ಸಿದ್ಧಾಂತ್ ಅಂದು ಎಂದಿನಂತೆ ಆಫೀಸ್ ಕೆಲಸಗಳನ್ನು ಮುಗಿಸಿ ಮನೆಗೆ ಹೊರಟಿದ್ದ. ಬಸ್’ನಲ್ಲಿ ಕುಳಿತು ಕಿವಿಗೊಂದು ಇಯರ್’ಫೋನ್ ಸಿಕ್ಕಿಸಿಕೊಂಡು ಹಾಡು ಕೇಳತೊಡಗಿದ. ಒಂದೆರಡು ನಿಲ್ದಾಣಗಳು ಕಳೆದ ನಂತರ ಇಳಿಬಿಟ್ಟ ಕೂದಲಿನ ಸುಂದರಿಯೊಬ್ಬಳು ಬಸ್ಸನ್ನೇರಿದಳು. ಸಿದ್ಧಾಂತ್’ನ ಪಕ್ಕದಲ್ಲೇ ಬಂದು ಕುಳಿತಳು. ಸಿದ್ಧಾಂತ್ ಹಾಡು ಕೇಳುವುದರಲ್ಲಿ ತಲ್ಲೀನನಾಗಿದ್ದ. ಹಾಗೆಯೇ ಅವನದ್ದು ಕಿಟಕಿ ಪಕ್ಕದ ಸೀಟ್ ಆಗಿದ್ದರಿಂದ ಅವನು ಕಿಟಕಿಯಾಚೆಗಿನ ದೃಶ್ಯಾವಳಿಗಳತ್ತ ಹೆಚ್ವು ಆಸಕ್ತನಾಗಿದ್ದ. ಅದೂ ಅಲ್ಲದೆ ಪಕ್ಕದ ಸೀಟ್’ನಲ್ಲಿ ಸುಂದರವಾದ ಹುಡುಗಿ ಬಂದು ಕುಳಿತಾಗ, ಅವರಿಬ್ಬರು ಒಬ್ಬರನ್ನೊಬ್ಬರು ನೋಡಿ, ಮೊದಲ ನೋಟದ ಪ್ರೇಮ ಅಂಕುರಿಸಿ, ಮನೆಯವರನ್ನೆಲ್ಲ ವಿರೋಧಿಸಿ ಮದುವೆಯಾಗುವ ಅತಿಮನೋಹರ ದೃಶ್ಯಗಳೆಲ್ಲ ಸಿನಿಮಾದಲ್ಲಿ ನೋಡುವುದಕ್ಕೆ ಚಂದ. ಬದುಕಿನಲ್ಲಿ ಆಗಬಹುದೇ? ಖಂಡಿತ ಇಲ್ಲ.
ಹೀಗೆ ಒಂದಷ್ಟು ಹೊತ್ತು ಕಳೆಯಿತು. ಹಾಡಿನ ಇಂಪಿನೊಂದಿಗೆ, ಕಿಟಕಿಯೆಡೆಯಿಂದ ನುಸುಳಿ ಸಿದ್ಧಾಂತ್’ನನ್ನು ಆವರಿಸಿದ ತಂಗಾಳಿ ಅವನನ್ನು ನಿದಿರಾದೇವಿಯ ವಶಕ್ಕೆ ಒಪ್ಪಿಸಿದವು. ಆ ಹೊತ್ತಿಗೆ ಬಸ್ ಚಾಲಕ ಇದ್ದಕ್ಕಿದ್ದಂತೆ ಒತ್ತಿದ ವೇಗನಿಯಂತ್ರಕದ ಪ್ರಭಾವದಿಂದ ಸಿದ್ಧಾಂತ್’ನ ನಿದಿರೆಗೂ ಒಂದು ಆಕಸ್ಮಿಕ ನಿಯಂತ್ರಣ ಬಿತ್ತು. ಆ ಆಕಸ್ಮಿಕ ನಿಯಂತ್ರಣದ ಪರಿಣಾಮದಿಂದ ಎಚ್ಚರಗೊಂಡ ಸಿದ್ಧಾಂತ್ ಪಕ್ಕದಲ್ಲಿರುವ ಇಳಿಬಿಟ್ಟ ಕೂದಲ ಸುಂದರಿಯತ್ತ ಕಣ್ಣು ಹಾಯಿಸಿದ.
ಅವನ ಇಯರ್’ಫೋನ್ “ಬಾ ನೋಡು ಗೆಳತಿ, ನವಿಲುಗರಿಯು ಮರಿ ಹಾಕಿದೆ…” ಎಂದು ಕಿವಿಯಲ್ಲಿ ಉಲಿಯುತ್ತಿತ್ತು.
ನಿಜ. ಆ ಕಣ್ಣುಗಳು ಸಿದ್ಧಾಂತ್’ಗೆ ಚಿರಪರಿಚಿತ. ಆದರೂ ಅಪರಿಚಿತ. ಒಂದಿಷ್ಟು ಸಂತಸ, ಒಂದಿಷ್ಟು ನೋವುಗಳು ಒಟ್ಟಿಗೆ ಸಿದ್ಧಾಂತ್’ನ ಮನಸಲ್ಲಿ ಲಗ್ಗೆಯಿಟ್ಟವು. ನೋವು ಜಾಸ್ತಿಯೋ, ಸಂತಸ ಜಾಸ್ತಿಯೋ ಅಳೆಯಲಾರದಾದ. ಆದರೇನು, ಅವನ ಮನಸನ್ನು ಅವನ ಕಣ್ಣಿನ ಭಾವಗಳಿಂದಲೇ ಅರಿಯಬಲ್ಲ ಜೋಡಿ ಕಂಗಳು ಎದುರಿಗಿದ್ದವು. ಹಾಗಾಗಿ ಹೆಚ್ಚೇನೂ ಹೇಳುವ ಅವಶ್ಯಕತೆ ಸಿದ್ಧಾಂತ್’ಗೆ ಎದುರಾಗಲಿಲ್ಲ. ಅವಳೇ ಮಾತುಕತೆಗೆ ನಾಂದಿ ಹಾಡಿದಳು.
“ಹೇಗಿದ್ದೀಯಾ?”
“ಚೆನ್ನಾಗಿದ್ದೇನೆ. ನೀನು?”
“ಚೆನ್ನಾಗಿದ್ದೇನೆ”
“ಈಗ ಎಲ್ಲಿರುವುದು?” ಎಂದ ಸಿದ್ಧಾಂತ್.
“ಮತ್ತೆಲ್ಲಿ? ನಮ್ಮ ಮನೆಯಲ್ಲಿ. ಮೊದಲೆಲ್ಲಿ ಇದ್ದೆನೋ ಅಲ್ಲೇ” ಎಂದುತ್ತರಿಸಿದಳು.
ಸಿದ್ದಾಂತ್ ಬೇರೆ ಉತ್ತರ ನೀರಿಕ್ಷಿಸಿದ್ದ. ಆದರೆ ಅವನ ಸಂದೇಹವನ್ನು ಬಗೆಹರಿಸಿಕೊಳ್ಳುವ ಧೈರ್ಯ ಅವನಿಗಿರಲಿಲ್ಲ. “ಓಹ್ ಸರಿ” ಎಂದು ಅಲ್ಲಿಗೆ ನಿಲ್ಲಿಸಿದ.
ಅವಳಿಗೆ ಅವನ ಈ ಗೊಂದಲ ಸಹ ಅರ್ಥವಾಗಿತ್ತು. ಅದನ್ನು ಪರಿಹರಿಸುವ ಆಸೆಯೂ ಇತ್ತು. ಆದರೆ ಅವಳು ಇಳಿಯುವ ನಿಲ್ದಾಣ ಹತ್ತಿರವಾಗಿತ್ತು. ಹಾಗಾಗಿ “ಒಂದು ಕಾಫಿ ಕುಡಿದು ಹೋಗುವ ಬರ್ತಿಯಾ?” ಎಂದು ಸಿದ್ಧಾಂತ್’ನನ್ನು ಆಹ್ವಾನಿಸಿದಳು. “ಸರಿ” ಎನ್ನುವ ನಿರೀಕ್ಷಿತ ಉತ್ತರ ಅವನದ್ದಾಗಿತ್ತು.
ಇಬ್ಬರೂ ಸನಿಹದ ಒಂದು ಹೋಟಲ್’ಗೆ ತೆರಳಿದರು. ಮತ್ತೆ ಮಾತುಕತೆ ಪುನರಾರಂಭವಾಯಿತು.
“ಮತ್ತೆ? ಕೆಲಸ ಎಲ್ಲಾ ಹೇಗೆ ನಡೀತಿದೆ?” ಎಂದು ಮಾತುಕತೆಗೆ ನಾಂದಿ ಹಾಡಿದಳು ಆದ್ಯತಾ.
“ನಡಿತಾ ಇದೆ ಮಾಮೂಲಿ…” ಎಂದು ಸುಮ್ಮನಾದ.
“ಸಿದ್ಧಾಂತ್, ನಂಗೊತ್ತು ನೀನೇಕೆ ಮಾತಾಡ್ತಿಲ್ಲ ಅಂತ. ಎಷ್ಟೋ ಕಷ್ಟಪಟ್ಟು ನನ್ನ ಮರೆತು ಒಂದಿಷ್ಟು ನೆಮ್ಮದಿಯಲ್ಲಿ ಬದುಕಿದ್ದೆ. ಈಗ ಮತ್ತೆ ನಾನು ಸಿಕ್ಕಿದ್ದರಿಂದ ನಿನಗೆ ನನ್ನಿಂದಾದ ಎಲ್ಲ ಗಾಯಗಳು ಮತ್ತೆ ಹಸಿಯಾಗಿ ನೋವು ಮಾಡ್ತಾ ಇದ್ದಾವೆ ಅಲ್ವಾ. ನನ್ನ ಕ್ಷಮಿಸು. ಆದರೆ ಒಂದು ವಿಷಯ; ನಾನು ಮಾಡಿದ ಗಾಯಗಳನ್ನ ನಾನೇ ವಾಸಿ ಮಾಡ್ತೇನೆ. ಅದಕ್ಕೆ ನೀನು ಅವಕಾಶ ಕೊಡ್ತಿಯಾ?”
“ಅಂದರೆ?” ಎಂದು ಕುತೂಹಲಿಯಾಗಿ ಪ್ರಶ್ನಿಸಿದ ಸಿದ್ಧಾಂತ್.
“ಅಂದು, ನಮ್ಮ ಮನೆಯವರಿಗೆ ನೋವು ಕೊಟ್ಟು ಓಡಿ ಹೋಗಿ ಮದುವೆ ಆಗುವುದು ಬೇಡ ಎಂಬ ದೃಢ ನಿರ್ಧಾರ ಮಾಡಿದ್ದ ನಾವು ಪರಸ್ಪರ ದೂರ ಆಗಿದ್ದೆವು. ಮದುವೆಯ ಹೆಣ್ಣಾಗಿ ಸಿಂಗಾರಗೊಂಡು ನಿಂತೆ. ಮದರಂಗಿ ಹಾಕಿಕೊಂಡೆ, ಅರಿಶಿಣ ಹಚ್ಚಿಕೊಂಡೆ, ನಿನ್ನ ಒಡನಾಟದ ಮರೆವು ಕಷ್ಟವಾಗಿದ್ದರೂ ಅಪ್ಪ ಅಮ್ಮ ಎನ್ನುವ ದೈವಗಳಿಗೋಸ್ಕರ ಈ ತ್ಯಾಗ ಎಂದೆಣಿಸಿದಾಗ ಅದೇನೂ ದೊಡ್ಡದಾಗಿ ಕಾಣಲಿಲ್ಲ. ಅದೂ ಅಲ್ಲದೇ ಅದೇ ಅಭಿಪ್ರಾಯ ಹೊಂದಿದ್ದ ನಿನ್ನ ವ್ಯಕ್ತಿತ್ವವನ್ನು ಪ್ರೀತಿಸಿದ್ದಕ್ಕೆ ನನಗೆ ನನ್ನ ಮೇಲೆಯೇ ಹೆಮ್ಮೆಯಾಗತೊಡಗಿತ್ತು. ನನಗಿಂತ ಸಾವಿರ ಪಟ್ಟು ಒಳ್ಳೆಯ ಹುಡುಗಿ ಸಿಗಲಿ ಎಂದು ಮನಸಾರೆ ಹಾರೈಸಿ ಹಸೆಮಣೆ ಏರಲು ಸಿದ್ಧಳಾಗಿದ್ದೆ. ಆದರೆ…” ಎಂದು ಮೌನಿಯಾದಳು.
“ಏನಾಯ್ತು?” ಎಂದು ಮೆಲುವಾಗಿ ಪ್ರಶ್ನಿಸಿದ ಸಿದ್ಧಾಂತ್.
“ನಾ ಮದುವೆಯಾಗಬೇಕಿದ್ದ ಹುಡುಗನ ಮಾವನಂತೆ ಆತ, ಒಬ್ಬ ಜ್ಯೋತಿಷಿ. ಇರುವುದು ಅಮೇರಿಕಾದಲ್ಲಿ. ಮದುವೆಗೆ ಎರಡು ದಿನ ಇರುವಾಗ ಬಂದಿದ್ದ. ಅವರ ಮನೆಯವರಿಗೆ ಆ ಮನುಷ್ಯನ ಮೇಲೆ ಅತೀವ ನಂಬಿಕೆ. ಇದ್ದಕ್ಕಿದ್ದಂತೆ ನನ್ನ ಜಾತಕ ತಮ್ಮ ಅಳಿಯನ ಜಾತಕಕ್ಕೆ ಸರಿ ಹೊಂದುತ್ತಿಲ್ಲ ಎಂದು ತಗಾದೆ ತೆಗೆದ. ಮೊದಲೇ ಎಲ್ಲವೂ ಸರಿಯಿದೆ ಎಂದು ನಿಮ್ಮ ಜ್ಯೋತಿಷಿಗಳೇ ಹೇಳಿದ್ದರಲ್ಲ ಎಂದು ನಾವು ಹುಡುಗನ ಮನೆಯವರಿಗೆ ಕೇಳಿದೆವು. ಅದೇ ಪ್ರಶ್ನೆಯನ್ನು ಅವರು ಆ ಜ್ಯೋತಿಷಿ ಮಹಾಶಯನಿಗೆ ಕೇಳಿದಾಗ, ನಾನು ಕೆಲಸದ ಒತ್ತಡದಲ್ಲಿದ್ದರಿಂದ ನನ್ನ ಶಿಷ್ಯನಿಗೆ ನೋಡಲು ಹೇಳಿದ್ದೆ. ನಾನು ನೋಡಿರಲಿಲ್ಲ ಅಂದ ಆ ಪುಣ್ಯಾತ್ಮ. ಅವರ ಮನೆಯವರಿಗೆ ಆ ಪುಣ್ಯಾತ್ಮನ ಮಾತು ವೇದವಾಕ್ಯ. ಎಷ್ಟೇ ಪ್ರಯತ್ನಿಸಿದರೂ ಒಪ್ಪಲಿಲ್ಲ.” ಎಂದು ದೀರ್ಘವಾದ ನಿಟ್ಟುಸಿರು ಬಿಟ್ಟಳು.
ನಂತರ ಮತ್ತೆ ಮುಂದುವರಿಸುತ್ತಾ “ಇದರಿಂದ ನಮ್ಮ ಅಪ್ಪ ಅಮ್ಮನಿಗೆ ತುಂಬಾ ಬೇಸರವಾಯ್ತು. ಮನೆಯಲ್ಲಿ ಒಂದಷ್ಟು ದಿನ ಬರಿ ಮೌನ. ಕೊನೆಗೆ ಇದರಿಂದ ಹೊರ ಬರಲು ನಾನು ಹೈಯರ್ ಸ್ಟಡೀಸ್ ಮಾಡುವ ನಿರ್ಧಾರ ಮಾಡಿದೆ. ಈಗ ಎರಡು ತಿಂಗಳ ಹಿಂದೆ ನನ್ನ ಎಮ್.ಟೆಕ್ ಮುಗಿದಿದೆ. ಆ ಮದುವೆ ಎನ್ನುವ ಪ್ರಹಸನದ ಕಹಿ ನೆನಪುಗಳು ಮಾಸಿವೆ. ಮುಂದೇನು? ಎಂಬ ಸಣ್ಣ ಪ್ರಶ್ನೆ ಕಾಡತೊಡಗಿತ್ತು. ನಮ್ಮನೆಯವರು ತಮ್ಮ ನಿರ್ಧಾರ ತಪ್ಪಾದ ಆ ದಿನದಿಂದ ಯಾವುದನ್ನೂ ನನ್ನ ಮೇಲೆ ಬಲವಂತವಾಗಿ ಹೇರಲಾರದಾಗಿದ್ದಾರೆ. ನನ್ನ ಬದಕನ್ನು ರೂಪಿಸಿಕೊಳ್ಳುವ ಅವಕಾಶ ಮತ್ತೆ ನಂಗೆ ಸಿಕ್ಕಿರುವಾಗ ನಿನ್ನ ಭೇಟಿಯಾಗಿದೆ. ನನ್ನ ಮನಸಲ್ಲಿರುವುದನ್ನೆಲ್ಲ ಹೇಳಿದ್ದೇನೆ. ಈ ಎಲ್ಲ ಗೊಂದಲಗಳ ನಂತರ ಮತ್ತೆ ಈ ಮನಸು ಮತ್ತೆ ನಿನ್ನಲ್ಲಿ ನೆಲೆಗೊಳ್ಳಲು ಹಾತೊರೆದಿದೆ. ನಿಂಗೆ ಒಪ್ಪಿಗೆ ಇದ್ದರೆ, ನಿನ್ನ ಬಾಳ ಸಂಗಾತಿಯಾಗಿ ಬರುವ ಆಸೆ ಇದೆ. ಒಪ್ತಿಯಾ?” ಎಂದಳು.
ಸಿದ್ದಾಂತ್ ಮುಗುಳ್ನಕ್ಕಿದ್ದ. ಅವನ ಕಣ್ರೆಪ್ಪೆಗಳು ಒಂದು ಘಳಿಗೆ ಒಂದನ್ನೊಂದು ಅಪ್ಪಿ ಮತ್ತೆ ತೆರೆದುಕೊಂಡವು. ಆ ಒಂದು ಮುಗುಳ್ನಗು ಹಾಗೂ ಕಣ್ರೆಪ್ಪೆಗಳ ಅಪ್ಪುಗೆ ಅವಳ ಎಲ್ಲ ಪ್ರಶ್ನೆಗಳನ್ನ ಉತ್ತರಿಸಿತ್ತು. ಅದೆಷ್ಟೋ ಕಾಲದ ನಂತರ ಅವರಿಬ್ಬರ ಕೈಗಳು ಅಪ್ಪಿಕೊಂಡವು. ಅದ್ಯತಾಳ ಕಂಗಳಲ್ಲಿ ಮತ್ತೆ ಸಿದ್ಧಾಂತ್ ಕಳೆದುಹೋಗಿದ್ದ. ಅವಳ ಕಾಲ್ಗೆಜ್ಜೆ ದನಿಯಾಲಿಸುವಾಸೆಯಿಂದ ಸಿದ್ಧಾಂತ್’ನ ಕಿವಿಗಳು ನಿಮಿರಿದವು. ಆದ್ಯತಾಳ ಝುಮುಕಿ ಸಿದ್ಧಾಂತ್’ನ ನೋಟಕ್ಕೆ ನಾಚಿಕೊಂಡವು.
“ಮನಸಿನ ಹಸಿ ಬಣ್ಣಗಳಲ್ಲಿ, ನೀನೆಳೆವ ರೇಖೆಗಳಲ್ಲಿ ನಾ ಮೂಡಬೇಕು ಆದರೆ…” ಎಂದು ಉಲಿಯುತ್ತಿತ್ತು ಹೋಟಲ್’ನ ಕ್ಯಾಶ್ ಕೌಂಟರ್’ನ ಮೂಲೆಯಲ್ಲಿದ್ದ ಒಂದು ಎಫ್.ಎಮ್. ರೇಡಿಯೋ.