ಚಿಗುರುವುದನ್ನೇ ಮರೆತ
ಬೋಳುಮರ
ಹೂವು ಹಣ್ಣು ತಳೆದು
ಹಕ್ಕಿಗಳ ಹೊಟ್ಟೆ ತಣಿಸಿ
ಎಷ್ಟು ಯುಗವಾಯ್ತು
ಕಾದಿರುವೆ ಹಗಲಿರುಳು
ಬೇರುಗಳ ನೆನೆಸಿ ಜೀವ
-ವೂಡುವ ಹೊಸ ಮಳೆಗೆ
ಮೋಡಗಳ ಸುಳಿವೂ ಇಲ್ಲ
ಬಿರುಬಿಸಿಲು…
ಕಾದ ಮೊಳೆ ಕಿರಣಗಳ ಮೈಗೆಲ್ಲ
ಬಡಿವ ಕ್ರೂರಿ ಸೂರ್ಯ
ಒಳಗೋ-
ಗೆದ್ದಲು ಹಿಡಿದು ಪೂರಾ ಪೊಳ್ಳು
ತೋರಿಕೆಗೆ ಆಕಾರವಷ್ಟೇ ಉಳಿದು
ನನಗೆ ನಾನೇ ಹುಸಿ
ಚಿಗುರುವುದು ಹೇಗೆ
ನೆತ್ತಿಯಲ್ಲಿ ಹೂ ಅರಳೀತು ಹೇಗೆ
ಹುಸಿಹೋದ ಬೀಜದಿಂದ
ಹೂವರಳಿ ನಗುವುದು
ಹೇಗೆ… ಹೇಗೆ
• ಡಾ. ಗೋವಿಂದ ಹೆಗಡೆ