ಸಿನಿಮಾ - ಕ್ರೀಡೆ

ಹಿತವಾಗಿವಾಗಿ ನಗಿಸುವ, ಸಿಹಿಯಾಗಿ ಕಾಡುವ “ಕಿರಿಕ್ ಪಾರ್ಟಿ”

“ಕಿರಿಕ್ ಪಾರ್ಟಿ” ಇದು ಹಿತವಾಗಿ ನಗಿಸುವ, ಸವಿಯಾಗಿ ಕಾಡುವ ಚಂದದ ಸಿನಿಮಾ. ಈ ಸಿನೆಮಾದಲ್ಲಿ ನಿಮ್ಮ ಕಾಲೇಜಿನ ದಿನಗಳಲ್ಲಿದ್ದ ಕಿರಿಕ್ ಕಥೆಗಳಿವೆ, ಸ್ವೀಟ್ ಆದ ಪ್ರೇಮ ಕಥೆಯಿದೆ, ಸದಾ ಗುನುಗಬೇಕೆಂದೆನಿಸುವ ಅಪರೂಪದ ಹಾಡುಗಳಿವೆ. ನಿಮ್ಮ ಸುಂದರ ನೆನಪಿಗೊಂದು ಚಂದದ ರೂಪ ಕೊಡುವ ಕೆಲಸಮಾಡಿದ್ದು ಕತೆಗಾರ ರಕ್ಷಿತ್ ಶೆಟ್ಟಿ. ಒಂದು ಒಳ್ಳೆಯ ತಂಡ ಚಂದದ ಚಲನಚಿತ್ರವನ್ನು ಕಟ್ಟಿಕೊಡುವ ಕೆಲಸ ಮಾಡಿದೆ ಅಂದರೆ ಯಾವುದೇ ತಪ್ಪಿಲ್ಲ. ನೀವು ಈ ಚಿತ್ರದ ಮೇಲೆ ಅದಾಗಲೇ ಒಂದು ದೊಡ್ಡ ನಿರೀಕ್ಷೆ ಇಟ್ಟುಕೊಂಡು ನೋಡಲು ಒಳಹೊಕ್ಕರೆ ನಿಮ್ಮ ನಿರೀಕ್ಷೆಗೂ ಮೀರಿದ ಅನುಭವ ನಿಮಗಾದರೆ ಅದಕ್ಕೆ ಕೇವಲ ಮತ್ತು ಕೇವಲ ರಿಶಬ್ ಮತ್ತು ತಂಡ ಕಾರಣ.

ಇಡೀ ಸಿನಿಮಾ ದಲ್ಲಿ ಕರ್ಣನೆಂಬ ತರ್ಲೆ ಹುಡುಗ, ಸಾನ್ವಿ ಎನ್ನೋ ಸಿಕ್ಕಾಪಟ್ಟೆ ಕ್ಯೂಟ್ ಹುಡುಗಿ, ಕರ್ಣನ ಸುತ್ತ ಇರುವ ಐದು ಜನ ಸ್ನೇಹಿತರು, ಟಿಪಿಕಲ್ ಎನ್ನಿಸೋ ಆ ಹಳದೀ ಕಾರು, ರಾತ್ರಿಯಾದರೂ ಕಾಡುವ “ಬೆಳಗೆದ್ದು ಯಾರ ಮುಖವ ನಾನು ನೋಡಿದೆ…” ಎನ್ನೋ ಹಾಡು, ಸೆಕೆಂಡ್ ಹಾಫ್ ನಲ್ಲಿ ಎಕ್ಸ್‌ಟ್ರಾ ಬೋನಸ್ ಎಂಬಂತೆ ಕಾಡುವ ಆರ್ಯ ಎನ್ನೋ ಹುಡುಗಿ, ಆ ಕಾಲೇಜಿನ ಚುನಾವಣೆ, ಕರ್ಣನ “ಗಡ್ಡ” ಹೀಗೆ ಇನ್ನೂ ಏನೇನೋ ನಿಮ್ಮನ್ನು ಹಂತ ಹಂತವಾಗಿ ಆವರಿಸಿಕೊಂಡು ಸಾಗುತ್ತದೆ. ಆದರೇ ಇವಿಷ್ಟೇ ಅಲ್ಲ ಇದನ್ನೂ ಮೀರಿದ ಆದರೆ ಹೇಳಲೇ ಆಗದ ಕೆಲವೊಂದು ಭಾವ ನಿಮ್ಮನ್ನು ಆವರಿಸುತ್ತದೆ. ಅದನ್ನೆಲ್ಲ ಅನುಭವಿಸಬೇಕೆಂದರೆ ಒಮ್ಮೆ ಸಿನಿಮಾ ನೋಡಿ.

ಚಲನಚಿತ್ರದ ಮೊದಲಾರ್ಧದಲ್ಲಿ ಕ್ಯೂಟ್ ಸಾನ್ವಿ ಮತ್ತು ಕಿರಿಕ್ ಕರ್ಣನ ಸಕತ್ ಲವ್ ಸ್ಟೋರೀಯೊಂದು ಗೊತ್ತಿದ್ದೋ ಗೊತ್ತಿಲ್ಲದೆಯೋ ಶುರುವಾಗಿ ದಡ ಮುಟ್ಟುವ ಮೊದಲೇ ಕರ್ಣನ ಬದುಕಿನಲ್ಲೊಂದು ಅವಘಡ ನಡೆದುಬಿಡುತ್ತದೆ. ಕರ್ಣನಿಗೆ ಸಾನ್ವಿ ಸಿಗುತ್ತಾಳ? ಮೂರು ವರ್ಷ ಸೀನಿಯರ್ ಆಗಿದ್ದ ಸಾನ್ವಿ ಕರ್ಣನ ಪ್ರೀತಿಸಿದ್ದಳಾ? ಮುಂದೇನಾಗುತ್ತದೆ ಎನ್ನುವುದನ್ನು ನೀವು ಟಾಕೀಸ್ ನಲ್ಲಿ ನೋಡಿದರೆ ಚಂದ. ಇನ್ನೂ ದ್ವಿತೀಯಾರ್ಧದಲ್ಲಿ ಸಾನ್ವಿಯಿಲ್ಲ ಎಂದು ಬೇಸರ ಮಾಡಿಕೊಂಡವರನ್ನು ಅಚ್ಚರಿ ಎಂಬಂತೆ ಆವರಿಸಿಕೊಳ್ಳುವವಳು ಆರ್ಯ. ಇಡೀ ಸಿನೆಮಾದಲ್ಲಿ ಈ ಮೂವರು ಮಾತ್ರವಲ್ಲ ಬರುವ ಅಷ್ಟೂ ಪಾತ್ರಗಳು ನಿಮ್ಮನ್ನು ಖುಷಿಪಡಿಸುತ್ತವೆ ಅದರಲ್ಲಿ ಯಾವುದೇ ಅನುಮಾನ ಬೇಡ.

ಸಾನ್ವಿ ಅಲ್ಲಿ ಆ ಚರ್ಚ್ ನ ಟವರ್ ಮೇಲೆ ಕೂತು ನಾವು ಬೆಳೆದಂತೆ ನಮ್ಮಲ್ಲಿನ ಆ ಮುಗ್ಧ ಮನಸ್ಸುಗಳು ನಿರ್ಜಿವವಾಯಿತು ಎಂಬ ಮಾತು ಮನಸ್ಸಿಗೆ ತಟ್ಟುತ್ತದೆ ಜೊತೆಗೆ ಅವಳು ಹಾಡುವ “ತೂಗು ಮಂಚದ ಮೇಲೆ ಕೂತು…” ಹಾಡು ನಿಮ್ಮನ್ನು ಅದ್ಯಾವುದೋ ಲೋಕದಲಿ ವಿಹರಿಸುವಂತೆ ಮಾಡುತ್ತದೆ. ಬಿಡದೇ ಮತ್ತೆ ಮತ್ತೆ ಅವರಿಸುವ ಕರ್ಣನ ಆ ಏಕಾಂಗಿ ಪಯಣ ಅದೇಕೋ ತುಂಬಾ ಆಪ್ತವಾಗಿಬಿಡುತ್ತದೆ. ಆರ್ಯಾ ಎಂಬ ಹೈಪರ್ ಆಕ್ಟಿವ್ ಹುಡುಗಿ ಒಂಥರಾ ಗೊತ್ತಿಲ್ಲದೇ ಇಷ್ಟವಾಗಿಬಿಡುತ್ತಾಳೆ.
ಅದೆಷ್ಟೋ ವರ್ಷಗಳ ಹಿಂದಿನ ನಮ್ಮ ಆ ಚಂದದ ಕಾಲೇಜ್ ದಿನಗಳನ್ನು ಮರಳಿ ಸೃಷ್ಟಿಸಿದ ಈ ತಂಡಕ್ಕೆ ಒಂದು ಕೃತಜ್ಞತಾಭಾವ ಸಿನಿಮಾ ಮುಗಿಸಿ ಹೊರಬರುವಾಗ ನಿಮ್ಮನ್ನಾವರಿಸುತ್ತದೆ.

ರಿಶಬ್ ನಿರ್ದೇಶಕನಾಗಿ ಅದ್ಭುತ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕಥೆಯಲ್ಲಿ ಅದ್ಭುತವಾದ ಕೆಲಸವನ್ನು ಅವರು ಮಾಡಿದ್ದಾರೆ ಎನ್ನಲು ಯಾವುದೇ ಹಿಂಜರಿಕೆ ಬೇಡ ಎಂದು ನನಗನ್ನಿಸುತ್ತಿದೆ. ಇನ್ನು ಬಿಡದೇ ಕಾಡುವ ಹಾಡುಗಳನ್ನು ಸೃಷ್ಟಿಸುರುವ ಅಜನೀಶ ಲೋಕನಾಥ್ ಎಂಬ ಅಪ್ರತಿಮ ಪ್ರತಿಭೆಯ ಬಗ್ಗೆ ಮಾತನಾಡದಿದ್ದರೆ ಈ ವಿಮರ್ಷೆಯ ಅಪೂರ್ಣ. ಒಂದೊಂದು ಹಾಡೂ ಕೂಡ ನಿಮ್ಮ ಭಾವನೆಯನ್ನು ಕಥೆಯೊಡನೆ ಜೋಡಿಸುವ ಕೆಲಸ ಮಾಡುತ್ತದೆ‌. ಅಜನೀಶ್ ಈ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕನ್ನಡ ಚಿತ್ರರಂಗದ ಭರವಸೆಯ ಸಂಗೀತ ನಿರ್ದೇಶಕ ಅವರು ಎಂಬುದನ್ನು ಸಾಬೀತುಪಡೆಸಿದ್ದಾರೆ.ವಸಿಷ್ಠ ಸಿಂಹ ಎಂಬ ಬಹುಮುಖ ಪ್ರತಿಭೆ ಈ ಸಿನಿಮಾದಲ್ಲೊಂದು ಹಾಡು ಹಾಡಿದ್ದಾರೆ ಅಚ್ಚರಿಯ ಜೊತೆ “ಅಬ್ಬಾ!!” ಎನ್ನಿಸುವ ಆ ಹಾಡು ತುಂಬಾ ಸ್ಪೆಷಲ್ ಅನ್ನಿಸುತ್ತದೆ. ಇನ್ನು ಗೌಸ್ ಆಗಿ ಅಚ್ಯತ್ ಕುಮಾರ್ ಅವರ ಪಾತ್ರಕ್ಕೆ ಗೌರವ ಸಲ್ಲಿಸಿದ್ದಾರೆ. ಪ್ರಮುಖವಾಗಿ ಕರ್ಣನ  ಐದೂ ಜನ ಸ್ನೇಹಿತರ ನಟನೆ ಕೂಡ ಪ್ರಶಂಸನೀಯವೇ ಸರಿ.ಸಂಯುಕ್ತಾ ಹೆಗಡೆ, ರಶ್ಮಿಕಾ ಮಂದಣ್ಣ ಈ ಇಬ್ಬರೂ ಕೂಡ ಕನ್ನಡ ಸಿನಿಮಾರಂಗದ ಉದಯೋನ್ಮುಖ ಕಲಾವಿದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಡೆದಾಟ,ಹಾರಾಟ ಜೊತೆಗೆ ಹಿರೋಯಿಸಂನ ಅತಿಯಾದ ತೋರ್ಪಡಿಸುವಿಕೆಯೇ ಸಿನಿಮಾವಾಗಿ ಕಥೆಗಳೇ ಇಲ್ಲದೇ ಬರಿದಾಗಿದ್ದ ಕನ್ನಡ ಚಲನಚಿತ್ರಗಳ ನಡುವೆ ಕಥೆಯೇ ನಾಯಕನಾಗಿರುವ ಈ ತೆರನಾದ ಚಲನಚಿತ್ರಗಳು ಅದೇನೋ ಖುಷಿಯನ್ನು ನೀಡುತ್ತದೆ‌. ಭರವಸೆ ಹುಟ್ಟಿಸುತ್ತಲೇ ಯಶಸ್ಸನ್ನನುಭವಿಸಿ ಅದನ್ನು ಯಾವುದೇ ಅಹಂ ಇಲ್ಲದೇ ನಿಭಾಯಿಸುತ್ತಿರುವ ರಕ್ಷಿತ್ ಶೆಟ್ಟಿಯವರಂತಹ ನಾಯಕರ ಆವಶ್ಯಕತೆ ಕನ್ನಡಚಿತ್ರರಂಗಕ್ಕೆ ಈಗ ತುಂಬಾ ಅವಷ್ಯ ಎನ್ನಿಸುತ್ತದೆ. ನಟನೆ,ಕಥೆ, ಚಿತ್ರಕಥೆ ಮತ್ತು ಸಾಹಿತ್ಯ ಈ ಮೂರೂ ವಿಭಾಗದಲ್ಲಿ ಅದ್ಭುತ ಎನ್ನುವಷ್ಟು ಬೆಳೆದಿರುವ ರಕ್ಷಿತ್ ಅವರ ಯಶಸ್ಸು ಇನ್ನೂ ಉತ್ತುಂಗಕ್ಕೇರಲಿ ಎಂಬುದು ನನ್ನ ಆಶಯ ಕೂಡ.

ಇಡೀ ಚಲನಚಿತ್ರದಲ್ಲಿ ಮಿಸ್ ಎನ್ನಿಸುವುದು “ಹೇ ಹೂ ಆರ್ ಯೂ…” ಹಾಡು. ಕಾರಣವೇ ಇಲ್ಲದೆ ಲಹರಿ ವೇಲು ನಂದೆಲ್ಲಿಡಲಿ ಎಂದು ಈ ಸಮಸ್ಯೆ ಸೃಷ್ಟಿಸಿದರು ಎಂದರೆ ಯಾವುದೇ ತಪ್ಪಿಲ್ಲ ಎಂದುಕೊಂಡಿದ್ದೇನೆ.

ಬುಲೆಟ್ ಎತ್ತಾಕ್ಕೊಂಡು ದೂರ ಎಲ್ಲಾದರೂ ಹೋಗಬೇಕು ಎಂದುಕೊಂಡವರ ಆಸೆಗೆ ಇಂಬುಕೊಡುವುದು ಕರ್ಣನ ಆ ಒಂಟಿ ಪಯಣ. ಭಾವನೆಗೆ ಬೆಲೆ ಕೊಡುವವರ “ಆಸ್ತಿ” ಈ ಚಲನಚಿತ್ರ. ಒಂದಿಷ್ಟು ಕೀಟಲೆ, ಮತ್ತೊಂದಿಷ್ಟು ಪ್ರೀತಿ, ಮಗದೊಂದಿಷ್ಟು ಸ್ನೇಹದ ಸಮ್ಮಿಲನವೇ ಈ ಕಿರಿಕ್ ಪಾರ್ಟಿ.

ಮಿಸ್ ಮಾಡದೇ ಒಮ್ಮೆ ನೋಡ್ಬಿಡಿ

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!