ಸಿನಿಮಾ - ಕ್ರೀಡೆ

ಪುರುಷನ ಅಹಂಕಾರದ ಧಮನಕ್ಕೆ ಅವತರಿಸಿದವಳು “ಉರ್ವಿ”…..

ಒಳ್ಳೆಯ ಕಥೆ, ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳು, ನೋಡುತ್ತಲೇ ಇದ್ದು  ಬಿಡೋಣ ಎನ್ನಿಸುವ ಕಲಾವಿದರ ನೈಜ ಅಭಿನಯ….ಅಬ್ಬ!!! ನಾನು ಕಳೆದ ಒಂದು ವಾರದ ಹಿಂದಿನಿಂದಲೇ ಈ ಉರ್ವಿಗಾಗಿ ಕಾದು ಕುಳಿತಿದ್ದೆ. ವಿಪರೀತ ನಿರೀಕ್ಷೆ ನನ್ನನ್ನು “ಉರ್ವಿ” ಗೆ ಅಣಿಗೊಳಿಸಿತ್ತು. ಎಲ್ಲಾ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಲೇ ಇದ್ದೆ. ಪ್ರದೀಪ್ ವರ್ಮ ಎಂಬ ನಿರ್ದೇಶಕನ ಮಾತುಗಳು ಉರ್ವಿಯ ಮೇಲಿನ ನಿರೀಕ್ಷೆಯ ಇನ್ನೂ ಹೆಚ್ಚಿಸಿತ್ತು. ಎಲ್ಲಕ್ಕೂ ಕೊನೆ ಹಾಡೋಣ ಎಂದು ಉರ್ವಿಯ ನೋಡಿ ಬಂದೆ. ಈಗ ಅದರ ಬಗ್ಗೆ ಏನಾದರೂ ಬರೆಯೋಣ ಎನ್ನಿಸುತ್ತಿದೆ. ನನ್ನನ್ನು ವಿಪರೀತ ಆವರಿಸಿದ ಸಿನಿಮಾಗಳ ಬಗ್ಗೆ ಚೂರೂ ಬರೆಯದಿದ್ದರೆ ಅದಕ್ಕಾಗಿ ಕಷ್ಟಪಟ್ಟವರಿಗೆ ಗೌರವ ಸಲ್ಲಿಸಿದಂತಾಗುವುದಿಲ್ಲ. ಇಡೀ ಉರ್ವಿಯ ಕಟ್ಟಿದ ಕರ್ತೃ ಪ್ರದೀಪ ವರ್ಮಾ ನಿಜಕ್ಕೂ ಅತಿದೊಡ್ಡ ಪ್ರಶಂಸೆಗೆ ಅರ್ಹರು.

“ಉರ್ವಿ”…ಇದು ಸತ್ತು ಹೋಗುತ್ತಿರುವ ಮಾನವತೆಯ ಬಡಿದೆಬ್ಬಿಸುವ ಚಲನಚಿತ್ರ. ಪುರುಷನ ವ್ಯವಸ್ಥಿತ ಸಂಚನ್ನು ಕೂಡ ಒಂದು ಹಂತದವರೆಗೆ ಸಹಿಸಿಕೊಂಡ ಹೆಣ್ಣು ಅಹಂಕಾರದ ತುತ್ತತುದಿಯಲ್ಲಿ ಮೆರೆದಾಡುತ್ತಿರುವ ಮಾನವನ ದಮನಕ್ಕೆ ತೊಟ್ಟ ರೂಪವೇ “ಉರ್ವಿ”. ಇಡೀ ಸಿನಿಮಾವನ್ನು ಆವರಿಸುವುದು ಆಶಾ(ಶ್ರತಿ ಹರಿಹರನ್) ಡೈಸಿ( ಶ್ವೇತಾ ಪಂಡಿತ, ಸೂಝಿ(ಶ್ರದ್ಧಾ ಶ್ರೀನಾಥ್) ಮತ್ತು ದೇವರಗುಂಡ( ಅಚ್ಯತ್ ಕುಮಾರ್). ಇವರಷ್ಟೇ ಅಲ್ಲದೇ ಬಂದು ಹೋಗುವ ಕೆಲವೇ ಕೆಲವು ಪಾತ್ರಗಳೂ ಕೂಡ ನೆನಪಿನಲ್ಲಿರುವಂತದ್ದೇ. ಹೆಣ್ಣುಬಾಕ ದೇವರಗುಂಡನ ಕಣ್ಣಿಗೆ ಬೀಳುವ ಹೆಣ್ಣುಮಕ್ಕಳೆಲ್ಲ ಸೇರುತ್ತಿದ್ದುದು ವೇಶ್ಯವಾಟಿಕೆಯ ಮಹಾಕೂಪಕ್ಕಾಗಿರುತ್ತದೆ. ಆತನಿಗೆ ಜೊತೆಯಾಗಿ ನಿಂತು ಕ್ರೂರವಾಗಿ ಮೆರೆದಾಡುವ ರಾಕ್ಷಸಿಯಂತ ಹೆಣ್ಣು ಬೋಬ್ಬಿ. ಕಪ್ಪು ಕತ್ತಲೆಯ ಕೂಪದಲಿ ನರಳಾಡುತ್ತಿದ್ದ ಹೆಣ್ಣುಮಕ್ಕಳ ಹೋರಾಟಕ್ಕೆ ಜಯ ದೊರಕುವುದೆ ಎಂಬುದೇ ಕಥೆ.

ಅನಾಥೆಯಾಗಿದ್ದ ಆಶಾಳನ್ನು ನೋಡಿದ ದೇವರಗುಂಡ ಅವಳನ್ನು ಕೂಡ ವೇಶ್ಯಾವಾಟಿಕೆಗೆ ವ್ಯವಸ್ಥಿತವಾಗಿ ತಳ್ಳುತ್ತಾನೆ. ಆದರೆ ಹೋರಾಟದ ಮನೋಭಾವದ ಆಶಾ ಆತನ ಕಪಿಮುಷ್ಠಿಯಿಂದಾಚೆ ಬರುತ್ತಾಳಾ ಎನ್ನುವುದುನ್ನು ನೀವು ಸಿನಿಮಾ ಪರದೆಯ ಮೇಲೆ ನೋಡಿದರೇನೇ ಚಂದ. ಆಶಾ ಪಾತ್ರದಲ್ಲಿ ಶ್ರತಿ ನಿಮ್ಮನ್ನು ವಿಪರೀತ ಆವರಿಸುತ್ತಾಳೆ. ಆ ನೈಜ ನಟನೆಯ ಅನುಭವಿಸದರೇ ಖುಷಿ. ಶ್ರತಿ ಅವರ ಅಭಿನಯದ ಬಗ್ಗೆ ಮತ್ತೇನೂ ಹೇಳದೇ “ಅದ್ಭುತ” ಮನೋಜ್ಞವಾದ ಅಭಿನಯ ಎನ್ನಬಹುದು. ಇನ್ನು ರೂಝಿಯಾಗಿ ಅಭಿನಯಿಸಿರುವ ಶ್ರದ್ಧಾ ಕೂಡ ತನ್ನ ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಮಾಡಿದ್ದಾರೆ. ಅವರ ಆ ಚಂದದ ಧ್ವನಿಯೇ ಅವರ ಸೌಂದರ್ಯಕ್ಕೆ ಇನ್ನೂ ಹೆಚ್ಚಿನ ಜೀವ ತುಂಬುತ್ತದೆ. ತುಂಬಾ ದಿನಗಳ  ನಂತರ ತೆರೆಯ ಮೇಲೆ ಕಾಣಿಸಿಕೊಂಡ ಶ್ವೇತಾ ಪಂಡಿತ ತಾನು ಅಭಿನಯದಲ್ಲಿ “ಪಂಡಿತೆ” ಎನ್ನುವುದನ್ನು ಮತ್ತೆ ಸಾಧಿಸಿ ತೋರಿಸಿದ್ದಾರೆ. ಜೊತೆಗೆ ಇನ್ನೊಂದು ಮುಖ್ಯ ವಿಷಯ ಅಂದರೆ ಅವರು ಈ ಚಲನಚಿತ್ರದ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿರುವುದು. ಶ್ವೇತಾ ಮುಂದೊಂದು ದಿನ ಕನ್ನಡದ ನಿರ್ದೇಶಕಿಯಾಗುವ ತಯಾರಿಯಾ ಇದು ಎನ್ನುವುದು ನನ್ನ ಕಾಡಿದ ಪ್ರಶ್ನೆ. ಇನ್ನುಳಿದಂತೆ ಅಚ್ಯತ್ ಕುಮಾರ್ ಎಂಬ ಅಸಾಧಾರಣ ನಟನ ಪರಕಾಯ ಪ್ರವೇಶ. ಈ ಪಾತ್ರವನ್ನು ಅಚ್ಯುತ್ ಕುಮಾರ್ ಬಿಟ್ಟು ಬೇರೆ ಯಾರು ಮಾಡಿದರೂ ಅದು ಒಪ್ಪುತ್ತಿರಲಿಲ್ಲ. ಪುರುಷನ ಕರಾಳ ಮುಖದ ಅನಾವರಣವನ್ನು ನಿರ್ದೇಶಕರು ಅದ್ಭುತವಾಗಿ “ದೇವರಕುಂಡ” ನ ಪಾತ್ರದಲ್ಲಿ ಮಾಡಿಸಿದ್ದಾರೆ.

ಇನ್ನು ತಾಂತ್ರಿಕ ವರ್ಗದ ಬಗ್ಗೆ ಮಾತನಾಡುವುದಾದರೆ ನಿರ್ದೇಶಕರಿಗೆ ಅತಿ ಹೆಚ್ಚಿನ ಅಂಕವನ್ನು ನೀಡಬಹುದು. ಕಾರಣ ನಿರ್ದೇಶನದ ಜೊತೆ ಅವರ ಅದ್ಭುತವಾದ ಕಥೆ ಮತ್ತು ಚಿತ್ರಕಥೆ. ಇಲ್ಲಿ ಪ್ರದೀಪ್ ವರ್ಮ ಗೆದ್ದಿದ್ದಾರೆ. ಇನ್ನು ನನಗಿಷ್ಟವಾದದ್ದು ಮನೋಜ್ ಜಾರ್ಜ್ ಎಂಬ ಹೊಸ ಪ್ರತಿಭೆಯ ಹಿತವಾದ ಸಂಗೀತ. ಸದಾ ಗುನುಗುತ್ತಿರುವಂತೆ ಮಾಡುವ ಹಾಡನ್ನು ಕೊಡುವಲ್ಲಿ ಮನೋಜ್ ತುಂಬಾನೇ ಯಶಸ್ವಿಯಾಗಿದ್ದಾರೆ. ಚಿತ್ರಮ್ಮ ಹಾಡಿರುವ “ಕಣ್ಣ ಹನಿ” ಹಾಡು ಸದಾ ಮನಸಿನಲ್ಲಿ ಜೀವಂತವಾಗಿರುವಂತದ್ದು. ಛಾಯಾಗ್ರಾಹಕ ಆನಂದ ಸುಂದರೇಶ ತಮ್ಮ ಕೆಲಸಕ್ಕೆ ಗೌರವ ಸಲ್ಲಿಸಿದ್ದಾರೆ.

ಉರ್ವಿಯಲ್ಲಿ ಪ್ರೀತಿಯಿದೆ, ನೆನಪಿನ ಸಿಹಿಯಾದ ಬುತ್ತಿಯಿದೆ, ಮನುಷ್ಯನ ನಾನಾ ಮುಖಗಳ ವಿಸ್ತೃತ ಚಿತ್ರಣವಿದೆ, ಹೋರಾಟದ ಅಮೋಘತೆಯಿದೆ, ಅವಳ  ತಾಳ್ಮೆ ಮತ್ತು ನಂಬಿಕೆಗೆ ಭಂಗವಾದಾಗ ಅವಳೇ ಸೃಷ್ಟಿಸಿದ ಈ ಪ್ರಕೃತಿಯ ಸರಿ ಮಾಡಲು ಕೂಡ ಅವಳಿಂದ ಸಾಧ್ಯ ಎಂಬ ಅದ್ಭುತವಾದ ಸಂದೇಶವಿದೆ.

ಕನ್ನಡದಲ್ಲಿ ಇಂತಹ ಚಲನಚಿತ್ರಗಳು ಇನ್ನೂ ಬರಲಿ. ಪ್ರದೀಪ್ ವರ್ಮ  ಒಳ್ಳೊಳ್ಳೆಯ ಚಲನಚಿತ್ರವನ್ನು ಮಾಡುತ್ತಲೇ ಇರಲಿ ಎಂಬುದೇ ನನ್ನಾಸೆ. ಕನ್ನಡಿಗರು ನೀವು ಈ ಚಲನಚಿತ್ರವ ನೋಡಿ ಬೆಳೆಸಿದರೆ ಒಳ್ಳೆಯ ಚಿತ್ರವೊಂದು ಯಶಸ್ವಿಯಾಗುತ್ತದೆ. ನೋಡಿ..

Don’t miss URVI

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!