ಸಿನಿಮಾ - ಕ್ರೀಡೆ

ಇವರು ಯಾವತ್ತೂ ಹೃದಯದಲ್ಲಿ ನೆಲೆಯಾಗಿರುತ್ತಾರೆ

ನೆನ್ನೆ ಸಿಂಧು ಅವರ ಬ್ಯಾಡ್ಮಿಂಟನ್ ನೋಡ್ತಾ ಇದ್ದೆ.. ಪ್ರತಿ ಪಾಯಿಂಟ್’ಗೂ ಆಕೆ ಮಾಡ್ತಾ ಇದ್ದ ಹೋರಾಟ ನೋಡ್ತಾ ಇದ್ರೆ ಮೈ ಜುಂ ಅಂತಿತ್ತು.. ಆಕೆ ಆಡಿದ ಶೈಲಿ, ಆಟವನ್ನು ಮುಂದುವರಿಸುತ್ತಿದ್ದ ರೀತಿ ಎಲ್ಲವೂ ಅದ್ಭುತ.. ಎರಡನೇ ಸೆಟ್’ನ ಕೊನೆಗೆ ಹನ್ನೊಂದು ನೇರ ಅಂಕಗಳು.. 10-10ಕ್ಕೆ ಸಮವಾಗಿದ್ದ ಆಟ, ಮುಗಿದಾಗ 21-10.. ಅದರಲ್ಲೂ ಕೊನೇಯ ಸ್ಮ್ಯಾಶ್ ನೋಡಿದಾಗ ಇವಳಿಗಿಂತ ಬೆಸ್ಟ್ ಫಿನಿಶರ್ ಸಿಗಲ್ಲ ಗುರೂ ಅನ್ನೋ ಹಾಗಿತ್ತು.. ಭಾರತ ಮೊಟ್ಟ ಮೊದಲಬಾರಿ ಒಲಂಪಿಕ್ ಫೈನಲ್’ನಲ್ಲಿ ತನ್ನ ಹಾಜರಿ ಹಾಕಿ ಪದಕ ಖಚಿತಪಡಿಸಿಕೊಂಡಿತು.. ನಮಗೆಲ್ಲ ಇಷ್ಟು ಸಂತೋಷವಾಗಿರಬೇಕಾದರೆ ಆಕೆಗಿನ್ನೆಷ್ಟು ಖುಷಿಯಾಗಿರಬಹುದು… ಅಭಿನಂದನೆಗಳು ಸಿಂಧು.. ಫೈನಲ್’ಗೆ ಶುಭವಾಗಲಿ…

ನಾನು ಹೇಳ ಹೊರಟಿರುವುದು ಬೇರೆ.. ನೆನ್ನೆ ಸಾಕ್ಷಿ ಮತ್ತು ದೀಪಾ ಬಗ್ಗೆ ಹೇಳಿದ್ದೆ.. ಎಲ್ಲರೂ ಎಂತೆಥ ಪ್ರದೇಶಗಳಿಂದ ಬಂದವರು, ಎಂತಹ ಹಳ್ಳಿ ಮೂಲದಿಂದ ಬಂದವರು ಎಂದು.. ಇದು ಅದರ ಮುಂದುವರಿದ ಭಾಗವಷ್ಟೇ… ನೀವು ಒಮ್ಮೆ ಒಲಂಪಿಕ್ ಪದಕ ಗೆದ್ದ ಭಾರತೀಯ ಆಟಗಾರರ ಹಿನ್ನಲೆಯನ್ನು ತಿಳಿದು ನೋಡಿ.. ಹೆಚ್ಚಿನವರು ಬಡ ಮತ್ತು ಮಧ್ಯಮ ವರ್ಗದ ಕುಟುಂಬದಿಂದ ಹೋದವರೇ.. ಶ್ರೀಮಂತವರ್ಗ ಅಥವಾ ವೆಲ್ ಸೆಟಲ್ಡ್ ಮನೆಯಿಂದ ಬಂದವರು ಕೆಲವೇ ಕೆಲವರು ಮಾತ್ರ.. ಅದೆಷ್ಟೋ ಕಷ್ಟಪಟ್ಟು ಒಲಂಪಿಕ್’ನಲ್ಲಿ ಭಾಗವಹಿಸುತ್ತಾರೆ.. ಅವರೆಲ್ಲ ಹಣ ಸಿಕ್ಕುತ್ತೆ ಅಂತಲೋ ಅಥವಾ ಫಾರಿನ್ ಟೂರ್ ಆಗುತ್ತೆ ಅಂತ ಭಾಗವಹಿಸುತ್ತಾರೆ ಎಂದು ವಿಚಾರ ಮಾಡಿದರೆ ಅದು ನಮ್ಮ ಮೂರ್ಖತನವಾಗುತ್ತೆ… ಅದೆಷ್ಟೋ ಜನ ತಮ್ಮದೇ ಸ್ವಂತ ಖರ್ಚಿನಲ್ಲಿ, ಸಾಲ ಮಾಡಿ ಹೋದವರಿದ್ದಾರೆ.. ಯಾಕೆಂದರೆ ಕ್ರೀಡೆ ಇವರ ಜೀವ.. ದೇಶಕ್ಕೆ ಕೀರ್ತಿ ತರುವ ಹಂಬಲ.. ಅಂಥವರಿಗೆ ಸರಿಯಾಗಿ ಸೌಲಭ್ಯ ಮತ್ತು ತರಬೇತಿ ಸಿಗದಿರುವದು ನಮ್ಮ ದುರದೃಷ್ಟ ಎಂದೇ ಹೇಳಬೇಕು.. 8 ಚಿನ್ನ ತಂದ ಹಾಕಿ ಯಾವ ರೀತಿ ಮೂಲೆಗುಂಪಾಗಿದೆ ಎಂದು ನೋಡಿದಾಗಲೇ ತಿಳಿಯಬಹುದು, ನಾವೆಷ್ಟು ನತದೃಷ್ಟರು ಎಂದು…

ಮೊಟ್ಟ ಮೊದಲು ಭಾರತಕ್ಕೆ ಒಲಂಪಿಕ್ಸ್’ನಲ್ಲಿ ವಯಕ್ತಿಕ ಪದಕ ತಂದುಕೊಟ್ಟದ್ದು ನಾರ್ಮನ್ ಪಿಚರ್ಡ್.. ಅದರ ನಂತರ ವಯಕ್ತಿಕ ಪದಕ ಬಂದದ್ದು ಕುಸ್ತಿಯಲ್ಲಿ.. ಕಸಬಾ ಜಾಧವ್ ಕಂಚಿನ ಪದಕವನ್ನು ತಂದುಕೊಟ್ಟರು.. ಆದರೆ ಜಾದವ್ ಅವರು ಒಲಂಪಿಕ್’ನಲ್ಲಿ ಭಾಗವಹಿಸುವಾಗ ಇದ್ದ ಮನೆಯನ್ನು ಅಡವಿಟ್ಟು ಅದರ ಹಣದಲ್ಲಿ ಹೋಗಿ ಬಂದಿದ್ದರು ಎಂದು ಓದುವಾಗ ಕಣ್ತುಂಬಿ ಬರುತ್ತೆ… ಅಷ್ಟೆಲ್ಲ ಕಷ್ಟವನ್ನು ಎದುರಿಸಿಯೂ ಕೂಡ ಗೆಲ್ಲಬೇಕು, ಗೆದ್ದು ದೇಶದ ಕೀರ್ತಿ ಬೆಳಗಬೇಕು ಎಂಬ ಅವರ ಆಶಯಕ್ಕೆ ಹ್ಯಾಟ್ಸ್ ಆಫ್.. ನಂತರ ಪದಕ ಗೆದ್ದ ಕರ್ಣಂ ಮಲ್ಲೇಶ್ವರಿ, ಲಿಯಾಂಡರ್ ಫೇಸ್, ರಾಜವರ್ಧನ್, ಬಿಂದ್ರಾ, ಮೇರಿ ಕೋಮ್, ಸುಶೀಲ್ ಕುಮಾರ್, ಸಾಕ್ಷಿ ಹೀಗೆ ಎಲ್ಲರೂ ಗ್ರೇಟ್ ಎಂದೇ ಅನ್ನಿಸುತ್ತಾರೆ.. ಅಮಿತಾಬ್ ಬಚ್ಚನ್ ಹೇಳಿದಂತೆ ಅವರ ಒಂದು ಕಂಚಿನ ಪದಕ ಸಾವಿರ ಬಂಗಾರದ ಪದಕಕ್ಕೆ ಸಮ.. ಅದು ಕೇವಲ ಪದಕವಲ್ಲ ಅವರ ತಪಸ್ಸಿನ ಫಲ.. ಅಷ್ಟು ಅಡೆತಡೆ ಎದುರಿಸಿ ಪದಕ ಗೆಲ್ಲೋದು ಸುಲಭವಲ್ಲ… ಇದರ ಜೊತೆಗೆ ಹೃದಯದಲ್ಲಿ ನೆಲೆಸುವವರು ಮಿಲ್ಕಾ ಸಿಂಗ್, ಪಿಟಿ ಉಷಾ, ದೀಪಾ ಕರ್ಮಕಾರ್’ನಂಥ ಹೋರಾಟಗಾರರು.. ಅವರು ಪದಕ ತರದಿರಬಹುದು ಗೆಳೆಯರೆ, ಆದರೆ ಅವರು ಕೋನೇಯ ಸೆಕೆಂಡಿನ ತನಕ ದೃತಿಗೆಡದೆ ಆಡಿದ್ದಾರೆ.. ಮಿಲಿಮೀಟರ್ ಅಂತರದಲ್ಲಿ ಸೋತಿದ್ದಾರೆ.. ಅವರೇ ಬಂಗಾರ ಹೀಗಿರುವಾಗ ಅವರಿಗೇಕೆ ಬಂಗಾರಾದ ಪದಕ ಅಲ್ಲವೇ..??

ಇನ್ನು ಶೋಭಾ ಡೇ ಟ್ವೀಟ್.. ಯಾವುದೇ ಹಿಂದು ಮುಂದಿನ ವಿಚಾರವಿಲ್ಲದೇ ಟ್ವೀಟ್ ಮಾಡಿ ಆಟಗಾರರನ್ನು ಟೀಕಿಸಿದಾಗ ಕೋಪ ಬರದೇ ಇರಬಾರದೆಂದರೆ ಹೇಗೆ..? ಸರ್ಕಾರ ಅಥವಾ ಒಲಂಪಿಕ್ ಫೆಡರೇಶನ್’ನಿಂದ ಎಷ್ಟು ಪ್ರೋತ್ಸಾಹ ಸಿಗುತ್ತೆ ಅಂತ ಗೊತ್ತಿದ್ದೂ ಆಟಗಾರರು ಹೋಗಿರುವುದು ಮಜಾ ಮಾಡೋಕೆ ಅನ್ನೋ ಥರದಲ್ಲಿ ಮಾತನಾಡಿದರೆ ಕೋಪ ಬರದೇ ಇರೋಕೆ ಸಾಧ್ಯವಾ..? ಅವರಿಗೆ ಎಲ್ಲ ಸೌಲಭ್ಯಗಳು ಸರಿಯಾಗಿ ಕೊಟ್ಟಾಗಲೂ ಪದಕ ತರದೇ ಇದ್ದಾಗ ಶೋಭಾ ಡೇ ಅವರೇ ನೀವೊಬ್ಬರೇ ಅಲ್ಲ ಪ್ರತಿಯೊಬ್ಬರೂ ಸಹ, ಅವರು ಮಜಾ ಮಾಡೋಕೆ ಹೋಗಿರೋದು ಎಂದು ಹೇಳ್ತೇವೆ… ಅದನ್ನು ಬಿಟ್ಟು ಅದರ ಪರಿವೆಯೇ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡಿದರೆ ಹೇಗೆ ಹೇಳಿ..?? ಅವರ ನಿರಂತರ ಶ್ರಮಕ್ಕೆ ಬೆಲೆ ಎಲ್ಲಿದೆ..?? ಅವರ ಅನೇಕ ವರ್ಷಗಳ ತಪಸ್ಸಿನ ಸಾರ್ಥಕತೆ ಒಲಂಪಿಕ್, ಅದನ್ನು ನಿಮಿಷದ ವಿಮರ್ಷೆಯ ಟ್ವೀಟ್ ನಲ್ಲಿ ಮುಗಿಸಿದರೆ ಹೇಗೆ..??

ನಮ್ಮ ಸುತ್ತಮುತ್ತಲೇ ಎಷ್ಟೋ ಜನ ಅಪ್ರತಿಮ ಆಟಗಾರರಿದ್ದಾರೆ, ಆದರೆ ಎಲ್ಲರಿಗೂ ಹೆಸರು ಮಾಡೋಕೆ ಆಗಲ್ಲ.. ಡಿಸ್ಟ್ರಿಕ್ಟ್ ಲೆವೆಲ್, ಸ್ಟೇಟ್ ಲೆವೆಲ್ ತನಕ ಹೋಗಿ ಮತ್ತೆ ಸುಮ್ಮನಾಗಿಬಿಡುತ್ತಾರೆ, ಅದಕ್ಕೆ ಹಲವಾರು ಕಾರಣಗಳು.. ಸರಿಯಾಗಿ ಪ್ರೋತ್ಸಾಹ ಮತ್ತು ಸೌಲಭ್ಯಗಳು ಸಿಗದೇ ಇರುವುದು, ಫ್ಯಾಮಿಲಿ ಕಷ್ಟ, ಹೀಗೆ ಹತ್ತು ಹಲವು ಕಮಿಟ್ಮೆಂಟ್’ಗಳಿಗೆ ಸಿಲುಕಿ ಕೊನೆಗೆ ಅದನ್ನೂ ಬಿಡೆ, ಇದನ್ನೂ ಬಿಡೆ ಎಂದು ಯಾವುದಾದರೊಂದು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ, ಇನ್ನು ಕೆಲವರು ಬೇರೆ ಬೇರೆ ಕೆಲಸ ಮಾಡುತ್ತಾ ಅಪರೂಪಕ್ಕೊಮ್ಮೆ ಹಳೆಯ ದಾಖಲೆಗಳ ಮಧ್ಯ ಸಿಕ್ಕೋ ಪ್ರಶಸ್ತಿ ಪತ್ರವನ್ನು ನೋಡಿ ಸುಮ್ಮನಾಗುತ್ತಾರೆ.. ಎಂಥ ವಿಚಿತ್ರ..

ನಮ್ಮಲ್ಲಿ ಮತ್ತೊಂದು ನಂಬಿಕೆ ಎಂದರೆ ಪ್ರೊಫೆಶನಲ್ ಕೋರ್ಸ್.. ಡಾಕ್ಟರ್, ಇಂಜಿನಿಯರ್, ಎಂಬಿಎ, ಎಂಸಿಎ ಎನ್ನುತ್ತಾ ಉಳಿದವುಗಳನ್ನು ಕಡೆಗಣಿಸಿರುವುದು.. ಎಲ್ಲರು ಸ್ಪೋರ್ಟ್ಸ್ ಸೇರಬೇಕು ಎಂಬುದಲ್ಲ ನನ್ನ ಉದ್ದೇಶ.. ಆದರೆ ಅರ್ಹತೆ ಮತ್ತು ಆಸಕ್ತಿ ಇರುವವರೂ ಪ್ರೊಫೆಶನಲ್ ಕೋರ್ಸ್ ಕಡೆ ಮುಖ ಮಾಡುತ್ತಾರೆ ಯಾಕೆ..?? ಅವರಿಗೆ ಗೊತ್ತು ಅಲ್ಲಿ ಸೌಲಭ್ಯ ಮತ್ತು ಭವಿಷ್ಯ ಎರಡೂ ಇಲ್ಲ ಎಂಬುದು.. ಅದು ನಿಲ್ಲಬೇಕು.. ಅಲ್ಲಿಯೂ ಉತ್ತಮ ಭವಿಷ್ಯವಿದೆ, ಅದಕ್ಕಾಗಿ ತರಬೇತಿ ಕೇಂದ್ರಗಳಿವೆ, ಅಲ್ಲಿ ಉತ್ತಮ ತರಬೇತುದಾರರಿದ್ದಾರೆ ಎಂಬ ನಂಬಿಕೆ ಬರಬೇಕು.. ಸೈನಿಕರು ದೇಶದ ರಕ್ಷಕರು ಅವರೇ ನಮ್ಮುಸಿರು, ಡಾಕ್ಟರ್ ಹಾಗೂ ಇಂಜಿನಿಯರ್’ಗಳು ದೇಶದ ಜೀವಾಳ, ಅವರಿಲ್ಲದೆ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಅಸಾಧ್ಯ.. ಆದರೆ ಸ್ಪೋರ್ಟ್ಸ್’ಮನ್ಸ್ ಇದ್ದಾರಲ್ಲ ಅವರು ದೇಶದ ಕೀರ್ತಿಪತಾಕೆಯನ್ನು ಎಲ್ಲೆಡೆ ಪ್ರಸಾರ ಮಾಡುವವರು… ಅವರೂ ನಮಗೆ ಬೇಕು..

ಗೆಳೆಯರೊಬ್ಬರು ಹೇಳಿದಂತೆ ಅಮೇರಿಕ’ದಲ್ಲಿ ಎಲ್ಲರ ಮನಸ್ಸಲ್ಲಿ ನೆಲೆ ಊರೋಕೆ 22 ಪದಕ ಗೆಲ್ಲಬೇಕು.. ಆದರೆ ಭಾರತದಲ್ಲಿ ಒಂದು ಗೆದ್ದರೂ ಸಾಕು ಅಥವಾ ಪದಕ ಗೆಲ್ಲದೇ ದೀಪಾ ಥರ ದೇಶ ಬೆಳಗಲು ಆಡಿದರೆ ಸಾಕು.. ಅವರು ಯಾವತ್ತೂ ಹೃದಯದಲ್ಲಿ ನೆಲೆಯಾಗಿರುತ್ತಾರೆ.. ಒಲಂಪಿಕ್ ನಲ್ಲಿ ಪದಕ ಬರಲಿ, ಬರದೇ ಇರಲಿ, ವೀ ಲವ್ ಯು ಆಲ್..

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Hegde

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!