ಸಿನಿಮಾ - ಕ್ರೀಡೆ

ಬಾಲಿವುಡ್ ಬಡಾ ಜೋಡಿ : ಸಲಿಂ-ಜಾವೇದ್.

ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆಧಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ  ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ ಮೂಡುತ್ತಿದ್ದವು. ಪ್ರೇಕ್ಷಕರು ತದೇಕ ಚಿತ್ತದಿಂದ ಚಿತ್ರವನ್ನು ನೋಡಿ  ಕೊನೆಗೆ ಚಿತ್ರದಲ್ಲಿರುವ ಸಂದೇಶವನ್ನು ಅರಿಯಬೇಕಿತ್ತು. ಇಂದಿನಂತೆ ಚಿತ್ರದ ನಾಯಕನ  ವೇಷಭೂಷಣದ, ನಟನೆಯ ಅಥವಾ ಕೇಶರಾಶಿಯ ಶೈಲಿಯನ್ನಾಗಲಿ ಹುಚ್ಚೆದ್ದು ಅನುಸರಿಸುವ ಕಾಲವಾಗಿರಲಿಲ್ಲ. ನಾಯಕ ತೀರಾ ಸರಳ ಹಾಗು ಅತಿ ಬಡವ ಕುಟುಂಬದ ವ್ಯಕ್ತಿಯಾಗಿರುತ್ತಿದ್ದರಿಂದ ಆತನದ್ದು ನೋವಿನ ಹಾಗು ಕರುಣಾಜನಕ ಪಾತ್ರಗಳೇ ಹೆಚ್ಚಾಗಿರುತ್ತಿದ್ದವು. ಚಿತ್ರವನ್ನು ನೋಡಿದ ಪ್ರೇಕ್ಷಕ ಇದು ತುಂಬ ಒಳ್ಳೆಯ ಚಿತ್ರವೆಂದು ಹೇಳುತ್ತಿದ್ದ ವಿನ್ಹಾ ನಾನೂ ನಾಯಕನಂತೆ ನ್ಯಾಯಕ್ಕಾಗಿ ಹೋರಾಡುತ್ತೇನೆ, ಅನ್ಯಾಯದ ವಿರುದ್ಧ ದನಿ ಎತ್ತುತ್ತೇನೆ ಎನ್ನುವ ಭಾವಗಳನ್ನು ಅವನಲ್ಲಿ ಮೂಡಿಸುವ ಚಿತ್ರಗಳು ತೀರಾ ವಿರಳವಾಗಿದ್ದವು.

ಅದು 1973 ರ ಮೇ ತಿಂಗಳು. ಚಿತ್ರವೊಂದರ ಭಿತ್ತಿಪತ್ರವೊಂದು ಎಲ್ಲೆಲ್ಲೂ ಹೆಸರು ಮಾಡಲು ಶುರು ಮಾಡುತ್ತದೆ. ಅದರಲ್ಲಿ ಆರು ಆಡಿ ಎತ್ತರದ ವ್ಯಕ್ತಿಯೊಬ್ಬ ಬಿಳಿಯ ಕೋಟು, ಕರಿ ಬೂಟು ಹಾಗು ಅದೇ ಬಿಳಿ ಬಣ್ಣದ ಬೆಲ್ ಬಾಟಮ್ ಪ್ಯಾಂಟ್ ಧರಿಸಿ ದರ್ಪದಿಂದ ನಿಂತಿದ್ದಾನೆ. ಆತನ ಮುಖದಲ್ಲಿ ರಾಜಗಾಂಭೀರ್ಯ ಹಾಗು ಕಣ್ಣುಗಳಲ್ಲಿ ಹೊತ್ತಿ ಹುರಿಯುವ ಕಿಚ್ಚು. ಆ ನಿಲುವಿಗೆ ತಕ್ಕಂತೆ ಎಂಬಂತೆ ಚಿತ್ರದ ಹೆಸರು. ಜಂಜೀರ್.  ಚಿತ್ರ ದಿನೇ ದಿನೇ ಎಲ್ಲೆಡೆ ಹೆಸರು ಮಾಡುತ್ತದೆ. ನಾಯಕನ ಪ್ರವೇಶವನ್ನೇ ಕಾಯುತ್ತಿದ್ದ ಪ್ರೇಕ್ಷಕ ಕೇಕೆ ಸಿಳ್ಳೆಗಳಿಂದ ಅವನನ್ನು ಸ್ವಾಗತಿಸತೊಡಗಿದ. ಅನ್ಯಾಯದ ವಿರುದ್ಧ ಹೋರಡುವ ಆರು ಅಡಿಯ ಆ ವ್ಯಕ್ತಿ ಅಷ್ಟರಲ್ಲಾಗಲೇ ಮನೆ ಮಾತಾಗಿದ್ದ. ಆತನ ಹೆಸರಿಗಿಂತ ಹೆಚ್ಚಾಗಿ ‘ಆಂಗ್ರಿ ಯಂಗ್ ಮ್ಯಾನ್’ ಎನ್ನುವ ಅನ್ವರ್ಥನಾಮದಿಂದ. ಆತನ ಧ್ವನಿ, ನಿಲ್ಲುವ ಭಂಗಿ, ವೈರಿಯ ಎದೆಯಲ್ಲಿ ನಡುಕ ಹುಟ್ಟಿಸುವ ಧೈರ್ಯ ಹಾಗು ಎಲ್ಲಕ್ಕಿಂತ ಮಿಗಿಲಾಗಿ ಕಿಚ್ಚೊತ್ತಿಸುವ ಆತನ ಪಾತ್ರ ನೋಡುಗನಿಗ ಅತೀ ಸನಿಹವಾಯಿತು. ಈ ಪಾತ್ರವೇ ಮುಂದೆ ಆತನನ್ನು ದೇಶದ ಅತಿ ದೊಡ್ಡ ನಾಯಕ ನಟನಾಗಿ ಮುಂದುವರೆಯಲು ಕಾರಣವಾಯಿತು. ಬಾಲಿವುಡ್ ಇತಿಹಾಸದ ನಿಜವಾದ ಟರ್ನಿಂಗ್ ಪಾಯಿಂಟ್ ಎಂದರೆ ಈ ಸಿನಿಮಾವೆಂದೇ ಇಂದಿಗೂ ಇತಿಹಾಸ ಬಲ್ಲವರು ಮಾತನಾಡಿಕೊಳ್ಳುತ್ತಾರೆ. ಗಂಡೆದೆಯ ನಾಯಕ ಹಾಗು ಅಂತಹ ಪಾತ್ರಕ್ಕೆ ತಕ್ಕ ಚಿತ್ರಗಳು ಮುಂದೆ ಹೆಚ್ಚು ಹೆಚ್ಚಾಗಿ ಮೂಡತೊಡಗಿದವು. ಆ ಗಂಡೆದೆಯ ನಾಯಕನೇ ‘ದಿ ಆಂಗ್ರಿ ಯಂಗ್ ಮ್ಯಾನ್’ ಅಮಿತಾಬ್ ಬಚ್ಚನ್ ಹಾಗು ಅಂತಹ ಪಾತ್ರಗಳ ಸೃಷ್ಟಿಗೆ ಕಾರಣೀಕರ್ತರೇ ದೇಶ ಕಂಡ ಹೆಮ್ಮೆಯ ಕಥೆ, ಚಿತ್ರಕಥೆ, ಹಾಗು ಸಂಭಾಷಣೆಗಾರರಾದ ಸಲೀಮ್-ಜಾವೇದ್.

ಹೌದು ಸಲೀಮ್-ಜಾವೇದ್. ದೇಶ ಕಂಡ ಅತ್ಯಂತ ಸೃಜನಶೀಲ ಹಾಗು ಜನಪ್ರಿಯ ಚಿತ್ರಕತೆಗಾರರಲ್ಲಿ ಒಬ್ಬರು. ಸರಿ ಸುಮಾರು 26 ಚಿತ್ರಗಳಿಗೆ ಕಥೆಯನ್ನು ಬರೆದಿರುವ ಈ ಜೋಡಿ 21 ಚಿತ್ರಗಳಲ್ಲಿ ಯಶಸ್ಸನ್ನು ಕಂಡಿದೆ. ಈ ಪಾಟಿ ಯಶಸ್ಸಿನ ಚಿತ್ರಕಥೆಗಾರರು ಕಾಣುವುದು ತೀರಾ ವಿರಳ. ಆಗಿನ ಕಾಲಕ್ಕೆ ಚಿತ್ರವೆಂದರೆ ನಾಯಕ, ನಾಯಕಿ ಹಾಗು ಹೆಚ್ಚೆಂದರೆ ನಿರ್ದೇಶಕ. ಇವರಿಷ್ಟೆ ಚಿತ್ರದ ಭಿತ್ತಿಪತ್ರದಲ್ಲಿ ಹಾಗು ಜನರ ಮಾತುಗಳಲ್ಲಿ ಉಳಿಯುತ್ತಿದ್ದರು. ಚಿತ್ರ ಗೆಲ್ಲುವುದೋ ಅಥವಾ ಸೋಲುತ್ತದೋ ಎಂಬುದು ಹೆಚ್ಚಾಗಿ ಈ ಅಂಶಗಳಲ್ಲೇ ತೀರ್ಮಾನವಾಗುತ್ತಿತ್ತು. ಚಿತ್ರಕಥೆ, ಸಂಪಾದನೆ,ಸಂಭಾಷಣೆ, ನೃತ್ಯ, ಗೀತ ರಚನೆ ಇವೆಲ್ಲ ಅಂದಿನ ಸಾಮಾನ್ಯ ನೋಡುಗನ ಅರಿವಿಗೆ ಬಾರದ ವಿಷಯಗಳಾಗಿದ್ದವು. ಅರಿತರು ನೆನಪಲ್ಲಿ ಉಳಿಯದ ಹೆಸರುಗಳಾಗಿದ್ದವು. ಅಂತಹ ಕಾಲದಲ್ಲಿ ಒಂದು ಚಿತ್ರದ ಲಾಭದ ಶೇಕಡಾ 25ರಷ್ಟನ್ನು ಪಡೆಯುವ ಚಿತ್ರಕಥೆಗಾರರಿದ್ದರೆಂದರೆ ಅದು ಸಲೀಮ್-ಜಾವೇದ್! ಅವರ ಕಥೆಗಳೇ ಹಾಗೆ. ಕಥೆ ಹಾಗು ಅದರೊಳಗಿನ ಪಾತ್ರಗಳು ಅಂದಿನ ನೈಜ ಸ್ಥಿತಿಗೆ ಸಮೀಪವಾಗಿರುತ್ತಿದ್ದವು. ನಾಯಕ ಪ್ರಧಾನ ಕಥೆಗಳಾಗಿದ್ದ ಅವುಗಳು ನಾಯಕನ ಕಷ್ಟಗಳು ಹಾಗು ಅದಕೊಂದು ಪರಿಹಾರವನ್ನೂ ಅಲ್ಲಿ ತೋರಿಸಿ ಕೊಡುತ್ತಿದ್ದವು. ಇದು ನೋಡುಗರ ಮನದಲ್ಲಿ ಛಲವನ್ನು ಮೂಡಿಸಿ ಒಂದು ಬಗೆಯ ಧನಾತ್ಮಕ ಮನೋಭಾವವನ್ನು ಸೃಷ್ಟಿಸುತ್ತಿದ್ದವು. ಅಲ್ಲದೆ ಪ್ರತಿಯೊಂದು ಪಾತ್ರವನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಅದರಿಂದ ಸಮಾಜದ ಮೇಲೆ ಬೀರುವ ಒಳಿತು ಕೆಡುಕುಗಳನ್ನು ಅಳೆದು ಬರೆಯುತ್ತಿದ್ದ ಕಥೆಗಳು ನೋಡುಗನನ್ನು ಹಿಡಿಟ್ಟುಕೊಳ್ಳುತ್ತಿದ್ದವು. ಸರಿ ಸುಮಾರು ಹನ್ನೊಂದು ವರ್ಷಗಳ ಕಾಲ ಒಟ್ಟಾಗಿ ಬರೆದ ಈ ಜೋಡಿ ಭಾರತೀಯ ಚಿತ್ರರಂಗವನ್ನು ಮತ್ತೊಂದು ಮಟ್ಟದ ಎತ್ತರಕ್ಕೆ ಕೊಂಡೊಯಿತೆಂದರೆ ಸುಳ್ಳಾಗದು.

ಅಂದು ಅಮಿತಾಬ್ ಬಚ್ಚನ್ ಸಿನಿಮಾ ರಂಗದಲ್ಲಿ ನೆಲೆಯೂರುತ್ತಿದ್ದ ಸಮಯ. ಇತ್ತ ಕಡೆ ಸಲೀಮ್-ಜಾವೇದ್ ತಮ್ಮ ಜಂಜೀರ್ ಚಿತ್ರಕ್ಕೆ ನಾಯಕ ನಟನನ್ನು ಅರಸುತ್ತಿದ್ದರು. ವಿಪರ್ಯಾಸವೆಂಬಂತೆ ಅಂದಿನ ಬಹು ಬೇಡಿಕೆಯ ದೇವ್ ಆನಂದ್, ರಾಜೇಶ್ ಖನ್ನಾ ಹಾಗು ಧರ್ಮೇದ್ರರಂತ ತಾರೆಗಳೇ ಒಂದಲ್ಲೊಂದು ಕಾರಣವನೊಡ್ಡಿ  ಚಿತ್ರವನ್ನು ತಿರಸ್ಕರಿಸಿದರು.  ಕೊನೆಗೆ ಅದೃಷ್ಟ ಒಲಿದಿದ್ದು ಆರು ಅಡಿ ಎರಡು ಅಂಗುಲ ಎತ್ತರದ ಅಮಿತಾಬ್’ಗೆ. ಅಲ್ಲಿಯವರೆಗು ಕೇವಲ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದ ಅಮಿತಾಭ್ ಒಂದು ಪ್ರಚಂಡ ಬ್ರೇಕ್’ಗೋಸ್ಕರ ಕಾಯುತ್ತಿದ್ದರು. ಚಿತ್ರ ಗೆದ್ದಿತು. ಚಿತ್ರರಂಗದ ಎಲ್ಲರ ಹುಬ್ಬೇರುವಂತೆ ಮಾಡಿತು. ಮುಂದೆ ನೆಡೆಯುವುದೆಲ್ಲ ಇತಿಹಾಸ. ಈ ಜೋಡಿ ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಹೋಯಿತು. ಅಲ್ಲದೆ ಹೆಚ್ಚಾಗಿ ಅಮಿತಾಭ್’ನನ್ನೇ ಚಿತ್ರದ ನಾಯಕನಾಗಿ ಮಾಡಿಕೊಳ್ಳುವಂತೆ ನಿರ್ದೇಶಕರಲ್ಲಿ ಒತ್ತಡ ಹೇರುತ್ತಿತ್ತು. ಬಾಲಿವುಡ್’ನ ಇತಿಹಾಸದಲ್ಲೇ ಅಚ್ಚಳಿಯದ ಚಿತ್ರಗಳಾದ ದಿವಾರ್, ಶೋಲೆ, ಡಾನ್, ತ್ರಿಶೂಲ್,ದೋಸ್ತಾನಾ, ಕ್ರಾಂತಿ ,ಶಕ್ತಿ, Mr.ಇಂಡಿಯಾ ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಇವರು ಬರೆದರು. ಅಮಿತಾಬ್’ನನ್ನು ಚಿತ್ರರಂಗದ ದಿ ಗ್ರೇಟ್ ನಾಯಕ ನಟನಾಗಿ ಮಾಡಲು ಈ ಜೋಡಿಯ ಪಾತ್ರವೂ ಅಗಾಧವಾದದ್ದು. ಅಲ್ಲದೆ ಡಾ.ರಾಜಕುಮಾರ್ ಅಭಿನಯದ ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ‘ಪ್ರೇಮದ ಕಾಣಿಕೆ’ ಹಾಗು ‘ರಾಜ ನನ್ನ ರಾಜ’ ಚಿತ್ರಗಳ ಚಿತ್ರಕತೆಯನ್ನೂ ಬರೆದಿದ್ದು ಈ ಜೋಡಿಯೇ ಎಂಬುದು ಮತ್ತೊಂದು ವಿಶೇಷ.

ಅಂದೆಲ್ಲ ಚಿತ್ರದ ಭಿತ್ತಿ ಪತ್ರದಲ್ಲಿ ನಾಯಕ, ನಾಯಕಿ, ನಿರ್ದೇಶಕ ಹಾಗು ನಿರ್ಮಾಪಕರ ಹೆಸರುಗಳೇ ಹೆಚ್ಚಾಗಿ ಇರುತ್ತಿದ್ದವು. ಹೆಚ್ಚೆಂದರೆ ಸಂಗೀತ ಸಂಯೋಜಕಾರರ ಹೆಸರು. ಅಂತಹ ಸಮಯದಲ್ಲಿ ಚಿತ್ರದ ಶ್ರೇಯ ಅದರ ಕಥೆ, ಚಿತ್ರಕಥೆ ಹಾಗು ಸಂಭಾಷಣೆ ಬರೆಯುವವರಿಗೂ ಸಲ್ಲಬೇಕೆಂದು ಹೋರಾಡಿ ಕೊನೆಗೆ ಅದು ಆಗುವಂತೆಯೂ ನೋಡಿಕೊಂಡರು. ಚಿತ್ರದ ಗೆಲುವಿನ ಶ್ರೇಯ ಪ್ರತಿಯೊಬ್ಬರಿಗೂ ಸಮಾನವಾಗಿ ಸಲ್ಲಬೇಕು ಎಂಬುದು ಅವರ ವಾದವಾಗಿತ್ತು. ಅಲ್ಲದೆ ೨೦೦೮ ರ ಆಸ್ಕರ್ ಗೆದ್ದ ಸ್ಲಂ ಡಾಗ್ ಮಿಲೇನಿಯರ್ ಚಿತ್ರ ತಂಡವೂ ಕೂಡ ಇವರ ಚಿತ್ರಕಥೆಯ ರೀತಿಯಿಂದಲೇ ಪ್ರಭಾವಗೊಂಡಿತ್ತು. ಅಲ್ಲದೆ ಚಿತ್ರದಲ್ಲಿ ಎರಡು ಪಾತ್ರಗಳಿಗೆ ಇವರ ಹೆಸರನ್ನೇ ನಾಮಕರಣ ಮಾಡಿತ್ತು!

ಒಂದೆಡೆ ಇವರ ಸಾಲು ಸಾಲು ಚಿತ್ರಗಳು ಜಯಭೇರಿಯನ್ನು ಬಾರಿಸುತ್ತ ಹೋಗುತ್ತಿದ್ದರೆ ಇನ್ನೊಂದೆಡೆ ನಿಜ ಜೀವನದಲ್ಲಿ ಇವರಿಬ್ಬರ ಒಳಗೊಳಗೇ ವೈಮನಸ್ಸು ಬೆಳೆಯುತ್ತಿರುತ್ತದೆ. ಸಲಿಂ-ಜಾವೇದ್’ರಿಂದಲೇ ಹೆಚ್ಚಾಗಿ ಚಿತ್ರರಂಗದಲ್ಲಿ ಬೆಳೆದ ಅಮಿತಾಬ್ ಬಚ್ಚನ್ ಅವರೇ ಕೊನೆಗೊಂದು ದಿನ ಇವರಿಬ್ಬರ ಒಡಕಿಗೂ ಕಾರಣರಾಗುತ್ತಾರೆ ಎಂದು ಯಾರು ಸಹ ಊಹಿಸಿರಲಿಲ್ಲ. Mr.ಇಂಡಿಯಾ ಚಿತ್ರವನ್ನು ನಿರಾಕರಿಸಿದ ಅಮಿತಾಬ್ ಬಚ್ಚನ್ನೊಟ್ಟಿಗೆ ಮತ್ತೆಂದೂ ಚಿತ್ರ ಮಾಡುವುದಿಲ್ಲವೆಂದು ಸಿಡುಕಿದ್ದ ಜಾವೇದ್ ಮತ್ತೊಂದು ದಿನ ಅದೇ ಅಮಿತಾಬ್’ನೊಟ್ಟಿಗೆ ಅವರ ಮನೆಯಲ್ಲೇ ಹೋಳಿಯನ್ನಾಡುವುದು ಸಲೀಮ್’ರ ಕಿವಿಗೆ ಬೀಳುತ್ತದೆ. ಅದಲ್ಲಿಗೆ ಜಾವೇದ್ ಮೇಲೆ ಇವರಿಗೆ ತಿರಸ್ಕಾರ ಭಾವ ಮೂಡುತ್ತದೆ. ಇದಾದ ಕೆಲವೇ ದಿನಗಳಲ್ಲಿ ಜಾವೇದ್  ಅಖ್ತರ್ ಸಲೀಂರನ್ನು ಕುರಿತು ತಾನು ಚಿತ್ರಗಳಿಗೆ ಹಾಡುಗಳನ್ನು ಬರೆಯುವುದಾಗಿಯೂ, ಅದಕ್ಕೂ ಸಲೀಂ-ಜಾವೇದ್ ಎಂಬ ಹೆಸರನ್ನೂ ಕೊಡುವುದಾಗಿಯೂ ಹೇಳಿದರು. ಸಲೀಂ ನಿಜ ಜೀವನದಲ್ಲಿ ತುಂಬ ನೇರ ಮನುಷ್ಯ. ಕೇವಲ ಚಿತ್ರಕಥೆಗಳಿಗೆ ಸೀಮಿತವಾಗಿದ್ದ ಸಲಿಂ ಹಾಡುಗಳನ್ನು ಬರೆದಿರುವುದು ತೀರಾ ವಿರಳ. ಹಾಗಾಗಿ ತಾನು ಮಾಡದೇ ಇರುವ ಕೆಲಸಕ್ಕೆ ದಕ್ಕುವ ಶ್ರೇಯ ತನಗೆ ಬೇಡವೆಂದು ಖಡಾಖಂಡಿತವಾಗಿ ಹೇಳುತ್ತಾರೆ. ಕೊಡಲೇ ಅಲ್ಲಿಂದ ಹೊರಟ ಜಾವೇದ್ ಮತ್ತೆಂದೂ ಸಲೀಂ ಕಡೆ ತಿರುಗಿ ನೋಡುವುದಿಲ್ಲ. ಅಲ್ಲಿಗೆ 1971 ರಿಂದ 1982ರ ವರೆಗಿದ್ದ  ಹಿಂದಿ ಚಿತ್ರರಂಗದ ದಿ ಬೆಸ್ಟ್ ಜೋಡಿಯೊಂದು ಬೇರ್ಪಟ್ಟಿತ್ತು. ಇದರಿಂದ ನಿಜವಾಗಿ ನಷ್ಟವನ್ನು ಅನುಭವಿಸಿದ್ದು ಮಾತ್ರ ಪ್ರೇಕ್ಷಕ. ಇವರ ಶಾಯಿಯಿಂದ ಇನ್ನೂ ಅದೆಷ್ಟೋ ಚಿತ್ರಗಳು ಮೂಡದೇ ಉಳಿದವೋ ಹೇಳಲಾಗದು. ಅಲ್ಲಿಂದ ಮುಂದಕ್ಕೆ ಜಾವೇದ್ ಅಖ್ತರ್ ಗೀತರಚನೆ ಹಾಗು ಚಿತ್ರಕಥೆಯನ್ನು ಮುಂದುವರೆಸುತ್ತಾರೆ. ಚಿತ್ರಕಥೆಯಲ್ಲಿ ಹಿಂದಿನ ಪ್ರಚಂಡ ಯಶಸ್ಸೇನೂ ಕಾಣದಿದ್ದರೂ ತಕ್ಕ ಮಟ್ಟಿಗೆ ಉತ್ತಮ ಚಿತ್ರಗಳನ್ನು ಬರೆಯುತ್ತಾರೆ. ಆದರೆ ಗೀತರಚನೆಯಲ್ಲಿ ಮಾತ್ರ ಚಿತ್ರ ಇತಿಹಾಸದ ದಂತಕಥೆಯಾಗುತ್ತಾರೆ. ಅದು ಅವರ ಎಂಭತ್ತರ ದಶಕದ ಹಾಡುಗಳಾಗಲಿ ಅಥವಾ ತೀರಾ ಇತ್ತೀಚಿನ ಶಾಯರಿಗಳಾಗಲಿ, ಒಮ್ಮೆ ಕೇಳಿದರೆ ಸಾಕು ಅವು ಕೇಳುಗನ ಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಎಷ್ಟೂ ಕೇಳಿದರೂ ಸಾಲದೆಂಬ ಭಾವವನ್ನು ಸ್ಪುರಿಸುತ್ತವೆ. ಆ ಮಟ್ಟಿನ ಭಾಷಾ ಹಿಡಿತ ಹಾಗು ಭಾವ ತುಂಬುವ ಕಲೆ ಜಾವೇದ್’ರಿಗೆ ಒಲಿಯಿತು.

ಅತ್ತ ಕಡೆ ಸಲೀಂ ಖಾನ್ ಸಹ ಚಿತ್ರಕಥೆಯಲ್ಲಿ ಮುಂದುವರೆಯುತ್ತಾರೆ. ಆದರೆ ಒಂದಕ್ಕಿಂತ ಒಂದು ಚಿತ್ರಗಳು ನೆಲ ಕಚ್ಚ ತೊಡಗುತ್ತವೆ. ಸತತ ಸೋಲಿನಿಂದ ಬೇಸತ್ತ ಸಲೀಮ್ ಕೊನೆಗೊಂದು ದಿನ ಚಿತ್ರಕಥೆ ಬರೆಯುವುದನ್ನೇ ನಿಲ್ಲಿಸುತ್ತಾರೆ! ಅಲ್ಲಿಗೆ ಹಿಂದಿ ಚಿತ್ರರಂಗ ಕಂಡ ವಿಶಿಷ್ಟ ಧ್ರುವತಾರೆಯೊಂದು ಮಿನುಗಿ ಮರೆಯಾಗುತ್ತದೆ.

ಇದು ಹಿಂದಿ ಚಿತ್ರರಂಗ ಕಂಡ ಖ್ಯಾತ ಚಿತ್ರಕಥೆಗಾರರಿಬ್ಬರ ಕಥೆ. ಇಂದಿನ ಖ್ಯಾತ ನಟ ಸಲ್ಮಾನ್ ಖಾನ್’ನ ಅಪ್ಪ ಸಲೀಮ್ ಖಾನ್ ಹಾಗು ಇನ್ನೊಬ್ಬ ನಟ ಫರಾನ್ ಅಕ್ತರ್’ರವರ ಅಪ್ಪ ಜಾವೇದ್ ಅಖ್ತರ್ ಎಂದು ಕೆಲವರೆಂದರೆ, ಇನ್ನೂ ಕೆಲವರು ಅದರ ವ್ಯತಿರಿಕ್ತವಾಗಿ ಸಲೀಮ್ ಖಾನ್ರ ಮಗ ಸಲ್ಮಾನ್ ಖಾನ್ ಹಾಗು ಜಾವೇದ್ ಅಖ್ತರ್’ರವರ ಮಗ ಫರಾನ್ ಅಕ್ತರ್ ಎಂದು ಹೇಳುತ್ತಾರೆ!!

-ಸುಜಿತ್ ಕುಮಾರ್

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!