ಕಥೆ

ಪಾರಿ- ಭಾಗ ೧

ಶಾಲೆಯಿಂದ ಮರಳಿದ ಚಂದನಾ “ಅಮ್ಮಾ..ಚಿನ್ನು,ಚಂದ್ರು,ಸುಧಿ ಎಲ್ರೂ ಅಜ್ಜಿ ತಾತಾನ ಮನೆಗೆ ಹೋಗ್ತಾರಂತೆ..ಸಮ್ಮರ್ ಹಾಲಿಡೇಸ್ಗೆ..ಅವ್ರ ಅಜ್ಜಿ  ಎಲ್ಲಾ ತಿಂಡಿ ಮಾಡ್ಕೊಡ್ತಾರಂತೆ..ನನ್ನೂ ಅಜ್ಜಿ ತಾತಾನ ಮನೆಗೆ ಕರ್ಕೊಂಡ್ ಹೋಗಮ್ಮಾ ಪ್ಲೀಸ್..ಹೌದು..ಅಜ್ಜಿ ತಾತಾ  ಎಲ್ಲಿದಾರೆ? ನೀ ಇಷ್ಟು ದಿನ ಹೇಳೇ ಇಲ್ಲ..ನಾನು ಎಷ್ಟು ಸಾರಿ ಕೇಳ್ಲಿ ನಾನು? ಏನಾದ್ರೂ ಹೇಳಿ ಮಾತು ಮರೆಸ್ತಿ..ನಾನು, ಅಪ್ಪ ನೀನು ಅಷ್ಟೇ ಇರೋದು ಈ ಮನೇಲಿ…ಚಿನ್ನು ಮನೆಲಿ ಅಜ್ಜಿ,ತಾತ ಇದಾರೆ..ನಮ್ಮನೇಲಿ ಯಾಕಿಲ್ಲ?ಇವತ್ತು ನೀ ಹೇಳ್ಲೆಬೇಕು ಅಜ್ಜಿ-ತಾತಾ ಎಲ್ಲಿ ಅಂತ” ಅಂತ ಏಳು ವರ್ಷದ ಪೋರಿ ಚಂದನಾ ಒಂದೇ ಸಮನೇ ಪ್ರಶ್ನೆ ಕೇಳುತ್ತಿದ್ದರೆ ಪಾರು ಮೌನಿಯಾಗಿ ಸುಮ್ಮನೇ ಗೋಡೆ ದಿಟ್ಟಿಸುತ್ತಿದ್ದಳು

“ಅಮ್ಮಾ..ಹೇಳಮ್ಮ ಅಜ್ಜಿ ತಾತಾ ಎಲ್ಲಿದಾರೆ?” ಪಾರುವನ್ನು ಅಲುಗಾಡಿಸಿ ಕೇಳಿದಳು ಚಂದನಾ..

 ಅಷ್ಟೊತ್ತಿಗೆ ಮನೆಯ ಕಾಲಿಂಗ್ ಬೆಲ್ ಸದ್ದಾಗಿದ್ದರಿಂದ ಪಾರು ಹೋಗಿ ಬಾಗಿಲು ತರೆದಳು.ಪತಿ ಮಹೇಶ್ ಬಂದಿದ್ದ..ನಗುತ್ತಲೇ ಒಳಬಂದ ಮಹೇಶ್ “ಚಂದು ಪುಟ್ಟಿ ಏನ್ಮಾಡ್ತಿದೆ ನನ್ ಬಂಗಾರ? ” ಅನ್ನುತ್ತ ಚಂದನಾಳನ್ನೆತ್ತಿಕೊಂಡು ಹಣೆಗೊಂದು ಮುತ್ತಿಟ್ಟ..ಅವಳಿಗಿಷ್ಟವೆಂದು ತಂದಿದ್ದ ಚಾಕೋಲೇಟ್ ಅವಳ ಕೈಗಿತ್ತ.ಚಂದನಾ ಚಾಕೋಲೇಟ್ ಕಂಡು ಅಜ್ಜಿ ತಾತನ ವಿಷಯ ಮರೆತು ಖುಷಿಯಿಂದ ತಿನ್ನತೊಡಗಿದಳು.ಪಾರು ಅಡುಗೆ ಮನೆಗೆ ಹೋಗಿ ಚಹ ತಂದಿಟ್ಟು ಸೋಫಾ ಮೇಲೆ ಸುಮ್ಮನೇ ಕುಳಿತಳು.ಪಾರು ಮೌನಿಯಾಗೇ ಇದ್ದಿದ್ದು ಕಂಡು “ಏನಾಯ್ತು ಪಾರು..? ಯಾಕೆ ಸಪ್ಪಗಿದೀಯಾ? ನೀ ಬಾಯ್ತುಂಬ ಮಾತಾಡದಿದ್ರೆ ಮನೆ ಭಿಕೋ ಅನ್ನತ್ತೆ ಕಣೆ..ಏನಾಯ್ತು ಹೇಳು..”ಎಂದು ತಲೆ ಸವರಿದ..ಪತಿಯ ಮುಖ ನೋಡಿದಳು ಪಾರು.” ಅಯ್ಯೋ ಅಪ್ಪಾ..ಅಮ್ಮ ಆಗಿನಿಂದಾ ನಾನೂ ಅಜ್ಜಿ-ತಾತಾ ಎಲ್ಲಿದಾರೆ ಅಂತ ಕೇಳ್ತಿದೀನಿ..ಮಾತಾಡ್ತಾನೇ ಇಲ್ಲ.‌..ನೀನಾದ್ರೂ ಹೇಳಪ್ಪಾ..ಅಜ್ಜಿ ತಾತನ ಮನೆ ಎಲ್ಲಿದೆ‌‌‌? ನನ್ ಫ್ರೆಂಡ್ಸ್ ಎಲ್ಲಾ ಸಮ್ಮರ್ ಹಾಲಿಡೇಸ್ಗೆ ಅವ್ರಜ್ಜಿ ಮನೆಗೆ ಹೋಗ್ತಾರಂತೆ‌‌..ನಾನೂ ಹೋಗ್ತಿನಿ..”ಅಂತ ಚಾಕೋಲೇಟ್ ತಿನ್ನುತ್ತಲೇ ಕೇಳಿದಳು ಚಂದನಾ‌..ಮಹೇಶನಿಗೆ ಪಾರು ಸಪ್ಪಗಿರುವ ಕಾರಣ ತಿಳಿಯಿತು.‌.

ಮಹೇಶ್ ನಗುತ್ತಾ” ನನ್ ಬಂಗಾರಿ ಅಲ್ವಾ ಚಂದು ನೀನು..ಅಮ್ಮಂಗೆ ಹಾಗೆ ಇನ್ಮೆಲೆ ಕೇಳಬಾರ್ದು..ಸರಿನಾ..ನೀನು ಹಾಗೆ ಕೇಳಿದ್ರೆ ಬೇಜಾರಾಗತ್ತೆ ಬಂಗಾರಾ ಅವಳಿಗೆ‌..”ಅನ್ನುತ್ತಾ ಚಂದನಾಳನ್ನು ಬಾತ್ ರೂಮಿಗೆ ಎತ್ತಿಕೊಂಡು ಹೋಗಿ ಚಾಕೋಲೇಟ್ ತಿಂದು ಅಂಟಾಗಿದ್ದ ಅವಳ ಕೈಗಳನ್ನು ತೊಳೆದು ಸೋಫಾ ಮೇಲೆ ಕುಳ್ಳಿರಿಸಿದ..ಚಂದನಾ ಹೆಚ್ಚೇ

ಹಟಮಾರಿ..”ಯಾಕಪ್ಪಾ ಕೇಳ್ಬಾರ್ದು? ನಂಗ್ಯಾಕೆ ಅಜ್ಜಿ ತಾತಾ ಇಲ್ಲಾ? ನೀನಾದ್ರೂ ಹೇಳು..ಅಮ್ಮನಿಗೆ ಕೇಳಲ್ಲ ಇನ್ಮೇಲೆ”ಅಂತ ಅಪ್ಪನ ತೊಡೆ ಮೇಲೆ ಹತ್ತಿ ಕುಳಿತಳು.ಅವಳು ಹಿಡಿದ ಪಟ್ಟು ಬಿಡುವುದಿಲ್ಲ ಎಂದು ಮಹೇಶನಿಗೆ ಗೊತ್ತಾಯಿತು..” ಪುಟ್ಟಿ ನಾನು ಅನಾಥ..ನಾನು ಅಪ್ಪ,ಅಮ್ಮನ ಮುಖಾನಾ ನೋಡಿಲ್ಲ..ಇನ್ನು ಅಮ್ಮನಿಗೆ ಅಪ್ಪ ಅಮ್ಮ ಇದ್ರು.. ಅವ್ರು ಸತ್ತೋಗಿದಾರೆ ಕಂದಾ..ಅದ್ಕೆ ಇಲ್ಲ..ಅಜ್ಜಿ ತಾತ ಮನೆಗೆ ನಾವು ಅದ್ಕೆ ಹೋಗಲ್ಲ..ಇನ್ಮೇಲೆ ಹಾಗೆ ಕೇಳಿದ್ರೆ ಅಮ್ಮನಿಗೆ ನೋವಾಗತ್ತೆ ಕಂದಾ..ಆಯ್ತಾ..ಊಟ ಮಾಡೋಣ ಏಳೀಗ..”ಅಂತ ಅವಳನ್ನ ಕೆಳಗಿಳಿಸಿದ. ಚಂದನಾ ಮಾತ್ರ ಸುಮ್ಮನಿರುವ ಹಾಗೆ ಕಾಣಲಿಲ್ಲ..”ಅನಾಥ ಅಂದ್ರೆ ಅಪ್ಪ ಅಮ್ಮಾ ಇಲ್ದೋರು ಅಂತ ಸ್ಕೂಲಲ್ಲಿ ಒಂದ್ ಸಾರಿ ಕಥೆ ಹೇಳುವಾಗ‌ ಮಿಸ್ ಹೇಳಿದ್ರು..ಅದಿರ್ಲಿ ನೀನು ಹಿಂದಿನ ಸಾರಿ ಕೇಳ್ದಾಗ ಅಜ್ಜಿ ತಾತ ಮನೆಬಿಟ್ಟು ಹೋಗಿದಾರೆ ಅಂತ ಹೇಳಿದ್ದೆ..ಇವತ್ತು ಸತ್ತು ಹೋಗಿದಾರೆ ಅಂತಿದಿಯಾ..! ಯಾವುದು ನಿಜ ಹೇಳಪ್ಪಾ..”ಅಂತ ಚಂದನಾ ಕಣ್ಣರಳಿಸಿ ಕೇಳಿದಾಗ ಕೆಲಸ ಮುಗಿಸಿ ಬಂದ ಆಯಾಸದಲ್ಲಿ ತರಾತುರಿಯಲ್ಲಿ ಬಾಯಿಗೆ ಬಂದದ್ದು ಹೇಳಿದ್ದಕ್ಕೆ ಮಹೇಶನಿಗೆ ಪಿಚ್ಚೆನಿಸಿತು..ಸಾವರಿಸಿಕೊಂಡು “ಹಾಗಲ್ಲ ಪುಟ್ಟಾ..ಅವತ್ತು ಏನೋ ಟೆನ್ಷನ್’ಲಿ ಹಾಗೆ ಹೇಳಿದ್ದೆ‌‌..ನಿಜವಾಗಲೂ ಅಜ್ಜಿ ತಾತಾ ಸತ್ತೋಗಿದಾರೆ..ಆಯ್ತಾ..ಇನ್ಮೆಲೆ ಕೇಳ್ಬೇಡ..ಅಮ್ಮಂಗೆ ಬೇಜಾರಾಗತ್ತೆ ಚಿನ್ನಾ..ಆಯ್ತಾ..” ಎಂದು ಹೇಳುತ್ತಾ ಎದ್ದು ಹೋಗಲು ಅವಸರಿಸಿದಾಗ ಚಂದನಾ ಕೈ ಹಿಡಿದೆಳೆದಳು..ಮಹೇಶನಿಗೆ ಇವತ್ತು ಇವಳು ಆ ವಿಷಯ ತಿಳಿಯುವವರೆಗೂ ಬಿಡುವುದಿಲ್ಲ ಎಂದು ಅರ್ಥವಾಯಿತು”ಏನಮ್ಮಾ ಚಂದು ಇನ್ನೂ ನಿನ್ ಪ್ರಶ್ನೆ..? ” ಎಂದು ಬೇಸರದಿಂದ ನುಡಿದಾಗ “ಸರಿ ಅದು ಬಿಡು ಹೋಗ್ಲಿ..ಅವ್ರ ಪೋಟೋನೂ ಇಲ್ವಾ ಅಪ್ಪಾ..ಅದನ್ನಾದ್ರೂ ತೋರ್ಸು..ಸುಧಿ ಅಜ್ಜಿ ತಾತಾನೂ ಸತ್ತೋಗಿದಾರೆ..ಆದ್ರೆ ಅವ್ರ ಮನೆಲಿ ಅವ್ರಜ್ಜಿ ತಾತಾ ಫೋಟೋ ಹಾಕಿದಾರೆ ಗೊತ್ತಾ..?ಮತ್ತೆ ಅವ್ರ ಮನೆಗೆ ಫಂಕ್ಷನ್ ಆದ್ರೆ ಅವ್ರ ರಿಲೇಶನ್ಸ್ ಎಲ್ಲಾ ಬರ್ತಾರೆ ಗೊತ್ತಾ..ನಮ್ಮನೆಗೆ ಯಾರೂ ರಿಲೇಶನ್ಸ್ ಬರೋದೇ ಇಲ್ಲ..ಅಮ್ಮನ ಫ್ರೆಂಡ್ಸ್ ನಿನ್ ಫ್ರೆಂಡ್ಸ್ ಮಾತ್ರ ಬರ್ತಾರೆ..ಯಾಕಪ್ಪಾ ?”ಅಂತ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಮಗಳನ್ನು ಕಂಡು ಪಾರುವಿಗೆ ದುಃಖದ ಜೊತೆ ಕೋಪ ನೆತ್ತಿಗೇರಿತು.”ಚಂದು ನಿಂದು ಅತಿಯಾಯ್ತು ಕಣೆ..ಅಪ್ಪ ಹೇಳ್ತಿಲ್ವಾ ಅವ್ರು ಸತ್ತೊಗಿದಾರೆ ಅಂತ..ಮತ್ತೆ ಮತ್ತೆ ಕೇಳಿದ್ರೆ ಏಟು ಬೀಳುತ್ತೆ..ನಡೀ ಊಟಾ ಮಾಡು..ಪ್ರಶ್ನೆ ಕೇಳಿ ತಲೆ ತಿಂದಿದ್ದು ಸಾಕು..”ಎನ್ನುತ್ತಾ ಊಟಕ್ಕೆ ತಟ್ಟೆ ಹಾಕಲು ಅಡಿಗೆ ಮನೆಗೆ ಹೋದಳು..”ಬಾ ಬಂಗಾರಿ ಅದ್ನೆಲ್ಲಾ ಬಿಟ್ಟು ಮೊದ್ಲು ಊಟಾ ಮಾಡು.. “ಎನ್ನುತ್ತಾ ಊಟ ಮಾಡಲು ಅಣಿಯಾದನು‌..ಚಂದನಾ ಮಾತ್ರ ” ಥೂ..!  ಹೋಗಪ್ಪಾ ನೀನೂ ಅಮ್ಮ ಇಬ್ರು ಹೀಗೇ..ಅಜ್ಜಿ ತಾತಾನ ವಿಷಯ ಕೇಳಿದ್ರೆ ಏನಾದ್ರೂ ಒಂದು ಹೇಳ್ತಿರಾ..”ಅಂತ ಗೊಣಗುತ್ತಾ ತಟ್ಟೆಯ ಎದುರು ಹೋಗಿ ಕುಳಿತಳು.‌.ತಿಂದ ಶಾಸ್ತ್ರ ಮಾಡಿ ಮುಖ ಊದಿಸಿಕೊಂಡು ಹೋಗಿ ಮಲಗಿದಳು..ಪಾರುವಿನ ಕಣ್ಣಂಚು ಒದ್ದೆಯಾಗಿತ್ತು..”ಬದುಕಿರುವ ತಂದೆ ತಾಯಿಯನ್ನ ಸತ್ತಿದಾರೆ ಅಂತ ಹೇಳುವ ಸ್ಥಿತಿ ಬಂತಲ್ಲಾ…ಇಂತ ಹಿನಾಯ ಸ್ಥಿತಿ ಶತ್ರುವಿಗೂ ಬೇಡ ದೇವರೇ..”ಎಂದು ಮನಸಿನಲ್ಲಿ ಅಂದುಕೊಂಡ ಪಾರುವಿನ ಕಣ್ಣೀರು ಒಂದೇ ಸಮನೇ ಇಳಿಯುತ್ತಿತ್ತು..ಪಾರು ತಂದೆ ತಾಯಿಯ ಮುಖ ನೋಡಿ ಹನ್ನೆರಡು ವರ್ಷಗಳೇ ಆಗಿದ್ದವು‌‌..”ಒಂದು ತಪ್ಪು ಹೆಜ್ಜೆ ಇಡದಿದ್ದರೆ ಇಂದು ತನ್ನ ಸ್ಥಿತಿ ಇಷ್ಟು ಹೀನಾಯವಾಗಿರುತ್ತಿರಲಿಲ್ಲ..ಮಹೇಶ್ ಪತಿಯಾಗಿ ಸಿಕ್ಕಿದ್ದಕ್ಕೆ ಸರಿ ಹೋಯಿತು‌..ಇಲ್ಲದಿದ್ದರೆ ತನ್ನ ಪಾಡು ನಾಯಿಪಾಡಾಗುತ್ತಿತ್ತು.‌.”ಬಿಕ್ಕಿದಳು ಪಾರು ಮಹೇಶನಿಗೆ ಅವಳ ನೋವು ಏನಂತ ಅರ್ಥವಾಯಿತು.”ಸಾರಿ ಕಣೆ ಪಾರು..ನಿನ್ ಅಪ್ಪ ಅಮ್ಮ ಸತ್ತೊದ್ರು ಅಂದ್ಬಿಟ್ಟೆ..ಏನು ಹೇಳ್ಬೇಕೋ ತಿಳಿಲಿಲ್ಲ ನನ್ಗೆ..ನಿಂಗೆ ಹರ್ಟ್ ಮಾಡ್ಬೇಕಂತಲ್ಲ ಕಣೆ..ಹಾಗಾದ್ರೂ ಹೇಳಿದ್ರೆ ಅವ್ಳು ಅಜ್ಜಿ ತಾತಾ ಎಲ್ಲಿ ಅಂತ ಕೇಳೋದು ಬಿಡ್ತಾಳೇನೋ ಅಂತ ಅಷ್ಟೇ ಕಣೆ..”ಎಂದು ಹೇಳುತ್ತಾ ಅವಳನ್ನು ತಬ್ಬಿಕೊಂಡು ತಲೆ ಸವರಿ ಸಂತೈಸಿದ.ಅವನೆದೆಗೊರಗಿದ ಪಾರು ಮನಸ್ಸಿಗೆ ಸಮಾಧಾನ ಆಗುವವರೆಗೂ ಅತ್ತಳು..

 ಪಾರುವಿಗೆ ಈ ಮೊದಲೇನಲ್ಲ ಮಗಳು ಈ ಪ್ರಶ್ನೆ ಕೇಳಿದ್ದು.ಅವಳು ಆ ಪ್ರಶ್ನೆ ಕೇಳಿದಾಗೆಲ್ಲ ಏನೋನೋ ಮಾತು ತೇಲಿಸಿ ಚಂದನಾಳನ್ನ ಸುಮ್ಮನಿರಿಸುವುದರಲ್ಲಿ ಸಾಕಾಗುತ್ತಿತ್ತು.‌.ಆಗೆಲ್ಲ ಇಂತಹ ರೋದನೆ ಇದ್ದೇ ಇರುತ್ತಿತ್ತು..ಹೆಂಡತಿ ಮೌನಿಯಾಗಿ ಸೀಲಿಂಗ್ ಫ್ಯಾನಿನತ್ತ ದೃಷ್ಟಿಸುತ್ತಿರುವುದನ್ನು ನೋಡಿ ಅವಳ ಒಳಗಿನ ತುಮುಲಗಳು ಮಹೇಶನಿಗೆ ಅರ್ಥವಾದವು..ನಾನಿದ್ದೇನೆ ಅನ್ನುವಂತೆ ಇನ್ನೊಮ್ಮೆ ತಲೆ ಸವರಿದ‌..ತಂದೆಯನ್ನು ತಬ್ಬಿ ಮಲಗಿದ್ದ ಪುಟ್ಟ ಮಗಳನ್ನು ನೋಡಿ ಪಾರುವಿಗೆ ಸಂಕಟವಾಯಿತು.ಅಜ್ಜಿ-ತಾತಾ ಅಂತ ಕನವರಿಸುವ ಅವಳಿಗೆ ಅವರ ಮುಖ ನೋಡುವ ಭಾಗ್ಯ ತಾನು  ಕಿತ್ತುಕೊಂಡ ಬಗ್ಗೆ ಅಸಹ್ಯವೆನಿಸಿತು..ತನ್ನ ತಂದೆ ತಾಯಿ,ತನ್ನ ಪುಟ್ಟ ಹಳ್ಳಿ,ತನ್ನ ಆ ಪುಟ್ಟ ಹಳ್ಳಿಯ ಬದುಕಿನ ನೆನಪುಗಳು ಪಾರುವಿಗೆ ಮರುಕಳಿಸಿದವು..ಪಾರ್ವತಿ ಅಲಿಯಾಸ್ ಹಳ್ಳಿಯ ಪಾರಿ ಈಗಿನ ಮಹೇಶನ ಮುದ್ದಿನ ಮಡದಿ ಪಾರುವಾಗುವವರೆಗಿನ ನೆನಪುಗಳು ಒಂದರ ಹಿಂದೊಂದು ಉಕ್ಕಿ ಬಂದವು..

ಮುಂದುವರಿಯುವುದು..

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!