ಕಥೆ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪

___________________________________

ನರರ ಭಯ ಬಯಕೆಗಳೆ ಸುರರ ತಾಯ್ತಂದೆಗಳೋ ? |

ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||

ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ? |

ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ || ೦೨೪ ||

ಸುರರ ಜತೆಗಿನ ನರರ ಬಂಧವನ್ನು ಬಿಂಬಿಸುತಲೆ ಅದರಲ್ಲಿರುವ ತಾರತಮ್ಯವನ್ನು ಟೀಕಿಸುವ ಹುನ್ನಾರ ಈ ಪದ್ಯದ್ದು.

ನರ ಮಾನವರಿಗೆ ದೇವರೆಂದರೆ ಭಯ ಭಕ್ತಿ ಅಪಾರ – ಅವರ ಶಕ್ತಿ ಮತ್ತು ಅಗಾಧ ಸಾಮರ್ಥ್ಯಗಳು ತಮ್ಮನ್ನು ಬಗ್ಗುಬಡಿಯಬಲ್ಲವೆಂಬ ಅರಿವಿನಿಂದ; ಅಷ್ಟೆ ಆಸೆ, ಆಸ್ಥೆ, ಪ್ರೀತಿಯೂ ಉಂಟು – ಅದೇ ಅಗಾಧ ಶಕ್ತಿ, ಸಾಮರ್ಥ್ಯಗಳು ವರದ ರೂಪದಲ್ಲಿ ಪ್ರಸನ್ನವಾಗಿ ಪ್ರಕಟವಾದರೆ ಬದುಕು ಪಾವನವಾಗುವುದಲ್ಲ – ಎಂಬ ಕಾಮನೆಯಲ್ಲಿ. ಒಂದೆಡೆ ಬಯಕೆಗಳನ್ನು ತೀರಿಸಬಲ್ಲ ಮತ್ತು ಇನ್ನೊಂದೆಡೆ ಕಷ್ಟ ಕಾರ್ಪಣ್ಯವಿತ್ತು ಶಿಕ್ಷಿಸಬಲ್ಲ ಶಕ್ತಿಗಳೆರಡು ಇರುವುದರಿಂದ ದೇವತೆಗಳಿಗೆ ಕೊಂಚ ಹೆಚ್ಚೆ ಹಮ್ಮು. ಹೀಗಾಗಿ ಬಯಕೆಗಳ ಪ್ರಲೋಭನೆಯೊಂದು ಕಡೆ, ಶಿಕ್ಷೆಗೊಳಗಾಗುವ ಭೀತಿಯಿನ್ನೊಂದು ಕಡೆ – ಇವೆರಡರ ಬಲ ಸಾಮರ್ಥ್ಯಗಳೆ ದೇವತೆಗಳ ತಲೆಗೇರಿಕೊಂಡು, ಅವರನ್ನು ಮನಸೋ ಇಚ್ಛೆ ಬಂದಂತೆ ಆಡಿಸುವ ಶಕ್ತಿಗಳಾಗಿಸಿಬಿಡುತ್ತವೆ – ಜನರ ಆ ದೌರ್ಬಲ್ಯಗಳೆ ಸುರರ ತಾಯ್ತಂದೆಗಳೊ ? ಎನ್ನುವಂತೆ.

ಭಯ, ಬಯಕೆಗಳನ್ನು ತಾಯ್ತಂದೆಗಳಿಗೆ ಸಮೀಕರಿಸಿ ಹೋಲಿಸಿರುವ ರೀತಿಯು ವಿಶಿಷ್ಠವಾದದ್ದೆ. ಸಾಧಾರಣ ಬಯಕೆಗಳ ಪೂರೈಕೆಗೆ ಸುಲಭದ ದಾರಿ ತಾಯಿಯಾದ ಕಾರಣ ಸಲಿಗೆಯು ಹೆಚ್ಚು, ಅದು ತರುವ ಪ್ರೀತಿಯ ನಂಟಿನ ಬಾಂಧವ್ಯವು ಬಲವಾದದ್ದು. ಅದೇ ಪ್ರೀತಿಯ ನಂಟು , ಬಾಂಧವ್ಯದ ಕೊಂಡಿ ತಂದೆಯೊಡನೆ ಇರುವುದಾದರೂ ಅಲ್ಲಿ ಸಲಿಗೆಗಿಂತ ಗೌರವ, ಭಯ ಭೀತಿಗಳು ಹೆಚ್ಚಿನ ಪ್ರಭಾವ ಬೀರುತ್ತವೆ. ಹೀಗಾಗಿ ನಮ್ಮಗಳ ಬದುಕಿನಲ್ಲಿ ಸುರರಾಡುವ ಪಾತ್ರ ತಂದೆ, ತಾಯಿಗಳಿಗಿಂತ ವಿಭಿನ್ನವಾಗಿರುವುದಿಲ್ಲ. ಕೆಲವೊಮ್ಮೆ ತಾಯಂತೆ ಬಯಕೆ ಪೂರೈಸುವ ಕರುಣಾಮಯಿಯಂತೆ ಕಂಡರೆ ಮತ್ತಿನ್ನೊಮ್ಮೆ ಕೆಂಗಣ್ಣು ಬೀರಿ ಶಿಕ್ಷಿಸುವ ಅಪ್ಪಗಳ ಅವತಾರವು ಕಾಣಿಸಿಕೊಳ್ಳುತ್ತದೆ. ಅದೇನೇ ಇದ್ದರು ಎರಡನ್ನು ಋಣಭಾರ, ಕರ್ಮಫಲ ಎಂದು ಸ್ವೀಕರಿಸುತ್ತೇವೆಯೇ ಹೊರತು ದೂಷಣೆಗಿಳಿಯುವುದಿಲ್ಲ. ಹೀಗೆ ಯಾವುದೊ ನಂಬಿಕೆಯಲ್ಲಿ ನಾವಿತ್ತ ಅಧಿಕಾರ ಬಲವನ್ನು  ಆ ದೇವತೆಗಳೆನ್ನುವ ಮಹಾನುಭಾವರು ಸರಿಯಾಗಿ ಬಳಸಿಕೊಳ್ಳುವರೊ ಅಥವಾ ದುರುಪಯೋಗಪಡಿಸಿಕೊಳ್ಳುವರೊ ಎನ್ನುವ ಅನುಮಾನದ ಛಾಯೆಯು ಇಣುಕುವುದನ್ನು ಇಲ್ಲಿ ನೋಡಬಹುದು.

ನರರ ಅಸಹಾಯಕತೆ ಹೆಚ್ಚಿದಷ್ಟು, ಅವರ ಭಯ, ಭೀತಿ ಇನ್ನಷ್ಟು ಹೆಚ್ಚಿ ಅವರೆಲ್ಲ ಒಕ್ಕೊರಲಿನಿಂದ ಕಾಪಾಡೆಂದು ಮೊರೆಯಿಡುತ್ತಿದ್ದರೆ, ಹಾಗೆ ಕಾಪಾಡಬಲ್ಲ ದೇವತೆಗಳು ನೇರ ಬಂದು ಸಮಯಕ್ಕೊದಗುವರೆ ? ಇಲ್ಲವೆ ಇಲ್ಲ. ಬದಲಿಗೆ ಇದನ್ನೆ ಆಟವಾಗಿಸಿಕೊಂಡು, ತಮ್ಮಲ್ಲಿರುವ ಬಲ, ಶಕ್ತಿಗಳ ಪರೀಕ್ಷೆಗೆ ಇದನ್ನೆ ಸದಾವಕಾಶವಾಗಿ ಬಳಸಿಕೊಳ್ಳುತ್ತ ಅವನ್ನೆಲ್ಲ ದುರ್ಬಲರ ಮೇಲೆ ಪ್ರಯೋಗಿಸಿ ಆಟವಾಡಿಸುತ್ತಾರೆ. ಕಷ್ಟಗಳ ಪರಂಪರೆಯಲ್ಲಿ ನಲುಗುವ ಮಂದಿ ಅದನ್ನು ಕರ್ಮವೆಂದೊ, ದೇವರೊಡ್ಡಿದ ಪರೀಕ್ಷೆಯೆಂದೊ ಮಾತಾಡದೆ ಅನುಭವಿಸಿಕೊಂಡು ಹೋಗುತ್ತಿದ್ದರೂ, ತಮ್ಮ ಆಸೆ, ನಂಬಿಕೆ ಬಿಡದೆ ಆ ದೇವರ ಧ್ಯಾನ, ಭಕ್ತಿಯ ಪೂಜೆಗಳನ್ನು ಮುಂದುವರೆಸಿಕೊಂಡೆ ಹೋಗುತ್ತಾರೆ, ಮತ್ತಷ್ಟು ತೊಡಕಿಗೆ ಸಿಗದಿದ್ದರೆ ಸಾಕೆನ್ನುವ ಆಸೆಯಲ್ಲಿ. ಅದು ಒಳಿತೆ ಆಗಲಿ ಕೆಡುಕೆ ಆಗಲಿ, ಇಬ್ಬರ ಸಂಬಂಧ ಮಾತ್ರ ಒಂದು ವಿಧವಾದ ಅನ್ಯೋನ್ಯತೆಯಲ್ಲಿ ಮುಂದುವರೆದೆ ಇರುತ್ತದೆ. ಈ ಪ್ರವರ್ತನೆಯೆ ಮಂಕುತಿಮ್ಮನಲ್ಲಿ ಸುರರ ಮೂಲ ಆಶಯದ ಕುರಿತು (ದುರುಪಯೋಗಪಡಿಸಿಕೊಳ್ಳುವರೊ ಎನ್ನುವ) ಅನುಮಾನ ಮೂಡಿಸಲು ಕಾರಣವಾಗಿರಬಹುದು.

ದೇವತೆಗಳನ್ನು ಧರ್ಮಾಧಿಕಾರಿಗಳೆನ್ನುತ್ತಾರೆ, ಅವರು ಜನರ ಕಷ್ಟನಷ್ಟದ ತುಲನೆ ಮಾಡಿ ಎಲ್ಲವನ್ನು ಸುಗಮವಾಗಿರಿಸಬೇಕು. ಆದರೆ ಅವರೆ ಗೋಳುಹಾಕಿಕೊಳ್ಳುತ್ತ, ಬಗೆಬಗೆಯ ಪರೀಕ್ಷೆಗೊಡ್ಡಿ ಕಾಡಿದರೆ ಅಲ್ಲಿ ಧರ್ಮವಾದರೂ ಎಲ್ಲಿರುತ್ತದೆ? ಸಮಾನ ಬಲದವರಲ್ಲದ ಅಶಕ್ತ ಮಾನವರ ಮೇಲಿನ ಈ ಶೋಧನೆ ತರವೆ? ಎನ್ನುವ ಜಿಜ್ಞಾಸೆ ಮಾಡುತ್ತಲೆ ಆ ಸುರ ಬಳಗದ ನೈತಿಕ ಧರ್ಮವನ್ನು ಪ್ರಶ್ನಿಸುತ್ತಾನೆ – ಮಂಕುತಿಮ್ಮ. ಹಾಗೆ ಮಾಡುತ್ತಲೆ ತಾನು ಅತ್ತ ಜನರ ಪರವಾಗಿಯೂ ಅಲ್ಲದ ಅಥವಾ ಇತ್ತ ಸುರರ ಕಡೆಯೂ ವಾಲದ ನಿರ್ಲಿಪ್ತ ಪ್ರತಿನಿಧಿಯಂತೆ ಕಾಣಿಸಿಕೊಳ್ಳುವ ಪ್ರಜ್ಞಾವಂತಿಕೆಯ ದ್ಯೋತಕವಾಗುತ್ತಾನೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!