ಕಥೆ

ಸೇಡು..

ರಾತ್ರಿ ಹನ್ನೆರಡರ ಸಮಯ. ಪ್ರಿಯಾಂಕಾ ಒಬ್ಬಳೇ ರೂಮಿನಲ್ಲಿ ಮಲಗಿದ್ದಾಳೆ. ಇಪ್ಪತ್ತು ವಯಸ್ಸಿನ ಮುದ್ದಾದ ಹುಡುಗಿ ಪ್ರಿಯಾಂಕ. ಒಳ್ಳೆಯ ಸುಖ ನಿದ್ದೆಯಲ್ಲಿದ್ದಾಳೆ. ಈಗೀಗ ಕನಸೊಂದು ಬೀಳುತ್ತಿದೆ. ಸುಂದರ ಕಾಡಿನ ಮಧ್ಯ ಜಲಪಾತವೊಂದು ಗೋಚರಿಸುತ್ತಿದೆ.ಎತ್ತರದಿಂದ ಬೀಳುವ ಜಲಪಾತ..ಕೆಳಗೆ ಸಂಪೂರ್ಣ ಕಾಡು.  ನಯನ ಮನೋಹರ ದೃಶ್ಯ. ದೂರದಲ್ಲಿ ಒಂದೇ ಒಂದು ಮನೆ ಕಾಣುತ್ತಿದೆ.ಮನೆ ಹೊರಗೆ ನಿಂತಿರುವ ಮನುಷ್ಯನ ವೇಷಭೂಷಣ ನೋಡಿದರೆ ಗೌಡನೆನಿಸುತ್ತದೆ. ಮತ್ತೆ ಜಲಪಾತದತ್ತ ಕನಸು ಹೊರಳುತ್ತದೆ. ಭೋರ್ಗರೆವ ಜಲಪಾತ. ಮೇಲೆ ಕಲ್ಲಿನ ಹಾಸು. ಪ್ರಿಯಾಂಕಾಳ ಕನಸಿನಲ್ಲಿ ಈಗ ಹುಡುಗಿಯೊಬ್ಬಳು ಜಲಪಾತದಿಂದ ಬೀಳುತ್ತಿರುವ ದೃಶ್ಯ ಕಾಣಿಸುತ್ತಿದೆ..ಜೋರಾಗಿ ಚೀರಿ ಎದ್ದು ಕುಳಿತಳು ಪ್ರಿಯಾಂಕ.ನರಸಿಂಹ ದೇಸಾಯಿಯವರ ಪತ್ನಿ ಸರೋಜ ಮಗಳ ರೂಮಿನ ಬಾಗಿಲು ಬಡಿಯುತ್ತಿದ್ದಾರೆ.ಪ್ರಿಯಾಂಕ ರೂಮಿನ ಬಾಗಿಲು ತೆರೆದಳು.ಸರೋಜಮ್ಮ “ಏನಾಯ್ತು ಪ್ರಿಯಾ ? ಯಾಕೆ ಕಿರುಚಿಕೊಂಡೆ?” ಎಂದು ಅವಳನ್ನು ಮಂಚದ ಮೇಲೆ ಕೂರಿಸುತ್ತ ನುಡಿದರು. ಪ್ರಿಯಾಂಕ ಆಶ್ಚರ್ಯದಿಂದ “ಏನೋ ಕನಸು ಬಿತ್ತಮ್ಮ.ಯಾರೋ ಹುಡುಗಿ ಫಾಲ್ಸ್’ನಿಂದಾ  ಬೀಳೊ ತರ. ಭಯ ಆಯ್ತು ಕಿರುಚಿ ಬಿಟ್ಟೆ” ಎಂದಳು. ನರಸಿಂಹ ದೇಸಾಯಿಯವರು ಮಗಳಿಗೆ ಕುಡಿಯಲು ನೀರು ಕೊಟ್ಟು, ಹೆಂಡತಿಗೆ ಮಗಳ ರೂಮಿನಲ್ಲಿ ಮಲಗಲು ಹೇಳಿ ಮಗಳ ತಲೆ ಸವರಿ ತಮ್ಮ ರೂಮಿನತ್ತ ಹೊರಟರು.

  ನರಸಿಂಹ ದೇಸಾಯಿ ಮತ್ತು ಸರೋಜಮ್ಮನವರಿಗೆ ಒಬ್ಬಳೇ ಮಗಳು ಪ್ರಿಯಾಂಕ, ಆಮೇಲೆ ಅವರಿಗೆ ಮಕ್ಕಳಾಗಲಿಲ್ಲ  ಪ್ರಿಯಾಂಕಳನ್ನು ಮುದ್ದಿನಿಂದ ಸಾಕಿದ್ದರು. ನರಸಿಂಹ ದೇಸಾಯಿಯವರು ಬೆಂಗಳೂರಿನಲ್ಲಿ ರೇಲ್ವೆ ಇಲಾಖೆಯಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿದ್ದಾರೆ. ಇತ್ತೀಚೆಗೆ ಮಗಳ ನಡುವಳಿಕೆಯಿಂದ ಅವರಿಗೆ ತಳಮಳ ಶುರುವಾಗಿದೆ‌. ಚಿಕ್ಕಂದಿನಿಂದ ಅವಳು ಹೀಗಾಡಿದವಳಲ್ಲ. ನರಸಿಂಹ ದೇಸಾಯಿಯವರಿಗೆ ಈ ದೆವ್ವ ಪಿಶಾಚಿಗಳ ಬಗ್ಗೆ ನಂಬಿಕೆಯಿಲ್ಲ. ಮಾಟ ಮಂತ್ರ ಅವರ ಪ್ರಕಾರ ಸುಳ್ಳು. ಆದರೆ ಸರೋಜಮ್ಮ ದೆವ್ವ ಪಿಶಾಚಿ, ಮಾಟ, ಮಂತ್ರ ನಂಬುತ್ತಾರೆ. ಸಾಲದ್ದಕ್ಕೆ ಮನೆಗೆಲಸದ ಮಂಗಳಮ್ಮ ಬೇರೆ ಪ್ರಿಯಾಂಕ ಹಾಗಾಡುತ್ತಿರುವುದಕ್ಕೆ, ಸರೋಜಮ್ಮ ಸಲಹೆ ಕೇಳಿದ್ದಕ್ಕೆ ” ಅದೆಂತದೋ ಕೊಳ್ಳೆಗಾಲ ಅಂತ ನೋಡ್ರಿ. ಮೊನ್ನೆ ನಮ್ ಮನಿ ಪಕ್ಕದ ಹುಡುಗಿಗೆ ಯಾರೋ ಆಗದವರು  ಮಾಡ್ಸಿ ಹಾಕಿದ್ರು. ಅಕೀನೂ ರಾತ್ರಿ ಹೆಂಗೆಂಗೋ ಮಾತಾಡಾಕಿ,ಎದ್ದು ಎಲ್ಲೆಲ್ಲೊ ಹೊಂಟ್ ಬಿಡಾಕಿ.ಕೊಳ್ಳೆಗಾಲಕ್ಕ ಹೋಗಿ ಅದೇನೋ ತಾಯತ ತಂದ ಮ್ಯಾಲ ಸುಧಾರ್ಸ್ಯಾಳ, ನೀವೂ ಒಂದ್ ಸರಿ ಕರ್ಕೊಂಡ್ ಹೋಗ್ರಿ “ಅಂತ ಬಿಟ್ಟಿ ಸಲಹೆ ನೀಡಿದ್ದಳು. ಅಲ್ಲಿಗೂ ಹೋಗಿ ಬಂದಾಯಿತು.ಆದರೂ ಆ ಕನಸು ಮಾತ್ರ ದಿನವೂ ಒಂದೊಂದು ಆಯಾಮ ತೋರಿಸುತ್ತಿದೆ.

ಮತ್ತೆ ಮಧ್ಯರಾತ್ರಿಯ ಸಮಯ ಇದೀಗ ಕನಸು ಸ್ಪಷ್ಟವಾಗಿ ಕಾಣಿಸುತ್ತಿದೆ‌. ಹೆಂಗಸೊಬ್ಬಳು ತನ್ನನ್ನು ಬೈಯತ್ತಿರುವಂತೆ ಭಾಸವಾಗುತ್ತಿದೆ. ಆ ಮುಖ ಪ್ರಿಯಾಂಕಾಗೆ ಎಲ್ಲೊ ನೋಡಿದಂತೆನಿಸುತ್ತಿದೆ. ಮತ್ತೆ ಆ ಜಲಪಾತದ ಕಲ್ಲಿನ ಹಾಸಿನ ಮೇಲೆ ಕುಳಿತಿರುವ ಇಬ್ಬರು ಪ್ರೇಮಿಗಳು ಕಾಣಿಸುತ್ತಿದ್ದಾರೆ. ಮತ್ತೆ ಅದೇ ಹುಡುಗ ಭವ್ಯ ಬಂಗಲೆಯೊಂದರ ಮುಂದೆ ವರಾಂಡದಲ್ಲಿ ಕುಳಿತಿದ್ದಾನೆ. ಆ ಹುಡುಗಿ ಹುಡುಗನಿಗೆ “ನಾನು ಈಗ ಮೂರು ತಿಂಗಳ ಗರ್ಭೀಣಿ “ಎಂದು ಹೇಳುತ್ತಿದ್ದಾಳೆ. ಹುಡುಗನ ಮುಖ ಗಂಭೀರವಾಗಿದೆ.”ತೆಗೆಸಿ ಹಾಕು” ಎಂದು ಒತ್ತಾಯಿಸುತ್ತಿದ್ದಾನೆ. “ನಾನು ತೆಗೆಸಲಾರೆ…ಮಗುವನ್ನು ಕೊಲ್ಲಲಾರೆ…ದಯವಿಟ್ಟು ಅರ್ಥ ಮಾಡಿಕೊ..ಮದುವೆಯಾಗು ನನ್ನ” ಎಂದು ಪ್ರಿಯಾಂಕ ಬಡಬಡಿಸುತ್ತಿದ್ದಾಳೆ.ಪಕ್ಕದಲ್ಲಿ ಮಲಗಿದ್ದ  ಸರೋಜಮ್ಮನವರಿಗೆ ಆಕಾಶ ಕಳಚಿಬಿದ್ದ ಅನುಭವ. “ಮಗಳು ಗರ್ಭಿಣಿಯೇ ಅದೂ ಮದುವೆಯಾಗದೇ! ಅದಕ್ಕೆ ಹೀಗಾಡುತ್ತಿದ್ದಾಳಾ..ಛೇ ! ನನ್ನ ಮಗಳು ಕಾಲು ಜಾರುವವಳಲ್ಲ …ಆದರೂ ವಯಸ್ಸು ಹಾಗಿದೆ ..”ಎಂದು ಯೋಚಿಸುತ್ತ ಗಂಡನ ಕೋಣೆಗೆ ಹೋದರು. ಅವಳು ಬಡಬಡಸಿದ್ದನ್ನು ಗಂಡನಿಗೆ ಹೇಳಿದರು. ನರಸಿಂಹ ದೇಸಾಯಿಯವರಿಗೆ ದಿಕ್ಕೇ ತಿಳಿಯದಂತಾಯಿತು. ಬಂದು ನೋಡಿದರೆ ಪ್ರಿಯಾಂಕಾ ಸುಖನಿದ್ದೆಯಲ್ಲಿದ್ದಾಳೆ. ರಾತ್ರಿ ಪೂರ್ತಿ ನಿದ್ದೆ ಮಾಡಲಿಲ್ಲ ಸರೋಜಮ್ಮ ಹಾಗೂ ನರಸಿಂಹ ದೇಸಾಯಿಯವರು.

 ಮರುದಿನ ನರಸಿಂಹ ದೇಸಾಯಿಯವರ ಸಲಹೆಯಂತೆ ಸರೋಜಮ್ಮ ನವರು ಪ್ರಿಯಾಂಕಾಳನ್ನು ತಮಗೆ ಗೊತ್ತಿದ್ದ ಲೇಡಿ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದರು. ಆದರೆ ಅಲ್ಲಿ ತಿಳಿದು ಬಂದದ್ದು ಪ್ರಿಯಾಂಕ ಗರ್ಭಿಣಿ ಅಲ್ಲವೆಂದು.ಪ್ರಿಯಾಂಕಾಗೆ ಕೆಟ್ಟ ಕನಸು ಬೀಳುತ್ತಿರುವುದಕ್ಕೆ ನಾರ್ಮಲ್ ಚೆಕ್ಅಪ್ ಎಂದು ಡಾಕ್ಟರ್ ಹೇಳಿದ್ದರು.ಅವರು ದೇಸಾಯಿ ಕುಟುಂಬಕ್ಕೆ ಪರಿಚಿತರು.ಹೀಗಾಗಿ ಅವರ ಹತ್ತಿರ ಪ್ರಿಯಾಂಕಾಳನ್ನು ಕರೆದುಕೊಂಡು ಹೋಗಿದ್ದರು.

  ಸರೋಜಮ್ಮ ಪ್ರಿಯಾಂಕಾಗೆ ಈ ವಿಷಯವನ್ನು ತಿಳಿಸಲಿಲ್ಲ. ಅದೊಂದು ದಿನ ಸಿನಿಮಾಗೆಂದು ಹೋಗಿದ್ದ ಪ್ರಿಯಾಂಕಾಗೆ ವ್ಯಕ್ತಿಯೊಬ್ಬ ಎದುರಾದ.ಅವನು ಮಗಳೊಂದಿಗೆ ಸಿನಿಮಾಗೆ ಬಂದಿದ್ದ.ಸುಮಾರು ಐವತ್ತು ವರ್ಷದ ವ್ಯಕ್ತಿ. ಆ ಹುಡುಗಿ ಬೇರಾರೂ ಆಗಿರದೇ ಅವಳ ಗೆಳತಿ ಸಿಂಚನಾ ಆಗಿದ್ದಳು. ಅವರಿಬ್ಬರೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಬ್ರ್ಯಾಂಚಿನ ವಿಧ್ಯಾರ್ಥಿನಿಯರು.ಸಿಂಚನಾಳೊಂದಿಗಿರುವ ಆ ಐವತ್ತು ವಯಸ್ಸಿನ ವ್ಯಕ್ತಿ ತನಗೆ ಚಿರಪರಿಚಿತ ಎನಿಸುತ್ತಿದೆ ಅನ್ನಿಸಿತು ಪ್ರಿಯಾಂಕಾಗೆ. ಆದರೆ ಎಲ್ಲಿ ? ಹೇಗೆ  ? ಎಂದು ತಲೆಕೆಡಿಸಿಕೊಂಡು ಸಾಕಾಯಿತವಳಿಗೆ. ಜನರ ಗದ್ದಲವಿದ್ದಿದ್ದರಿಂದ ಸಿಂಚನಾಳನ್ನು ಕಾಲೇಜಿನಲ್ಲಿ ಮಾತನಾಡಿಸಿದರಾಯಿತೆಂದುಕೊಂಡಳು.

  ಮನೆಗೆ ಬಂದ ಪ್ರಿಯಾಂಕಾಳ ಮನದಲ್ಲಿ ಆ ವ್ಯಕ್ತಿ ಅಚ್ಚಳಿಯದೆ ನಿಂತಿದ್ದ. ಕನಸಲ್ಲಿ ಕಂಡ ಜಲಪಾತದ ಕಲ್ಲು ಹಾಸಿನ ಮೇಲೆ ಆ ಹುಡುಗಿಯೊಂದಿಗೆ ಕುಳಿತ ಹುಡುಗನ ಹಾಗೆ ಈ ದಿನ ಸಿಂಚನಾಳೊಂದಿಗೆ ಕಂಡ ವ್ಯಕ್ತಿಯ ಮುಖಚರ್ಯ ಇದೆ ಎನಿಸಿತು.ಪ್ರಿಯಾಂಕಾ ತನಗೇನೋ ಆಗುತ್ತಿದೆ ಎಂದುಕೊಂಡಳು. ತಲೆ ಸಿಡಿದಂತಾಗಿ ತನ್ನ ರೂಮಿಗೆ ನಡೆದಳು.

  ಮತ್ತೆ ಮಧ್ಯರಾತ್ರಿ ಸಮಯ. ಕನಸಿನಲ್ಲಿ ಆ ಹುಡುಗನ ಮುಖ ಸ್ಪಷ್ಟವಾಗಿ ಕಾಣುತ್ತಿದೆ.ಆದರೆ ಈ ದಿನ ಬೇರೆ ಹುಡುಗಿಯ ಜೊತೆ ಕುಳಿತಿದ್ದಾನೆ.ಮೊದಲು ಅವನೊಂದಿಗೆ ಕುಳಿತಿದ್ದ ಹುಡುಗಿ  ಅದೇನೋ “ರಾಹುಲ್ ರಾಹುಲ್” ಎನ್ನುತ್ತಿದ್ದಾಳೆ.ಹತ್ತಿರ ಹೋಗಿ “ರಾಹುಲ್ ನಾನು ನಿನ್ನ ಮಗುವಿನ ತಾಯಿಯಾಗುತ್ತಿದ್ದೇನೆ. ನನ್ನ ಕೈ ಬಿಡಬೇಡ ಪ್ಲೀಸ್..ನಾನು ವೇಶ್ಯೆಯ ಮಗಳೆಂದು ನಿನಗೆ ಮೊದಲೇ ಹೇಳಿದ್ದೆ..”ಎಂದು ಅಳುತ್ತಿದ್ದಾಳೆ. ಅವರಿಬ್ಬರೂ ಆ ಹುಡುಗಿಯನ್ನು ಎಳೆದುಕೊಂಡು ಹೋಗಿ ಆ ಜಲಪಾತದಲ್ಲಿ ನೂಕುತ್ತಾರೆ…ಜೋರಾಗಿ ಚೀರಿ ಎದ್ದು ಕುಳಿತಳು ಪ್ರಿಯಾಂಕ. ಸರೋಜಮ್ಮನವರಿಗೆ ಮಗಳ ಸಲುವಾಗಿ ಹುಚ್ಚು ಹಿಡಿದಂತಾಗಿದೆ.ಮರುದಿನ ಫ್ಯಾಮಿಲಿ ಡಾಕ್ಟರ್ ಸಲಹೆಯಂತೆ ಮಾನಸಿಕ ರೋಗಿಗಳ ವಿಭಾಗಕ್ಕೆ ಪ್ರಿಯಾಂಕಾಳನ್ನು ಕರೆದೊಯ್ಯಲಾಗುತ್ತದೆ. ಆದರೆ ಪ್ರಿಯಾಂಕಾ ಅವರಿಗೆ ಕೆಟ್ಟ ಕನಸೆಂದು ಮಾತ್ರ ಹೇಳುತ್ತಾಳೆ.ಡಾಕ್ಟರ್  ಕೌನ್ಸಲಿಂಗ್ ಮಾಡಿ ಮನೆಗೆ ಕಳಿಸುತ್ತಾರೆ..

 ಮರುದಿನ ಪ್ರಿಯಾಂಕ ತಾನೇ ಹೋಗಿ ಸಿಂಚನಾಳನ್ನು ಮಾತನಾಡಿಸುತ್ತ ” ನಿನ್ನೆ ಥಿಯೇಟರ್ ನಲ್ಲಿ ನಿನ್ನ ನೋಡಿದೆ ಕಣೇ. ಆದ್ರೆ ತುಂಬಾ ರಶ್ ಇತ್ತಲ್ಲಾ ಅದಕ್ಕೆ ಮಾತಾಡಿಸಲು ಆಗ್ಲಿಲ್ಲ..ಅಂದ ಹಾಗೆ ನಿನ್ ಜತೆ ಒಬ್ರು ಅಂಕಲ್ ಇದ್ರಲ್ಲಾ ಅವರು ಯಾರು ? “ಎಂದಳು ಕುತೂಹಲದಿಂದ. ಸಿಂಚನಾ ಅವರು ತನ್ನ ತಂದೆ ಎಂದು ತಿಳಿಸಿದಳು. ಅಷ್ಟೊತ್ತಿಗೆ ತರಗತಿಗಳು ಪ್ರಾರಂಭವಾಗಿದ್ದರಿಂದ ಮಾತು ನಿಲ್ಲಿಸಿದರು. ಆ ಕನಸು ಬೀಳುವುದು ಮಾತ್ರ ನಿಂತಿರಲಿಲ್ಲ ಪ್ರಿಯಾಂಕಾಗೆ. ಸಿಂಚನಾ ಅಪ್ಪನಿಗೂ ,ಈ ಕನಸಿಗೂ ಏನೋ ಸಂಬಂಧವಿದೆ ಎಂದೆನಿಸತೊಡಗಿತ್ತು.ಒಂದು ದಿನ ಸಿಂಚನಾ ತನ್ನ ಮನೆಗೆ ಪ್ರಿಯಾಂಕಾಳನ್ನು ಆಹ್ವಾನಿಸಿದ್ದಳು. ಪ್ರಿಯಾಂಕ ಅದೇ ಅವಕಾಶಕ್ಕಾಗಿ ಕಾಯುತ್ತಿದ್ದಳು.ಭಾನುವಾರದಂದು ಸಿಂಚನಾ ತನ್ನ ಮನೆಗೆ ಬರುವಂತೆ ಪ್ರಿಯಾಂಕಾಗೆ ಕರೆ ಮಾಡುತ್ತಾಳೆ.ಪ್ರಿಯಾಂಕಾ ಸಿಂಚನಾಳ ಮನೆಗೆ ಬಂದಾಗ ಸಿಂಚನಾಳ ಅಪ್ಪ ಎದುರಾಗುತ್ತಾನೆ. ಅವಳಿಗೇಕೋ ಅವನಿಗೆ ಅಂಕಲ್ ಎನ್ನಲು ಮನಸ್ಸು ಬರುತ್ತಿಲ್ಲ.ಆದರೂ ” ಅಂಕಲ್ ನಾನು ಸಿಂಚನಾ ಫ್ರೆಂಡ್.ಇವತ್ತು ಮನೆಗೆ ಬಾ ಅಂದಿದ್ಲು.ಅದಕ್ಕೆ ಬಂದೆ.

ಒಳಗಡೆ ಇದಾಳಾ? ” ಎಂದಳು. ರಾಹುಲ್ “ಒಳಗಿದಾಳಮ್ಮ ನೋಡು ” ಎಂದು ತಾನೂ ಅವಳನ್ನು ಹಿಂಬಾಲಿಸಿದ. ಸಿಂಚನಾ “ಹಾಯ್” ಹೇಳಿ ಅವಳನ್ನು ಹಾಲ್ ನಲ್ಲಿ ಕೂರಿಸಿ ತಾನು ಏನಾದರೂ ತಿಂಡಿ ಮಾಡಿದರಾಯಿತೆಂದು ಒಳನಡೆದಳು. ಗೋಡೆಯ ಮೇಲಿನ ಎರಡು ಫೋಟೋಗಳು ಅವಳ ಗಮನ ಸೆಳೆದವು. ಒಂದು ಎಪ್ಪತ್ತು ವಯಸ್ಸಿನ ಆಜು ಬಾಜು ವಯಸ್ಸಿನ ಹೆಣ್ಣುಮಗಳದು.. ಇನ್ನೊಂದು ಮೂವತ್ತು ವಯಸ್ಸಿನ ಆಜು ಬಾಜು ವಯಸ್ಸಿನ ಹೆಣ್ಣುಮಗಳದು. ಅವರಿಬ್ಬರ ಫೋಟೋಗಳು ತನಗೆ ತುಂಬಾನೇ ಪರಿಚಿತವೆನಿಸಿತವಳಿಗೆ..ಅಷ್ಟೊತ್ತಿಗೆ ಸಿಂಚನಾಳ ಅಪ್ಪ ಬಂದು ಸೋಫಾ ಮೇಲೆ ಕುಳಿತು ಅವಳ ಬಗ್ಗೆ ವಿಚಾರಿಸಲು ಶುರು ಮಾಡಿದ. ತನ್ನ ಹೆಸರನ್ನು ರಾಹುಲ್ ಎಂದು ಪರಿಚಯ ಮಾಡಿಕೊಂಡಾಗ ಅವಳಿಗೆ ಆಶ್ಚರ್ಯ. ಆ ಕನಸಿನಲ್ಲಿ ಬಂದ ಹುಡುಗಿ “ರಾಹುಲ್ ನಾನು ಗರ್ಭಿಣಿ ನನ್ನ ಕೈ ಬಿಡಬೇಡ ” ಎನ್ನುತ್ತಿದ್ದಳು. ಇವರು ನೋಡಲು ಆ ಹುಡುಗನಂತೆಯೇ ಇದ್ದಾರೆ.ಆದರೆ ವಯಸ್ಸಾಗಿದೆ ಅಷ್ಟೇ.. ತಲೆ ದಿಮ್ ಎಂದಿತವಳಿಗೆ. ತಡವರಿಸುತ್ತ “ಅವರು ಯಾರು? “ಎಂದಳು ಅವೆರಡು ಫೋಟೋದತ್ತ ಕೈ ತೋರಿಸುತ್ತ ರಾಹುಲ್ ದೀರ್ಘ ಉಸಿರೆಳೆದುಕೊಂಡು “ಒಂದು ನನ್ನ ಅಮ್ಮನದು ಇನ್ನೊಂದು ನನ್ನ ಹೆಂಡತಿ ಕಾಂತಿಯದು” ಎಂದ.ಸಿಂಚನಾ ಅಮ್ಮನ ಫೋಟೋ ದಿಟ್ಟಿಸಿ ನೋಡಿದಳು ಪ್ರಿಯಾಂಕಾ. “ಹೌದು ! ಕನಸಿನಲ್ಲಿ ಬಂದ ಗರ್ಭಿಣಿ ಹುಡುಗಿಯನ್ನು  ಜಲಪಾತದಲ್ಲಿ ಈ ಮನುಷ್ಯ ಮತ್ತು ಅವನ ಹೆಂಡತಿಯೇ ನೂಕಿದ್ದು “ಎನಿಸಿತು.ಆದರೆ ಅವಳಿಗೆ “ಆ ಗರ್ಭಿಣಿ ಹುಡುಗಿ ಯಾರು ?”ಎನ್ನುವುದು ಗೊತ್ತಾಗುತ್ತಿಲ್ಲ. ಸಿಂಚನಾಳ ಅಪ್ಪನನ್ನು ಕೇಳುವುದೇ ಎಂದುಕೊಂಡಳು. ಆದರೆ ಹೇಗೆ ಎಂದು ತಿಳಿಯಲಿಲ್ಲ. ಸುಮ್ಮನಾದಳು.ಅಷ್ಟೊತ್ತಿಗೆ ಸಿಂಚನಾ ತಿಂಡಿ ಮತ್ತು ಟೀ ಯೊಂದಿಗೆ ಹಾಜರಾದಳು. ಸ್ವಲ್ಪ ಹೊತ್ತು ಹರಟೆ ಹೊಡೆದು ಪ್ರಿಯಾಂಕಾ ಮನೆ ಕಡೆಗೆ ನಡೆದಳು. ಯೋಚಿಸಿ ಯೋಚಿಸಿ ಸಾಕಾಗಿತ್ತವಳಿಗೆ. ಒಂದೆರಡು ದಿನ ಕಳೆದ ಮೇಲೆ ಪ್ರಿಯಾ ಫ್ರೆಂಡ್ ಮದನ್ ಅವನೂರಿನ ಹತ್ತಿರದ ಜಲಪಾತವೊಂದಕ್ಕೆ ಟ್ರೆಕ್ಕಿಂಗ್ ಹೋಗುವ ಬಗ್ಗೆ ವಿಷಯ ಪ್ರಸ್ತಾಪಿಸಿದ. ಹೇಗೂ ಸರಕಾರಿ ರಜೆ ಸೋಮವಾರ ಬಂದಿದ್ದರಿಂದ ಶನಿವಾರ ರಾತ್ರಿ ಹೊರಡುವ ಪ್ಲ್ಯಾನ್ ಇರುವುದಾಗಿ ತಿಳಿಸಿದ.ಪ್ರಿಯಾಂಕಾ ಮನಸಿಗೆ ಸ್ವಲ್ಪ ಬದಲಾವಣೆ ಸಿಗಲಿ ಎಂದು ನರಸಿಂಹ ದೇಸಾಯಿಯವರು ಹೋಗಿಬರಲು ಒಪ್ಪಿಗೆ ನೀಡಿದ್ದರು. ಅವರು ಉಜಿರೆಗೆ ಸಮೀಪವಿರಿವ ಬಂಡಜ್ಜೆ ಅರಬಿ ಪಾಲ್ಸ್ ಗೆ ಟ್ರೆಕ್ಕಿಂಗ್ ಹೊರಟಿದ್ದರು. ಹನ್ನೆರಡು ಜನರು ಶನಿವಾರ ರಾತ್ರಿ ಪ್ರಯಾಣ ಆರಂಭಿಸಿ ಮರುದಿನ ಚಿಕ್ಕಮಂಗಳೂರನ್ನು ತಲುಪಿ ಅಲ್ಲಿಂದ ಚಾರ್ ಮುಡಿ ಘಾಟ್ ನಲ್ಲಿ ಇಳಿದರು‌. ಅಲ್ಲಿ ನಿತ್ಯ ಕರ್ಮಗಳನ್ನು ಪೂರೈಸಲು ವ್ಯವಸ್ಥೆ ಇಲ್ಲದ್ದರಿಂದ ಧರ್ಮಸ್ಥಳಕ್ಕೆ ಹೊರಟು ಅಲ್ಲಿಯೇ ಹೊಟೆಲ್ ಒಂದರಲ್ಲಿ ನಿತ್ಯ ಕರ್ಮಗಳನ್ನು  ಮುಗಿಸಿ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಗೆ ಸಮಯವಿಲ್ಲದ್ದರಿಂದ ಹೊರಗಡೆಯೇ ನಿಂತು ಕೈ ಮುಗಿದರು. ನಂತರ ಪುನಃ ಚಾರ್ ಮುಡಿ ಘಾಟ್ ಗೆ ಬಂದು ಅಲ್ಲಿಂದ ತಮ್ಮ ಟ್ರೆಕ್ಕಿಂಗ್ ಶುರು ಮಾಡಿದರು. ಮುಂದೆ ದಿಡುಪೆ ಎನ್ನುವ ಹಳ್ಳಿ ಸಿಕ್ಕಿತು. ಅಲ್ಲಿ ಒಂದು ಆರ್ಚ್ ಇತ್ತು .ಆ ಗುಂಪಿನ ಮದನ್ ಅಲ್ಲಿಯವನೇ ಆಗಿದ್ದರಿಂದ ಅವನಿಗೆ ಸ್ಥಳ ಪರಿಚಯವಿತ್ತು. ಅಲ್ಲಿಂದ ಮುಂದೆ ಹೋದರೆ ಒಂದು ಚಿಕ್ಕ ಪಾರ್ಮಹೌಸ್ ತರಹದ ಮನೆ..ಪ್ರಿಯಾಂಕಾಗೆ ತಲೆ ಕೆಟ್ಟಂತಾಯಿತು. ಈ ಮನೆಯೂ ತನಗೆ ಪರಿಚಿತವೇ ಎನಿಸತೊಡಗಿತು. ಛೇ ! ತನಗೇಕೆ ಹೀಗಾಗುತ್ತಿದೆ.. ತನಗೇನಾಗಿದೆ ಎಂದು ಯೋಚಿಸುತ್ತ ಇಡಲಾರದೆ ಹೆಜ್ಜೆ ಇಡತೊಡಗಿದಳು.ಕನಸಿನಲ್ಲಿ ಕಂಡ ಗೌಡನ ಮನೆಯೇ ಇದು..”ಆದರೆ ಆ ಗೌಡರು ಇಲ್ಲವಲ್ಲಾ” ಎಂದುಕೊಂಡಳು.ಫಾರ್ಮಹೌಸಿನ ಎದುರಿಗೆ ನಿಂತಿದ್ದ ತರುಣನನ್ನು ಕೊನೆಯಲ್ಲಿ ನಡೆಯುತ್ತಿದ್ದ ಪ್ರಿಯಾಂಕ ಗೌಡರ ಬಗ್ಗೆ ಕೇಳಿದರೆ ತಿಳಿಯುತ್ತದೆ ಎಂದುಕೊಂಡಳು. ಎಲ್ಲಾ ತನ್ನ ಭ್ರಮೆಯೇ ಅಥವಾ ಆ ಕನಸು ನಿಜವೇ ತಿಳಿದುಕೊಳ್ಳೋಣ ಎಂದುಕೊಂಡಳು. ಸುಮ್ಮನೆ ಮುಂದೆ ಹೋಗುತ್ತಿದ್ದ ತನ್ನ ಗೆಳೆಯ ಗೆಳತಿಯರು ಹರಟುತ್ತ ಹಾಡುತ್ತ ಅಲ್ಲಿ ಕುಳಿತಿದ್ದರು ಒಂದಿಬ್ಬರು ಸಿಂಚನಾಗೆ ತೆರೆಚಿದ ಗಾಯವಾಗಿದ್ದರಿಂದ ಬ್ಯಾಂಡೇಜ್ ಹಾಕುತ್ತಿದ್ದರು. ಅವಳು ಆ ತರುಣನ ಹತ್ತಿರ ಹೋಗಿ “ಎಕ್ಸ್ಕ್ ಕ್ಯೂಸ್ ಮಿ ” ಎಂದಳು ಆ ತರುಣ “ಎಸ್ ಹೇಳಿ ” ಎಂದ. ಪ್ರಿಯಾಂಕ ಧೈರ್ಯ ಮಾಡಿ “ಸರ್ ಇಲ್ಲಿ ಒಬ್ಬರು ಗೌಡರಿದ್ದರಲ್ಲಾ ಎಲ್ಲಿ ಅವರು?” ಎಂದಳು. ಆ ತರುಣ ” ಅವರು ನಿಮಗೆ ಹೇಗೆ ಪರಿಚಯ?”ಎಂದ ಪ್ರಿಯಾಂಕಗೆ “ಹಾಗಿದ್ದರೆ ಆ ಕನಸಿನಲ್ಲಿ ಬಂದ ಗೌಡರೂ ನಿಜ ” ಎನಿಸಿ ಆಶ್ಚರ್ಯವಾಯಿತು. ಪ್ರಿಯಾಂಕಾ ಆ ತರುಣನಿಗೆ “ಅವರು ನನ್ನ ತಾತನಿಗೆ ಪರಿಚಯ ಅದಕ್ಕೆ ಕೇಳಿದೆ  “ಎಂದು ಒಂದು ಸುಳ್ಳನ್ನೆಸೆದಳು. ಆ ತರುಣ “ಓ ಹೌದಾ. ಅವರು ತೀರಿಹೋಗಿ ತುಂಬಾ ವರ್ಷವಾಯಿತು. ನಾನು ಅವರ ಮೊಮ್ಮಗ ಎಂದ.ಅವಳಿಗೆ ಆ ಗೌಡರದೊಂದು ಫೋಟೋ ನೋಡುವುದು ಸರಿಯೆನಿಸಿ ” ಇಫ್ ಯು ಡೋಂಟ್ ಮೈಂಡ್ ಅವರ ಫೋಟೋ ನೋಡಬಹದಾ ? ಏಕೆಂದರೆ ತಾತಾ ತುಂಬಾ ಅವರ ಬಗ್ಗೆ ಹೇಳುತ್ತಿದ್ದರು” ಎಂದಳು ಪ್ರಿಯಾಂಕಾ.. ಆ ತರುಣ ಸ್ವಲ್ಪ ಮುಂದೆ ಅವಳನ್ನು ಕರೆದುಕೊಂಡು ಹೋಗಿ ಗೌಡರ ಫೋಟೋ ತೋರಿಸಿದ.ಹೌಹಾರಿದಳು ಪ್ರಿಯಾಂಕಾ..! ಹೌದು ಅವರೇ ಇವರು..! ತಲೆ ಚಿಟ್ಟು ಹಿಡಿದಂತಾಗಿತ್ತವಳಿಗೆ.ಸಿಂಚನಾ ಕೂಗಿದ್ದರಿಂದ ಆ ತರುಣನಿಗೆ ಬೈ ಹೇಳಿ ತನ್ನ ಗುಂಪು ಸೇರಿಕೊಂಡಳು. ಮುಂದೆ ಬಲಗಡೆಗೆ ನಡೆದರೆ ಕಾಲು ದಾರಿಯೊಂದು ಕಾಣಿಸತೊಡಗಿತ್ತು.ತನ್ನ ಗುಂಪಿನೊಂದಿಗೆ ನಡೆಯುತ್ತಿದ್ದ ಪ್ರಿಯಾಂಕಾ ಮಂಕಾಗಿದ್ದಳು. ಇಲ್ಲಿ ತಾನು ಓಡಾಡಿದ್ದೇನೆ ಎನಿಸತೊಡಗಿತ್ತು. ಮುಂದೆ ನಡೆದಾಗ ಚಿಕ್ಕ ತೊರೆಯೊಂದು ಕಾಣಿಸಿತು. ಅದನ್ನು ದಾಟಿದರೆ ಸ್ವಲ್ಪ ಕಾಂಕ್ರೀಟ್ ರೋಡ್. ಅಲ್ಲಿಂದ ದಟ್ಟ ಕಾಡು ಸೂರ್ಯನ ಕಿರಣಗಳೂ ಕಾಣದಂತೆ. ಅಲ್ಲಿನ ಒಂದು ದೊಡ್ಡ ಬಂಡೆಯಿಂದ ಯು ಟರ್ನ್ ತೆಗೆದುಕೊಂಡರೆ ಮುಂದೆ ನದಿಯ ಜುಳು ಜುಳು ನಾದ ಕೇಳತೊಡಗಿತು. ಎಲ್ಲರೂ ಉತ್ಸಾಹದಿಂದ ಇದ್ದರೆ ಪ್ರಿಯಾಂಕಾ ಮೌನವಾಗಿದ್ದಳು. ಅವಳ ಹಿಂದೆ ನಡೆಯುತ್ತಿದ್ದ ಆನಂದ್ ಯಾವಾಗಲೋ ಅವಳನ್ನು ಇಷ್ಟ ಪಟ್ಟಿದ್ದ ಹುಡುಗ. ಆದರೆ ಅವನೆಂದೂ ಬಾಯ್ಬಿಟ್ಟು ಹೇಳಿರಲಿಲ್ಲ. ಪ್ರಿಯಾಂಕಾ ಕೊನೆಯಲ್ಲಿ ನಡೆಯುತ್ತಿದ್ದರಿಂದ ಅವನು ಅವಳ ಹಿಂದೆ ಬಂದು ಸೇರಿಕೊಂಡ. ಆದರೆ ಪ್ರಿಯಾಂಕಾಗೆ ಇದ್ಯಾವುರದ ಪರಿವೆಯೇ ಇರದೇ ದಟ್ಟ ಕಾಡಿನಲ್ಲಿ ಯೋಚಿಸುತ್ತ ನಡೆದಿದ್ದಳು. ಅವಳಿಗೆ ತಾನು ಎಂದೋ ಯಾರೊಡನೆಯೋ ಈ ಕಾಡಿನಲ್ಲಿ ನಡೆದಾಡಿದ್ದೇನೆ ಎನಿಸತೊಡಗಿತ್ತು. ಆ ನದಿ ಅಲ್ಲಿ ಸಣ್ಣದಾಗಿ ಹರಿದಿತ್ತು. ಹಾಗೇ ಮೊಣಕಾಲುದ್ದ ನೀರಿದ್ದಿದ್ದರಿಂದ ಸುಲಭವಾಗಿ ದಾಟಿದರು. ಮೇಲೆ ಕಲ್ಲು ಬಂಡೆಯೊಂದಿತ್ತು. ಆ ಬಂಡೆಯನ್ನು ದಾಟಿದರೆ ಇನ್ನೊಂದು ಕಿರುದಾರಿ. ಹೀಗೇ ನಡೆಯುತ್ತ ಅರ್ಧ ದಾರಿ ಬಂದಾಗಿತ್ತು. ಕಾಡು ಮುಗಿಯುತ್ತಾ ಬಂದಿತ್ತು. ಈಗೀಗ ಸ್ವಲ್ಪ ಆಕಾಶ ಕಾಣತೊಡಗಿತು. ವಿಶಾಲವಾದ ಹುಲ್ಲುಗಾವಲು ಕಾಣಿಸತೊಡಗಿತು. ಎಲ್ಲಿ ನೋಡಿದರಲ್ಲಿ ಹಸಿರು ಹುಲ್ಲುಗಾವಲು. ಎಲ್ಲರೂ ಆನಂದಿಂದ ಕೂಗಾಡತೊಡಗಿದರು.ಆದರೆ ಪ್ರಿಯಾಂಕಳ ಮುಖದಲ್ಲಿ ಯಾವುದೇ ಉತ್ಸಾಹವಿಲ್ಲ. ಆನಂದ್ ಅವಳನ್ನು ನೋಡುತ್ತಿದ್ದಾನೆ. ಹಸಿರು ಹುಲ್ಲುಗಾವಲಿನಲ್ಲಿ ಅಪ್ಸರೆಯಂತೆ ಕಂಡಳವಳು.”ಯಾಕೆ ಪ್ರಿಯಾ  ಸಪ್ಪಗಿದೀಯಾ.. ಆಯಾಸಾನಾ? ಬೇಕಿದ್ರೆ ಹತ್ತು ನಿಮಿಷ ಕುಳಿತುಕೊ. ನಾನು ಎಲ್ಲರಿಗೂ ಹೇಳ್ತಿನಿ” ಎಂದ ಕಾಳಜಿಯಿಂದ.ಪ್ರಿಯಾಂಕ “ಆಯಾಸವೇನಿಲ್ಲ ಆನಂದ್..ಕುಳಿತುಕೊಳ್ಳವುದೇನು ಬೇಡ ” ಎಂದು ಮುಂದೆ ಹೆಜ್ಜೆ ಹಾಕಿದಳು. ಹುಲ್ಲುಗಾವಲಿನಲ್ಲಿ ತಾನು ಯಾರೊಂದಿಗೋ ಕೈ ಹಿಡಿದು ಹೆಜ್ಜೆ ಹಾಕಿದ್ದೇನೆ ಎನಿಸತೊಡಗಿತ್ತು.” ಯಾರದಾದರೂ ದೆವ್ವ ಮೈಯೊಳಗೆ ಸೇರಿಬಿಟ್ಟಿದೆಯಾ ನನಗೆ..?ಹೀಗೇಕಾಗುತ್ತಿದೆ ? “ಎಂದು ಯೋಚಿಸುತ್ತ ಮುನ್ನಡೆದಳು. ಪಶ್ಚಿಮ ಘಟ್ಟದ ಹಸಿರು ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲದೆನಿಸಿತ್ತು. ಬರಬರುತ್ತ  ಹುಲ್ಲುಗಾವಲು ಸಮತಟ್ಟಾಗಿ ಹರಡಿಕೊಂಡಿತ್ತು. ಎಲ್ಲರಿಗೂ ಈಗೀಗ ನಡೆಯುವುದು ಸುಲಭವೆನಿಸತೊಡಗಿತ್ತು .ಆ ಹುಲ್ಲುಗಾವಲಿನಲ್ಲಿ ಎಲ್ಲೀಯೂ ದೊಡ್ಡಮರಗಳಿರಲಿಲ್ಲ.. ಆದರೆ ಹುಲ್ಲುಗಾವಲಿನ ಮಧ್ಯ ವಿಶೇಷವಾಗಿ ಒಂದೇ ಒಂದು ಸಣ್ಣ ಮರ ಕಾಣಿಸಿತು. ಆ ಮರದ ಕೆಳಗೆ ಎಲ್ಲರೂ ಕುಳಿತು ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ತಂದಿದ್ದ ಸ್ವಲ್ಪ ತಿಂಡಿಗಳನ್ನು ತಿಂದರು. ನಂತರ ಮುಂದೆ ನಡೆದರೆ ಮತ್ತೊಂದು ಬಂಡೆ ಕಾಣಿಸಿತು. ಅದರ ಮೇಲಿನ ಎರಡು ಹೆಸರುಗಳನ್ನು ಪ್ರಿಯಾಂಕ ಮಾತ್ರ ಗಮನಿಸಿದಳು. ಅವಳಿಗೆ ಆ ಬಂಡೆಯ ಮೇಲೆ ಹೆಸರುಗಳಿವೆ ಎನಿಸತೊಡಗಿತ್ತು. ಮಸುಕಾಗಿದ್ದರೂ ಹೆಸರುಗಳನ್ನು ಓದಬಹುದಿತ್ತು. “ರಾಹುಲ್ -ಅಂಜಲಿ ”  “ರಾಹುಲ್ ” ಎಂಬ ಹೆಸರು ನೋಡಿ ಅವಳಿಗೆ ತಲೆ ಸಿಡಿದು ಹೋಯಿತು. “ಕನಸಲ್ಲಿ ಬಂದ ವ್ಯಕ್ತಿಯ ಹೆಸರು ರಾಹುಲ್,ಸಿಂಚನಾ ಅಪ್ಪ ರಾಹುಲ್,ಇಲ್ಲಿರುವುದೂ ರಾಹುಲ್ ಎನ್ನುವ ಹೆಸರು..ಓ ಮೈ ಗಾಡ್ !” ಎಂದು ತಲೆ ಹಿಡಿದುಕೊಂಡಳು. ಆನಂದ್ ಬೀಳುವುದರಲ್ಲಿದ್ದ ಅವಳನ್ನು ಹಿಡಿದುಕೊಂಡ. ಸಿಂಚನಾ ಆನಂದನಿಗೆ “ಹೂಂ ಚಾನ್ಸ್ ಸಿಕ್ಕಿದೆ ಪಟಾಯಿಸಿಕೊ” ಎನ್ನುವಂತೆ ಕಣ್ಸನ್ನೆ ಮಾಡಿದಳು. ಆ ಬಂಡೆ ಹತ್ತಿ ಕೆಳಗಿಳಿದರು.ಅಲ್ಲಿ ಮುಂದೆ ಎರಡು ಬಂಡೆಗಳ ನಡುವೆ ನದಿ ಹರಿದಿತ್ತು. ಮುಂದೆ ಭೋರ್ಗರೆಯುವ ಜಲಪಾತ..ಎಲ್ಲರೂ ಜಲಪಾತವನ್ನು ಮುಟ್ಟಿದ ಖುಷಿಗೆ ಜೋರಾಗಿ ಚೀರತೊಡಗಿದರು.” ಇದು ಬಂಡಜ್ಜೆ-ಅರಬಿ ಪಾಲ್ಸ್ ..ಮುಂದೆ ಹರಿದು ನೇತ್ರಾವತಿ ನದಿಯನ್ನು ಸೇರುತ್ತದೆ” ಎಂದು ಮದನ್ ಎಲ್ಲರಿಗೂ ಹೇಳಿದ. ಪ್ರಿಯಾಂಕಳಿಗೆ ಭೂಮಿಯೇ ತಿರುಗಿದಂತೆ ಭಾಸವಾಗಿತ್ತು. ಕೆಲವರು ಕಲ್ಲು ಹಾಸಿನ ಮೇಲೆ ಕುಳಿತರು. ಇನ್ನು ಕೆಲವರು ಜಲಪಾತದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಆಟವಾಡುತ್ತಿದ್ದರು. ಆದರೆ ಪ್ರಿಯಾಂಕ ಜಲಪಾತವನ್ನೇ ದಿಟ್ಟಿಸಿ ನೋಡುತ್ತಿದ್ದಳು.ನೋಡುತ್ತಾ ನೋಡುತ್ತಾ ಅವಳಿಗೆ ಏನೋ ನೆನಪು ಮರಕಳಿಸಿದ ಅನುಭವ. “ಬೇಡ ನನ್ನ ಬಿಟ್ಬಿಡಿ ಪ್ಲೀಸ್ ,ನನ್ನ ತಳ್ಳಬೇಡಿ ” ಎನ್ನುತ್ತ ಕಲ್ಲು ಹಾಸಿನ ಮೇಲೆ ಕುಸಿದು ಬಿದ್ದಳು. ಎಲ್ಲರೂ ಓಡಿ ಬಂದರು. ಅವಳ ಮುಖಕ್ಕೆ ನೀರು ಸಿಂಪಡಿಸಿದರು. ಐದು ನಿಮಿಷಗಳ ನಂತರ ಕಣ್ತೆರೆಳು ಪ್ರಿಯಾಂಕಾ..ಸಿಂಚನಾ “ಯಾಕೆ ಪ್ರಿಯಾ ಹಾಗೆ ಏನೇನೋ ಹೇಳ್ಕೊಂಡು ಕುಸಿದು ಬಿದ್ದೆ? ಏನಾಯ್ತು ?” ಎಂದಳು. “ಯಾಕೋ ಆಯಾಸಕ್ಕೆ ತಲೆ ಸುತ್ತಿ ಬಂತು “ಎಂದು ಎದ್ದು ಹೋಗಿ ಮುಖ ತೊಳೆದಳು.ಅವಳಿಗೆ ಸ್ಪಷ್ಟ ವಾಗಿ ನೆನಪಾಗಿತ್ತು. ಅಲ್ಲಿಂದ ಬಿದ್ದಿರುವುದು ತಾನೇ. ಹಾಗಾದರೆ ಈ ಪ್ರಿಯಾಂಕಾ ಎನ್ನುವುದು ತನ್ನ ಪುನರ್ಜನ್ಮ ಎಂಬುದು ಅವಳಿಗೆ  ಈಗೀಗ ತಿಳಿದಿತ್ತು.. ಆದರೆ ಯಾರಿಗೂ ಏನನ್ನೂ ಹೇಳಲಿಲ್ಲ. ರಾತ್ರಿ ಅಲ್ಲಿಯೇ ಟೆಂಟ್ ಹಾಕಿದರು.ರಾತ್ರಿಯಿಡಿ ಅವಳಿಗೆ ತಾನು ಅನುಭವಿಸಿದ ನೋವುಗಳೆಲ್ಲವೂ ನೆನಪಾಗಿದ್ದವು.

 ಉಜಿರೆಯ ಕಾಲೇಜ್ ಒಂದರಲ್ಲಿ ಓದುತ್ತಿದ್ದ ಹುಡುಗಿ ಅಂಜಲಿ. ಉಜಿರೆಗೆ ಸ್ವಲ್ಪ ದೂರದಲ್ಲಿರುವ ಹಳ್ಳಿ  ಅವಳದು. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತೀರಿಕೊಂಡಿದ್ದರು. ಅಂಜಲಿಯ ತಾಯಿ ಕುಮುದಾ ನೋಡಲು ಸುಂದರವಾಗಿದ್ದ ಹೆಣ್ಣು. ಬಲುಬೇಗನೇ ಕಾಮುಕರ ದೃಷ್ಟಿಗೆ ಬಲಿಯಾಗಿದ್ದಳು. ಕಷ್ಟಪಟ್ಟು ದುಡಿದು ತಿನ್ನುವ ಮನೋಭಾವ ಅವಳದಾಗಿರಲಿಲ್ಲ.ಹಾಗಾಗಿ ಕಾಮುಕರ ಆಸೆಗೆ ತಾನು ಮೈಮಾರಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದಳು. ಇದ್ದೊಬ್ಬ ಮಗಳು ಅಂಜಲಿಗೆ ಏನೂ ಕಡಿಮೆ ಮಾಡಿರಲಿಲ್ಲ.ಅಂಜಲಿ ಎಂಟನೆ ತರಗತಿಗೆ ಬಂದಾಗ ತಾಯಿಯ ವೇಶ್ಯಾ ವೃತ್ತಿಯನ್ನು ಅವಳು ವಿರೋಧಿಸಲಾರಂಭಿಸಿದಳು. ತಾಯಿಗೆ ಬೆಳೆದ ಮಗಳೆದುರು ಆ ವೃತ್ತಿ ನಡೆಸುವುದು ಕಠಿಣವೆನಿಸತೊಡಗಿತ್ತು. ಎಂಟನೆ ತರಗತಿಗೆ ಅವಳನ್ನು ಉಜಿರೆಯ ಹಾಸ್ಟೇಲ್ ಒಂದಕ್ಕೆ ಸೇರಿಸಿದಳು. ತಾಯಿಯ ಬಗ್ಗೆ ಅಸಹ್ಯದ ಭಾವನೆಯೊಂದು ಅದಾಗಲೇ ಅಂಜಲಿಯ ಮನದಲ್ಲಿ ಮೂಡಿಬಿಟ್ಟಿತ್ತು. ತಾನು ಉಜಿರೆ ಸೇರಿದ ಮೇಲೆ ಹಳ್ಳಿಗೆ ಹೋಗುವುದನ್ನು ಬಿಟ್ಟುಬಿಟ್ಟಳು.ಕುಮುದಳೇ ಆಗಾಗ ಬಂದು ಅವಳನ್ನು ನೋಡಿಕೊಂಡು ಹೋಗುತ್ತಿದ್ದಳು. ಅವಳು ಅಲ್ಲಿಗೆ ಬರಲು ಎರಡು ಕಾರಣಗಳಿದ್ದವು .ಒಂದು ಮಗಳನ್ನು ನೋಡುವುದು ,ಇನ್ನೊಂದು ತನ್ನ ಖಾಯಂ ಗಿರಾಕಿ ಉಜಿರೆಯ ಶ್ರೀಮಂತ ವ್ಯಕ್ತಿ ಸುದರ್ಶನ್ ಅವರು ಕೊಡಿಸುವ ಉಡುಗೊರೆಗಳು.ಮಗಳನ್ನು ನೋಡಿ ಆದ ಮೇಲೆ ಸುದರ್ಶನ್ ಅವರಿಗೆ ಎಸ್ ಟಿ ಡಿ ಬೂತ್ ನಿಂದ ಪೋನಾಯಿಸುತ್ತಿದ್ದಳು. ಸುದರ್ಶನ್ ಕುಮುದಳ ಮಾಸದ ಸೌಂದರ್ಯದ ಆರಾಧಕನಾಗಿದ್ದ. ಈ ವಿಷಯದ ಬಗ್ಗೆ ಗೊತ್ತಿದ್ದ ಸುದರ್ಶನ್ ಪತ್ನಿ ಅನಸೂಯ ಏನೂ ಮಾಡಲಾರದವಳಾಗಿದ್ದಳು.ಜಾಸ್ತಿ ಕಿರಿ ಕಿರಿ ಮಾಡಿದರೆ ಕುಮುದಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬರುವುದಾಗಿ ಅನಸೂಯಾಳ ಬಾಯಿ ಮುಚ್ಚಿಸಿದ್ದ ಸುದರ್ಶನ್.. ಕುಮುದಳ ಫೋಟೋವನ್ನು ಗಂಡನ ಪರ್ಸನಲ್ಲಿ ಒಮ್ಮೆ ನೋಡಿ ಜೋರು ಜಗಳವಾಗಿ ಫೋಟೋವನ್ನು ಹರಿದು ಹಾಕಿದ್ದಳು ಅನಸೂಯಾ.ಇದ್ದ ಒಬ್ಬ ಮಗ ರಾಹುಲ್ ನ ಭವಿಷ್ಯದ ಸಲುವಾಗಿ ಗಂಡನ ದೌರ್ಜನ್ಯವನ್ನು ಸಹಿಸಿಕೊಂಡಿದ್ದಳು.ರಾಹುಲ್ ಇಂಜಿನಿಯರಿಂಗ್ ಎರಡನೆ ವರ್ಷದಲ್ಲಿದ್ದ.ಅಂಜಲಿಯೂ ರಾಹುಲ್ ಓದುತ್ತಿದ್ದ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮೊದಲ ವರ್ಷದಲ್ಲಿದ್ದಳು.ರಾಹುಲ್ ಗೆ ಆ ಮುದ್ದಾದ ಹುಡುಗಿ ಅಂಜಲಿ ಮನಸಿಗೆ ಹಿಡಿಸಿಬಿಟ್ಟಿದ್ದಳು. ಅಂಜಲಿಯನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಳ್ಳುವುದರಲ್ಲಿ ಅವನು ಯಶಸ್ವಿಯಾಗಿದ್ದ. ಅಂಜಲಿ ಮುಂದೆ ವಿಷಯ ಗೊತ್ತಾಗಿ ತೊಂದರೆಯಾಗಬಾರದೆಂದು ಯೋಚಿಸಿ ತನ್ನ ತಾಯಿ ವೇಶ್ಯೆ ಎನ್ನುವ ವಿಚಾರವನ್ನು ರಾಹುಲ್ ಗೆ ತಿಳಿಸಿದ್ದಳು. “ನನಗೆ ಬೇಕಾಗಿರುವುದು ನಿನ್ನ ಪ್ರೀತಿ..ನಿನ್ನ ಹಿನ್ನೆಲೆಯಲ್ಲ “ಎಂದು ಹೇಳಿದ್ದ ರಾಹುಲ್..ಅಂಜಲಿ ಮುಗ್ಧ ಹುಡುಗಿ, ರಾಹುಲ್ ನನ್ನು  ನಂಬಿದ್ದಳು. ರಾಹುಲ್ ಕೂಡಾ ಅವಳ ಕೆಲವು ಒಳ್ಳೆಯತನಗಳಾದ “ಅನಾಥಾಶ್ರಮದ ಒಡನಾಟ,ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯ ಮಾಡುವುದು, ಹಸಿದವರಿಗೆ ಊಟ ಕೊಡಿಸುವುದು ಮತ್ತು ಅವನ ಬಗ್ಗೆ ಇದ್ದ ಅವಳ ವಿಪರೀತ ಕಾಳಜಿಯಿಂದ “ಅವಳನ್ನು ಇನ್ನೂ ಹೆಚ್ಚು ಆರಾಧಿಸತೊಡಗಿದ್ದ. ಅವಳನ್ನೇ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ.ಕಾಲೇಜಿನಲ್ಲಿ ಪಿಕ್ನಿಕ್ ಎಂದು ಕರೆದುಕೊಂಡು ಹೋಗಿದ್ದ ಉಜಿರೆಗೆ ಸಮೀಪದ ಬಂಡಜ್ಜೆ -ಅರಬಿ ಪಾಲ್ಸ್  ಅವಳಿಗೆ ತುಂಬಾನೇ ಇಷ್ಟವಾಗಿತ್ತು.ಹಸಿರ ಕಾಡಿನ ಮೇಲೆ ಜಲಪಾತದ ಸವಾರಿ ನೋಡುಗರ ಕಣ್ಮನ ಸೆಳೆಯುವಂತಿತ್ತು. ಭಾನುವಾರ ಬಂತೆಂದರೆ ರಾಹುಲ್ ನನ್ನು ಆ ಫಾಲ್ಸ್ ಗೆ ಎಳೆದುಕೊಂಡು ಹೋಗುತ್ತಿದ್ದಳು. ಇಬ್ಬರೂ ಸಮೀಪವಿರುವ ಬಂಡಜ್ಜೆ – ಅರಬಿ ಫಾಲ್ಸ್ ಗೆ ಹೋಗಿಬಿಡುತ್ತಿದ್ದರು.ಬೆಳಗ್ಗೆ ಬೇಗನೇ ಹೊರಟು ಅಲ್ಲಿ ಏಕಾಂತದ ಲಕ್ಷಣಗಳನ್ನು ಕಳೆಯುವುದು ಅಂಜಲಿಗೆ ಅತ್ಯಂತ ಕಷ್ಟದ ವಿಷಯವಾಗಿತ್ತು. ರಾಹುಲ್  ಕೂಡಾ ಅವಳಿಷ್ಟದಂತೆಯೇ ನಡೆದುಕೊಳ್ಳುತ್ತಿದ್ದ. ಬಂಡಜ್ಜೆ -ಅರಬಿ ಫಾಲ್ಸ್ಗೆ ಹೋಗುವ ದಾರಿಯಲ್ಲಿರುವ ಗೌಡರ ಮನೆ ರಾಹುಲ್ ತಂದೆಗೆ ಪರಿಚಯವಾದ ಮನೆಯಾಗಿತ್ತು. ಗೌಡರ ಮನೆಯಲ್ಲಿ ಕುಳಿತು ಮಾತನಾಡಿಕೊಂಡೇ ಹೋಗುತ್ತಿದ್ದರು. ಪಶ್ಚಿಮ ಘಟ್ಟಗಳ ಸೌಂದರ್ಯದಲ್ಲಿ ಅಂಜಲಿ ಕಳೆದುಹೋಗುತ್ತಿದ್ದಳು. ಅವಳ ಸಂತೋಷ ನೋಡುತ್ತಾ ರಾಹುಲ್ ಮೈಮರೆಯುತ್ತಿದ್ದ.ಹುಲ್ಲುಗಾವಲಿನಲ್ಲಿ ಜಿಂಕೆಗಳಂತೆ ಓಡುತ್ತಿದ್ದರು.ರಾಹುಲ್ ನ ಕಾರಿದ್ದಿದ್ದರಿಂದ ಅವರ ಓಡಾಟಕ್ಕೆ ತೊಂದರೆ ಇರಲಿಲ್ಲ. ಹೀಗೆ ಆ ಫಾಲ್ಸ್ ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಹೀಗೇ ಹಕ್ಕಿಗಳಂತೆ ಅವರಿಬ್ಬರೂ ಸ್ವಚ್ಚಂದವಾಗಿ ಹಾರಾಡಿಕೊಂಡಿದ್ದರು. ಅಲ್ಲಿನ ಬಂಡೆಯ ಮೇಲೆ “ರಾಹುಲ್ ಅಂಜಲಿ “ಎಂದು ರಾಹುಲ್ ಕಲ್ಲಿನಿಂದ ಕೆತ್ತಿದ್ದ. ಅಷ್ಟೆಲ್ಲಾ ಏಕಾಂತದ ಗಳಿಗೆಗಳು ಸಿಕ್ಕಿದ್ದರೂ ರಾಹುಲ್ ಮುತ್ತಿನ ಹೊರತಾಗಿ ಎಲ್ಲೆ ಮೀರಿರಲಿಲ್ಲ.ಅದೊಂದು ದಿನ ಕಾಡಿನಲ್ಲಿ ನಡೆಯತ್ತಿರುವಾಗ ಜೋರಾದ ಮಳೆ ಬಂದು ಇಬ್ಬರೂ ಮಳೆಯಲ್ಲಿ ನೆಂದಿದ್ದರು. ಮರದ ಕೆಳಗೆ ನಿಂತಾಗ ಅಂಜಲಿಯ ದೇಹದ ಉಬ್ಬು ತಗ್ಗುಗಳು ಒದ್ದೆಯಾದ ಬಟ್ಟೆಯಲ್ಲಿ ಆಕರ್ಷಕವಾಗಿ ಕಂಡಿದ್ದವು. ಮುತ್ತಿನಿಂದ ಮುಂದುವರೆದಿದ್ದ ರಾಹುಲ್. ಅಂಜಲಿ ಪ್ರತಿಭಟಿಸಲಿಲ್ಲ. ಅವನ ಮೇಲೆ ಅವಳಿಗೆ ನಂಬಿಕೆಯಿತ್ತು. ದಟ್ಟ ಕಾಡಿನ ಮಧ್ಯೆ ವೇಶ್ಯೆಯ ಮಗಳ ಸೆರಗು ಜಾರಿತ್ತು. ಇನ್ನೇನು ಇಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ ಪರೀಕ್ಷೆಗಳು ಹದಿನೈದು ದಿನಗಳಿದ್ದವು. ಅಂಜಲಿ ಅಳತೊಡಗಿದಳು. ತಾನು ಮಾಡಿದ ತಪ್ಪಿನ ಅರಿವಾಗಿತ್ತವಳಿಗೆ. ರಾಹುಲ್ ಅವಳನ್ನು ಸಂತೈಸಿದ. ಇನ್ನೆರಡು ತಿಂಗಳಲ್ಲಿ ಮದುವೆಯಾಗುವುದಾಗಿ ತಿಳಿಸಿದ. ವಾಪಸ್ ಬಂದ ಅಂಜಲಿ ಮಂಕಾಗಿದ್ದಳು.ಅವಳು ಮತ್ತೆ ಫಾಲ್ಸ್ ಗೆ ಹೋಗಲು ರಾಹುಲ್ ನನ್ನು ಕರೆಯಲಿಲ್ಲ. ರಾಹುಲ್ ಪರೀಕ್ಷೆಯ ತಯಾರಿಯಲ್ಲಿದ್ದ. ಪರೀಕ್ಷೆಗಳು ಮುಗಿದ ನಂತರ ರಾಹುಲ್ ಗೆ ಮನೆಯಲ್ಲಿ ತಮ್ಮ ಪ್ರೀತಿಯ ವಿಷಯ ಹೇಳಲು ಒತ್ತಾಯಿಸಿದ್ದಳು ಅಂಜಲಿ. ಒಂದೆರಡು ತಿಂಗಳು ಕಳೆದಿದ್ದವು. ಅಂಜಲಿಗೆ ತಾನು ಗರ್ಭಿಣಿ ಎಂದು ತಿಳಿದಿತ್ತು. ಅನಸೂಯಾ ಅವರು ತಾರಸಿಯ ಮೆಟ್ಟಿಲು ಇಳಿಯುವಾಗ ಬಿದ್ದು ಕಾಲು ಮುರಿದುಕೊಂಡಿದ್ದರು. ಅದಕ್ಕಾಗಿ ಅನಸೂಯಾ ಅವರ ಅಣ್ಣ ಮೋಹನ್ “ಹೇಗೂ ರಾಹುಲ್ ಪರೀಕ್ಷೆ ಮುಗಿದವು. ಕಾಂತಿಯನ್ನು ರಾಹುಲ್ ಗೆ ಕೊಟ್ಟು ಮದುವೆ ಮಾಡಿದರೆ ನಿನಗೂ ಆಸರೆಯಾಗುತ್ತಾಳೆ ” ಎಂದಿದ್ದ. ಮೋಹನ್ ಅವರ ಮಗಳು ಕಾಂತಿಗೆ ರಾಹುಲ್ ಎಂದರೆ ಪಂಚಪ್ರಾಣ. ಅವನಿಗೋಸ್ಕರ ಏನು ಮಾಡಲೂ ತಯಾರಿದ್ದಳು. ಇದು ಒಳ್ಳೆಯ ಸಮಯವೆಂದು ಅರಿತ ರಾಹುಲ್ ತಾನಾಗಿಯೇ ಮನೆಯಲ್ಲಿ ತನ್ನ ಪ್ರೀತಿಯ ಬಗ್ಗೆ ತಿಳಿಸಿದ್ದ.ಅನಸೂಯಾ ಕಾಂತಿಯ ವಿಚಾರ ಹೇಳಿದಾಗ ಅವನು ತಾನು ಮದುವೆಯಾದರೆ ಅಂಜಲಿಯನ್ನೇ ಎಂದು ತಿಳಿಸಿದ್ದ. ವಿಧಿಯಿಲ್ಲದೇ ಇದ್ದೊಬ್ಬ ಮಗ ಖುಷಿಯಾಗಿರಲೆಂದು ಸುದರ್ಶನ್ ಅನಸೂಯಾ ದಂಪತಿಗಳು ಒಪ್ಪಿದ್ದರು. ಅಂಜಲಿಗೆ ಹಿರಿಯರನ್ನು ಕರೆದುಕೊಂಡು ಮನೆಗೆ ಬರಲು ಹೇಳಿದ್ದರು. ಬಹಳ ಸಂತೋಷದಿಂದ ಅಂಜಲಿ ತನ್ನ ತಾಯಿಗೆ ವಿಷಯ ತಿಳಿಸಿದ್ದಳು. ಮಗಳು ಖುಷಿಯಾಗಿದ್ದನ್ನು ಕಂಡ ಕುಮುದಾ ಅವಳಿಗೋಸ್ಕರ ಒಪ್ಪಿಕೊಂಡಿದ್ದಳು.ಮರುದಿನ ಅಲಂಕೃತರಾದ ತಾಯಿ ಮಗಳನ್ನು ಕರೆದುಕೊಂಡು ರಾಹುಲ್ ತನ್ನ ಮನೆಗೆ ಬಂದ.ಅನಸೂಯಾಳಿಗೆ ಕುಮುದಾ ಎದುರಾದಾಗ ಮೈಮೇಲೆ ಕೆಂಡ ಸುರಿದಂತಾಯಿತವಳಿಗೆ.ಗೋಡೆಯ ಮೇಲೆ ಕಂಡ ಸುದರ್ಶನ್ ಮತ್ತು ಅನಸೂಯ ಭಾವಚಿತ್ರದಿಂದ ತಾನು ಬಂದದ್ದು ತನ್ನ ಖಾಯಂ ಗಿರಾಕಿ ಸುದರ್ಶನ್ ಅವರ ಮನೆಗೆ ಅವರ ಮಗ ರಾಹುಲ್ ನನ್ನು ತನ್ನ ಮಗಳು ಇಷ್ಟಪಟ್ಟಿದ್ದು ಎಂದು ಅವಳಿಗೆ ಗೊತ್ತಾದ ತಕ್ಷಣ ಕುಮುದಾ ಕಂಪಿಸಿದಳು. ಮಹಡಿಯಿಂದ ಇಳಿದು ಬಂದ ಸುದರ್ಶನ್ ಅವರಿಗೆ ಎದುರಿಗೆ ಕುಮುದಳನ್ನು ಕಂಡು ಭೂಮಿ ಬಾಯ್ಬಿಡಬಾರದೇ ಎನಿಸಿತು.ಮಗನಿಗೆ ಈ ಸತ್ಯ ಗೊತ್ತಿರಲಿಲ್ಲ. ಏನು ಮಾಡುವುದೆಂದು ಮೂವರಿಗೂ ತಿಳಿಯಲಿಲ್ಲ.ರಾಹುಲ್ ಅವರೆಲ್ಲರೂ ಮುಖ ಮುಖ ನೋಡುತ್ತಾ ನಿಂತಿದ್ದನ್ನು ಕಂಡು “ಆಂಟಿ,ಅಂಜಲಿ ಕುಳಿತುಕೊಳ್ಳಿ ” ಎಂದ. ಅನಸೂಯಾ “ರಾಹುಲ್ ಇವರನ್ನು ಮೊದಲು ಮನೆಯಿಂದ ಕಳಿಸು ..” ಎಂದು ಕುಂಟುತ್ತ ಹೋಗಿ ರೂಮು ಸೇರಿ ಧಡಾರ್ ಎಂದು ಬಾಗಿಲು ಹಾಕಿಕೊಂಡರು. ಸುದರ್ಶನ್ ಮಹಡಿಯ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು.ರಾಹುಲ್ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಸತ್ಯ ಗೊತ್ತಿದ್ದ ಕುಮುದಾ ಮಗಳನ್ನು ಕರೆದುಕೊಂಡು ಹೊರನಡೆದು ಆಟೋ ಕರೆದು ಬಸ್ ಸ್ಟ್ಯಾಂಡ್ ಗೆ ಹೊರಡಲು ಹೇಳಿದರು. ಅಂಜಲಿ ಏನಾಯಿತು ಎಂದು ಕೇಳುತ್ತಲೇ ಇದ್ದಳು. ಕುಮುದಾ ಏನೊಂದು ಮಾತನಾಡಲಿಲ್ಲ. ಮನೆಗೆ ಹೋದ ಮೇಲೆ ಹೇಳುತ್ತೇನೆಂದು ಬಾಯ್ಮುಚ್ಚಿಸಿದಳು. ಅಂಜಲಿಯು ತನ್ನ ಮನೆಯಲ್ಲಿ ಸುದರ್ಶನ್ ಅವರನ್ನು ಯಾವಾಗಲೂ ಎದುರುಗೊಂಡಿರಲಿಲ್ಲವಾಗಿದ್ದರಿಂದ ಅವಳಿಗೆ ಸತ್ಯದ ಅರಿವಿರಲಿಲ್ಲ. ಇತ್ತ ರಾಹುಲ್ ಅಮ್ಮನ ರೂಮಿನ ಬಾಗಿಲು ನಡೆಯುತ್ತಿದ್ದ. “ಆ ಶನಿಗಳು ಹೋದರಾ ?”ಎಂದು ಸಿಟ್ಟಿನಿಂದ ಕೇಳಿದಳು ಅನಸೂಯಾ. “ಅವರು ಹೋದರಮ್ಮಾ ,ಏನಾಯಿತಮ್ಮ? ಹೇಳಮ್ಮ” ಎಂದು ಆಶ್ಚರ್ಯದಿಂದ ಕೇಳಿದ ರಾಹುಲ್. ಬಾಗಿಲು ತೆಗೆದ ಅನಸೂಯಾ “ತಾಯಿ ನಿಮ್ಮಪ್ಪನನ್ನು ಹಾಳು ಮಾಡಿದಳು. ಮಗಳು ನಿನ್ನನ್ನು ಹಾಳು ಮಾಡಲು ನೋಡುತ್ತಿದ್ದಾಳೆ. ನಾನಿದಕ್ಕೆ ಅವಕಾಶ ಕೊಡಲಾರೆ.ಯಾರಿಗೆ ಗೊತ್ತು ಅಂಜಲಿ  ನಿಮ್ಮಪ್ಪನಿಗೇ ಹುಟ್ಟಿರಬಹುದು” ಎಂದಳು ಆವೇಶದಿಂದ.ರಾಹುಲ್ ಕುಸಿದುಹೋಗಿದ್ದ. ಏನು ಮಾಡಬೇಕೆಂದು ತಿಳಿಯದಾಗಿದ್ದ. ಇತ್ತ ಅಂಜಲಿಯ ತಾಯಿ ಇರುವ ಸತ್ಯವನ್ನು ಹೇಳಿ “ದಯವಿಟ್ಟು ಕ್ಷಮಿಸು ಮಗಳೇ..” ಎಂದಳು. ಸತ್ಯ ತಿಳಿದ ಅಂಜಲಿ ಅಮ್ಮನ ಮುಖ ನೋಡಲಿಲ್ಲ.ಅಳುತ್ತ ರೂಮಿನ ಬಾಗಿಲು ಹಾಕಿಕೊಂಡಳು. ಅಳುತ್ತ ಅಳುತ್ತಾ  ನಿದ್ರೆಗೆ ಜಾರಿದ್ದಳೋ. ನಾಳೆ ರಾಹುಲ್ ನನ್ನು ಭೇಟಿಯಾದರಾಯಿತೆಂದುಕೊಂಡಳು. ಅವನು ತನ್ನ ಕೈಬಿಡಲಾರ ಎಂದುಕೊಂಡಳು. ಮರುದಿನ ಎದ್ದಾಗ ಅಮ್ಮನ ಶವ ಪ್ಯಾನ್ ಗೆ ನೇತಾಡುತ್ತಿತ್ತು. “ನಿನ್ನ ಬಾಳಿಗೆ ನಾನೇ ಮುಳ್ಳಾದೆ  ಮಗಳೇ..ದಯವಿಟ್ಟು ಈ ಪಾಪಿ ತಾಯಿಯನ್ನು ಕ್ಷಮಿಸು “ಎನ್ನುವ ಪತ್ರ ಶವದ ಕೈಯಲ್ಲಿತ್ತು.ಅಂಜಲಿಗೆ ಅವಳ ಅಮ್ಮನ ಪತ್ರ ನೋಡಿ ದುಃಖ ತಾರಕಕ್ಕೇರಿತು. ಅಕ್ಕ ಪಕ್ಕದವರು ಬಂದು ಅಂತ್ಯಸಂಸ್ಕಾರ ನೆರವೇರಿಸಿದರು. ರಾಹುಲ್ ಇನ್ನೆಂದಿಗೂ ಅಂಜಲಿ ಮುಖ ನೋಡದಂತೆ ನಿರ್ಧರಿಸಿದ್ದ.

“ಯಾರಿಗೆ ಗೊತ್ತು ಅಂಜಲಿ ನಿಮ್ಮಪ್ಪನಿಗೇ ಹುಟ್ಟಿರಬಹುದು ” ಎಂದು ಅವನಮ್ಮ ಅಂದ ಮಾತು ಅವನ ಕಿವಿಯಲ್ಲಿ ಗುಯ್ ಗುಡುತ್ತಿತ್ತು.ಅಂಜಲಿ ಭಾರವಾದ ಹೃದಯ ಹೊತ್ತು ರಾಹುಲ್ ಮನೆಗೆ ಬಂದಳು. ರಾಹುಲ್ ಮನೆಯ ವರಾಂಡದಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ.ಅನಸೂಯಾ ಇನ್ನೊಮ್ಮೆ ಅಂಜಲಿ ಜೊತೆ ರಾಹುಲ್ ಕಾಣಿಸಿಕೊಂಡರೆ ನೇಣು ಹಾಕಿಕೊಳ್ಳುವುದಾಗಿ ತಿಳಿಸಿದ್ದಳು. ನಾಲ್ಕು ದಿನದಲ್ಲಿ ರಾಹುಲ್ ಸೊರಗಿದಂತೆ ಕಂಡ ಅಂಜಲಿಗೆ. ಅಂಜಲಿ ರಾಹುಲ್ ನ ಹತ್ತಿರ ಬಂದು ಕಣ್ಮುಚ್ಚಿ ಕುಳಿತ ರಾಹುಲ್ ನ ಭುಜ ಹಿಡಿದಾಗ ರಾಹುಲ್ ಕಣ್ತೆರೆದು ಅಂಜಲಿಯ ಮುಖ ಕಂಡು ಬೆಚ್ಚಿದ. ಅವಳ ಬಗ್ಗೆ ಅವನಿಗೆ ಅಸಹ್ಯವೆನಿಸತೊಡಿತ್ತು. ರಾಹುಲ್ ಏನೊಂದೂ ಮಾತನಾಡದಿದ್ದನ್ನು ಕಂಡು ಅಂಜಲಿ “ರಾಹುಲ್ ಪ್ಲೀಸ್ ಕಣೋ ..ನಾನು ಪ್ರಗ್ನೆಂಟ್ ಕಣೋ..ದಯವಿಟ್ಟು ನನ್ನ ಕೈ ಬಿಡಬೇಡ ” ಎಂದು ಗೋಗರೆದಳು. ಗೇಟ್ ಶಬ್ದವಾಗಿದ್ದರಿಂದ ಹೊರಬಂದ ಅನಸೂಯಾ ಮರೆಯಲ್ಲಿ ನಿಂತು ಇದನ್ನು ಕೇಳಿಸಿಕೊಂಡರು. ಕುಂಟುತ್ತಾ ಬಂದ ಅವರು ಅಂಜಲಿಗೆ “ನೂಲಿನಂತೆ ಸೀರೆ ,ತಾಯಿಯಂತೆ ಮಗಳು ಕಣೇ..ಸೂಳೆಯ ಮಗಳು ನೀನು..ಯಾರಿಗೆ ಗೊತ್ತು ಯಾರಿಗೆ ಬಸುರಾಗಿದ್ದೀಯೋ..ಇನ್ಮೇಲೆ ಇಲ್ಲಿ ಕಾಣಿಸಿಕೊಳ್ಳಬೇಡ ಹೊರಡು “ಎಂದು ಅವಳನ್ನು ಆಚೆ ಕಳಿಸುವಂತೆ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿದರು. ಅವನು ಅವಳ ಕೈ ಹಿಡಿದು ದರದರನೆ ಎಳೆದುಕೊಂಡು ಹೋಗಿ ಗೇಟ್ ಹಾಕಿಬಿಟ್ಟ.ಅವಳಿಗೆ ಎಲ್ಲಾ ಶೂನ್ಯವೆನಿಸತೊಡಗಿತ್ತು. ಅವಳು ಭಾರವಾದ ಹೆಜ್ಜೆಯಿಡುತ್ತಾ ತನ್ನ ಹಾಸ್ಟೇಲ್ ಕಡೆಗೆ ನಡೆದಳು. ಸ್ವಲ್ಪ ದೂರ ಹೋದ ಮೇಲೆ ರಾಹುಲ್ ಕಾರು ತನ್ನ ಪಕ್ಕ ಬಂದು ನಿಂತಿದ್ದನ್ನು ಕಂಡು ಅವಳಿಗೆ ಖುಷಿಯಾಯಿತು. ಆದರೆ ರಾಹುಲ್ ಅವಳ ಕೈಗೆ ಸ್ವಲ್ಪ ದುಡ್ಡನಿಟ್ಟು ಗರ್ಭವನ್ನು ತೆಗೆಸಿಬಿಡು ಎಂದು ಹೇಳಿದಾಗ ನಿಂತ ನೆಲ ಬಿರಿಯಬಾರದೇ ಎನಿಸಿತು.” ರಾಹುಲ್ ನಾನು ನಿನಗೆ ಮೊದಲೇ ಹೇಳಿದ್ದೆ ನನ್ನ ತಾಯಿಯ ಬಗ್ಗೆ, ನನ್ನ ತಾಯಿ ವೇಶ್ಯೆಯಯಾಗಿರಬಹುದು. ಆದರೆ ನಾನು ಹಾಗಲ್ಲ. ನಿನಗೊಬ್ಬನಿಗೇ ಮನಸು ದೇಹ ಎರಡನ್ನೂ ಕೊಟ್ಟಿದ್ದೇನೆ. ಕೊನೆಯವರೆಗೂ ನಿನ್ನ ಹೆಂಡತಿಯಾಗಿ ಬಾಳಲು ಇಷ್ಟಪಡುತ್ತೇನೆ. ನಾನು ಈ ಮಗುವನ್ನು ಕೊಲ್ಲಲಾರೆ. ಪ್ಲೀಸ್ ನನ್ನ ಮದುವೆಯಾಗು “ಎಂದಳು. ರಾಹುಲ್ ಅಲ್ಲಿ ನಿಲ್ಲದೇ ” ನಾಳೆ ಫಾಲ್ಸ್ ಹತ್ತಿರ ಹೋಗೋಣ  ಗೌಡರ ಮನೆ ಹತ್ತಿರ ಬಾ”ಎಂದಷ್ಟೇ ಹೇಳಿ ತನ್ನ ಕಾರ್ ಏರಿ ಹೊರಟು ಹೋದ. ಮರುದಿನ ಗೌಡರ ಮನೆ ಹತ್ತಿರ ಬಂದಾಗ ಗೌಡರು ಅವನು ಅದಾಗಲೇ ಫಾಲ್ಸ್ ಹತ್ತಿರ ಹೋದೆನೆಂದು ಹೇಳಲು ತಿಳಿಸಿದ್ದಾನೆಂದರು. ಅಂಜಲಿಗೆ ಒಬ್ಬಳೇ ಹೋಗುವುದು ಕಷ್ಟವೆನಿಸಿದರೂ ಭಯವೆನಿಸಿದರೂ ಹೊರಟೇ ಬಿಟ್ಟಳು. ಈಗೀಗ ಒಬ್ಬಳೇ ನಡೆಯುವುದು ಕಷ್ಟವಾಗಿತ್ತು. ಅವಳು ಫಾಲ್ಸ್ ತಲುಪಿದಾಗ ರಾಹುಲ್ ಅವನ ತಾಯಿಯ ಅಣ್ಣನ ಮಗಳು ಕಾಂತಿಯೊಂದಿಗೆ ಕುಳಿತಿದ್ದ.ಅಂಜಲಿಗೆ ಅವಳ್ಯಾರೆಂದು ಗೊತ್ತಾಗಲಿಲ್ಲ. ಅಂಜಲಿ ಬಂದದ್ದನ್ನು ಗಮನಿಸಿದ ರಾಹುಲ್ ಕಾಂತಿಯೊಂದಿಗೆ ಎದ್ದು ನಿಂತ “ನೋಡು ಅಂಜಲಿ..ಆದದ್ದು ಆಗಿ ಹೋಯ್ತು..ನಿನ್ನ ಗರ್ಭಕ್ಕೆ ನಾನೇ ಕಾರಣ ಅಂತ ನನ್ನಿಂದ ನಂಬೋಕಾಗ್ತಿಲ್ಲ. ಆದರೂ ಹಣಸಹಾಯ ಮಾಡ್ತೀನಿ..ತೆಗೆಸಿ ಬೇರೆಯವನನ್ನು ಮದುವೆಯಾಗು..” ಎಂದ ಭಾವನೆಗಳೇ ಇಲ್ಲದಂತೆ.ಅಂಜಲಿ ಕುಸಿದು ಕುಳಿತಳು. ಅವನು ಮುಂದುವರೆದು “ಇವಳು ಕಾಂತಿ.. ನನ್ನ ತಾಯಿಯ ಅಣ್ಣನ ಮಗಳು..ಇವಳೊಂದಿಗೆ ನನ್ನ ಮದುವೆ ಫಿಕ್ಸ್ ಆಗಿದೆ..ನಾನಿವಳನ್ನು ಮುಂದಿನ ವಾರ ಮದುವೆಯಾಗುತ್ತಿದ್ದೇನೆ..” ಎಂದ. ಅಂಜಲಿ “ಪ್ಲೀಸ್ ರಾಹುಲ್ ನನಗೆ ಮೋಸ ಮಾಡಬೇಡ.ನಿನ್ನನ್ನಲ್ಲದೇ ನಾನ್ಯಾರನ್ನೂ ಮದುವೆಯಾಗಲಾರೆ.” ಎಂದಳು. ಅವನು ಒಪ್ಪದಿದ್ದಾಗ ಪೋಲೀಸ್ ಕಂಪ್ಲೆಂಟ್ ಕೊಡುವುದಾಗಿ ಹೆದರಿಸಿದಾಗ ಕೋಪಗೊಂಡ ರಾಹುಲ್ “ನಮ್ಮಪ್ಪ ಇಟ್ಟುಕೊಂಡವಳ ಮಗಳು ನೀನು..ನಿನಗೇ ಇಷ್ಟಿರಬೇಕಾದರೆ ನನಗೆಷ್ಟಿರಬೇಡ ” ಎಂದು ಅವಳ ಕೈ ಹಿಡಿದು ಎಳೆದುಕೊಂಡು ಜಲಪಾತದ ತುದಿಯತ್ತ ನಡೆದ..”ರಾಹುಲ್ ಬೇಡ ನನ್ನ ತಳ್ಳಬೇಡ “ಎಂದು ಕೈ ಯನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಳು.ರಾಹುಲ್ ಸಿಕ್ಕರೆ ಸಾಕು ಎಂದು ಕಾಯುತ್ತಿದ್ದ ಕಾಂತಿ ಅವಳ ಇನ್ನೊಂದು ಕೈ ಹಿಡಿದಳು. ಇಬ್ಬರೂ ಸೇರಿ ಅಂಜಲಿಯನ್ನು ಜಲಪಾತದಿಂದ ಪ್ರಪಾತಕ್ಕೆ ನೂಕಿದರು.. ಯಾರೂ ಇಲ್ಲದೇ ಅನಾಥ ಹೆಣವಾದಳು ಅಂಜಲಿ. ಗೌಡರಿಗೆ ಅನುಮಾನ ಬಾರದಿರಲೆಂದು ಇನ್ನೊಂದು ದಾರಿಯಾದ ಬಳ್ಳರಾಯನ ದುರ್ಗದ ಮೂಲಕ ಹೋಗಿ ತಮ್ಮೂರು ಸೇರಿದರು. ಚೀರಿ ಎದ್ದು ಕುಳಿತಳು ಪ್ರಿಯಾಂಕ..ಪ್ರಿಯಾಂಕ ಬೆವರಿನಿಂದ ಒದ್ದೆಯಾಗಿದ್ದಳು.. ಟೆಂಟ್’ನಲ್ಲಿದ್ದ  ಎಲ್ಲರೂ ಎದ್ದು  ಅವಳಿಗೆ ಉಪಚರಿಸಿದ್ದರು. ಅವಳಿಗೆ ಎಲ್ಲಾ ನೆನಪಾಗಿತ್ತು. ಸತ್ತ ಅಂಜಲಿಯ ಆತ್ಮ ಗರ್ಬಿಣಿಯಾಗಿದ್ದ ಸರೋಜಳ ಗರ್ಭ ಸೇರಿ ಪ್ರಿಯಾಂಕಾಳಾಗಿ ಪುನರ್ಜನ್ಮ ಪಡೆದಿತ್ತು.ಪ್ರಿಯಾಂಕಾ ತಾನು ಸೇಡು ತೀರಿಸಿಕೊಳ್ಳದೇ ಬಿಡಲಾರೆ ಎಂದು ಪಣ ತೊಟ್ಟಳು..

 ರಾಹುಲ್ ಕೆಲಸಕ್ಕೆಂದು ಬೆಂಗಳೂರು ಸೇರಿದ್ದ.

ಕಾಂತಿ ಮತ್ತು ರಾಹುಲ್ ಮಗಳು ಸಿಂಚನಾಳಾಗಿದ್ದಳು. ಮಾಡಿದ ಪಾಪಕ್ಕೆ ಕಾಂತಿ ಮೊದಲ ಹೆರಿಗೆಯಲ್ಲಿ ವಿಪರೀತ ರಕ್ತಸ್ರಾವವಾಗಿ ಕೊನೆಯುಸಿಳೆದಿದ್ದಳು. ಅನಸೂಯಾ ಸುದರ್ಶನ್ ಮಡಿದು ವರ್ಷಗಳೇ ಕಳೆದಿದ್ದವು. ರಾಹುಲ್ ಗೆ ಪಾಪಪ್ರಜ್ಞೆ ಕಾಡಿತ್ತು. ಹೀಗಾಗಿ ಮತ್ತೆ ಮದುವೆಯಾಗಲಿಲ್ಲ.

 ವಾಪಸ್ ಬೆಂಗಳೂರಿಗೆ ಬಂದ ಅವಳು ಸಿಂಚನಾ ಸ್ನೇಹವನ್ನು ಇನ್ನಷ್ಟು ಹೆಚ್ಚಿಸಿಕೊಂಡಳು. ಅವರ ಮನೆಯ ಒಡನಾಟ ಜಾಸ್ತಿಯಾಯಿತು. ಸಿಂಚನಾ ಪ್ರಿಯಾಂಕಾ ಮನೆಗೆ ಬಂದಾಗ  ಅವಳು ಲೇಟಾಯಿತೆಂದು ಕರೆ ಮಾಡಿದಾಗ ರಾಹುಲ್ ಕರೆದೊಯ್ಯಲು ಬರುತ್ತಿದ್ದ. ಹೀಗೇ ಎರಡೂ ಕುಟುಂಬಗಳು ಆತ್ಮೀಯವಾಗಿದ್ದವು. ರಾಹುಲ್ ನನ್ನು ಕಂಡಾಗ ಬೆಂಕಿಯನ್ನು ಮೈಮೇಲೆ ಸುರಿದಂತಾಗುತ್ತಿತ್ತು. ಸೇಡು ತೀರಿಸಿಕೊಳ್ಳಲು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಳು.

ಮುಂದುವರಿಯುವುದು..

ಚಿತ್ರಕೃಪೆ: tylershields .com

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!