ಅದೊಂದು ದಿನ-
ಅಂದೂ ತೊಳೆದಿಟ್ಟ ಹಾಗೆ ಆಕಾಶ
ಅಥವಾ ಅಲ್ಲಿ ಇಲ್ಲಿ ಒಂದೆರಡು
ಖಬರುಗೇಡಿ ಮೋಡ
ಸುಮ್ಮನೆ ರೆಕ್ಕೆಯೂ ಅಲುಗದೆ ಹಾಗೆ
ಹಾಗೇ ತೇಲುವ ಹಕ್ಕಿ
ಅನುದಿನದ ಕಾಯಕದಲ್ಲಿ
ಆಕಳಿಸುವ ಮಂಕು ಸೂರ್ಯ
ಅಂದೂ-ಎಲೆ ಅಲುಗುತ್ತದೆ
ಹೂವು ದುಂಬಿಗಾಗಿ ಕಾದಿವೆ
ರೇಡಿಯೋದ ಸುಪ್ರಭಾತ, ವಾರ್ತೆಗಳೊಡನೆ
ಬೆಳಗಾಗಿದೆ
ರಸ್ತೆಗಳಲ್ಲಿ ಹೊಗೆ-ಧೂಳು
ಸಹನೆಗೆಟ್ಟ ಕರ್ಕಶ ಹಾರ್ನ್
ಸಿಗ್ನಲ್ ಹಾರಿ ಮೂತಿ ಜಜ್ಜಿಸಿಕೊಂಡ
ಕಾರು
ಅವಸರಗಳಿಗೆ ಪಕ್ಕಾದ ಮಂದೆ
ಹೀಗೆ ಹೀಗೆಲ್ಲ ತನ್ನ ಮೂರ್ಖ ಲಯದಲ್ಲಿ
ಚಲಿಸುವ ಜಗ
ಉರುಳಿಯೂ ಉರುಳದ ಹಾಗೆ-ದಿನ
ಅಂದು ಅವನಿರುವುದಿಲ್ಲ
ಯಮದೂತನಂಥ ಕರಿಯ ವಾಹನ
ನಿಧಾನವಾಗಿ ಚಲಿಸುತ್ತ…
ಪುರೋಹಿತರು ಮಂತ್ರ ತಂತ್ರಗಳ ಮೊಳ ಹಾಕಿ
ಜನ ತಮ್ಮ ಹಲವುಗಳ ಜೊತೆ ಇದನ್ನೂ
ಎಣಿಸಿ…
ಎಲ್ಲ ಹಾಗೆ ಹಾಗೇ ಜರುಗುತ್ತ ಇರುತ್ತ
ಮರೆಯುತ್ತ
ಕಲ್ಲೆದೆಯ ಅವಳು ಕರಗುವುದಿಲ್ಲ
ಕರಗಿದರೂ ಏನೀಗ
ಅವನಿರುವುದಿಲ್ಲ.
• ಡಾ.ಗೋವಿಂದ ಹೆಗಡೆ