ಕಥೆ

Mr.ತ್ಯಾಗಿ

ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥ್ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ಧಗೆ ಹರಿದು ಸಂಜೆಯ ತಂಪನ್ನು ಸವಿಯಲು ಪ್ರೇಮಿಗಳು, ನವ ದಂಪತಿಗಳು, ಮಕ್ಕಳನ್ನೊಳಗೊಂಡ ದಂಪತಿಗಳು, ವಯೋ ವೃದ್ದರು, ಕೆಲ ಒಬ್ಬಂಟಿಗರು ಹೀಗೆ ಹಲವು ಬಗೆಯ ನೂರಾರು ಜನ ಈ ಸಮುದ್ರ ತೀರಕ್ಕೆ ಬರುವುದುಂಟು. ಎಲ್ಲರಲ್ಲೂ ಒಂದೊಂದು ಭಾವ. ವಿಶಾಲ, ನೀಲ, ಶಾಂತ  ಸಮುದ್ರಕ್ಕೆ ಅಷ್ಟೆಲ್ಲಾ ನೋವು-ನಲಿವುಗಳನ್ನು ಶಾಂತಿಯಿಂದ ಆಲಿಸಿಕೊಳ್ಳುವ ಶಕ್ತಿಯನ್ನು ಕರುಣಿಸಿದವರಾರೆಂದು ಯೋಚಿಸುತ್ತಾ ಮರಳುದಂಡೆಯ ಮೇಲಿದ್ದ  ಕುರ್ಚಿಯನ್ನು ಒರಗಿ ಕೂತಿದ್ದರು ತ್ಯಾಗಿ. ವಯಸ್ಸು ಅರವತ್ತು. ಮನದಲ್ಲಿ ಅಡಗಿರುವ ಚಿಂತೆಯನ್ನು ಮರೆಮಾಚಲು ಯತ್ನಿಸುವ ಹುಸಿ ಮುಗುಳ್ನಗೆ. ಮನೆಯಿಂದ  ಕೊಂಚ ದೂರಕ್ಕಿರುವ ಈ ಜಾಗಕ್ಕೆ ಇತ್ತೀಚೆಗೆ ಸಂಜೆಯ ವೇಳೆಗೆ ಬಂದು ಕೆಲ ಘಂಟೆಗಳ ಕಾಲ ಕೂರುವುದುಂಟು.

‘Mr.ತ್ಯಾಗಿ… ಹೇಗಿದ್ದೀರ…’  ಗಾಢ ಆಲೋಚನೆಯಲ್ಲಿ ಮುಳುಗಿದ್ದ ತ್ಯಾಗಿ ತನ್ನ ಪಕ್ಕದಿಂದ ಬಂದ ಸದ್ದಿಗೆ ಜಾಗೃತರಾದರು. ತನ್ನ ಹೆಸರಿನ ಉಚ್ಚಾರಣೆಯಲ್ಲೇ ಇದು ಉಮ್ಮರ್ ಕಾಕಾ ಎಂದು ಊಹಿಸಿದರು. ತನ್ನ ಹೆಸರಿಗೆ Mr. ಎಂಬ ಗೌರವಸೂಚಕ ಪದವನ್ನು ಸೇರಿಸಿ ಕರೆವವರು ಅವರೊಬ್ಬರೇ.  ‘ಚೇಟಾ, ನನ್ನ ತ್ಯಾಗಿ ಅಂತ ಕರೀರಿ ಸಾಕು.. ಈ ಮಿಸ್ಟರ್ ಗಿಸ್ಟರ್ ಅಂತೆಲ್ಲಾ ಕರೆದ್ರೆ ಮುಜುಗರವಾಗುತ್ತೆ’ ಅಂತ ಅದೆಷ್ಟೇ ಬಾರಿ ಹೇಳಿದರೂ ಕೇಳುವುದಿಲ್ಲ. ‘ಅಲ್ರಿ, ನೀವು ಫಾರಿನ್ ರಿಟರ್ನ್, ಅಷ್ಟೂ ಮರ್ಯಾದೆ ಕೊಡ್ಲಿಲ್ಲ ಅಂದ್ರೆ ಹೇಗೆ’ ಏಂದು ನಗುತ್ತಾ ಬೇರೊಂದು ವಿಷಯಕ್ಕೆ ಮಾತಿನ ಲಹರಿಯನ್ನು ಎಳೆಯುತ್ತಿದ್ದರು. ಸಾದಾ ಮನುಷ್ಯ. ಆತ್ಮಾಭಿಮಾನ ತುಸು ಹೆಚ್ಚು. ಮಕ್ಕಳೇನೋ ಅಂದರು ಎಂಬ ಕಾರಣಕ್ಕೆ ಎಲ್ಲರನ್ನು ಬಿಟ್ಟು ಆಶ್ರಮದಲ್ಲಿ ನೆಲೆಸಿದ್ದಾರೆ. ಆದರೆ ಅದರ ಕಿಂಚಿತ್ತೂ ಚಿಂತೆಯೂ ಅವರಲ್ಲಿ ಕಾಣದು. ಇಲ್ಲಿನ ಸಮುದ್ರ ತೀರಕ್ಕೆ ಬರುವ, ತೀರಾ ನೊಂದಿರುವ ಕೆಲವರನ್ನು ಗುರುತಿಸಿ. ಅವರೊಟ್ಟಿಗೆ ಸಂಭಾಷಿಸಿ, ಅವರ ನೋವುಗಳನ್ನು ಅರಿತು ತಮ್ಮ ಚೈತನ್ಯಪೂರಿತ ಮಾತುಗಳಿಂದ ಅವರ ಮನವನ್ನು ಕೊಂಚ ಹಗುರು ಮಾಡುವ ಗೀಳು. ಸದಾ ಹಸನ್ಮುಖಿ. ತ್ಯಾಗಿಗಿಂತ  ಕೆಲ ವರುಷ ದೊಡ್ಡವರು.

‘ಹೇಗಿದ್ದೀರ Mr.ತ್ಯಾಗಿ..’ ಎಂದು ಕುಶಲೋಪಾರಿಯಾಗಿ ಶುರುವಾದ ಸಂಭಾಷಣೆ ಕೊನೆಗೆ ‘ಯಾಕೆ ಇಂದು ಇಷ್ಟೊಂದು ಚಿಂತೆ ನಿಮ್ಮ ಮುಖದಲ್ಲಿ ಎದ್ದು ಕಾಣ್ತಾ ಇದೆ..’ ಎನ್ನುವುದರೊಂದಿಗೆ ವಿರಾಮವನ್ನು ಪಡೆಯಿತು. ಒಂದು ವಿಷಯನ್ನು ಹಿಡಿದರೆ ಅದನ್ನು ಹುಡುಕಿ, ಕೆದಕಿ ಹೊರ ತೆಗೆಯುವವರೆಗೂ ಅವರಿಗೆ ಸಮಾಧಾನವಿರದು. ಅದೆಷ್ಟೇ ನಿರಾಕರಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ತ್ಯಾಗಿ ಕೊನೆಗೆ ‘ನೋಡಿ ಚೇಟಾ.. ನೀವು ದೊಡ್ಡವರು, ಜೀವನವನ್ನು ಅರಿತವರು ಅಂತ ನಿಮ್ಮೊಟ್ಟಿಗೆ ಹೇಳಿಕೊಳ್ತಾ ಇದ್ದೀನಿ..ನೀವು ಬೇರೆಲ್ಲೂ ಇದರ ಬಗ್ಗೆ ಚರ್ಚಿಸ ಬಾರದು..’ ಎಂಬೊಂದು ಷರತ್ತನ್ನು ಹಾಕಿದರು.  ಕೊಂಚ ಮುಗುಳ್ನಗೆಯೊಟ್ಟಿಗೆ ಕಣ್ಣ ರೆಪ್ಪೆಯನ್ನು ನಿಧಾನವಾಗಿ ಮುಚ್ಚಿ ತಲೆಯನ್ನು ಒಮ್ಮೆ ಮೇಲೆ ಕೆಳಕ್ಕೂ ಅಲುಗಾಡಿಸಿದಾಗಲೇ ಅವರ ಭರವಸೆ ಮೂಡಿತು.

ಹೆಣ್ಣಿನ ಹೆಣೆಯ ಮೇಲಿನ ಚೆಂದದ ಬೊಟ್ಟಂತೆ ಮಾರ್ಪಟ್ಟಿದ್ದ ಸೂರ್ಯನನ್ನು ದಿಟ್ಟಿಸುತ್ತಾ ತ್ಯಾಗಿ ಮಾತನಾಡಲು ಶುರು ಮಾಡಿದರು.

‘ಅದು 1973.. ಹಿಂದಿಯ ಜಂಜೀರ್ ಚಿತ್ರ ಎಲ್ಲೆಲ್ಲೂ ರಾರಾಜಿಸುತ್ತಿದ್ದ ಕಾಲ. ಆಂಗ್ರೀ ಯಂಗ್ ಮ್ಯಾನ್ ನಂತೆ ಮೀಸೆ ಚಿಗುರುವ ಹುಡುಗರೆಲ್ಲ ತಾನೇ ಅಮಿತಾಬ್ ಬಚ್ಚನ್ ಎಂದು ಅರಚುತ್ತಿದ್ದ ಸಮಯ. ನನಗಾಗ  18 ವರ್ಷ. ಜೀವನವೆಲ್ಲಾ ಬಡತನದಲ್ಲೇ ಬೇಸತ್ತಿದ್ದ ಅಪ್ಪ ಅಮ್ಮ ತಮ್ಮ ತಂಗಿಯರನ್ನು ಕಂಡು ಮರುಗಿದ್ದ ನನಗೆ ಅಂದು ಆ ಚಿತ್ರವನ್ನು ನೋಡಿ ಎಲ್ಲಿಲ್ಲದ ಕಿಚ್ಚು ಹುಟ್ಟಿಕೊಂಡಿತು. ಈ ಬಡತನವೆಂಬ ದಾರಿದ್ರ್ಯವನ್ನು ಚಿತ್ರದ ಅಮಿತಾಬ್’ನಂತೆ ಒದ್ದು ಓಡಿಸಬೇಕು, ಏನಾದರೂ ಒಂದು ಮಾಡಬೇಕು ಎಂಬ ಯೋಚನೆ ಮೂಡಿತು.  ಕೆಲದಿನಗಳು ಅದೇ ಯೋಚನೆಯಲ್ಲಿ ಮುಳುಗಿದ್ದ ನನಗೆ ಒಂದು ದಿನ ತಿರುವನಂತಪುರದಿಂದ ಹಡಗೊಂಡು ಸೌದಿ ದೇಶಕ್ಕೆ ಹೋಗುತ್ತದೆಂದೂ, ಅಲ್ಲಿ ಇತ್ತೀಚೆಗೆ ವಿಪರೀತ ನೌಕರಿಗಳಿವೆಯೆಂದೂ, ಇಲ್ಲಿನ ಮೂರು ಪಟ್ಟು ಹೆಚ್ಚು ಸಂಬಳ ಸಿಗುತ್ತದೆಯೆಂದು ತಿಳಿಯಲ್ಪಟ್ಟಿತು. ನಾನು ಕೂಡಲೇ ತಿರುವಂತಪುರಕ್ಕೆ ಹೋಗುವ ಬಸ್ಸನ್ನು ಹಿಡಿದು, ಅಲ್ಲಿ ವಿಚಾರಿಸಿ, ನನ್ನ ಹೆಸರನ್ನೂ ಕೊಟ್ಟು ಬಂದೆ. ವಿದೇಶಕ್ಕೆ ಹೋಗುವುದು ಇಷ್ಟು ಸುಲಭವೆಂದು ನಾನು ಅರಿತಿರಲಿಲ್ಲ. ಆದರೆ ಮನೆಯವರನ್ನು ಒಪ್ಪಿಸುವುದು ಸಹ ಅಷ್ಟು ಸುಲಭವಾಗಲಿಲ್ಲ. ಪ್ರತಿ ತಿಂಗಳು ಹಣ ಕಳಿಸುವುದಾಗಿ ಹೇಳಿದರೂ ಯಾರೊಬ್ಬರೂ ಕೇಳಲಿಲ್ಲ. ಅಪ್ಪನಿಗೆ ನಾನು ಕೂಡ  ಆತನಂತೆ ಒಬ್ಬ ಮೀನುಗಾರನಾಗಬೇಕೆಂಬ  ಬಯಕೆ. ಇಬ್ಬರೂ ನಮ್ಮಿಬ್ಬರ ಪಟ್ಟನ್ನು ಬಿಡಲಿಲ್ಲ.  ಕೊನೆಗೆ ಒಮ್ಮೆ ಹೋಗಿ ಅದೆಷ್ಟು ಸಂಪಾದನೆಯಾಗುತ್ತೂ ಅಷ್ಟು ಸಂಪಾದಿಸಿ ವಾಪಾಸ್ ಬರುವುದೆಂದು ಮಾತಾಯಿತು. ಒಮ್ಮೆ  ಹೋದರೆ ಕನಿಷ್ಠ ಎರಡು ವರ್ಷವಾದರೂ ಬರಲಾಗದು. ಆದರೂ ಹೇಗೋ ಎಲ್ಲರ ಮನವೊಲಿಸಿದೆ.  ಅಪ್ಪ ಅಮ್ಮ ,ಇಬ್ಬರು ತಂಗಿಯರು ಹಾಗು ಒಬ್ಬ ಪುಟ್ಟ ತಮ್ಮನನ್ನು ಬಿಟ್ಟು ಹೊರಟೆ. ಕುಟುಂಬದ ಕಷ್ಟಗಳನ್ನೆಲ್ಲಾ ದೂರವಾಗಿಸುವ ಕನಸನ್ನು ಹೊತ್ತು…..

ವಾರಗಟ್ಟಲೆ ಸಮುದ್ರದಲ್ಲಿ ಸಾಗಿ ಕೊನೆಗೆ ಅಲ್ಲಿನ ನೆಲವನ್ನು ಮುಟ್ಟುವಾಗ ದೇಹ ಶಕ್ತಿಗುಂದಿತ್ತು. ಸುಧಾರಿಸಿಕೊಳ್ಳಲು ವಾರಗಳೇ ಬೇಕಾಗಿತ್ತು. ದಿನದ ಮೂರೊತ್ತು ಅಮ್ಮ ಮಾಡಿದ್ದ ಅಡಿಗೆಯನ್ನೇ ತಿಂದಿದ್ದ ನಾನು ಅಲ್ಲಿ ಸ್ವತಃ ತಯಾರಿಸಿ ಕೊಳ್ಳುವುದು ಆಗದೆ ಹೋಯಿತು. ಸಮುದ್ರದಲ್ಲಿ ದಣಿದಿದ್ದ ದೇಹ, ಹೊಟ್ಟೆಗೆ ತಕ್ಕನಾಗಿ ಸಿಗದ ಹಿಟ್ಟು, ಹೊತ್ತಿ ಹುರಿಯುವ ಉರಿ ಬಿಸಿಲು. ಹೋದ ಎರಡನೇ ದಿನವೇ ಕೆಲಸಕ್ಕೆ ಹಾಜರಾಗಬೇಕಿತ್ತು. ಬೆಳಗಿನ 6 ಘಂಟೆಗೆ ಕೆಲಸದ ಜಾಗಕ್ಕೆ ಕೊಂಡೂಯ್ಯುವ ಬಸ್ಸು ರೆಡಿ ಇರುತ್ತಿತ್ತು. ಸ್ನಾನ ಹಾಗು ಶೌಚಕ್ಕೆ ಬೆಳಗಿನ ನಾಲ್ಕು ಘಂಟೆಗೇ ಎದ್ದು ಸರದಿಯಲ್ಲಿ ಕಾಯಬೇಕು. ಅಲ್ಲಿದ್ದ ಇತರರು ತಮ್ಮ ತಮ್ಮ ಊಟವನ್ನು ತಿಂದು ಮದ್ಯಾಹ್ನಕ್ಕೆ ಕಟ್ಟಿಕೊಂಡು ಹೊರಡುತ್ತಿದ್ದರು. ನಾನು ಅರೆ ಬರೆ ಬೆಂದ ಗಂಜಿಯ ಅನ್ನವನ್ನೇ ಒಂದು ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ಮಿಕ್ಕಿದನ್ನು ಕುಡಿದು ಓಡುತ್ತಿದ್ದೆ. ಸಮುದ್ರ ತೀರದಲ್ಲಿ ನಿರ್ಮಾಣ ಹಂತದಲ್ಲಿ ನಿಂತಿರುತ್ತಿದ್ದ ಹಡಗು, ರಿಗ್(ಸಮುದ್ರದಿಂದ ಕಚ್ಚಾ ಇಂದನವನ್ನು ಸಮುದ್ರದಾಳದಿಂದ ತೆಗೆಯುವ ಯಂತ್ರ) ಗಳೇ ಕೆಲಸದ ಸ್ಥಳ. ಹೊರಗಿನ ಉಷ್ಣಾಶ 50 ಡಿಗ್ರಿ ಯಷ್ಟಿದ್ದರೆ ಅವುಗಳ ಒಳಗೆ ಇನ್ನೂ ಹೆಚ್ಚು. ಉಟ್ಟ ಉಡುಪುಗಳಿಂದ ಬೆವರಿನ ನದಿಯೇ ಹರಿಯುತ್ತಿತ್ತು. ಏಳರಿಂದ ಒಂದರವರೆಗೂ ಒಂದೇ ಸಮನೆ ದುಡಿದು ಕೊನೆಗೆ ಒಂದು ಘಂಟೆ ಊಟಕ್ಕೆ ವಿಶ್ರಾಂತಿ. ಎಲ್ಲರೂ ಗುಂಪುಗೊಂಡು ಅರಟುತ್ತಾ ತಿನ್ನುತ್ತಿದ್ದರು. ಯಾರನ್ನೂ ಅಷ್ಟಾಗಿ ಬಲ್ಲದ ನಾನು ಒಂದೆಡೆ ಕೂತು ಪ್ಲಾಸ್ಟಿಕ್ ಚೀಲದ ಗಂಟನ್ನು ಬಿಚ್ಚಿದರೆ ಬಗ್ ಎಂದು ಹಳಸಿದ ದುರ್ನಾತ ಮುಖಕ್ಕೆ ಬಡಿಯುತ್ತಿತ್ತು. ಅತಿಯಾದ ಉಷ್ಣಾಂಶಕ್ಕೆ ಬಹು ಬೇಗನೆ ಊಟ ಹಾಳಾಗುತ್ತಿತ್ತು. ಕೆಲವೊಮ್ಮೆ ಹಳಸಿದ ಊಟವನ್ನು ತಿನ್ನಲಾರದೆ ಎಸೆದರೆ ಕೆಲವೊಮ್ಮೆ ಹಸಿವಿನ ಬೇಗೆಯನ್ನು ತಾಳಲಾರದೆ ಅದನ್ನೇ ತಿನ್ನಬೇಕಿತ್ತು. ತಿಂದು ಇನ್ನೇನು ನಿದ್ರೆಯ ಜೋಂಪು ಹತ್ತಿತು ಅನ್ನುವಾಗಲೇ ಮೇಲ್ವಿಚಾರಕನ ಸದ್ದು. ಎದ್ದು ಮತ್ತೆ ಕೆಲಸದ ಜಾಗಕ್ಕೆ ಓಡುತ್ತಿದ್ದೆ. ರಾತ್ರಿ 8 ಘಂಟೆಗೆ ಬಂದು, ಸ್ನಾನಕ್ಕಾಗಿ ಕಾದು, ಸ್ನಾನ ಮುಗಿಸಿ ಬರುವಷ್ಟರಲ್ಲೇ ಘಂಟೆ ಹತ್ತಾಗಿರುತ್ತಿತ್ತು. ಮತ್ತೆ ಗಂಜಿ ಮಾಡಿ ಕುಡಿದು ಕಣ್ಣು ಮುಚ್ಚಿದರೆ ಮತ್ತೆ ಬಿಡುವುದೇ ಬೇಡವೆನಿಸುತ್ತಿತ್ತು. ಬೆಳಗ್ಗೆ ಮೂರಕ್ಕೆ ಎದ್ದು ನಾಷ್ಟ ಹಾಗು ಮದ್ಯಾಹ್ನಕ್ಕೆ ಗಂಜಿಯನ್ನು ಮಾಡಿಟ್ಟು ಸ್ನಾನ ಹಾಗು ಶೌಚಕ್ಕೆ ಸರದಿಯಲ್ಲಿ ನಿಲ್ಲಬೇಕಿತ್ತು. ಅಲ್ಲೂ ತೂಕಡಿಕೆ.

ಹೋದ ಮೇಲೆ ಮನೆಯವರಿಗೆ ಒಂದು ಕಾಗದವನ್ನೂ ಬರೆಯಲಿಲ್ಲ. ಪ್ರತಿ ದಿನ, ಪ್ರತಿ ಹೊತ್ತು ಮನೆಯ ನೆನಪೇ. ಹಳಸಿದ ಊಟವನ್ನು ಮಾಡುವಾಗ ಕೆಲವೊಮ್ಮೆ ಅಳು ಉಕ್ಕಿ ಬರುತ್ತಿತ್ತು. ಒಂದೆಡೆ ಒಬ್ಬನೇ ಹೋಗಿ ಸಾಧ್ಯವಾದಷ್ಟು ಅತ್ತು ಬರುತ್ತಿದ್ದೆ. ನನಗಿಂತಲೂ ಜಾಸ್ತಿ ಅಪ್ಪ ಗೋಳು ಪಡುತ್ತಾನೆ.  ಜೀವನವೆಲ್ಲಾ ಮೀನು ಹಿಡಿಯಲು ಸಮುದ್ರಕ್ಕೆ ಇಳಿದು ಅದೆಷ್ಟು ಬಾಡಿ ಬೆಂಡಾಗಿದೆ ಆತನ ದೇಹ ಅನಿಸುತ್ತಿತ್ತು. ಅದೆಷ್ಟೇ ಕಷ್ಟ ಬಿದ್ದರೂ ಸರಿಯೇ, ನಾನು ದುಡಿಯುತ್ತೀನಿ, ಹಣ ಸಂಪಾದಿಸುತ್ತೀನಿ ಎನ್ನುವ ಹಟ ಒಳಗೊಳಗೇ ಮೂಡುತ್ತಿತ್ತು. ಕೆಲದಿನಗಳು ಹೀಗೆ ಕಳೆದ ಮೇಲೆ ಒಂದು ದಿನ ನಮ್ಮ ಊರಿನ ಹತ್ತಿರದವರೇ ಒಬ್ಬರು ಪರಿಚಯವಾಗಿ ಅವರು ತಮ್ಮ ಜೊತೆಗೆ ಊಟ ಮಾಡಿಕೊಳ್ಳಲು ಸೇರುವಂತೆ ಹೇಳಿದರು. ಒಂದು ಊಟದ ಡಬ್ಬಿಯನ್ನು ಕೊಟ್ಟು ಮದ್ಯಾಹ್ನ ಊಟವನ್ನು ನೆರಳಲ್ಲಿ ಇಡಬೇಕೆಂಬುದನ್ನು ಹೇಳಿ ಕೊಟ್ಟರು.

ಮೊದಲ ತಿಂಗಳ ಬಂದ ಸಂಬಳ ಅಷ್ಟೆಲ್ಲಾ ಬೇಗೆಯನ್ನು ನಿವಾರಿಸಿತು. ಅಲ್ಲಿಗೆ ಹೋದ ಮೊದಲ ಬಾರಿಗೆ ಸಂತೋಷದ ಚಿಲುಮೆ ಮನದಲ್ಲಿ ಮೂಡಿತು. ಬಂದ ಹಣದಲ್ಲಿ ಒಂದು ಕಾಗದವನ್ನು ಕೊಂಡು ಕ್ಷೇಮ ಸಮಾಚಾರವನ್ನು ಬರೆದು ಮನೆಗೆ ಕಳಿಸಿ ಉಳಿದ ಅಷ್ಟೂ ಹಣವನ್ನು ಮನಿ ಆರ್ಡರ್ ಮಾಡಿದೆ. ತುಸು ಸಮಾಧಾನವಾಯಿತು. ಅದೆಷ್ಟೋ ದಿನಗಳ ನಂತರ ಮನೆಯವರಿಂದ ಒಂದು ಕಾಗದ ಬಂದಿತು. ತಂಗಿಯ ಬರಹ. ಓದಲು ಕಷ್ಟವಾದರೂ ಮುದ್ದು ಮುದ್ದಾಗಿ ಕಂಡ ಅವುಗಳು ಮನೆಯವರೆಲ್ಲರ ಆರೈಕೆಯ ಮಾತುಗಳು. ಅಮ್ಮನ ಕಳಕಳಿಯ ಪ್ರೆಶ್ನೆಗಳು, ಅಪ್ಪನ ಧೈರ್ಯ ತುಂಬುವ ಮಾತುಗಳು. ತಮ್ಮ ತಂಗಿಯರಿಗೆ ಏನೇನು ಬೇಕೆಂಬ ಟಿಪ್ಪಣಿ. ಕೊನೆಗೆ ‘ಬೇಗ ಬಾ ನಾವೆಲ್ಲಾ ಕಾಯುತ್ತಿದ್ದೀವಿ’ ಎಂಬ ವಾಕ್ಯದೊಂದಿಗೆ ಪತ್ರವು ಮುಕ್ತಾಯಗೊಂಡಿತ್ತು. ದಿನವೂ ಕೆಲಸದ ನಂತರ ಮಲಗುವ ಮುಂಚೆ ಒಮ್ಮೆ ಪತ್ರವನ್ನು ಓದುತ್ತಿದ್ದೆ. ಗುರಿ ಸ್ಪಷ್ಟವಾಗುತ್ತಿತ್ತು. ಕ್ರಮೇಣ ಅಲ್ಲಿನ ಸ್ಥಿತಿಗೆ ಹೊಂದಿಕೊಳ್ಳಲಾರಂಭಿಸಿದೆ. ಸುಡುಬಿಸಿಲಿಗೆ ದೇಹವೆಲ್ಲ ಬೆಂದ ಕೆಂಡದಂತಾಗಿತ್ತು.

ತಿಂಗಳ ಕೊನೆಯ ಸಂಬಳ ಹಾಗು ಮನೆಯವರಿಗೊಂದು ಪತ್ರ. ಇವಿಷ್ಟೇ ನನಗೆ ಸಂತೋಷ ಕೊಡುತ್ತಿದ್ದ ವಿಚಾರಗಳು.

ಒಂದುದಿನಮನೆಯವರಿಂದಪತ್ರಬಂದಿತು. ಅದುತಂಗಿಯಬರಹವಾಗಿರಲಿಲ್ಲ. ಊರಿನಪಟೇಲರು. ಅಪ್ಪನಿಗೆವಿಪರೀತಆರೋಗ್ಯಹದಗೆಟ್ಟಿದೆಯೆಂದೂಮನೆಯವರೆಲ್ಲಚಿಂತೆಯಲ್ಲಿದ್ದಾರೆಂದುಬರೆಯಲಾಗಿತ್ತು. ಕಡೆಗೆಅಪ್ಪನಮಾತುಗಳಂತೆನಾನುಹೆದರಬಾರದೆಂದು, ಕೆಲದಿನಗಳಲ್ಲಿಅವರುಗುಣವಾಗುತ್ತಾರೆಂದುಅವರುಹೇಳಿದ್ದರು. ಅಪ್ಪ  ಆಗ್ಗಾಗೆಜ್ವರದಿಂದಬಳಲುತ್ತಿದ್ದರು. ಇದೂಅದೇಬಗೆಯಜ್ವರವೆಂದೂ, ಈಬಾರಿ  ಕೊಂಚಜಾಸ್ತಿಇರಬಹುದೆಂದುಭಾವಿಸಿದರೂಯಾಕೋಮನವೆಲ್ಲಮರುಗಿತ್ತು. ಹೀಗೆಒಂದುತಿಂಗಳುಕಳೆದಿರಬಹುದು. ಮತ್ತೊಂದುಪತ್ರ. ಪಟೇಲರಬರವಣಿಗೆಯೇ. ಅಪ್ಪನಆರೋಗ್ಯತೀರಾಹದಗೆಟ್ಟುಚಿಕಿತ್ಸೆಫಲಕಾರಿಯಾಗದೆನೆನ್ನೆಕೊನೆಯುಸಿರೆಳೆದರೆಂದುಬರೆಯಲಾಗಿತ್ತು. ಈಪತ್ರತಲುಪಿನಾನುಅಲ್ಲಿಂದಹೊರಟರೂಇಲ್ಲಿಗೆಬರುವಷ್ಟರಲ್ಲೇಎಲ್ಲಕಾರ್ಯಗಳುಮುಗಿದಿರುತ್ತಾವೆಂದೂಹೇಳಿದ್ದರು. ಪತ್ರವನ್ನುಓದಿದತಕ್ಷಣತಲೆಸುತ್ತುಬಂದಿತು. ದೊಪ್ಪನೆಅಲ್ಲೇಬಿದ್ದುಬಿಟ್ಟೆ. ಕಣ್ಣುಬಿಡುವಾಗಎಲ್ಲರೂನನ್ನಸುತ್ತುವರಿದಿದ್ದರು. ನನ್ನನ್ನುರೂಮಿಗೆತಂದುನೀರುಕುಡಿಸಿಹಾಸಿಗೆಯಮೇಲೆಮಲಗಿಸಿದರು. ಅವರೆಲ್ಲಹೋದಮೇಲೆಮತ್ತೊಮ್ಮೆಪತ್ರವನ್ನುಹೊರತೆಗೆದುಓದಿದೆ. ಕಣ್ಣೀರಕಟ್ಟೆಒಡೆದಂತೆಅಳತೊಡಗಿದೆ.  ಬೇಗವಾಪಾಸ್ಬಂದುಬಿಡುಎಂದುಹೇಳುತ್ತಿದ್ದಅಪ್ಪಕೊನೆಯಪತ್ರದಲ್ಲಿಮಾತ್ರಬರಬೇಡೆಂದುಹೇಳಿದ್ದ. ತಾನುಸಾಯುವುದುಖಚಿತವೆಂದುಅವನಿಗೆಅನ್ನಿಸಿರಬೇಕು. ನಾನು  ಅಲ್ಲಿಂದವಾಪಾಸ್ಬಂದರೆಮತ್ತೆಹಿಂದಿರುಗಿಹೋಗುವುದಿಲ್ಲ, ಆಮೇಲೆಮನೆಯಕಷ್ಟಇನ್ನೂವಿಪರೀತವಾದೀತುಎಂದುಅರಿತ್ತಿದಅನ್ನಿಸುತ್ತೆ. ಅದೆಷ್ಟೇಕಷ್ಟಬಂದರೂಮಕ್ಕಳಿಗೆಏನನ್ನೂಕಡಿಮೆಮಾಡುತ್ತಿರಲಿಲ್ಲಅಪ್ಪಎಂದುನೆನಪಾಗಿಕಾಗದವನ್ನುಎದೆಗೆಅವುಚಿಕೊಂಡುಬಿಕ್ಕಿಬಿಕ್ಕಿಅತ್ತೆ. ಅಪ್ಪಇಲ್ಲವೆಂಬಕಲ್ಪನೆಯೇಅದೆಷ್ಟುಘೋರವಾಗಿತ್ತು. ಇದೆಲ್ಲಒಂದುಕನಸಾಗಬಾರದೆಎಂದುಯೋಚಿಸುತ್ತಿದ್ದೆ. ಕೊನೆಗೆಗಟ್ಟಿಮನಸ್ಸುಮಾಡಿಅಲ್ಲೇಇರುವುದಾಗಿನಿರ್ಧರಿಸಿಎರಡುವರ್ಷಕೊಮ್ಮೆಸಿಗುವರಜೆಯನ್ನೂತೆಗೆಯದೆಕೆಲಸಮುಂದುವರೆಸಿದೆ. ಮನೆಯಪತ್ರಗಳು  ಹೆಚ್ಚಾಗತೊಡಗಿದವು. ಮನೆಗೆಬರುವಂತೆಪ್ರೇರೇಪಿಸುತ್ತಿದ್ದವು. ಆದರೂಮನಸ್ಸನ್ನುಕಲ್ಲಿನಂತೆಗಟ್ಟಿಯಾಗಿಸಿಕಾಲತಳ್ಳಿದೆ. ಕೊನೆಗೂ 4 ವರ್ಷಗಳುಕಳೆದವು. ತಮ್ಮತಂಗಿಯರಿಗೆಬಟ್ಟೆಹಾಗುಅಮ್ಮನಿಗೆಒಂದುಚಿನ್ನದಬಳೆಯನ್ನುಕೊಂಡುವಾಪಸ್ಸಾದೆ.

ನಾಲ್ಕು ವರ್ಷಗಳ ನಂತರ ಕಂಡ ನನ್ನನ್ನು ಅಮ್ಮ ಆಲಿಂಗಿಸಿ ಅಳತೊಡಗಿದಳು. ಹಾರವಾಕಿದ್ದ ಅಪ್ಪನ ಫೋಟೋವನ್ನು ನಾನು ನೋಡಲಾಗಲಿಲ್ಲ. ತಮ್ಮ ಅದಾಗಲೇ ಶಾಲೆಗೆ ಸೇರಿದ್ದ.  ತಂಗಿಯರಿಬ್ಬರೂ ಹೈಸ್ಕೂಲು ಸೇರಿದ್ದರು. ಇವರೆಲ್ಲರ ವಿದ್ಯಾಭ್ಯಾಸದ ಸಲುವಾಗಿ ಖರ್ಚು ಇನ್ನೂ ವಿಪರೀತವಾಗಿತ್ತು. ಅಮ್ಮ ಕಷ್ಟ ಪಟ್ಟು ಹೊಲಿಗೆಯನ್ನು ಕಲಿಯುತ್ತಿದ್ದಳು. ಹೆಚ್ಚು ದಿನ ವ್ಯಯಿಸದೆ ಪುನಃ ಸೌದಿಯ ಹಡಗನ್ನು ಹಿಡಿದೆ. ಈ ಸಂಬಳ ಮನೆಯ ಖರ್ಚಿಗೆ ಸಾಲದು ಎಂದರಿತ ನಾನು ವಿಚಾರಿಸಿ ಒಂದು ಅರೆಕಾಲಿಕ ಕೆಲಸವನ್ನು ಹುಡುಕಿದೆ. ರಾತ್ರಿ ಹತ್ತರಿಂದ ಎರಡು ತಾಸು. ವಾಸದ ಸ್ಥಳದ ಪಕ್ಕದಲ್ಲೇ ಕೆಲಸ. ಮೀನಿನ ಬಲೆಯನ್ನು ಹೆಣೆಯುವುದು. ಬೆಳಗಿನ ಕೆಳಸದಷ್ಟು ಕಷ್ಟವಲ್ಲದಾದರೂ ತೂಕಡಿಗೆ ಬರುತ್ತಿತ್ತು. ಕೆಲವೇ ಘಂಟೆಗಳ ವಿಶ್ರಾಂತಿ ದೇಹಕ್ಕೆ ಸಾಲದೇ ಹೋಯಿತು. ಹೇಗೋ ಆ  ಕೆಲಸಕ್ಕೂ ಒಗ್ಗಿಕೊಂಡೆ’ ಎಂದು ಹೇಳಿ ಉಮ್ಮರ್ ಕಾಕಾರ ಮುಖವನೊಮ್ಮೆ ನೋಡಿದರು. ತದೇಕಚಿತ್ತದಿಂದ ಅವರು ತ್ಯಾಗಿಯನ್ನೇ ನೋಡುತ್ತಿದ್ದರು. ಕಣ್ಣೀರು ಮೂಡಿ, ಹರಿದು ಒಣಗಿದ್ದನ್ನು ಗಮನಿಸಿದರು.  ಈ ಲಹರಿಯನ್ನು ಮುರಿದರೆ ಸರಿಕಾಣದು ಎಂದರಿತ ತ್ಯಾಗಿ ಪುನಹ ಮುಂದುವರೆಸಿದರು.

‘ಹೀಗೆ ವರ್ಷಗಳು ಉರುಳಿದವು. ಕೆಲವೋಮ್ಮೆ ಎರಡು ವರ್ಷಕ್ಕೇ ಬಂದರೆ ಕೆಲವೊಮ್ಮೆ ನಾಲ್ಕು ವರ್ಷಕ್ಕೆ. ಅಂತು ಹೇಗೋ ನಲ್ವತ್ತಮೂರು ವರ್ಷಗಳನ್ನು ತಳ್ಳಿದೆ. ತಂಗಿಯರಿಬ್ಬರರನ್ನು ಮದುವೆ ಮಾಡಿದೆ. ತಮ್ಮನನ್ನು ಓದಿಸಿ ಒಂದೊಳ್ಳೆ ಕೆಲಸವನ್ನೂ ಕೊಡಿಸಿ ಮಾದುವೆ ಮಾಡಿದೆ. ಈ ನಲ್ವತ್ತು ಮೂರು ವರ್ಷದಲ್ಲಿ ಹೆಚ್ಚೆಂದರೆ ಹದಿನೈದು ಬಾರಿ ನಾನು ಬಂದಿರಬಹುದು. ಕೆಲವೊಮ್ಮೆ ಒಂದು ತಿಂಗಳಿದ್ದರೆ ಕೆಲವೊಮ್ಮೆ ಕೇವಲ ಹದಿನೈದು ದಿನಗಳು. ಜೀವನದ ಹೆಚ್ಚು ಪಾಲು ನಾನು ಕೆಲಸದಲ್ಲೇ ಕಳೆದೆ. ಜಂಜೀರ್ ನ ಆಂಗ್ರಿ ಅಮಿತಾಬ್ ಕೂಡ ಇಂದು ಮುದುಕನಾಗಿದ್ದಾನೆ ಎಂದು ನಗುತ್ತಾ, ಕಾಲ ಅದೆಷ್ಟು ಬೇಗ ಓಡಿತು ನೋಡಿ’ ಎಂದು ಸುಮ್ಮನಾದರು.

ತ್ಯಾಗಿಯವರ ತ್ಯಾಗಮಯಿ ಕತೆಯನ್ನು ಕೇಳಿದ ಉಮ್ಮರ್  ಕಾಕಾ ಅಕ್ಷರ ಸಹ ಮೌನವಾಗಿದ್ದರು. ಮಾತಿನ ಮದ್ಯೆ ‘ಹುಂ’ ಎನ್ನುವ ಅಂಗೀಕಾರದ  ಸದ್ದೂ ಇಲ್ಲದೆ. ತಮ್ಮಲ್ಲಿ ಸೌದಿಯಿಂದ ವಾಪಾಸ್ ಬರುವವರ ಬಗ್ಗೆ ಇದ್ದ ಕಲ್ಪನೆಯ ಲೋಕ ಕುಸಿದು ಬಿದ್ದಿತ್ತು. ತ್ಯಾಗಿಯೊಟ್ಟಿಗೆ ಅಲ್ಲಿಗೆ ತೆರಳುವ ಇತರರ ಬಗ್ಗೆಯೂ ಅನುಕಂಪ ಮೂಡಿತು. ಕೊನೆಗೆ ಮೌನ ಮುರಿದು, ಗಂಟಲನ್ನು ಸರಿಪಡಿಸಿಕೊಳ್ಳುತ್ತಾ  ‘Mr.ತ್ಯಾಗಿ..  ನಾನೀಗ ಏನನ್ನೂ ಹೇಳಲು ಅಶಕ್ಯ.. ಅಲ್ಲಾವು ನಿಮ್ಮಗೆ ಇನ್ನು ಮೇಲಾದರೂ ನೆಮ್ಮದಿಯನ್ನು ಕರುಣಿಸಲಿ’ ಎಂದರು.

ಉಮ್ಮರ್ ಕಾಕರ ಮಾತನ್ನು ಕೇಳಿ ತ್ಯಾಗಿ ಹಾಸ್ಯಾಸ್ಪದವಾಗಿ ನಗಲಾರಂಭಿಸಿದರು. ನಂತರ ಸುಮ್ಮನಾಗಿ ‘ಚೇಟಾ ಕ್ಷಮಿಸಿ.ದೇವರಿಗೆ ನನ್ನ ಮೇಲೆ ಅನುಕಂಪ ಎಂಬುವುದು ಇಲ್ಲವೇ ಇಲ್ಲ ಬಿಡಿ’ ಎಂದು ಹೇಳಿ ಮಾತನ್ನು ನಿಲ್ಲಿಸಿದರು. ಕೆಲವೊತ್ತು ಹಾಗೆ ಸುಮ್ಮನಿದ್ದ ತ್ಯಾಗಿ ಮುಂದುವರೆಸಿ,’ಅಮ್ಮನಿಗೆ ನನ್ನ ಮದುವೆಯನ್ನು ಒಬ್ಬ ಒಳ್ಳೆಯ ಹುಡುಗಿಯನ್ನು ತಂದು ಮಾಡಬೇಕು ಎಂದಿತ್ತು. ಆದರೆ ನಾನು ತಮ್ಮನ ಮದುವೆಯ ಮೊದಲು ಆಗುವುದಿಲ್ಲವೆಂದು ಪಟ್ಟು ಹಿಡಿದ್ದಿದ್ದೆ. ಅವನ ಮದುವೆಯಾದಾಗ ನನಗೆ 58. ಯಾವ ಅಪ್ಪ ತಾನೇ ಆ ವಯಸ್ಸಿನಲ್ಲಿ ನನಗೆ ಹೆಣ್ಣು ಕೊಟ್ಟಾನು. ಅದೇ ಕೊರಗಿನಲ್ಲಿ ಅಮ್ಮ ಹೋದ ವರುಷ ಕೊನೆಯುಸಿರೆಳೆದಳು.ಈ ಒಂದು ಕೊರಗು ಸದಾ ಅವಳ ಮನದಲ್ಲಿತ್ತು.. ಅವಳ ಕೊನೆಯ ಕನಸನ್ನು ನಾನು ತೀರಿಸಲಾದೆ..’ ಎಂದರು.

‘ಜೀವನದಲ್ಲಿ ನಿಮ್ಮ ತಮ್ಮ ತಂಗಿಯರನ್ನೇ ಮಕ್ಕಳಿಗಿಂತ ಹೆಚ್ಚಾಗಿ ನೋಡಿ ಕೊಂಡಿರಿ ಬಿಡಿ..ನೀವು ಮಾಹಾತ್ಮರು’ ಎಂದ ಉಮ್ಮರ್ ಕಾಕನನ್ನು ನೋಡಿ,

‘ಅಷ್ಟೆಲ್ಲಾ ದೊಡ್ಡ ಮಾತು ಬೇಡಿ ಚೇಟಾ.. ನಾನು ಇಷ್ಟೆಲ್ಲಾ ಕಷ್ಟ ಪಟ್ಟರೂ ಮೊದಲೇ ಹೇಳಿದಂತೆ ದೇವರಿಗೆ ನನ್ನ ಮೇಲೆ ಅನುಕಂಪ ಅನ್ನುವುದೇ ಮೂಡಲಿಲ್ಲ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಇಂಧನದ ಬೆಲೆ ಕುಸಿದಿರುವುದರಿಂದ ಇತರರೊಟ್ಟಿಗೆ ನನ್ನನ್ನೂ ಕೆಲಸದಿಂದ ತೆಗೆದರು. ಇಷ್ಟೊಂದು ವರ್ಷಗಳ ಕಾಲ ಒಂದೇ ಕಂಪನಿಗಾಗಿ ಕೆಲಸ ಮಾಡಿದವರು ಮತ್ತೊಬ್ಬರಿಲ್ಲ.ಆದರೂ ಮುಲಾಜಿಲ್ಲದ್ದೆ ಹೊರಗಟ್ಟಿದ್ದರು. ಆದದ್ದು ಆಗಲಿ, ಇನ್ನೇನು ತಮ್ಮನ ಮದುವೆಯೂ ಆಯಿತು, ತಂಗಿಯರಿಬ್ಬರೂ ನೆಮ್ಮದಿಯಾಗಿದ್ದಾರೆ ಇನ್ನೂ ಕೆಲಸ ಮಾಡಿ ಏನು ಪ್ರಯೋಜನ ಎಂದು ಧನ್ಯವಾದಗಳನ್ನೇಳಿ ವಾಪಸ್ಸಾದೆ. ಆದರೆ ಬಂದ ಮರುದಿನವೇ ಚೇಟಾ, ಮರುದಿನವೇ ತಮ್ಮನ ಹೆಂಡತಿ ಮನೆಯಲ್ಲಿ ಪಾಲು ಕೇಳಿದಳು. ಆಕೆಯ ಕಡೆಯವರನ್ನೆಲ್ಲ ಕರೆಸಿ ಪಂಚಾಯಿತಿಯನ್ನೇ ಮಾಡಿದಳು. ನನ್ನ ತಮ್ಮನೂ ಒಂದೂ ಮಾತಾಡದೆ ಸುಮ್ಮನಿದ್ದ. ನೀವು ಬಂದು ಮನೆಯ ಖರ್ಚು ಇನ್ನೂ ಹೆಚ್ಚಾಗಿದೆ, ಈ ದುಬಾರಿ ಜಗತ್ತಿನಲ್ಲಿ ಇಬ್ಬರೇ ಇರುವುದು ಕಷ್ಟವಾಗಿರುವಾಗ ನೀವೂ ಬಂದು ವಕ್ಕರಿಸಿಕೊಂಡಿರಿ ಎಂದು ಅರಚತೊಡಗಿದಳು. ಭಾವನೆಗಳೇ ಅಳಿಸಿಹೋಗಿದ್ದ ಮನವು ಅವಳ ಮಾತುಗಳಿಂದ ಹೆಚ್ಚೇನೂ ಮರುಗಲಿಲ್ಲ. ಇನ್ನು ಕೆಲವೇ ವರುಷ ಬದುಕುವ ನನಗ್ಯಾಕೆ ಮನೆ ಹಾಗೂ ಸಂಸಾರ ಎಂದು ಮನೆಯನ್ನೂ ತಮ್ಮನಿಗೆ ಕೊಡಲು ನಿರ್ಧರಿಸಿದ್ದೀನಿ. ಈಗ ಮುಂದೆ ಎಲ್ಲಿ ಹೋಗಲಿ ಎಂದು ಕೂತು ಯೋಚಿಸಿತ್ತಿರುವಾಗ ನೀವು ಬಂದಿರಿ’ ಎಂದು ಸುಮ್ಮನಾದರು.

‘ನಿಮಗೆ ಸಹಾಯ ಮಾಡಲಿ ಅಂತಾನೆ ದೇವರು ನನ್ನ ಇಲ್ಲಿಗೆ ಕಳಿಸಿದ್ದಾನೆ ಅನ್ನಿಸುತ್ತೆ. ಜಾಸ್ತಿ ಚಿಂತೆ ಬೇಡ Mr.ತ್ಯಾಗಿ. ನಿಮ್ಮ ಸಾಮಾನುಗಳನ್ನು ಕಟ್ಟಿ ಹೊರಡಿ. ನಮ್ಮ ಆಶ್ರಮ ಚಿಕ್ಕದಾದರೂ ನೆಮ್ಮದಿಯ ಜಾಗ. ನಿಮ್ಮಂತೆಯೇ ಅಲ್ಲಿ ಬಹಳಷ್ಟು ಜನ ಇದ್ದಾರೆ. ದುಃಖವೆಂಬುದು ಒಂದಿಷ್ಟೂ ಮೂಡದು. ಅಲ್ಲದೆ ಆಶ್ರಮ ನಿಮ್ಮ ಜಿಲ್ಲೆಯಲ್ಲಿಯೇ ಇದೆ. ಮನೆಯನ್ನು ನೋಡಬೇಕು ಎಂದೆನಿಸಿದಾಗಲೆಲ್ಲ ಹೋಗಿ ಬರಬಹುದು’ ಎಂದರು. ತುಸು ಹೊತ್ತು ಸುಮ್ಮನಿದ್ದ ತ್ಯಾಗಿ ‘ಸರಿ ಚೇಟಾ, ಈಗ ನಾನು ಎಲ್ಲಾದರು ಹೊಂದಿಕೊಳ್ಳಬಲ್ಲೆನು. ಅದು ಅಶ್ರಮವಾದರೇನು ಅಥವಾ ಅರಮನೆಯಾದರೇನು’ ಎನ್ನುತ ಎದ್ದು ನಿಂತರು. ‘ಸರಿ ಹಾಗಾದರೆ, ಬನ್ನಿ..ನಿಮ್ಮ ಚಿಂತೆಯನ್ನೆಲ್ಲಾ ನಿವಾರಿಸುವ ಕೇರಳದ ದಿ ಬೆಸ್ಟ್ ಚಹಾ ಕುಡಿಸುತ್ತೇನೆಂದು’ ಹತ್ತಿರದ ಚಹಾ ಅಂಗಡಿಯ ಬಳಿ ಹೊರಟರು. ತ್ಯಾಗಿ ಅವರ ಹಾದಿಯನ್ನು ಅನುಸರಿಸಿದರು.

ಪಶ್ಚಿಮದ ಕೆಂದಾವರೆಯ ಆಗಸದ ಕಡೆಯಿಂದ ಬೀಸುತ್ತಿದ್ದ ಗಾಳಿಗೆ ವಿರುದ್ಧವಾಗಿ ಹಕ್ಕಿಯೊಂದು ಹಾರುತ್ತಿತ್ತು..

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!