‘ಕಿರಿಕ್ ಪಾರ್ಟಿ’ – ಕರ್ನಾಟಕದಾದ್ಯಂತ ಎಲ್ಲ ಸಿನಿಮಾ ಪ್ರಿಯರ ಬಾಯಲ್ಲೂ ಇದರದ್ದೇ ಸುದ್ದಿ ಈಗ. ಸಿನಿಮಾ ತೆರೆಕಾಣುವ ಮುಂಚೆಯೇ ಹುಚ್ಚು ಹಿಡಿಸುವ ಮೆಚ್ಚು ಹಾಡುಗಳಿಂದ ಅಪಾರವಾದ ನಿರೀಕ್ಷೆ ಮೂಡಿಸಿತ್ತು. ಇದೀಗ ಆ ಎಲ್ಲ ನಿರೀಕ್ಷೆಗಳನ್ನು ಅಚ್ಚುಕಟ್ಟಾಗಿ ಪೂರ್ತಿಗೊಳಿಸಿರುವ ಈ ಚಿತ್ರ ಕನ್ನಡದ ಚಿತ್ರ ಪ್ರೇಕ್ಷಕರಿಗೆ ಹಳೆ ವರ್ಷಾಂತ್ಯ ಹಾಗೂ ಹೊಸ ವರ್ಷಾರಂಭವನ್ನು ನೆನಪಿನಲ್ಲುಳಿಯುವಂತೆ ಮಾಡಿದೆ.
ಕಾಲೇಜ್ ಎಂದ ಕೂಡಲೇ ನೆನಪಾಗುವುದು ಯಾವ ಸೆಮಿಸ್ಟರ್ ಪರೀಕ್ಷೆಗಳೂ ಅಲ್ಲ, ಗಳಿಸಿದ ಅಂಕಗಳೂ ಅಲ್ಲ, ಅಸೈನ್’ಮೆಂಟ್-ಪ್ರೆಸೆಂಟೇಶನ್’ಗಳೂ ಅಲ್ಲ. ಕಾಲೇಜ್ ಎಂದರೆ ಮೊದಲು ನೆನಪಾಗುವುದು ಗೆಳೆಯರು ಮತ್ತು ಅವರ ಜೊತೆ ಅಲ್ಲಿ ನಡೆಸಿದ ಕಿರಿಕ್’ಗಳು. ಅದೇ ಈ ಕಿರಿಕ್ ಪಾರ್ಟಿ ಸಿನಿಮಾದ ಕಥಾ ಹಂದರ. ‘ಕರ್ಣ’ ಎನ್ನುವ ಒಬ್ಬ ಕೊನೆಯ ಬೆಂಚಿನ ವಿದ್ಯಾರ್ಥಿ ಹಾಗೂ ಅವನ ಕೀಟಲೆಗಳ ಸುತ್ತ ಸುತ್ತುತ್ತ ಹೋಗುವ ಕಥೆ ಪ್ರತಿ ಕ್ಷಣ ಪ್ರೇಕ್ಷಕರಿಗೆ, ಅದೂ ಇಂಜಿನಿಯರಿಂಗ್ ಕಲಿಯುತ್ತಿರುವ ಅಥವಾ ಕಲಿತು ಮುಗಿಸಿರುವ ಪ್ರತಿಯೊಬ್ಬನಿಗೂ ಇನ್ನಿಲ್ಲದ ಮುದವನ್ನು ನೀಡುತ್ತವೆ. ಈ ಎಲ್ಲ ಕೀಟಲೆಗಳ ನಡುವೆಯೂ ಸಣ್ಣ ಸುಂದರ ಲವ್ ಸ್ಟೋರಿ, ಒಂದು ದುರಂತ; ಅದರಿಂದ ಕಿರಿಕ್ ನಾಯಕನ ಮೇಲಾಗುವ ಪರಿಣಾಮ ಹಾಗೂ ಆತನ ವ್ಯಕ್ತಿತ್ವ ಬದಲಾಗುವ ರೀತಿಯನ್ನು ಅತಿ ಮನೋಜ್ಞವಾಗಿ ಸೆರೆಹಿಡಿಯಲಾಗಿದೆ. ಯಾವುದೇ ಉಪದೇಶದ ಮಾತುಗಳೇ ಇಲ್ಲದೇ ಕೆಲವು ಸೂಕ್ಷ್ಮ ಸಂದೇಶಗಳು ನೋಡುಗನ ಮನ ತಟ್ಟುತ್ತವೆ. ನನ್ನ ಪ್ರಕಾರ ಕಿರಿಕ್ ಪಾರ್ಟಿಯ ಗೆಲುವು ಇರುವುದೇ ಅಲ್ಲಿ.
ಇನ್ನು ಪಾತ್ರಗಳ ಬಗ್ಗೆ; ರಕ್ಷಿತ್ ಶೆಟ್ಟಿ ಇಲ್ಲಿ ಪ್ರಧಾನ ಭೂಮಿಕೆಯಲ್ಲಿ ‘ಕರ್ಣ’ನ ಪಾತ್ರ ನಿರ್ವಹಿಸಿದ್ದಾರೆ. ಎಂದಿನಂತೆ ಪ್ರೇಕ್ಷಕನಿಗೆ ತೆರೆಯ ಮೇಲೆ ರಕ್ಷಿತ್ ಶೆಟ್ಟಿ ಕಾಣುವುದಿಲ್ಲ, ಬರಿ ‘ಕಿರಿಕ್ ಕರ್ಣ’ ಕಾಣಿಸಿಕೊಳ್ಳುತ್ತಾನೆ. ಅವರ ಅಭಿನಯಕ್ಕೆ ಅದಾಗಲೇ ನಾನು ಮರುಳಾದವ, ಈ ಚಿತ್ರದಲ್ಲಿ ಸಹ ಮತ್ತೊಮ್ಮೆ ಅವರ ಅಭಿನಯಕ್ಕೆ ಮರುಳಾದೆ. ಮೊದಲಾರ್ಧದಲ್ಲಿ ಒಬ್ಬ ಕಿಲಾಡಿ, ತುಂಟ, ವಯೋಸಹಜ ಹುಡುಗಾಟದ ಹುಡುಗನಾಗಿ ಕಾಣಿಸಿಕೊಳ್ಳುವ ರಕ್ಷಿತ್ ಎರಡನೆಯ ಅವಧಿಯಲ್ಲಿ, ಆಲೋಚನೆಗಳಲ್ಲಿ ಪ್ರಬುದ್ಧವಾದ ಒಬ್ಬ ಕಾಲೇಜ್ ಲೀಡರ್ ಆಗಿ, ಒಂದಷ್ಟು ಕಿಡಿಗೇಡಿ ಗುಣವಿದ್ದರೂ ತನ್ನೊಳಗೆ ಎಲ್ಲೋ ಒಂದು ಕಡೆ ಮುಚ್ಚಿಟ್ಟ ಮುಗ್ಧ ಹುಡುಕಾಟವನ್ನು ಹೊಂದಿದ, ಚಿತ್ರದ ಕೊನೆಯಲ್ಲಿ ಮತ್ತೆ ಆ ಹುಡುಗಾಟವನ್ನು ಹುಡುಕುವ ಸೀನಿಯರ್ ವಿದ್ಯಾರ್ಥಿಯಾಗಿ ಅವರ ನಟನೆ ಅತ್ಯಂತ ಪ್ರಿಯವಾಗುವಂಥದ್ದು. ರಕ್ಷಿತ್ ಜೊತೆಗಾರರಾಗಿ ನಟಿಸಿದ ಪ್ರತಿಯೊಬ್ಬರೂ ಅಷ್ಟೇ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಗೆಳೆತನ, ಒಂದಿಷ್ಟು ಹುಡುಗಾಟ, ಸಣ್ಣ ಪುಟ್ಟ ವೈಮನಸ್ಸುಗಳು ಇವೆಲ್ಲವನ್ನು ಈ ಗೆಳೆಯರ ಬಳಗ ಅಭಿನಯಸಿದ ರೀತಿ ಪ್ರೇಕ್ಷಕರಿಗೆ ತಮ್ಮ ಕಾಲೇಜು ದಿನಗಳನ್ನು ನೆನಪಿಸದೇ ಇರಲಾರದು.
ಇನ್ನು ‘ಸಾನವೀ…’; ಚಿತ್ರ ತೆರೆಕಾಣುವ ಮುಂಚೆಯೆ “ನಮ್ಮೆಲ್ಲರ ಕಥೆಪುಟದಲಿ ನಿನದೊಂದೇ ಹೆಸರಿದೆ…” ಎಂದು ಹಾಡುವಂತೆ ಮಾಡಿದ್ದ ಪಾತ್ರ ‘ಸಾನ್ವಿ’. ಸಾನ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ ಅವರು ಕನ್ನಡ ಮಾತಾಡುವುದನ್ನ ಕೇಳುವುದೇ ಒಂದು ಚಂದ. ಇನ್ನು ನಕ್ಕರಂತೂ ಅಯ್ಯೋ ಅದೆಷ್ಟು ಹೃದಯಗಳ ಬಡಿತ ನಿಂತಿತೋ ಅರಿಯೆ. ಅದೇನೆ ಇರಲಿ ಸಾನ್ವಿ ಪಾತ್ರ ನನಗಂತೂ ಚಿತ್ರದಲ್ಲಿ ಅತಿಯಾಗಿ ಕಾಡಿದ ಪಾತ್ರ. ಹುಡುಗಾಟದ ಹುಡುಗ ಕರ್ಣನನ್ನು ನಿಭಾಯಿಸುವ, ಅವನ ಕೀಟಲೆಗಳನ್ನು ಸಹಿಸುತ್ತಾ ಸಣ್ಣಗೆ ಮುಗುಳ್ನಗುವ ಒಬ್ಬ ಸೀನಿಯರ್ ಆಗಿ ಅತ್ಯಂತ ಆತ್ಮೀಯ ಎನಿಸುವ ನಟನೆ ರಶ್ಮಿಕಾ ಅವರದ್ದು. ಆ ಪಾತ್ರ ಸೃಷ್ಟಿಸಿದ ರಕ್ಷಿತ್ ಅವರಿಗೆ ಒಂದು ಧನ್ಯವಾದ. ಅಂತೆಯೇ ಎರಡನೇ ಅವಧಿಯಲ್ಲಿ ಬಬ್ಲಿ ಗರ್ಲ್ ‘ಆರ್ಯ’ ಆಗಿ ಕಾಣಿಸಿಕೊಳ್ಳುವ ಸಂಯುಕ್ತ ಹೆಗ್ಡೆ ಕೂಡ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಎರಡನೇ ಅವಧಿಯಲ್ಲಿ ತೆರೆಯಲ್ಲಿ ಭಾವಗಳಿಗೆ ಬಣ್ಣ ಬಳಿಯುವುದು ಈ ‘ಆರ್ಯ’ ಪಾತ್ರ. ಅದನ್ನು ಎಲ್ಲಿಯೂ ಕುಂದು ಬರದಂತೆ ನಟಿಸಿದ್ದಾರೆ ಸಂಯುಕ್ತ. ಹಾಗೇ ಮುಂದುವರಿದರೆ “ನನಗೆ ಇದರಲ್ಲಿ ಬರೆ ಐವತ್ತು ಸಾವಿರ ಇರುವುದಾ ಅಂತ ಡೌಟು” ಎನ್ನುತ್ತಾ ಈ ಕಿರಿಕ್ ಪಾರ್ಟಿಗಳ ಮೇಲೆ ಟ್ರೇಲರ್’ನಲ್ಲೇ ಡೌಟು ಹುಟ್ಟಿಸಿ ಚಿತ್ರ ನೋಡಬೇಕೆಂಬ ಕುತೂಹಲಕ್ಕೆ ಕಿಚ್ಚು ಹೊತ್ತಿಸಿದ್ದ ಅಚ್ಯುತ್ ಅವರ ಅಭಿನಯದ ಬಗ್ಗೆಯಂತೂ ಹೇಳುವುದೇ ಬೇಡ. ಅವರು ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಳ್ಳುವ ನಟ. ಹೀಗೆ ಪ್ರತಿ ಪಾತ್ರಗಳೂ ಚಿತ್ರ ಮುಗಿದ ನಂತರವೂ ಜೀವಂತವಾಗಿರುತ್ತವೆ.
ಚಿತ್ರದಲ್ಲಿ ಪ್ರೇಕ್ಷಕರನ್ನು ಅರಿಯದಂತೆ ಹಿಡಿದಿಟ್ಟುಕೊಳ್ಳುವುದು ಚಿತ್ರಸಂಗೀತ. ಅಜನೀಶ್ ಲೋಕನಾಥ್ ಮತ್ತೆ ಕಾಡುವ ಹಾಡುಗಳನ್ನು ನೀಡಿದ್ದಾರೆ. “ಕನಸಲ್ಲಿ ಅರೆರೆರೆರೆ…ಬಳಿಬಂದು ಅಲೆಲೆಲೆಲೆ…ಮುದ್ದಾಡಿ ಅಯ್ಯಯ್ಯಯ್ಯಯ್ಯೋ…ಕಚಗುಳಿ ತಾಳಲಾರೆ” ಎನ್ನುತ್ತಾ ಕೊಟ್ಟಿರುವ ಕಚಗುಳಿ ನನಗಂತೂ ಇಷ್ಟು ಬೇಗ ನಿಲ್ಲುವ ಹಾಗೆ ಕಾಣುತ್ತಿಲ್ಲ. “ಸಾರ್ ತಿರಬೋಕಿ ಜೀವನ ನಮ್ಮದಲ್ಲ, ಖಾಲಿ ಕೂತು ಬೋರಾಗಿದೆ…” ಕಾಲೇಜು ಹುಡುಗರ ನಾಡಗೀತೆ ಆಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಇನ್ನು ” ನೀನಿರೆ ಸನಿಹ ನೀನಿರೆ…” ಹಾಡು ಮೊದಲೇ ಇಷ್ಟವಾಗಿತ್ತು, ಆದರೆ ಚಿತ್ರದಲ್ಲಿ ಸಾಂದರ್ಭಿಕವಾಗಿ ಈ ಹಾಡನ್ನು ನೋಡಿದಾಗ ಮನಸಿಗೆ ಇನ್ನೂ ಹತ್ತಿರವಾಗಿತ್ತು. “ಮುಗಿಲೇರಿ ನಗುವ ಸೂರ್ಯ ಕಂಡರೆ ಸುಡುವಂಥ ಭಾವ, ಮಳೆಬಿಲ್ಲಿಗೆ ರಂಗನು ಮುಡುಸಿಲ್ಲವೇ?” ಹಾಡಿನ ಆರಂಭಕ್ಕೆ ಪೋಣಿಸಿದ ಅತಿ ಸುಂದರ ಸಾಲುಗಳಿವು. ಬರೆದವರಿಗೊಂದು ಮನಃಪೂರ್ವಕ ಧನ್ಯವಾದ. ಇವೆಲ್ಲವುಗಳ ಹೊರತಾಗಿ ನನ್ನನ್ನು ಅತಿಯಾಗಿ ಕಾಡಿದ್ದು “ತೂಗುಮಂಚದಲ್ಲಿ ಕೂತು…” ಎಂದು ನಾಯಕಿ ಸಾನ್ವಿ ಹಾಡುವ ಒಂದು ಮಧುರ ಭಾವಗೀತೆಯ ತುಣುಕು. ಚಿತ್ರದ ಸಂದರ್ಭಕ್ಕೆ ಆ ಹಾಡು ಅದೆಷ್ಟು ಬೆಸೆದುಕೊಂಡಿತ್ತು ಅಂದರೆ ಆ ದೃಶ್ಯವನ್ನು ಪುನಃ ಪುನಃ ನೋಡಬೇಕೆನಿಸಿತು.
ಉಳಿದಂತೆ ಕರಮ್ ಚಾವ್ಲಾ ಅವರ ಛಾಯಾಗ್ರಹಣ, ಅಭಿಜಿತ್ ಮಹೇಶ್, ಧನಂಜಯ್ ರಂಜನ್ ಅವರ ಸಂಭಾಷಣೆ ಚಿತ್ರಕ್ಕೆ ಪೂರಕವಾದವುಗಳು. ಸಂಭಾಷಣೆ ಎಲ್ಲಿಯೂ ನಾಟಕೀಯ ಎನಿಸುವುದಿಲ್ಲ. ಕಾಲೇಜು ಹುಡುಗರ ನಡುವೆ ನಡೆಯುವ ಮಾತುಕತೆಗಳನ್ನು ಅತ್ಯಂತ ಸಹಜ ಎನಿಸುವಂತೆ ಬರೆಯಲಾಗಿದ್ದು ನಮ್ಮದೇ ಹಲವು ಹಳೆಯ ಮಾತುಕತೆಗಳ ನೆನಪುಗಳು ಮನದಲ್ಲಿ ಮರುಕಳಿಸುವಂತೆ ಮಾಡುತ್ತವೆ.
ಈ ಎಲ್ಲವುಗಳನ್ನು ಒಟ್ಟಾಗಿ ಒಂದು ಸಿನಿಮಾ ರೂಪ ಕೊಟ್ಟು ಜನರಿಗೆ ತಲುಪಿಸುವಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಎಲ್ಲ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ತೆರೆಯ ಮೇಲೆ ತರುವ ಪ್ರಯತ್ನದಲ್ಲಿ ರಿಷಭ್ ಅವರ ಪ್ರಯತ್ನ ಶ್ಲಾಘನೀಯ. ಬೇರೆ ಸಿನಿಮಾಗಳಿಗಿಂತ ಒಂದಿಷ್ಟು ಹೆಚ್ಚು ಸಮಯ ಹೊಂದಿರುವ ಸಿನಿಮಾ ಆಗಿದ್ದರೂ ಬೋರ್ ಎನಿಸುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಪ್ರಯತ್ನವಾಗಿ ಮೂಡಿ ಬಂದಿರುವ ‘ಕಿರಿಕ್ ಪಾರ್ಟಿ’ ಕಾಲೇಜು ಹುಡುಗರ ಮನದಾಳದ ಭಾವಗಳನ್ನು ತೆರೆಯ ಮೇಲೆ ತಂದು ಹುಚ್ಚೆಬ್ಬಿಸಿದೆ. ಕಾಲೇಜು ಜೀವನ ಮುಗಿಸಿದವರಿಗೆ ಅವರ ಹಳೆಯ ದಿನಗಳ ಕುರಿತ ನೆನಪುಗಳ ಹಾವಳಿಯಾಗಿದೆ.
“ಕಾಲೇಜ್ ಲೈಫು ನಮಗೆಲ್ಲಿ ಸಾಕು,
ಕ್ಯಾಂಪಸ್’ನಲ್ಲಿ ಸೈಟೊಂದು ಬರೆದ್ಹಾಕು…” ಎಂದು ಬಹುಷಃ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಅನಿಸದೇ ಇರಲಾರದು.
ರಕ್ಷಿತ್ ಮತ್ತೆ ಭರವಸೆಗಳ ಮಹಾಪೂರವನ್ನೇ ಹುಟ್ಟುಹಾಕಿದ್ದಾರೆ. ಎಂದಿನಂತೆ ಒಂದು ವಿಶಿಷ್ಟ, ವಿಭಿನ್ನ ಪ್ರಯತ್ನದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಈ ಹೊಸತನದ ಪ್ರಯತ್ನಗಳು ನಿರಂತರವಾಗಿ ಸಾಗಲಿ, ಕಿರಿಕ್ ಪಾರ್ಟಿಯಂತೆಯೇ ಇನ್ನಷ್ಟು ಕಿಕ್ಕೇರಿಸುವ ಸೃಜನಶೀಲ ಚಲನಚಿತ್ರಗಳು ಮೂಡಿಬರಲಿ ಎಂದು ಆಶಿಸುತ್ತೇನೆ.
ಚಿತ್ರ ರಿಲೀಸ್ ಆದ ಎರಡನೇ ದಿನವೇ ನೋಡಿಬಂದ ನಾನೀಗ ಎಲ್ಲರಿಗೂ ಕೇಳುತ್ತಿರುವ ಪ್ರಶ್ನೆ ಒಂದೇ “ಹ್ವಾಯ್, ಕಿರಿಕ್ ಪಾರ್ಟಿ ಕಂಡ್ರಿಯಾ?”