ಫರ್ನಾಂಡೆಸ್ ಇದ್ದವರು, ನನ್ನ ಮುಖ ಗಮನಿಸುತ್ತಾ, ತಮ್ಮಗೋಲ್ಡ್’ರಿಮ್ ಕನ್ನಡಕವನ್ನು ಮೇಲೇರಿಸಿಕೊಳ್ಳುತ್ತಾ,
“ನಾನೂ ಅವನ್ನು ಕೈ ಬರಹ ತಜ್ಞರಿಗೂ, ಬೆರಳಚ್ಚಿನವರಿಗೂ ತೋರಿಸಿದೆ..ಸಾಮಾನ್ಯ ಪೇಪರ್, ಸಾಮಾನ್ಯ ಬ್ಲ್ಯಾಕ್ ರೆನಾಲ್ಡ್ಸ್ ಪೆನ್, ಯಾವ ಬೆರಳಚ್ಚೂ ಇಲ್ಲಾ ಅಂದು ಬಿಟ್ರು…..ಗ್ಲೋವ್ಸ್ ಹಾಕಿಕೊಂಡಿದ್ದರೇನೋ!” ಎಂದರು ತಾವೇನೂ ಕಮ್ಮಿಯಿಲ್ಲಾ ಎಂಬಂತೆ.
“ಅವನು ಮುಂದಕ್ಕೆ ನಿಮ್ಮನ್ನು ಬ್ಲ್ಯಾಕ್’ಮೇಲ್ ಮಾಡಲೆಂದು ಸಜ್ಜಾಗುತ್ತಿದ್ದಾನೆ, ಅಸ್ಥಿಭಾರ ಹಾಕುತ್ತಿದ್ದಾನೆ… ಅದಕ್ಕೇ ಈ ಪತ್ರಗಳು…” ಎಂದೆ ಅವರನ್ನೇ ಗಮನಿಸುತ್ತಾ, ಏನಾದರೂ ಬಚ್ಚಿಡುತ್ತಿದ್ದಾರೋ ಎಂಬಂತೆ..
“ಹಾಗಾದರೆ ಅವನಿಗೆ ನಿಜವಾಗಲೂ ಏನಾದರೂ ಗೊತ್ತು ಅನ್ನುತ್ತೀರಾ?” ಎಂದರು ಮೃದುಲಾ ಕಾತರದಿಂದ.
ನಾನು ಕೈಚೆಲ್ಲಿ ಭುಜ ಕುಣಿಸಿದೆ.
“ಗೊತ್ತಿರಬಹುದು..ಆದರೆ ಅದಕ್ಕೆ ನಿಮ್ಮತ್ರ ಎಷ್ಟು ಬೆಲೆ ಇದೆ ಅಂತಾ ನನಗೇನು ಗೊತ್ತು?” ಎಂದೆ.
ಮೃದುಲಾ ಸೀಟಿನಲ್ಲಿ ನನ್ನತ್ತ ಮುಂದೆ ಜರುಗುತ್ತಾ,
“ನೋಡಿ, ನೋಡಿ, ನಮ್ಮ ನಿಜವಾದ ಅಪ್ಪ ಅಮ್ಮ ಬಗ್ಗೆ ಏನೋ ವಿಷಯ ಅಡಗಿದೆ..ಈಗ ನನಗೆ ಅದು ತಿಳಿಯಲೇಬೇಕು..ನೀವು ನನಗೆ ಪತ್ತೆ ಮಾಡಿ ಕೊಡಲೇಬೇಕು” ಎಂದು ಕಣ್ಣಲ್ಲಿ ನೀರು ತಂದುಕೊಂಡರು..ಎಷ್ಟು ಚೆನ್ನಾಗಿ ಅಳುವಂತೆ ಮುಖಮಾಡುತ್ತಾಳೆ.. ಅಷ್ಟಿಲ್ಲದೇ ಸಹಸ್ರಾರು ವೀಕ್ಷಕರನ್ನು ದಿನಾರಾತ್ರಿ ಅಳಿಸಬಲ್ಲಳೇ?
ನನಗೆ ಸಾಕಾಗಿತ್ತು. ನಿರ್ದಾಕ್ಷಿಣ್ಯವಾಗಿ ನುಡಿದೆ:
“ಈಗ ಇದು ಟೀವಿ ಸೀರಿಯಲ್ ಅಲ್ಲಾ, ನಾನು ಅಳುವುದೂ ಇಲ್ಲಾ..ಏನೂ ವಿಷಯ ಹೇಳದೇ ನನಗೆ ಮೂವತ್ತೈದು ವರ್ಷದ ಹಿಂದಿನ ಯಾವುದೋ ಊರಿನ ಜನ್ಮ ರಹಸ್ಯ ಭೇದಿಸು ಎಂದರೆ ನಾನು ಅಂತಾ ಮೂರ್ಖನೂ ಅಲ್ಲ, ಅಷ್ಟು ಸಮಯ ವೇಸ್ಟ್ ಮಾಡಲು ಮನಸ್ಸೂ ಇಲ್ಲಾ..ಕಮ್ ಕ್ಲೀನ್… ನಿಮಗೇನೇನು ಗೊತ್ತು ಆ ಬಗ್ಗೆ ಹೇಳಿ…ನಾನು ನಂತರ ನನ್ನ ತೀರ್ಮಾನ ಹೇಳುತ್ತೇನೆ”.
ಮುಂದಿನ ಒಂದು ಗಂಟೆ ಕಾಲ ವಿಷದವಾಗಿ ಅವರಿಬ್ಬರೂ ಬಾರಿ ಬಾರಿಯಾಗಿ ನನಗೆ ತಮ್ಮ ಕತೆಯನ್ನು ಹೇಳಿದರು.
ಆ ಊರಿನ ಹೆಸರು, ಲೊಕೇಶನ್, ತಿಳಿಸಿ ತಮ್ಮ ಬಳಿಯಿದ್ದ ಕೆಲವು ಕಾಗದ ಪತ್ರಗಳ ಕಾಪಿ ನೀಡಿದರು. ಆ ಊರಿನ ಹೆಸರು ಮಾಂಡಿಚೆರ್ರಿಯಂತೆ. ಅವರ ಲೋಕಲ್ ವಕೀಲೆಯಾದ ಲೂಸಿಯಾ ಜತೆ ನಾನು ಸಂಪರ್ಕದಲ್ಲಿರಬಹುದೆಂದೂ, ಆಕೆಯ ಆಫೀಸ್ ಫೋನ್, ಕಂಪ್ಯೂಟರ್, ನೆಟ್ ಎಲ್ಲಾ ಸೌಕರ್ಯವನ್ನೂ ಉಪಯೋಗಿಸಬಹುದೆಂದೂ ಹೇಳಿದರು.
“ಆದರೆ ಅಲ್ಲಿ ನಾನೇನು ಕಂಡಿಡಿಯಬಹುದು, ಆ ಜನ್ಮರಹಸ್ಯ ಮುಖ್ಯವೆ ಅಥವಾ ಆ ಬ್ಲ್ಯಾಕ್’ಮೇಲ್ ಮಾಡುವವನನ್ನು ಹಿಡಿದು ಲೂಸಿಯಾ ಮೂಲಕ ಕಾನೂನಿಗೆ ಒಪ್ಪಿಸಿದರೆ ಸಾಕೆ? ನಿಮಗೆ ಇದೆಲ್ಲದರ ಪ್ರಯೋಜನವೇನು? “ಎಂದು ನಾನು ವಿವರಣೆ ಕೇಳಿದಾಗ, ಫರ್ನಾಂಡೆಸ್ ಅದುವರೆಗೂ ಯಾವುದೋ ಕಾಲ್’ನಲ್ಲಿದ್ದವರು ತಮ್ಮ ಐ- ಫೋನ್ ನನ್ನೆಡೆಗೆ ತಿರುಗಿಸಿಕೊಟ್ಟು,
“ತಗೋಳ್ಳೀ, ಇದಕ್ಕೆಲ್ಲ ನಿಮ್ಮ ಸ್ನೇಹಿತ ವಿಶಾಲ್ ಕಪೂರ್ ಲೈನಿನಲ್ಲಿದ್ದಾರೆ…ಮಾತಾಡಿ ಬಿಡಿ” ಎಂದರು
ನಾನು ಅಚ್ಚರಿಯಿಂದ, ” ವಿಶಾಲ್ ನನಗೆ ಸ್ನೇಹಿತರೇನಲ್ಲ, ಕೇವಲ ಮಾಜಿ ಕಕ್ಷಿದಾರ…ಸ್ನೇಹಿತನೇ ಆದರೂ ಚೆನ್ನಾಗಿರುತಿತ್ತು” ಎಂದು ಹುಳ್ಳಗೆ ನಕ್ಕೆ.
ಅತ್ತ ವಿಶಾಲ್ ತಮ್ಮ ಶ್ರೀಮಂತ ಗೊಗ್ಗರು ದನಿಯಲ್ಲಿ, ” ಹಾಯ್, ವಿಜಯ್!..ನೋಡು ನಿನಗೆ ನನ್ನ ಬಿಜಿನೆಸ್ಸ್ ಇಂಪಾರ್ಟೆನ್ಸ್ ಹೆಚ್ಚು ಹೇಳಬೇಕಿಲ್ಲಾ..ಕೋಟ್ಯಂತರ ರೂ.ಗಳ ಹಣ ಬರತ್ತೆ ಹೋಗತ್ತೆ , ಈ ಸೀರಿಯಲ್ಗಳಿಂದ..ನನಗೆ ಈಕೆ ಇದ್ದಾಳಲ್ಲಾ, ಮೃದುಲಾ?.. ಅತಿ ಮುಖ್ಯವ್ಯಕ್ತಿ..ಅವಳು ಹೇಳಿದ್ದು ನಡೆಯಲೇಬೇಕು…ಅದಕ್ಕಾಗಿ ನಾನು ನಷ್ಟ ಮಾಡಿಕೊಳ್ಳಲು ಸಿದ್ಧನಿಲ್ಲಾ..ಅವಳು ಈಗ ಇರುವ ಸೀರಿಯಲ್ ಅತ್ಯಂತ ಮುಖ್ಯಘಟ್ಟಕ್ಕೆ ಬಂದಿದೆ..ಆಕೆ ಸರಿಯಾಗಿ ಅಭಿನಯಿಸದಿದ್ರೆ ನನಗೆ ಬಹಳ ಲಾಸ್ ಆಗುತ್ತೆ. ಆಕೆ ಹೇಳಿದ ಕೇಸ್ ನೀನು ದಯವಿಟ್ಟು ತಗೊ!.ನಿನಗೆ ನಾನು ನಿನ್ನ ಸಾಮಾನ್ಯ ರೇಟ್’ಗಿಂತಾ ಡಬಲ್ ಅಥವಾ ಟ್ರಿಪಲ್ ಕೊಡುತ್ತೇನೆ, ನೀನೇ ಹೇಳು ಎಷ್ಟು ಅಂತಾ..ಆದರೆ ‘ಇಲ್ಲ‘ ಅಂದರೆ ಮಾತ್ರ ನಾನು ಸುಮ್ಮನಿರುವುದಿಲ್ಲಾ..ನಾನು ಮಿತ್ರರಿಗೆ ಮಿತ್ರ…”ಎಂದೆಲ್ಲಾ ಕೊಚ್ಚಿಕೊಳ್ಳುತ್ತಲೆ ಇದ್ದರು. ದೊಡ್ಡವ್ಯಕ್ತಿಗಳಿಗೆ ತಮ್ಮ ದ್ವನಿಯನ್ನೆ ಕೇಳಿಸಿಕೊಳ್ಳುವ ಅಭ್ಯಾಸವಾಗಿರುತ್ತದೇನೋ?,
ನಾನು ಮಧ್ಯೆಬಾಯಿ ಹಾಕಿ,” ವಿಶಾಲ್…ವೈ ಮಿ?…ನಾನೇ ಏಕೆ?.ನಿಮ್ಮಂತ ದೊಡ್ಡ ಮನುಷ್ಯರಿಗೆ ಇಂತಾ ಕೇಸ್’ಗಳಿಗೆ ದೊಡ್ಡ ಡಿಟೆಕ್ಟಿವ್ ಏಜೆನ್ಸಿಗಳೇ ನಿಮ್ಮ ಕಾಲಿಗೆ ಬಿದ್ದು ಕೆಲಸ ಮಾಡತ್ವೆ..”ಎಂದು ವಾದಿಸಿದೆ,
ವಿಶಾಲ್ ನಕಾರವೆತ್ತುತ್ತಾ, ” ನೋ ನೋ…ನೀನು ಸಣ್ಣ ಕೇಸನ್ನೂ ಹೋದ ಸಲ ಚೆನ್ನಾಗಿ ನಿಭಾಯಿಸಿಕೊಟ್ಟೆ..ನಿನಗೆ ಪರ್ಸನಲ್ ಟಚ್ ಇದೆ..ಈ ಕೇಸ್ ಹೆಣ್ಣಿನ ಮನಸ್ಸಿಗೆ ಸಂಬಂಧಿಸಿದ್ದು, ಬಲು ಸೂಕ್ಷ್ಮ…ಹಾಗಾಗಿ ನಿನ್ನನ್ನು ಹೈರ್(ಬಾಡಿಗೆಗೆ) ಮಾಡಿದ್ದೇನೆ ಎಂದುಕೋ..ನಾನು ನಿನಗೆ ಒಂದು ಲಕ್ಷಕ್ಕೆ ಚೆಕ್ ಕಳಿಸುತ್ತೇನೆ, ಮೃದುಲಾ ಅಕೌಂಟಿನಿಂದ..ಅಡ್ವಾನ್ಸ್ಅಂತಾ ಇಟ್ಕೋ, ಬಿಲ್ ಆ ಮೇಲೆ ಕಳಿಸು ಅವಳಿಗೆ…ಇನ್ನು ಆಕೆಯೇ ನಿನ್ನ ಕಕ್ಷಿದಾರಳು, ಲೆಕ್ಕಕ್ಕೆ ನಾನಲ್ಲ ಅಂತಿಟ್ಕೋ! ಬೈ ಅಂಡ್ ಗುಡ್’ಲಕ್..” ಎಂದು ಫೋನ್ ಇಟ್ಟೇಬಿಟ್ಟರು..ದೊಡ್ಡ ಮನುಷ್ಯರು ಅಂದೆನಲ್ಲಾ?
ನಾನು ಆ ಗಳಿಗೆಯಲ್ಲಿ ಈ ಕೇಸ್ ಬೇಡ ಅನ್ನಬಹುದಿತ್ತು. ..ಹಾಗಂದಿದ್ದರೆ ಮುಂದಿನ ಒಂದು ತಿಂಗಳು ನಡೆಯಲಿದ್ದ ಎಷ್ಟೋ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದಿತ್ತು..ಆದರೆ ನಾನು ಅನ್ನಲಿಲ್ಲ…
“ಸರಿ , ನಾನು ಬಲಿಯಾದೆ…ಮತ್ತಿನ್ನೇನು?” ಎಂದೆ ಶರಣಾಗತ ಭಾವದಿಂದ ನಾನು ಮೃದುಲಾ ಮತ್ತು ಫರ್ನಾಂಡೆಸ್ ಮುಖ ನೋಡುತ್ತಾ.
ಮೃದುಲಾ ತನ್ನ ಜನಪ್ರಿಯ ತಾರೆ ಮುಗುಳ್ನಗೆಯನ್ನು ಬೀರುತ್ತಿದ್ದರು. ಮೊದಲ ಬಾರಿಗೆ ಇಂದು ಫರ್ನಾಂಡೆಸ್ ಕೂಡ ನಕ್ಕರು.
“ನಿಮ್ಮ ಕಾಫಿ ಬಹಳ ಚೆನ್ನಾಗಿತ್ತು..ಇನ್ನೊಂದು ಕಪ್ ಕೊಡ್ತೀರಾ?” ಎಂದರು.
**************************
ಕರ್ಫೂರಿ ನದಿ ತೀರದ ಮಾಂಡಿಚೆರ್ರಿ ಮೊದಲಿಗೆ ಒಂದು ಫ್ರೆಂಚ್ ಕಾಲೊನಿಯಾಗಿತ್ತಂತೆ..ಅದಕ್ಕೂ ಮುಂಚೆ ಪಲ್ಲವರು ಆಳಿದ್ದ ಬಂದರು ಪಟ್ಟಣವಂತೆ..ಮೃದುಲಾ ಹೇಳಿದ ಪ್ರಕಾರ ೧೯೮೦ರಲ್ಲಿ ಅದು ಸುಮಾರು ಚಿಕ್ಕ ಊರಾಗೇ ಇರಲು ಸಾಧ್ಯ..ಅಲ್ಲೇ ಕರ್ಪೂರಿ ನದಿ ಸಮುದ್ರವನ್ನು ಸೇರುವ ಸಂಗಮವಾಗುತ್ತೆಂದು ನನ್ನ ಕೈಯಲ್ಲಿದ್ದ ಪ್ರವಾಸಿ ಪುಸ್ತಕ ಹೇಳುತಿತ್ತು.
ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್’ನ ಏಸಿ ಕೋಚಿನ ಹೊರಗೆ ಸಾಗಿ ಹೋಗುತ್ತಿದ್ದ ಹಚ್ಚ ಹಸಿರು ಭತ್ತದ ಗದ್ದೆಗಳನ್ನೇ ನೋಡುತ್ತಾ ನಾನು ಯೋಚಿಸುತ್ತಿದ್ದೆ.
ಟಿ.ವಿ. ಮತ್ತು ಸಿನಿಮಾ ನೋಡಿ ಎಲ್ಲರೂ ತಿಳಿದಿರುವಂತೆ ಪತ್ತೇದಾರಿ ಕೆಲಸವೇನೂ ಅಂತಾ ಆಕರ್ಷಕ, ಮನರಂಜನೀಯ ಅಥವಾ ಗ್ಲಾಮರಸ್ ಉದ್ಯೋಗವಲ್ಲ.
ಇದರಲ್ಲಿ ಹಲವು ಗಂಟೆಗಳ ಕಾಲ ಅಪರಿಚಿತ ಅಪರಾಧಿಗಳ ಬಗ್ಗೆ ಹುಡುಕಾಟ, ಇಂಟರ್ನೆಟ್ ಮತ್ತು ಲೈಬ್ರರಿಯಲ್ಲಿ ಅನ್ವೇಷಣೆ, ಸರ್ಕಾರಿ ರೆಕಾರ್ಡ್ಸ್ ತಪಾಸಣೆ, ಹತ್ತು ಹಲವಾರು ಮಹಡಿ ಮೆಟ್ಟಿಲುಗಳನ್ನು ದಬಾ ದಬಾ ಅಂತಾ ಹತ್ತಿ ಇಳಿದಿರಬೇಕು, ಮುಕ್ಕಾಲುವಾಸಿ ನಿಷ್ಪ್ರಯೋಜಕವಾಗಿ!.. ಅನುಮಾನಾಸ್ಪದ ವ್ಯಕ್ತಿಗಳ ಮನೆ, ಕಚೇರಿಗಳ ಮುಂದೆ ದಿನಗಟ್ಟಲೆ ಸಾಕುನಾಯಿಯಂತೆ ಪಹರೆಗಾಗಿ ಕಾದುಬಿದ್ದಿರುವುದೂ, ರಾಜಕೀಯ ಬೆಂಬಲವಿರುವ ರೌಡಿಗಳಿಂದ ಒದೆತಿನ್ನುವುದು ಅಲ್ಲದೇ ಇದ್ದಕ್ಕಿದ್ದಂತೆ ಅಪಾಯ-ಪ್ರಾಣಭಯ… ಅದಲ್ಲದೇ ಎಲ್ಲಕ್ಕೂ ಮೂಗುತೂರಿಸಿ ನಮ್ಮ ಕೇಸ್ ಹಾಳು ಮಾಡುವ ಪತ್ರಿಕಾ ಪ್ರತಿನಿಧಿಗಳು, ಟೀವಿ ಮಾಧ್ಯಮದವರು..ಎಲ್ಲಕ್ಕಿಂತ ಹೆಚ್ಚಾಗಿ, ತಮಗೆ ಸವಾಲು ಹಾಕಿ ಬರುವ ನಮ್ಮಂತಾ ಖಾಸಗಿ ಪತ್ತೇದಾರರಿಗೆ ಸಿಂಹಸ್ವಪ್ನವಾಗಿರುವ ಪೋಲಿಸ್ ಅಧಿಕಾರಿಗಳು..ನಾವು ಒಂದೇ ಒಂದು ಹೆಜ್ಜೆ ತಪ್ಪಿಡಲಿ ಎಂದೇ ಅವರು ಕಾಯುತ್ತಿರುತ್ತಾರೆ.
ಹಾಗಾದರೆ ಜಾಣ ಪತ್ತೇದಾರರೇ ಇಲ್ಲವೇ ಎನ್ನುತ್ತೀರಾ?
ನಾನೂ ಶೆರ್ಲಾಕ್ ಹೋಮ್ಸ್’ನಂತೆಯೋ, ಹರ್ಕ್ಯೂಲ್ ಪೈರಾಟ್’ನಂತೆಯೋ ಅತ್ಯಂತ ನಿಪುಣನೂ ಬುದ್ದಿವಂತನೂ ಅಲ್ಲಾ. ನಿಜ ಜೀವನದಲ್ಲಿ ಹಾಗೆ ಯಾರಾದರೂ ಸಿಗುವುದು ತೀರಾ ವಿರಳ. ನನಗೆ ತಿಳಿದಿರುವುದು ಅಂದರೆ ಮಿಲಿಟರಿ ಪೊಲೀಸ್ ಟ್ರೈನಿಂಗ್’ಲ್ಲಿ ಕಲಿತ ಮಾಮೂಲಿ ಪತ್ತೇದಾರಿ ವಿದ್ಯೆ, ಆತ್ಮ ಸಂರಕ್ಷಣೆ ಕಲೆಯಾದ ಕರಾಟೆ, ಕಿಕ್ ಬಾಕ್ಸಿಂಗ್, ಮತ್ತು ನನ್ನ ಪ್ರಿಯವಾದ ಪಿಸ್ತೂಲ್ ಕೋಲ್ಟ್೦.೪೫ನಲ್ಲಿ ಗುಂಡಾಡುವುದು..ಮತ್ತು ನನ್ನ ಹಾಸ್ಯಪ್ರಜ್ಞೆಯನ್ನು ಮೆರೆಯುವುದು!..
ಟ್ರೈನಿನಲ್ಲಿ ಕೊಡುವ ಸ್ಯಾಂಡ್ವಿಚ್ ಮತ್ತು ಕಾಫಿ ಮುಗಿಸಿದ್ದೆ. ನಾನು ಮನೆಯಲ್ಲಿ ಮಾಡುವುದರ ರುಚಿಯಂತೆಯೂ ಇರಲಿಲ್ಲ, ಅದೂ ನಾನು ಸಾಧಾರಣ ಕುಕ್ ಮಾತ್ರ!
ನಾನು ಹೊರಡುವ ಮುನ್ನ ನನಗೆ ಮೃದುಲಾ ಒಂದು ಫೈಲ್ನಲ್ಲಿ ತನ್ನ ಬಗೆಗಿನ ಕಾಗದ ಪತ್ರಗಳನ್ನು ಕೊಟ್ಟಿದ್ದರು.
ಅದರಲ್ಲಿ ಅವಳ ಎರಡನೇ ಜನ್ಮಪತ್ರ – ಮೃದುಲಾ, ವೀರಭದ್ರ ಮತ್ತು ಸುಮತಿ ಹೊಸಮನಿಯವರ ಪುತ್ರಿಯೆಂದು ಧಾರವಾಡದಲ್ಲಿ ಮಾಡಿಸಿದ್ದ ರಿಜಿಸ್ಟರ್ಡ್ ಪತ್ರ. ಅದರ ದಿನಾಂಕ ೧೯೮೦ರ ಮೇ ೨೨ಎಂದಿತ್ತು. ಅದರಲ್ಲಿ ಅವಳು ನಿಜವಾಗಿ ಹುಟ್ಟಿದ ದಿನದ ದಾಖಲೆ, ಹೆತ್ತ ತಂದೆತಾಯಿಯರ ಹೆಸರಿದ್ದ ಪತ್ರಗಳ್ಯಾವುದೂ ಇರಲಿಲ್ಲ. ಆ ವಿವರಗಳೆಲ್ಲಾ ಅದೇ ಭೂಕಂಪದಲ್ಲಿ ಕಳೆದು ಹೋದವಂತೆ.
ದತ್ತು ಪಡೆದಾಗ ಮಗುವಿನ ವಯಸ್ಸು ಸುಮಾರು ಮೂರು ತಿಂಗಳು ಎಂದಿದ್ದರು…ಆದ್ದರಿಂದ ಮೂರು ತಿಂಗಳೊಳಗಿನ ಅಂದರೆ ಫೆಬ್ರವರಿಯಿಂದ ಮೇವರೆಗಿನ ಮಗುವಿನ ಜನನದ ರೆಕಾರ್ಡ್ಸ್ ಅನ್ನು ಈ ಮಾಂಡಿಚೆರ್ರಿಯ ಸರ್ಕಾರಿ ಕಚೇರಿಯಲ್ಲೇ ಹುಡುಕಬೇಕಾದೀತು. ನನ್ನ ಆಫೀಸಿನಲ್ಲಿ ಹೇಳಿದ ಪ್ರಕಾರ ಈಕೆಗೆ ತಾನು ಆ ನಿಜವಾದ ದಾಖಲೆಯನ್ನು ಒದಗಿಸಿದರೆ ಸಾಕಂತೆ, ಅವರನ್ನೇನೂ ಭೇಟಿ ಮಾಡಲು ಮಗಳಿಗೆ ಆತುರವಿಲ್ಲವಂತೆ. ಅವರೇ ತಂದೆ ತಾಯಿ ಎಂದು ನಿರೂಪಿಸಿದರೆ ಸಾಕಂತೆ..ಜತೆಗೆ ಸಿಕ್ಕರೆ ಆ ಬ್ಲಾಕ್’ಮೇಲರನ್ನು ಪತ್ತೆ ಹಚ್ಚಿ ಕಾನೂನಿನ ವಶಕ್ಕೆ ಕೊಟ್ಟರೆ ಸಾಕು ಎಂದು ಹುಕುಂ ನೀಡಿದ್ದರು.
ಲಾಯರ್ ಪರ್ನಾಂಡೆಸ್ ಅಂತೂ,” ಹೌದು ಹೌದು, ಈಕೆ ಈಗ ಜನಪ್ರಿಯ ನಟಿ ಎಂದು ತಿಳಿದರೆ ಆ ನಿಜವಾದ ಅಪ್ಪಅಮ್ಮ ಇನ್ನೇನು ತಕರಾರು ತೆಗೆದು ಇವಳಿಗೆ ಅಂಟಿಕೊಳ್ಳುತಾರೊ?ದುಡ್ಡಿನಾಸೆಗೆ?..ಇನ್ನು ಮೀಡಿಯಾ, ಪ್ರೆಸ್’ನವರ ಕಿವಿಗೆ ಬಿದ್ದರಂತೂ ನಮ್ಮ ಕತೆ ಮುಗಿಯಿತು, ಅಪಪ್ರಚಾರ ಮಾಡ್ಬಿಡ್ತಾರೆ…ಅವರಿಬ್ಬರಿಗೆ ಇವಳ ಹೆಸರು ತಿಳಿಯುವುದು ಕೂಡಾ ಬೇಡಾ..”ಎಂದು ಒತ್ತಿಹೇಳಿದ್ದರು.
ಆದರೆ ಅದಕ್ಕೆ ಮುಖ ಕಠಿಣ ಮಾಡಿಕೊಂಡ ಮೃದುಲಾ, “ ಇಂತಾ ನನ್ನ ಪರ್ಸನಲ್ ವಿಷಯವನ್ನು ನನಗೆ ಬಿಡಿ..ನನ್ನ ಮನಸ್ಸನ್ನು ನೀವರಿಯಲಾರಿರಿ!” ಎಂದು ಅಲ್ಲೆ ಆ ಮಾತನ್ನು ಮೊಟಕುಗೊಳಿಸಿದ್ದರು.
“ಇದೆಲ್ಲಾ ನಿರ್ಧಾರ ಅವರು ಸಿಕ್ಕಿದರೆ..ಸಿಕ್ಕ ಮೇಲೆ ತಾನೆ?”ಎಂದು ನಾನು ಇಬ್ಬರಿಗೂ ತಿಳಿ ಹೇಳಿದ್ದೆ
ಇವರಿಗೇ ತಿಳಿಯದ ಆ ಜನ್ಮ ಸತ್ಯವನ್ನು ಯಾವ ಬ್ಲ್ಯಾಕ್’ಮೇಲರ್ ಕಂಡುಹಿಡಿದಿರಬಹುದು?, ಅವನನ್ನು ನಾನೇಗೆ ಪತ್ತೆ ಹಚ್ಚುವುದು , ಒಂದೂ ತಿಳಿಯಲಿಲ್ಲ..ಇದ್ಯಾರೋ ವಕೀಲೆ ಲೂಸಿಯಾ ಅಂತೆ..ಆಕೆ ಯಾರೋ?ಅವಳಿಗೇನು ಗೊತ್ತೋ?..ಏನು ಸಹಾಯ ಮಾಡಬಲ್ಲಳು?..ಎಂದೆಲ್ಲಾ ಯೋಚಿಸುತ್ತಿರುವಂತೆ ಆಗ ಮಾಂಡಿಚೆರ್ರಿ ಸ್ಟೇಷನಿಗೆ ರೈಲು ತಲುಪೇಬಿಟ್ಟಿತ್ತು.
ಸ್ಟೇಷನ್ನಿಂದ ಟ್ಯಾಕ್ಸಿ ಹಿಡಿದು ಡ್ರೈವರನಿಗೆ ‘ಒಳ್ಳೇಹೊಟೆಲ್ ತೋರಿಸು ’ಎಂದು ಹೇಳಿ ಹೊರಟಾಗ ಊರನ್ನು ಗಮನಿಸಿತ್ತಾ ಹೋದೆ. ಹಳೆಯ ಕಲ್ಲಿನಕಟ್ಟಡಗಳು, ಅತ್ತಿತ್ತ ನದಿ ಮತ್ತು ಸಮುದ್ರ ಸಂಗಮತೀರದಲ್ಲಿ ತೇಲುವ ಮೀನುಗಾರರ ನಾವೆಗಳು, ಪ್ರವಾಸಿಗರ ಮೋಟಾರ್ಬೋಟ್ಗಳ ಮೇಲೆ ರಂಗುರಂಗಿನ ಬಾವುಟಗಳು ಗಾಳಿಗೆ ಪಟಪಟನೆ ಹಾರುತ್ತಿದ್ದವು.
ಊರಿನ ಮಾರ್ಕೆಟ್ ನಡುವಿನ ‘ಪರ್ಲ್ ಲಾಡ್ಜ್ ’ಎಂಬಲ್ಲಿ ತಂದು ತನ್ನ ಟ್ಯಾಕ್ಸಿ ನಿಲ್ಲಿಸಿದ ಡ್ರೈವರ್.
“ನಲ್ಲಇರುಕ್ಕು” ಅಂದು ನಕ್ಕ..ಭೂತ ಬಂಗಲೆಯಂತಿರಲಿಲ್ಲ ಅಷ್ಟೆ, ಸ್ವಲ್ಪ ಪರವಾಗಿಲ್ಲ ಅನಿಸಿತು. ಒಳಗೆ ರಿಸೆಪ್ಷನ್ಕೌಂಟರ್ನಲ್ಲಿ ಕುಳಿತಿದ್ದ ಬೋಳುತಲೆಯ ಮುದುಕ ತೂಕಡಿಸುತ್ತಿದ್ದವನು ಕತ್ತೆತ್ತಿ ಶ್ರಮಪಟ್ಟು ನೋಡಿದ.
” ರಾತ್ರಿಯೆಲ್ಲಾ ಫುಟ್ಬಾಲ್ ಮ್ಯಾಚ್ ನೋಡಿದರೇನೋ, ಪಾಪನಿದ್ದೆ ಬರಲಿಲ್ಲ?” ಎಂದು ನಾನು ಅವನನ್ನು ಚೇಡಿಸಿ ನಕ್ಕೆ
ಅವನು ಸಪ್ಪಗೆ,”ನಮ್ಮ ತಾಯಿಯ ಗೊರಕೆ ಸದ್ದಿನಿಂದ ನಿದ್ದೆಬರಲಿಲ್ಲ ಅಷ್ಟೆ ..ಹೇಳಿ, ಏನುಬೇಕು?“ಅಂದ.
ಇವನ ತಾಯಿಯೆ? ಹಾಗಾದರೆ ಈ ಊರಿನ ಜನ ಅಲ್ಪಾಯುಗಳಲ್ಲ ಎಂದನಿಸಿತು.
“ನದಿ –ಸಮುದ್ರ ಸಂಗಮಸ್ಥಳವನ್ನು ಎದುರು ನೋಡುವ ಸಿಂಗಲ್ ರೂಮ್ ಇದ್ದರೆ ಕೊಡಿ” ಎಂದೆ.
“ನಿಮ್ಮ ಹೆಸರು?..ಯಾವೂರು?..ಈ ಮೊದಲು ನಿಮ್ಮನ್ನಿಲ್ಲಿ ನೋಡಿದಂತಿಲ್ಲಾ..” ಎನ್ನುತ್ತ ಹಳೆ ರಿಜಿಸ್ಟರನ್ನು ನನ್ನತ್ತ ತಳ್ಳಿದ.
“ನನ್ನ ಹೆಸರು ವೀರಪ್ಪನ್.. ಗೊತ್ತಿಲ್ಲವೆ, ನಾನು ಕಾಡಿನಿಂದ ಯಾರಿಗೂ ಹೇಳದೆ ಓಡಿ ಬಂದಿದ್ದೇನೆ ..ನನ್ನ ಹಿಡಿದು ಕೊಟ್ಟವರಿಗೆ ಹತ್ತು ಲಕ್ಷ ಬಹುಮಾನವಂತೆ!” ಎಂದೆ ಮೀಸೆ ಮೇಲೆ ಕೈ ಹಾಕಿಕೊಳ್ಳುತ್ತಾ.
“ನಿಜವಾದ ಹೆಸರು ವಿಳಾಸ ಬರೆಯಿರಿ, ಸುಮ್ಮನೆ! ” ಎಂದ ಆಕಳಿಸುತ್ತಾ…ಅವನು ನನ್ನಂತ ತರಲೆಗಳನ್ನು ಬಹಳ ನೋಡಿದ್ದನೇನೋ!
ಸುಮ್ಮ ನೆ ಹೆಸರು ವಿಳಾಸ ಬರೆದುಕೊಟ್ಟೆ. ನಾನೇ ರೂಮಿಗೆ ಹತ್ತಿಹೋದೆ.
ಆ ಲಾಡ್ಜಿನಲ್ಲಿ ನನ್ನ ರೂಮ್ ಮತ್ತು ನಂತರದ ಡೈನಿಂಗ್ ಸರ್ವೀಸ್ ಚನ್ನಾಗಿತ್ತು. ನನ್ನ ಕೋಲ್ಟ್೦.೪೫ ರಿವಾಲ್ವರ್ ಮತ್ತು ಗುಂಡಿನ ಬಾಕ್ಸ್’ನ್ನು ಭದ್ರವಾಗಿ ಲಾಕರ್ನಲ್ಲಿ ತೆಗೆದಿಟ್ಟೆ. ರೈಲಿನಲ್ಲಿ ಸರಿಯಾಗಿ ತಿಂದಿರಲಿಲ್ಲ.
ಬಿಸಿ ಶವರ್ ಮಾಡಿ, ಮಸಾಲೆದೋಸೆ, ಜಾಮೂನು ನಂತರ ಕಾಫಿ ಕುಡಿದು ತೃಪ್ತನಾಗಿ ಕುಳಿತು, ಕಿಟಕಿ ತೆಗೆದು ಕರ್ಫೂರಿ ನದಿ ಸಂಗಮವನ್ನು ನೋಡಿದೆ. ಮೇಲ್ನೋಟಕ್ಕೆ ಎಲ್ಲವೂ ಮಧ್ಯಾಹ್ನದ ಬಿಸಿಲಿನಲ್ಲಿ ಶಾಂತವಾಗಿ, ಸಾಧಾರಣವಾಗಿಯೇ ತೋರುತಿತ್ತು..ಮುವತ್ತೈದು ವರ್ಷದ ಹಿಂದಿನಿಂದ ಇದು ತನ್ನ ಗರ್ಭದಲ್ಲಿ ಏನು ರಹಸ್ಯ ಅಡಗಿಸಿಕೊಂಡಿದೆಯೋ ಎಂದು ಯೋಚಿಸಿದೆ.
ಒಡನೆಯೇ ಆ ವಕೀಲೆ ಲೂಸಿಯಾಳ ಆಫೀಸಿಗೆ ಫೋನಾಯಿಸಿದೆ. ಇನ್ನೂ ಮೂರು ಗಂಟೆ ಸಮಯ,ಆಫೀಸಿನಲ್ಲೇ ಇರಬಹುದು.
(ಮುಂದುವರೆಯುವುದು…)