ಕಥೆ ಕಾದಂಬರಿ

ಕರಾಳ ಗರ್ಭ ಭಾಗ – 11

ನಾನೆಂದೆ: “ ಆ..ಮತ್ತೆ ನಿಮ್ಮ ಈಗಿನ ಪತಿ ರಾಮನ್…ಅವರು?’

ನನ್ನತ್ತಲೇ ನೋಡುತ್ತಾ ರಚನಾ ನುಡಿದರು..”ನೀವೇನಾದರೂ ಇನ್ಸ್ಪೆಕ್ಟರ್ ಶ್ರೀನಿವಾಸನ್’ರವರ ಫೋಟೋ ನೋಡಿದ್ದಿದ್ದರೆ ಖಂಡಿತಾ ಹೋಲಿಕೆ ಹೇಳಿಬಿಡುತ್ತಿದ್ದಿರಿ, ನನ್ನ – ಮೃದುಲಾ ಬಗ್ಗೆ ಹಿಡಿದಿರಲ್ಲಾ ಹಾಗೆ!…ಶ್ರೀನಿವಾಸನ್’ರವರ ಮಗನೇ ನನ್ನ ಗಂಡ ರಾಮನ್!. ಅಪ್ಪನ ಮಾತಿಗೆ ಎದುರು ಹೇಳದೇ ನನ್ನ ಕುತ್ತಿಗೆಗೆ ಮುಂದಿನ ಎರಡು ವರ್ಷದಲ್ಲಿ ತಾಳಿ ಕಟ್ಟಿದ್ದರು…ಅಪ್ಪ ಮತ್ತು ಮಾವ ಮಾತನಾಡಿಕೊಂಡು ಈ ರಹಸ್ಯ ನಮ್ಮಿಬ್ಬರ ಮನೆ-ಮನೆಯಲ್ಲೇ ಇರಲೆಂದು ಸಂಚು ಮಾಡಿ ನಡೆಸಿದ್ದ ಮದುವೆ ಇದು….ಆದರೆ, ಹಾಗೆ ನೋಡಿದರೆ ನನ್ನ ಗಂಡ ರಾಮನ್ ಬಹಳೇ ವಿಶಾಲ ಮನಸ್ಸಿನವರು, ನನ್ನ ರಹಸ್ಯವನ್ನು ತಮ್ಮ ಇಡೀ ಜೀವನದ ಉದ್ದೇಶವೆಂಬಂತೆ ಕಾಪಾಡಿ ನೋಡಿಕೊಂಡರು..ಅಪ್ಪನಂತೆಯೇ ತಾವೂ ಪೋಲಿಸ್ ವೃತ್ತಿಗೆ ಸೇರಿ ಮುಂದೆ ಬಂದರು…. ಈಗ ಎರಡೇ ವರ್ಷದ ಹಿಂದೆ ಅವರಿಗೆ ಕಮೀಶನರ್ ಪದವಿ ದೊರಕಿದ್ದು… ನನಗೆ ಹತ್ತು ವರ್ಷಗಳ ನಂತರ ಮತ್ತೆ ಮಗ ರಾಜನ್ ಹುಟ್ಟಿದ…ಈಗ ಅವನು ಮೆಡಿಕಲ್ ಓದಲು ಚೆನ್ನೈನಲ್ಲಿದ್ದಾನೆ… “ ಎಂದು ಈಗ ಅವರು ಶಾಂತರಾದರು…ಆಕೆಗೆ ಹಲವು ದಶಕಗಳ ಅಪರಾಧಿ ಪ್ರಜ್ಞೆಯ ಭಾರ ಇಳಿದಂತಾಗಿತ್ತು… ನಾವು ಆಕೆ ಹೇಳಿದ್ದನ್ನೆಲ್ಲಾ ಅರಗಿಸಿಕೊಳ್ಳುತ್ತಿದ್ದೆವು..

“ಹಾಗಾದರೆ ಇಷ್ಟೆಲ್ಲಾ ಜಾಗ್ರತೆ ವಹಿಸಿ ಕಾಪಾಡಿಕೊಂಡು ಬಂದಿದ್ದ ನಿಮ್ಮ ರಹಸ್ಯ ಈ ಜಾನಿಯಂತವನಿಗೆ ತಿಳಿದಿದ್ದಾದರೂ ಹೇಗೆ?” ಎಂದೆ, ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಆ ಪ್ರಶ್ನೆಯನ್ನು ಮುಂದಿಟ್ಟು.

ರಚನಾ ನಿಟ್ಟುಸಿರಿಟ್ಟು ಹೇಳಿದರು..

” ಹೂಂ… ಅದೊಂದು ಕಡಿಮೆಯಾಗಿತ್ತು, ನಮ್ಮ ದುರದೃಷ್ಟಕರ ಬಾಳಿನಲ್ಲಿ..ಈ ಜಾನಿ ನಿಮಗೇ ಗೊತ್ತಿದ್ದಂತೆ ಈ ಊರಿನಲ್ಲಿ ಒಬ್ಬ ಕಾರ್ ಮೆಕ್ಯಾನಿಕ್..,,ಅಪ್ಪ ತಮ್ಮ ಹಳದಿ ಟಾಟಾ ನ್ಯಾನೋ ಕಾರನ್ನು ಅವನ ಬಳಿ ಒಮ್ಮೆ ಸರ್ವೀಸಿಗಾಗಿ ಬಿಟ್ಟಿದ್ದರು, ‘ಮನೆಗೆ ತಂದು ಬಿಡಪ್ಪ’ ಎಂದಿದ್ದರು, ಅಪ್ಪನಿಗೀಗ ಎಪ್ಪತ್ತೈದು ವರ್ಷ..ಒಂದು ನಾಯಿ ಬಿಟ್ಟರೆ ಅಲ್ಲಿ ಬೇರೆ ಕಂಪನಿಯಿಲ್ಲಾ..ಅಮ್ಮ ತೀರಿಕೊಂಡು ಹತ್ತು ವರ್ಷವೇ ಆಯಿತು..ನಾನಾಗಾಗ ಹೋಗಿ ಹಾಲು ಔಷದಿ ಕೊಟ್ಟುಬರುತ್ತಿರುತ್ತೇನೆ…ಆದರೆ ನನ್ನ ಗಂಡ ರಾಮನ್ ಎಂದೋ ಒಮ್ಮೊಮ್ಮೆ ಅಪ್ಪನ ಬಳಿಗೆ ಹೋಗಿ ಒಟ್ಟಿಗೇ ಬಿಯರ್ ಕುಡಿದು ಬರುತ್ತಿರುತ್ತಾರೆ. ಅಂತಾ ಸಂಧರ್ಭಗಳಲ್ಲಿ ಅಪ್ಪ ಮತ್ತು ಇವರೂ ಹಳೆಯದ್ದನ್ನೆಲ್ಲಾ ಮೆಲುಕು ಹಾಕುತ್ತಿರುತ್ತಾರೆ, ಒಮ್ಮೊಮ್ಮೆ ಜಗಳವೂ ಆಗುತ್ತದೆ..ಅಂತದ್ದೇ ಒಂದು ದಿನ…ಈ ಜಾನಿಯು ಅಪ್ಪನ ಕಾರ್ ಸರ್ವೀಸ್ ಮಾಡಿ ವಾಪಸ್ ಬಿಡಲು ಅಪ್ಪನ ಮನೆಗೆ ಹೋಗಿದ್ದಾನೆ..ಅಲ್ಲಿ ಇವರಿಬ್ಬರೂ ಕುಡಿದ ಅಮಲಿನಲ್ಲಿ ಹಳೆಯ ವಿಷಯಗಳನ್ನೆಲ್ಲಾ ಹಿಡಿದು ವಾದ ಮಾಡಿಕೊಳ್ಳುತ್ತಿದ್ದರಂತೆ..ಅದನ್ನು ಇವನು ಕದ್ದು ಕೇಳಿಸಿಕೊಂಡು ಬಿಟ್ಟಿದ್ದಾನೆ..ಅವನಿಗಾಗಲೇ ಈ ದುರ್ಬುದ್ದಿ ಮೊಳಕೆಯೊಡೆದಿದೆ…ಆಮೇಲೆ ಹಲವು ದಿನಗಳ ಕಾಲ ಜಾನಿಯು ಅಪ್ಪನ ದೋಸ್ತಿ ಮಾಡಿದ್ದಾನೆ…ಅವರಿಗೆ ಹೆಂಡ ಕುಡಿಸಿ ತಾನೂ ಅವರೊಂದಿಗೆ ಕುಡಿದು ನಿಧಾನವಾಗಿ ಮತ್ತಿನಲ್ಲಿದ್ದ ಅಪ್ಪನಿಂದ ಎಲ್ಲವನ್ನೂ ತಿಳಿದುಕೊಂಡುಬಿಟ್ಟಿದ್ದಾನೆ….

…ಹೊಸಮನಿಗಳಿಗೆ ದತ್ತು ಕೊಟ್ಟ ಮಗುವೇ ಮೃದುಲಾ ಎಂಬ ಜನಪ್ರಿಯ ಚಿತ್ರ –ಟಿ ವಿ ನಟಿ ಎಂದು ತಿಳಿದ ಅವನು ನಮ್ಮೆಲ್ಲರಿಗೂ ಯಶಸ್ವಿಯಾಗಿ ಗಾಳ ಹಾಕಿದ್ದಾನೆ. ಜತೆಗೆ ಆ ಕಾಲದಲ್ಲಿ ಕಣ್ಣನ್’ನನ್ನು ಅಪ್ಪ ಕೊಲೆಮಾಡಿದ್ದೂ ತಿಳಿದಿದ್ದು ಅವನಿಗೆ ಇನ್ನೊಂದು ಅಸ್ತ್ರವಾಯ್ತು… ಅಂತೂ. ನಾವೆಲ್ಲರೂ ಅವನ ಕಪಿಮುಷ್ಟಿಗೆ ಸಿಕ್ಕಿ ಬಿಟ್ಟೆವು..

….ಮೊದ ಮೊದಲು ಅಪ್ಪನ ಹತ್ತಿರ ಬೆದರಿಸಿ ಅವರ ಟಾಟಾ ನ್ಯಾನೋ ಕಾರನ್ನು ತನ್ನ ಹೆಸರಿಗೆ ಮಾಡಿಸಿಕೊಂಡ, ಅದನ್ನೇ ನೀವು ನೋಡಿದ್ದು…ನಂತರ ನನ್ನ ಬಳಿ ಮೂರು ನಾಲ್ಕು ಬಾರಿ ೨೫-೩೦ ಸಾವಿರ ರೂ. ನನಗೆ ಬೆದರಿಸಿ ತೆಗೆದುಕೊಂಡಿದ್ದಾನೆ…ಆಮೇಲೆ ಅವನಿಗೆ ಆ ಶಾಂತಿ ಎಂಬ ಲವರ್ ಬೇರೆ ಮುಖ್ಯವಾದ ದಾಖಲೆ ಪತ್ರಗಳನ್ನು ಆಫೀಸಿನಿಂದ ಕದ್ದು ತಂದು ಕೊಟ್ಟ ಮೇಲೆ ಇನ್ನೂ ದುರಾಸೆ ಹೆಚ್ಚಾಯಿತು… ಅವನಿಗೆ ’ಇವರು ಯಾವ ಮಹಾ ಕೊಡುವುದು?..ದೊಡ್ಡ ಕುಳಕ್ಕೇ ಕೈ ಹಾಕೋಣವೆನಿಸಿರಬೇಕು… ಮೃದುಲಾಗೂ ಬೆದರಿಕೆ ಪತ್ರ ಹಾಕಿ ಹೀಗೆ ತನ್ನ ಜಾಲಕ್ಕೆ ಬೀಳಿಸಿಕೊಂಡ…” ಎಂದು ಮುಗಿಸೆದ್ದರು ರಚನಾ, ಹೊರಗಿನ ಅಂಗಡಿಗೆ ಹೋಗಲು

ಅದರ ನಂತರದ ಕತೆ ನಮಗೆ ತಿಳಿದಿತ್ತು. ಆದರೆ ನಾನವರನ್ನು ತಡೆದೆ:

“ಅದಕ್ಕೇ ನಿಮ್ಮ ಗಂಡ ಬೇಸತ್ತು , ಈ ಜೀವನ ಪರ್ಯಂತ ಎಲ್ಲರೂ ಒಂದು ರಹಸ್ಯಕ್ಕಾಗಿ ಇಷ್ಟು ಬೆಲೆ ತೆರುವುದು ಬೇಡಾ ಎಂದು ಜಾನಿಯನ್ನು ಕೊಂದು ಬಿಟ್ಟರು ಅಲ್ಲವೇ?” ಎಂದೆ..ನನಗೆ ಅವರ ಮೇಲೆ ಸಂದೇಹ ಕಡಿಮೆಯಾಗಿದ್ದರೂ ಇನ್ನೂ ಆ ವಿಷಯ ದೃಢಪಡುವುದು ಅವಶ್ಯಕವಿತ್ತು.

ಆಗ ಮೊದಲ ಬಾರಿಗೆ ರಚನಾಗೆ ನಮ್ಮ ಮೇಲೆ ಅತ್ಯಂತ ಕೋಪ ಬಂದಿತ್ತು:

“ನೆವರ್!..ಅವರೆಂದೂ ಅಂತಾ ಕಾರ್ಯ ಮಾಡಿರುವುದಿಲ್ಲಾ..ನಿಮಗವರ ಗುಣ ಗೊತ್ತಿಲ್ಲಾ..ಅವರಿಗೆ ಅಪರಾಧಿಗಳನ್ನು ಹಿಡಿಯುವುದು ಮಾತ್ರ ಗೊತ್ತಿದೆ, ಅಪರಾಧ ಮಾಡುವುದಲ್ಲಾ” ಎಂದು ಖಡಾ ಖಂಡಿತವಾಗಿ ನುಡಿದರು..

ಸರಿ, ಅಲ್ಲಿಗೆ ಈ ವಿಚಾರ ಮುಗಿದ ಅಧ್ಯಾಯ ಎಂದೆನಿಸಿ ಕೊನೆಗೆ ಆಕೆಯನ್ನೇ ಉದ್ದೇಶಿಸಿ ಕೇಳಿದೆ:

“ಮತ್ತೆ ನೀವು?..ನೀವು ಕೊಂದಿರಬಹುದಲ್ಲಾ?..ನಿಮಗಂತೂ ಜಾನಿಯನ್ನು ಕೊಲ್ಲಲು ಎಲ್ಲಾ ಉದ್ದೇಶಗಳೂ ಇದ್ದವು …”ಎಂದೆ

ರಚನಾ ಒಮ್ಮೆ ವಿಷಾದದ ನಗೆ ಚೆಲ್ಲಿದರು ಅಷ್ಟೇ..

” ಹಾಗೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು, ನಿಜಕ್ಕೂ ಚೆನ್ನಾಗಿರುತ್ತಿತ್ತು, ಎಲ್ಲರಿಗೂ!…” ಎಂದು ಪಿಸು ನುಡಿದಿದ್ದರು.

ಇನ್ನೇನು ನಾವು ಎದ್ದು ಹೊರಡೋಣವೆಂದಿದ್ದೆವು..ಅದೇ ಕ್ಷಣದಲ್ಲಿ ಕಮೀಶನರ್ ರಾಮನ್ ರೂಮಿನೊಳಗೆ ಕಾಲಿಟ್ಟಿದ್ದರು!

ಸೊಂಟದ ಮೇಲೆ ಕೈಯಿಟ್ಟು ಹುಬ್ಬುಗಂಟಿಕ್ಕಿ,ಹೆಂಡತಿಯತ್ತ ನೋಡುತ್ತಾ ಸಿಡಿದರು:

“ಓಹೋ, ಎಲ್ಲಾ ಹೇಳಿಬಿಟ್ಟೆ ತಾನೆ ಇವರಿಗೆ?…ನಾನು ಬರುವುದು ಸ್ವಲ್ಪ ತಡವಾಯಿತು ಅಷ್ಟೇ..ನಾನಂದು ಕೊಂಡಿದ್ದೆ, ಹೀಗೇ ಆಗುತ್ತದೆಂದು…”

೧೪

ಅವರು ಮತ್ತೆ ತಮ್ಮ ಪತ್ನಿಯನ್ನು ತರಾಟೆಗೆ ತೆಗೆದುಕೊಳ್ಳುವ ಮುನ್ನ ನಾನು ಮಧ್ಯಪ್ರವೇಶ ಮಾಡಿದೆ:

“ಕಮೀಶನರ್, ಅವರೆಲ್ಲಾ ಹೇಳಿ ಮುಗಿದಿದೆ..ಹಾಗೆ ನೋಡಿದರೆ ಇನ್ನು ನೀವು ಆಕೆಯ ರಹಸ್ಯದ ಭಾರ ಹೊರುವ ಅಗತ್ಯವೇ ಇಲ್ಲಾ…ಮೂವತ್ತೈದು ವರ್ಷಗಳ ಹಿಂದೆ ನಿಮ್ಮ ನಮ್ಮ ಕೈಗೆ ನಿಲುಕದೇ ನಡೆದುಹೋದ ವಿಷಯವನ್ನು ಬಿಟ್ಟು ಮುಂದಾಗಬೇಕಾಗಿರುವಿದರತ್ತ ಗಮನಿಸೋಣಾ..ಏನಂತೀರಾ?”ಎಂದೆ ಧೈರ್ಯವಾಗಿ

ಕಮೀಶನರ್ ರಾಮನ್ ಮುಖದಲ್ಲಿ ಹಲವಾರು ಭಾವನೆಗಳು ತಾಕಲಾಟ ಮಾಡುತ್ತಿದವು ..ಕೋಪ, ನಿರಾಸೆ, ಅಸಹಾಯಕತೆ ಮತ್ತು ತಾನೆಲ್ಲೋ ಸೋತೆನೆಂಬ ಅಳುಕು..

ಅವರು ಮಿದುಳು ನಡೆಯುವುದೂ ಕೇಳಬಲ್ಲಂತಾ ಮೌನವಿತ್ತು ಕೋಣೆಯಲ್ಲಿ ಕೆಲಕಾಲ. ಹಲವಾರು ವರ್ಷಗಳ ದ್ವಂದ್ವವನ್ನು ಬಗೆಹರಿಸಿಕೊಂಡು ಮನಸ್ಸು ತಿಳಿಯಾಗಲು ಸ್ವಲ್ಪ ಸಮಯ ಬೇಕಿದ್ದುದು ಸಹಜವೇ.

ಅವರು ನೆಲದತ್ತಲೇ ನೋಡುತ್ತಿದ್ದವರು ನಿಡುಸುಯ್ದು  ಉತ್ತರಿಸಿದರು:

” ಹೂಂ..ಬಿಡಿ..ನಾನಂದು ಮಾವನ ಜತೆ ಕುಡಿದ ಅಮಲಿನಲ್ಲಿ ಜೋರು ದನಿಯಲ್ಲಿ ಆ ಬಗ್ಗೆಯೆಲ್ಲಾ  ಕೆದಕಿ ಕೆದಕಿ ವಾದಿಸದಿದ್ದರೆ…. ಜಾನಿ ಅದೇ ಸಮಯಕ್ಕೆ ಬರದೆ ಇದ್ದಿದ್ದರೆ ಈ ಹೊಸ ಗಂಡಾಂತರವೂ ಬರುತ್ತಿರಲಿಲ್ಲ…”

ಲೂಸಿ ತಲೆಯಾಡಿಸುತ್ತ ” ಹಾ, ಗಂಡಾಂತರ ಆದದ್ದು ಕೊನೆಗೆ ಜಾನಿಗೇ ತಾನೆ?..ಮತ್ತು ದುರದೃಷ್ಟವಶಾತ್ ಕಾಕತಾಳೀಯವಾಗಿ ಅವನೊಂದಿಗಿದ್ದ ಯುವತಿ ಶಾಂತಿಗೆ..ಅದರ ಬಗ್ಗೆ ಏನು ನಡೆಯುತ್ತಿದೆ,,ಸರ್?..ಆ ಕೊಲೆಗಳ ಬ್ಯಾಲಿಸ್ಟಿಕ್ ರಿಪೋರ್ಟ್ ಏನಾದರೂ ಬಂತೆ?”ಎಂದಳು

ಲೂಸಿಯಂತಾ ಚುರುಕು ಬುದ್ದಿಯ ಲಾಯರೊಂದಿಗೆ ವ್ಯವಹರಿಸುವುದು ಎಷ್ಟು ಕಷ್ಟ ಎಂದು ಅರಿವಾದವರಂತೆ ಕಮೀಶನರ್ ಅವಳತ್ತ ದಿಟ್ಟಿಸುತ್ತಾ,

“ಹೂಂ ಬಂತು, ಈಗ ತಾನೇ… ಅವೆರಡೂ ಶವಪರೀಕ್ಷೆ ಮಾಡಿದ ವೈದ್ಯಾಧಿಕಾರಿ ಹೇಳುವ ಪ್ರಕಾರ, ವಿಜಯ್ ಹೇಳಿದಂತೆ ಅದು ೦.೩೮ ಕೋಲ್ಟ್ ರಿವಾಲ್ವರ್’ನಿಂದಲೇ ಹೊಡೆದ ಗುಂಡುಗಳು ಎಂದು ದೃಢಪಟ್ಟಿದೆ.” ಎಂದು ನಿರಾಸೆಯಿಂದ ಕೈ ಚೆಲ್ಲಿದರು, ಅವರಿಗೆ ಹತ್ತಿರದ ಬಲಿಪಶು ಸಿಕ್ಕಲಿಲ್ಲವೆಂಬಂತೆ. ನನ್ನದು ಆ ರಿವಾಲ್ವರ್ ಅಲ್ಲವಲ್ಲಾ!

“ಅಂತಾ ಎಷ್ಟು ರಿವಾಲ್ವರ್’ಗಳು ಈ ಊರಿನಲ್ಲಿದ್ದವು ಎಂಬ ದಾಖಲೆಗಳು…ಗನ್ ರಿಜಿಸ್ಟರ್ ಅಥವಾ ಲಾಗ್ ಏನಾದರೂ ನಿಮ್ಮಲ್ಲಿದೆಯೆ?” ಎಂದೆ ನಾನು ಮುಂದುವರೆಯುತ್ತಾ

ರಾಮನ್ ತಮ್ಮ ಗನ್ ಹೋಲ್ಡರನ್ನು ಮುಟ್ಟಿ ತೋರಿಸುತ್ತಾ,  “ಒಂದು ರಿವಾಲ್ವರ್ ನನ್ನದೇ ಇದೆ…ನನ್ನ ಪೋಲಿಸ್ ಸರ್ವೀಸ್ ರಿವಾಲ್ವರ್….ಬಹಳ ವರ್ಷಗಳಿಂದ ನನ್ನ ಬಳಿಯಿದೆ…”ಎಂದು ನನ್ನ ಮುಖ ನೋಡಿದರು,  ’ನನ್ನನ್ನು ಇನ್ನೂ ಅನುಮಾನಿಸುವೆಯೋ ’ ಎಂಬಂತೆ.

ನನಗೆ ಅವರ ಜತೆ ಮುಖಾ-ಮುಖಿ ಸಾಕಾಗಿಹೋಗಿತ್ತು.

” ನೀವಲ್ಲದೇ?..ಬೇರೆ ಯಾರದಿತ್ತು, ಚೆಕ್ ಮಾಡಿ ಹೇಳಬಲ್ಲಿರಾ?” ಎಂದು ಮಾತ್ರ ಪ್ರಶ್ನಿಸಿದೆ.

ಕಮೀಶನರ್ ರಾಮನ್ ಮುಖ ಸೊಟ್ಟಗೆ ಮಾಡಿಕೊಂಡು, ” ಹೂಂ…ಮಾಡಲೇ ಬೇಕಾಗುತ್ತಲ್ಲಾ?..ಹಳೆಯ ರೆಕಾರ್ಡ್ಸ್ ಎಲ್ಲಾ ತೆಗೆದು ನೋಡಬೇಕು..ಅಂತಾ ಯಾವುದಾದರೂ ದಾಖಲೆಯಿದೆಯೇ ಎಂದು..ವಾಪಸ್ ಆಫೀಸಿಗೆ ಹೋಗಬೇಕಾಗುತ್ತದೆ…”ಎಂದು ಎದ್ದರು.

ಹೊರಡುವ ಮುನ್ನ ಮತ್ತೆ ಪತ್ನಿಯತ್ತ ತಿರುಗಿ, “ಇನ್ನು ನೀನು ಇವರ ಜತೆ ಮಾತನಾಡಿ, ಮೃದುಲಾ ಜತೆ ಹೇಗೆ ಭೇಟಿ ಮಾಡುತ್ತೀಯೊ, ಏನು- ಎತ್ತಾ ಎಂದು ವಿಚಾರಿಸಿಕೋ..ಇನ್ನೂ ನನ್ನದೇನೂ ಇಲ್ಲಾ..”ಎಂದು ಬಹಳ ಕಷ್ಟದಿಂದ ಗಿಳಿಯನ್ನು ಪಂಜರದಿಂದ ಬಿಡುಗಡೆ ಮಾಡುತ್ತಿರುವಂತೆ ಹೇಳಿ ಹೊರಟರು..

ಅವರು ಹೋದ ನಂತರ ನಾವು ಸ್ವಲ್ಪ ಹೊತ್ತು ರಚನಾ ಜತೆ ಮನ ಬಿಚ್ಚಿ ಮಾತಾಡುವಂತಾ ಅವಕಾಶವಿತ್ತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ…’ಮೃದುಲಾಗೆ ಇಷ್ಟವಿದ್ದರೆ ಆಕೆಯೇ ಇಲ್ಲಿಗೆ ಬರಲಿ..ತಾವು ಬೆಂಗಳೂರಿಗೆ ಹೋದರೆ ಸುಮ್ಮನೆ ಮಾಧ್ಯಮಗಳಿಗೆಲ್ಲ ತಿಳಿದು ಅನವಶ್ಯಕ ಪ್ರಚಾರವಾದೀತು, ಅದರಿಂದ ಅವಳಿಗೇ ಮುಜುಗುರ ’ಎಂದು ರಚನಾ ಸಲಹೆಯಿತ್ತರು..ಲೂಸಿ ಅದನ್ನು ಮೃದುಲಾ ಮತ್ತು ಫರ್ನಾಂಡೆಸ್’ಗೆ ತಿಳಿಸುವುದಾಗಿ ನುಡಿದರು.

ಲೂಸಿ ಅಲ್ಲಿಂದಲೇ ಮೃದುಲಾ ಮತ್ತು ಫರ್ನಾಂಡೆಸ್’ಗೆ ಫೋನ್ ಹಚ್ಚಿದ್ದಳು..ಮೃದುಲಾಗೆ ಈ ವಿಷಯ ತಿಳಿದ ನಂತರದ ಮೃದುಲಾರ ಉದ್ವೇಗದ ದನಿ ಪಕ್ಕದಲ್ಲಿ ಕುಳಿದ್ದ ನನಗೂ ಕೇಳಿಸುವಷ್ಟು ಜೋರಾಗಿತ್ತು.. ’ನಾಳೆಯೇ ಬಂದು ಅಮ್ಮನನ್ನು ನೋಡಿ ಹೋಗುತ್ತೇನೆ, ಒಂದು ದಿನಾ ಶೂಟಿಂಗ್ ಹಾಳಾದರೂ ಚಿಂತೆಯಿಲ್ಲಾ ’ ಅಂದಳು…

ಫರ್ನಾಂಡೆಸ್ ಕೂಡಾ ರಚನಾ ಮತ್ತು ಕಮೀಶನರ್ ಇಬ್ಬರನ್ನೂ ಭೇಟಿ ಮಾಡಲು ಆಸಕ್ತರಾಗಿದ್ದರು. ಅವರಾಗಲೇ ಇದಕ್ಕೆಲ್ಲಾ ವಿಶಾಲ್ ಕಪೂರನ ಆಶೀರ್ವಾದ ಪಡೆದಂತಿತ್ತು. ಇದರ ಮೇಲೆಯ ಅವರ ಧಾರಾವಾಹಿಯ ಒಂದು ಕಂತು ಮಾಡುವಂತಿದ್ದರೂ ನನಗೆ ಅಚ್ಚರಿಯಾಗುವಂತಿರಲಿಲ್ಲ..ಸದ್ಯ ನನ್ನನ್ನು ಅದರಲ್ಲಿ ಸೇರಿಸಿಕೊಳ್ಳದಿದ್ದರೆ ಸಾಕು! ಎಂದುಕೊಂಡೆ

ಮೃದುಲಾ ನಾಳೆ ಬಂದರೂ ಬರಬಹುದೆಂದು ಅವರಿಗೆ ತಿಳಿಸಿ ನಾವು ಅಲ್ಲಿಂದ ತೆರಳಿದ್ದೆವು..ಸುಮಾರು ರಾತ್ರಿ ಎಂಟಾಗುತಿತ್ತು.

ಅವಳ ಕಾರ್ ಹತ್ತಿ ಹೊರಡುವಾಗ. ಲೂಸಿ ” ಇವತ್ತು ಪಂಜಾಬೀ ಢಾಬಾಗೆ ಹೋಗಲು ಸರಿಯಾದ ದಿನವೇ?””ಎಂದು ಹುಬ್ಬೇರಿಸಿದಳು, ನಾನು ಊಟ ಕೊಡಿಸುತ್ತೇನೋ ಎಂಬಂತೆ.

” ಇದರಲ್ಲಿ ನನ್ನ ಘನಂದಾರಿ ಸಾಧನೆಯೇನಿಲ್ಲಾ…ಹಾಗೆ ನೋಡಿದರೆ ಮೃದುಲಾಗೇ ಈ ಊಟದ ಬಿಲ್ ಸಲ್ಲಬೇಕು” ಎಂದೆ ಮೊಂಡಾಟ ಮಾಡುತ್ತಾ.

” ಊಟದ ಬಿಲ್ ಮೃದುಲಾ ಲಾಯರ್ ಕೊಡುತ್ತಾಳಂತೆ… ಆದರೆ ಟಿಪ್ಸ್ ಆದರೂ ನೀವು ಕೊಡುವಿರಾ, ಜಿಪುಣ ಮಹಾಶಯ?” ಎಂದು ಚೇಡಿಸಿದಳು.

ಇವಳು ಹೇಳುತ್ತಿದ್ದ ಷೇರ್ ಏ-ಪಂಜಾಬಿ ಡಾಬಾ ಊರಿನ ಹೆದ್ದಾರಿಯಿಂದ ಅನತಿ ದೂರದಲ್ಲಿತ್ತು.ಒಳ ಹೊರಗೂ ಹಳ್ಳಿ ಮನೆಯಶೈಲಿಯಲ್ಲಿ ಅಲಂಕರಿಸಿತ್ತು.

ಊಟ ಆರ್ಡರ್ ತೆಗೆದುಕೊಳ್ಳಲು ಬಂದ ಸರದಾರ್ಜೀಗೆ ಲುಸಿಯೇ ಬಟರ್ ನಾನ್, ಎರಡು ತರಹ ಕರ್ರಿ, ಘೀ ರೈಸ್, ಲಸ್ಸಿ ಮುಂತಾದ ಆರ್ಡರನ್ನು ಪಟಪಟನೆ ಇತ್ತಳು..”ನಿಮ್ಮ ಸೆಲೆಕ್ಶನ್  ಚೆನ್ನಾಗಿದೆ,,ಇಂತಾ ಊಟ ಮಾಡಿದ ಮೇಲೆ ನೀವು ಮಾತಾಡುವುದಕ್ಕೆ ಆಗಲ್ಲಾ ನೋಡಿ!” ಎಂದು ಆ ಸರದಾರ್ಜಿ ವೈಟರ್ ಅವಳನ್ನು ಉಬ್ಬಿಸಿದ.

” ಮನಮೋಹನ್ ಸಿಂಗ್ ತರಹವೆ?”ಎಂದೆ..ನಮ್ಮ ಮಾಜಿ ಪ್ರಧಾನಿಯ ಮೌನ ನಡವಳಿಕೆಯನ್ನು ನೆನೆಪಿಸಿಕೊಳ್ಳುತ್ತಾ

ಸರದಾರ್ಜಿಗೆ ಆ ಜೋಕ್ ಅರ್ಥವಾಗಲಿಲ್ಲವೇನೋ, ವಿಚಿತ್ರವಾಗಿ ನೋಡಿ ಹೋದ

ಅದಕ್ಕೆ ಲೂಸಿ ನನ್ನ ಮುಖ ನೊಡಿ ಮುಸಿಮುಸಿ ನಕ್ಕಳು.

” ನಿಮ್ಮ ಸೆನ್ಸ್ ಆಫ್ ಹ್ಯುಮರ್ ಮತ್ತೆ ಫೇಲಾಯಿತು !”ಎಂದು ಅಣಕಿಸಿದಳು.

“ನನ್ನ ’ಸೆನ್ಸ್ ಆಫ್ ಲವ್ ’ಸೋಲುವುದಿಲ್ಲಾ ತಾನೆ ?”ಎಂದೆ ಆತಂಕವಾದವನಂತೆ.

“ಅದೂ ಈ ಕೇಸ್ ಮುಗಿದ ಮೇಲೆ ಹೇಳುತ್ತೇನೆ!”ಎಂದಳು. ಅವಳದು ಮೊದಲೇ ಕೆಂಚ ಆಂಗ್ಲೋ ಇಂಡಿಯನ್ ಮುಖ..ನಾಚಿಕೆ ಮತ್ತು ಮನದ ತುಮುಲವೂ ಸೇರಿ ಅವಳ ಮುಖ ಇನ್ನೂ ಹೆಚ್ಚು ಕೆಂಪೇರಿತ್ತು.ನನಗೆ ಅದಕ್ಕಿಂತಾ ಹೆಚ್ಚಿನ ಉತ್ತರ ಬೇಕಿರಲಿಲ್ಲ.

ಸೊಗಸಾದ ಊಟ ಮತ್ತು ನಮ್ಮ ಉಲ್ಲಾಸದ ಸಂಭಾಷಣೆಯಲ್ಲಿ ಸ್ವಲ್ಪ ಈ ಕೇಸಿನ ಒತ್ತಡದಿಂದ ಅಲ್ಪ ವಿರಾಮ ಸಿಕ್ಕಿದಂತಿತ್ತು..

ಆದರೆ ಮರಳಿ ಹೊರಟಾಗ ಲೂಸಿಯ ಮೊಬೈಲ್ ಫೋನ್ ರಿಂಗಾಯ್ತು..ಮೃದುಲಾ ‘ನಾಳೆ ಬೆಳಿಗ್ಗೆ ಫರ್ನಾಂಡೆಸ್ ಜತೆ ಇಲ್ಲಿಗೆ ಬರುವುದನ್ನು’ ಹೇಳಲು ಕರೆ ಮಾಡಿದ್ದರು.

ಲೂಸಿ ನನ್ನತ್ತ ತಿರುಗಿ, ” ಆದ್ದರಿಂದ ನಾಳೆ ನಾನು ಅವರ ಜತೆ ಬಹಳ ಬಿಝಿಯಾಗಿರುತ್ತೇನೆ..ನೀವು..?”ಎಂದು ರಾಗವೆತ್ತಿದಳು

“ನಮ್ಮಂತಾ ಪತ್ತೇದಾದರರಿಗೆ ಸಮಯವೆಲ್ಲಿರುತ್ತದೆ?, ನಾನೂ ಬಿಝಿಯೆ!” ಎಂದು ಹೆಗ್ಗಳಿಕೆಯ ಮಾತಾಡಿದೆ..

ಆದರೆ ಎಷ್ಟು ಬಿಝಿಯಾಗಿಬಿಡುತ್ತೇನೆ ಎಂಬ ಅರಿವಿರಲಿಲ್ಲ ಆಗ ನನಗೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!