ಕಥೆ

ಬದು..

ರಾತ್ರಿಯಾಗಿದೆ. ಕಪ್ಪು ಕಂಬಳಿ ಹೊದ್ದ ಮಂಜಪ್ಪ ಗೋಕಾಕಿನ ಪ್ರಸಿದ್ಧ ಜಲಪಾತದ ಮೇಲಿನ ಜಾಗದಲ್ಲಿ ಕುಳಿತಿದ್ದಾನೆ.ಭೋರ್ಗರೆಯುವ ಘಟಪ್ರಭಾ ಸುಂದರವಾಗಿ ಕಾಣುತ್ತಿದ್ದಾಳೆ.. ಕೇವಲ ಒಂದಿಂಚು ಹೊಲದ ಬದು ಹೆಚ್ಚು ಕಡಿಮೆಯಾಯಿತೆಂದು ವರಸೆಯಲ್ಲಿ ದೂರದ ಸಂಬಂಧಿ, ತನ್ನ ಆತ್ಮೀಯ ಗೆಳೆಯನ್ನು ಮಚ್ಚಿನಿಂದ ಕತ್ತರಿಸಿ ಹದಿನಾಲ್ಕು ವರ್ಷ ಜೀವಾವಧಿ ಶಿಕ್ಷೆ ಅನುಭವಿಸಿ ಬಂದ ಮಂಜಪ್ಪ ಗೋಕಾಕಿನ ಜಲಪಾತ ನೋಡುತ್ತಾ ನಿಂತಿದ್ದಾನೆ.ಕಪ್ಪು ಕಂಬಳಿಯೊಂದನ್ನು ಹೊದ್ದಿದ್ದಾನೆ. ಬಿಳಿಯ ದೋತರ ಮೇಲಂಗಿಗಳು ಕೊಳೆಯಾಗಿವೆ. ಗೋಕಾಕ್ ಜಲಪಾತದ ಬಳಿಯೇ ಇರುವ ಗೊಡಚಿನ್ಮಲ್ಕಿ ಹಳ್ಳಿ ಮಂಜಪ್ಪನದು.ಅವನೀಗ ತಾನು ಒಂದು ಕ್ಷಣದಲ್ಲಿ ಮಾಡಿದ ತಪ್ಪಿನಿಂದ ಹದಿನಾಲ್ಕು ವರ್ಷ ಅನುಭವಿಸಿದ ನರಕವನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಅವನಿಗೆ ಈಗ ಅನ್ನಿಸುತ್ತಿದೆ “ಒಂದು ಸಾಲು ಬೆಳೆ ಬೆಳೆಯುವಷ್ಟು ಜಾಗ ಹೆಚ್ಚು ಕಡಿಮೆಯಾಯಿತೆಂದು ಹೊಡೆದಾಡಿ ಕೊಲೆಗೈದು ಜೈಲು ಅನುಭವಿಸಿದೆ.ಆದರೆ ಈಗ ಆರಡಿ ಮೂರಡಿ ಜಾಗವೂ ಇಲ್ಲ ತನ್ನನ್ನು ಹೂಳಲು‌..” ತನ್ನ ಸುಂದರ ಜೀವನವನ್ನು ಹಾಳು ಮಾಡಿಕೊಂಡ ಬಗ್ಗೆ ಅವನಿಗೆ ವಿಷಾದವಿದೆ.

ಮಂಜಪ್ಪ ಮಲ್ಲಪ್ಪ ಇಬ್ಬರೂ ಒಟ್ಟಿಗೆ ಬೆಳೆದವರು.ಒಂದೇ ವಯಸ್ಸಿನವರು.”ಲೇ ಮಂಜ್ಯಾ ನಮ್ಮವ್ವ ಕರದಂಟ ತಗೋ ಅಂತ ಒಂದ್ ರೂಪಾಯಿ ಕೊಟ್ಟಾಳ.ಬಾ ಮೂಲಿಮನಿ ತಮ್ಮಣ್ಣನ ಅಂಗಡಿಗೆ ಹೋಗೂನು.”ಎನ್ನುವ ಮಲ್ಲಪ್ಪನದು ಆತ್ಮೀಯ ಹೃದಯ.ಮಂಜಪ್ಪನೂ ಅಷ್ಟೇ ಅವರ ಮನೆಯಲ್ಲಿ ಏನಾದರು ತಿನ್ನಲು ವಿಶೇಷವಾಗಿ  ಮಾಡಿದರೆ ಚಿಕ್ಕಂದಿನಿಂದಲೂ ಬಿಟ್ಟು ತಿನ್ನುತ್ತಿರಲಿಲ್ಲ.ಪಕ್ಕದ ಮನೆ ಸುಬ್ಬಮ್ಮ ಇವರಿಬ್ಬರನ್ನು ನೋಡಿ “ನೋಡ ಹೆಂಗದಾವು ಎರಡೂ ಕೂಸು..ರಾಮಾ ಲಕ್ಷಣ ಇದ್ದಂಗದಾರ” ಎಂದು ದೃಷ್ಟಿ ತೆಗೆದು ಲಟಿಕೆ ಮುರಿಯುತ್ತಿದ್ದಳು.ವ್ಯವಸಾಯವೇ ಪ್ರಧಾನವಾದ ಕುಟುಂಬ ಇಬ್ಬರದು.ಅವರಿಬ್ಬರೂ ಅಷ್ಟೇ ಓದಿನಲ್ಲಿ ಆಸಕ್ತಿ ತೋರಿದವರಲ್ಲ.ಹೀಗಾಗಿ ಹತ್ತನೆ ತರಗತಿಗೆ ಶಾಲೆಯ ಮುಖ ನೋಡಿದ್ದು ಕೊನೆಯಾಗಿತ್ತು.ಸ್ವಲ್ಪ ದಿನ ಗೋಕಾಕಿನ ಪ್ರಸಿದ್ಧ ತಿನಿಸು ಕರದಂಟನ್ನು ಮಾರುವ ಕಾಯಕ ಮಾಡಿದರು.ಗೋಕಾಕಿನ ಜಲಪಾತ ಘಟಪ್ರಭಾ ನದಿಯಿಂದ ಉಂಟಾಗಿದ್ದು ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ.ಹೀಗಾಗಿ ಅದನ್ನು ನೋಡಲು ಬರುವ ಜನರೇನು ಕಡಿಮೆ ಇರಲಿಲ್ಲ.ಕರದಂಟಿನ ವ್ಯಾಪಾರ ಚೆನ್ನಾಗಿಯೇ ಇತ್ತು.ಬೇಕರಿಗಳು ಅಲ್ಲಿ ತಲೆಯೆತ್ತಿದಾಗ ಮಂಜಪ್ಪ ,ಮಲ್ಲಪ್ಪನ ಕರದಂಟಿನ ವ್ಯಾಪಾರ ನೆಲಕಚ್ಚಿದ್ದರಿಂದ ವ್ಯವಸಾಯದ ದಾರಿ ಕಂಡುಕೊಂಡರು.ಅದೇ ಘಟಪ್ರಭಾಳೇ ಸುತ್ತಮುತ್ತಲಿನ ಜನರ ಹೊಲಗಳಿಗೆ ನೀರುಣಿಸುವ ತಾಯಿ. ಮುಂದೆ ಇಬ್ಬರೂ ವ್ಯವಸಾಯದಲ್ಲಿ ಒಳ್ಳೆಯ ಉತ್ಪನ್ನ ತೆಗೆಯುತ್ತಿದ್ದರು.

ಹೊಲಗಳೂ ಅಕ್ಕಪಕ್ಕದಲ್ಲಿಯೇ ಇದ್ದವು.ಇಬ್ಬರೂ ಬೇಗನೇ ಎದ್ದು ಮನೆಯಲ್ಲಿ ರೊಟ್ಟಿ ಕಟ್ಟಿಸಿಕೊಂಡು ಹೊಲಕ್ಕೆ ಹೋಗುತ್ತಿದ್ದರು.ಮಧ್ಯಾಹ್ನ ಒಟ್ಟಿಗೆ ಊಟ ಮಾಡುತ್ತಿದ್ದರು.ಇಬ್ಬರಿಗೂ ವಯಸ್ಸು ಇಪ್ಪತೆಂಟಾಗಿತ್ತು.ಮಂಜಪ್ಪನ ಅಪ್ಪ ಕಲ್ಲಪ್ಪ ಬೆಳಗಾವಿಯ ಹತ್ತಿರದ ಹಳ್ಳಿಯೊಂದರಲ್ಲಿ ಮಂಜಪ್ಪನಿಗೆ ಕನ್ಯಾಣ್ವೇಷಣೆ ಮಾಡಿ ಪಾರ್ವತಿಯನ್ನು ಮಂಜಪ್ಪನಿಗೆ ಮದುವೆ ಮಾಡಿ ಇಹಲೋಕ ತ್ಯಜಿಸಿದ್ದರು.ಮಲ್ಲಪ್ಪ ತನ್ನ ಅತ್ತೆಯ ಮಗಳು ಚಂದ್ರಮ್ಮಳನ್ನು ಮದುವೆಯಾಗಿದ್ದ. ಮುಂದೆ ನಾಲ್ಕು ವರ್ಷಗಳಲ್ಲಿ ಮಂಜಪ್ಪನಿಗೆ ಎರಡು ಗಂಡು ಮಕ್ಕಳಾಗಿದ್ದವು. ಮಹೇಶ,ರುದ್ರೇಶ ಎಂದು ನಾಮಕರಣ ಮಾಡಿದ್ದ ಮಂಜಪ್ಪ. ಮಲ್ಲಪ್ಪನಿಗೆ ಒಂದು ಗಂಡು,ಒಂದು ಹೆಣ್ಣು ಮಕ್ಕಳಾಗಿದ್ದವು. ಬಸಮ್ಮ,ಮಾದೇಶ ಎಂದು ನಾಮಕರಣ ಮಾಡಿದ್ದ ಮಲ್ಲಪ್ಪ.ಹೇಗೋ ಎರಡು ಸಂಸಾರಗಳು ನೆಮ್ಮದಿಯಿಂದ ಇದ್ದವು. ಚಂದ್ರಮ್ಮ ಪಾರ್ವತಿ ಒಂದೇ ಮನೆಯವರಂತೆ ಹೊಂದಿಕೊಂಡಿದ್ದರು.

ಒಂದು ದಿನ ಹೊಲದಲ್ಲಿ ಹುಲ್ಲು ಕ್ಯುಯುತ್ತಿದ್ದ ಚಂದ್ರಮ್ಮ ಹೊಲದ ಅಂಚಿನಲ್ಲಿ ನಿಲ್ಲಿಸಿದ ಕಲ್ಲುಗಳನ್ನು ನೋಡಿದಾಗ ಒಂದು ಸಾಲು ಹೆಚ್ಚಿಗೆ  ತಮ್ಮ ಹೊಲದಲ್ಲಿ  ಮಂಜಪ್ಪ ಬಿತ್ತಿದ್ದನ್ನು  ನೋಡಿದಳು. “ಇವ್ರಿಗೇನು ಕಂಡೋರ ಹೊಲ ಹಿಂಗ ಒತ್ತುದ ಕೆಲ್ಸಾನೇನೋ…ಈ ಯಜಮಾನಗ ಏನೂ ತಿಳಿಯಂಗಿಲ್ಲ…ಸಂಜಿ ಮನಿಗೆ ಹೋದ ಮ್ಯಾಲ ಮೊದ್ಲ ಬದು ಹಾಕಾಕ ಹೇಳಬೇಕು..ಇಲ್ದಿದ್ರ ಹಿಂಗ ಒತ್ತಕೊಂತ ಬಂದು ಕಾಲ್ ಎಕರೆ ಹೊಲಾನ ನಮ್ದು ಅನ್ನು ಮಂದಿ ಅದು ..” ಎಂದು ತನಗೆ ತಾನೇ ಹೇಳಿಕೊಂಡಳು. ಸಂಜೆ ಮನೆಗೆ ಬಂದವಳೇ ಗಂಡನಿಗೆ “ಏನ್ರಿ ನೀವು..ಮಂಜಣ್ಣ ಒಂದ್ ಸಾಲು ಹೊಲಾ ಒತ್ಯಾನ. ಸುಮ್ನ ಅದೀರಿ. ಹಿಂಗ ನೀವ್ ಸುಮ್ನಿದ್ರ ಕಾಲ್ ಎಕರೆ ಹೊಲಾ ಒತ್ತಿ ನಮ್ದ ಅಂತಾರ. ಮೊದ್ಲ ನಮ್ ಹೊಲದ್ ಕಲ್ಲಿನಗುಂಟ ಒಂದ್ ಬದ ಹಾಕ್ರಿ..ಎಲ್ಲಾ ಬಂದೋಬಸ್ತ ಆಕ್ಕೆತಿ.” ಅಂದಳು. ಮರುದಿನ ಮಲ್ಲಪ್ಪ ಹೊಲಕ್ಕೆ ಬಂದು ನೋಡಿದಾಗ ಒಂದು ಸಾಲು ಕಲ್ಲನ್ನು ದಾಟಿ ಬಂದಿತ್ತು. ತನ್ನ ಹೆಂಡತಿ ಹೇಳಿದ್ದು ಸರಿ ಎನಿಸಿ ಬದು ಹಾಕಲು ಪ್ರಾರಂಭಿಸಿದ.ಸ್ವಲ್ಪ ಲೇಟಾಗಿ ಬಂದ ಮಂಜಪ್ಪ, ಮಲ್ಲಪ್ಪ ಬದು ಹಾಕುತ್ತಿರುವುದನ್ನು ಕಂಡು “ಯಾಕಲೆ ಮಲ್ಲಪ್ಪ ಇಷ್ಟ ದಿನಾ ಇಲ್ಲದ್ದ ಈಗ್ಯಾಕ ಬದಾ ಹಾಕಾಕತ್ತಿ?” ಅಂದ ಆಶ್ಚರ್ಯದಿಂದ.”ಏನಿಲ್ಲ ಮಂಜಣ್ಣ ,ನೋಡಿಲ್ಲಿ ನೀನು ಒಂದ್ ಸಾಲು ಹೆಚ್ಚಿಗಿ ನನ್ ಹೊಲದಾಗಾ ಹೊಡದಿ. ಅದಕ್ಕ ಸುಮ್ನ ಜಗಳ ಬ್ಯಾಡ ಅಂತ ಬದ ಹಾಕಿದ್ರಾತು ಅಂತ ಹಾಕಾಕತ್ತೇನಿ”ಅಂದ ತಲೆಯೆತ್ತದೆ. “ಏನ್ ತೆಲಿ ಸರಿ ಐತಿಲ್ಲೋ ನಿಂಗ. ಹಿಂದ ನೀನ ಕಲ್ಲು ನಿಂದರಿಸಿದಿ.ನೀ ಹೆಂಗ ಅಳತಿ ಮಾಡಿದೋ ಗೊತ್ತಿಲ್ಲ..ಇಲ್ಲಿ ಬಾ ಇಲ್ಲೆ ಅಂತ ಅವನ ಕೈಹಿಡಿದು ಹೊಲದ ಅಂಚಿನತ್ತ ಕರೆದುಕೊಂಡು ಹೋದ ಮಂಜಪ್ಪ “ನೋಡಿಲ್ಲಿ ನಮ್ಮ ಅಪ್ಪ ಕುಂದುರಿಸಿದ್ ಕಲ್ಲ..ನೀ ಈಗೀಗ ಕುಂದುರಿಸಿದ ಕಲ್ಲು ನೋಡು “ಎಂದು ಹೊಲದ ಅಂಚಿನಲ್ಲಿದ್ದ ಎರಡು ಕಲ್ಲುಗಳನ್ನು ತೋರಿಸಿದ.ಮಲ್ಲಪ್ಪ ಎಷ್ಟು ಹೇಳಿದರೂ ಒಪ್ಪಲೇ ಇಲ್ಲ. ಸಿಟ್ಟಾದ ಮಂಜಪ್ಪ ” ನೋಡು ಈ ಬದ ಹಾಕೋ ಕೆಲ್ಸ ಮಾಡಂಗಿದ್ರ ಈ ಹಳೆ ಕಲ್ಲ ಹತ್ರ ಹಾಕು…ಇಲ್ಲ ಅಂದ್ರ ನನ್ ತೆಲಿ ಕೆಟ್ರ ನಿನ್ ಕಡದು ಹೆಡಗಿನ ತುಂಬ್ತನಿ ನೋಡ್ “ಎಂದು ಬಿರಬಿರನೆ ನಡೆದು ಹೋದ.ಮಲ್ಲಪ್ಪ ಹಟಮಾರಿಯಂತೆ ” ನಾನೇನ್ ಹೆಂಗಸಲ್ಲ.ಕೈಯಾಗ ಬಳಿ ತೊಟಗೊಂಡಿಲ್ಲ.ಅದೇನ್ ಮಾಡ್ತಿಯೋ ನಾನೂ ನೋಡ್ತನಿ”ಎಂದ ಆವೇಶದಿಂದ.

ಬೆಳಗಾಗೆದ್ದು ಬಂದು ಹೊಲ ನೋಡಿದ ಮಂಜಪ್ಪನಿಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು. ಬದು ಹೊಸ ಕಲ್ಲಿನಗುಂಟ ಹಾಕಲಾಗಿತ್ತು.ಮಲ್ಲಪ್ಪ ಹೊಲದ ಮಧ್ಯ ಬೆಳೆದ ಹುಲ್ಲು ಕ್ಯುಯುವುದರಲ್ಲಿ ಮಗ್ನನಾಗಿದ್ದ.ಬಿರಬಿರನೇ ಮಲ್ಲಪ್ಪನ ಹತ್ತಿರ ಬಂದ ಮಂಜಪ್ಪ “ಏನ್ಲಾ ನಿನಗೆ ಎಷ್ಟ ಸಾರಿ ಹೇಳಿದ್ರೂ ಮತ್ತ ಅಲ್ಲೇ ಬದಾ ಹಾಕೀದೀ.. ” ಎಂದ.ಮಲ್ಲಪ್ಪ “ನೋಡ ಮಂಜಣ್ಣ ನನ್ ಹೊಲಾ ಎಲ್ಲಿತನಕ ಐತೋ ಅಲ್ಲಿ ತನಕ ಬದಾ ಹಾಕೀನಿ ನೀ ಹೆಚ್ಚಗಿ ಮಾತಾಡಬ್ಯಾಡ ಹೊಂಡು ” ಅಂದ. ಸಿಟ್ಟಿನಿಂದ ಹೊರಟ ಮಂಜಣ್ಣ. ಮಂಜಪ್ಪ ಮತ್ತು  ಮಲ್ಲಪ್ಪನ ಹೊಲದ ಭತ್ತದ ಕಟಾವು ಮುಗಿದು ಹುರುಳಿಯನ್ನು ಬಿತ್ತಿದ್ದರು. ಭತ್ತದ ಪೈರನ್ನು ತುಳಿಸುವುದು,ಹಸನು ಮಾಡುವುದು ಬಾಕಿ ಇತ್ತು. ರಾತ್ರಿ ಒಂಭತ್ತು ಗಂಟೆಗೆ ಸಾಮಾನ್ಯವಾಗಿ ಪೈರು ಕಾಯಲು ಹೋಗುವುದು ರೂಢಿಯಾಗಿತ್ತು. ಆ ದಿನ ಮಂಜಪ್ಪ ಏಳು ಗಂಟೆಗೆ ಮನೆ ಬಿಟ್ಟು ಹೊಲ ಸೇರಿದ. ಮಲ್ಲಪ್ಪನ ಹೊಲದ ಬತ್ತದ ಬಣವಿಗೆ ಬೆಂಕಿ ಹಾಕಿ ಯಾರಿಗೂ ಗೊತ್ತಾಗದಂತೆ ಮನೆ ಸೇರಿಕೊಂಡ ಮಂಜಪ್ಪ. ಬೆಂಕಿ ಮುಗಿಲು ಮುಟ್ಟುವ ಹಾಗೆ ಕಾಣುತ್ತಿತ್ತು.ಮಲ್ಲಪ್ಪ ಚಂದ್ರಮ್ಮ ಲಬೋ ಲಬೋ ಬಾಯಿ ಬಡಿದುಕೊಂಡರು.ಅದು ಮಂಜಪ್ಪನ ಕೆಲಸವೇ ಎಂದು ಮಲ್ಲಪ್ಪನಿಗೆ ಗೊತ್ತಾಗಿತ್ತು.”ನಾಳೆ ಇದೆ ಅವನಿಗೆ” ಎಂದುಕೊಂಡು ಹಲ್ಲು ಮಸೆದ ಮಲ್ಲಪ್ಪ.. ಎಲ್ಲರೂ ಮನೆಯತ್ತ ನಡೆದರು. ಮಲ್ಲಪ್ಪನನ್ನು ಸಮಾಧಾನಿಸಿದರು.ಮರುದಿನ ಸಂಜೆ ಏಳು ಗಂಟೆಯಾಗಿತ್ತು. ಮಂಜಪ್ಪ ಜ್ವರವೆಂದು ಮನೆಯಲ್ಲಿ ಮಲಗಿದ್ದ.ಮಲ್ಲಪ್ಪ ಸೇಡಿನಿಂದ ಬುಸುಗುಡುತ್ತಾ ಬಂದು ಮಂಜಪ್ಪನ ಹೊಲದ ಬತ್ತದ ಬಣವಿಗೆ ಬೆಂಕಿಯಿಟ್ಟ. ಮಂಜಪ್ಪನ ಹೆಂಡತಿ ಹಬ್ಬವೆಂದು ಮಕ್ಕಳೊಡನೆ ತವರಿಗೆ ಹೋಗಿದ್ದಳು. ಬೆಂಕಿಯಿಟ್ಟು ಬಂದವನೇ ಮಂಜಪ್ಪನ ಮನೆಗೆ ಬಂದು “ಏನ್ಲಾ ನನ್ ಹೊಟ್ಟೆ ಉರುಸ್ತಿಯಾ ಸೂ..ಮಗನೇ.. ಈಗ ನೋಡು ನಿನ್ ಬತ್ತದ ಬಣವಿಯಾ ” ಎಂದು ಬಿರಬಿರನೇ ಹೊರಟು ಹೋದ. ಜ್ವರದ ತಾಪವಿದ್ದರೂ ಹೊಲದತ್ತ ಓಡಿದ ಮಂಜಪ್ಪ. ಬೆಂಕಿ ಹತ್ತಿ ಉರಿಯುತ್ತಿತ್ತು..ಈಗ ಲಬೋ ಲಬೋ ಬಾಯಿ ಬಡಿದುಕೊಳ್ಳುವ ಸರದಿ ಮಂಜಪ್ಪನದಾಗಿತ್ತು. ಮಲ್ಲಪ್ಪನನ್ನು ಬದುಕಲು ಬಿಡಲೇಬಾರದು ಅವನನ್ನು ಕೊಂದೇ ತೀರಬೇಕೆಂದು ಪಣ ತೊಟ್ಟಿದ್ದ ಮಂಜಪ್ಪ.ಮರುದಿನ ಹೊಲದಲ್ಲಿ ಕಣ ಸ್ವಚ್ಛಗೊಳುಸುವ ಕಾರ್ಯದಲ್ಲಿ ಇಬ್ಬರೂ ತೊಡಗಿದ್ದರು. ಮಂಜಪ್ಪ ಮಸೆದ ಮಚ್ಚನ್ನು ತೆಗೆದುಕೊಂಡು ಹೋಗಿ ಹಿಂದಿನಿಂದ ಮಲ್ಲಪ್ಪನ ಕುತ್ತಿಗೆಗೆ ಬೀಸಿದ.ರುಂಡ ಹಾರಿಬಿತ್ತು.. ಮುಂಡ ಪ್ರಾಣ ಬಿಡುವ ಸಂಕಟಕ್ಕೆ ಒದ್ದಾಡುತ್ತಿತ್ತು. ರಕ್ತ ಬದುವಿನ ಮೇಲೆ ಚಿಲ್ಲನೇ ಚಿಮ್ಮಿತ್ತು. ಅಕ್ಕಪಕ್ಕದ ಹೊಲದಲ್ಲಿ  ಇರಲಿಲ್ಲವಾದ್ದರಿಂದ ಹತ್ತಿರವೇ ಇದ್ದ ಗೋಕಾಕಿನ ಪ್ರಸಿದ್ಧ ಜಲಪಾತದಲ್ಲಿ ಯಾರಿಗೂ ಸುಳಿವು ಸಿಗಬಾರದೆಂದು ಮಚ್ಚನ್ನು ಎಸೆದ. ಹತ್ತು ನಿಮಿಷ ಅಲ್ಲಿಯೇ ಕುಳಿತ. ಈಗ ಅವನು ಹೆದರಿದ್ದ. ಮುಂದಾಗುವ ಪರಿಣಾಮ ಕಣ್ಮುಂದೆ ಬಂದಿತ್ತು.ಹರಿಯುತ್ತಿದ್ದ ಜಲಪಾತದಲ್ಲಿ ಬಿದ್ದುಬಿಡಲೇ ಎಂದುಕೊಂಡ.ಮುದ್ದಾದ ಮಕ್ಕಳ ಮುಖ ಕಣ್ಮುಂದೆ ಬಂದಿತು.ತಾವಾಗಿಯೇ ಶರಣಾದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆಂದು ಕೇಳಿದ್ದ ಅವನು ಪೋಲಿಸ್ ಸ್ಟೇಷನ್ ಗೆ ಓಡಿದ.ಒಂದೇ ಉಸಿರಿಗೆ “ನಾನು ಮಲ್ಲಪ್ಪನನ್ನು ಕೊಂದುಬಿಟ್ಟೆ ಸಾಹೇಬರೇ..ಸಿಟ್ಟಿನ ಕೈಗೆ ಬುದ್ದಿ ಕೊಟ್ಟೆ.” ಎಂದು ಅಳತೊಡಗಿದ. ಕಸ್ಟಡಿಗೆ ತೆಗೆದುಕೊಂಡ ಪೋಲಿಸರು ಅವನನ್ನು ಜೈಲಿನಲ್ಲಿ ಬಂದಿಸಿ ಮಲ್ಲಪ್ಪನ ಶವ ಬಿದ್ದ ಹೊಲದತ್ತ ಜೀಪಿನಲ್ಲಿ ಬಂದರು.ಚಂದ್ರಮ್ಮನ ದುಃಖ ಕಟ್ಟೆಯೊಡೆದಿತ್ತು.ಅವಳು ಪೋಲಿಸರು ಹೊರಟು ನಿಂತಿದ್ದನ್ನು ಕಂಡು “ಸಾಹೇಬ್ರ ಆ ಭಾಡ್ಕೊ ನನ್ ಗಂಡನ್ನ ಕೊಂದಾನ್ರಿ..ಅವಗ ನೇಣ ಹಾಕ್ರಿ.” ಎಂದಳು ಮಣ್ಣನ್ನು ತೂರುತ್ತ.ತಲೆಯಾಡಿಸಿ ಹೊರಟರು ಪೋಲಿಸರು.

ಇತ್ತ ಮಂಜಪ್ಪ ತಾನೇ ಕೊಲೆ ಮಾಡಿದ್ದಾಗಿ ಬಂದು ಶರಣಾಗಿದ್ದರಿಂದ ಕೋರ್ಟ್ ಹದಿನಾಲ್ಕು ವರ್ಷ ಜೀವಾವಧಿ ಶಿಕ್ಷೆ ವಿಧಿಸಿತ್ತು ಮಂಜಪ್ಪನಿಗೆ. ಮಂಜಪ್ಪನಿಗೆ ಆಗ ಕೇವಲ ಮೂವತ್ಮೂರು ವರ್ಷ.ಮಾತಿಗೊಮ್ಮೆ ಚಂದ್ರಮ್ಮ ಪಾರ್ವತಿಯನ್ನು ಕೊಲೆಗಡುಕನ ಹೆಂಡತಿ ಎಂದು ಹಂಗಿಸುತ್ತಿದ್ದಳು. ಹೊಲಕ್ಕೆ ಹೋದಾಗೆಲ್ಲ ಇಬ್ಬರೂ ಅಂದುಕೊಳ್ಳುತ್ತಿದ್ದರು ಈ ಹಾಳು ಬದುವಿನ ಜಾಗಕ್ಕಾಗಿ ಇಷ್ಟೆಲ್ಲಾ ಆಗಿದ್ದು ಎಂದು.

ಪಾರ್ವತಿ ತನಗಾದ ಅವಮಾನಕ್ಕೆ ಗಂಡನೇ ಕಾರಣ ಎಂದು ಒಂದು ಬಾರಿಯೂ ಜೈಲಿಗೆ ಹೋಗಿ ಅವನನ್ನು ನೋಡಲಿಲ್ಲ. ಒಂದು ಬಾರಿ ಮಾತ್ರ ಹೋಗಿದ್ದಳು. ಮಂಜಪ್ಪ ಮುಖ ಗೋಡೆಯತ್ತ ಮಾಡಿ ನಿಂತಿದ್ದ. ತಾನೇ ಮಾತಿಗೆ ಶುರು ಮಾಡಿಕೊಂಡ ಪಾರ್ವತಿ “ಹೊಲಾನ ನನ್ ಹೆಸ್ರಿಗೆ ಮಾಡಿದ್ರ ಮಾರಿ ಮಕ್ಕಳ್ನ ಬೆಳಗಾವಿ ಹಾಸ್ಟೇಲ್ ದಾಗ ಇಟ್ಟ ಓದಸ್ತನಿ. ಇಲ್ಲಂದ್ರ ಅವುಕೂ ವಿಷ ಕೊಟ್ಟ ನಾನೂ ಸಾಯ್ತೇನಿ ” ಎಂದಿದ್ದಳು. ವಿಧಿಯಿಲ್ಲದೇ ಮಂಜಪ್ಪ ಮಕ್ಕಳಾದರೂ ಚೆನ್ನಾಗಿರಲಿ ಎಂದು ಹೊಲದ ಪತ್ರಕ್ಕೆ ಸಹಿ ಹಾಕಿದ್ದ. ಮಕ್ಕಳಿಬ್ಬರೂ ದೊಡ್ಡವರಾಗಿದ್ದರು.ಆದರೆ ಕೊಲೆಗಡುಕನ ಮಕ್ಕಳೆಂಬ ಹಣೆಪಟ್ಟಿ ಬಂದುಬಿಟ್ಟಿತ್ತು. ಇದರಿಂದ ಮಕ್ಕಳನ್ನು ದೂರವಿಡಲು ಹೊಲವನ್ನು ಮಾರಿ ಅವರನ್ನು ಬೆಳಗಾವಿಯ ಹಾಸ್ಟೇಲ್ ನಲ್ಲಿ ಇಟ್ಟು ಓದಿಸುತ್ತಿದ್ದಳು ಪಾರ್ವತಿ. ಹದಿನಾಲ್ಕು ವರ್ಷಗಳು ಕಳೆಯುವುದರೊಳಗಾಗಿ ಮಂಕಾಗಿಬಿಟ್ಟಿದ್ದ ಮಂಜಪ್ಪ. ಬಿಡುಗಡೆಯ ದಿನ ಮಕ್ಕಳಾಗಲೀ ಹೆಂಡತಿಯಾಗಲೀ ಬಂದಿರಲೇ ಇಲ್ಲ. ಭಾರವಾದ ಹೃದಯ ಹೊತ್ತು ಮನೆಯ ದಾರಿ ಹಿಡಿದಿದ್ದ ಮಂಜಪ್ಪ. ದಾರಿಯಲ್ಲಿ ಎಲ್ಲರೂ ಹಿಡಿಶಾಪ ಹಾಕುವವರೇ. ಮನೆ ತಲುಪಿದ ಮಂಜಪ್ಪ ಗೋಡೆಗೊರಗಿ ಕುಳಿತ. ಪಾರ್ವತಿ ಒಂದು ಮಾತನಾಡಲಿಲ್ಲ.‌ ಚಹ ತಂದು ಎದುರಿಗಿಟ್ಟು ಹಾಲು ಕರೆಯಲು ಕೊಟ್ಟಿಗೆಗೆ ಹೋದಳು. ಅವನೂ ಮಾತುಗಳನ್ನೇ ಮರೆತಿದ್ದ. ಚಂದ್ರಮ್ಮ ಮುಖ ಸೊಟ್ಟಗೇ ಮಾಡಿಕೊಂಡು ಮಂಜಪ್ಪನಿಗೆ ಹಿಡಿಶಾಪ ಹಾಕಿ ಹೋಗಿದ್ದಳು. ತಾನು ಮಾಡಿದ ಒಂದು ತಪ್ಪಿನಿಂದ ಎರಡು ಕುಟುಂಬಗಳು ಅಂತಂತ್ರವಾಗಿವೆ ಎನ್ನಿಸಿತು.ತನ್ನ ಬಗ್ಗೆ ತನಗೇ ಅಸಹ್ಯವೆನಿಸಿತು‌. ಒಂದೆರಡು ದಿನಗಳಾದ ಮೇಲೆ ಪಾರ್ವತಿ ಮಂಜಪ್ಪನಿಗೆ “ಮನ್ಯಾಗ ಕುಂತ ಏನ್ ಮಾಡ್ತಿ..ಎಮ್ಮಿ ಮೇಸೋ ಕೆಲ್ಸಾನಾದ್ರೂ ಮಾಡು. ಕಟ್ಟಿಕೊಂಡ ತಪ್ಪಿಗೆ ಕೂಳ ಹಾಕಬಕಲ್ಲ ನಿಂಗ ” ಎಂದಳು. ತಲೆಯಾಡಿಸಿದ ಮಂಜಪ್ಪ.. ಅಂದಿನಿಂದ ಎಮ್ಮೆ ಮೇಯಿಸುವ ಕಾರ್ಯ ಅವನದಾಯಿತು. ಜಲಪಾತಕ್ಕೆ ಹತ್ತಿರವಿರುವ ಜಾಗದಲ್ಲಿ ಹುಲ್ಲು ಮೇಯಿಸಲು ಎಮ್ಮೆಗಳನ್ನು ಕಟ್ಟಿ ಹಾಕಿ ಜಲಪಾತದ ತುದಿಗೆ ಹೋಗಿ ಕುಳಿತುಕೊಳ್ಳುತ್ತಿದ್ದ.ಮಕ್ಕಳ ಮುಖ ನೋಡಿ ಸಾಯಬೇಕೆಂದು ತೀರ್ಮಾನಿಸಿದ್ದ.ಮಕ್ಕಳಿಗೆ ಮಂಜಪ್ಪ ಜೈಲಿನಿಂದ ಬಿಡುಗಡೆಯಾಗಿ ಬಂದ ಸುದ್ದಿಯನ್ನು ಪೋನಿನ ಮೂಲಕ ತಿಳಿಸಿದ್ದಳು ಪಾರ್ವತಿ. “ಅವನು ಸಾಯುವವರೆಗೂ ತಾವು ಊರಿಗೆ ಬರುವುದಿಲ್ಲ ” ಎಂದಿದ್ದರು ಮಕ್ಕಳು. ಜಲಪಾತದ ತುದಿಯ ಜಾಗದಲ್ಲಿ ಕುಳಿತ ಅವನಿಗೆ ಮಲ್ಲಪ್ಪ ನೆನಪಾಗುತ್ತಿದ್ದ.ಚಿಕ್ಕವನಿದ್ದಾಗ ತಾನೊಮ್ಮೆ ಜಾರಿ ನೀರಿಗೆ ಬಿದ್ದಾಗ ಮಲ್ಲಪ್ಪನ ಅಪ್ಪ ತನ್ನನ್ನು ಕಾಪಾಡಿದ್ದು ನೆನಪಸಗುತ್ತಿತ್ತು.ಮಲ್ಲಪ್ಪ ಅಳುತ್ತಾ ಓಡಿಹೋಗಿ ತನ್ನ ಅಪ್ಪನನ್ನು ಕರೆತಂದಿದ್ದ.ಅದನ್ನು ನೆನೆದಾಗ ಅವನ ಕಣ್ಣಲ್ಲಿ ನೀರು ಬರುತ್ತಿತ್ತು.ಜೀವ ಕಾಪಾಡಿದವನ ಜೀವ ತೆಗೆದ ಬಗ್ಗೆ ಅಸಹ್ಯವೆನಿಸುತ್ತಿತ್ತು.ಜಲಪಾತ ನೋಡಲು ಬರುವ ಜನ ಅವನ ಗಡ್ಡ ಮೀಸೆ ತಲೆ ಕೂದಲು ನೋಡಿ ಅವನೊಬ್ಬ ಹುಚ್ಚನೆಂದು ತಿಳಿದಿದ್ದರು.ಅಲ್ಲಿಂದ ನಿಂತು ನೋಡಿದರೆ ಮಂಜಪ್ಪನಿಗೆ ತನ್ನ ಹೊಲ ಕಾಣುತ್ತಿತ್ತು.ಆಗ ಅವನಿಗೆ ದೂರದಲ್ಲಿ ಮಲ್ಲಪ್ಪನ  ಒದ್ದಾಡುತ್ತಿರುವ ರುಂಡ-ಮುಂಡಗಳು ಕಂಡಂತಾಗುತ್ತಿತ್ತು. ಒಂದು ವರ್ಷ ಹೀಗೆ ಕಳೆಯುವುದರಲ್ಲಿ ಅವನ ಈಗಿನ ಜೀವನ ಜೈಲಿನ ಜೀವನಕ್ಕಿಂತ ಕಠಿಣವೆನಿಸುತ್ತಿತ್ತು. ಮನುಷ್ಯರಿಗಿಂತ ಜಲಪಾತ ಎಮ್ಮೆಗಳ ಜೊತೆ ಕಾಲ ಕಳೆಯುತ್ತಿದ್ದ ಮಂಜಪ್ಪ. ಯಾರೋಬ್ಬರೂ ಅವನನ್ನು ಮಾತನಾಡಿಸುತ್ತಿರಲಿಲ್ಲ. ಜೀವನವೇ ಬೇಸರವೆನಿಸಿತು. ಮಕ್ಕಳು ಬೆಳಗಾವಿಯಲ್ಲಿ ಎಲ್ಲಿದ್ದಾರೆ ಎಂದು ಗೊತ್ತಿರಲಿಲ್ಲ. ಮನೆಯಲ್ಲಿ ಅವನಿಗೊಂದು ಮೂಲೆಯನ್ನು ಖಾಯಂಗೊಳಿಸಲಾಗಿತ್ತು .ಅವನಿಗೆ ಅಸ್ಪೃಶ್ಯನಂತೆ ಒಂದು ತಟ್ಟೆ ಲೋಟಾ ಕೊಟ್ಟಿದ್ದಳು ಪಾರ್ವತಿ. ಅವನ ಉದ್ದವಾಗಿ ಬೆಳೆದ ಗಡ್ಡ ಮೀಸೆ ತಲೆಕೂದಲು ನೋಡಿ ಮಕ್ಕಳು ಹೆದರುತ್ತಿದ್ದವು. ಆ ದಿನ ಮಕ್ಕಳನ್ನು ನೋಡಲು ಹೋದ ಪಾರ್ವತಿ ಬೆಳಗಾವಿಗೆ ಹೋಗಿದ್ದಳು. ಮುಂಜಾನೆ ಬೇಗನೇ ಹೋಗಿದ್ದರಿಂದ ಅನ್ನ ಮಾಡಿಟ್ಟಿದ್ದಳು. ಹಿಂಬಾಗಿಲಿನ ಕದ ಹಾಕಿರದೇ ಇದ್ದಿದ್ದರಿಂದ ನಾಯಿ ಬಂದು ಇದ್ದ ಅನ್ನವನ್ನೆಲ್ಲಾ ತಿಂದು ಹೋಗಿತ್ತು. ಮಂಜಪ್ಪ ಹೊಟ್ಟೆ ಹಸಿದುಕೊಂಡೇ ಕುಳಿತಿದ್ದ. ಚಂದ್ರಮ್ಮನ ದೊಡ್ಡ ಮಗಳು ಬಸಮ್ಮ ತವರಿಗೆ ಬಂದಿದ್ದಳು. ಅವಳಿಗೆ ಮೂರು ವರ್ಷದ ಮಗಳಿದ್ದಳು. ಮನೆಯ ಹೊರಗೆ ಕುಳಿತಿದ್ದ ಆ ಹುಡುಗಿ ಅನ್ನ ,ಹಾಲು ತಿನ್ನುತ್ತ ಕುಳಿತಿತ್ತು.ಹಸಿದ ಮಂಜಪ್ಪ ಆ ಹುಡುಗಿಯ ತಟ್ಟೆಯತ್ತ ನೋಡಿದ.ಆ ಮಗು ದಿನವೂ ಮಂಜಪ್ಪನ ಮುಖ ನೋಡಿತ್ತಿತ್ತಾದ್ದರಿಂದ ಹೆದರದೇ ಹತ್ತಿರ ಬಂತು.”ಅಜ್ಜಾ ಬೇಕೇನು ?,”ಅಂತು. ಮಂಜಪ್ಪನ ಕಣ್ಣು ತುಂಬಿ ಬಂತು.”ಯಾಕ ಅಜ್ಜಾ ಅಳ್ತಿ.. ತಿನ್ನು .. ಅಂತ ಕೈ ತುತ್ತು ಕೊಟ್ಟಿತು. ತಾನಿನ್ನು ಬದುಕಿರಬಾರದೆನಿಸಿತವನಿಗೆ. ತಾನು ಕೊಂದ ಮಲ್ಲಪ್ಪನ ಮನೆ ಕುಡಿ ಅದು..ಅದು ತನಗೆ ಕೈತುತ್ತು ಕೊಟ್ಟಿದೆ.ಛೇ ! ತಾನು ಕೇವಲ ಒಂದು ಇಂಚು ಬದುವಿಗಾಗಿ ಗೆಳೆಯನನ್ನೇ ಕೊಂದೆ ಎಂದು ಅತ್ತು ಬಿಟ್ಟ.ಆದರೆ ಈ ದಿನ ತನ್ನ ಪಾಲಿಗೆ ಆ ಹೊಲವೇ ಇಲ್ಲ.ತಾನು ಜೀವನದಲ್ಲಿ ಮಾಡಿದ್ದಾದರೂ ಏನು ?ಎಲ್ಲಾ ಸೊನ್ನೆಯೆನಿಸಿತು‌. ಮಂಜಪ್ಪ ರಾತ್ರಿ ಜಲಪಾತದ ಹತ್ತಿರ ಕುಳಿತು ಎಲ್ಲವನ್ನೂ ನೆನಪು ಮಾಡಿಕೊಂಡ. ಮನೆಗೆ ಮತ್ತೆ ಬರಲೇ ಇಲ್ಲ. ಜಲಪಾತದಿಂದ ಬಿದ್ದ ಮಂಜಪ್ಪನ ದೇಹ ಮತ್ತು ಅವನ ಕಪ್ಪು ಕಂಬಳಿ ಘಟಪ್ರಭಾ ನದಿಯಲ್ಲಿ ತೇಲುತ್ತಿದ್ದವು…

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!