ಕಥೆ

ಪಾರಿ ಭಾಗ-೯

ಪಾರಿ ಸಿಕ್ಕ ಸುದ್ದಿಯನ್ನು ಯಲ್ಲಪ್ಪನಿಂದ ತಿಳಿದ ಸುಬ್ಬಣ್ಣನವರಿಗೆ ಸಮಾಧಾನವಾಗಿತ್ತು. ಪಾರಿ ಯಲ್ಲಪ್ಪನ ಹತ್ತಿರ ಎಲ್ಲ ಗೋಳು ಹೇಳಿಕೊಂಡು ಅತ್ತಿದ್ದಳು.ಅವಳಿಗೆ ತಿಳಿಹೇಳಿದ ಯಲ್ಲಪ್ಪ “ನೀ ಸ್ವಲ್ಪ ದಿವ್ಸ್ ಊರಿನ್ ಸುದ್ದಿ ಮರ್ತು ಬಿಡು..ಆಮ್ಯಾಲ ನೋಡುನಂತ..ನೀ ಈಗ ಮತ್ತ ಊರ್ಗೆ ಹೋದ್ರ ಇಲ್ಲದ್ ಪ್ರಶ್ನೆ ಕೇಳಿ ನಿನ್ ತೆಲೆ ಹಾಳ್ ಮಾಡ್ತಾರ..ಮತ್ತ ನಿನ್ ಬದಕಾಕ ಬಿಡಂಗಿಲ್ಲ..ನೀ ಏನೂ ಹೆದರ್ಬ್ಯಾಡ..ನಾ ಅದಿನಿ..” ಎಂದು ಅವಳಿಗೆ ಧೈರ್ಯ ತುಂಬಿ ಪಾರಿಯನ್ನು ತನ್ನ ಮನೆಯಿಂದ ಅನತಿ ದೂರದಲ್ಲಿರುವ ಲೇಡಿಸ್ ಹಾಸ್ಟೇಲಿಗೆ ಸೇರಿಸಿ ಅಗತ್ಯ ಬಟ್ಟೆ,ವಸ್ತುಗಳನ್ನು ತಂದುಕೊಟ್ಟಿದ್ದ..

  ಮಲ್ಲವ್ವ ಎರಡು ದಿನಗಳಲ್ಲಿ ಚೇತರಿಸಿದಂತೆ ಕಂಡಳು. ಆಸ್ಪತ್ರೆಯ ಬಿಲ್ ಐವತ್ತು ಸಾವಿರ ರೂಪಾಯಿಗಳಾಗಿತ್ತು. ದುರುಗಪ್ಪನಿಗೆ ಏನೊಂದೂ ತಿಳಿಯದಾಗಿತ್ತು.ಮಲ್ಲಪ್ಪಗೌಡರು ಬೇಕಂತಲೇ ಮಲ್ಲವ್ವಳನ್ನು ದೊಡ್ಡ ಆಸ್ಪತ್ರೆಗೆ ಸೇರಿಸಿದ್ದ ಉದ್ದೇಶ ಇದೇ ಆಗಿತ್ತು…! ಡಿಸ್’ಚಾರ್ಜ್ ಮಾಡಿಸಿಕೊಂಡು ಹೋಗಲು ಮಲ್ಲಪ್ಪಗೌಡರೇ ಬಂದಿದ್ದರು.ಐವತ್ತು ಸಾವಿರ ರೂಪಾಯಿಗಳನ್ನು ಅವನ ಕೈಗೆ ಕೊಟ್ಟು ಬಿಲ್ ಕಟ್ಟಲು ಹೇಳಿದರು.ಊರು ತಲುಪಿದ ನಂತರ ಸಂಜೆ ಮನೆ ಕಡೆ ಬಾ ಎಂದು ಹೇಳಿದ ಮಲ್ಲಪ್ಪಗೌಡರು ತಮ್ಮ ಜಾಣತನಕ್ಕೆ ತಾವೇ ಬೀಗಿದರು..

  ಮೋಸವರಿಯದ ದುರುಗಪ್ಪ ಮಲ್ಲಪ್ಪಗೌಡರ‌‌ ಮನೆಗೆ ಬಂದಾಗ “ನೋಡ ದುರುಗಪ್ಪಾ ಪಾರೀ ಎಲ್ಲೆ ಹೋದ್ಲೋ ಗೊತ್ತಿಲ್ಲ..ಆಕಿ ನಿನ್ ಮನಿಗೆ ಬಂದಿದ್ರ ಏನರ ಮಾಡ್ಬಹುದಿತ್ತು.ಹಿಂಗ್ ಹೇಳ್ದ ಕೇಳ್ದ ಓಡಿ ಹೋದ್ರ ಯಾರ್ ಮನಿ ಸೇರಸ್ತಾರ ನೀನ ಹೇಳು..? ನೀ ಈಗ ಅವ್ರಿವ್ರ‌ ಮಾತ್ ಕೇಳಿ ಸುಮ್ನ ಪೋಲಿಸ್ ಕಂಪ್ಲೆಂಟ್ ಕೊಡಾಕ ಹೋಗಬ್ಯಾಡ.ಸುಮ್ನ ಓಡಾಡಿಸ್ತಾರ.ಮತ್ತ ಕೋರ್ಟು- ಕೇಸು ಅಂತ ನಿನ್ ಕಡಿಂದ ಓಡಾಡಾಕ ಆಕೈತೇನು? ರೊಕ್ಕ ಇಲ್ದ ಏನ್ ಕೆಲ್ಸಾನೂ ಆಗಂಗಿಲ್ಲ..ಮತ್ತ ಮಲ್ಲವ್ವನ ದವಾಖಾನಿ ಬಿಲ್ ಐವತ್ತ ಸಾವ್ರ ಶಾಂತಸ್ವಾಮೇರ ನನ್ ಕೈಯಾಗ ಕೊಟ್ಟಿದ್ದು..ಇನ್ನೂ ಒಂದ್ ಲಕ್ಷ ಅವ್ರ ಕಡಿಂದ ಕೊಡಸ್ತನಿ..ಪಾರಿ ಮುಂದ ಮತ್ತ ಏನರ ಹೊಳ್ಳಿ ಬಂದ್ಲು ಅಂದ್ರ ಅಕಿಗೊಂದ್ ಏನರ ದಾರಿ ಮಾಡಿದ್ರಾತು..ನೀ ಪಾರೀ ಚಿಂತಿ ಬಿಡು..ಮಲ್ಲವ್ವ ಆರಾಮಿಲ್ದಾಕಿ..ಮತ್ತ ಏನರ ರೊಕ್ಕದ್ ಹರ್ಕತ್ತಿದ್ರ ನಾ ಸ್ವಾಮೇರ ಕಡಿಂದ ಕೊಡಸ್ತನಿ..ನೀ ಏನೂ ಗೊತ್ತಿಲ್ದವನಂಗ ಉಳ್ಕಾ..ಎಲ್ಲಾ ನಾ ಬರೋಬ್ಬರಿ ಮಾಡ್ತನಿ..” ಅಂದ ಗೌಡರೊಳಗೆ ಪಂಚಾಯ್ತಿ ಮೇಂಬರ್ ಬಸಣ್ಣ ದುರುಗಪ್ಪನ ಕೈಯಿಂದ ಕಂಪ್ಲೆಂಟ್ ಕೊಡಿಸಿಬಿಟ್ಟರೆ ಮುಂದಾಗುವ ಪರಿಸ್ಥಿತಿಯ ಅರಿವಿತ್ತು.ದುರುಗಪ್ಪ‌ ಒಪ್ಪಿದಂತೆ ತಲೆಯಾಡಿಸಿದ್ದನ್ನು ಕಂಡು ಮಲ್ಲಪ್ಪಗೌಡರು ಖುಷಿಯಾದರು.ಮರುದಿನವೇ ಶಾಂತಸ್ವಾಮಿಯವರು ಬ್ಯಾಂಕಿನಲ್ಲಿದ್ದ ಒಂದು ಲಕ್ಷ ರೂಪಾಯಿಗಳನ್ನು ತಂದು ದುರುಗಪ್ಪನ ಕೈಗೆ ಹಾಕಿದರು.ಪಂಚಾಯ್ತಿ ಮೇಂಬರ್ ಬಸಣ್ಣ ದುರುಗಪ್ಪನಿಗೆ ಪೋಲಿಸ್ ಕಂಪ್ಲೆಂಟ್ ಕೊಡಲು ಒತ್ತಾಯಿಸಿದನಾದರೂ ದುರುಗಪ್ಪ ಒಪ್ಪಲಿಲ್ಲ.ಮಲ್ಲಪ್ಪಗೌಡರ ಜಾಣತನ ಕೆಲಸ ಮಾಡಿತ್ತು..ಪಾರಿಯ ವಿಷಯ ತಣ್ಣಗಾಯಿತು.!

  ಗೌರಮ್ಮನ ಒಗ್ಗರಣೆಯೂ ತುಸು ಕೆಲಸ ಮಾಡಿದಂತೆ ಕಂಡಿತು..”ಅಯ್ಯ ಪಾಪಾ…ಪಾರೀ ಹೆಣ ರೇಲ್ವೆ ಹಳ್ಯಾಗ ಬಿದ್ದಿತಂತ…! ದ್ಯಾಮವ್ವನ ಗುಡಿ ಮುಂದ ಜನ ಗುಸುಗುಸು ಅಂತಿದ್ರಂತ..ಹೆಣ ಮನಿಗೆ ತಂದ್ರ ಮಲ್ಲವ್ವಗ ಮದ್ಲ ಅರಾಮಿಲ್ಲ..ಮತ್ತ ಏನರ ಆದೀತಂತ ಗೌಡ್ರು ದುರುಗಪ್ಪನ್ ಕರ್ಕಂಡು ಹೋಗಿ ದವಾಖಾನ್ಯಾಗ ಅದೇನ ಮಾಡ್ತಾರಂತಲ್ಲ ಅದ್ನ ಮಾಡ್ಸಿ ಅಲ್ಲೇ ಎಲ್ಲಾ ಕಾರ್ಯ ಮಾಡಿ ಬಂದ್ರಂತ..ಮತ್ತ ದುರುಗಪ್ಪಗ ಸ್ವಾಮೇರ ಕಡಿಂದ ಮೂರು ಲಕ್ಷ ರೂಪಾಯಿ ರೊಕ್ಕಾ ಕೊಡ್ಸ್ಯಾರಂತ..ರೊಕ್ಕ ಇದ್ದವ್ರದವಾ ಎಲ್ಲಾ ಕಾಲ…!!” ಎಂದು ಬಂದ ಬಂದ ಹೆಂಗಸರ ಹತ್ತಿರ ಮಾತನಾಡುತ್ತ ಬದುಕಿದ್ದ ಪಾರಿಯನ್ನು ಸಾಯಿಸಿಬಿಟ್ಟಿದ್ದಳು ಗೌರಮ್ಮ…ಅಂತೂ ಪಾರಿ ತನ್ನ ಹಳ್ಳಿಯವರ ಪಾಲಿಗೆ ಸತ್ತು ಹೋಗಿದ್ದಳು..!! ದುರುಗಪ್ಪ ಒಳಗೊಳಗೆ ಕೊರಗಿದ್ದ.ಮಲ್ಲಪ್ಪಗೌಡರದೇ ಏನೋ ಕುತಂತ್ರವಿರಬೇಕು ಅನ್ನಿಸಿದರೂ ಅಷ್ಟೊಂದು ಸಹಾಯ ಮಾಡಿದ ಮಲ್ಲಪ್ಪಗೌಡರ ಬಗ್ಗೆ ಹಾಗಂದುಕೊಳ್ಳಲು ದುರುಗಪ್ಪನ ಮನಸ್ಸು ಒಪ್ಪಲಿಲ್ಲ.ಅಂತೂ ಗೋಡೆಯ ಮೇಲೆ ಪಾರಿಯ ಫೋಟೊವೊಂದು ಹಾರ ಹಾಕಿಸಿಕೊಂಡು ರೋದಿಸುವಂತೆ ಕಾಣುತ್ತಿತ್ತು..! ಏನೂ ಅರಿಯದ ಮಲ್ಲವ್ವ ಮಗಳು ಸತ್ತು ಹೋದಳೆಂದೇ ತಿಳಿದು ಮಗಳ ಭಾವಚಿತ್ರದ ಮುಂದೆ ದೀಪ ಹಚ್ಚಿಟ್ಟಳು..ದೀಪದ ಬೆಳಕಿನಲ್ಲಿ “ಅವ್ವಾ…ನಾ ಸತ್ತಿಲ್ಲ ಬೇ…!” ಎಂದು ಫೋಟೋದೊಳಗಿನ ಪಾರಿ ಹೇಳುತ್ತಿರುವಂತೆ ಕಾಣಿಸುತ್ತಿತ್ತು..ಅಸಲಿಗೆ ಪಾರಿ ಬದುಕಿದ್ದಾಳೋ,ಸತ್ತಿದ್ದಾಳೋ ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ..

ಸುಬ್ಬಣ್ಣನವರಿಗೂ ಈ ಸುದ್ದಿ ಆಶ್ಚರ್ಯ ತಂದಿತಾದರೂ ಒಳ್ಳೆಯದೇ ಆಯಿತು ಅಂದುಕೊಂಡರು.ಇತ್ತೀಚೆಗೆ ಯಲ್ಲಪ್ಪನಿಂದ  ಪಾರಿ ನೆಮ್ಮದಿಯಿಂದ ಇರುವ ವಿಷಯ ತಿಳಿದ ಅವರು ಮತ್ತೆ ಪಾರಿಯ ಗೊಡವೆಗೆ ಹೋಗಲಿಲ್ಲ.ಯಲ್ಲಪ್ಪ ಪಾರಿಯನ್ನು ತನಗೆ ಗೊತ್ತಿರುವ ಗಾರ್ಮೆಂಟ್ಸ ಒಂದರಲ್ಲಿ ಕೆಲಸಕ್ಕೆ ಸೇರಿಸಿದ್ದ.ಅಲ್ಲಿಯ ಮ್ಯಾನೇಜರ್ ಮಹೇಶ ಯಲ್ಲಪ್ಪನ ಗೆಳೆಯ.ಅವಳ ಹೆಸರು ಕೇಳಿದ ಮಹೇಶ “ಪಾರಿ ರೀ ” ಅಂದಾಗ ತಲೆಯೆತ್ತಿ ನೋಡಿದ್ದ.ಕೆಲಸಕ್ಕೆ ಸೇರಿಸಲು ಬಂದ ಯಲ್ಲಪ್ಪ “ಪಾರ್ವತಿ” ಎಂದು ತಿದ್ದಿ ಹೇಳಿ ಇನ್ನು ಮೇಲೆ ಯಾರಾದರೂ ಹೆಸರು ಕೇಳಿದರೆ ಪಾರ್ವತಿ ಎಂದು ಹೇಳಬೇಕೆಂದು ತಿಳಿಸಿದ್ದ ಪಾರಿಗೆ.ಮಹೇಶನಿಗೆ ಅವಳ ಪರಿಸ್ಥಿತಿಯನ್ನು ಸೂಕ್ಮವಾಗಿ ವಿವರಿಸಿ ಸ್ವಲ್ಪ ಕಾಳಜಿ ವಹಿಸುವಂತೆ ಕೇಳಿಕೊಂಡಿದ್ದ.ಪಾರಿ ಆರು ತಿಂಗಳಲ್ಲಿ ತುಸು ಬದಲಾಯಿಸಿದ್ದಳು..ತಂದೆ-ತಾಯಿಯ ನೆನಪು ಕಾಡಿದಾಗಲೆಲ್ಲ ಒಬ್ಬಳೇ‌ ಕುಳಿತು ಅತ್ತುಬಿಡುತ್ತಿದ್ದಳು..

  ಮ್ಯಾನೇಜರ್ ಮಹೇಶನಿಗೆ ಯಾರ ಗೊಡವೆಗೂ ಹೋಗದ ಪಾರಿ ವಿಶೇಷವಾಗಿಯೇ ಕಾಣುತ್ತಿದ್ದಳು.ಅವನೊಬ್ಬ ಅನಾಥ.ಅನಾಥಾಶ್ರಮ ನಡೆಸುತ್ತಿದ್ದ ನರಸಿಂಹ್ ರಾವ್ ಅವರ ಸಹಕಾರದಿಂದ ತಕ್ಕಮಟ್ಟಿಗೆ ಓದಿ ಮ್ಯಾನೇಜರ್ ಹುದ್ದೆ ಗಿಟ್ಟಿಸಿಕೊಂಡಿದ್ದ. ಪಾರಿಯ ಬಗ್ಗೆ ಅವನ್ಯಾಕೋ ವಿಶೇಷ ಕಾಳಜಿ ವಹಿಸುವುದನ್ನು ಕಂಡು ಗಾರ್ಮೆಂಟ್ಸ್ ಹೆಂಗಸರು ಏನೇನೋ ಗುಸು ಗುಸು ಮಾತಾಡಿಕೊಂಡರಾದರೂ ಪಾರಿ ಈ ವಿಷಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ‌..ಪಾರಿ ಬೆಂಗಳೂರು ಸೇರಿ ಒಂದು ವರ್ಷ ಕಳೆದುಹೋಗಿತ್ತು.ಪಾರಿ ಈಗ ಪಾರುವಾಗಿದ್ದಳು.ಮಹೇಶ “ಪಾರು” ಅಂತ ಕರೆದಾಗೆಲ್ಲ ಪಾರಿ ವಿಚಲಿತಳಾಗುತ್ತಿದ್ದಳು..ಮಹೇಶ ಅದಾಗಲೇ ನಿರ್ಧರಿಸಿಯಾಗಿತ್ತು,ಪಾರಿಗೊಂದು ಬಾಳು ಕೊಡಬೇಕೆಂದು…ಆದರೆ ಹೇಳಲು ತುಸು ಹಿಂಜರಿಕೆಯಿತ್ತು.ದಿನ ಕಳೆದಂತೆ ಅವಳ‌ ಮುಗ್ಧತೆ ಮಹೇಶನನ್ನು ಆಕರ್ಷಿಸಿತ್ತು..

ಏನಾದರಾಗಲಿ ಇನ್ನೊಂದು ಸ್ವಲ್ಪ ದಿನಗಳು ಕಳೆದ ಮೇಲೆ ಒಂದು ಮಾತು ಯಲ್ಲಪ್ಪನ ಜೊತೆ ಈ ವಿಷಯದ ಬಗ್ಗೆ ಚರ್ಚಿಸಿ ಪಾರಿಯನ್ನು ಒಪ್ಪಿಸುವ ಜವಾಬ್ದಾರಿ ಅವನಿಗೇ ವಹಿಸಿದರಾಯಿತೆಂದು ತೀರ್ಮಾನಿಸಿದ್ದ ಮಹೇಶ..

 ಇತ್ತ ಹಳ್ಳಿಯಲ್ಲಿ ಮಹದೇವಸ್ವಾಮಿಗೆ ಆ ಸಂಬಂಧಿಕರ ಹುಡುಗಿಯೊಂದಿಗೆ ಮದುವೆ ಮಾಡಿ ಮುಗಿಸಿದ್ದರು..ಸಾವಿತ್ರಮ್ಮ ಅಂತೂ ತಾವಂದುಕೊಂಡತೆಯೇ ಆಯಿತು ಎಂದು ನೆಮ್ಮದಿಯ ಉಸಿರುಬಿಟ್ಟರು.ಮಹದೇವಸ್ವಾಮಿ ಹೊಸ ಹೆಂಡತಿಯೊಡನೆ ಚಂದದ ಬದುಕು ಆಸ್ವಾದಿಸುತ್ತಿದ್ದರೆ ಪಾಪದ ಪಾರಿ ತಂದೆ-ತಾಯಿ, ಹುಟ್ಟಿದ ಹಳ್ಳಿಯನ್ನು ಬಿಟ್ಟು ಬೆಂಗಳೂರಿನ ಲೇಡಿಸ್ ಹಾಸ್ಟೇಲಿನ ತಾರಸಿಯ ಮೇಲೆ ಒಂಟಿಯಾಗಿ ನಿಂತಿದ್ದಳು..!

  ಮತ್ತಾರು ತಿಂಗಳು ಕಳೆದ ಮೇಲೆ ಪಾರಿಯ ಬದುಕು ಬೆಂಗಳೂರು ನಗರಕ್ಕೆ ಹೊಂದಾಣಿಕೆಯಾಗಿತ್ತು.ಸ್ವಲ್ಪ ನೆಮ್ಮದಿ ಸಿಕ್ಕಿತ್ತು ಪಾರಿಗೆ.ಬದುಕಿನಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ ನೋಡಿ..! ಪಾರಿ ಇನ್ನಾದರೂ ಎಲ್ಲವನ್ನೂ ಮರೆತು ನೆಮ್ಮದಿಯಿಂದ ಬದುಕಿದರಾಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ಅವಘಡ ನಡೆದು ಹೋಗಿತ್ತು..! ಪಾರಿ ನಡುಗಿ ಹೋಗಿದ್ದಳು..!!!

ಮುಂದುವರಿಯುವುದು…

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!