ಕಥೆ

ಪಾರಿ ಭಾಗ-೮

ಸಾವಿತ್ರಮ್ಮನವರು ಬೆಳಿಗ್ಗೆ ಬೆಳಿಗ್ಗೆಯೇ ಜೋರು ಧ್ವನಿಯಲ್ಲಿ ” ಮಾದೇವಾ..ಮಾದೇವಾ..ಏಳ ಮ್ಯಾಲ..ಪಾರಿ ಕಾಣವಲ್ಲು..ಮತ್ಯಾರ ಮನಿ ಹಾಳ ಮಾಡಾಕ ಹೋಗ್ಯಾಳ ನೋಡ್ ನಡಿಯ..ಎಂತಾಕಿನ ತಂದು ಮನಿ ಹೋಗ್ಸಿದೀ..ಇನ್ನೂ ಅದೇನನ್ ಕರ್ಮ ನೋಡ್ಬೇಕೋ..ಅಯ್ಯ ದೇವ್ರ..ನಮಗ ಯಾಕ ಇಂತಾದ್ದು ಕೊಡ್ತಿಯಪ್ಪಾ..”ಎಂದು ಹಣೆ ಬಡಿದುಕೊಂಡು ಅತ್ತಂತೆ ನಾಟಕ ಮಾಡತೊಡಗಿದರು.ಅಂಗಳ ಗುಡಿಸುತ್ತಿದ್ದ ತುಂಗಮ್ಮ “ಏನಾತ ಅಕ್ಕವ್ವಾ? ಯಾಕ ಹಿಂಗ ಪಾರಿ ಹೆಸ್ರ ಹೇಳಿ ಅಳಾಕತ್ತೀ..?ಪಾರೀ..ಏಯ್ ಪಾರೀ..” ಎಂದು ಅವಳ ರೂಮಿನತ್ತ ಬಗ್ಗಿ ನೋಡಿದಳು

” ಅಯ್ಯ..ತುಂಗವ್ವಾ…ಆಕೀ ಎಲ್ಲೆದಾಳ? ಮತ್ಯಾರ ಜೋಡಿ ಓಡಿ ಹೋದ್ಲ ಏನ..! ನಮ್ ಮನಿ ಮಾನ ಮರ್ಯಾದಿ ಎಲ್ಲಾ ತೊಳದು ಹೋದ್ಲ ತುಂಗವ್ವಾ.. ಆಕೀ..”ಎನ್ನುತ್ತ ಇನ್ನಷ್ಟು ಜೋರಾಗಿ ಅಳತೊಡಗಿದರು.ಮಹದೇವಸ್ವಾಮಿಗೆ ಬಿಡುಗಡೆ ಸಿಕ್ಕಂತಾಗಿ ನೆಮ್ಮದಿಯಿಂದ ಉಸಿರಾಡತೊಡಗಿದ..ಮದ್ಯಾನ್ಹ ಹನ್ನೆರಡು ಗಂಟೆಯಷ್ಟೊತ್ತಿಗೆ ಇಡೀ ಊರಿಗೇ ಪಾರಿ ಕಾಣದಾದ ಸುದ್ದಿ ಗೊತ್ತಾಗಿತ್ತು.ಮಲ್ಲವ್ವ ಹೃದಯಾಘಾತವಾಗಿ ಕುಸಿದು ಬಿದ್ದದ್ದಳು.ತಕ್ಷಣ ಗೌಡರೇ ಮುಂದೆ ನಿಂತು ಅವಳನ್ನು ಊರಿನಿಂದ ಸ್ವಲ್ಪ ದೂರವೇ ಇದ್ದ ದೊಡ್ಡ ಆಸ್ಪತ್ರೆಗೆ ಸೇರಿಸಿದ್ದರು.ದುರುಗಪ್ಪ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ.ಮಗಳು ಆ ದಿನ “ಇಲ್ಲಿರಾಕ ಒಲ್ಲೆ ಅಪ್ಪಯ್ಯ ” ಎಂದು ಅತ್ತಿದ್ದು ಕಣ್ಮುಂದೆ ಬಂದಂತಾಯಿತು.ಅವತ್ತು ಅವಳನ್ನು ಮನೆಗೆ ಕರೆದುಕೊಂಡು ಬರಬೇಕಿತ್ತು ಅನ್ನಿಸತೊಡಗಿತ್ತು.

“ಏಳಮ್ಮೋ..ಇದು ಲಾಸ್ಟ್ ಸ್ಟೇಷನ್..ಇಳ್ಕೋ..”ಎಂದು ಯಾರೋ ಅಲುಗಾಡಿಸಿದಾಗಲೇ ಪಾರಿಗೆ ಎಚ್ಚರ..! ಎದುರಿಗೆ ಕುಳಿತಿದ್ದ ಧಡೂತಿ ಗಂಡಸು ಅವಳನ್ನು ಎಚ್ಚರಿಸಿದಾಗ ಪಾರಿ ಅರೆಬರೆ ಕಣ್ಣು ಬಿಟ್ಟುಕೊಂಡೇ ಕೆಳಗಿಳಿದಳು.ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ಸ್ಟೇಷನ್ ಗಿಜುಗುಡುತ್ತಿತ್ತು.ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ದುಡ್ಡನ್ನು ಮುಟ್ಟಿ ನೋಡಿಕೊಂಡಳು.ತನ್ನನ್ನು ಕರೆದುಕೊಂಡು ಹೋಗಲು ಯಾರೂ ಬಂದಿಲ್ಲವೆಂದು ಖಚಿತವಾದ ಮೇಲೆ ಸುಬ್ಬಣ್ಣನವರೂ ತನಗೆ ಮೋಸ ಮಾಡಿದ್ದಾರೆಂದುಕೊಂಡಳು.. ತನ್ನ ಗಂಡನ ಮನೆಯವರೊಂದಿಗೆ ಕೈಜೋಡಿಸಿ ಈ ಉಪಾಯ ಮಾಡಿ ತನ್ನನ್ನು ಹೀಗೆ ಒಂಟಿಯಾಗಿ ಕಳಿಸಿದ್ದಾರೆಂದು ಅಂದುಕೊಂಡ ಪಾರಿಯ ಕಣ್ಣಂಚು ಒದ್ದೆಯಾಗಿತ್ತು..”ತಟ್ಟೆ ಇಡ್ಲಿ,ತಟ್ಟೆ ಇಡ್ಲಿ” ಎಂದು ಪಕ್ಕದಲ್ಲಿ ಹಾದು ಹೋದ ವ್ಯಕ್ತಿಯ ಧ್ವನಿ ಪಾರಿಯನ್ನು ಎಚ್ಚರಿಸಿತು‌.ಹೊಟ್ಟೆ ಚುರುಗುಟ್ಟುತ್ತಿತ್ತು.”ಅಣ್ಣಾರ..ನಿಲ್ರಿ..”ಎಂದು ಕೂಗಿ ತಟ್ಟೆ ಇಡ್ಲಿ ಮಾರುವ ವ್ಯಕ್ತಿಯನ್ನು ನಿಲ್ಲಿಸಿ ತಟ್ಟೆ ಇಡ್ಲಿಯನ್ನು ತೆಗೆದುಕೊಂಡಳು.ಊಟವನ್ನೇ ಕಂಡಿರದ ಹಾಗೆ ಪಾರಿ ಗಬಗಬನೇ ತಿನ್ನುವುದನ್ನು ಕಂಡ ಜೀನ್ಸ್ ಪ್ಯಾಂಟಿನ ಹುಡುಗಿಯೊಬ್ಬಳು ಮುಖ ಕಿವುಚಿದಳು. ಪಾರಿಗೆ ಮುಂದೆನು ಮಾಡುವುದೆಂದು ತಿಳಿಯಲಿಲ್ಲ.ರಾತ್ರಿ ಹತ್ತು ಗಂಟೆಯಾಗುತ್ತ ಬಂದಿತ್ತು.ಒಂದಷ್ಟು ಜನ ಎಲ್ಲಿಂದಲೋ ಬಂದ ಗಂಡಸರು ಹೆಂಗಸರು ಪ್ಲಾಟಪಾರಂನಲ್ಲಿ ಮಲಗಿದ್ದನ್ನು ಕಂಡು ಹೆಂಗಸೊಬ್ಬಳ ಹತ್ತಿರ ಹೋಗಿ ಪಾರಿ ಮಲಗಿಕೊಂಡಳು.ಯಾಕೋ ನಿದ್ದೆ ಬರಲಿಲ್ಲ.”ಮುಂಜಾನೆದ್ದು ಊರ್ಗೆ ಹೋಗಿ ಅಪ್ಪಯ್ಯನ ಕಾಲಿಡ್ಕಂಡು ಅಲ್ಲೇ ಇದ್ದರಾತು..ಮತ್ತ ಆ ಹಾಳಾದ ಮನಿಗೆ ಹೋಗೂದ ಬ್ಯಾಡ..” ಎಂದು ಯೋಚಿಸುತ್ತಿದ್ದವಳಿಗೆ ಕಣ್ಣಿಗೆ ಅದ್ಯಾವಾಗ ನಿದ್ದೆಯಾವರಿಸಿತೋ ತಿಳಿಯಲಿಲ್ಲ..

ಇತ್ತ ಸುಬ್ಬಣ್ಣನವರು ಬೆಳಿಗ್ಗೆಯಿಂದ ಬಾಲ ಸುಟ್ಟ ಬೆಕ್ಕಿನಂತಾಗಿದ್ದರು. ಬೆಂಗಳೂರಿಗೆ ಹೊರಟುಬಿಡೋಣವೆಂದರೆ ಆ ವ್ಯಕ್ತಿಯ ಫೋನ್ ನಂಬರ್ ಬಿಟ್ಟರೆ ಬೇರೆನೂ ಗೊತ್ತಿರಲಿಲ್ಲ.ರಾತ್ರಿ ಹತ್ತು ಗಂಟೆಯಾದರೂ ನಿಮಿಷ ನಿಮಿಷಕ್ಕೂ ಅದ್ಯಾರಿಗೋ ಕರೆ ಮಾಡುತ್ತಲೇ ಇರುವುದನ್ನು ಕಂಡ ಸುಬ್ಬಣ್ಣನವರ ಹೆಂಡತಿ “ಯಾಕ್ರಿ..ಮುಂಜಾನಿಂದ ನೋಡಾಕತ್ತೀನಿ..ಮೊಬೈಲ್ ಕೈಯಾಗ ಹಿಡದವ್ರು ಬಿಟ್ಟೇ ಇಲ್ಲ..ಯಾರಿಗೇನಾತು ಅಂತೀನಿ..ಮತ್ತ ನಮ್ ಪುಟ್ಟಕ್ಕಗ ಏನರ ಆಗೇತೇನು? ” ಎಂದು ದುಗುಡದಿಂದಲೇ ನುಡಿದಾಗ ಸುಬ್ಬಣ್ಣನವರ ಸಿಟ್ಟು ನೆತ್ತಿಗೇರಿತು‌.”ಪುಟ್ಟಕ್ಕ ಅಂತ ಪುಟ್ಟಕ್ಕ..! ಅಕೀ ಅವ್ನ್ಯಾನ್ನೋ ಮದುವಿ ಮಾಡ್ಕಂಡ್ಲಲ್ಲ ಅವತ್ತ ಸತ್ ಹೋಗ್ಯಾಳ..ಗಂಡ್ಸ ಅಂದ್ರ ನೂರ್ ತಾಪತ್ರಯ ಇರ್ತಾವ‌‌..ನೀ ತೆಪ್ಗ ಮಕ್ಕಾ ಹೋಗ..”ಎಂದು ಗದರಿದಾಗ ಸುಬ್ಬಣ್ಣನವರ ಹೆಂಡತಿ ಅವರ ಕೋಪಕ್ಕೆ ಹೆದರಿ ಸಿಟ್ಟಿಳಿದ ಮೇಲೆ ಮಾತಾಡಿದರಾಯಿತೆಂದುಕೊಂಡು ಮಲಗಲು ರೂಮಿಗೆ ಹೋದರು.

  ಸುಬ್ಬಣ್ಣನವರು ರಾತ್ರಿಯಿಡಿ ನಿದ್ದೆಯಿರದೇ ಹೊರಳಾಡಿದರು.ಗಳಿಗೆಗೊಮ್ಮೆ ಮೊಬೈಲ್ ತೆಗೆದು ಆ ವ್ಯಕ್ತಿಗೆ ಕರೆ ಮಾಡುತ್ತಲೇ ಇದ್ದರು.ಬೆಳಗಿನ ಐದು ಗಂಟೆಯಷ್ಟೊತ್ತಿಗೆ ಅವರು ತೀರಾ ಹತಾಶರಾದಂತೆ ಕಂಡರು‌‌.”ದ್ಯಾಮವ್ವಾ..ಪಾರಿನ ನೀನ ಕಾಪಾಡವ್ವಾ..ಒಬ್ಬಾಕಿನ ಕಳ್ಸಿ ತಪ್ ಮಾಡ್ಬಿಟ್ಟನಿ”ಎನ್ನತ್ತ ಕೈ ಮುಗಿದರು..ಊರ ದೇವಿಯ ಕೃಪೆಯೋ ಅಥವಾ ಕಾಕತಾಳಿಯವೋ ಕೈಯಲ್ಲಿನ ಮೊಬೈಲ್ ರಿಂಗಣಿಸಿದಾಗ ತೆಗೆದು ನೋಡಿದಾಗ ಅದೇ ವ್ಯಕ್ತಿಯ ಫೋನ್ ನಂಬರ್ ಮೊಬೈಲ್ ಪರದೆಯ ಮೇಲೆ ಕಂಡಿತ್ತು.ಒಂದೇ ರಿಂಗಿಗೆ ಕರೆ ಸ್ವೀಕರಿಸಿದ ಸುಬ್ಬಣ್ಣನವರಿಗೆ “ಹಲೋ ಯಾರ್ರಿ..?ನಾಲ್ಕನೂರೈವತ್ತು ಸಾರಿ ಮಿಸ್ ಕಾಲ್ ಅಂತ ಮೆಸೆಜ್ ಬಂತು.. ಯಾರ್ ಮಾತಾಡೋದು? “ಅಂದ ಆ ವ್ಯಕ್ತಿಯ ಧ್ವನಿಯಲ್ಲಿ ನಾಲ್ಕನೂರೈವತ್ತು ಬಾರಿ ಕರೆ ಮಾಡಿದ ವ್ಯಕ್ತಿ ಯಾರಿರರಬಹುದೆಂದು ಆಶ್ಚರ್ಯವಿತ್ತು.”ನಾ ನಿಮ್ಮೂರ್ ಸುಬ್ಬಣ್ಣ ಮಾತಾಡುದು..ಮೊಬೈಲ್ ಸ್ವಿಚ್ ಆಫ್ ಮಾಡಿ ಎಲ್ಲೇ ಹೋಗಿದ್ದಿ? ಎಷ್ಟಂತ ಫೋನ್ ಮಾಡುದ ನಿಂಗ..ನಾ ಇಲ್ಲೆ ಎಂತಾ ಇಕ್ಕಟ್ನಾಗ ಸಿಕ್ಕೊಂಡಿನಿ ಗೊತ್ತದ ಏನು.?” ಎಂದು ಸಿಟ್ಟಿನಿಂದಲೇ ಮಾತನಾಡಿದ ಸುಬ್ಬಣ್ಣನವರ ಮಾತು ಕೇಳಿ ಅತ್ತಲಿನ ವ್ಯಕ್ತಿ “ಒಹ್..! ಸುಬ್ಬಣ್ಣೋರಾ..ಅರಾಮದೀರೇನೂ..?ಏನಾತು..? ಮೋಬೈಲ್ ಯಾಕ ಚಾರ್ಜ್ ಆಗ್ತಿರ್ಲಿಲ್ಲ..ನನ್ನ ಗೆಳೆಯಾಗ ಸರಿ ಮಾಡಸ್ಕೊಂಡ್ ಬರಾಕ ಕೊಟ್ ಹೋಗಿದ್ದೆ.ಮೊನ್ನಿ ರಾತ್ರಿ ಕೆಲಸದ ಮ್ಯಾಲ ಹೋಗಿದ್ದವಾ ಈಗರ ಬಂದು ಮೊಬೈಲ್ ನೋಡಿದ್ನಿ..ನಿಮ್ಮವು ಅಷ್ಟು ಮಿಸ್ ಕಾಲ್ ನೋಡಿ ದಂಗಾದಂಗ ಆತು..ಏನರ ತೊಂದ್ರಿ ಆಗೇತೇನು..?”ಎಂದು ತುಸು ದುಗುಡದಿಂದಲೇ ಕೇಳಿದ.ಸುಬ್ಬಣ್ಣನವರು ಪಾರಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ “ಪಾಪಾ ಪಾರಿ ನಿನ್ನೆ ರಾತ್ರಿನ ಬೆಂಗ್ಳೂರ ಮುಟ್ಯಾಳ..ಎಲ್ಲೆ ಹೋದ್ಲೋ ಏನ..ನಾ ರಾತ್ರಿ ಪೂರ ನಿದ್ದಿ ಮಾಡಿಲ್ಲ..ಆ ಹುಡ್ಗಿ ಹಣೆಬರ ಬರೇ ಹಿಂಗ ಆತು..ನೀ ಒಂದ್ ಸ್ವಲ್ಪ ಲಘೂನ ಹೋಗಿ ಸ್ಟೇಷನ್ದಾಗ ಎಲ್ಲೇರ ಕುಂತಾಳನ ನೋಡು..ಪಾಪಾ ಆಕಿಗೆ ಹೊರಗಿನ ಜನಾ ಗೊತ್ತಿಲ್ಲ..ನಾ ಅಕಿನ ಒಬ್ಬಾಕಿನ ಕಳ್ಸಬಾರ್ದಿತ್ತು..ನಿ ಲಘೂನ ಹೋಗಿ ನೋಡಿ ಒಂದ್ ಫೋನ್ ಮಾಡು..ಅಕಿ ಸಿಗಲಿಕ್ರ ನಾನೂ ಬರ್ತನಿ.ಒಂದ್ ಪೋಲಿಸ್ ಕಂಪ್ಲೆಂಟ್ ಕೊಟ್ರಾತು..” ಎಂದು ಒಂದೇ ಉಸಿರಿಗೆ ಹೇಳಿದಾಗ ಅತ್ತಲಿನ ವ್ಯಕ್ತಿ ಹೌಹಾರಿದ..”ಎಂತಾ ಕೆಲ್ಸ ಮಾಡಿರೀ ನೀವು..!!! ನಾ ಈಗ ಹೊಂಟೆ..”ಎಂದು ಅವರ ಮಾತಿಗೂ ಕಾಯದೇ ಕರೆ ತುಂಡರಿಸಿದ ವ್ಯಕ್ತಿ ರೇಲ್ವೆ ಸ್ಟೇಷನ್ನಿಗೆ ಬೈಕ್’ನ್ನು ಜೋರಾಗಿ ಓಡಿಸಿದ..

  ಮಲ್ಲವ್ವ ನಿಧಾನವಾಗಿ ಕಣ್ತೆರೆದಳು..ಪಕ್ಕದಲ್ಲಿ ನಿಂತಿದ್ದ ದುರುಗಪ್ಪನನ್ನು ನೋಡಿ “ರೀ..ರೀ..ಪಾರಿ ಎಲ್ಲೆದಾಳಂತ..?ಸಿಕ್ಕಿದ್ಲನು?”ಅನ್ನುತ್ತ ಅಳತೊಡಗಿದಳು.ದುರುಗಪ್ಪ ಮೌನವಾಗಿದ್ದನ್ನು ಕಂಡು “ನಮ್ ಪಾರಿ ಆ ಮನಿಗೆ ಹೋಗುದ ಬ್ಯಾಡ..ನಮ್ ಮನ್ಯಾಗ ಇದ್ ಕೂಳು ತಿಂದಿರ್ಲಿ..ಹುಡ್ಕಿ ಕರ್ಕಂಡು ಬರ್ರೀ..” ಎಂದು ಅಳತೊಡಗಿದ ಮಲ್ಲವ್ವಳ್ಳನ್ನು ಡಾಕ್ಟರ್ ಸಮಾಧಾನಪಡಿಸಿ ಇಂಜೆಕ್ಷನ್‌ ಕೊಟ್ಟರು..ಇತ್ತ ಶಾಂತಸ್ವಾಮಿಯವರ ಮನೆಯಲ್ಲಿ ಮಲ್ಲಪ್ಪಗೌಡರು ಮುಂದೇನು ಮಾಡುವುದೆಂದು ಗಹನವಾದ ಚರ್ಚೆಯಲ್ಲಿ ತೊಡಗಿದ್ದರು..! ಅದಾಗಲೇ ಅವರ ತಲೆಯಲ್ಲಿ ಮತ್ತೊಂದು ಮೋಸದ ಆಲೋಚನೆ ಬಂದಾಗಿತ್ತು..!!

 ಸುಬ್ಬಣ್ಣನವರು ಕಳಿಸಿದ ಆ ವ್ಯಕ್ತಿ ಹುಚ್ಚನಂತೆ ಇಡೀ ರೇಲ್ವೆ ಸ್ಟೇಷನ್ ಸುತ್ತು ಹಾಕುತ್ತಿದ್ದ.ಯಾರಾದರೂ ಪಾಪದ ಪಾರಿಯನ್ನು ಮೋಸಗೊಳಿಸಿ ಕರೆದುಕೊಂಡು ಹೋಗಿಬಿಟ್ಟರೆ…?! ಎಂದು ಎದೆ ಒಂದೇ ಸಮನೇ ಜೋರಾಗಿ ಹೊಡೆದುಕೊಳ್ಳುತ್ತಿತ್ತು.”ದೇವ್ರೇ..ಪಾರಿಗೆ ಬರೀ ಅನ್ಯಾಯಾನೇ ಆಗಿ ಹೋಯ್ತು..ಇನ್ನಾದರೂ ಅವಳಿಗೆ ಒಳ್ಳೆದು ಮಾಡು‌..ಅಣ್ಣಮ್ಮಾ ತಾಯಿ..ಈ ಬೆಂಗ್ಳೂರ್ ಸೇರ್ದಾಗಿಂದ ನಿನ್ನ ನಂಬಿನವ್ವಾ..ಪಾರಿ ಸಿಕ್ರ ನಿನ್ನ ಗುಡಿಗೆ ಬಂದು ಹಣ್ಣು ಕಾಯಿ ಮಾಡಿಸ್ತಿನವ್ವಾ..”ಎಂದು ಮನಸಲ್ಲೇ ಹರಕೆ ಕಟ್ಟಿಕೊಂಡ ವ್ಯಕ್ತಿ ಏದುಸಿರು ಬಿಡುತ್ತಾ ಪ್ಲಾಟಪಾರಂನ ಒಂದು ಪುಟ್ಟ ಅಂಗಡಿಯತ್ತ ಕಣ್ಣು ಹಾಯಿಸಿದಾಗ ಪಾರಿ ಆ ಅಂಗಡಿಯವನ ಹತ್ತಿರ ಏನನ್ನೋ ವಿಚಾರಿಸುತ್ತ ನಿಂತಿದ್ದು ಕಣ್ಣಿಗೆ ಕಂಡಿತು…ಆ ವ್ಯಕ್ತಿಗೆ ಹೋದ ಜೀವ ಬಂದಂತಾಯಿತು..ಮನಸ್ಸಲ್ಲಿ ಅಣ್ಣಮ್ಮ ತಾಯಿಗೆ ವಂದಿಸಿ ಪಾರಿಯ ಹಿಂದೆ ಬಂದು “ಪಾರೀ..” ಎಂದು ಕೂಗಿದಾಗ ಪಾರಿಗೆ ಆಶ್ಚರ್ಯ..! ತನ್ನ ಹೆಸರು ಕರೆದದ್ದು ಯಾರು ಎಂದು ನೋಡಿದಾಗ ಎದುರಿಗಿನ ವ್ಯಕ್ತಿಯನ್ನು ಕಂಡು ” ಅಣ್ಣಯ್ಯಾ..!” ಅಂದ ಪಾರಿಗೆ ಮುಂದೆ ಮಾತುಗಳೇ ಹೊರಡಲಿಲ್ಲ.ತಾನು ಸ್ಟೇಷನ್ ನಲ್ಲಿದ್ದೇನೆ ಅನ್ನುವುದನ್ನೂ ಮರೆತು ಬಾಯಿಗೆ ಸೆರಗು ಹಿಡಿದು ಬಿಕ್ಕಳಿಸಿದಳು.ಅವಳ ಒಳಗಿನ ತುಮುಲುಗಳನ್ನು ಅರ್ಥ ಮಾಡಿಕೊಂಡ ಆ ವ್ಯಕ್ತಿ..”ಪಾರೀ..ಇದ್ ಸ್ಟೇಷನ್ ಐತಿ..ನೀ ಇಲ್ಲೆ ಅಳ್ಬ್ಯಾಡ..ಆ ಮಾದೇವ ಹಿಂಗ್ ಮಾಡ್ತಾನಂತ ಅನ್ಕೊಂಡಿರ್ಲಿಲ್ಲ ನಾ‌..ನೀ ಏನ ಚಿಂತಿ ಮಾಡಬ್ಯಾಡ..ನಾ ಅದೀನಿ..ನಡೀ ಮೊದಲ ಮನಿಗೆ ಹೋಗುನು”ಎಂದು ಹೆಜ್ಜೆ ಮುಂದಿಟ್ಟ.ಪಾರಿಯ ಹೆಜ್ಜೆಗಳ್ಯಾಕೋ ತಡೆದವು..”ಅಣ್ಣಯ್ಯಾ..ನಾ ಊರ್ಗೆ ಹೊಕ್ಕನಿ..ನಂಗ ಊರಿನ್ ಟ್ರೇನ್ ಹತ್ಸು..ಆ ಅಂಗಡಿಯವ್ನ ಕೇಳಿದ್ರ ಗೊತ್ತಿಲ್ಲ ಅಂತಾನ..”ಅಂದ ಪಾರಿಯ ಮಾತುಗಳನ್ನು ಕೇಳಿದ ಆ ವ್ಯಕ್ತಿ ತುಸು ಸಿಟ್ಟಾದಂತೆ ಕಂಡ.. “ನಿಂಗ್ ಏನೂ ತಿಳಿಯಂಗಿಲ್ಲ ಪಾರೀ..ಸುಮ್ನ ನಡೀ ಈಗ..” ಎಂದು ಜೋರು ಮಾಡಿದಾಗ ಪಾರಿ ಆ ವ್ಯಕ್ತಿಯ ಹಿಂದೆ ಹೆಜ್ಜೆ ಹಾಕಿದಳು..ಆ ವ್ಯಕ್ತಿ ಬೇರಾರೂ ಆಗಿರದೇ ಈ ಮೊದಲು ಬೆಂಗಳೂರಿಗೆ ಓಡಿ ಬಂದ ಪಾರಿ ಮತ್ತು ಮಹದೇವಸ್ವಾಮಿಗೆ ದೇವಸ್ಥಾನದಲ್ಲಿ ಮದುವೆ ಮಾಡಿಸಿದ ಯಲ್ಲಪ್ಪನಾಗಿದ್ದ..! ಪಾರಿಯನ್ನು ಕರೆದುಕೊಂಡೇನೋ ಹೊರಟಿದ್ದ ಯಲ್ಲಪ್ಪನಿಗೆ ತನ್ನದು ಹೇಳಿ ಕೇಳಿ ಬ್ಯಾಚುಲರ್ಸ್ ರೂಮು..ಪಾರಿ ಒಬ್ಬಳನ್ನೇ ಹೇಗೆ ಕರೆದುಕೊಂಡು ಹೋಗುವುದು..?”ಎನ್ನುವ ಯೋಚನೆ ಚಿಂತೆಗೀಡು ಮಾಡಿದರೂ ಅವನಿಗೆ ಈ ಸಮಸ್ಯೆಗೆ ಒಂದು ತಾತ್ಕಾಲಿಕ ಪರಿಹಾರ ಸಿಕ್ಕಾಗಿತ್ತು..

ಮುಂದುವರಿಯುವುದು…

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!