ಕಥೆ

ಪ್ರೀತಿ ಬೆರೆತಾಗ…

‘ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ … ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನ ಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್ಲೆ ಬೇಕು.. ಇಲ್ಲ ಅಂದ್ರೆ ನಾನು ಹುಚ್ಚಿಯಾದೆನು ‘ ಎಂದು ಯೋಚಿಸುತ್ತಾ ಶಾಂತಿ  ಕಣ್ಣು ಮುಚ್ಚಿದಳು. ದಿನವಿಡಿ ಅರೆ ಕ್ಷಣವೂ ಪುರುತ್ತಿಲ್ಲದೆ ದುಡಿದು ದಣಿದಿದ್ದ ಆಕೆ ನಿದ್ರೆಗೆ ಜಾರಲು ವಣಿಸುತ್ತಿದ್ದರೂ ಮನದೊಳಗಿನ  ದುಗುಡ ಅಲೆ ಅಲೆಯಾಗಿ ಎದ್ದು ಆಕೆಯ ಚಿತ್ತವನ್ನು ಕಲಕುತ್ತಿದ್ದವು. ಮರುದಿನ ಭಾನುವಾರವಾದ್ದರಿಂದ ತಲೆಯ ಮೇಲಿದ್ದ ಅಲಾರ್ಮ್ ಅನ್ನು ಆಫ್ ಮಾಡಿದಳು. ಬೆಳಗ್ಗೆ ನಿದಾನವಾಗಿ ಎದ್ದು ಶಾಸ್ತ್ರೀಯ ಸಂಗೀತವನ್ನು ಕೇಳಿದರಾಯಿತು, ಕೊಂಚ ಸಮಾಧಾನವಾಗಬಹುದು ಎಂದುಕೊಂಡಳು. ಬಹಳ ಹೊತ್ತು ನರಳಿದ ಆಕೆಯ ಕಣ್ಣುಗಳು ಯಾವಾಗ ನಿದ್ರೆಗೆ ಜಾರಿದವೆಂದು ಆಕೆಗೆ ತಿಳಿಯಲಿಲ್ಲ.

ಆಗಷ್ಟೇ ಹಕ್ಕಿಗಳ ಚಿಲಿಪಿಲಿ ಸದ್ದು ಶುರುವಾಗತೊಡಗಿತ್ತು. ಪಾತ್ರೆಗಳನ್ನು ಒಂದರ ಮೇಲೊಂದರಂತೆ ಕುಕ್ಕುವ ಸದ್ದು ಸಹ ಅದರೊಳಗೆ ಬೆರೆಯತೊಡಗಿತು. ಅಪ್ಪ ಅಮ್ಮರ ಹೊಸದೊಂದು ವಿಷಯದ ಕುರಿತ ಕಿತ್ತಾಟಕ್ಕೆ ಇದು ನಾಂದಿಯಾಗಿತ್ತು ಎಂದು ಅರಿಯಲು ಶಾಂತಿಗೆ ಬಹಳ ಸಮಯ ಹಿಡಿಯಲಿಲ್ಲ. ಅಪ್ಪ ಅರಚಿ ಸುಮ್ಮನಾದ ಅನ್ನುವುದರೊಳಗೆ ಅಮ್ಮನ ಕೊಂಕು ಮಾತುಗಳು. ಅದರ ಸಿಟ್ಟನ್ನು ಪಾತ್ರೆಗಳ ಮೇಲೆ ತೋರಿ ಮೂಡುವ ವಿಭಿನ್ನ ಸದ್ದುಗಳು. ನಿರ್ಮಲ ಶಾಂತ ಮುಂಜಾವಿನ  ರಾಗವನ್ನು ಅಲ್ಲೋಲ ಕಲ್ಲೋಲ ಮಾಡಿದ ಹಾಗಿತ್ತು. ಎಷ್ಟೋ ಹೊತ್ತು ನೆಡೆದ ವಾಕ್ ಸಮರ ಕೆಲ ಘಂಟೆಗಳ ನಂತರ ನಿಂತಿತು. ನಿಧಾನವಾಗಿ ಎದ್ದು ರೆಡಿಯಾಗಿ ಹೊರಬಂದ ಶಾಂತಿ ಅಡುಗೆ ಮನೆಯನ್ನು ಹೊಕ್ಕಳು. ಅದಾಗಲೇ ಎಲ್ಲ ಪಾತ್ರೆಗಳನ್ನು ಎಲ್ಲೆಂದರಲ್ಲಿ ಬಿಟ್ಟು ಅಮ್ಮ ಮಲಗುವ ಕೋಣೆಯನ್ನು ಸೇರಿದ್ದಳು. ರೊಟ್ಟಿಗಾಗಿ ಅನ್ನ ಹಾಗು ಅಕ್ಕಿಯ ಹಿಟ್ಟಿನಿಂದ ಮಾಡಿದ ಉಂಡೆಗಳು ಹಾಗು ಅರೆಬೆಂದ ಕೆಲವು ರೊಟ್ಟಿಗಳು. ಅಪ್ಪ ಬೈದ  ಕಾರಣದಿಂದ ಸಿಡುಕಿ ಹಾಗೆ ಬಿಟ್ಟು ಹೋಗಿದ್ದಾಳೆ. ಇದು ಅವರ ದಿನನಿತ್ಯದ ದಿನಚರಿಯಾಗಿದ್ದರಿಂದ ಹೆಚ್ಚೇನೂ ಚಿಂತಿಸದ ಶಾಂತಿ ತನ್ನ ಮಟ್ಟಿಗೆ ಒಂದು ಲೋಟ  ಟೀಯನ್ನು ಮಾಡಿಕೊಂಡು ಟಿವಿಯ ಮುಂದೆ ಬಂದು ಕೂತಳು.

ಬುಸುಗುಡುತ್ತಾ ಹೊರಗಿನಿಂದ ಬಂದ ಅಪ್ಪ ಸೋಫಾದ ಮೇಲೆ ಕುಳಿತು ಮುಂದಿದ್ದ ಸಣ್ಣ ಮೇಜಿನ ಮೇಲೆ ತನ್ನ ಕಾಲನ್ನು ಚಾಚಿದ. ದಾರಿಯಲ್ಲಿ ತುಳಿದ ಕೆಸರಿನ ಕಲೆ ಪಾದದ ಸುತ್ತ ಕೆಂಪಾಗಿ ಕಾಣತೊಡಗಿತ್ತು. ಹೊರಗಿನಿಂದ ಬಂದು ಕಾಲಿಗೆ ನೀರನ್ನು ಹಾಕಿ ಶುಚಿ ಮಾಡಿಕೊಳ್ಳಬೇಕು ಅನ್ನುವ ಪರಿಜ್ಞಾನವಿಲ್ಲದೆ ಕೂತ ಆತನನ್ನು ಕಂಡು ಶಾಂತಿಯ ಕೋಪ ಜಾಸ್ತಿಯಾಯಿತು. ಆದರೆ ಈ ವಯಸ್ಸಿನಲ್ಲೂ  ಸಂತೆಯಿಂದ  ತರಕಾರಿ, ಬೇಳೆ, ಕಾಳುಗಳನ್ನು ಹೊತ್ತು, ಹಣ ಉಳಿಸುವ ಕಾರಣಕ್ಕಾಗಿ ನೆಡೆದೇ ಬರುವ ಆತನನ್ನು ಕಂಡು ಜೀವ ಮರುಗಿತು. ಕೆಲಹೊತ್ತು ಸುಮ್ಮನಿದ್ದ ಅಪ್ಪ ಇದ್ದಕ್ಕಿದಂತೆ ‘ತಿಂಡಿ….’ ಎಂದು ಅರಚಿದ ಕೇಳಿ ಶಾಂತಿ  ಮಿಡುಕಿದಳು. ‘ಬೇಕಾದ್ರೆ ಮಾಡ್ಕೊಂಡ್ ತಿನ್ ಬಹುದು’ ಎಂದು ಅಮ್ಮ ಮಲಗುವ ಕೋಣೆಯಿಂದಲೇ ಕೂಗಿದಳು. ‘ಕೂತು ತಿನ್ನೋಕ್ಕೆ ಸಿಕ್ಕಿದ್ರೆ ಇದೆ ರೀತಿ ಮಾತಾಡೋದು’ ಎನ್ನುತ ಬಾಯಿಗೆ ಬಂದ ಹಾಗೆ ಅಮ್ಮನನ್ನು ಶಪಿಸಿದ ಅಪ್ಪ ದಡಬಡನೆ ಅಡುಗೆ ಮನೆಗೆ ನುಗ್ಗಿ ಅರೆಬೆಂದ ರೊಟ್ಟಿಗಳನ್ನೇ ಒಂದೆರೆಡು ಬಾಳೆಹಣ್ಣಿನೊಟ್ಟಿಗೆ ಗಬಗಬನೆ ನುಂಗಿ ಕೂತ. ‘ಕೈ ಕಾಲು ತೋಳ್ಯೋದು, ಸ್ನಾನ ಮಾಡೋದು, ಪೂಜೆ ಮಾಡೋದು ಏನೂ ಇಲ್ಲ’ ಎಂದು ಸುಮ್ಮನಿರದ ಅಮ್ಮ ಮತ್ತೊಮ್ಮೆ ಕೂಗಿದಳು. ಸಂತೆಯಿಂದ ಬಂದು, ತಿಂದು, ಪಕ್ಕದ ಕೋಣೆಯಲ್ಲಿ ಹಾಗೆಯೇ ಬಿದ್ದಿದ್ದ ಅಪ್ಪ ‘ನೀನ್ಯಾವಳೇ ಕೇಳೋಕ್ಕೆ’ ಎಂದು ಕೋಪದಿಂದ ಎದ್ದು ಅಮ್ಮ ಮಲಗಿದ್ದ ಕೋಣೆಗೆ ಆವೇಶದಿಂದ ಓಡಿದ. ಒಳಗಿನಿಂದ ಅಗುಣಿಯನ್ನು ಹಾಕಿ ಅಮ್ಮ ಮಲಗಿದ್ದಳು. ಅಪ್ಪ ದಬಡಬನೆ ಬಾಗಿಲನ್ನು ಬಡಿಯತೊಡಗಿದ. ವಯಸ್ಸಿಗೆ ಬಂದ ಮಗಳ ಮುಂದೆಯೇ ಇವರು ಹೀಗೆ ಕಿತ್ತಾಡುತ್ತಾರಲ್ಲ ಎನ್ನುತ ಶಾಂತಿ ಮರುಗತೊಡಗಿದಳು. ಸಿಟ್ಟಿನಿಂದ ಕೈಯ್ಯಲ್ಲಿದ್ದ  ಗಾಜಿನ ಲೋಟವನ್ನು ಮುಷ್ಟಿಯಿಂದ ಗಟ್ಟಿಯಾಗಿ ಒತ್ತತೊಡಗಿದಳು. ಗಾಜಿನ ಲೋಟವು ಒಡೆಯಿತು. ಕೆಲವೇ ಕ್ಷಣದಲ್ಲಿ ಕೈಯಲ್ಲ ರಕ್ತಮಯವಾಯಿತು. ಗಾಯದಿಂದ ಆದ ನೋವಿಗಿಂತ ಅಪ್ಪ ಅಮ್ಮನ ಕಿತ್ತಾಟದ ನೋವೇ ಜಾಸ್ತಿಯಾಗಿ ದುಃಖ ಉಮ್ಮಳಿಸಿ ಬಂದಿತು. ಕೆಲಹೊತ್ತು ಅತ್ತು ಸುಮ್ಮನಾಗಿ, ಒಂದು ಬಿಳಿ ಬಟ್ಟೆಯನ್ನು ತೆಗೆದು ಕೈಗೆ ಕಟ್ಟಿಕೊಂಡಳು. ಏನೋ  ದೃಢ ನಿಶ್ಚಯವನ್ನು ಮಾಡಿಕೊಂಡ ಹಾಗೆ ಕಣ್ಣುಗಳನ್ನು ಒರೆಸಿಕೊಂಡು ಎದ್ದು ನಿಂತಳು. ಗೊತ್ತಾಗದಿರಲೆಂದು ಹೊಡೆದ ಗಾಜಿನ ಚೂರುಗಳನ್ನು ಎತ್ತಿ ಹೊರಎಸೆದಳು. ‘ಹೀಗೆ ಒಟ್ಟಿಗೆ ಇದ್ರೆ ಜಗಳ ಆಡ್ಕೊಂಡೇ ಸತ್ತ್ ಹೂಗ್ತೀರ …ಟ್ಯಾಕ್ಸಿ ಗೆ ಫೋನ್ ಮಾಡಿದ್ದೀನಿ..ಇಬ್ಬರಿಗೂ ಬೇರೆ ಬೇರೆ ಆಶ್ರಮನ ಬುಕ್ ಮಾಡಿದ್ದೀನಿ.. ನಂಗೆ ಆಫೀಸ್ ಕೆಲ್ಸದ ಮೇಲೆ ಬೇರೆ ಊರಿಗೆ ಡ್ಯೂಟಿ  ಹಾಕಿದ್ದಾರೆ. ಒಂದ್ ತಿಂಗ್ಳು. ಬಂದ್ಮೇಲೆ ಕರ್ಕೊಂಡ್ ಬರ್ತೀನಿ..’ ಎಂದು ಸುಳ್ಳು ಹೇಳಿ ಮನೆಯಿಂದ ಹೊರಟಳು. ‘ಕೈಗೆ ಏನಾಯಿತೆ?’ ಕರುಣೆಯ ಸ್ವರದಲ್ಲಿ ಅಮ್ಮ ಕೂಗಿದಳು. ಅಳು ಉಕ್ಕಿ ಬರುತ್ತಿತ್ತು. ಸಾಧ್ಯವಾದಷ್ಟು ತಡೆದು ರಸ್ತೆಗೆ ಬಂದು ಆಟೋವೊಂದನ್ನು ಹಿಡಿದು ಊರ ಹೊರವಲಯದಲ್ಲಿದ ಸಂಗೀತ ಶಾಲೆಯ ಬಳಿಗೆ ಹೋದಳು.

ನಗರದ ಸದ್ದು ಗದ್ದಲವಿಲ್ಲದೆ ಪ್ರಶಾಂತ ವಾತಾವರಣದಲ್ಲಿದ್ದ ಸಂಗೀತ ಶಾಲೆಗೆ ಶಾಂತಿ ವಾರಕೊಮ್ಮೆಯಂತೆ ಸಂಗೀತ ಕಲಿಯಲು ಬರುವುದುಂಟು. ನಿರ್ಭಾವುಕಳಾಗಿ ಅಲ್ಲಿನ ಆಲದ ಮರದ ಕೆಳಗೆ ಕೂತಳು. ಜಗಳವೇ ಜೀವನವಾಗೋಯಿತು, ಇವರ ಜೀವನಕ್ಕೊಂದು ಅರ್ಥ ಇದೆಯಾ? ಸಣ್ಣ ಪುಟ್ಟ ವಿಷಯಗಳಿಗೂ ಇಷ್ಟೊಂದು ಕಿತ್ತಾಡಬೇಕಾ? ಇಷ್ಟೊಂದು ಸೌಕರ್ಯಗಳಿದ್ದರೂ ಶಾಂತಿಯಿಂದ, ಸಂತೋಷದಿಂದ ಇರಲು ರೋಗವೇನು ಇವಕ್ಕೆ? ಗುಡಿಸಲಲ್ಲಿ ಗಂಜಿ ಅನ್ನ ಉಂಡು ಸಂಸಾರ ಮಾಡುವ ಕುಟುಂಬಕ್ಕಿರುವ ನೆಮ್ಮದಿ ನಮ್ಮ ಮನೆಯಲ್ಲಿ ಇಲ್ಲವಾಯಿತಲ್ಲ ಎಂದು ನೊಂದುಕೊಂಡಳು. ಆಶ್ರಮಕ್ಕೆ ಹೋಗಲು ಹೇಳಿದ್ದು ಒಳ್ಳೆಯದೇ ಆಯಿತು ಎಂಬ ಸಮರ್ಥನೆ ಒಳಗೊಳಗೇ ಮೂಡಿತು. ಹೋಗಿರುತ್ತಾರಾ, ಅಥವಾ ಟ್ಯಾಕ್ಸಿಯವನಿಗೆ ಬೈದು ವಾಪಾಸ್ ಕಳುಹಿಸಿರುತ್ತಾರಾ ಎಂಬ ಚಿಂತೆ ಕೂಡ ಮೂಡಿತು.

ಅಮ್ಮ ಅದೆಷ್ಟು ಕೆಲ್ಸ ಮಾಡ್ತಾಳೆ! ಅವಳಷ್ಟು ಕಷ್ಟ ಪಡೋರನ್ನ ನಾನೆಲ್ಲೂ ನೋಡಿಲ್ಲ. ಆದ್ರೂ ಅಪ್ಪಂಗೆ ಯಾಕೆ ಅಷ್ಟು ಸಿಟ್ಟು ಅಂತ ತಿಳಿಯದು.. ಕಂಡ ನೆರಳಿಗೆ ಆಗೋಲ್ಲ. ವೈರಿಗಳ ಹಾಗೆ ಕತ್ತಿ ಮಸೀತಾ ಇರ್ಥಾನೇ. ಸಾಲದಕ್ಕೆ ಕುಡಿತ ಬೇರೆ. ಅವಳ ಜೀವನವನ್ನೇ ನರಕ ಮಾಡಿದ ಪಾಪಿ ಎಂದೆಲ್ಲ ಶಪಿಸತೊಡಗಿದಳು. ಪ್ರೀತಿಗಿಂತ ಹೆಚ್ಚಾಗಿ ಮಕ್ಕಳಿಗೆ ಬೇಕಾಗಿರೋದು ಒಳ್ಳೆಯ ನೀತಿ. ತಮ್ಮ ನಡತೆಯನ್ನೇ ಮಕ್ಕಳು ಕಲೀತಾರೆ ಅನ್ನೋ ಕಾಮನ್ಸೆನ್ಸ್ ಇಲ್ಲದೆ ಕಿತ್ತಾಡ್ತಾ ಇದ್ರು. ಮಕ್ಕಳ ಮುಂದೇನೆ ಕುಡಿಯೋದು, ಅಮ್ಮನಿಗೆ ಬಾಯಿಗೆ ಬಂದ ಹಾಗೆ ಬಯ್ಯೋದು. ಯಾರೊಬ್ಬರೂ ನಮ್ಮ ಮನೆಗೆ ಬರಲು ಹಿಂಜರಿಯುತ್ತಿದ್ದರು. ಬಂದರೂ ಬೆಳಗ್ಗೆ ಬಂದು ಸಂಜೆಯ ಒಳಗೆ ಹೊರಟುಬಿಡುತ್ತಿದ್ದರು. ಎಲ್ಲಿಯಾದರೂ ಈತ ಕುಡಿಯಲು ಕೂತು ಎಲುಬಿಲ್ಲದ ನಾಲಿಗೆಯಿಂದ ಕೂಗಲು ಶುರು ಮಾಡಿಬಿಟ್ಟಾನು ಎಂಬ ಹೆದರಿಕೆಯಿಂದ. ಯಾರೊಬ್ಬ ನೆಂಟರಿಷ್ಟರ ಹುಡುಗರೂ ನಮ್ಮ ಮನೆಗೆ ಇಷ್ಟ ಪಟ್ಟು ಬಂದಿರುವುದ ಕಾಣೆ. ಕಾಲೇಜಿನಲ್ಲಿ ಓದಲು ಹಾಸ್ಟೆಲ್ನಲ್ಲಿದ್ದಾಗ ರಜೆಯಲ್ಲಿ ಎಲ್ಲರೂ ಮೆನೆಗೆ ಖುಷಿ ಖುಷಿ ಯಾಗಿ ಹೊರಟರೆ ನನ್ನೊಳಗೆ ಒಂದು ದುಗುಡ. ಈ ರಜೆ ಏತಕ್ಕಾದರೂ ಬರುತ್ತದೋ ಎನ್ನಿಸುತ್ತಿತ್ತು. ಆತ ಕುಡಿಯಲು ಕೂತರೆ ಅದೆಷ್ಟು ಭಯ! ಎಲ್ಲಿ ಅರಚುತ್ತಾನೋ, ಅಮ್ಮನನ್ನು ಹೊಡೆಯುತ್ತಾನೋ ಅನ್ನುವ ಚಿಂತೆ ಆವರಿಸಿ ಹಿಂಡುತ್ತಿತ್ತು. ಎಲ್ಲಿ ಪಕ್ಕದ ಮನೆಯವರು ಕೇಳುತ್ತಾರೋ ಎನ್ನುವ ಆತಂಕ, ಅವರ ಮುಂದೆ ನಾವು ತಲೆ ಎತ್ತಿ  ನೆಡೆಯಲೂ ಆಗದಂತಹ ಸ್ಥಿತಿ. ನಾಚಿಕೆ, ಅಂಜಿಕೆ.  ದಿನವೆಲ್ಲಾ ಅದೇ ಚಿಂತೆ. ಇಷ್ಟವಿರುವ ವಿಷಯದಲ್ಲಿ ತೊಡಗಿಸಿಕೊಳ್ಳಲಾಗದ ಸ್ಥಿತಿ. ಗೆಳೆಯರೊಂದಿಗೆ ಮುಕ್ತವಾಗಿ ನಗಲೂ ಆಗದು. ಒಂದು ಪಕ್ಷ ನಕ್ಕರೂ ಅಮ್ಮನ ಕೊರಗುವ ದೃಶ್ಯ ಕಣ್ಣ ಮುಂದೆ ಬಂದು ಬಿಡುತ್ತಿತ್ತು. ನಗು ಅಲ್ಲಿಗೆ ನಿಂತು ಕಲ್ಲಾಗುತ್ತಿತ್ತು. ಒಬ್ಬ ವಿದ್ಯಾರ್ಥಿಯಾಗಿ ಸಾಮಾಜಿಕ ಜೀವನದಲ್ಲಿ ಮುಕ್ತವಾಗಿ ತೊಡಗಿಸಿ ಕೊಳ್ಳಲಾಗದ ಸ್ಥಿತಿ. ಒಳ್ಳೆ ಶಾಲೆಗೇ ಅಥವಾ ಕಾಲೇಜಿಗೆ ಸೇರಿಸಿದ್ದೀನಿ ಅನ್ನುವುದನ್ನು ಬಿಟ್ಟರೆ ಬೇರೇನೂ ತಿಳಿಯದು. ಅದಕ್ಕೆ ಪೂರಕವಾದ ಮನೆಯ ವಾತವರಣವನ್ನೂ ಸಹ ನಿರ್ಮಿಸಿ ಕೊಡಬೇಕೆಂಬುದು ಇವಕ್ಕೆ ತಿಳಿಯಲಿಲ್ಲ. ಈ ಚಿಂತೆ ಎಂಬುದೊಂದಿಲ್ಲದಿದ್ದರೆ ನಾನು ಇನ್ನೂ ಬೆಳೆಯುತ್ತಿದ್ದೆ. ಬೌಧಿಕವಾಗಿ ಹಾಗು ಮಾನಸಿಕವಾಗಿಯೂ ಸಹ.

ಹುಡುಗರೊಂದಿಗೆ ದೃಷ್ಟಿಯಿಟ್ಟು ಮುಕ್ತವಾಗಿ ಮಾತನಾಡಲು ಭಯ. ಪ್ರೀತಿಯನ್ನು ಹೇಳಿಕೊಳ್ಳ ಲೂ ಸಹ ಭಯ. ಕಾಲೇಜಿನ ಅವನನ್ನು ಅದೆಷ್ಟು ಇಷ್ಟ ಪಟ್ಟಿದ್ದೆ ನಾನು. ಅವನಿಗೂ ನನ್ನ ಮೇಲೆ ಪ್ರೀತಿಯಿತ್ತು ಎನ್ನುವುದು ನನಗೆ ಗೊತ್ತಿತ್ತು. ಮನೆಯ ವಾತಾವರಣ, ಅದರಲ್ಲೂ  ನನ್ನ ಒರಟು ಪೋಷಕರು, ಅವರ ಸಣ್ಣ ಬುದ್ದಿ ನನ್ನ ಇನ್ನೂ ಕಾಡಿತು. ಇವರನ್ನು ಹೇಗೆ ಅವನಿಗೆ ಪರಿಚಹಿಸಲಿ? ಸಾಧ್ಯವೇ ಇಲ್ಲ. ಅಮ್ಮನೊಟ್ಟಿಗಂತೂ ಈ ವಿಷಯವನ್ನು ಹೇಳಿಕೊಳ್ಳುವ  ಮಾತೆ ಇಲ್ಲ. ಆಕೆಯ ಜೀವನದಲ್ಲೇ ಕಾಣದ ಅಂಶವನ್ನು ನಾನು ಆ ಹುಡುಗನಲ್ಲಿ ಕಂಡೆ ಎಂದರೆ ಆಕೆಗೆ ಎಲ್ಲಿ ಅರ್ಥವಾದೀತು? ಒರಟು ಮಾತುಗಳಿಂದ ಶಪಿಸಿಯಾಳು, ಅಷ್ಟೇ. ಪ್ರತಿ ಬಾರಿ ಇವರು ಜಗಳವಾಡಿದಾಗಲೆಲ್ಲ ಅವನೇ ನೆನಪಿಗೆ ಬರುತ್ತಿದ್ದ. ಇವರ ಮುಂದೆ ಅವನನ್ನು ಕಲ್ಪಿಸಿ ತಂದು ನಿಲ್ಲಿಸಿದರೆ ನನ್ನ ಮಾನವೇ ಹೋದಂತೆ ಅನಿಸುತ್ತಿತ್ತು. ಇವನ್ನೆಲ್ಲ ನೋಡಿ ಕಂಡಿತಾ ಅವನು ನನ್ನ ಒಪ್ಪನು ಎಂದೆನಿಸುತ್ತಿತ್ತು. ಎಳೆಯ ವಯಸ್ಸಿನ ಅರಳುವ ಪ್ರೀತಿ ಅರಳುವ ಮೊದಲೇ ಕಮರಿ ಹೋಗಿತ್ತು.

ತಮ್ಮನೇ ಆಗಬಹುದು. ಮನೆಯಿಂದ ಹೋಗಿಬರುವ ಕೆಲಸ ಸಿಕ್ಕಿದರೂ ಆತ ಆಯ್ದು ಕೊಂಡಿದ್ದು  ದೂರದ ದೆಹಲಿಯ ಕೆಲಸವನ್ನೇ. ವರ್ಷಕ್ಕೆ ಒಮ್ಮೆ ಬಂದರೂ ಹೆಚ್ಚಿನ ಕಾಲ ಮನೆಯ ಹೊರ ಗೇ  ಕಳೆಯುತ್ತಾನೆ. ಅವನಿಗೂ ಇವರೆಂದರೆ ಅಷ್ಟಕಷ್ಟೆ. ಇವರ ಆರೈಕೆಗೆ ನಾನು ಇಲ್ಲೇ ಉಳಿದೆ. ದೆಹಲಿ ಅದೆಷ್ಟು ಚಂದ. ವಿಶ್ವದ  ಎಲ್ಲಾ ಬಗೆಯ ಜನ, ಸಂಸ್ಕೃತಿ, ತಿಂಡಿ-ತಿನಿಸುಗಳು. ಸ್ವರಮಾಲೆಗೆ ಗಮಕಗಳನ್ನು ಬೆರೆಸಿದ ಹಾಗೆ ಇರುವ ಹಸಿರಾದ ರಸ್ತೆಗಳು. ತುಸು ದೂರಕ್ಕೇ ಮಂಜಿನ ಪರ್ವತಗಳು. ಶಾಂತಿ. ನಾನು ರಾಗಗಳಲ್ಲಿ ಅರಸುವ ಶಾಂತಿ ಅದೇ ಪರ್ವತಗಳ ಮೇಲೆ ಇದೆ ಎಂದನಿಸುತ್ತದೆ. ತಂಬುರಾವನ್ನು ಹಿಡಿದು ದಿನವೆಲ್ಲಾ ಆ ಪರ್ವತಗಳ ಕೆಳಗೆ ಕೂತು ಹಾಡಬೇಕು. ಸೂರ್ಯೋದಯ, ಸೂರ್ಯಾಸ್ತಕ್ಕೆ ತಕ್ಕ ರಾಗವನ್ನು ಹಾಡುತ್ತಾ, ಪ್ರಕೃತಿಯ ಸೊಭಗನ್ನು ಸವಿಯುತ್ತಾ, ಇವರ ಕಿತ್ತಾಟದಿಂದ ದೂರ, ಬಹು ದೂರ ಹೋಗಬೇಕು… ಸಂಗೀತ ಸಾಧನೆ. ಅದರಲ್ಲೂ ಹಿಂದುಸ್ಥಾನಿ. ಸಂಜೆಯ ತಿಳಿಗಾಳಿಯಂತೆ ಜಾರಿ ಹೋಗುವ  ಆ ರಾಗ ಗಳನ್ನು ಹಾಡಬೇಕು. ಹಾಡುತ್ತಲೇ ಅಳಬೇಕು. ಅತ್ತು ಅತ್ತು ಕಣ್ಣೀರು ಇಂಗುವರೆಗೂ ಹಾಡಬೇಕು. ಬಾಲ್ಯದಿಂದ ಅಡಗಿರುವ ಭಯ, ನೋವುಗಳೆಲ್ಲ ಕರಗುವವರೆಗೂ ಹಾಡಬೇಕು…

ತನ್ನ ಕೈಗಡಿಯಾರವನ್ನು ನೋಡಿದಳು. ಮನೆ ಬಿಟ್ಟು ಮೂರು ತಾಸಾಯಿತು.

ಇಷ್ಟರೊಳಗೆ ಹೋಗಿರಬಹುದು.

ಸೂರ್ಯ  ನತ್ತಿಯ ಮೇಲೆ ಬಂದರೂ ಆಲದ ಮರದ ಕೆಳಗೆ ಹಕ್ಕಿಗಳ ಸದ್ದು ಇನ್ನೂ ಮುಂಜಾವಿನ ಭಾವವನ್ನು ಸ್ಪುರಿಸುತ್ತಿದ್ದವು. ಹಾಗೆಯೆ ಮರದ ಕೊಂಬೆಯೊಂದರ ತುದಿಯಲ್ಲಿದ್ದ ಹಕ್ಕಿಯ ಗೂಡನ್ನು ದಿಟ್ಟಿಸಿ ನೋಡುತ್ತಾಳೆ. ತಾಯಿ ಮರಿ ತನ್ನ ಮಕ್ಕಳಿಗಾಗಿ ತಂದ ಆಹಾರವನ್ನು ಹಿಗ್ಗಿಸಿ ಬಿಡುವ ಅವುಗಳ ಬಾಯಿಯೊಳಗೆ ಹಾಕುತ್ತಿತ್ತು. ಪುರ್ರೆಂದು ಹಾರುವುದು, ಆಹಾರವನ್ನು ಹುಡುಕುವುದು. ಮಕ್ಕಳ ಬಾಯಿಯೊಳಗೆ  ತಂದು ಹಾಕುವುದು. ಅವೆಷ್ಟು ಕಷ್ಟದ ದಿನಗಳು. ತಿನ್ನಲೂ ಒಂದೊತ್ತು ಊಟಕ್ಕೂ ಕಷ್ಟ ಪಡಬೇಕಾದ ದಿನಗಳು. ಆರೋಗ್ಯ ಸರಿಯಿಲ್ಲದಿದ್ದರೂ ದಿನವಿಡೀ ದುಡಿಯುವ ಅಪ್ಪ. ಇದ್ದದ್ದರಲ್ಲೇ ಸಂಬಾಲಿಸಿಕೊಂಡು ಹೋಗುವ ಅಮ್ಮ. ಕಷ್ಟ ಅಷ್ಟಿದ್ದರೂ ಮಕ್ಕಳಿಬ್ಬರನ್ನೂ ಓದಿಸಿ ವಿದ್ಯಾವಂತರಾಗಿ ಮಾಡಿದರು. ನಾಳೆ ನಾನು ಮದುವೆಯಾಗಿ ಮಕ್ಕಳಾದ ಮೇಲೆ ಅದೇ  ರೀತಿಯ ಕಷ್ಟವೇನಾದರೂ ಬಂದರೆ, ನಾನೂ  ಅಮ್ಮ ಅಪ್ಪರ ಹಾಗೆ ದುಡಿದು, ಸಾಕಿ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಕಿಂಚಿತ್ತೂ ಧಕ್ಕೆ ಬಾರದ ಹಾಗೆ ನೋಡಿಕೊಳ್ಳ ಬಲ್ಲೇನ? ನನಗೆ ಅಷ್ಟು ಧೈರ್ಯ ಹಾಗು ಶಕ್ತಿ ಬರಬಲ್ಲದ? ಎಂದು ಯೋಚಿಸತೊಡಗಿದಳು. ತಾಯಿ ಹಕ್ಕಿ ಮತ್ತೊಮ್ಮೆ ಆಹಾರವನ್ನು ಕಚ್ಚಿ ತಂದಿತು. ಹಕ್ಕಿಗಳು ಬಾಯಿ ತೆರೆದಿದ್ದವು. ಮದುವೆ ಅಥವಾ ಇನ್ಯಾವುದೇ ಸಮಾರಂಭದಲ್ಲಿ ಊಟಕ್ಕೆ ಬಡಿಸುವ ಸಿಹಿ ತಿಂಡಿಯನ್ನೂ ತಿನ್ನದೆ, ಕಾಗದದಲ್ಲಿ ಕಟ್ಟಿ ಮನೆಗೆ ತರುತ್ತಿದ್ದರು. ಇಬ್ಬರೂ. ನಮ್ಮಿಬ್ಬರಿಗೂ. ದುಃಖವನ್ನು ನುಂಗಿಕೊಂಡೆ ಅವರು ಕಾಲ ದೂಡಿದರು ಎಂದುಕೊಂಡಾಗ ಶಾಂತಿಯ ಮನ ಮರುಗಿತು. ಸಣ್ಣವಳಿದ್ದಾಗ ಅಪ್ಪ ಅಮ್ಮರನ್ನೇ ದಿನವೆಲ್ಲಾ ಶಾಲೆಯಲ್ಲಿ ಕಾಯುತ್ತಾ ಕೊನೆಗೆ ಅವರು ಬಂದಾಗ ಅದೆಷ್ಟು ಖುಷಿ. ಬಿಗಿದಾಗಿ ಓಡಿಬಂದು ಅವರನ್ನು ಹಿಡಿಯುತ್ತಿದ್ದೆ. ಆ ಭಾವ ಮತ್ತೆ ಮೂಡಬಾರದೆ…?

ದೂರದಲ್ಲಿ ಹಣ್ಣಿನ ಗಿಡಗಳ ಬುಡಕ್ಕೆ ಮಣ್ಣು ಕೊಡುತ್ತಿದ್ದ ಗುರೂಜಿ ಕಂಡರು. ವಯಸ್ಸು ಅರವತ್ತಾದರೂ ಯಾರ ಹಂಗಿಲ್ಲದೆ ಸ್ವಂತ ಶಾಲೆಯನ್ನು ನೆಡೆಸುತ್ತಾರೆ. ಮಕ್ಕಳು ಒಳ್ಳೆಯ ಕೆಲಸದ ಮೇಲಿದ್ದಾರೆ. ಅವರು ಕರೆದರೂ ಇವರು ಹೋಗುವುದು ಬಹಳ ಅಪೂರ್ವ. ಬೆಳಗ್ಗೆ ಹಾಗು ಸಂಜೆ ಸಂಗೀತದ ಪಾಠಗಳನ್ನು ಹೇಳಿ ಉಳಿದ ಸಮಯವೆಲ್ಲ ಹಣ್ಣಿನ ತೋಟದಲ್ಲೇ ಕಳೆಯುತ್ತಾರೆ. ಶ್ರಮಜೀವಿ. ಈ ತಿಂಗಳ ಫೀಸ್ ಅನ್ನು ಕೊಟ್ಟು ಅಶ್ರಿವಾದ ತೆಗೆದುಕೊಂಡು  ಬರಲು ಆ ಕಡೆ ಹೊರಟಳು. ಗುರೂಜಿಗೆ ನಮಸ್ಕರಿಸಿ ತನ್ನ ಬ್ಯಾಗಿನಿಂದ ನೂರರ ನೋಟುಗಳನ್ನು ತೆಗೆದು ಎಣಿಸತೊಡಗಿದ ಅವಳನ್ನು ಕಂಡ ಗುರೂಜಿ ‘ನಿಮ್ಮ ತಂದೆಯವರು ನೆನ್ನೆಯಷ್ಟೇ ಬಂದು ಹಣವನ್ನು ಕೊಟ್ಟರಲ್ಲ’ ಅಂದರು. ಹೌದೇ, ಎಂದು ವಿಚಾರಿಸಿದಾಗ ಅವರು ಬಂದಿದ್ದು, ಮಗಳ ಸಂಗೀತಾಭ್ಯಾಸದ ಬಗ್ಗೆ ವಿಚಾರಿಸಿದ್ದೂ, ಮಗಳಿಗೆ ನಾನೂ ಏನು ಮಾಡಲಾಗಲಿಲ್ಲ ಕೊನೆ ಪಕ್ಷ ಸಂಗೀತವನ್ನಾದರೂ ಚೆನ್ನಾಗಿ ಕಲಿಯಲಿ ಎನ್ನುತ ಎರಡು ತಿಂಗಳ ಮುಂಗಡ ಹಣವನ್ನೂ ಕೊಟ್ಟು ಹೋದರು ಅಂದರು. ಅದನ್ನು ಕೇಳಿದ ಶಾಂತಿಯ ಗಂಟಲ ನರಗಳೆಲ್ಲಾ ಉಬ್ಬಿದವು. ನಿಂತಲ್ಲೇ ಆಳ ತೊಡಗಿದಳು. ಗುರೂಜಿ ಆಕೆಯ ತೆಲೆ ಸವರುತ್ತಾ ‘ಏನಾಯಿತಮ್ಮ ಶಾಂತಿ’ ಏನು ಕೇಳಿದರು. ‘ಏನಿಲ್ಲ ಗುರೂಜಿ..’ ಎಂದು ಕಣ್ಣೀರನ್ನು ಒರೆಸಿಕೊಂಡು, ಮತ್ತೊಮ್ಮೆ ಅವರ ಚರಣ ಸ್ಪರ್ಶವನ್ನು ಮಾಡಿ ಅಲ್ಲಿಂದ ಹೊರಟಳು. ತಿಂಗಳ ದುಡಿಮೆಯಲ್ಲ ತಂದು ಇಲ್ಲಿಗೆ ಕೊಟ್ಟಿದ್ದಾರೆ ಎಂದು ಅರಿವಾದಾಗ ದುಃಖ ಇನ್ನೂ ಹೆಚ್ಚಾಯಿತು.

ಅಯ್ಯೋ, ನಾನೇನು ಮಾಡಿದೆ! ಇಂತಹ ಪೋಷಕರನ್ನ ವೃದ್ಧಾಶ್ರಮಕ್ಕೆ ಅಟ್ಟಿಬಿಟ್ಟೆನಾ? ಸಾಯುವ ಮಾತನ್ನೂ ಆಡಿಬಿಟ್ಟೆನಾ..ಛೆ! ನಾನೆಂಥ ಹೆಣ್ಣು ಎಂದುಕೊಂಡಳು.

ಏನೋ ಕಳೆದುಕೊಳ್ಳುವ ಆತಂಕ. ಭಾರವಾಗಿದ್ದ ಮನದಲ್ಲಿ ಮಮತೆಯ ಸ್ವರಗಳು ಉಕ್ಕಿ ಹರಿದವು. ವೇಗವಾಗಿ ಮನೆಯೆಡೆ ಕಾಲು ಹಾಕಿದಳು.

ತನ್ನ ಬ್ಯಾಗಿನಲ್ಲಿದ್ದ ಕೀಲಿಯಿಂದ ಬಾಗಿಲನ್ನು ತೆರೆದಳು. ಮನೆ ನಿಶಬ್ದವಾಗಿತ್ತು. ಅಮ್ಮ .. ಎಂದು ಕೂಗಿದಳು. ಅಡುಗೆ ಮನೆಗೆ ಹೋಗಿ ನೋಡಿದಳು. ರೊಟ್ಟಿಗಳನ್ನೆಲ್ಲ ಸುಟ್ಟು, ಅದಕ್ಕೆ ಯಾವುದೊ ಪಲ್ಯವನ್ನು ಮಾಡಿ ಒಂದು ತಟ್ಟೆಯಲ್ಲಿ ಹಾಕಿ ಇಡಲಾಗಿತ್ತು. ನಾನೇನು ಮಾಡಿಬಿಟ್ಟೆ ಎಂದುಕೊಂಡು ತಲೆಯ ಮೇಲೆ ಕೈಯನ್ನು ಇಟ್ಟುಕೊಂಡಳು. ಕೂಡಲೇ ಮನೆಯ ಬಾಗಿಲನ್ನು ಹಾಕಿ ಆಟೋವನ್ನು ಹಿಡಿದು ಹೊರಟಳು. ಅಪ್ಪನನ್ನು ಕಳಿಸಿದ  ಆಶ್ರಮ ಅಮ್ಮನನ್ನು ಕಳಿಸಿದ್ದಕ್ಕಿಂತ ನಾಲ್ಕು ಮೈಲು ದೂರದಲ್ಲಿತ್ತು. ಕೊನೆ ಪಕ್ಷ ಇಬ್ಬರನ್ನೂ ಒಂದೇ ಆಶ್ರಮಕ್ಕಾದರೂ ಸೇರಿಸಬೇಕಿತ್ತು ಅಂದುಕೊಂಡಳು. ಆಶ್ರಮಕ್ಕೆ ಬಂದು ಅಪ್ಪನ ಹೆಸರೇಳಿ ವಿಚಾರಿಸಿದಳು. ‘ಒಹ್ ಅವರ, ಈಗಷ್ಟೇ ಬಂದರು.. ಕಾಲಿಗೆ ಏನೋ ಪೆಟ್ಟಾಗಿದೆ.. ರಕ್ತ ಸುರಿಯುತ್ತಿತ್ತು.. ಸದ್ಯಕ್ಕೆ ಆಗೂ ಆ ಕೋಣೆಯಲ್ಲಿ ಇರಿಸಿದ್ದಾರೆ’ ಎಂದು ಆಶ್ರಮದ ಮೇಲ್ವಿಚಾರಕ ಬೊಟ್ಟು ಮಾಡಿ ತೋರಿಸಿದ. ಪೆಟ್ಟಾಗಿದೆ ಎಂಬುವುದ ಕೇಳಿ ಶಾಂತಿ ಹೆದರಿದಳು. ಹೃದಯ ಒಂದೇ ಸಮನೆ ತೀವ್ರಗತಿಯಲ್ಲಿ ಬಡಿಯತೊಡಗಿತು. ‘ಅಪ್ಪ..’ ಎನ್ನುತಾ ಗದ್ಗದಿತ ಸ್ವರದಲ್ಲಿ ಶಾಂತಿ ಅತ್ತ ಓಡಿದಳು.

‘ಎಷ್ಟ್ ಹೇಳಿದ್ರೂ ಕೇಳಲ್ಲ.. ನೋಡಿ-ಮಾಡಿ ನಿಧಾನಕ್ಕೆ ರಸ್ತೆ ದಾಟ್ಬೇಕು..ವಯಸ್ಸ್ ಇಷ್ಟಾದ್ರೂ ಅಷ್ಟೇ ‘ ಎಂದು ಬೈಯುತ್ತಾ ಅಮ್ಮ ಅಪ್ಪನ ಕಾಲಿಗೆ ಬಟ್ಟೆ ಕಟ್ಟುತ್ತಿದ್ದಳು. ಇಬ್ಬರನ್ನೂ ಒಟ್ಟಿಗೆ ನೋಡಿ ಶಾಂತಿಗೆ ಎಲ್ಲಿಲ್ಲದ ಆಶ್ಚರ್ಯ!

‘ಏನ್.. ಮಕ್ಳು ಹೊರಗಾಕಿದ್ರ’ ಎಂದು ಪಕ್ಕದ ಬೆಡ್ಡಿನ ಲ್ಲಿ ಮಲಗಿದ್ದ ವ್ಯಕ್ತಿ ಕೇಳಿದ.

‘ಏನ್ರಿ ನೀವು ಹೇಳೋದು.. ಹೊರಗ್ ಹಾಕೋದ.. ನಮ್ಮ ಮನೆ ಕೆಲ್ಸ ನಡೀತಾ ಇದೆ..ನೆಂಟರಿಷ್ಟರ ಮನೆಗೆ ಹೋಗಿ ತೊಂದ್ರೆ ಕೊಡೋದು ಯಾಕೆ ಅಂತ ನಾವೇ ಇಲ್ಲಿಗ್ ಬಂದ್ವು..ಮಕ್ಳು ಅವ್ರ ಗೆಳೆಯರ ಮನೆಯಲ್ಲಿ ಉಳ್ಕೊಂಡು ಕೆಲ್ಸ ಮಾಡ್ಸತ ಇದಾರೆ.. ‘ ಎಂದು ಅಪ್ಪ ಪೇಚಾಡಿಕೊಂಡು ಹೇಳಿದ.

‘ಇಲ್ಲಿಗೆ ಎಲ್ಲರೂ ಬರ್ತಾರೆ.. ಆದ್ರೆ ವಾಪಾಸ್ ಯಾರು ಹೋಗಲ್ಲ ಬಿಡಿ’ ಎಂದ.

‘ನಮ್ಮ್ ಮಗ್ಳು ಇನ್ ಸ್ವಲ್ಪ ದಿನ ಬಂದು ಕರ್ಕೊಂಡು ಹೋದಾಗ ಗೊತ್ತಾಗುತ್ತೆ ನಿಮ್ಗೆ’ ಎಂದು ಅಮ್ಮ ಹೇಳಿದಾಗ ಆತ ಗಹಗಹನೆ ನಗುತಾ ಮಗ್ಗುಲು ಹೊರಳಿ ಮಲಗಿದ. ಆತ ನಕ್ಕಿದ್ದನ್ನು ಕಂಡು ಅಪ್ಪ ಅಮ್ಮರಿಬ್ಬರೂ ಒಬ್ಬರನೊಬ್ಬರು ನೋಡಿಕೊಂಡರು. ದಿನವೆಲ್ಲ ವೈರಿಗಳಂತೆ ಜಗಳವಾಡಿದರೂ ಕಷ್ಟಗಾಲದಲ್ಲಿ ನಾವೇ ನಮ್ಮಿಬ್ಬರಿಗೆ ಎನ್ನುವ ಕರುಣೆಯ ನೋಟದಲ್ಲಿ. ಅದನ್ನು ಕಂಡು ಶಾಂತಿ ಸಂಕಟದಿಂದ ನರಳಿದಳು.ಬಾಗಿಲಲ್ಲೇ ನಿಂತು ಅಳುತ್ತಾ ಇವೆಲ್ಲವನ್ನು ನೋಡುತ್ತಿದ್ದ ಅವಳು ಅಮ್ಮಾ.. ಎನ್ನುತ್ತಾ ಹೋಗಿ ತಬ್ಬಿಕೊಂಡಳು. ಅಪ್ಪನ ಕಣ್ಣಲ್ಲೂ ನೀರು ಜಿನುಗಿದ್ದವು.

ಎಂದೂ ಕರೆದುಕೊಂಡು ಹೋಗದಿದ್ದ ಅವರನ್ನು ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ, ಕನ್ನಡ ಚಿತ್ರವನ್ನು ತೋರಿಸಿಕೊಂಡು, ಅವರಿಗಿಷ್ಟವಾಗ ಹೋಟೆಲಿನಲ್ಲಿ ಊಟವನ್ನು ಮಾಡಿಸಿಕೊಂಡು ಬರುವಷ್ಟರಲ್ಲೇ ರಾತ್ರಿಯಾಗಿತ್ತು. ಕೆಲವೇ ಘಂಟೆಗಳ ಮೊದಲು ಕವಿದ ಕಾರ್ಮೋಡವು ಸರಿದು ಶಾಂತಿಯ ಮೊಗದಲ್ಲಿ ಮಂದಹಾಸ ಮೂಡಿತ್ತು.ಮರುದಿನ ಬೆಳಗ್ಗೆ ‘ಅಮ್ಮಾ..ಅಪ್ಪಾ..ಅಮ್ಮಾ…’ ಎನ್ನುತ ಮಲಗೇ ಕನವರಿಸುತ್ತಿದ್ದ ಶಾಂತಿಯನ್ನು ಕಂಡು ಅಮ್ಮ ‘ಹೇ ಶಾಂತಿ.. ಏನಾಯಿತೆ.. ಎದ್ದೇಳೇ’ ಎಂದು ಭುಜ ಅಲುಗಾಡಿಸಿ ಎಳಿಸಿದಾಗ ಶಾಂತಿಗೆ ಎಚ್ಚರವಾಯಿತು. ಕಣ್ಣು ತೆರೆದ ಕೂಡಲೇ ಅಮ್ಮ ತನ್ನ ಮುಂದಿದ್ದಾಳೆ. ಪಕ್ಕದ ಅಲಾರ್ಮ್ ನಲ್ಲಿ ಘಂಟೆ ೮ ತೋರಿಸುತ್ತಿತ್ತು. ‘ಏನಿಲ್ಲ ..’ ಎಂದು ಶಾಂತಿ ಎದ್ದು ಕೂತು ಅಪ್ಪ ಎಲ್ಲಿ ಎಂದು ಕೇಳಿದಳು. ‘ಮುಖ ಉದೀಸ್ಕೊಂಡು ಟಿವಿ ಮುಂದೆ ಕೂತಿದೆ’ ಎಂದಳು. ತನ್ನ ಕೊಂಚ ಸಿಟ್ಟನ್ನೂ ಬೆರೆಸಿ. ಸರಿ ಎನ್ನುತಾ.ಎದ್ದು ಹೊರನಡೆದ ಶಾಂತಿಯನ್ನು ಎಳೆದು ಕೂರಿಸಿದ ಅಮ್ಮ ‘ ಬಾ ಕೂರಿಲ್ಲಿ.. ತೆಂಗಿನೆಣ್ಣೆ  ಕಾಯಿಸ್ಕೊಂಡು ತಂದಿದ್ದೀನಿ.. ಕೂದ್ಲು ನೋಡು..’ ಎಂದು ಗೊಣಗುತ್ತ ನೆತ್ತಿಯ ಮೇಲೆ ಎಣ್ಣೆಯನ್ನು ಸುರಿದು ಶಾಂತಿಯ ತಲೆಯನ್ನು ಕುಕ್ಕತೊಡಗಿದಳು…

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!