ಕಥೆ

ಪಾರಿ ಭಾಗ- ೩

ಪಾರಿ ಭಾಗ-೨

ಮನೆಗೆ ಬಂದ ಸಾವಿತ್ರಮ್ಮನವರು ಕುರ್ಚಿಯ ಮೇಲೆ ಪೆಚ್ಚು ಮೋರೆ ಹಾಕಿ ಕುಳಿತಿದ್ದ ಯಜಮಾನನನ್ನು ನೋಡಿ ಒಂದು ಕ್ಷಣ ಪೆಚ್ಚಾದರು.ಶಾಂತಸ್ವಾಮಿಯವರ ಬಗ್ಗೆ ಬಾಳಮ್ಮ-ಗೌರಮ್ಮ ಅಂದ ಮಾತುಗಳು ತಲೆಯಲ್ಲಿ ಕೊರೆಯುತ್ತಿದ್ದವಾದರೂ ಶಾಂತಸ್ವಾಮಿಯವರು ಬೇರೆ ಹೆಂಗಸರ ಸಂಗ ಬೆಳಸದಿರುವುದು ಸಾವಿತ್ರಮ್ಮನವರಿಗೆ ತುಸು ನೆಮ್ಮದಿ ನೀಡಿತ್ತು.ಅವರು ರಸಿಕರಾಗಿದ್ದರೂ ಅದು ಕೂಲಿ ಹೆಂಗಸರನ್ನು ನೋಡುವುದಕ್ಕೆ ಮಾತ್ರ ಸೀಮಿತವಾಗಿತ್ತು.ಇದರ ಅರಿವಿದ್ದ ಸಾವಿತ್ರಮ್ಮನವರು ಅವರಿಬ್ಬರ ಮಾತುಗಳನ್ನು ಮರೆತು “ಏನ್ರೀ..ಮನಿ ಯಜಮಾನ ನೀವ ಹಿಂಗ ತೆಲಿ ಮ್ಯಾಲ ಕೈ ಹೊತ್ತು ಕುಂತ್ರ ಹೆಂಗ? ಇರಾವ್ನು ಒಬ್ನ ಮಗ…ಇಂಥಾ ಕೆಲ್ಸ ಮಾಡ್ಯಾನಂತ ಅವ್ನ ಅಲ್ಲೇ ಬಿಟ್ ಬಿಡಾಕ ಆಕೈತೇನು? ನಮಗರ ಅವ್ನ ಬಿಟ್ರ ಮತ್ತ ಮಕ್ಕಳಾಗ್ಲಿಲ್ಲ‌..ಈಗ ಏನರ ಮಾಡಿ ಅವ್ನ ಮನಿಗೆ ಕರ್ಕೊಂಡ ಬರ್ಬೆಕು..” ಎಂದು ಶಾಂತಸ್ವಾಮಿಯವರಲ್ಲಿ ಅಲವತ್ತುಕೊಂಡರು.”ಹೆಂಗ್ ಕರ್ಕೊಂಡು ಬರೋದು ನೀನ ಹೇಳು..ಪಾರಿ ಹರಿಜನ್ರಾಕಿ..ಕರ್ಕೊಂಡ್ ಬಂದ್ರ ಇಬ್ರನೂ ಕರ್ಕೊಂಡ್ ಬರ್ಬೇಕು..ಮೊದ್ಲ ಎಲ್ಲಾ ಸಂಬಂದಿಕ್ರು ಆಡ್ಕಂಡು ನಗಾಕತ್ತಾರ..ಇನ್ನ ಆಕಿನ ಮನಿ ತುಂಬಸ್ಕೊಂಡ್ರ ಹೆಂಗಿರ್ತತಿ ನೀನ ಹೇಳು..? ನಂಗ ಒಂದೂ ತಿಳಿದಂಗ ಆಗೇತಿ..ಏನ್ ಮಾಡುದ್ ಹೇಳು ಅಂಥ ಹಲ್ಕಾ ಕೆಲ್ಸ ಮಾಡ್ಯಾನ್ ನಿನ್ ಮಗ..ಊರಾಗ ತೆಲಿ ಎತ್ತಿ ನಡ್ಯಾಕ ಆಗವಲ್ದು..”ಅನ್ನುತ್ತ ಶಾಂತಸ್ವಾಮಿಯವರು ನಿಟ್ಟುಸಿಬಿಟ್ಟರು ಸಾವಿತ್ರಮ್ಮನವರ ಮುಖ ನೋಡುತ್ತ.ಸಾವಿತ್ರಮ್ಮನವರು ಈ ಸಮಸ್ಯೆ ಬಗೆ ಹರಿಸಲು ತಮಗೆ ಹೊಳೆದ ದಾರಿಯ ವಿಷಯವನ್ನು ಪ್ರಸ್ತಾಪಿಸಲು ಇದು ಒಳ್ಳೆಯ ಸಮಯವೆಂದರಿತು “ಮಲ್ಲಪ್ಪಗೌಡ್ರ ಮನಿಗೆ ಹೋಗ್ಬರ್ರಿ…ಅವ್ರೇನರ ಮನಸ್ ಮಾಡಿದ್ರ ನಮ್ ಮಗನ ಬಾಳೆ ನೆಟ್ಟಗಾದೀತು..” ಅಂದರು.ಈಗ ಶಾಂತಸ್ವಾಮಿಯವರ ಪೆಚ್ಚು ಮುಖ ತುಸು ಹೊಳೆದಂತಾಯಿತು.”ನಂಗ್ ಹೊಳಿಲಿಲ್ ನೋಡು..ಅವ ಏಕಾಏಕಿ ಹಿಂಗ್ ಓಡಿಹೋಗಿದ್ಕ ನನ್ ಬುದ್ದಿಗೆ ಮಂಕ್ ಹಿಡ್ದು ಬಿಟ್ತು..ಈಗ ಹೋಗಿ ಮಾತಾಡಿ ಬರ್ತನಿ”ಅನ್ನುತ್ತ ಶಾಂತಸ್ವಾಮಿಯವರು ಪತ್ನಿಯ ಮಾತಿಗೆ ಕಾಯದೇ ಮಲ್ಲಪ್ಪಗೌಡರ ಮನೆಯತ್ತ ದೌಡಾಯಿಸಿದರು.

ಮಲ್ಲಪ್ಪ ಗೌಡರು ಊರ ಪಂಚರಲ್ಲಿ ಪ್ರಮುಖರು.ಶಾಂತಸ್ವಾಮಿಯವರು ಬರುವುದನ್ನು ನೋಡಿದ ಮಲ್ಲಪ್ಪಗೌಡರು”ಬರ್ರಿ ಸ್ವಾಮೇರ..ಕೂತ್ಕಳ್ರಿ..”ಅನ್ನುವ ಒಂದೆರಡು ಉಪಚಾರದ ಮಾತು ಹೇಳಿ ಮನೆ ಆಳು ನಿಂಗನಿಗೆ ಚಹ ತರಲು ಹೇಳಿ “ವಿಷಯಾ ಗೊತ್ತಾತು..ನಿಮ್ ಸಮಸ್ಯೆ ಏನಂತ ತಿಳೀತು..ನಾವಾಗೇ ಬಂದ್ರ ಛಲೋ ಇರ್ತದನೂ ಸ್ವಾಮೇರ..? ಅದ್ಕ ನಾ ಬರ್ಲಿಲ್ಲ..” ಎಂದು ಒಂದೆರಡು ಸಮಾಧಾನದ ಮಾತುಗಳನ್ನು ಹೇಳಿದ್ದರಿಂದ ಶಾಂತಸ್ವಾಮಿಯವರು ನಿರಾಳರಾದಂತೆ ಕಂಡರು.ನಿಂಗ ತಂದ ಚಹ ಗುಟುಕರಿಸುತ್ತ “ಗೌಡ್ರ..ನಂಗಂತೂ ಏನೂ ತಿಳಿದಂಗ ಆಗೇತಿ..ಎಲ್ಲಾ ನಿಮಗ ಬಿಟ್ಟೀನಿ” ಎನ್ನುತ್ತ ಗೌಡರ ಕೈ ಹಿಡಿದುಕೊಂಡರು‌ ಶಾಂತಸ್ವಾಮಿಯವರು.ಗೌಡರು ತಮ್ಮ ಗತ್ತಿನಲ್ಲಿಯೇ ಮಾತನಾಡುತ್ತ ” ಇರ್ಲಿ ಬಿಡ್ರಿ ಸ್ವಾಮೇರ..ನಾವ್ ಅದೀವಿ..ನೀವೇನೂ ತೆಲಿ ಕೆಡಿಸ್ಕೊಬ್ಯಾಡ್ರಿ..ನಾ ಎಲ್ಲಾ ನೆಟ್ಟಗ ಮಾಡ್ತನಿ..ನೀವು ಹೊಂಡ್ರಿ..ನಾನೂ ಪ್ಯಾಟಿಗೆ ಹೋಗ್ಬೇಕು..ಬ್ಯಾಂಕ್ ನ್ಯಾಗ ಚೂರು ಕೆಲ್ಸ ಐತಿ”ಅನ್ನುತ್ತ ಮೇಲೆದ್ದರು

   ಮಲ್ಲಪ್ಪಗೌಡರು ಉಳಿದ ಊರ ಪಂಚರಿಗೆ ಮರುದಿನ ಶಾಂತಸ್ವಾಮಿಯವರ ಮನೆಗೆ ಬರಬೇಕೆಂದು ಮನೆ ಆಳು ನಿಂಗನ ಮೂಲಕ ಹೇಳಿ ಕಳಿಸಿದ್ದರು‌‌.ಮರುದಿನ ಶಾಂತಸ್ವಾಮಿಯವರ ಮನೆ ಮುಂದೆ ಜನಜಂಗುಳಿ ಸೇರಿತ್ತು..ಪಂಚರೆನಿಸಿಕೊಂಡವರು ಪಡಸಾಲೆಯಲ್ಲಿ  ‌ಜಮಖಾನದ ಮೇಲೆ ಆಸೀನರಾಗಿದ್ದರು‌‌.ಮಗಳು ಮಾಡಿದ ತಪ್ಪಿಗೆ ದುರುಗಪ್ಪ,ಮಲ್ಲವ್ವ ತಲೆಕೆಳಗೆ ಹಾಕಿ ನಿಂತುಕೊಂಡಿದ್ದರು..ಸಾವಿತ್ರಮ್ಮನವರ ಧ್ವನಿ ತಾರಕಕ್ಕೇರಿತ್ತು.”ಆ ಹೊಲ್ಸು ಮುಂಡಿಗೆ ನನ್ ಮಗಾನ ಬೇಕಿತ್ತನು..?ಆ ಹಾದರಗಿತ್ತಿ ನಾವ್ ಬಿಡೋ ಚಪಲ್ ಜಾಗಾದಾಗೂ ಇಲ್ದಾಕಿ..ಏ ಮಲ್ಲಿ..ಥೂ ನಿನ್ ಜನ್ಮಕ್ಕ ಬೆಂಕಿ ಹಾಕಾ..ಮಗಳ್ನ ಹೆಂಗ್ ಬೆಳ್ಸಬೇಕಂತ ಗೊತ್ತಿಲ್ಲನ‌ ನಿನಗ..ಆಕಿ ನನ್ ಕೈಗ ಸಿಗ್ಲಿ..ಅಯ್ಯನವ್ರ ತಂಟಿಗ್ ಬಂದ್ರ ಏನಾಕ್ಕತಿ ಅಂತ ತೋರುಸ್ತನಿ”ಅಂದರು ಬಿಚ್ಚಿದ ತುರುಬು ಕಟ್ಟುತ್ತ..ಹೀಗೆ ಸಾವಿತ್ರಮ್ಮನವರು ಬಾಯಿಯಿಂದ ಬರಬಾರದ  ಮಂತ್ರಗಳನ್ನೆಲ್ಲ ಉಚ್ಛರಿಸಿದ್ದರು..ಊರ ಹಿರಿಯರು ಸಾವಿತ್ರಮ್ಮನವರ ಬಾಯಿಮುಚ್ವಿಸಿ ಮನೆಯೊಳಗೆ ಕಳಿಸಿದ್ದರು.

   ಶಾಂತಸ್ವಾಮಿಯವರು ಈಗ ಪೌರುಷ ತೋರಲಾರಂಭಿಸಿದರು.ಅವರು ವ್ಯಗ್ರವಾಗಿದ್ದನ್ನು ಕಂಡು ಮಲ್ಲಪ್ಪಗೌಡರು ಅವರನ್ನು ಮತ್ತು ಉಳಿದ ಪಂಚರನ್ನೂ ಒಳಗೆ ಕರೆದುಕೊಂಡು ಹೋಗಿ ಮಾತಿ”ನೋಡ್ರೀ ಸ್ವಾಮೇರ..ನಿಮ್ ಮಗಂದೂ ಇದ್ರಾಗ ತಪ್ಪೈತಿ..ಊರ್ ಪಂಚ್ರಾಗಿ ನಾವ್ ನಿಮ್ ಪರ ಮಾತಾಡಿದ್ರ ಊರ ಜನಾ ಏನ್ ಅಂತಾರ ಗೊತೈತನು ನಿಮ್ಗ..?ನಿಮ್ ಮಗ ಬೋರಿನ ಮನ್ಯಾಗ ಆ ಹುಡುಗಿ ಕೂಡ ಇದ್ದಿದ್ ಕಣ್ಣಾರ ನೋಡಿದವ್ರು ಇಲ್ಲೆ ಅದಾರ‌.‌ಮೊದಲ ಆ ಕಡೆ ಪಾರ್ಟಿ ಪಂಚಾಯ್ತಿ ಮೆಂಬರ್ ಬಸಣ್ಣ ನಮ್ ವಿರುದ್ಧ ಇರೋ ವಿಷ್ಯ ನಿಮಗ ಗೊತ್ತಿದ್ದಿದ್ದ ಐತಿ.ಅವಾ ಏನಾರ ದುರುಗಪ್ಪನ್ ತೆಲಿ ಕೆಡಿಸಿ ಪೋಲಿಸ್ ಕಂಪ್ಲೆಂಟ್ ಕೊಡಿಸಿದ್ರ ಮುಂದ ಭಾಳ ತೊಂದ್ರಿ ಆಕ್ಕಾವ..ಮೊದಲ ಹುಡ್ಗಿ-ಹುಡ್ಗ ವಯಸ್ಸಿಗೆ ಬಂದಾವ್ರು..ಅದೂ ಅಲ್ದ ಆ ಪಾರಿ ಹರ್ಜನ್ರ ಹುಡ್ಗಿ..ಕೀಳ್ಜಾತಿಯವ್ರ ಮ್ಯಾಲ ನಾವ ದಬ್ಬಾಳಿಕಿ ಮಾಡಾಕತ್ತೀವಿ ಅಂತ ಗದ್ಲ ಎಬ್ಬಿಸಿದ್ರ ಎಲ್ಲಾ ನಮ್ಮ ಬುಡಕ್ಕ ಬರ್ತತಿ..ಅದ್ಕ ಈಗ ನಾ ಏನರ ಸಮಜಾಯಿಷಿ ಹೇಳಿ ಪಂಚಾಯ್ತಿ ಮುಗಸ್ತನಿ..ನೀವು ಸಂಜಿಮುಂದ ನಮ್ಮನಿ ಕಡೆ ಬರ್ರಿ..ಪಂಚ್ರೂ ಬರ್ತಾರ ..ನಾ ಒಂದ್ ಉಪಾಯ ಹೇಳ್ಕೊಡ್ತನಿ..ಹಂಗ್ ಮಾಡ್ರಿ..ನೀವೂ ಕೆಟ್ಟವ್ರ ಆಗಂಗಿಲ್ಲ,ಮತ್ತ ಆಕೀನ ನಿಮ್ಮ ಮಗನ್ನ ಬಿಟ್ಟ ಹೊಕ್ಕಾಳ..ಆಮ್ಯಾಲ ಇನ್ನೊಂದ್ ಮದುವಿ ಹೆಂಗ್ ಮಾಡುದಂತ ನಾ ಹೇಳ್ಕೊಡ್ತನಿ..ನಮಗೂ ನಮ್ಮ ಹಿರಿಯಾರು ಮಾಡಿದ್ ಜಾತಿ-ನೀತಿ ಕೆಡಿಸಾಕ ತೆಲಿ ಕೆಟ್ಟಿಲ್ಲ.ನಾ ಹೇಳಿದ್ಕ ಸುಮ್ನ ತೆಲಿ ಆಡಸ್ರಿ..ಬರ್ರಿ ಈಗ.. ಹೊರಗ ಜನ ಕಾಯ್ಕೊಂತ ಕುಂತಾರ..ಅವ್ರ ಮುಂದ ಸ್ವಲ್ಪ ನಾಟಕ ಮಾಡಿದ್ರಾತು..ಹೇಳಿ ಕೇಳಿ ಜಾತಿ ಸಮಸ್ಯೆ..ಗದ್ಲ ಆಗೋದ್ ಬ್ಯಾಡ.” ಎಂದು ಹೇಳಿದರು.ಇದು ಉಳಿದ ಪಂಚರಿಗೂ ಸರಿ ಎನಿಸಿತು..ಊರನಲ್ಲಿ ಹೆಚ್ಚಾಗಿ ಮಲ್ಲಪ್ಪಗೌಡರ ಮಾತೇ ನಡೆಯುತ್ತಿತ್ತು.ಏಕೆಂದರೆ ಅವರು ಊರಿಗೆ ಶ್ರೀಮಂತಿಕೆಯಲ್ಲಿ ದೊಡ್ಡ ಕುಳ.ಊರಲ್ಲಿನ ಜನರ ಸಾಲದ ವ್ಯವಹಾರಗಳು ಮಲ್ಲಪ್ಪಗೌಡರ ಕಡೆಯೇ ಹೆಚ್ಚಾಗಿ ನಡೆಯುತ್ತಿದ್ದವು.ಮಲ್ಲಪ್ಪಗೌಡರು ಎಲ್ಲರನ್ನೂ ಹೊರಗೆ ಕರೆದುಕೊಂಡು ಬಂದರು..ಜನ ಊರ ಪಂಚರು ಏನು ಹೇಳಬಹುದೆಂದು ಕಾಯ್ದುಕೊಂಡು ಕುಳಿತಿದ್ದರು..

   ಮಲ್ಲಪ್ಪಗೌಡರು ಮಾತಿಗೆ ಶುರು ಮಾಡಿಕೊಂಡರು..”ನೋಡ್ರಿ ತಪ್ಪು ಆಗಿ ಹೋಗೇತಿ..ಏನ ಈ ಹುಚ್ಚು ಹುಡುಗ್ರು ಈ ಸಿನಿಮಾ ನೋಡ್ತಾವ.. ಹಂಗ ಮಾಡಾಕ ಹೊಂಡ್ತಾವ..ಈಗ ಸ್ವಾಮೇರು ಮತ್ತ ದುರಗಪ್ಪ ಹೊಡೆದಾಡೊದ್ರಾಗ ಅರ್ಥ ಇಲ್ಲ..ಆ ಹುಡ್ಗಿ-ಹುಡ್ಗಂಗೂ ತಿಳವಳಿಕಿ ಕಡಿಮಿ..ಹುಡುಗಿ ಓಡಿ ಹೋದಾಕಿ ಅಂದ್ರ ಯಾರೂ ಮದುವಿ ಮಾಡ್ಕೊಳಾಕ ಮುಂದ ಬರಂಗಿಲ್ಲ..ಇನ್ನ ಸ್ವಾಮೇರ ಹುಡ್ಗ ಹರ್ಜನ್ರ ಹುಡುಗಿ ಜೋಡಿ ಓಡಿ ಹೋದವ ಅಂತ ಅವಗೂ ಸ್ವಾಮೇರ ಜಾತಿಯವ್ರು ಕನ್ಯಾ ಕೊಡಂಗಿಲ್ಲ..ಅದ್ಕ ನಾ ಸ್ವಾಮೇರ ಜೋಡಿ ಮಾತಾಡಿ ಒಂದ್ ನಿರ್ಧಾರಕ್ಕ ಬಂದನಿ..ನಿಮಗೊಪ್ಪಿಗಿ ಆದ್ರ ಹಂಗ ಮಾಡಿದ್ರಾತು..ಹೆಂಗ್ರಪಾ..?”ಎಂದು ಉಳಿದ ಪಂಚರತ್ತ ಪ್ರಶ್ನಾರ್ಥಕ ನೋಟ ಬೀರಿದರು..ಪಂಚರು ಮಾತು ಮುಂದುವರೆಸುವಂತೆ ಸೂಚಿಸಿದಾಗ ಮಲ್ಲಪ್ಪ ಗೌಡರು ಮಾತು ಮುಂದುವರೆಸಿ “ಈಗ ಮೊದಲ ಕೆಲ್ಸ ಅವರಿಬ್ರನ್ನ ಹುಡ್ಕಿ ಊರಿಗೆ ಕರ್ಕೊಂಡ್ ಬರೋದು‌.ಹೆಂಗೂ ಮದುವಿ ಆಗ್ಯಾರಂತ..ಪಾರೀಗೆ ಲಿಂಗಧೀಕ್ಷೆ  ಮಾಡಿ ಮನಿ ಒಳಗ ಕರ್ಕೊಂಡ್ರಾತು..ಸುಮ್ನ ಎರಡು ಬದ್ಕು ಹಾಳ್ ಮಾಡೋದು ಬ್ಯಾಡ..ಏನಂತೀರಿ..?” ಅಂದರು ಉಳಿದ ಪಂಚರತ್ತ ನೋಡಿ..ಇನ್ನೊಬ್ಬ ಪಂಚರಾದ ಸುಬ್ಬಣ್ಣನವರು “ಏನ್ ಹೇಳಾಕತ್ತಿರಿ ಗೌಡ್ರ..! ಅಕಿದ್ಯಾವ ಜಾತಿ,ಇವಂದ್ ಯಾವ ಜಾತಿ..ಮದುವಿ ವಯಸ್ಸಿಗ್ ಬಂದ್ ಮಕ್ಳು ಊರಾಗದಾವು..ಈಗ ಸಡಿಲ ಕೊಟ್ರ ಮುಂದ ಅವು ಹಿಂಗ ಮಾಡಾಕ ಶುರು ಮಾಡ್ಕೊಂತಾವು..ಹಿರಿಯಾರು ಏನ್ ಸುಮ್ನ ಜಾತಿ-ನೀತಿ ಮಾಡ್ಯಾರೇನು? ನಾವ ಊರ ಹಿರಿಯಾರಾಗಿ ಹಿಂಗ ಮಾಡುದು ನಂಗ್ ಸರಿ ಕಾಣವಲ್ದು..ಜಾತಿ ಕುಲಗೆಡೊಸೋದು ಬ್ಯಾಡ..ಏನ್ ರಿಜಿಸ್ಟರ್ ಮದುವಿ ಆಗಿಲ್ಲ..ಅವ್ರ ಮಗಳು ಅವ್ರ ಕಡೆ,ಇವ್ರ ಮಗನ್ನ ಇವ್ರ ಕಡೆ ಮಾಡಿದ್ರಾತು..ಮುಂದ ಅವರವರ ಹಣೆಬರಹ..ಮಾಡಿದ್ ತಪ್ಪಿಗೆ ಉಣ್ತಾರ..ಇಲ್ಲಾ ಅಂದ್ರ ಅವ್ರು ಬೆಂಗ್ಳೂರಾಗ ಇರ್ಲಿ.‌ಇಲ್ಲಿಗೆ ಬರೋದ ಬ್ಯಾಡ.‌.ನಿಮ್ ನಿಮ್ ಮಕ್ಳನ ನಿಮಗ ನೋಡಬೇಕನ್ಸ್ದಾಗ ನೀವ್ ಹೋಗಿ ನೋಡಿ ಬರ್ರಿ..ಅಷ್ಟ..”ಎಂದು ಮಾತನಾಡುತ್ತ ಸಿಟ್ಟಿಗೆದ್ದವರಂತೆ ನಟಿಸಿದರು‌.ಶಾಂತಸ್ವಾಮಿಯವರಿಗೆ ಇರುವುದು ಒಬ್ಬನೇ ಮಗ..ಅವರು ದೀನರಾಗಿ ಮಲ್ಲಪ್ಪಗೌಡರ ಮುಖ ನೋಡಿದರು..ಮಲ್ಲಪ್ಪಗೌಡರು ಪಟ್ಟು ಬಿಡದೇ “ಇಬ್ರು ವಯಸ್ಸಿಗೆ ಬಂದವ್ರು..ಸುಮ್ನ ಈ ಕೇಸು-ಗೀಸು ಅಂತ ಹೋಗೋದು ಬ್ಯಾಡ..ಸ್ವಾಮೇರಿಗೂ ಒಬ್ನ ಮಗ..ಮತ್ತ ದುರಗಪ್ಪಗೂ ಒಬ್ವಾಕಿನ ಮಗ್ಳು..ವಿಚಾರ ಮಾಡ್ರಿ..” ಎಂದು ಸುಮ್ಮನಾದರು..ಪಂಚರೆಲ್ಲರೂ ಏನೆನೋ ಗುಸುಗುಸು ಮಾತನಾಡಿಕೊಂಡ ನಾಟಕವಾಡಿ ಮಲ್ಲಪ್ಪಗೌಡರ ಮಾತಿಗೆ ಒಪ್ಪಿಗೆ ಸೂಚಿಸಿದರು..

ಮುಂದುವರಿಯುತ್ತದೆ..

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!