ಕಥೆ ಕಾದಂಬರಿ

ಕರಾಳ ಗರ್ಭ ಭಾಗ -೧೨


ರಾತ್ರಿ ಮಲಗಿದ್ದರೂ ನಿದ್ದೆಹತ್ತಲಿಲ್ಲ. ಜಾನಿ ಮತ್ತು ಅವನ ಪ್ರಿಯತಮೆ ಶಾಂತಿಯ ಕೊಲೆಗಳು ನನ್ನ ಕಣ್ಣಿಗೆ ಕಟ್ಟಿದಂತಾಗಿ  “ನೀನು ನಮ್ಮನ್ನುಉಳಿಸಲು ಆಗುತ್ತಿರಲಿಲ್ಲವೇ’ ಎಂದು ಚುಚ್ಚಿ ಚುಚ್ಚಿ ಕೇಳಿದಂತಾಯಿತು. ಕಡೇ ಪಕ್ಷ ಅವರ ಕೊಲೆಗಾರನನ್ನಾದರೂ ನಾನು ಪತ್ತೆ ಹಚ್ಚಿ ಕಾನೂನಿಗೆ ಕೊಡಬೇಕೆಂಬ ಛಲ ಹುಟ್ಟಿತು.

ಮುಂದಿನ ದಿನ ಬೆಳಿಗ್ಗೆ ನಾನು ಕಾಫಿ ತಿಂಡಿ ಮುಗಿಸುತ್ತಿರುವಾಗಲೇ ಲೂಸಿಯ ಕರೆ ಬಂದಿತ್ತು

’ಮೃದುಲಾ ಮತ್ತು ಫರ್ನಾಂಡೆಸ್ ಆಗಲೇ ಬೆಳಿಗ್ಗೆ ವಿಮಾನದಲ್ಲಿ ಬಂದಿಳಿದರೆಂದೂ ತಾನು ತಾಯಿ ಮಗಳ ಭಾವುಕ ಪುನರ್ಮಿಲನಕ್ಕೆ ರಚನಾಳ ಮನೆಗೆ ಹೋಗುತ್ತಿರುವೆನೆಂದೂ’ ತಿಳಿಸಲು.

“ ನೀವೂ ಬರಬಹುದಲ್ಲಾ?” ಎಂದಳು

ನಾನು ಜಾನಿ-ಶಾಂತಿಯ ಕೊಲೆಗಾರ ಸಿಕ್ಕುವವರೆಗೂ ದುಡಿಯುತ್ತೇನೆಂದೂ ಇಲ್ಲದಿದ್ದರೆ ನನ್ನ ಮನಸ್ಸಾಕ್ಷಿ ಒಪ್ಪುವುದಿಲ್ಲವೆಂದೂ ಹೇಳಿದೆ.

ಅದಾಗಿ ಹತ್ತು ನಿಮಿಷದಲ್ಲಿ ಕಮೀಶನರ್ ರಾಮನ್ ನನ್ನ ಮೊಬೈಲ್’ಗೆ ಕರೆ ಮಾಡಿದರು.

“ವಿಜಯ್, ಇನ್ನೊಂದು ಕೋಲ್ಟ್ ೦.೩೮ ರಿವಾಲ್ವರ್ ಪತ್ತೆಯಾಯ್ತು..ಅದು ನಮ್ಮ ತಂದೆಗೆ ಪೋಲಿಸ್ ಸರ್ವೀಸಿನಲ್ಲಿ ಕೊಟ್ಟಿದ್ದು..”ಎಂದು ನಿಲ್ಲಿಸಿದರು

“ ಹಾಗಾದರೆ ಅದನ್ನು ಅವರು ಪೋಲಿಸ್ ಇಲಾಖೆಗೆ ವಾಪಸ್ ಕೊಟ್ಟಿದ್ದಿರಬೇಕು, ಇಲ್ಲವೇ ನಿಮ್ಮ ಮನೆಯಲ್ಲೇ ಇರಬಹುದು..”ಎಂದೆ

“ನೋಡಿ ಅದೇ ವಿಚಿತ್ರ ಎನ್ನುವುದು..ಅವರು ಹಾಗೆ ಮಾಡಿಯೇ ಇಲ್ಲಾ, ಇಲಾಖೆಗೆ ವಾಪಸ್ ಕೊಟ್ಟ ದಾಖಲೆಯೂ ಇಲ್ಲಾ, ಇತ್ತ ಮನೆಯಲ್ಲಿಯೂ ಖಂಡಿತಾ ಇಲ್ಲಾ …” ಎಂದರು ಇದೊಂದು ಅರ್ಥವಾಗದ ಒಗಟು ಎಂಬಂತೆ.

“ನಿಮಗೆ ಈ ಬಗ್ಗೆ ಖಚಿತವಾಗಿ ಗೊತ್ತೆ?” ಎಂದೆ, ನನ್ನ ಎದೆ ಡವಗುಟ್ಟುತಿತ್ತು

“ ಹೌದು, ನಾನು ನೋಡಿರುವ ಹಾಗೆ. ಅಪ್ಪ ನಿವೃತ್ತರಾದ ಮೇಲೆ ಎಂದೂ ನಮ್ಮ ಮನೆಯಲ್ಲಿ ಅವರ ರಿವಾಲ್ವರ್ ಇದ್ದದ್ದು ನಾ ಕಾಣೆ. ಯಾವತ್ತಿನಿಂದ ಅದು ಕಾಣೆಯಾಗಿತ್ತೋ ಗೊತ್ತಿಲ್ಲ”

ಇಬ್ಬರೂ ನಮ್ಮೆದುರಿಗಿದ್ದ ಸತ್ಯವನ್ನು ಅರಿತು ಎರಡು ಕ್ಷಣ ಸ್ತಂಭೀಭೂತರಾದೆವು.

“ಇದರ ಅರ್ಥ ಏನೆಂದು ನಿಮಗೆ ಗೊತ್ತಾಯಿತು ತಾನೆ?” ಎಂದೆ ನಾನು ಉದ್ವೇಗದಿಂದ.

ಎಷ್ಟಾದರೂ ಕಮೀಶನರ್ ಅಲ್ಲವೆ ಅವರು!

“ ಗೊತ್ತಾಯಿತು, ವಿಜಯ್!..ನಾನೂ ಬರುತ್ತೇನೆ ಅಲ್ಲಿಗೆ, ಒಟ್ಟಿಗೇ ಹೋಗೋಣಾ..”ಎಂದು ದೃಢವಾಗಿ ನುಡಿದರು.

“ಬೇಡಾ, ಕಮೀಶನರ್..ನೀವೀಗ ನಿಮ್ಮ ಹೆಂಡತಿ ಮತ್ತು ದತ್ತು ಪುತ್ರಿಯ ಮಿಲನವನ್ನು ನೋಡಿಕೊಳ್ಳುತ್ತಿರಿ..ಸ್ವಲ್ಪ ನನಗೆ ಹೋಗಿ ಮಾತನಾಡಲು ಅವಕಾಶ ಕೊಡಿ..ಅರ್ಧ ಗಂಟೆ ಬಿಟ್ಟು ಅಲ್ಲಿಗೆ ಬಂದು ಬಿಡಿ..”ಎಂದು ಕೋರಿದೆ.

” ಹಾಗೆ ಆಗಲಿ..ನಾನಲ್ಲಿಗೆ ಬಂದೇ ಬರುತ್ತೇನೆ, ನೀವು ಜೋಪಾನವಾಗಿರಿ” ಎಂದು ಕಾಲ್ ಮುಗಿಸಿದರು.

ನಾನು ಆಗ ನನ್ನ ಲಾಡ್ಜ್’ನಿಂದ ತರಾತುರಿಯಿಂದ ಹೊರಬಿದ್ದೆ.

ಕೆಲವು ಕೇಸ್’ಗಳಲ್ಲಿ ಹೀಗೇ ನೋಡಿ…ಎಲ್ಲಾ ಸಂಬಂಧಿತ ಸಾಕ್ಷಿಗಳನ್ನೂ ನಾನು ವಿಚಾರಿಸಿಬಿಟ್ಟಿದ್ದೇನೆಂದು ಊಹಿಸಿರುತ್ತೇನೆ, ಆದರೆ ಯಾವುದೋ ಒಬ್ಬ ಅತ್ಯಂತ ಪ್ರಮುಖ ವ್ಯಕ್ತಿಯನ್ನು ಭೇಟಿಯೂ ಆಗಿರುವುದಿಲ್ಲಾ.

ಅಂತದೇ ತಪ್ಪನ್ನು ಈ ಬಾರಿಯೂ ಮಾಡಿರಬಹುದೆಂಬ ಅನುಮಾನ ಬಲವಾಗಿತ್ತು.

ಕೇವಲ ಐದೇ ನಿಮಿಷಗಳಲ್ಲಿ ಅವರ ಮನೆ ತಲುಪಿದ್ದೆ.

ನದಿಯ ಬದಿಯ ಮನೆ ಎಂದಿನಂತೆ ಖಾಲಿ ಮತ್ತು ನಿರ್ಜನವಾಗಿ ಕಾಣುತಿತ್ತು.

ಅಲ್ಶೇಶಿಯನ್ ನಾಯಿ ಇರಬಹುದಾದುದನ್ನೂ ಲೆಕ್ಕಿಸದೆ ನಾನು ನಂಬೂದರಿಯ ಮನೆಗೆ ನುಗ್ಗಿದೆ. ನಾಯಿಯನ್ನು ಹಿಂದೆ ಕಟ್ಟಿದ್ದರೆಂದು ಕಾಣುತ್ತೆ..ಅದು ಅಂದು ನನಗೆ ಅಡ್ಡಿ ಮಾಡಲಿಲ್ಲ..

ಅಲ್ಲಿ ಅಡ್ಡಿಪಡಿಸಲು ಮನೆಯ ಮಾಲಿಕನೇ ಇರಲಿಲ್ಲ ಎಂದು ನನಗೆ ಐದೇ ನಿಮಿಷಗಳಲ್ಲಿ ಒಂದು ಸುತ್ತು ಎಲ್ಲಾ ಕೋಣೆಗಳನ್ನು ಸುತ್ತುವಷ್ಟರಲ್ಲಿ ಅರಿವಾಗಿಬಿಟ್ಟಿತ್ತು.

ಮನೆಯ ಲಿವಿಂಗ್ ರೂಮಿನ ಮಧ್ಯದ ಮೇಜಿನ ಮೇಲೆ ಎರಡು ವಸ್ತುಗಳಿದ್ದವು…

ಒಂದು ಬಿಳಿ ಕಾಗದದ ಪತ್ರ ಮತ್ತು ಅದರ ಮೇಲೆ ಗಾಳಿಗೆ ಹಾರಿಹೋಗದಂತೆ ಗಟ್ಟಿ ಮರಳಿನ ಗಂಟು ಕಟ್ಟಿದ ಚೀಲ..ತಲೆಗೆ ಹೊಡೆದರೆ ಮೂರ್ಛೆ ಬರುವಂತದ್ದು!..ನನ್ನ ತಲೆಗೆ ಆಗಲೇ ರುಚಿ ತೋರಿರುವಂತದು!

ನಾನು ಆ ಮರಳಿನ ಚೀಲವನ್ನು ಬದಿಗಿಟ್ಟು ಪತ್ರವನ್ನು ಬೇಗ ಓದತೊಡಗಿದೆ:

“ ಎಲ್ಲರಿಗೂ ನನ್ನ ಕೊನೆಯ ನಮಸ್ಕಾರ.. ಈ ಪತ್ರವನ್ನು ಓದುವ ಹೊತ್ತಿಗಾಗಲೇ ನೀವೆಲ್ಲರೂ ಹುಡುಕುತ್ತಿದ್ದ ಆ ಕ್ರೂರ ಅಪರಾಧಿ ನಾನೇ ಎಂದು ತಿಳಿದುಬಿಟ್ಟಿರುತ್ತದೆ..ಇನ್ನು ನಿಮ್ಮೆಲ್ಲರ ಮುಂದೆ ಎಲ್ಲಾ ವಿಷಯಗಳನ್ನೂ ಬಹಿರಂಗ ಪಡಿಸಿ ಹೊರಟು ಹೋಗುತ್ತಿದ್ದೇನೆ.

ಅಂದು ನನಗೆ ನನ್ನ ಮಗಳು ಅವನ ಮಗುವನ್ನು ಹೆರಬೇಕಾದ ಕಳಂಕ ಹೊರುವುದು ಖಚಿತವಾದ ಮೇಲೆ ಆ ತಮಿಳು ಯುವಕ ಕಣ್ಣನ್’ನನ್ನು ಕೊಲ್ಲಬೇಕೆಂಬ ಉದ್ದೇಶ ಹುಟ್ಟಿದ್ದು ನನ್ನ ಪಾಲಿಗೆ ಸಹಜವೇ ಆಗಿತ್ತು..ನಾನು ನಮ್ಮ ನಂಬೂದರಿ ಸಂಪ್ರದಾಯ, ಮರ್ಯಾದೆ ಬಗ್ಗೆ ಅತ್ಯಂತ ಗೌರವವಿಟ್ಟುಕೊಂಡಿದ್ದವನು..ಅಹಂಕಾರವೆಂದಾದರೂ ಅನ್ನಿ.ಅಂತದರಲ್ಲಿ ನನ್ನ ಮಗಳನ್ನೆ ಆ ಕುಲಗೆಟ್ಟ ಯುವಕ ಹಾಳು ಮಾಡಿದ್ದನೆಂಬ ರೋಷ ಹೆಚ್ಚಾಗಿ ಸೇಡಿಗಾಗಿ ಒಂದು ಯೋಜನೆ ಮಾಡಿದೆ.ನನ್ನ ದುಷ್ಟ ಉದ್ದೇಶಕ್ಕಾಗಿ ನನ್ನ ಗೆಳೆಯನಾದ ಪೋಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸನ ಬಳಿಯಿದ್ದ ೦.೩೮ ಪೋಲಿಸ್ ಸರ್ವಿಸ್ ರಿವಾಲ್ವರ್ ಅನ್ನು ಕದ್ದೆ. ಅವನಿಗೆ ತಿಳಿಯದಂತೆಯೆ…ನಾನು ಅಂದು ದುಃಖ ನುಂಗಲೆಂದು ವಿಸ್ಕಿ ಕುಡಿಯುತ್ತಾ ಕುಳಿತಿದ್ದಾಗ ಅವನು ನನಗೆ ಕಂಪನಿ ಕೊಡಲೆಂದು ಬಂದಿದ್ದ..ಅವನು ಅಮಲಿನಲ್ಲಿರುವಾಗ ನಾನು ಅವನ ರಿವಾಲ್ವರನ್ನು ಕದ್ದು ಬಚ್ಚಿಟ್ಟುಬಿಟ್ಟೆ…ನಂತರ ಅವನ ಜತೆಯೇ ಸೇರಿ ಅದನ್ನು ಅಲ್ಲಿ ಇಲ್ಲಿ ಹುಡುಕಾಡುವ ನಾಟಕವನ್ನು ಮಾಡಿದೆ..

ಮುಂದಿನ ದಿನ ನನ್ನ ಮಗಳಿಗೆ ಹೊಡೆದು ಬಡಿದೂ ಹಿಂಸೆ ಕೊಟ್ಟು ಅವಳ ಪ್ರೇಮಿಯನ್ನು ಹುಡುಕುತ್ತ ಸೇಡಿನ ಮೃಗದಂತೆ ನದಿಯ ಬದಿಗೆ ಹೋದೆ.

.”ನೀವೆ ಅವಳ ಅಪ್ಪನಲ್ಲವೆ ?”ಎಂದು ಮರಳ ಮೇಲೆ ಕೊಳಲೂದುತ್ತಿದ್ದ ಕಣ್ಣನ್ ಎದ್ದ.

“ ನಿಮ್ಮಪ್ಪ ಯಾರೋ, ಭಡವಾ?:ಎಂದು ಕೂಗಿದೆ..

“ಗೊತ್ತಿಲ್ಲ, ಸತ್ತು ಹೋದರು..”ಎಂದವನಿಗೆ ಅವನು ಮುಂದೆ ಹೇಳಿದ ಮಾತೇ ಅವನ ಸಾವಿಗೆ ಕಾರಣವಾಯಿತು ಎಂದು ಕಾಣುತ್ತೆ.

“ ನೀವೇನೂ ಯೋಚಿಸಬೇಡಿ ಸರ್… ನಿಮ್ಮ ಮಗಳನ್ನು ನಾನೆ ಮುಂದೆ ಮದುವೆಯಾಗುತ್ತೇನೆ..ಅವಳಿಗೂ ಹೇಳಿದ್ದೇನೆ, ಒಪ್ಪಿದ್ದಾಳೆ” ಎಂದುಬಿಟ್ಟ..ಕೇವಲ ಹದಿನೇಳು ವರ್ಷವಯಸ್ಸಿನ ತಮಿಳು ನಿರಾಶ್ರಿತರ ಯುವಕ, ನನ್ನ ಮೈನರ್ ಮಗಳನ್ನು ಮದುವೆಯಾಗುವ ಯೋಚನೆಯನ್ನೂ ಮಾಡಿದ್ದಾನೆ!! ಇವನನ್ನು ಇಲ್ಲೆ ಮುಗಿಸಲೇಬೇಕು ಎಂಬ ಕ್ರೋಧ ಉಕ್ಕಿಬಂದು ಆ ಕ್ಷಣವೇ ಅವನನ್ನು ಆ ಪೋಲಿಸ್ ರಿವಾಲ್ವರಿಂದ ಗುಂಡಿಟ್ಟು ಸಾಯಿಸಿದೆ..

ನಂತರ ನನಗೆ ನಾನು ಮಾಡಿದ ಅಪರಾಧದ ಅರಿವಾಗಿ, ತಣ್ಣನೆಯ ಬೆವರಿಳಿಯಿತು..

ಹೆಣವನ್ನು ಅಲ್ಲೇ ಬಿಟ್ಟು ನನ್ನ ಗೆಳೆಯ ಶ್ರೀನಿವಾಸನ ಬಳಿಗೆ ಓಡೋಡಿ ಹೋಗಿ ಮಾಡಿದ್ದನ್ನೆಲ್ಲಾ ತಿಳಿಸಿದೆ..ಅವನಿಗೂ ನಾನು ಕುಲ ಗೌರವಕ್ಕಾಗಿ ಹತ್ಯೆ ಮಾಡಿದ್ದು ಸರಿಯೆ ಅನಿಸಿತು..ಆಗಿನ ಕಾಲದ ರೀತಿ- ರಿವಾಜು ಆ ರೀತಿಯೇ ಇತ್ತು..

“ನನ್ನ ಪಿಸ್ತೂಲ್ಲೇನಾಯ್ತು ..ಹೆಣ ಸಿಕ್ಕರೆ ನನ್ನ ಮೇಲೇ ಬರುತ್ತೆ” ಎಂದು ಹೆದರಿದ. ನಾನದನ್ನು ಮತ್ತೆ ಬಚ್ಚಿಟ್ಟಿದ್ದೆ.

ನನ್ನ ಮನಸ್ಸಿನಲ್ಲಿ ಯಾವುತ್ತೋ ಯಾವುದೋ ವಿಪತ್ತು ಬಂದರೆ ರಕ್ಷಣೆಗೆ ಇರಲಿ ಎಂಬ ಆಲೋಚನೆಯಿತ್ತು!

“ ಅದನ್ನು ನಾನು ನದಿಗೆ ಎಸೆದುಬಿಟ್ಟೆ, ನೀನು ನಿನ್ನ ಇಲಾಖೆಗೆ ಕಳೆದುಹೋಯಿತೆಂದು ಹೇಳು !”ಎಂದು ಸೂಚಿಸಿದೆ. ಆದರೆ ಅದನ್ನು ಅವನು ನನ್ನ ಮಾತು ನಂಬಿದ ಆದರೆ ಒಪ್ಪಲಿಲ್ಲ..

“ಈ ಗನ್ ರಿಜಿಸ್ಟರ್..ಮತ್ತೆಲ್ಲ ದಾಖಲೆಗಳು ನನ್ನ ಬಳಿಯೆ ಇವೆ..ನಾನು ಈ ವಿಷಯ ಮುಚ್ಚಿ ಹಾಕಿಬಿಡುತ್ತೇನೆ, ಯಾರಿಗೂ ಗೊತ್ತಾಗುವುದಿಲ್ಲಾ..ಆದರೆ ನಾವು ಮೊದಲು ಆ ಹುಡುಗನ ಹೆಣವನ್ನು ಸಾಗಿಸಿಬಿಡಬೇಕು” ಎಂದ.

ನಾನೂ – ಅವನೂ ಸೇರಿ ನದಿಯ ಆಳವಾದ ಭಾಗಕ್ಕೆ ಅವನ ಹೆಣ ಕೊಂಡೊಯ್ದು , ಕಾಲುಗಳಿಗೆ ಕಲ್ಲು ಕಟ್ಟಿ ಎಸೆದು ಬಿಟ್ಟೆವು..ಯಾರೂ ನಮ್ಮನ್ನು ನೋಡಲಿಲ್ಲಾ..ಮನೆಯಲ್ಲಿ ನಾನು ಹೆಂಡತಿ ಮಗಳಿಗೆ ಹೇಳಿ ಅವರಿಬ್ಬರನ್ನೂ ಬಾಯಿ ಬಿಡದಂತೆ ಪ್ರಮಾಣ ಮಾಡಿಸಿಕೊಂಡೆ; ಇಲ್ಲದಿದ್ದರೆ ನಾನು ಜೈಲು ಪಾಲಾದರೆ ಗತಿಯೇನು ಎಂದು ಭಯಪಟ್ಟು ಅವರೂ ಸುಮ್ಮನಾದರು.

ನಮ್ಮ ಪರಿಚಯದ ಡಾ ಸೋಮನ್ ಮಾತಿನ ಮೇಲೆ, ಸೂಲಗಿತ್ತಿಯನ್ನಿಟ್ಟು ಮಗಳ ಹೆರಿಗೆ ವ್ಯವಸ್ಥೆ ಮಾಡಿದ್ದೆವು.  ಆ ಸುಬ್ಬಮ್ಮನಿಗೆ ನನ್ನ ಮೇಲೆ ಮೊದಲಿನಿಂದ ಅನುಮಾನ..ಮೃದುಲಾಗೆ ಎಷ್ಟು ಹೇಳಿದರೂ ಕೇಳದೆ ಒಮ್ಮೆ ಆಕೆ “ಅಪ್ಪನೇ ಅವನನ್ನು ಕೊಂದರು!” ಎಂದು ಅವಳಿಗೆ ಹೇಳಿಬಿಟ್ಟಳೆಂದು ಕಾಣುತ್ತೆ..ಸದ್ಯ ಅವಳೇ ಸ್ವಲ್ಪ ವರ್ಷದ ನಂತರ ತಲೆಕೆಟ್ಟು ಅರೆ ಹುಚ್ಚಿಯಾದಳು ಸದ್ಯಾ.ಅವಳಿಂದ ಇನ್ಯಾವ ವಿಷಯವೂ ಯಾರಿಗೂ ತಿಳಿಯುವ ಆಸ್ಪದವಿಲ್ಲ. ಇಲ್ಲದಿದ್ದರೆ ಅವಳನ್ನು ನಾನೇ ಕೊಲ್ಲಬೇಕಾಗುತ್ತಿತ್ತು.

ನನ್ನ ಸ್ನೇಹಿತ ಶ್ರೀನಿವಾಸನ್ ಖುದ್ದಾಗಿ ಆಗ ಮಾಂಡಿಚೆರ್ರಿಗೆ ಟೂರ್‍ ಮೇಲೆ ಬಂದಿದ್ದ ಹೊಸಮನಿ ದಂಪತಿಯನ್ನು ನನ್ನ ಬಳಿ ಕರೆತಂದ…ಅವರಿಗೆ ಮಗುವನ್ನು ನಮ್ಮದೇ ಎಂದು ಹೇಳಿ ನಾನು ನನ್ನ ಹೆಂಡತಿ ಪತ್ರಗಳಿಗೆ ಸಹಿ ಮಾಡಿದೆವು, ರಚನಾಗೆ ಸ್ವಲ್ಪವೂ ತಿಳಿಯದ ಹಾಗೆ!

ನಾವು ಈ ರಹಸ್ಯ ಮನೆ- ಮನೆಯಲ್ಲೇ ಉಳಿಯಲೆಂದು ಶ್ರೀನಿವಾಸನ್ ಮಗ ರಾಮನ್’ಗೆ ರಚನಾಳನ್ನು ಕೊಟ್ಟು ಮದುವೆ ಮಾಡಿದೆವು..

ಹಲವಾರು ವರ್ಷಗಳೇ ಉರುಳಿದವು..ನಾನು ಮಾಡಿದ ಆ ಕೊಲೆ ನನ್ನ ಮನಸ್ಸಿನಲ್ಲೆ ಕೊರೆಯುತ್ತಿತ್ತೇ ವಿನಾ ಯಾರಿಗೂ ಹೇಳುವಂತೆಯೇ ಇರಲಿಲ್ಲ..ಆಗಾಗ ಮೊಮ್ಮಗಳ ನೆನಪು ಬರುತ್ತಿದ್ದುದು ನಿಜ.

ಆಕೆ ಹೊಸಮನಿ ಕುಟುಂಬದಲ್ಲಿ ಬೆಳೆದು ಮುಂದೆ ಟಿವಿಯಲ್ಲಿ ಯಲ್ಲಿ ಜನಪ್ರಿಯ ತಾರೆ ಮೃದುಲಾ ಆಗಿದ್ದು ನಾನು, ರಚನಾ ರಾಮನ್ ಮೆಚ್ಚಿದೆವಾದರೂ ಯಾರಿಗೂ ಹೇಳಿಕೊಳ್ಳಲಾಗಲಿಲ್ಲ. ಇದು ರಚನಾಗೆ ಮಾತ್ರ ಸದಾ ನೋವು ತಂದ ವಿಷಯ.

ಆದರೆ ಇತಿಹಾಸ ಮರಳುತ್ತದೆ ಎನ್ನುವುದು ಸುಳ್ಳಾಗಲಿಲ್ಲ. ಸುಮಾರು ಆರು ತಿಂಗಳ ಕೆಳಗೆ ಯಾವುದೋ ಅಮಲಿನ ಗಳಿಗೆಯಲ್ಲಿ ನಾನು ಮತ್ತು ರಾಮನ್ ನಮಗೆ ತಿಳಿಯದೆಯೇ ಜಾನಿಯಂತಾ ಮೋಸಕೋರ ಯುವಕನ ಕಿವಿಗೆ ಈ ರಹಸ್ಯವನ್ನು ತಲುಪಿಸಿಬಿಟ್ಟಿದ್ದೆವು..

ಈಗಾಗಲೆ ನಿಮಗೆ ಅವನು ನನ್ನನ್ನೂ, ರಚನಾ ರಾಮನ್’ರನ್ನೂ, ಕೊನೆಗೆ ಏನೂ ತಿಳಿಯದೇ ನಮ್ಮೆಲ್ಲರಿಂದ ದೂರವೇ ಬೆಳೆದಿದ್ದ ನನ್ನ ಮೊಮ್ಮಗಳನ್ನೂ ಬಿಡದೇ ಬ್ಲಾಕ್ ಮೈಲ್ ಜಾಲದಲ್ಲಿ ಬೀಳಿಸಿಕೊಂಡಿದ್ದು …ಅವನು ಹಣ ಪೀಕಿಸುವುದಲ್ಲದೇ ನಮಗೆ ಬೆದರಿಸಿ ಹೆದರಿಸಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದ..ಕೊನೆಗೆ ನನಗೆ ಸಾಕು ಸಾಕಾಗಿ ಈ  ಜಾನಿಯನ್ನು ಬೆದರಿಸಿ ಅಥವ ಹೊಡೆದುರುಳಿಸಿ ಅವನ ಬಳಿಯಿದ್ದ ಪತ್ರಗಳನ್ನೆಲ್ಲಾ ವಾಪಸ್ ತಂದು ಬಿಟ್ಟರೆ ಈ ಅನಿಷ್ಟ ವ್ಯವಹಾರವನ್ನೇ ಮುಗಿಸಬಹುದೆಂದೆನಿಸಿತು.. ಅಂದಿನ ದಿನ ಈ ಚಿಕ್ಕ ಮರಳಿನ ಚೀಲದ ಆಯುಧವನ್ನು ಕೈಯಲ್ಲಿರಲಿ ಎಂದು ಇಟ್ಟುಕೊಂಡು ಅವನ ಮನೆಗೆ ಹೋಗಿದ್ದೆ..ಮನೆಯಿಂದ ಕತ್ತಲಲ್ಲಿ ಹೊರಬಂದವನು ಜಾನಿಯಲ್ಲದೇ ಮತ್ತಿನ್ಯಾರಿರುವರು ಎಂಬ ಧೈರ್ಯದಿಂದ ಅದನ್ನು ಆ ಪತ್ತೆದಾರನ ತಲೆಗೆ ಬೀಸಿದ್ದೆ..ದುಡುಕಿ ತಪ್ಪಾಗಿಬಿಟ್ಟಿತು…ಆದರೂ ’ಅಂತಾ ಅಪಾಯವೇನಿಲ್ಲಾ , ಪುಟ್ಟ ಗಾಯ’ ಎಂದು ಸುಮ್ಮನಾಗಿ ಒಳಗೆ ಹೋಗಿ ಪತ್ರಗಳಿಗಾಗಿ ಹುಡುಕಿದೆ..ಸಿಕ್ಕಲಿಲ್ಲಾ…

ಅಂದರೆ ಜಾನಿ ಅದಕ್ಕೂ ಮುಂಚೆಯೇ ಆ ಪತ್ರಗಳನ್ನೆಲ್ಲಾ ಎಲ್ಲೋ ಬಚ್ಚಿಟ್ಟಿಯೇ ಬಿಟ್ಟಿದ್ದ ಎಂದು ಊಹಿಸಿಕೊಂಡು  ಮನೆಗೆ ಹಿಂತಿರುಗಿದೆ.

ಆಮೇಲೆ ಮನೆಗೆ ಬಂದ ಮೇಲೆ ಯೊಚಿಸಿ ನೋಡಿದೆ..ನನಗೆ ಹೊಳೆಯಿತು, ಅಯ್ಯೋ! ಆ ಪತ್ತೇದಾರರ ಜೇಬಿನಲ್ಲಿ ನೋಡಲಿಲ್ಲವಲ್ಲಾ ಎಂದು!.. ’ನನಗೆ ವಯಸ್ಸಾಗುತ್ತಿದೆ, ಎಲ್ಲಾ ಮರೆಯಹತ್ತಿದ್ದೇನೆ..ತಪ್ಪು ಮಾಡುತ್ತಿದ್ದೇನೆ’ ಎಂದು ನನ್ನನ್ನೇ ಹಳಿದುಕೊಂಡೆ.

ಕೊನೆಗೆ ಮೊನ್ನೆಯೊಮ್ಮೆ ರಚನಾ ಮನೆಗ ಬಂದಾಗ ನನ್ನ ಬಳಿ ತುಂಬಾ ದು:ಖಿಸಿದಳು.. ’ನನ್ನ ಇಡೀ ಜೀವನವನ್ನೇ ಹಾಳುಗೆಡವಿದೆ, ಅಪ್ಪಾ ’ ಎಂದು ನನ್ನನ್ನು ವಿಧ-ವಿಧವಾಗಿ ಚುಚ್ಚಿ ನುಡಿದಳು.’ ನಿನ್ನಿಂದಾಗಿ ನಾನು ಹುಡುಕಿಕೊಂಡು ಬಂದಿರುವ ನನ್ನ ಕಳೆದು ಹೋದ ಮಗಳನ್ನು ಭೇಟಿಯಾಗುವ ಅವಕಾಶ ಸಹ ಇಲ್ಲವಾಯಿತು ’ ಎಂದು ದೂಷಿಸಿ ಹೊರಟು ಹೋದಳು.

ನಾನು ಆಗಲೇ ನಿರ್ಧರಿಸಿದೆ.

’ನಾನು ಹಿಂದೆ ಮಗಳ ಬಾಳು ಹಸನಾಗಲಿ ಎಂದು ತಪ್ಪಾಗಿ ಒಂದು ಕೊಲೆಮಾಡಿದ್ದೆ.. ಇಂದು ಅದೇ ಕಾರಣಕ್ಕಾಗಿ ಸರಿಯಾದ ಇನ್ನೊಂದು ಕೊಲೆಯನ್ನು ಮಾಡಬೇಕಾದರೂ ಸೈ!..ನಾನು ಮಾಡಿದ ಆ ಪಾಪಕ್ಕೆ ಪ್ರಾಯಶ್ಚಿತ್ತವೆಂಬಂತೆ ಜಾನಿಯನ್ನು ಮುಗಿಸಿ ಇದಕ್ಕೆಲ್ಲಾ ಇತಿಶ್ರೀ ಹಾಡಿ ಹೋಗಿಬಿಡುತ್ತೇನೆ ’ ಎಂದು ನಿರ್ಧರಿಸಿ ನಾನು ಮೂರೂವರೆ ದಶಕಗಳಿಂದ ಬಚ್ಚಿಟ್ಟಿದ್ದ ಶ್ರೀನಿವಾಸನ್’ನ ರಿವಾಲ್ವರನ್ನು ಹೊರತೆಗೆದೆ..ಗುಂಡುಗಳು ಇದ್ದವು, ಕೆಲಸ ಮಾಡುತ್ತದೆ ಎಂಬ ವಿಶ್ವಾಸ ಬಂತು..

ಆದರೆ ಅವನ ಮನೆಗೆ ಹೋದಾಗ ಆಗಿದ್ದೇ ಬೇರೆ.. ಅಲ್ಲಿ ಅವನ ಜತೆಗೆ ಆ ಹುಡುಗಿ ಶಾಂತಿಯನ್ನು ಕಂಡು ನನ್ನ ಮನಸ್ಸು ಸ್ವಲ್ಪ ಬದಲಾಯಿಸಿತು..ಇವರನ್ನು ಕೊಲ್ಲುವುದು ಬೇಡ ಎನಿಸಿ ಇಬ್ಬರಿಗೂ ಇನ್ನಿಲ್ಲದಂತೆ ತಿಳಿಹೇಳಿದೆ..ನನ್ನ ಯಾವ ಬುದ್ದಿ ಮಾತಿಗೂ ಅವರು ಬಗ್ಗಲಿಲ್ಲ.. ‘ಆ ಪತ್ರಗಳನ್ನು ನನಗೆ ಕೊಟ್ಟುಬಿಡಿರೆಂದು, ನಾನು ನಿಮ್ಮನ್ನು ಪೋಲಿಸಿಗೆ ಹಿಡಿದು ಕೊಡುವುದಿಲ್ಲವೆಂದು ’ ಹೇಳಿದೆ.. ಇಬ್ಬರು ನನ್ನನ್ನು ಹುಚ್ಚನೆಂಬಂತೆ ನೋಡಿ ಅಪಹಾಸ್ಯ ಮಾಡಿ ನಕ್ಕರು..ಅಲ್ಲದೇ ಆ ಯುವತಿ ಶಾಂತಿ ಬಂದು ನನ್ನ ಹಿಂದೆ ನಿಂತು ನನ್ನ ಕೈಗಳನ್ನು ಕಟ್ಟಿ ಹಾಕುವೆನೆಂದು ಬೆದರಿಸಿದಾಗ, ನಾನು ಅವಳ ಹಿಡಿತದಿಂದ ಬಿಡಿಸಿಕೊಂಡೆ..ಮತ್ತದೇ ಹಳೇ ರೋಷ ನನ್ನ ಮನದಲ್ಲಿ ಉಕ್ಕಿತ್ತು..ಸರ್ರನೆ ರಿವಾಲ್ವರ್ ತೆಗೆದು ಜಾನಿಯನ್ನು ಹತ್ತಿರದಿಂದಲೇ ತಲೆಗೆ ಗುಂಡಿಟ್ಟು ಕೊಂದು ಬಿಟ್ಟೆ..ತಪ್ಪಿಸಿಕೊಂಡು ಕಿಚನ್ನಿಗೆ ಓಡಿಹೋದ ಶಾಂತಿಯನ್ನೂ ಬಿಡಲಿಲ್ಲಾ, ಅವಳನ್ನೂ ಅಲ್ಲೇ ಕೊಂದು ಬಿಟ್ಟೆ…ಕೊನೆಗೂ ನನಗೆ ಆ ಬ್ಲ್ಯಾಕ್ ಮೈಲ್’ಗಾಗಿ ಬಳಸುತ್ತಿದ್ದ ಪತ್ರಗಳು ಸಿಗಲೆ ಇಲ್ಲಾ..ನನ್ನ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು..ನಾನು ಸೋತೆನೆಂದು ನನಗೆ ಅರಿವಾಯಿತು…

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!