಖದಲ್ಲಿ ಮುಗ್ಧತೆ ಮತ್ತು ಕುತೂಹಲಗಳೆರಡೂ ಕಾಣಿಸಿತು.

“ನಗದೇ ಇನ್ನೇನ್ರಿ ಮತ್ತೆ…. ಆ ದಿನ ನಿಮಗೆ ಮೇಕಪ್ ಮಾಡಿದ್ದು ಯಾರ್..ರೀ   ಥೇಟ್ ಗೌರಮ್ಮನ ತರ ಕಾಣ್ತಾ ಇದ್ರಿ… ಕಣ್ಣಿಗೆ ದೊಡ್ಡದಾಗಿ ಕಾಜಲ್ ಹಚ್ಚಿಕೊಂಡು ಆಪ್ತಮಿತ್ರ ಚಿತ್ರದ ನಾಗವಲ್ಲಿ ತರ ಕಾಣ್ತಾ ಇದ್ರಿ. ಅಷ್ಟೆ ಅಲ್ಲದೇ ಸೀರೆ ಬೇರೆ ಉಟ್ಟಿದ್ರಿ, ಅದೂ ಮುಖ ಸರಿಯಾಗಿ ಕಾಣಿಸದಂತೆ ತಲೆಯ ತುಂಬಾ ಸೆರಗನ್ನು ಹೊದ್ದು, ನೀವು ಕಾಫಿ ಕೊಡಲು ಬಂದಾಗಲೇ ನನಗೆ ನಗು ತಡೆಯಲಾಗಲಿಲ್ಲ. ನಾನು ನಿಮ್ಮನ್ನ ಹಳ್ಳಿ ಗೌರಮ್ಮ ಅಂತ ಅನ್ಕೊಂಡಿದ್ದೆ, ಸೀರೆ ಉಟ್ಟಿದ್ದರಿಂದ ನೀವು ಆಂಟಿ ತರ ಬೇರೆ ಕಾಣ್ತಾ ಇದ್ರಿ, ನಿಮ್ಮ ಮುಖ ಸರಿಯಾಗಿ ಕಾಣ್ತಾನೂ ಇರಲಿಲ್ಲ. ಹಣೆಯಿಂದ ಕೆಳಗೆ ಕತ್ತಿನಿಂದ ಮೇಲಕ್ಕೆ ಅರ್ದಂಬರ್ಧ ಮುಖ ತೋರಿಸಿ ಅವಸರದಿಂದ ರೂಮ್ ಸೇರಿಕೊಂಡರೆ ಯಾವ್ ಹುಡುಗ ತಾನೆ ಮೆಚ್ಕೊತಾನೆ ಹೇಳಿ, ಅವತ್ತೇ ಸಂಜೆ ಹುಡುಗಿ ಇಷ್ಟ ಆಗಲಿಲ್ಲ ಅಂತ ನಾನು ಬೆಂಗಳೂರಿಗೆ ಹೊರಟಿದ್ದೆ. ಕೊನೆಗೆ ಇಮ್ರಾನ್  ನನ್ನನ್ನು ಬಲವಂತ ಮಾಡಿ ಉಳಿಸಿಕೊಂಡ, ಇನ್ನೊಂದು ಸಲ ಹುಡುಗಿ ನೋಡಿಬಿಡು ಇಷ್ಟವಾಗಲಿಲ್ಲ ಅಂದ್ರೂ ಪರವಾಯಿಲ್ಲ. ಆ ಹುಡುಗಿ ಪ್ರತಿದಿನ ಬೆಳಗ್ಗೆ ಬೆಟ್ಟದ ಕಡೆಗೆ ಜಾಗಿಂಗ್ ಹೋಗ್ತಾಳೆ. ನೀನೂ ಸಹ ಅಲ್ಲಿಗೆ ಹೋಗು, ಹುಡುಗಿ ಇಷ್ಟವಾದರೆ ಮಾತನಾಡಿಸು. ಹುಡುಗಿ ನಿನಗೆ ಖಂಡಿತ ಇಷ್ಟ ಆಗೇ ಆಗ್ತಾಳೆ ಅಂತ ಬಲವಂತ ಮಾಡಿ ನನ್ನನ್ನು ಕಳುಹಿಸಿದ …. ಮುಂದಿನದ್ದು ನಿಮಗೇ ಗೊತ್ತಿದೆಯಲ್ಲ”

ನಾನು ಎಲ್ಲವನ್ನು ವಿವರಿಸಿ ಹೇಳಿದೆ.

“ಅಚ್ಚಾ…!! ಯೇ ಸಬಿ ಇಮ್ರಾನ್ ಭಾಯಿಜಾನ್ ಕ ಪ್ಲಾನ್ ಹೈ….!!! ಉಸ್ ಕೊ ನಹಿ ಚೋಡುಂಗಿ… ರೀ ನಗ್ ಬೇಡ್ರಿ, ನನಗೂ ಆ ದಿನ ಹಾಗೆ ಕಾಣಿಸಬೇಕು ಅಂತ ಇರ್ಲಿಲ್ಲ, ನಮ್ಮಜ್ಜಿ ತುಂಬಾ ಸ್ಟ್ರಿಕ್ಟು, ತುಂಬಾ ಸಂಪ್ರದಾಯಸ್ಥೆ, ಹುಡುಗಿಯನ್ನು ನೇರವಾಗಿ ತೋರಿಸ್ಬೇಡಿ ಅಂತ ಅಬ್ಬಾ ಜಾನ್ ಗೆ ತಲೆ ತಿನ್ತಾ ಇದ್ಳು….. 1941 ರಲ್ಲಿ ನಮ್ಮಜ್ಜಿಗೆ ನೋಡೋಕೆ ನಮ್ಮ ತಾತ ಬಂದಾಗ ಅಜ್ಜಿ ಮುಖವನ್ನು ಕನ್ನಡಿಯಲ್ಲಿ ತೋರಿಸಿದ್ದರಂತೆ. ಅಬ್ಬಾ ಜಾನ್ ಕೂಡ ಅಷ್ಟೆ ಅಮ್ಮಿನ ಮೊದಲ ಸಲ ನೋಡಿದ್ದೂ ಕನ್ನಡಿಯಲ್ಲೇ ಅಂತೆ….ಹೀಗೆ ಸಂಪ್ರದಾಯ ಇರೋವಾಗ ನನ್ನನ್ನ ಹೇಗೆ ತೋರಿಸಿಯಾರು? ಹಾಗಿರುವಾಗ ಅಜ್ಜಿ ನನ್ನನ್ನೂ ಸಹ ನೇರವಾಗಿ ಹುಡುಗನಿಗೆ ತೋರಿಸಬೇಡಿ ಅಂತ ರಂಪ ತೆಗೆದಿದ್ದಳು. ಅಬ್ಬಾಜಾನ್ ಒಪ್ಪದಿದ್ದಾಗ “ಯಾ…ಅಲ್ಲಾ…!!! ಯೇ ಕ್ಯಾ ಜಮಾನಾ ಆಗಯಾ… ಆಜ್ ಕೆ ಲೋಗಾ ಬಡೋಂಕಾ ಬಾತ್ ಜರಾ ಭಿ ಸುನ್ತೆ ನಹೀ..” ಅಂತ ನಮ್ಮಜ್ಜಿ ಗೊಣಗುತ್ತಲೇ ಇದ್ದಳು. ನೀವು ಮನೆಗೆ ಬಂದಾಗ ಅಜ್ಜಿ ಮತ್ತೆ ಎಲ್ಲಿ ರಂಪ ತೆಗೆದಾಳು ಅಂತ, ಅಬ್ಬಾ ಜಾನ್ ನನಗೆ ಮುಖಕ್ಕೆ ಸೆರಗನ್ನು ಹೊದಿಸಿ ತೋರಿಸಿದ್ದು…ನಾನೇನು ಮಾಡೋಕಾಗುತ್ತೆ, ನಿಮ್ಮ ಪಟ್ಟಣದಂತೆ ಇಲ್ಲಿ ಇಲ್ಲ… ಹಳ್ಳಿ ಕಡೆ ಹಿಂಗೆನೇ…”

ಅಷ್ಟು ಹೇಳಿ ಮೌನವಾದಳು.

ಕಾಲ ಬದಲಾದಂತೆ ಧರ್ಮ, ಸಂಸ್ಕೃತಿ,  ಸಂಪ್ರದಾಯಗಳು ಸಡಿಲವಾಗುತ್ತಾ ಹೋಗುತ್ತವೆ. ಸಂಪ್ರದಾಯಿಕವಾಗಿ ತೋರಿಸಿದ ಹುಡುಗಿ ಇಷ್ಟವಾಗದೇ ಹೋದಳು. ಇಬ್ಬನಿಯಲ್ಲಿ ಸಹಜವಾಗಿ ಓಡಿ ಬಂದ ಹುಡುಗಿ ಮುದ್ದಾಗಿ ಕಂಡಳು. ಇಬ್ಬನಿಯಲಿ ಅವಳ ಕಂಡಾಗ ಖುಷಿಯಾಯಿತು. ಪ್ರಕೃತಿಯ ನಡುವೆ ಅವಳೂ ಸಹ ಸಹಜವಾಗಿ ಕಂಡಳು.

ಒಂದು ಕ್ಷಣ ಇಬ್ಬರೂ ಮೌನ…!!

ಬೆಳಗಿನ ಇಬ್ಬನಿ ಸುತ್ತಲೂ ಕವಿದಿತ್ತು.

“ಸರಿ … ಹೋಗುತ್ತೇನೆ, ಭಾಯಿಜಾನ್ ಬಂದು ಬಿಡಬಹುದು. ಎಂದು ಹೊರಡಳು ಸಿದ್ಧವಾದಳು.

ತಕ್ಷಣ ಅವಳ ಕೈ ಹಿಡಿದುಕೊಂಡೆ. ಕೈ ಬಿಡಿಸಿ ಕೊಳ್ಳಲು ಕೊಸರಾಡಿದಳು.

“ನಿಮ್ಮಣ್ಣ ಬರಲ್ಲ ಬಿಡಿ, ಬೆಟ್ಟದ ಕೆಳಗೆ ಇಮ್ರಾನ್ ಜೊತೆ ಇದ್ದಾನೆ. ಅವನು ಬೆಟ್ಟದ ಮೇಲೆ ಬರದಂತೆ ನಿಮ್ಮಣ್ಣನನ್ನು ಸರಿಯಾಗೇ ನಿಭಾಯಿಸುತ್ತಿದ್ದಾನೆ…”

ನಾನು ಆತ್ಮ ವಿಶ್ವಾಸದಿಂದ ಹೇಳಿದೆ.

“ಓಹೋ…. ಇದೆಲ್ಲಾ ನಿಮ್ಮಿಬ್ಬರ ತರ್ಲೆ ಪ್ಲಾನ್ ನ, ಯಾಕೋ ಭಾಯಿಜಾನ್ ನಿನ್ನೆ ನನ್ನ ಜೊತೆ ಜಾಗಿಂಗ್ ಬರಲಿಲ್ಲ ಅಂತ ಯೋಚಿಸುತ್ತಿದ್ದೆ. ಇವತ್ತೂ ಹೀಗೆ… ಎಲ್ಲಾ ಪ್ಲಾನ್ ಮಾಡೇ ಮಾಡಿದ್ದೀರಾ….ರೀ ನೀವು ತುಂಬಾ ಇದೀರಾ, ಹುಡುಗಿ ಪಟಾಯಿಸುವುದು ಹೇಗೆ ಅಂತ ನಿಮ್ಮಿಂದಲೇ ಕಲಿತು ಕೊಳ್ಳಬೇಕು…. ರಿ ಬಿಡ್ರಿ ಕೈಯನ್ನ…”

ಅವಳು,  ನನ್ನಿಂದ ಕೈ ಬಿಡಿಸಿಕೊಳ್ಳಲು ಪ್ರಯತ್ನಿಸಿದಳು..

“ರೀ ಮತ್ತೆ ನಾವು ಸುಮ್ನೆನಾ…. ನಿನ್ನೆ ಏನೋ ಗೊಣಗುತ್ತಾ ಇದ್ರಿ….. ಕೋತಿ ಮುಂಡೇದು ನಮ್ಮಣ್ಣನ ಹೆಸರು ಹೇಳಿದ ತಕ್ಷಣ ಹೇಗೆ ಹೆದರಿಕೊಂಡು ಹೋಗ್ತಾ ಇದೆ ಅಂತಿದ್ದೆ…. ಈಗ ಹೇಳಿ ನೋಡೋಣ….”

“ರೀ… ಬಿಡ್ರಿ ಹೋಗಬೇಕು..”

ಹೇಗೋ ಕೈ ಬಿಡಿಸಿಕೊಂಡು ಅಲ್ಲಿಂದ ಓಡಿ  ಹೋದಳು…

ಆ ಇಬ್ಬನಿಯ ನಡುವೆ ಅವಳು ಕಣ್ಮರೆಯಾಗುವವರೆಗೂ ನೋಡುತ್ತಲೇ ನಿಂತೆ… ಅವಳು ತಿರುಗಿ ತಿರುಗಿ ನೋಡುತ್ತಲೇ

ಓಡುತ್ತಿದ್ದಳು…. ಇಬ್ಬನಿಯ ತಂಗಾಳಿ ನನ್ನ  ಮನಸ್ಸನ್ನು ಇನ್ನಷ್ಟು ಆಹ್ಲಾದಗೊಳಿಸುತ್ತಿತ್ತು….


– ಪ್ರಕಾಶ್ ಎನ್ ಜಿಂಗಾಡೆ

prakash.jingade@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!