ಕಥೆ

ಮರಳು-೧

“ಎಷ್ಟೇ ಮಾಡಿದರೂ ಆಗಿ ಮುಗಿಯದ ಕೆಲಸವಿದು. ನೆಮ್ಮದಿ ಎಂಬುದಿಲ್ಲಿ ಮರೀಚಿಕೆಯಾಗಿಬಿಟ್ಟಿದೆ. ಸಾಧನೆಯೆಂದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ, ಎಲ್ಲರಿಗಿಂತ ಹೆಚ್ಚು ಹಣ ಸಿಗುವ ಉದ್ಯೋಗಕ್ಕೆ ಸೇರಿ ಎದೆಯುಬ್ಬಿಸಿಕೊಂಡು ನಡೆಯುವುದು ಎಂದರಿತ್ತಿದ್ದೆ. ನಿನ್ನೆ ಮೊನ್ನೆಯಷ್ಟೇ ಸೇರಿದ ಕೆಲಸವಿದು. ನೋಡ ನೋಡುತ್ತಲೇ ಐದು ವರ್ಷಗಳಾಗಿಬಿಟ್ಟಿದೆ! ಇಂದು ನಾನು ಸಾಧಿಸಿರುವುದೇನೆಂದು ಒಮ್ಮೆ ಹಿಂತಿರುಗಿ ನೋಡಿದರೆ ಕೇವಲ ಶೂನ್ಯ. ಸಿಗುವ ಸಂಬಳಕ್ಕೆ ಇನ್ನೂ ಕೆಲ ಶೂನ್ಯಗಳನ್ನು ಸೇರಿಸಿಕೊಳ್ಳುವ ಭರದಲ್ಲಿ ಬದುಕನ್ನೇ ಶೂನ್ಯವಾಗಿಸಿಕೊಂಡುಬಿಟ್ಟೆನೆ? ಸಣ್ಣವನಿದ್ದಾಗ ಒಂದು ರೂಪಾಯಿ ಸಿಕ್ಕಾಗ ಸಿಗುತ್ತಿದ್ದ ಆ ಖುಷಿ ಇಂದು ಲಕ್ಷ ಸಿಕ್ಕರೂ ಕಾಣದು ಏಕೆ? ಅಮ್ಮನ ಸೀರೆಯ ಸೆರಗನ್ನು ಬಾಯಿಯೊಳಗೆ ತೂರಿಕೊಂಡು ಕಾರು ಬಸ್ಸುಗಳಂತೆ ಶಬ್ದವನ್ನು ಮಾಡಿಕೊಂಡು ಆಕೆಯ ಹಿಂದೆಯೆ ಓಡಾಡುತಿದ್ದ ಆ ದಿನಗಳಲ್ಲಿ ಸಿಗುತ್ತಿದ್ದ ಆನಂದ ಇಂದು ಇಷ್ಟು ದುಬಾರಿಯಾದ ಕಾರನ್ನು ಓಡಿಸುವಾಗಲೂ ಸಿಗುತ್ತಿಲ್ಲ. ಜೀವನ ಅರ್ಥಹೀನವಾಗುತ್ತಿದೆ. ಕೇವಲ ಕೆಲಸ ಹಾಗೂ ಹಣದ ನಡುವೆ ಸುತ್ತುತ್ತಿದೆ. ಏನೋ ಒಂದು ನನ್ನಿಂದ ದೂರವಾಗುತ್ತಿದೆ. ಈ ತಳಮಳ ಇತರರಿಗೂ ಹೀಗೆಯೇ?”  ಲ್ಯಾಪ್ಟಾಪ್’ನ ಕಪ್ಪು ಪರದೆಯನ್ನು ದಿಟ್ಟಿಸಿ ಯೋಚಿಸುತ್ತಾ ಕುಳಿತ್ತಿದ್ದ ಭರತ. ಸಂಜೆ ಏಳಾದರು ಆಫೀಸ್ಸನ್ನು ಬಿಟ್ಟಿಲ್ಲ. ನಾಳಿನ ಪ್ರೆಸೆಂಟೇಷನ್ ಚಿಂತೆ ಬೇರೆ ತಲೆಯನ್ನು ಕೊರೆಯುತ್ತಿದೆ. ಅದನ್ನು ಬೇರೆಯವರು ಮಾಡಬಲ್ಲರಾದರೂ ಸುಖಾಸುಮ್ಮನೆ ತನ್ನ ಮೇಲೆ ಎಳೆದುಕೊಂಡಿದ್ದಾನೆ. ಇಂದು ತನ್ನೊಳಗೆ ಮೂಡುತ್ತಿರುವ ತಳಮಳದ ಪ್ರಶ್ನೆಗಳಿಗೆ ಮಂಕಾಗಿದ್ದಾನೆ. ನಾಳಿನ ಪ್ರೆಸೆಂಟೇಷನ್ ಮಾಡಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದಾನೆ.

‘ಮುಕ್ತವಾಗಿ ಚಿಂತಿಸಲೂ ಬಿಡದು ಈ ಹಾಳು ಕೆಲಸದ ಗೋಳು’ ಎಂದು ಶಪಿಸುತ್ತಾನೆ. ಇತ್ತೀಚೆಗೆ ತನ್ನಿಂದ ನಡೆಯುವ ಪ್ರತಿಯೊಂದು ಅಚಾತುರ್ಯಕ್ಕೂ ಕೆಲಸದ ಒತ್ತಡವೇ ಕಾರಣವೆಂದು ಭಾವಿಸುತ್ತಾನೆ. ಆದರೆ ಅದೆಷ್ಟು ಸತ್ಯವೆಂದು ಮಾತ್ರ ಅವನಿಗರಿಯದು. ಮೊದಲೆಲ್ಲ ಸಂಜೆ ಐದಕ್ಕೆ ಆಫೀಸಿನಿಂದ ಹೊರಟು ಹತ್ತಿರದಲ್ಲೇ ಇದ್ದ ಸಂಗೀತ ಶಾಲೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ. ದಿನಕಳೆದಂತೆ ಕೆಲಸದ ಒತ್ತಡದಲ್ಲಿ ಸಮಯವೇ ಸಾಲುತ್ತಿರಲಿಲ್ಲ. ನಂತರ ವಾರಾಂತ್ಯದಲ್ಲಿ ಹೋಗಲು ಶುರುಮಾಡಿದ. ಆದರೆ ಇತ್ತೀಚೆಗೆ ವಾರಾಂತ್ಯವೂ ಆಫೀಸ್ಸಿಗೆ ಬರಬೇಕಾಗಿಬರುತ್ತಿದೆ. ಕಳೆದ ಮೂರು ವಾರಗಳಿಂದ ಒಂದು ದಿನವೂ ಸಹ ರಜೆಯನ್ನು ತೆಗೆದಿಲ್ಲ.

“ಸಾರ್ ನಿಮ್ಮನ್ನ ಮ್ಯಾನೇಜರ್ ಕರೀತಾ ಇದ್ದಾರೆ.” ಆಫೀಸಿನ ಹುಡುಗ ಬಾಗಿಲ ಬಳಿ ಬಂದು ಹೇಳಿದಾಗ ಭರತನಿಗೆ ಎಚ್ಚರವಾಯಿತು.

ವಾರಾಂತ್ಯದಲ್ಲಿ ಇರುವ ಕ್ಲೈಂಟ್ ಮೀಟಿಂಗ್’ಗೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕೆಂದು ಮ್ಯಾನೇಜರ್ ಹೇಳಿದ. ವಯಸ್ಸು ಐವತ್ತರ ಆಸುಪಾಸು,ಭರತನಂತೆ ಶ್ರಮಜೀವಿ. ಕೆಲಸದ ಒತ್ತಡದಲ್ಲಿ ಮಂಕಾಗಿರುವ ಭರತನ ಮನವನ್ನು ಅರಿಯಲು ವಿಫಲನಾಗುತ್ತಾನೆ. ಮಾನವನಿಗಾಗಿ ಕೆಲಸ ಎಂಬುವುದಕ್ಕಿಂತ ಹೆಚ್ಚಾಗಿ ಕೆಲಸಕ್ಕಾಗೇ ಮಾನವನಿರುವುದು ಎಂಬ ಒಂದು ರೀತಿಯ ಭ್ರಮೆಯ ಬದುಕು ಅವನದು. ಹೊರಬರುವ ಮುನ್ನ ಭರತ ಒಮ್ಮೆ ಅವನ ಮುಖವನ್ನು ದಿಟ್ಟಿಸಿ ನೋಡುತ್ತಾನೆ. ಭಾವನೆಗಳೇ ಇಲ್ಲದ ಯಂತ್ರದಂತೆ ಜೀವಿಯೊಂದು ತನ್ನ ಮುಂದೆ ಕೂತಿರುವಂತೆ ಅವನಿಗೆ ಭಾಸವಾಗುತ್ತದೆ.

‘ಎನಿಥಿಂಗ್ ಎಲ್ಸ್ Mr.ಭರತ್..?’ ಮ್ಯಾನೇಜರ್’ನ ಸದ್ದಿಗೆ ಚಕಿತನಾಗಿ ‘ನೋ ಸರ್ ನಥಿಂಗ್….’ಎನ್ನುತ್ತಾ ಹೊರಬರುತ್ತಾನೆ.

‘ಕೆಲವರ್ಷಗಳ ನಂತರ ನಾನೂ ಹೀಗೆಯೆ ಆಗುವೆನೆ? ಭಾವನೆಗಳೇ ಅರಿಯದ ಯಂತ್ರದಂತೆ!?’ ಪ್ರಶ್ನೆಗೆ ಉತ್ತರ ಅರಿಯದಾಗುತ್ತಾನೆ.

ಮೊದಲು ಯಾವುದಾದರೊಂದು ಕೆಲಸ. ಆಮೇಲೆ ಬೈಕು.ಆನಂತರ ಕಾರು. ಸಾಲದಕ್ಕೆ ಒಬ್ಬನಿದ್ದರೂ 2BHKಯ ದುಬಾರಿ ಬಾಡಿಗೆಮನೆ. ದುಂದುವೆಚ್ಚಗಳು. ಅವಶ್ಯಕತೆಗಿಂತ ಹೆಚ್ಚಿನ ಬಯಕೆಗಳು. ಬಯಕೆಗಳೇ ಹಾಗೆ, ಒಮ್ಮೆ ಹುಟ್ಟಿದರೆ ಸಾಯವು. ಹಾಗಾಗಿ ಏನೋ ಕೆಲಸಕ್ಕೆ ನಾನು ಹೀಗೆ ಜೋತು ಬಿದ್ದುಗೊಂಡಿರುವುದು. ಪ್ರತಿ ತಿಂಗಳ ಕೊನೆಗೆ ಇವುಗಳಿಗೆಲ್ಲ EMI ಕಟ್ಟಿ ಕೊನೆಗೆ ಉಳಿಯುತ್ತಿದ್ದದು ತಿಂಗಳ ಖರ್ಚಿಗೆ ಸಾಲುತ್ತಿರಲಿಲ್ಲ! ತಾನೇ ತೋಡಿಕೊಂಡ ಗುಂಡಿಯೊಳಗೆ ಬಿದ್ದ ಭರತ ಹೊರಬರಲು ಹವಣಿಸುತ್ತಿದ್ದಾನೆ. ಆದರೆ ಆಗುತ್ತಿಲ್ಲ.

ಈ ವಾರಂತ್ಯವೂ ಕೆಲಸಕ್ಕೆ ಬರಬೇಕೆಂಬುದ ಯೋಚಿಸಿಯೇ ಖಿನ್ನತೆಯಲ್ಲಿ ಮನಮುಳುಗುತ್ತದೆ. ಇದು ಎಂದಿಗೂ ಮುಗಿಯದ ವ್ಯಥೆ. ತುಸು ಸಮಯ ಸುಮ್ಮನಿದ್ದ ಭರತ ಎದ್ದು ನಿಲ್ಲುತಾನೆ. ಇಮೇಲ್ ಮೂಲಕ ತನ್ನ ಸಹೋದ್ಯೋಗಿಗೆ ಕೆಲಸವನ್ನು ಒಪ್ಪಿಸಿ, ಮುಂದಿನ 2ವಾರಕ್ಕೆ ರಜೆಯನ್ನು ಬರೆದು ಹೊರಬರುತ್ತಾನೆ. ಕೆಲ ಹೊತ್ತು ತಳಮಳಗೊಂಡ ಮನ ಸ್ವಲ್ಪ ಹೊತ್ತಿನ ನಂತರ ಶಾಂತವಾಯಿತು. ಆದರೆ ಈ ಎರಡು ವಾರದಲ್ಲಿ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಾನೆ. ಮನೆಗೆ ಹೋದರೆ ಇನ್ನೊಂದು ಬಗೆಯ ಚಿಂತೆ, ಒತ್ತಡ. ಇವೆಲ್ಲವನ್ನೂ ಬಿಟ್ಟು ಕೆಲಕಾಲಕ್ಕೆ ಎಲ್ಲಾದರೂ ದೂರ ಹೋಗಬೇಕೆನಿಸಿತು. ಎಷ್ಟೋ ದಿನಗಳಿಂದ ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತಿದ್ದ ಅಜ್ಜನ ಮನೆಯ ನೆನಪುಗಳು ನೆನಪಾದವು. ಅಲ್ಲಿಗೆ ಹೋಗಿ ಅದೆಷ್ಟೋ ವರ್ಷಗಳಾಗಿವೆ. ಇಲ್ಲಿಂದ ನಾಲ್ಕು ನೂರು ಕೀಲೊಮೀಟರ್ ದೂರದ ಹಳ್ಳಿ. ಆಧುನಿಕತೆಯ ಪರಿಧಿಯ ಹೊರಗಿರುವ ಪ್ರದೇಶ. ಆದರೆ ಹಸಿರುಸಿರಿಯಿಂದ ಕಂಗೊಳಿಸುವ ಶಾಂತವಾದ ಜಾಗ. ಕೆಲವರ್ಷಗಳ ಹಿಂದೆ ಒಮ್ಮೆ ಹೋಗಿದ್ದಾಗ ವಾಪಾಸ್ಸೆ ಬರಲು ಮನವು ಒಪ್ಪುತ್ತಿರಲಿಲ್ಲ! ಆಧುನಿಕ ಸೌಲಭ್ಯಗಳಷ್ಟೇನೂ ಇಲ್ಲದಿದ್ದರೂ ಅದೇನೋ ಒಂದು ಆಕರ್ಷಣೆ ಆ ನೆಲದಲ್ಲಿ. ಅದೇನೋ ಇಂದು ಮತ್ತೊಮ್ಮೆ ಅಲ್ಲಿಗೆ ಹೋಗಲು ಮನಬಯಸಿದೆ. ‘ಮನೆಯವರ್ಯಾರು ಬೇಡ. ತಾನೊಬ್ಬನೇ ಹೋಗಿಬರುವೆ’ ಎಂದುಕೊಳ್ಳುತ್ತಾನೆ. ಅದೇನೋ ಒಂದು ಬಗೆಯ ಖುಷಿ ಮನದೊಳಗೇ ಮೂಡುತ್ತದೆ. ಅಪ್ಪ-ಅಮ್ಮನಿಗೆ ಫೋನ್ಮಾಡಿ ಹೇಳಿ ಆ ದಿನ ರಾತ್ರಿಯೇ ರೈಲನ್ನು ಹಿಡಿದು ಹೊರಡುತ್ತಾನೆ.

ರೈಲಿನ ದಡಬಡ ಸದ್ದಿನಲ್ಲೂ ದಣಿದ ಕಣ್ಣುಗಳು ನಿದ್ರೆಗೆ ಶರಣಾಗುತ್ತವೆ. ಕೆಲಸಮಯದ ನಂತರ ಕಣ್ಣುತೆರೆದಾಗ ಮುಂಜಾವಿನ ಮಬ್ಬಾದ ಗಿಡ ಮರ ಹಾಗೂ ಗದ್ದೆಗಳು ಕಾಣತೊಡಗುತ್ತವೆ. ನೋಡನೋಡುತ್ತಲೇ ಆಕಾಶ ನಿಧಾನವಾಗಿ ಕೆಂದಾವರೆಯ ಬಣ್ಣತಳೆದು ನಿಲ್ಲುತ್ತದೆ. ಕಿಟಕಿಯಿಂದ ತಂಪಾದ ಗಾಳಿ ಮುಖವನ್ನು ಅಪ್ಪಳಿಸಿದಾಗ ಹಿತವೆನಿಸಿ ಕೆಲ ಹೊತ್ತು ಹಾಗೆ ಕಣ್ಣನು ಮುಚ್ಚಿ ಮುಖವನ್ನು ಗಾಳಿಗೆ ಒಡ್ಡಿಕೊಂಡಿರುತ್ತಾನೆ.

‘ಮಗಾ..ಚಳಿ ತುಂಬಾಇದೆ…ಕಿಟಿಕಿ ಹಾಕಪ್ಪ’ ಎಂದ ತಾತನ ಸದ್ದಿಗೆ ಒಲ್ಲದ ಮನಸ್ಸಿಂದ ಕಿಟಕಿಯನ್ನ ಕೆಳಗೆ ಎಳೆಯುತ್ತಾನೆ. ‘ಯಾವೂರಪ್ಪ ನಿಂದು.?’ ಎಂದು ಕೇಳಿದ ತಾತನಿಗೆ, ತಾನು ಹೋಗುತ್ತಿರುವ ಊರು ವಿಳಾಸವನ್ನೆಲ್ಲ ಹೇಳಿದಾಗ ಅವರು ‘ಅರ್ರೆ…ನೀನು ನಮ್ಮ ಪಟೇಲರ ಮೊಮ್ಮಗ…ನಾನು ಅದೇ ಊರು’ ಎಂದು ಅವರು ಪರಿಚಯ ಮಾಡಿಕೊಳ್ಳುತ್ತಾರೆ. ಬಿಳಿ ಪಂಚೆ ಹಾಗು ಶರ್ಟನ್ನು ಧರಿಸಿದ್ದ ಅವರು ತಲೆಗೊಂದು ಪೇಟವನ್ನು ಸುತ್ತಿದ್ದರು. ತಿಳಿಯಾದ ಮೀಸೆ ಗಡ್ಡವನ್ನು ಬಿಟ್ಟಿದ್ದ ಅವರ ವಯಸ್ಸು ಸುಮಾರು ಎಪ್ಪತ್ತರ ಆಸುಪಾಸು. ಎಲ್ಲೋ ನೋಡಿದ ನೆನಪು. ಆದರೆ ಸರಿಯಾಗಿ ಬಲ್ಲದ ಹೊಸ ವ್ಯಕ್ತಿಯೊಟ್ಟಿಗೆ ಹೆಚ್ಚೇನೂ ಸಂಭಾಷಿಸದೆ ಭರತ ಕಿಟಕಿಯ ಮೂಲಕ ರಮಣೀಯವಾದ ಪರಿಸರವನ್ನು ನೋಡುತ್ತಾ ಕೂರುತ್ತಾನೆ. ಪರಿಸರವನ್ನು ನೋಡುತ್ತಾ ಒಂದು ನೆಮ್ಮದಿಯ ನಗೆ ಭರತನಲ್ಲಿ ಮೂಡಿದರೆ,ಆತನನ್ನು ನೋಡಿ ಹಿರಿಯ ಮುಗಳ್ನಗೆಯೊಂದು ತಾತನಲ್ಲಿ ಮೂಡುತ್ತದೆ.

ಕೆಲ ಸಮಯದಲ್ಲೇ ರೈಲು ಊರನ್ನು ತಲುಪುತ್ತದೆ. ಭಾರವಾದ ಬ್ಯಾಗನ್ನು ಹೊರಗೆಳೆಯಲಾಗದೆ ಗೋಳಾಡುತ್ತಿದ್ದ ತಾತನಿಗೆ ಸಹಾಯ ಮಾಡಲು ಹೋಗಿ ಬ್ಯಾಗಿನ ತುಂಬೆಲ್ಲಾ ಪುಸ್ತಕಗಳೇ ಇರುವುದನ್ನು ಕಂಡು ಭರತ ಕೊಂಚ ಆಶ್ಚರ್ಯಚಕಿತನಾಗುತ್ತಾನೆ. ಬ್ಯಾಗನ್ನು ಎಳೆದು ರೈಲಿನಿಂದ ಹೊರತಂದು ತಾತನ ಬಳಿ ಇಟ್ಟ ಭರತ ಊರಿಗೆ ಹೋಗುವ ದಾರಿಯಾವುದೆಂದು ಕೇಳಿದಾಗ,

‘ಇಲ್ಲಿಂದ ಗದ್ದೆ ಆಸಿ ನಡೆದ್ರೆ ಮೂರ್ ಕಿಲೋಮೀಟ್ರು..ಆಟೋ ಹಿಡ್ದು ಆ ಟಾರ್ ರಸ್ತೇಲಿ ಹೋದ್ರೆ ಒಂದುವರೆ…ನೀ ಬಾ ನನ್ನೊಟ್ಟಿಗೆ.ನಾನ್ಹೇಗಿದ್ರು ಆಟೋ ಮಾಡ್ಲೆಬೇಕು ‘ ಎಂದ ಅಜ್ಜನನ್ನು ನೋಡಿದ ಭರತ ಕೆಲ ಹೊತ್ತು ಸುಮ್ಮನಾದ.

‘ನಂಗೊತ್ತಪ್ಪ, ನಿಂಗೆ ಗದ್ದೆದಾರೀಲೆ ಹೋಗ್ಬೇಕು ಅಂತ ನಿನ್ಮನ್ಸ್ ಅಂತಿದೆ.ಸರಿ, ನೀ ಹಾಗೆ ಹೋಗು.ನಾನ್ ಆಟೋ ಇಟ್ಕೊಂಡು ಬರ್ತೀನಿ..ಊರಲ್ ಸಿಗೋಣ’ ಎನ್ನುತ ತಾತ ಆಟೋದವನನ್ನು ತನ್ನ ಬಳಿ ಕರೆದ. ತನ್ನ ಮನಸ್ಸಿನಲ್ಲಿ ಏನಿದೆ ಎಂದು ಈ ತಾತನಿಗೆ ಹೇಗೆ ತಿಳಿಯಿತು ಎಂದು ಭರತ ಕಳವಳಗೊಂಡ. ಬ್ಯಾಗಿನ ತುಂಬ ಪುಸ್ತಕ,ಅಲ್ಲದೆ ಆ ತಾತನ ಮಾತಿನ ಉಚ್ಚಾರಣೆಯೂ ಹಳ್ಳಿಯ ಇತರರಿಗಿಂತ ತುಸು ಭಿನ್ನವಾಗಿದ್ದರಿಂದಲೇ ಭರತನಿಗೆ ಅವರ ಮೇಲೆ ಕುತೂಹಲ ಮೂಡಿತು. ಅಲ್ಲದೆ ಅವರನ್ನು ತಾನು ತೀರಾ ಸಮೀಪದಿಂದ ಬಲ್ಲೆನೆಂಬ ಭಾವ. ಆದರೆ ನೆನಪಿಗೆ ಬಾರದು. ಅಷ್ಟರಲ್ಲಿ ಅವರು ಆಟೋವನ್ನೇರಿ ಹೊರಟುಹೋದರು. ಭರತ ನಿಧಾನವಾಗಿ ಗದ್ದೆಯ ಬದುಗಳನ್ನುಇಳಿಯುತ್ತಾ ಊರಿನೆಡೆ ಸಾಗಿದ.

ಮುಂಜಾವಿನ ಕಿರಣಗಳು ಮೈಮೇಲೆ ಬಿದ್ದಾಗ ಭರತನಿಗೆ ಹಿತವೆನಿಸಿತು. ಹಕ್ಕಿ-ಪಕ್ಷಿಗಳ ಚಿಲಿಪಿಲಿಯ ಮಧುರ ಸ್ವರಗಳನ್ನುಆಸ್ವಾದಿಸುತ್ತಾ ನಿಧಾನವಾಗಿ ಮುನ್ನೆಡೆದ. ಮುಂಜಾವಿನ ‘ಅಸಾವರಿ’ ರಾಗವನ್ನು ಮನದೊಳಗೆ ಹಾಗೆ ಹಾಡಿಕೊಳ್ಳಬೇಕೆನಿಸಿತು. ಅದಾಗಲೇ ಮನಸ್ಸು ಕೆಲಸದ ಚಿಂತೆ ಒತ್ತಡಗಳಿಂದ ದೂರವಾಗಿತ್ತು. ಹಸಿರು ಸಿರಿಗಳ ನಡುವೆ ನಲಿಯುತ್ತಿತ್ತು. ಮನದೊಳಗೆ ರಾಗವನ್ನು ಗುನುಗತೊಡಗಿದ.

ಅದಾಗಲೇ ಗದ್ದೆಯ ಕೆಲಸಕ್ಕೆ ಹಾಜರಾಗಿದ್ದ ಮಂಜ ಒಬ್ಬ ಪೇಟೆಯ ವ್ಯಕ್ತಿ ಬ್ಯಾಗೊಂದನ್ನು ತಗುಲಾಕಿಕೊಂಡು ತನ್ನ ಪಾಡಿಗೆ ಏನೋ ಗುನುಗಿಕೊಳ್ಳುತ್ತಾ ನಡೆಯುತ್ತಿದ್ದದ್ದನು ನೋಡಿ ತನ್ನ ಕೆಲಸವನ್ನು ಬಿಟ್ಟು ಈತನನ್ನೇ ದಿಟ್ಟಿಸಿ ನೋಡುತ್ತಾನೆ.

“ಯಾವೂರಪ್ಪ ನಿಮ್ದು.? ಯಾರ್ಮನೆ ಕಡಿ ಹೊರಟಿದಿರಿ?’ ಎಂಬ  ಮಂಜನ ಪ್ರಶ್ನೆಗೆ ರೈಲಿನಲ್ಲಿ ಸಿಕ್ಕ ತಾತನಿಗೆ ನೀಡಿದ ಉತ್ತರವನ್ನೇ ನೀಡಿ ಮುನ್ನೆಡೆದ. ಮಂಜ ಖುಷಿಯಿಂದ ಅದೇನೋ ಅಂದಿದ್ದನ್ನೂ ಲೆಕ್ಕಿಸದೆ ರಾಗವನ್ನು ಗುನುಗುತ್ತಾ ಸಾಗಿದ. ಕೆಲಹೊತ್ತಿನ ನಂತರ ಗದ್ದೆಯ ಬದುಗಳನ್ನು ಏರಿ ಊರನ್ನು ಪ್ರವೇಶಿಸಿದ.

‘ದಿನ ಕಳೆದಂತೆ ಸಿಟಿಗಳ ರೀತಿ ಹಳ್ಳಿಗಳು ಬದಲಾಗವು. ಹಳ್ಳಿ ಅಂದು ಹೇಗಿತ್ತೋ ಈಗಲೂ ಹಾಗೆಯೇ ಇದೆ. ಸುಂದರವಾಗಿದೆ’ ಎಂದುಕೊಳ್ಳುತ್ತಾನೆ. ಅರಳಿಕಟ್ಟೆಯ ಮೇಲೆ ಕೂತಿರುವ ಜನರ ಗುಂಪು, ಊರ ಬಾವಿಯಿಂದ ನೀರನ್ನು ಎಳೆದು ಬಿಂದಿಗೆಯಲ್ಲಿ ಹೊತ್ತೊಯ್ಯುತ್ತಿರುವ ಹೆಂಗೆಳೆಯರು, ಅವರ ಕೈಬಳೆಗಳು ಒಂದಕೊಂದು ತಾಗಿ ಮೂಡುವ ಇಂಪಾದ ಸದ್ದು, ಮನೆಯ ಮುಂಬದಿಗೆ ಕಟ್ಟಿರುವ ಹಸು, ಎತ್ತು ಹಾಗೂ ಆಡುಗಳು, ಊರಶಾಲೆ ಹಾಗೂ ಅದರ ಮುಂದೆ ಜೀವವೇ ಪಣವಿಟ್ಟಂತೆ ಅರಚಿ ಆಡುತ್ತಿರುವ ಮಕ್ಕಳು. ಭರತನಿಗೆ ಅಪ್ಪನೊಟ್ಟಿಗೆ ಕೊನೆಯ ಬಾರಿ ಬಂದ ದಿನಗಳು ನೆನಪಾದವು. ತುಸುದೂರ ನಡೆದು ಬಲಕ್ಕೆ ತಿರುಗಿದಾಗ ಊರ ದೊಡ್ಡಮನೆ, ತನ್ನ ಅಜ್ಜನ ಮನೆ ಕಂಡಿತು. ಚಿಕ್ಕವನಿದ್ದಾಗ ಅತ್ತು ಕಾಡಿ ಇಲ್ಲಿಗೆ ಬರಲು ಹವಣಿಸುತ್ತಿದ್ದ ಭರತ ದೊಡ್ಡವನಾಗುತ್ತಿದ್ದಂತೆ ತನಗರಿವಿಲ್ಲದಂತೆ ಇಲ್ಲಿಂದ ದೂರವಾಗುತ್ತಾನೆ. ಇತ್ತೀಚೆಗೆ ಇಲ್ಲಿನ ಬಾಲ್ಯದ ನೆನಪುಗಳೂ ಮಾಸಿವೆ.

‘ಅರ್ರೆ..ರೈಲಿನಲ್ಲಿ ಸಿಕ್ಕ ತಾತ ದೊಡ್ಡೆಗೌಡ್ರಲ್ಲವೇ?!’ ಎಂಬ ಪ್ರಶ್ನೆ ಅಚಾನಕ್ಕಾಗಿ ಭರತನಲ್ಲಿ ಮೂಡುತ್ತದೆ.

‘ನನಗೆ ಗೊತ್ತಿಲ್ಲದಿರಬಹುದು. ಅವರಾದರೂ ನನ್ನ ಗುರುತು ಹಿಡಿಯಬಹುದಿತ್ತಲ್ಲಾ?ಇಲ್ಲಾ, ಅವರಿಗೂ ನಾನು ಮರೆತು ಹೋಗಿರಬಹುದೇ?ಅವರ ಮಾತಿನಲ್ಲಿ ನಾನು ಅವರಿಗೆ ಬಲ್ಲೆ ಎಂಬ ಅನ್ಯೋನ್ಯತೆಯಂತು ಇರಲಿಲ್ಲ…’ಎಂದುಕೊಳ್ಳುತ್ತಾನೆ.

ಅಜ್ಜನಮನೆಯನ್ನು ಒಮ್ಮೆ ಹಾಗೆಯೇ ನೋಡುತ್ತಾನೆ. ಸುಣ್ಣ-ಬಣ್ಣಗಳು ಕಾಣದಿದ್ದರೂ ಗಟ್ಟಿಮುಟ್ಟಾದಮನೆ. ಮನೆಯ ಮುಂದಿನ ಮರದ ಕಂಬಗಳು ಇನ್ನೂ ಹಾಗೆಯೇ ಇವೆ ಎಂದು ನೋಡುತ್ತಿರುವಾಗಲೇ ‘ಯಾರದು.?’ ಎಂಬ ಹೆಣ್ಣದನಿಯೊಂದು ಮೂಡುತ್ತದೆ. ಬಾಗಿಲ ಸಂದಿಯಿಂದ ಬಂದ ಆ ಸದ್ದಿನ ಕಡೆ ಮುಖಮಾಡಿ ‘ನಾನು ಭರತ… ‘ ಎಂದು ಕೂಗುತ್ತಾನೆ. ಭರತನ ಹೆಸರನ್ನು ಕೇಳಿದ ಆಕೆ ಜಲ್-ಜಲ್ ಎಂಬ ಗೆಜ್ಜೆಯ ಸದ್ದಿನೊಂದಿಗೆ ಒಳ ಓಡುತ್ತಾಳೆ.

ಮೆಟ್ಟಿಲನ್ನು ಏರಿ, ಶೂಗಳನ್ನು ಬಿಚ್ಚಿಟ್ಟು ‘ಅಜ್ಜಾ..’ ಎಂದು ಕೂಗುತ್ತಾ ಭರತ ಒಳ ನಡೆಯುತ್ತಾನೆ.

‘ಅಯ್ಯಾ..ಭರತ..ಬಾ..ಹೆಂಗಿದ್ದೀಯಪ್ಪ.. ಅಪ್ಪಹೆಂಗವ್ನೆ.?’ ಎಂದು ಕನ್ನಡಕವನ್ನು ಹಾಕಿ ಬಂದ ಅಜ್ಜ, ಭರತನನ್ನು ನೋಡಿ ಆತನ ಮುಖವನ್ನು ತನ್ನ ಕೈಗಳಿಂದ ಎಳೆದು ಕೆನ್ನೆಯ ಮೇಲೆ ಮುತ್ತಿಕ್ಕುತ್ತಾರೆ.

‘ಅವೇ ದೊಡ್ಡ ಕೈಗಳು. ಇಂದು ಒಣಗಿ ಸುಕ್ಕಾಗಿವೆ’ ಎಂದುಕೊಳ್ಳುತ್ತಾನೆ ಭರತ.

‘ಮರಕೋತಿ ಆಡಲು ಮರವೇರಿ ಹೆದರಿ,ಇಳಿಯಲು ಆಗದೆ ಅಳುತ್ತಾ ಮರದಲ್ಲೇ ಕೂತಿರುವಾಗ,ಅಪ್ಪ-ಅಮ್ಮರಿಬ್ಬರೂ ಮರದ ಕೆಳಗೆ ನಿಂತು ಬಯ್ಯುತಿರುವಾಗ, ಅಜ್ಜ ಮಾತ್ರ ಹೇಗಾದರೂ ಮಾಡಿ ಮರವೇರಿ, ಭರತ ಹೆದರಿ ಅವಿತು ಕೂತಲ್ಲಿಗೆ ಬಂದು ಇವೇ ಕೈಗಳಿಂದ ಮೃದುವಾಗಿ ಎತ್ತಿ ಕೆಳಗೆ ಇಳಿಸುತ್ತಿದ್ದರು. ಜೀವವೇ ಹೋಯಿತೆಂದು ನಡುಗಿ ಹೋಗುತ್ತಿದ್ದ ಭರತನಿಗೆ ಈ ಕೈಗಳು ಬಳಿಗೆ ಬಂದವೆಂದರೆ ಎಲ್ಲಿಲ್ಲದ ಧೈರ್ಯ! ಅಪ್ಪ ಅಮ್ಮರ ಬೈಗುಳದ ಭಯವೆಲ್ಲ ಮಾಯ! ಮರದ ಕೆಳಗೆ ಇಳಿಯುತ್ತಿದ್ದದ್ದನೆ ಕಾಯುತ್ತಿದ್ದ ಅಪ್ಪ, ಕೋಲನ್ನು ಹಿಡಿದು ಹೊಡೆಯಲು ಸಿದ್ದರಾಗಿರುತ್ತಿದ್ದರು. ಇಳಿದೊಡನೆಯೇ ಅಜ್ಜನ ಹಿಂದೆ ಹೋಗಿ ಅವರ ಕಾಲುಗಳನ್ನು ಭರತ ಬಿಗಿಯಾಗಿ ಅಪ್ಪಿಕೊಳ್ಳುತ್ತಿದ್ದ. ಹೊಡೆಯಲು ಬರುತ್ತಿದ್ದ ಅಪ್ಪನ ಕೋಲನ್ನು ಕಿತ್ತು ಎಸೆಯುತ್ತಿದ್ದರು ಅಜ್ಜ’ ಎಂಬ ನೆನಪುಗಳು ಅವರ ಹಸ್ತಗಳ ಸ್ಪರ್ಶದಿಂದ ಒಂದರಿಂದೊಂದು ಮೂಡುತ್ತವೆ.

‘ಎಲ್ಲ ಚೆನ್ನಾಗಿದ್ದಾರೆ,ನೀನ್ಹೇಗಿದ್ದೀಯ ಅಜ್ಜ..’ಎಂದುಕೇಳುತ್ತಾನೆ.

‘ನಂದ್ಬಿಡಪ್ಪ..ಹಿಂಗ್ಅವ್ನಿ.. ಯೇಟ್ದೊಡ್ಡವನಾಗಿದ್ದೀಯಪ್ಪ ನೀನು..ಬರಿ ಫೋನಲ್ಲಿ ದನಿ ಕೇಳಿ ಕಣ್ಮುಂದೆ ನೋಡಿದ್ರೆ ಗುರ್ತೇ ಸಿಗಾಕಿಲ್ಲ.. ಅದ್ರು ಮ್ಯಾಗೆ ಈ ಮ್ಯಾಕೆ ಗಡ್ಡ ಬೇರೆ’ ಎಂದು ನಗುತ್ತಾ ‘ಫ್ರೆಂಚ್ಕಟ್’ ಎಂದು ಬಿಟ್ಟಿದ್ದ ಗಡ್ಡವನ್ನು ಒಮ್ಮೆ ಮುಟ್ಟಿ ನಗುತ್ತಾರೆ.

‘ಗೌರಿ..ಕಾಪಿ ತಾರೆ ಮಗಿಗೆ..’ ಎಂದು ಕೂಗಿದ ಅಜ್ಜನನ್ನು ಗೌರಿ ಯಾರೆಂದು ಕೇಳುತ್ತಾನೆ.

‘ನಮ್ ದೊಡ್ಡೆಗೌಡ್ರ ಮೊಮ್ಮಗ್ಳು ..ಯಾಕ್ ಮರ್ತ್ಹೋಯಿತೇನ.. ನೀನ್ ಅವಳೊಟ್ಟಿಗೆ ಕುಂಟೆಪಿಲ್ಲೆ ಆಡ್ತಾ ಇದ್ರೆ, ಹಳ್ಳಿ ಹುಡುಗ್ರು ನಿನ್ನ ಹುಡ್ಗಿ ಹುಡ್ಗಿ ಅಂತ ರೇಗುಸ್ತಿದ್ರಲ್ಲ..’  ಎಂದು ನಗುತ್ತಾ ಕೇಳಿದಾಗ ಭರತನಿಗೆ ನೆನಪಾಗುತ್ತದೆ. ಹದಿಮೂರು ವರ್ಷಗಳ ಹಿಂದೊಮ್ಮೆ ಅಪ್ಪನೊಟ್ಟಿಗೆ ಬಂದಾಗ ಕೊನೆಯದಾಗಿ ಆಕೆಯನ್ನು ನೋಡಿದ ನೆನೆಪು. ಅದಾದ ನಂತರ ಅಪ್ಪ,ಅಜ್ಜನೊಟ್ಟಿಗೆ ಮುನಿಸಿಕೊಂಡು ಇತ್ತ ಕಡೆ ಬರಲೇ ಇಲ್ಲ. ಭರತನನ್ನೂ ಬರಲು ಬಿಡಲಿಲ್ಲ. ಇಂದೂ ಸಹ ಹೊರಡುವಾಗ ಒಪ್ಪಲಿಲ್ಲ. ನಂತರ ಹಠಕ್ಕೆ ಮಣಿದು ಜಾಸ್ತಿದಿನ ಇರಬಾರದು, ಜಾಸ್ತಿಜನರೊಟ್ಟಿಗೆ ಬೆರೆಯಬಾರದು, ಅದು,ಇದು ಎಂದು ಫೋನಿನಲ್ಲಿ ಬಹಳ ಹೇಳಿಯೇ ಕಳಿಸಿದ್ದರು. ಆದರೂ ಭರತ ಅದ್ಯಾವುದನ್ನೂ ಲೆಕ್ಕಿಸದೆ ಬಂದಿರುತ್ತಾನೆ.

 

ಮುಂದುವರಿಯುವುದು…

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!