ಸಿನಿಮಾ - ಕ್ರೀಡೆ

ಆತ ಸೋಲಿಗೆ ಹೆದರೆನು ಎಂದ, ಈತ ಸಾವನ್ನೇ ಸೋಲಿಸಿ ಬಂದ….!

ಇಬ್ಬರೂ ವಿಶ್ವಪ್ರಸಿದ್ಧ ಎಡೆಗೈ ಬ್ಯಾಟ್ಸಮನ್’ಗಳು. ಒಮ್ಮೆ ಸ್ಕ್ರೀಜ್ ನಲ್ಲಿ  ಇನ್ನಿಂಗ್ಸ್  ಕಟ್ಟಲು ಶುರು ಮಾಡಿದರೆ ಚೆಂಡನ್ನು  ಅನ್ನು ಬೌಂಡರಿಯ  ಗೆರೆಯನ್ನು ದಾಟಿಸುತ್ತಾ  ಕ್ರೀಡಾಂಗಳದಲ್ಲೇ  ರಂಗೋಲಿಯ ಆಟವನ್ನು ಆಡುವವರು. ದೇಶವೇ ಹುಚ್ಚೆದ್ದು ಕುಣಿಯುವಂತೆ ಮಾಡುವರು. ಒಬ್ಬ ಆರು ಚೆಂಡುಗಳಿಗೆ ಆರು ಸಿಕ್ಸರ್’ಗಳನ್ನು ಬಾರಿಸಿದರೆ ಮತ್ತೊಬ್ಬ ಪ್ರತಿ ಚೆಂಡನ್ನು ಕ್ರೀಡಾಂಗಳದ ಹೊರಗೆ ಹೊಡೆಯಬಲ್ಲ ಸಾಮರ್ಥ್ಯದವನು! ಒಬ್ಬ ನಾಯಕನಾಗಿ ತಂಡವನ್ನು ಮುನ್ನೆಡೆಸಿದರೆ ಇನ್ನೊಬ್ಬ ಆ ನಾಯಕನ ತಂಡಕ್ಕೆ ಆಧಾರವಾದವನು. ಒಬ್ಬ ಹುಟ್ಟು ಹೋರಾಟದ ಸ್ವಭಾವದ ಗುರುವಾದರೆ, ಮತ್ತೊಬ್ಬ ಆತನ ನೆಚ್ಚಿನ ಕೆಚ್ಚಿನ ಶಿಷ್ಯ. ಅಲ್ಲದೆ ಈ ಇಬ್ಬರಲ್ಲೂ ಒಂದು ಗುಣ ಮಾತ್ರ ಹುಲಿಯ ಘರ್ಜನೆಯಂತೆ ಒಂದೇ ಸಮನಾಗಿದೆ. ಅಂದಿಗೂ ಹಾಗು ಇಂದಿಗೂ!  ‘ಕಮ್ ಬ್ಯಾಕ್’ ಅಥವಾ ಪ್ರತಿ ಸೋಲಿನಲ್ಲೂ ಕುಗ್ಗದೆ, ನಿಲ್ಲದೆ, ನುಗ್ಗಿ ಮುನ್ನೆಡೆಯುವ ಗುಣ. ಇಬ್ಬರದೂ ಗೆಲ್ಲುವವರೆಗೂ ಸೋಲನೊಪ್ಪಿಕೊಳ್ಳದ  ಜಾಯಮಾನದ ಬಣ. ಇಬ್ಬರೂ ಆ ಗುಣವನ್ನು ತಮ್ಮ ರಕ್ತದಲ್ಲೇ ಹೊತ್ತು ತಂದವರು. ಇದೆ ಗುಣದಿಂದ ತಮ್ಮದೇ ಆದ ಒಂದು ವಿಶಿಷ್ಟ ಅಭಿಮಾನಿ ಬಳಗವನ್ನು ಗಳಿಸಿಕೊಂಡವರು. ಇವರಲ್ಲಿ ಒಬ್ಬ ತಂಡದಿಂದ ಅದೆಷ್ಟೇ ಹೊರಗುಳಿದರೂ/ಹೊರಗುಳಿಸಿದರೂ ಛಲದಿಂದ ಹಾಗು ಬಿಡದ ಪ್ರಯತ್ನದಿಂದ ಪುಟಿದೆದ್ದು ಮತ್ತದೇ ತಂಡಕ್ಕೆ ಬಂದು ಸೇರುವವನು. ಮತೊಬ್ಬ ಸಾವೇ ಬಂದು ಜೀವನದ ಆಟವನ್ನೇ ಕೊನೆಗೊಳಿಸುತ್ತೇನೆಂದರೂ, ಸಾವನ್ನೇ ಸೋಲಿಸಿ ಮತೊಮ್ಮೆ ಆಟದ ಅಂಗಳಕ್ಕೆ ಬಂದಿಳಿದವನು! ಒಬ್ಬ ಭಾರತ ಕ್ರಿಕೆಟ್ ತಂಡದ ಹೆಮ್ಮೆಯ ನಾಯಕ ಸೌರವ್ ಗಂಗೂಲಿ ಎನ್ನುವುದಾದರೆ ಮತೊಬ್ಬ ಕೋಟ್ಯಂತರ ಕ್ಯಾನ್ಸರ್ ರೋಗಿಗಳಿಗೆ ಸ್ಪೂರ್ತಿಯಾದ ಯುವರಾಜ್ ಸಿಂಗ್.

ಅದು 1991-92 ರ ಆಸ್ಟ್ರೇಲಿಯ ಪ್ರವಾಸ. ಇಪ್ಪತು ವರ್ಷದ ಚಿಗುರು ಮೀಸೆಯ ಪೋರನೊಬ್ಬ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾನೆ. ಬೆಟ್ಟದಷ್ಟು ಪ್ರತಿಭೆಯನ್ನು ಹೊಂದಿದ್ದರೂ ಸರಣಿಯುದ್ದಕ್ಕೂ ಆಡಲು ಸಾಧ್ಯವಾದದ್ದು  ಕೇವಲ ಒಂದೇ ಏಕದಿನ ಪಂದ್ಯ. ಇದಾದ ನಂತರ ಕಾರಣಾಂತರಗಳಿಂದ ತಂಡದಿಂದ ಹೊರಗುಳಿದ ಗಂಗೂಲಿ ಭಾರತ ತಂಡಕ್ಕೆ ಮತ್ತೊಮ್ಮೆ ಬರುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಆಸಾಧ್ಯವನ್ನು ಒಪ್ಪಿಕೊಳ್ಳುವ ಜಾಯಮಾನವಲ್ಲದ ಈತ ಪ್ರತಿದಿನ ಆ ಒಂದು ಘಳಿಗೆಗೋಸ್ಕರ ಹೋರಾಡುತ್ತಾನೆ. ದೇಶೀ ರಣಜಿ ಪಂದ್ಯದಲ್ಲಿ ಬೆವರು ಹರಿಸುತ್ತಾನೆ. ದಿನ, ತಿಂಗಳು, ವರ್ಷಗಳು ಕಳೆದವು. 5 ವರ್ಷಗಳ ಸತತ ಪ್ರಯತ್ನದ ಪರಿಣಾಮ 1996 ರ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿ ತಂಡಕ್ಕೆ ಮತೊಮ್ಮೆ ಕಮ್ ಬ್ಯಾಕ್ ಮಾಡುತ್ತಾನೆ. ಅದು ಆತನ ಚೊಚ್ಚಲ ಟೆಸ್ಟ್ ಪಂದ್ಯ. ಸ್ಥಳ  ಕ್ರಿಕೆಟ್ ನ ಕಾಶಿ ‘ಲಾರ್ಡ್ಸ್’ ಕ್ರೀಡಾಂಗಣ. ಆದೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ಯುವ ಆಟಗಾರ ನಮ್ಮ ರಾಹುಲ್ ದ್ರಾವಿಡ್ ಎಂಬುದು ವಿಶೇಷ. ಪ್ರತಿಭೆ ಅಷ್ಟಿದ್ದರೂ ಕಾರಣವಿಲ್ಲದೆ 5 ವರ್ಷ ತಂಡದಿಂದ ಹೊರಗುಳಿದ ಬರದಿಂದಲೋ ಅಥವಾ ತನ್ನ ಸಹಜ ಬ್ಯಾಟಿಂಗ್ ಕಲೆಯಿಂದಲೋ ಏನೋ ಗಂಗೂಲಿ ತನ್ನ ಮೊದಲ ಪಂದ್ಯದಲ್ಲೇ ಪ್ರಚಂಡ ಶತಕವನ್ನು ಗಳಿಸಿ ಬಿಡುತ್ತಾನೆ. ಅಲ್ಲದೆ ಇದು ಪದಾರ್ಪಣೆಯ ಪಂದ್ಯದಲ್ಲೇ, ಲಾರ್ಡ್ಸ್ ಅಂಗಳದಲ್ಲಿ ಗಳಿಸಿದ ಗರಿಷ್ಟ ದಾಖಲೆಯಾಗಿ ಬಿಡುತ್ತದೆ. ಈತನ ಬಗ್ಗೆ ಕೊಂಕು ನುಡಿಯುತ್ತಿದ್ದ ಅದೆಷ್ಟೋ ಜನರ ಬಾಯನ್ನು ಮುಚ್ಚಿಸುತ್ತದೆ. ಸೌರವ್ ಗಂಗೂಲಿ ಎಂಬ ಯುವ ಆಟಗಾರನ ಹೆಸರು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಕೆತ್ತಲ್ಪಡುತ್ತದೆ. ಅಲ್ಲಿಂದ ಮುಂದೆ ಈ ಬೆಂಗಾಲದ ಹುಲಿಯ ಆಟವನ್ನು ಯಾವ ಬೌಲರ್ ನಿಂದಲೂ  ತಡೆಯಲಾಗಲಿಲ್ಲ ನೋಡ ನೋಡುತ್ತಲೇ ಈತ ವಿಶ್ವದ ಅಗ್ರಕ್ರಮಾಂಕದ ಆಟಗಾರರಲ್ಲಿ ಒಬ್ಬನಾಗಿ ಬಿಡುತ್ತಾನೆ. ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಬಿಡುತ್ತಾನೆ.

1999 ರಲ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ಭುಗಿಲೆದ್ದ ಮ್ಯಾಚ್ ಫಿಕ್ಸಿಂಗ್ ಎಂಬ ಜ್ವಾಲೆ ಭಾರತ ಕ್ರಿಕೆಟ್ನ ಅತಿರಥ ಮಹಾರಥರ ಆಟವನ್ನೇ ಬಲಿ ತೆಗೆದುಕೊಳ್ಳುತ್ತದೆ. ಪರಿಣಾಮ ಭಾರತ ಕ್ರಿಕೆಟ್ ತಂಡಕ್ಕೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ಎದುರಾಗುತ್ತದೆ. ಒಮ್ಮೆ ಸೋತು ಕೈಚೆಲ್ಲಿ ಕೂತಿದ್ದ ಸಚಿನ್ ಗೆ ಮತ್ತೊಮ್ಮೆ ನಾಯಕತ್ವದ ಡ್ರೈವಿಂಗ್ ಸೀಟ್ ಅನ್ನು ಕೊಟ್ಟರೂ ಪದೇ ಪದೇ ಸೋಲಿನ ಪಂದ್ಯಗಳು ಆತನನ್ನು ಮತ್ತಷ್ಟು ಕುಗ್ಗಿಸಿದವು. ಅಷ್ಟರಲ್ಲಾಗಲೇ ಗಂಗೂಲಿ ಉಪನಾಯಕನ ಮಟ್ಟಕ್ಕೆ ಬೆಳೆದು ನಿಂತಿರುತ್ತಾನೆ. ಅಲ್ಲದೆ ತನ್ನ ನೇರ ಹಾಗು ದಿಟ್ಟ ನಿರ್ಧಾರಗಳಿದ ತಂಡದಲ್ಲಿ ಹೆಸರನ್ನೂ ಮಾಡಿರುತ್ತಾನೆ. ಅಂತೂ ನಾಯಕತ್ವದ ಸ್ಥಾನದಿಂದ ಸಚಿನ್ ಕೆಳಗಿಳಿದ ಮೇಲೆ ಅದರ ಜವಾಬ್ದಾರಿ ಗಂಗೂಲಿಯ ಮೇಲೆ ಬಂದಿತ್ತು. ಅಂದು ಆತ್ಮಸ್ಥೈರ್ಯ ಕಳೆದುಕೊಂಡ ತಂಡವನ್ನು ಟೊಂಕ ಕಟ್ಟಿ ನಿಲ್ಲಿಸಬೇಕಾದ ಅನಿವಾರ್ಯತೆ ಆತನ ಮುಂದಿತ್ತು. ಅವಮಾನಕ್ಕೊಳಗಾಗಿದ್ದ  ಭಾರತ ತಂಡವನ್ನು ವಿಶ್ವ ಕ್ರಿಕೆಟ್ನಲ್ಲಿ ಪುನಶ್ಚೇತನಗೊಳಿಸಬೇಕಿತ್ತು. ಈ ಎಲ್ಲಾ ಸವಾಲನ್ನು ಹೊತ್ತು  ಗಂಗೂಲಿ ಅಂದು ತಂಡವನ್ನು ಮುನ್ನೆಡೆಸಿದ. ಅಲ್ಲದೆ  ದಕ್ಷಿಣ ಆಫ್ರಿಕಾದ ವಿರುದ್ಧ ನಾಯಕನಾಗಿ ತನ್ನ ಮೊದಲ ಸರಣಿಯನ್ನೂ ಗೆದ್ದು ತೋರಿಸಿದ.

ಫಿಕ್ಸಿಂಗ್ ಮಾಫಿಯಾದಲ್ಲಿ ಕಳೆದು ಹೋದ ಭಾರತೀಯ ಕ್ರಿಕೆಟ್ನ ದಿಗ್ಗಜರ ಸ್ಥಾನಕ್ಕೆ ಅಷ್ಟೇ ಬಲಿಷ್ಟವಾದ ಹೊಸ ಮುಖಗಳನ್ನು ನೇಮಿಸಬೇಕಾದ ಜವಾಬ್ದಾರಿ ಗಂಗೂಲಿಯ ಮೇಲಿದ್ದಿತು. ಆದರೆ ಅದು ನೀರು ಕುಡಿದಷ್ಟು ಸುಲಭದ ಕೆಲಸವಾಗಿರಲಿಲ್ಲ. ಅಜರುದ್ದೀನ್, ಜಡೇಜಾ, ಮೊಂಗ್ಯರಂತಹ ಕ್ರಿಕೆಟ್ ದಿಗ್ಗಜರನ್ನು ರೀಪ್ಲೇಸ್ ಮಾಡುವುದು ಏನು ಸುಲಭದ ಮಾತೆ? ಆದರೆ ಅದರ ಅನಿವಾರ್ಯತೆ ಈ ನವ ನಾಯಕನ ಮುಂದಿದ್ದಿತು. ಅಷ್ಟರಲ್ಲಾಗಲೇ ಭಾರತ ಕಿರಿಯರ ತಂಡ 19 ವರ್ಷದೊಳಗಿನ ವಿಶ್ವಕಪ್ ಅನ್ನು ಗೆದ್ದುಕೊಂಡಿರುತ್ತದೆ. ಅಲ್ಲದೆ ಸರಣಿ ಶ್ರೇಷ್ಠ ಹಿರಿಮೆಗೆ ಪಾತ್ರನಾದ ಯುವರಾಜ್ ಸಿಂಗ್ ಎಂಬ ಹುಡುಗನ ಬಗ್ಗೆ ಬಹಳಷ್ಟು ಹೆಗ್ಗಳಿಕೆಯ ಮಾತುಗಳು ಕೇಳತೊಡಗಿದವು. ಆತನ ರಣಜಿ ಪಂದ್ಯಗಳ ಅಂಕಿ ಅಂಶಗಳು ಅದಕ್ಕೆ ಪೂರಕವಾಗಿದ್ದವು. ಅಷ್ಟರಲ್ಲಾಗಲೇ ಗಂಗೂಲಿ ಆತನ ಬಗ್ಗೆ ಡೀಟೈಲ್ಡ್ ವಿಚಾರಗಳನ್ನು ಸಂಪಾದಿಸಿರುತ್ತಾನೆ. ಆಟವನ್ನು ಒಮ್ಮೆ ನೋಡುತ್ತಾನೆ. ಅಷ್ಟೇ. ನಂತರ  ICC ನಾಕ್ಔಟ್ ಸರಣಿಗೆ ತಂಡ ಪ್ರಕಟವಾದಾಗ ಯುವಿಯ ಹೆಸರು ಪಟ್ಟಿಯಲ್ಲಿ ಇರುತ್ತದೆ! ಅಂತೂ ಅಕ್ಟೋಬರ್ 3, 2000 ರಂದು ಕೀನ್ಯಾದ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಯುವಿ ಆಡುತ್ತಾನೆ. ಹೀಗೆ ನಾಯಕನಾಗಿ ಮುಂದಿನ ದಿನಗಳ ಕನಸನ್ನು ಹೊತ್ತು ಹೊಸ ಹೊಸ ಮುಖಗಳನ್ನು ಭಾರತ ತಂಡಕ್ಕೆ ಸೇರಿಸಿದ ಕೀರ್ತಿ ಗಂಗೂಲಿಯದು. ಮುಂದೆ ಮೊಹಮ್ಮೆದ್ ಕೈಫ್,ವಿರೇಂದ್ರ ಸೆಹವಾಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಅಲ್ಲದೆ ಧೋನಿಯನ್ನೂ ಸಹ ತಂಡಕ್ಕೆ ತರುವಲ್ಲಿ ಈ ಬಂಗಾಲದ ಯುವರಾಜನ ಶ್ರಮ ಮಹತ್ತರವಾದದ್ದು. ಅಲ್ಲದೆ ಈ ಆಯ್ಕೆಗಳು ಕೇವಲ ನಾಮ್ಕಾ-ವಾಸ್ಥೆ ಹೆಸರುಗಳಾಗದೆ, ಮುಂದಿನ ದಿನಗಳ ಕ್ರಿಕೆಟ್ ದಂತಕಥೆಗಳಾದ ವಾಸ್ತವತೆ ನಮ್ಮ ನಿಮ್ಮೆಲ್ಲರ ಮುಂದೆಯೇ ಇದೆ. ಪ್ರತಿಭೆಯನ್ನು ಗುರುತಿಸುವ ಆ ಮಟ್ಟಿನ ಸೂಕ್ಷ್ಮತೆ ಗಂಗೂಲಿಯ ನಾಯಕತ್ವದಲ್ಲಿದ್ದಿತ್ತು.

ಗಂಗೂಲಿ ಯುವ ಆಟಗಾರರೊಟ್ಟಿಗೆ ಸದೃಢ ತಂಡವೊಂದನ್ನು ಕಟ್ಟಿ 2003 ರ ಏಕದಿನ ವಿಶ್ವಕಪ್ ನಲ್ಲಿ ಫೈನಲ್ ನ ಹಂತದ ವರೆಗೂ ತಂಡವನ್ನು ಮುನ್ನೆಡುಸುತ್ತಾನೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್ ಹಾಗು ಪಾಕಿಸ್ತಾನದಂಥ ಬಲಿಷ್ಟ ತಂಡಗಳ ಆಟಗಾರರ ಮುಂದೆ ತನ್ನ ಚಿಗುರು ಮೀಸೆಯ ಹುಡುಗರನ್ನು ಕಣಕ್ಕಿಳಿಸಿ ಅಂದು ಫೈನಲ್ ನ ವರೆಗೂ ಮುನ್ನೆಡೆಸಿದ್ದು ಅಸಾಧ್ಯದ ವಿಷಯವೇ ಆಗಿದ್ದಿತು! ಭಾರತ ತಂಡ ಅದೆಷ್ಟೇ ಸದೃಢವಾದರೂ ವಿದೇಶಿ ನೆಲದಲ್ಲಿ ಅದರ ಆಟ ‘ಠುಸ್’ ಎನ್ನುವ ಮಾತಿಗೆ ಗಂಗೂಲಿಯ ತಂಡ ಅಪವಾದವಾಗಿದ್ದಿತು. ವಿದೇಶಿ ನೆಲದಲ್ಲಿ ಗೆಲುವನ್ನು ಗಳಿಸುವ ಚಾಣಾಕ್ಷತನವನ್ನು ತಂಡಕ್ಕೆ ಕಲಿಸಿಕೊಟ್ಟದ್ದು ಈ ನಾಯಕನೇ. ಆದರೆ ಅಷ್ಟರಲ್ಲಾಗಲೇ ಕೃಷ್ಣ-ಅರ್ಜುನರಂತಿದ್ದ ಜಾನ್ ರೈಟ್-ಗಂಗೂಲಿ ಜೋಡಿ ಬೇರ್ಪಡುವುದರಲ್ಲಿತ್ತು. ಕೋಚ್ ಜಾನ್ ಅವರ ತಂಡದೊಟ್ಟಿಗಿನ ಒಪ್ಪಂದ ಮುಗಿಯುವುದರಲಿತ್ತು. ಜಾನ್ ರೈಟ್ ನಂತರ ಬೇರೊಬ್ಬ ಕೋಚ್ ಆಗಲೇಬೇಕು ಎಂದಾಗ ಗ್ರೆಗ್ ಚಾಪೆಲ್ ಎಂಬ ನರಿ ಬುದ್ದಿಯ ಕೋಚ್ ಅನ್ನು ತಂಡಕ್ಕೆ ಸೂಚಿಸಿದ್ದು ಗಂಗೂಲಿಯೇ. ಜನರನ್ನು ಆಯ್ಕೆ ಮಾಡುವಾಗ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಆತ ಈ ಬಾರಿ ಬಹಳವಾಗಿಯೇ ಎಡವಿರುತ್ತಾನೆ. 1981 ರ ನ್ಯೂಜಿಲ್ಯಾಂಡ್ ವಿರುದ್ದದ ಸರಣಿಯಲ್ಲಿ ಕೊನೆಯ ಎಸೆತದ್ದಲ್ಲಿ ಎದುರಾಳಿ ತಂಡಕ್ಕೆ ಆರು ರನ್ನುಗಳ ಅವಶ್ಯಕತೆ ಇದ್ದಾಗಲೂ ತನ್ನ ಬೌಲರ್ಗೆ ಅಂಡರ್ ಆರ್ಮ್ ಎಸೆತವನ್ನು ಎಸೆಯಲು ಹೇಳಿಕೊಟ್ಟು ವಿಶ್ವದ ಎಲ್ಲೆಡೆಯಿಂದ ಛೀಮಾರಿ ಹಾಕಿಸಿಕೊಂಡ ಹೇಡಿ ಸ್ವಭಾವದ ಆಟಗಾರನೇ ಈ ಗ್ರೆಗ್ ಚಾಪೆಲ್! ಅಂತೂ ಚಾಪೆಲ್ ಎಂಬ ಸಿಡುಕು ಮೋರೆಯ ಕೋಚ್ ಒಬ್ಬ ತಂಡಕ್ಕೆ ಬಂದು, ವಿಶ್ವ ಕ್ರಿಕೆಟ್ ನಲ್ಲಿ ಉತ್ತುಂಗದಲ್ಲಿದ್ದ ಭಾರತ ತಂಡವನ್ನು ಕಾಲು ಮುರಿದು ಕೂರಿಸಿದ ನಿದರ್ಶನ ಜಗತ್ತಿನ ಮುಂದೆಯೇ ಇದೆ. ಅಲ್ಲದೆ ತನ್ನನ್ನು ತಂಡಕ್ಕೆ ಬರುವಂತೆ ಸೂಚಿಸಿದ್ದ ಗಂಗೂಲಿಯನ್ನೇ ತಂಡದಿಂದ ಈತ ಹೊರದಬ್ಬುತ್ತಾನೆ! ಆದರೆ ಆತ ಚೆಲ್ಲಾಟವಾಡಿದ್ದು ಸದ್ದು ಮಾಡಿದರೆ ಬಾಲ ಮುದುಡಿಕೊಂಡು ಹೆದರಿ ಓಡಿ ಹೋಗುವ ಕಾಂಗರೂಗಳೊಟ್ಟಿಗಾಗಿರಲಿಲ್ಲ. ಅವಮಾನಿಸಿದಷ್ಟು ಪುಟಿದೆದ್ದು ನಿಲ್ಲುವ ಹುಲಿಯ ಸ್ವಭಾವದ ಒಬ್ಬ ವ್ಯಕ್ತಿಯೊಟ್ಟಿಗೆ! ಅಷ್ಟಾಗ್ಯೂ ಅಂದು ಗಂಗೂಲಿ ತನ್ನ ಎಂದಿನ ಉತ್ತಮ ಫಾರ್ಮ್ ನಲ್ಲಿರಲಿಲ್ಲ, ನಿಜ. ಅದನ್ನರಿತ ಆತ ಮತ್ತೊಮ್ಮೆ ತಯಾರಿಯಲ್ಲಿ ತೊಡಗುತ್ತಾನೆ. ತನ್ನ ವೀಕ್ ಪಾಯಿಂಟ್ ಗಳ ಮೇಲೆ ಗಮನ ಹರಿಸುತ್ತಾನೆ. ತಾನೇ ಕಟ್ಟಿದ ತಂಡದಿಂದ ಹೊರಗುಳಿಯುವುದು ಗಂಗೂಲಿಯಿಂದ ಸಹಿಸಲಾಗಲಿಲ್ಲ. ಅಂತೂ ತನ್ನ ಅವಿರತ ಶ್ರಮದಿಂದ ತಂಡಕ್ಕೆ ಮತ್ತೊಮ್ಮೆ ಸೇರಿಕೊಳ್ಳುತ್ತಾನೆ. ಅಲ್ಲದೆ 2007 ರಲ್ಲಿ ಟೆಸ್ಟ್ ಹಾಗು ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳನ್ನೂ ಗಳಿಸುತ್ತಾನೆ. ಹೀಗೆ ಗೆಲ್ಲುವವರೆಗೂ ಸೋಲನ್ನು ಒಪ್ಪಿಕೊಳ್ಳಬಾರದು ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಾನೆ ಈ ಕಮ್  ಬ್ಯಾಕ್  ಕಿಂಗ್!

ಯುವಿ ಮುಂದೆ ಹಂತ ಹಂತವಾಗಿ ತಂಡದಲ್ಲಿ ಬೆಳೆಯತೊಡಗುತ್ತಾನೆ. ತಂಡದ  ಅದ್ಭುತ  ಕ್ಷೇತ್ರರಕ್ಷಕನಾಗಿ, ಮಧ್ಯಮ ಕ್ರಮಾಂಕದ ಬಲಿಷ್ಟ ಬ್ಯಾಟ್ಸಮನ್ ಆಗಿ ಅಲ್ಲದೆ, ಅವಶ್ಯಕತೆ ಎದುರಾದಾಗ  ಭರವಸೆಯ ಬೌಲರ್ ಆಗಿಯೂ ಕೂಡ ಮಿಂಚುತ್ತಾನೆ. ಅಲ್ಲದೆ ತನ್ನ ನೆಚ್ಚಿನ ನಾಯಕನಂತೆ ಪ್ರತಿ ಸೋಲನ್ನೂ ಗೆಲುವಿನ ಮಜಲುಗಳಾಗಿ   ಪರಿವರ್ತಿಸಿಕೊಂಡು ನಡೆಯುತ್ತಾನೆ. ಇವುಗಳ ಮದ್ಯೆ ಅದೇಷ್ಟೋ ಬಾರಿ ತಂಡದಿಂದ್ದ ಹೊರಗುಳಿದರೂ, ಕುಗ್ಗದೆಯೆ ಸತತ ಪರಿಶ್ರಮದಿಂದ ಪ್ರತಿ ಬಾರಿಯೂ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿರುತ್ತಾನೆ. ಇತ್ತ ತನ್ನ ನೆಚ್ಚಿನ ನಾಯಕನ ವೃತ್ತಿ ಜೀವನದ ಏರಿಳಿತಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತಿದ್ದ ಯುವಿ ಅಕ್ಷರ ಸಹ ಗಂಗೂಲಿಯ ಸ್ವಭಾವವನ್ನೇ ಬೆಳೆಸಿಕೊಂಡಿರುತ್ತಾನೆ. ಮಾತಿಗೆ ಮಾತಿನಿಂದ ಉತ್ತವನ್ನು ಕೊಟ್ಟರೆ ಆಟಕ್ಕೆ ಆಟದಿಂದಲ್ಲೇ ಉತ್ತರಿಸುತ್ತಿರುತ್ತಾನೆ. ಆದರೆ 2011 ರ ಶುರುವಿಗಾಗಲೇ ಈತನ ಆರೋಗ್ಯ ಪದೇ ಪದೇ ಹದಗೆಡುತ್ತಿರುತ್ತದೆ. ಉಸಿರಾಟದ ತೊಂದರೆ, ವಾಕರಿಕೆ ಹಾಗು ರಕ್ತವಾಂತಿ ಬಹುವಾಗಿ ಕಾಡುತ್ತಿರುತ್ತದೆ. ಇದು ಆತನ ಶ್ವಾಸಕೋಶದಲ್ಲಿ ಬೆಳೆಯುತ್ತಿದ್ದ ಟ್ಯೂಮರ್ ಎಂದು ಯಾರಿಗೂ ತಿಳಿಯುವುದಿಲ್ಲ! ಅಷ್ಟರಲ್ಲಾಗಲೇ ಏಕದಿನ ವಿಶ್ವಕಪ್ ಸರಣಿಯೂ ಶುರುವಾಗಿರುತ್ತದೆ. ಒಳಗೊಳಗೇ ಬೇಯುತ್ತಿದ್ದ ದೇಹದಲ್ಲೇ ಅಂದು ಯುವಿ ವಿಶ್ವಕಪ್ ನಲ್ಲಿ ಭಾಗವಹಿಸುತ್ತಾನೆ. 362 ರನ್ ಹಾಗು 15 ವಿಕೆಟ್ಗಳ ‘ದಾಖಲೆ’ಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುತ್ತಾನೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಒಬ್ಬ ಕ್ಯಾನ್ಸರ್ ರೋಗಿಯಾಗಿ 4 ‘ಮ್ಯಾನ್ ಆಫ್ ದಿ ಮ್ಯಾಚ್’ ಅವಾರ್ಡ್ ಗಳನ್ನ ಅಂದು ಪಡೆದುಕೊಳ್ಳುತ್ತಾನೆ! ನಂತರ ಕೆಲ ದಿನಗಳ ಬಳಿಕ ಶ್ವಾಸಕೋಶದ ಟ್ಯೂಮರ್ ಪತ್ತೆಯಾಗುತ್ತದೆ. ಅಲ್ಲದೆ ಮುಂದಿನ ಒಂದು  ವರ್ಷಗಳ ಕಾಲ ಚಿಕಿತ್ಸೆ ಹಾಗು ವಿಶ್ರಾಂತಿಯಲ್ಲೇ ಕಳೆಯಬೇಕಾಗುತ್ತದೆ. ಯುವಿ ಎಂದಾಗಲೇ ಸಿಕ್ಸು ಫೋರುಗಳ ಕನಸ್ಸನ್ನು ಕಾಣುತ್ತಿದ್ದವರು ಅಂದು ಆತ ಬದುಕಿ ಉಳಿದರೆ ಸಾಕು ಎಂದು ದೇವರಲ್ಲಿ ಬೇಡಿಕೊಳ್ಳತೊಡಗುತ್ತಾರೆ. ಇನ್ನುಮುಂದೆ ಯುವಿ ಎಂಬ ಶ್ರೇಷ್ಠ ಕ್ರಿಕೆಟಿಗನ ಹೆಸರು ಕ್ರಿಕೆಟ್ ವಲಯದಲ್ಲಿ ಮರೆಯಾಯಿತು ಎನ್ನುವಾಗಲೇ ಅಚ್ಚರಿಯ ಸುದ್ದಿಯೊಂದು ಹೊರಬೀಳುತ್ತದೆ. ಯುವಿ ಕ್ರಿಕೆಟ್ ಆಡಲು ಮತ್ತೊಮ್ಮೆ ಸಜ್ಜಾಗಿದ್ದಾನೆ ಹಾಗು ದೇಶೀ ರಣಜಿ ಪಂದ್ಯದಲ್ಲಿ ಆಡಲು ಅಣಿಯಾಗುತ್ತಿದ್ದಾನೆ ಎಂಬ ಸುದ್ದಿ! ಈ ಸುದ್ದಿಯನ್ನು ಕೇಳಿದ ಜಗತ್ತೇ ಒಂದು ಕ್ಷಣ ನಿಬ್ಬೆರಗಾಯಿತು. ಒಮ್ಮೆ ಯೋಚಿಸಿ ನೋಡಿ. ಕ್ಯಾನ್ಸರ್ ಎಂಬ ಹೆಸರೇ ಅದೆಷ್ಟೋ ಜನರಲ್ಲಿ ಎದೆ ಬಡಿತವನ್ನು ಹೆಚ್ಚುಮಾಡುವ ಈ ಕಾಲದಲ್ಲೂ ಒಬ್ಬ ವ್ಯಕ್ತಿ ಕ್ಯಾನ್ಸರ್ ನೊಟ್ಟಿಗೆ ಹೋರಾಡಿ, ಬದುಕುಳಿದು, ಕೆಲ ದಿನಗಳ ಒಳಗೆ ಬ್ಯಾಟ್ ಹಿಡಿದು ಆಡಲು  ಪಿಚ್ ಗೆ ಬರುವುದೆಂದರೆ ಏನು ಸಾಮನ್ಯದ ಮಾತೆ? ಇದು ಕೇವಲ ಯುವಿ ಯಂತಹ ದೃಢ ವ್ಯಕ್ತಿತ್ವದವರು ಮಾಡಬಹುದಾದ ಸಂಕಲ್ಪ. ‘Passionate’ ಎಂಬ ವಾಕ್ಯಕ್ಕೆ ಹೇಳಿ ಮಾಡಿಸಿದ ಕ್ಯಾರೆಕ್ಟರ್ ಈತನದು ಎಂಬುದು ಜಗಜ್ಜಾಹೀರಾಯಿತು. ಕ್ಯಾನ್ಸರ್ ನ ನಂತರ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿ ನ್ಯೂಜಿಲ್ಯಾಂಡ್ ವಿರುದ್ದದ ಪಂದ್ಯದಲ್ಲಿ 2 ಸಿಕ್ಸರ್ ಗಳನ್ನು ಪ್ರೇಕ್ಷಕರ ಗುಂಪಿನೊಳಕ್ಕೆ ಒಂದರಿಂದೊಂದು ಹೊಡೆದಾಗ  ಹಲವರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರೆ ಇನ್ನೂ ಕೆಲವರು ತಮ್ಮ ತೇವವಾದ ಕಣ್ಣುಗಳನ್ನು ನಿಧಾನವಾಗಿ ಒರೆಸಿಕೊಳ್ಳುತ್ತಿದ್ದರು. ಜೀವನ ಅದೆಷ್ಟೇ ಕಾಡಿದರೂ ಸೋಲದಿರು ಎಂಬ ಆತ್ಮವಿಶ್ವಾಸ ವನ್ನು ಸಾರುವ ಬಲಿಷ್ಟ ಸಿಕ್ಸರ್ ಗಳು ಅವಾಗಿದ್ದವು.

ಇದು ಭಾರತ ಕ್ರಿಕೆಟ್ ಜಗತ್ತಿಗೆ ಹೇಳಿದ ಧೀರರಿಬ್ಬರ ಕಥೆ. ಧೈರ್ಯ, ಛಲ ಹಾಗು ಸತತ ಪರಿಶ್ರಮದಿಂದ ಎಷ್ಟೆಲ್ಲಾ ಸಾಧಿಸಬಹುದು ಎಂದು ತೋರಿದ ನಾಯಕರಿಬ್ಬರ ಚರಿತೆ. ನಾವುಗಳು ಆಡುವ ಗಲ್ಲಿ ಕ್ರಿಕೆಟ್ನಲ್ಲೆ ಕೆಲವೊಮ್ಮೆ ಕಳಪೆ ಪ್ರದರ್ಶನ ತೋರಿದರೆ ಅದೆಷ್ಟು ನೊಂದುಕೊಳ್ಳುತ್ತೇವೂ. ಅದೆಷ್ಟೋ ಬಾರಿ ವಾರವಿಡೀ ಆ ಆಟದ ಬಗ್ಗೆಯೇ ಚಿಂತಿಸಿ ಮರುಗುತ್ತಿರುತ್ತೇವೆ. ಅಂತಹದರಲ್ಲಿ ಭಾರತದಂತ ದೇಶದ ಸಹಸ್ರ ಸಹಸ್ರ ಕ್ರಿಕೆಟ್ ಅಭಿಮಾನಿಗಳ ಮುಂದೆ, ದೇಶದ ಹೆಸರನ್ನು ಹೊತ್ತು ಆಡಲು ಇಳಿದು ಕಳಪೆ ಪ್ರದರ್ಶನವನ್ನು ತೋರುತ್ತ, ವಿಕೆಟ್ ಅನ್ನು ಕೈ ಚೆಲ್ಲಿ, ಪೆವಿಲಿಯನ್ನ ಹಾದಿ ಹಿಡಿದು ತಂಡದಿಂದ ಹೊರಗುಳಿಯುವುದು ಆ ಆಟಗಾರರಲ್ಲಿ ಅದೆಷ್ಟು ಆಳವಾದ ಖಿನ್ನತೆಯನ್ನು ಮೂಡಿಸಬಹುದು!? ಕ್ರಿಕೆಟ್ಟೇ ಜೀವನವಾಗಿರುವ ಅವರಿಗೆ ಇಂತಹ ಹೀನಾಯ ಪ್ರದರ್ಶನಗಳು ಅದೆಂಥಹ ನೋವಿನ ಕೂಪಕ್ಕೆ ನೂಕಬಹುದು? ಆದರೂ ಸಹ ಇವರುಗಳು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ, ಪ್ರತಿ ಬಾರಿಯೂ ಉತ್ತಮ ಪ್ರದರ್ಶನಗಳನ್ನು ನೀಡುವ ವಿಶ್ವಾಸದೊಂದಿಗೆ ಕಣಕ್ಕಿಳಿಯುವ ಗುಣಕ್ಕೆ ಎಲ್ಲರೂ ತಲೆಬಾಗಲೇಬೇಕು. ಅಂದು ಗಂಗೂಲಿ ಎಲ್ಲರ ಊಹೆಗೂ ಮೀರಿ ತಂಡದಿಂದ ಹೊರಗುಳಿದರೂ, ಛಲ ಬಿಡದೆ ಹೋರಾಡಿ ಮತ್ತೊಮ್ಮೆ ತಂಡಕ್ಕೆ ಸೇರಿಕೊಂಡ ಪರಿಯಾಗಲಿ ಅಥವಾ ಯುವಿ ಎಂಬ ಕೆಚ್ಚೆದೆಯ ಆಟಗಾರ ಕ್ಯಾನ್ಸರ್ ಎಂಬ ಮಹಾ ಮಾರಿಯ ವಿರುದ್ಧವೇ ಸೆಣೆಸಿ ಕ್ರಿಕೆಟ್ ಗೆ ಪುನರಾಗಮನಗೊಂಡು ಜಗತ್ತನೇ ಪುಳಕಗೊಳಿಸಿದ ಬಗೆಯಾಗಲಿ ಅಲ್ಲದೆ ಇನ್ನೂ ಹಲವು ದೃಶ್ಯಾಂತಗಳು ಹಾಗು ಅವುಗಳಿಂದ ದೊರೆತ ಪಾಠಗಳು ಇಂದು ಈ ಕ್ರಿಕೆಟ್ ಜಗತ್ತಿನಲ್ಲಿವೆ. ಗಂಗೂಲಿ ಕ್ರಿಕೆಟ್ ಅಂಗಳದಿಂದ ನಿವೃತ್ತಿಗೊಂಡು ಎಂಟು ವರ್ಷಗಳಾದರೂ ಅವನ ಸೇವೆ ಭಾರತೀಯ ಕ್ರಿಕೆಟ್ಗೆ ಇನ್ನೂ ಸಹ ಲಭ್ಯವಾಗುತ್ತಿದೆ. ಯುವಿ ‘YouWeCan’ ಎಂಬ ಸಂಸ್ಥೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ತನ್ನ ಕೈಲಾದ ಮಟ್ಟಿನ ಸೇವೆಯನ್ನು ಮಾಡುತ್ತಿದ್ದಾನೆ. ಮೊನ್ನೆ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಮತ್ತೊಮ್ಮೆ ಭರ್ಜರಿ ಫಾರ್ಮ್ ಗೆ ಮರಳಿದ ಯುವಿ, ಕೊಲ್ಕತ್ತಾ ಪಂದ್ಯದಲ್ಲಿ ಗಂಗೂಲಿಯೊಟ್ಟಿಗೆ ಹಸ್ತಲಾಘವ ಮಾಡುತ್ತಾ ಅನ್ಯೋನ್ಯವಾಗಿ ಮಾತನಾಡುವಾಗ ದಶಕದ ಹಿಂದಿನ ನೆನಪಿನ ಪುಟಗಳು ಒಂದರಿಂದೊಂದು ಹಾಗೆಯೇ ತೆರೆಯತೊಡಗಿದವು. ಗುರು ಶಿಷ್ಯರ ಜೋಡಿಯ ಮೋಡಿ ಅಲ್ಲಿದ್ದ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದವು.

 

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!