ಕಥೆ

ನಿರ್ಭಯ

ಆ ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಇನ್ನು ಮನಸ್ಸಿನ ಆಳದಲ್ಲಿ ಹಸಿರಾಗೇ ಇದೆ. ಅದಕ್ಕೆ ಕಾರಣ ಇಲ್ಲದಿಲ್ಲ.ಅದರಿಂದಾಗಿ ನನ್ನ ಜೀವನದ ಚಿತ್ರಣವೇ ಬದಲಾಗಿಹೋಯಿತೆಂದರೂ ಸುಳ್ಳಲ್ಲ. ಕಳೆದ ವರ್ಷ ಹೆಚ್ಚು ಕಮ್ಮಿ ಇದೇ ಸಮಯ. ಮಳೆಗಾಲ ಕಳೆದು ಪ್ರಕೃತಿಯೂ ಹಸಿರಾಗೇ ಇತ್ತು. ಚಳಿಗಾಲದ ಕೊನೆಯಲ್ಲಿ ನನ್ನ ತಂಗಿಯ ಮದುವೆ ನಿಶ್ಚಯವಾಗಿದ್ದರಿಂದ ನನ್ನ ಓಡಾಟ ಸ್ವಲ್ಪ ಹೆಚ್ಚೇ ಇತ್ತು ಎನ್ನಬಹುದು. ಸಂಬಳ ಬಂದ ಆ ದಿನ ಆಫೀಸ್ ಪಕ್ಕ ಇದ್ದ ಎ.ಟಿ.ಎಂ’ನಿಂದ ಸಿಕ್ಕಿದ್ದ ಸಂಬಳ ಪೂರ್ತಿ ನಗದು ಮಾಡಿಕೊಂಡು ಬೈಕ್ ಏರಿ ಮನೆ ಕಡೆ ಹೊರಟಿದ್ದೆ. ನಮ್ಮ ಮಧ್ಯಮ ವರ್ಗದವರ ಕತೆ ಇಷ್ಟೇ ಬಿಡಿ, ಬಂದ ಸಂಬಳ ಹೆಚ್ಚೆಂದರೆ ಒಂದೇ ದಿನ. ಮಾರನೆ ದಿನ ಪುನಃ ಬ್ಯಾಂಕ್ ಬ್ಯಾಲೆನ್ಸ್ ಯಾವತ್ತಿನ ಮೊತ್ತಕ್ಕೆ ಬಂದು ನಿಲ್ಲುತ್ತದೆ. ತಂಗಿ ಮದುವೆ ನಿಗದಿಯಾದಂದಿನಿಂದ ಸಂಬಳವೆಲ್ಲ ಅಮ್ಮನ ಕೈಗೆ ಒಪ್ಪಿಸುವುದು ಅನಿವಾರ್ಯವಾಗಿತ್ತು. ಅವಳ ಮದುವೆಯೊಂದು ಕಳೆದು ಬಿಟ್ಟರೆ ದೊಡ್ಡದೊಂದು ಜವಾಬ್ದಾರಿ ಕಳೆದು ಹೋಯಿತು ಎನ್ನುವುದೂ ನಿಜವೇ. ಹಾಗೆ ನನ್ನ ಲೈನ್ ಕೂಡ ಕ್ಲಿಯರ್ ಆಗುತ್ತದೆ. ಹಾಗೆಂದು ನನಗೆ ಈಗಾಗಲೇ ಪ್ರೇಯಸಿ ಇದ್ದಾಳೆಂದಲ್ಲ. ಮನೆಯವರಿಗೆ ತೊಂದರೆ ಕೊಡದೇ ನಾನೇ ಹುಡುಕಿ ಕೊಳ್ಳಬೇಕೆಂಬುದು  ನನ್ನ ಪ್ಲಾನ್. ಬೈಕ್ ಮುಂದೆ ಸಾಗುತ್ತ ಈ ತೆರನಾದ ವಿಚಾರಗಳು ಯಾವತ್ತೂ ಬಂದು ಹೋಗುವುದಿತ್ತು. ಆಗಲೇ ಕಣ್ಣಿಗೆ ಬಿದ್ದದ್ದು ಅವಳು. ಮುಂದೆ ಬಸ್ ಸ್ಟಾಪಿನಲ್ಲಿ ಯಾವುದೋ ಬಸ್ಸಿಗೆ ಕಾಯುತ್ತಾ ಇದ್ದಳು. ಒಂಟಿಯಾಗಿ ಅದೂ ಈ ರಾತ್ರಿ ಹೊತ್ತಿನಲ್ಲಿ. ರಾತ್ರಿ ಎಂದರೆ ಏಳು ಗಂಟೆ ಆಗಿರಬಹುದು. ತಡರಾತ್ರಿ ಅಲ್ಲದಿದ್ದರೂ ನಮ್ಮ ಊರು ಅಷ್ಟೇನೂ ಒಳ್ಳೆ ಊರು ಅಂತ ಹೇಳಲು ಕಷ್ಟ. ಅವಳನ್ನೇ ಗಮನಿಸುತ್ತ ಬೈಕ್ ನಿಧಾನವಾಗಿ ಓಡಿಸಿದೆ. ಅವಳು ಲಕ್ಷಣವಾಗೇ ಇದ್ದಳು. ಈ ತರ ಹುಡುಗಿಯ ಪ್ರಪೋಸಲ್ ಏನಾದ್ರೂ ಬಂದ್ರೆ ಕಣ್ಣು ಮುಚ್ಚಿ ಒಪ್ಪುತ್ತಿದ್ದೆ. ಅವಳು ನೆಲವನ್ನೇ ನೋಡುತ್ತಾ ನಿಂತಿದ್ದಳು. ನನ್ನನ್ನು ಗಮನಿಸಿರಬಹುದೇ? ಗೊತ್ತಾಗಲಿಲ್ಲ. ಮುಂದೆ ಸಾಗುತ್ತ ರಿಯರ್ ವ್ಯೂ ಮಿರರ್’ನಲ್ಲಿ ಅವಳನ್ನೇ ಗಮನಿಸಿದೆ. ಒಮ್ಮೆಯಾದರೂ ನೋಡದೆ ಇರಲಿಕ್ಕಿಲ್ಲ ಎನ್ನುವುದು ನನ್ನ ಆಸೆ. ಆದರೆ ನನಗೆ ಕಂಡದ್ದೇ ಬೇರೆ. ಅದನ್ನು ನೋಡಿ ನಾನು ಬೈಕ್ ನಿಲ್ಲಿಸಬೇಕಾಯಿತು. ಧುತ್ತನೆ ಬಂದು ನಿಂತ ಒಂದು ವ್ಯಾನಿನಿಂದ ಇಳಿದ ಇಬ್ಬರು ಬಲವಂತವಾಗಿ ಅವಳನ್ನು ಒಳಕ್ಕೆಳೆದುಕೊಂಡು ನನ್ನ ಮುಂದೆಯೇ ಹಾದುಹೋದರು. ವ್ಯಾನಿನಲ್ಲಿ ಒಟ್ಟು ಮೂವರಿದ್ದರು. ಅವಳ ಬಾಯಿಯನ್ನು ಮುಚ್ಚಿಹಿಡಿದಿರಬೇಕು. ಸದ್ದೇನು ಕೇಳಿಸುತ್ತಿರಲಿಲ್ಲ. ನನಗಂತೂ ಶಾಕ್’ನಿಂದ ಹೊರಬರಲು ಎರಡು ನಿಮಿಷ ಬೇಕಾಯಿತು. ಕೂಡಲೇ ಏನು ಮಾಡಬೇಕೆಂಬುದು ತಲೆಗೆ ಹೊಳೆಯಲಿಲ್ಲ. ಅವರನ್ನು ಹಿಂಬಾಲಿಸಲೇ? ಹೋದರೂ ಏನು ಪ್ರಯೋಜನ. ಅವರು ಮೂವರಿದ್ದಾರೆ ತಾನೊಬ್ಬನೇ ಸೆಣೆಸಬಲ್ಲೇನೆ?ಅವರ ಬಳಿ ಏನೇನು ಅಯುಧಗಳಿವೆಯೋ ಯಾರಿಗೊತ್ತು? ಹೀರೋ ಆಗಲು ಹೋಗಿ ತಾನು ಪ್ರಾಣವನ್ನು ಕಳೆದುಕೊಂಡರೆ ನನ್ನ ಮನೆಯವರ ಗತಿ ಏನು?ಯಾರಿಗಾದರು ಕಾಲ್ ಮಾಡಿ ಬರಹೇಳಲೇ? ಅವರು ಇಲ್ಲಿ ತಲುಪುವಷ್ಟರಲ್ಲಿ ಎಲ್ಲ ಮುಗಿದು ಹೋಗಿರುತ್ತದೆ. ಸುತ್ತಮುತ್ತಲು ಮನೆಗಳೇ ಇಲ್ಲದ ನಿರ್ಜನ ಪ್ರದೇಶ ಬೇರೆ.ಇದನ್ನೆಲ್ಲಾ ನೋಡಿಯೇ ಇಲ್ಲವೆಂಬಂತೆ ಪುನಃ ಮನೆಗೆ ಹೋಗಿ ಬಿಡುವುದೇ ಒಳ್ಳೇದು ಅಂತನ್ಸಿದ್ದು ಸುಳ್ಳಲ್ಲ. ಬೈಕ್ ಮುಂದೆ ಹೋದ ಹಾಗೆ ಎಡಕ್ಕೆ ಒಂದು ಮಣ್ಣಿನ ರಸ್ತೆ. ಈಗಷ್ಟೇ ವಾಹನ ಹೋದ ಕುರುಹಾಗಿ ಧೂಳೆದ್ದಿತ್ತು.ಅಲ್ಲೇ ಒಂದು ಫರ್ಲಾಂಗ್ ಇರಬಹುದು ಕುರುಚಲು ಗಿಡಗಳು  ಹಾಗು ಪೊದೆಗಳು. ಅದೊಂದು ಪಡ್ಡೆ ಹುಡುಗರ ಅಡ್ಡ ಅಂತಲೇ ಹೆಸರುವಾಸಿ. ಬೈಕ್ ನಿಲ್ಲಿಸಿ ಅತ್ತಲೇ ನೋಡುತ್ತಾ ನಿಂತೆ. ಈ ವರ್ಷದ ಮೊದಲಿಗೆ ದಿಲ್ಲಿಯಲ್ಲಿ ನಡೆದ ರೇಪ್, ನ್ಯೂಸ್’ನಲ್ಲಿ ನೋಡುತ್ತಾ ನಾನು ಸಿಟ್ಟಿನಿಂದ“ ಅವರು ಸಿಕ್ಕಿದ್ರೆ ಅಲ್ಲೇ ಜೀವಂತ ಸುಟ್ಟು ಕೊಂದು ಹಾಕ್ಬೇಕು” ಅಂತೆಲ್ಲ ಬಡಬಡಿಸಿದ್ದು ನೆನಪು ಬಂತು. ನನ್ನ ಆಷಾಢಭೂತಿತನಕ್ಕೆ ನನ್ನ ಮೇಲೆ ಸಿಟ್ಟು ಬಂತು. ಮನೆಯಲ್ಲಿ ಕುಳಿತು ಹೇಳುವುದು ಸುಲಭ ನಿಜ ಜೀವನದಲ್ಲಿ ಅದೆಲ್ಲಾ ಕಷ್ಟ ಸಾಧ್ಯವೇ ಸರಿ ಅಂತ ಮನಸ್ಸು ತನಗೆ ತಾನೇ ಸಮಾಧಾನ ಮಾಡಲು ಪ್ರಯತ್ನಿಸಿದರೂ, ಒಳ ಮನಸ್ಸುಇದೇ ಪರಿಸ್ಥಿತಿ ನನ್ನ ತಂಗಿಗೆ ಬಂದಿದ್ದರೆ ಅಂತ ಚುಚ್ಚಲು ಶುರು ಮಾಡಿತ್ತು. ಅಷ್ಟೇಇನ್ನು ಯೋಚಿಸುತ್ತ ನಿಲ್ಲುವುದು ಸರಿ ಅಲ್ಲ ಎಂದುಕೊಂಡು, ಬಂದದ್ದನ್ನು ಬಂದ ಹಾಗೆ ಎದುರಿಸುವುದೆಂದು ತೀರ್ಮಾನಿಸಿ ಮೊದಲು ಮಾಡಿದ ಕೆಲಸ ಪೋಲಿಸ್ ಸ್ಟೇಷನ್’ಗೆ ಫೋನಾಯಿಸಿದ್ದು. ಬೈಕ್ ಅತ್ತ ತಿರುಗಿಸಿದೆ.ಸ್ವಲ್ಪ ದೂರದಲ್ಲೇ ಪಾರ್ಕ್ ಮಾಡಿ ದೊಡ್ಡ ಪೊದೆಯ ಹಿಂದೆ ನಿಲ್ಲಿಸಿದ್ದ ವ್ಯಾನ್ ಕಡೆ ನಡೆದೇ ಬಿಟ್ಟೆ. ಇಬ್ಬರು ವ್ಯಾನ್ ಹೊರಗೆ ಕಾವಲು ನಿಂತಿದ್ದವರು ಏನೋ ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ಯುತ್ತಾ  ಕೂಡಲೇ ನನ್ನ ಹತ್ರ ಧಾವಿಸಿ ಬಂದ್ರು. ಹೊಡೆದಾಟ ನನಗೆ ಅಭ್ಯಾಸವಿಲ್ಲದಿದ್ದರೂ ಕೈ ಕಾಲುಗಳನ್ನು ಬೀಸಿ ಪ್ರಯತ್ನಿಸಿದೆ, ಏನು ಪ್ರಯೋಜನವಾಗಲಿಲ್ಲ. ಅವರಿಗೆ ಇದೆಲ್ಲ ದಿನ ನಿತ್ಯದ ಕೆಲಸವಿದ್ದಿರಬೇಕು.ಮುಖ ಮೂತಿ ನೋಡದೆ ಇಬ್ಬರೂ ಸೇರಿ ಚೆನ್ನಾಗಿ ತದುಕಿದರು. ಮೂಗು ಬಾಯಿಗಳಿಂದ ರಕ್ತ ಸುರಿಯಲು ಶುರುವಾಯಿತು. ವ್ಯಾನಿನತ್ತ ಓಡಿ ಅದರ ಬಾಗಿಲ ತೆರೆಯಲು ಪ್ರಯತ್ನಿಸಿದೆ. ಒಳಗಿನಿಂದ ಅಸ್ಪಷ್ಟವಾಗಿ ಅವಳ ಕೂಗು ಕೇಳುತ್ತಿತ್ತು. ಬಾಯಿಗೆ ಬಟ್ಟೆ ತುರುಕಿದ್ದರು ಅನ್ನಿಸುತ್ತದೆ. ನನ್ನ ಪ್ರಯತ್ನದಿಂದ ಒಳಗಿದ್ದವನಿಗೆ ಸಿಟ್ಟು ಬಂದು ಅವಳನ್ನು ಬಿಟ್ಟು ಹೊರ ಬಂದ. ಅದೇ ನನಗೂ ಬೇಕಾಗಿತ್ತು. ಅವನ ಮೇಲೆ ಎಗರಿದೆ. ಇನ್ನು ಸಿಟ್ಟಾದ. ಉಳಿದಿಬ್ಬರೂ ಜೊತೆ ಸೇರಿದರು. ನಾನು ಕುಂಟುತ್ತಾ ಸೀದಾ ಮೇನ್ ರೋಡ್ ಬಳಿ ಓಟಕ್ಕಿತ್ತೆ. ಅವರ ಗಮನ ಬೇರೆಡೆ ಸೆಳೆಯದಿದ್ದರೆ ನನ್ನನು ಕೊಂದೇ ಬಿಡುವುದು  ಖಾತ್ರಿಯಾಗಿತ್ತು. ಆಗ ಹೊಳೆದದ್ದು ಒಂದು ಐಡಿಯಾ. ನನ್ನ ಪಾಕೆಟ್’ನಲ್ಲಿದ್ದ ಸಂಬಳದ ಹಣ ತೆಗೆದು ಆಕಾಶಕ್ಕೆಸೆದೆ. ನೋಟುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ರೋಡಿನ ಸುತ್ತಮುತ್ತಲು ಹರಡಿತು. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆಯನ್ನು ಆ ಮೂವರು ಮೂರ್ಖರು ಸುಳ್ಳಾಗಿಸಲಿಲ್ಲ. ನನ್ನನು ಬಿಟ್ಟು ಹಣವನ್ನು ಹೆಕ್ಕಲು ಶುರು ಮಾಡಿದರು. ನಾನು ಮೇಯಿನ್ ರೋಡಿನಲ್ಲೇ ಯಾರಾದರೂ ಬರುತ್ತಾರೋ ಅಂತ ನೋಡುತ್ತಾ ನಿಂತೇ. ಅದೃಷ್ಟ ನನ್ನ ಕಡೆಗಿತ್ತು. ಒಂದು ಆಟೋ ರಿಕ್ಷಾ ಬರುತ್ತಿತ್ತು. ಅವನನ್ನು ನಿಲ್ಲಿಸಿ ಎಲ್ಲ ವಿಷಯ ಹೇಳಿದೆ. ರಿಕ್ಷಾ ಡ್ರೈವರ್ ತಡಮಾಡಲಿಲ್ಲ. ಡಿಕ್ಕಿಯಲ್ಲಿದ್ದ ಒಂದು ಕಬ್ಬಿಣದ ರಾಡನ್ನು ತೆಗೆದು ಹಣ ಹೆಕ್ಕುತ್ತಿದ್ದವರ ಬಳಿ ಹೋಗಿ ಹಿಗ್ಗಾ ಮುಗ್ಗಾ ಬಾರಿಸ ತೊಡಗಿದ.ಆಟೋ ಡ್ರೈವರ್ ಚೆನ್ನಾಗಿಯೇ ಬೆಂಡೆತ್ತಿದ್ದ. ಅಲ್ಪ ಸ್ವಲ್ಪ ಸಹಾಯ ನಾನೂ ಮಾಡಿದೆ ಎನ್ನಿ. ನಂತರ ಅವಳನ್ನು ಹೋಗಿ ಬಿಡಿಸಿ ಕರೆ ತಂದು ಆಟೋದಲ್ಲಿ ಕುಳ್ಳಿರಿಸಿ ಪೋಲಿಸ್ ಬರಲು ಕಾದೆವು. ನಂತರ ಎಲ್ಲ ಸುಖಾಂತ್ಯ ಕಂಡಿತು.

ಈ ದಾರಿಯಲ್ಲಿ ಬರುವಾಗಲೆಲ್ಲ ಇದೆ ನೆನಪುಗಳು ಯಾವಾಗಲು ಮರುಕಳಿಸುತ್ತವೆ. ಫಕ್ಕನೆ ನಾಯೊಂದು ಅಡ್ಡಬಂದು ಸಡನ್ ಬ್ರೇಕ್ ಹಾಕಿದಾಗ,

“ ರೀ ಏನು ಕನಸು ಕಾಣುತ್ತಿದ್ದೀರಾ? ಸರಿಯಾಗಿ ನೋಡಿ ಗಾಡಿ ಓಡಿಸಿ, ಬಸ್ ಸ್ಟಾಂಡ್’ನಲ್ಲಿ ನಿಂತಿರೋರ್ನ್ನೆಲ್ಲ ನೋಡ್ಕೊಂಡು ಹೋದ್ರೆ ಆಕ್ಸಿಡೆಂಟ್ ಆಗುತ್ತೆ ಅಷ್ಟೇ” ಅಂತ ಹುಸಿಮುನಿಸು ತೋರಿಸುತ್ತ ಬೆನ್ನಿಗೆ ಚಿವುಟಿದಳು ನನ್ನ ಅರ್ಧಾಂಗಿ.

ಹೌದು ಅವಳೇ.

Facebook ಕಾಮೆಂಟ್ಸ್

ಲೇಖಕರ ಕುರಿತು

Harikiran H

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಎಂಬ ಗ್ರಾಮದಲ್ಲಿ ವಾಸವಾಗಿರುವ ಹರಿಕಿರಣ್. ಮಂಗಳೂರಿನಲ್ಲಿ ಫಾರ್ಮಸ್ಯೂಟಿಕಲ್ ಕೆಮಿಸ್ಟ್ರಿ
ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಕಾಸರಗೋಡಿನಲ್ಲಿ ಅಲೋಪಥಿಕ್ ಔಷಧಿಗಳ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಕನ್ನಡ ಕಥೆ, ಸಿನಿಮಾ, ಸಂಗೀತ ಮತ್ತು ಸಾಹಿತ್ಯದ ಇತರ ಪ್ರಕಾರಗಳಲ್ಲಿ ಅಭಿರುಚಿಯನ್ನು ಹೊಂದಿರುತ್ತಾರೆ. ಕೆಲವೊಂದು ಸಣ್ಣ ಕಥೆಗಳನ್ನು ಕೂಡ ಬರೆದಿದ್ದಾರೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!