ಕಥೆ ಕಾದಂಬರಿ

ಕರಾಳ ಗರ್ಭ – ೩

” ಮಿ. ವಿಜಯ್ ದೇಶಪಾಂಡೆ?…ಓಹ್, ಬನ್ನಿ ನಮ್ಮ ಆಫೀಸಿಗೆ…, ನಿಮ್ಮ ಹೊಟೆಲ್’ನಿಂದ ಐದು ನಿಮಿಷ ದಕ್ಷಿಣಕ್ಕೆ ನೆಡೆದು, ಒಂದು ಫರ್ಲಾಂಗ್ ಪಶ್ಷಿಮಕ್ಕೆ ತಿರುಗಿದರೆ, ಎಡಗಡೆ ಮೊದಲನೆಯ ಬಿಲ್ಡಿಂಗ್ ನಮ್ಮದು..ಸೆಕೆಂಡ್ ಫ್ಲೋರ್‍!” ಎಂದಳು ರಮಾ ಎನ್ನುವ ಆಕೆಯ ಸೆಕ್ರೆಟರಿ ಅದನ್ನೆಲ್ಲಾ ಉರುಹೊಡೆದವಳಂತೆ.

ಇಲ್ಲಿ ಓದಿ: ಕರಾಳ ಗರ್ಭ -2

 “ಉತ್ತರ –ದಕ್ಷಿಣ ನೋಡಲು ನನ್ನ ಬಳಿ ಕಂಪಾಸ್ ಇಲ್ಲವಲ್ಲಾ, ಟ್ಯಾಕ್ಸಿಯಲ್ಲೆ ಬರುತ್ತೇನೆ!” ಎಂದೆ. ಕಿಲಕಿಲ ನಕ್ಕಳು, ಸದ್ಯ,ಇವಳಿಗೆ ಹಾಸ್ಯಪ್ರಜ್ಞೆ ಇದೆಯಲ್ಲ ಎನಿಸಿತು.

ಇನ್ನು ಹತ್ತೇ ನಿಮಿಷಗಳಲ್ಲಿ ಫಳಫಳ ಬಿಸಿಲಿಗೆ ಮಿನುಗುವ ಗ್ಲಾಸ್ ಮುಂಭಾಗದ ಹೊಸಕಟ್ಟಡದ ಫಾಸ್ಟ್ ಲಿಫ್ಟಲ್ಲಿ ಸೆಕೆಂಡ್ ಫ್ಲೋರಿಗೆ ಮೇಲೇರುತ್ತಿದ್ದೆ. ಎಲ್ಲವೂ ಹೊಸದು… ನವನವೀನ … ಶ್ರೀಮಂತರ ಕಾರುಬಾರು, ನನ್ನಂತಾ ಬಡ ಪತ್ತೇದಾರನ ಆಫೀಸಿನಂತಲ್ಲಾ ಎಂದು ಕೀಳರಿಮೆ ಬಂತು.

ಹವಾ ನಿಯಂತ್ರಿತ ಆಫೀಸಿನ ಕಾರ್ಪೆಟ್ ಹಾಕಿದ್ದ ನೆಲದ ಮೇಲೆ ರಿಸೆಪ್ಷನ್ನಿಂದ ನಗು ಮುಖದ ಸೆಕ್ರೆಟರಿ ನನ್ನನ್ನು ಒಳಗೆ ಕರೆದೊಯ್ದಳು.

“ಬನ್ನಿ ಮಿ. ದೇಶಪಾಂಡೆ, ನಾನು ಲೂಸಿಯಾ ” ಎಂದು ತನ್ನ ಹೈ-ಬ್ಯಾಕ್ಸೀಟಿನಿಂದ ಎದ್ದವಳನ್ನು ನೋಡಿದೆ.

ಲೂಸಿಯಾ ಓರ್ವ ಬಿಳಿ ಆಂಗ್ಲೋ ಇಂಡಿಯನ್ ಯುವತಿ, ಸುಮಾರು ಐದು ಅಡಿ ಆರಿಂಚು ಎತ್ತರ. ಪುಟ್ಟದಾದ ಬಾಬ್ ಕಟ್ ಕೂದಲು ಕಿಟಕಿಯ ಬಿಸಿಲಿನ ಝಳದಲ್ಲಿ ತಲೆಯ ಸುತ್ತಲೂ ಪ್ರಭಾವಳಿಯತಿತ್ತು. ನಗುಮುಖದಲ್ಲಿ ಗುಳಿ ಬೀಳುವ ಕೆನ್ನೆ, ಪುಟ್ಟಬಾಯಿ. ಚುರುಕಾದ ಕಂಗಳು, ನೀಳವಾದ ಮೂಗು..ಬಿಳಿ ಸಲ್ವಾರ್ ಕಮೀಝಿನಲ್ಲಿ ಲಕ್ಷಣವಾಗಿ ಕಾಣುತ್ತಿದ್ದಳು. ನನಗಿಂತಾ ಚಿಕ್ಕವಳು, ಆದರೆ ವಯಸ್ಸಿನಲ್ಲಿ ತೀರಾ ವ್ಯತ್ಯಾಸವಿಲ್ಲ ಎನಿಸಿತು. ಇಂತದರಲ್ಲೆಲ್ಲಾ ನನ್ನ ಪತ್ತೇದಾರಿ ಬುದ್ದಿ ಬಲು ಚುರುಕಾಗಿ ಕೆಲಸಮಾಡುತ್ತೆ!

ನನ್ನ ಕೈ ಕುಲುಕಿದ ಹಸ್ತ ಕೋಮಲವಾದರೂ ಭದ್ರವಾಗಿತ್ತು.

“ರೂಮಿನಲ್ಲಿ ಮಲ್ಲಿಗೆ ಸುವಾಸನೆಯಿದೆ, ನೈಸ್!” ಎಂದೆ ಸುತ್ತಲೂ ನೊಡುತ್ತಾ.

” ನಿಮಗಿಷ್ಟವಾಯಿತೆ, ಗುಡ್” ಎಂದಳು. ಆಕೆಯ ಎದುರಿನ ಮೆತ್ತನೆಯ ಚೇರಿನಲ್ಲಿ ಕುಳಿತೆ.

“ಇದು ಈ ಊರಿಗೆ ನಿಮ್ಮ ಮೊದಲ ಭೇಟಿಯೆ?”ಎಂದಳು

” ಹೌದು, ಯಾವುದೇ ಮ್ಯಾಪ್’ನಲ್ಲಿ ದೊಡ್ಡದಾಗಿ ಕಾಣುವುದಿಲ್ಲ ನಿಮ್ಮೂರು…”ಎಂದೆ. ನೀವೂ ಕಾಣುವುದಿಲ್ಲಾ ಅನ್ನಲಿಲ್ಲ.

” ನಾನು ಐದು ವರ್ಷದಿಂದ ಇಲ್ಲೇ ’ಲಾ ’ ಮುಗಿಸಿ ಪ್ರಾಕ್ಟಿಸ್ ಮಾಡುತ್ತಿದ್ದೇನೆ “ಎಂದಳು ಫೈಲ್ಗಳನ್ನು ಪಕ್ಕಕ್ಕೆ ತಳ್ಳುತ್ತಾ,

” ಫರ್ನಾಂಡೆಸ್ ನನ್ನ ಗಾಡ್ಫಾದರ್ ತರಹಾ..ನಮ್ಮ ತಂದೆ ತಾಯಿಯರಿಗೆ ಬಹಳ ಬೇಕಾದವರು.., ನನ್ನ ತಂದೆ-ತಾಯಿ ಒಂದು ಅಫಘಾತದಲ್ಲಿ ತೀರಿಹೋದ ಮೇಲೆ ಅವರೇ ಓದಿಸಿ ನನಗೆಲ್ಲಾ ಸಹಾಯ ಮಾಡಿದ್ದು..ಅದಕ್ಕೆ ಅವರ ಕಾರುಬಾರೆಲ್ಲಾ ನಾನೆ ಇಲ್ಲಿ ನೋಡಿಕೊಳ್ಳುತ್ತೇನೆ…

“…ಚಿಕ್ಕಊರು, ಇಲ್ಲೇನು ಅನ್ನುತೀರಾ, ಬಹಳ ಶಿಪಿಂಗ್, ಟೂರಿಸಮ್ ಅಂತಾ ಬಿಜಿನೆಸ್ ಕೂಡಾ ಇದೆ ಅವರಿಗೆ..ಅಲ್ಲದೆ ಅಂತವರೆಲ್ಲ ನಮ್ಮ ಮುಖ್ಯ ಕಕ್ಷಿದಾರರು ಕೂಡಾ. ” ಎಂದು ವಿವರಿಸಿದಳು

” ಮೃದುಲಾ ಹೊಸಮನಿಯವರೂ ಸೇರಿದಂತೆ?..”ಎಂದು ಮಾತನ್ನು ಬಂದ ವಿಷಯಕ್ಕೆ ತಂದೆ.

“ಹೌದು” ತಲೆಯಾಡಿಸುತ್ತಾ ಲೂಸಿಯಾ ’ಕಾಫಿ ತಾ’ ಎಂದು ಸೆಕ್ರೆಟರಿಗೆ ಸೂಚಿಸಿದಳು.

” ಆದರೆ ಬೆಂಗಳೂರಿನ ಚಿತ್ರರಂಗದವರ ವ್ಯವಹಾರವನ್ನೆಲ್ಲಾ ಫರ್ನಾಂಡೆಸ್ ಆಫೀಸಿನವರು ಅಲ್ಲೇ ನೋಡಿಕೊಳ್ಳುತ್ತಾರೆ. ಇದೇ ಮೊದಲ ಬಾರಿಗೆ ಚಿತ್ರತಾರೆಯ ಬಗ್ಗೆ ಕೇಸ್ ನನ್ನ ಬಳಿ ಬಂದಿದ್ದು..ನಾನೂ ಈ ಬಗ್ಗೆ ಸ್ವಲ್ಪ ವಿಷಯ ಸಂಗ್ರಹಿಸಿದ್ದೇನೆ, ನಿಮಗೆ ಸಹಾಯವಾಗಬಹುದು “ಎಂದಳು.

ನಾನು ಕೂತೂಹಲದಿಂದ, “ಹೇಳಿ ಮತ್ತೆ, ತಡವೇಕೆ?” ಎಂದೆ.

” ಆ-ಹಾ!..ಮೊದಲು ಕಾಫಿ ..ಆಮೇಲೆ ಚರ್ಚೆ” ಎಂದು ಆಗತಾನೆ ಸೆಕ್ರೆಟರಿ ತಂದಿಟ್ಟ ಕಾಫಿ ಕೆಟಲ್ ಅನ್ನು ಎತ್ತಿ ಎರಡು ಗ್ಲಾಸ್ಗಳಿಗೆ ಕಾಫಿ ಸುರಿಯ ಹತ್ತಿದಳು ಲುಸಿಯಾ. ಇವಳ್ಯಾಕೋ ನನ್ನ ಜಾತಿಗೆ ಸೇರಿದವಳೇ ಕಾಫಿ ವಿಷಯದಲ್ಲಿ ಅನಿಸಿತು.

ಲೂಸಿಯಾ ವಿವರಿಸ ಹತ್ತಿದಳು:

” ನಿಮಗೆ ಈ ಅಡಾಪ್ಶನ್ ಕೇಸಸ್ ಬಗ್ಗೆ ಇರುವ ಕಾನೂನು ಏನು ಗೊತ್ತಿದೆಯೊ ನಂಗೆ ತಿಳಿಯದು..ನಾನು ಹೇಳುತ್ತೇನೆ ನೋಡಿ..ಈಗ ಸದ್ಯದಲ್ಲಿರುವ ಕಾನೂನಿನ ಪ್ರಕಾರ ಹೆತ್ತವರು ಮಗುವನ್ನು ದತ್ತು ಕೊಡಬೇಕಾದರೆ ಕೆಲವು ಕಾನೂನಿಪತ್ರಗಳನ್ನು ಮಾಡಿಸಬೇಕಾಗುತ್ತೆ..ಅದರಲ್ಲಿ ಆ ಮಗುವಿನ ನಿಜವಾದ ಹೆತ್ತ ತಂದೆ-ತಾಯಿ, ದತ್ತು ಪಡೆವ ತಂದೆ-ತಾಯಿ, ಅವರೆಲ್ಲರ ಮೆಡಿಕಲ್ ಹಿಸ್ಟರಿ, ಮಗುವಿನ ಲಿಂಗ, ಹೆಸರು, ವಯಸ್ಸು ಎಲ್ಲಾ ದಾಖಲೆಗಳನ್ನು ಜೋಡಿಸಿರುತ್ತಾರೆ. ಅಂತಾ ಎಲ್ಲಾ ಪತ್ರಗಳು ಈಗ CARA (Central Adoption Resource Authority) ಎಂಬ ಕೇಂದ್ರ ಸರ್ಕಾರಿ ಆಫೀಸ್ ನೋಡಿಕೊಳ್ಳುತ್ತದೆ.ಆ ಸ್ಥಳದ ಹತ್ತಿರದ ವ್ಯಾಪ್ತಿಯ ಕೋರ್ಟ್ನಲ್ಲಿ ಇದನ್ನು ಒಪ್ಪಿಸಿ ಕೋರ್ಟ್ ಅನುಮತಿ ಪತ್ರ ಪಡೆದು ಮಗುವನ್ನು ದತ್ತು ತಂದೆ-ತಾಯಿಗಳಿಗೆ ಒಪ್ಪಿಸಲಾಗುತ್ತೆ…”

” ನಮ್ಮ ಮೃದುಲಾ ಕೇಸ್ನಲ್ಲಿ ಅಂತಾ ಆ ಕಾಲದ ಪತ್ರಗಳು ಎಲ್ಲಿ ಸಿಗುತ್ತವೆ?” ಎಂದು ಪ್ರಶ್ನಿಸಿದೆ.

ಕಾಫಿ ಕಪ್ ತಳ್ಳಿದೆ. ಚೆನ್ನಾಗಿತ್ತು, ಆದರೆ ನಾನು ಮಾಡುವ ಸ್ಟ್ರಾಂಗ್ ಕಾಫಿಯಲ್ಲ, ಬಿಡಿ.

ಲೂಸಿಯಾ ಉಸ್ಸ್ ಎಂದು ಮುಂದುವರೆಸಿದಳು:

” ಬಹಳ ಶ್ರಮಪಡಬೇಕಾಗುತ್ತೆ, ನೋಡಿ . ೧೯೮೦ರಲ್ಲಿ ಕಾನೂನು ಪತ್ರಗಳ ಸ್ಥಿತಿ ಸ್ವಲ್ಪ ಅಸ್ಪಷ್ಟವಾಗಿದ್ದವು.. ಈಗಿನಷ್ಟು ಕರಾರುವಾಕ್ಕಾಗಿ, ನಿಯಮ ಬದ್ಧವಾಗಿ ಇರಲಿಲ್ಲ, ಅದೂ ಇಂತಾ ಚಿಕ್ಕ ಊರುಗಳಲ್ಲಿ ಆಗ ಜನನ- ಮರಣ ರಿಜಿಸ್ಟ್ರಾರ್ ಅಥವ ಲೋಕಲ್ ಕೋರ್ಟಿನ ದಾಖಲೆಗಳು ಮಾತ್ರ ಇರುತ್ತಿದ್ದವು.ಅಲ್ಲದೇ ಆಗ ಇಂದಿನಂತೆ ಕಂಪ್ಯುಟರ್ ಲೋಕವಲ್ಲದ ಕಾರಣ, ಎಲ್ಲಾ ಪತ್ರಗಳು ಕಾಗದ ರೂಪದಲ್ಲೆ ಇರುತ್ತಿದ್ದವು. ಅಂತಾ ಮೂವತ್ತೈದು ವರ್ಷ ಹಳೆ ಪತ್ರ ಕಡತಗಳನ್ನೆಲ್ಲಾ ಇವರು ಇಲ್ಲಿನ ಚಿಕ್ಕ ರಿಜಿಸ್ಟ್ರಾರ್ ಆಫೀಸಿನ ಕೋಣೆಯಲ್ಲಿ ತುಂಬಿದ್ದಾರಂತೆ. ಅದನ್ನು ಪಡೆಯಲು ನಾವು ಒಂದು ಅಪ್ಲಿಕೇಶನ್ ಹಾಕಬೇಕು..ಆಗ ಅದನ್ನು ನೋಡಲು ಕಾಪಿಮಾಡಲು ಬಿಡುತ್ತಾರಂತೆ..ಇದಕ್ಕಾಗಿ ನಾನಾಗಲೇ ನಿಮ್ಮ ಹೆಸರಿನಲ್ಲಿ ಪತ್ರ ಮಾಡಿಸಿದ್ದೇನೆ, ಇದನ್ನು ತೆಗೆದುಕೊಂಡು ಹೋಗಿ ಅಲ್ಲಿ ಅವರ ಮುಂದೆ ಸಹಿ ಹಾಕಿ, ನೀವು ಮೃದುಲಾರ ರೆಕಾರ್ಡ್ಸ್ ಓಪನ್ ಮಾಡಬಹುದು…”

” ಪರವಾಗಿಲ್ಲಾ, ಬಹಳ ಶೀಘ್ರವೆ ಬಹಳ ಕೆಲಸ ಮಾಡಿದ್ದೀರಿ, ನನಗಾಗಿ” ಎಂದು ಪ್ರಶಂಸಿಸಿದೆ. ಹೆಣ್ಣಿಗೆ ಪ್ರಶಂಸೆಯಿಂದ ಖುಶಿಯಾಗುತ್ತೆ ಎಂದು ಎಲ್ಲರೂ ಹೇಳುತ್ತಾರೆ.

ಆದರೆ ಲುಸಿಯಾ ನಕ್ಕರೂ ಒಪ್ಪಲಿಲ್ಲ,

” ನೋ ನೋ, ನನಗೇನೂ ಬೇರೆ ದಾರಿಯೆ ಇರಲಿಲ್ಲಾ..ನಿಮಗೇ ಇನ್ನು ಹೆಚ್ಚು ಕೆಲಸ..ಅಲ್ಲಿ ಸಿಕ್ಕ ರೆಕಾರ್ಡ್ಸ್ ತೆಗೆದು ಆಕೆಯ ಹೆತ್ತ ತಂದೆ-ತಾಯಿಯರ ಪತ್ತೆ ಮಾಡುತ್ತೀರೇನು?” ಎಂದು ಕೇಳಿದಳು.

“ಅದೆಲ್ಲಾ ಕಕ್ಷಿದಾರರಿಗೂ ಪತ್ತೇದಾರನಿಗೂ ನಡುವೆ ಇರುವ ಖಾಸಗಿ ವಿಷಯಗಳು, ಯಾರಿಗೂ ಹೇಳಲಾಗುವುದಿಲ್ಲಾ..ಲಾಯರ್ಸ್ ಜತೆಯೂ ಹಾಗೆ ತಾನೆ?”ಎಂದೆ ನಯವಾಗಿ.

“ಕಾನ್ಫಿಡೆನ್ಶಿಯಲ್ ಅನ್ನುತ್ತೀರಾ?…ನನಗೇನೂ ಹೇಳದೇ ಹೋಗುತ್ತೀರಿ ಅನ್ನಿ..”ಎಂದಳು ಹುಸಿಮುನಿಸಿನಿಂದ.

“ಹಾಗೆ ಹೋಗುವುದಿಲ್ಲಾ, ಒಳ್ಳೇ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ, ಎಲ್ಲಾ ಮುಗಿದಮೇಲೆ..ಆಗ ಎಲ್ಲಾ ಹೇಳಿ ಹೋಗುತ್ತೇನೆ..ನಾನು ಹೇಳಿದೆ ಎಂದು ಮಾತ್ರ ನೀವು ಹೇಳಬಾರದು ಅಷ್ಟೆ..ಅದೂ ಕಾನ್ಫಿಡೆನ್ಶಿಯಲ್!” ಎಂದು ಹೇಳಿ ಅವಳಿಗೆ ಬೈ ಹೇಳಿ ಹೊರಬಿದ್ದೆ, ಪತ್ರದ ಫೈಲ್ನೊಂದಿಗೆ.

********************************

ನಾನು ಆಕೆಯ ಬಗ್ಗೆ ಆಸಕ್ತಿ ತೋರಿದಂತೆ ನಾನು ಆಕೆಗೆ ಅಂತದೇ ಭಾವನೆ ಕೊಟ್ಟೆನೆ? ಎಂದೆಲ್ಲಾ ಲೂಸಿಯಾಳ ಬಗ್ಗೆಯೆ ಮನಸ್ಸಿದ್ದರಿಂದಲೋ ಏನೋ ನಾನು ಟ್ಯಾಕ್ಸಿಯಲ್ಲಿ ವಾಪಸ್ ಹೋಗುತ್ತಿದ್ದಾಗ ನನ್ನನ್ನು ಹಿಂಬಾಲಿಸುತ್ತಿದ್ದ ಹಳದಿ ಟಾಟಾ ನ್ಯಾನೋ ಕಾರನ್ನು ತಕ್ಷಣವೇ ಗಮನಿಸಿರಲಿಲ್ಲ.

ನಾನು ಹೋಟೆಲ್ ಬಳಿ ಇಳಿಯುತ್ತಿದ್ದಂತೆ, ಅವನು ನಿಲ್ಲಿಸದೇ ಭರ್ ಎಂದು ನನ್ನ ಟ್ಯಾಕ್ಸಿಯನ್ನು ದಾಟಿಹೋಗಿದ್ದನು..ಅದರಲ್ಲಿ ಕುಳಿತ ಸಣಕಲು ಕಡ್ಡಿಯಂತಾ ಹಿಪ್ಪಿಕೂದಲಿನ ಡ್ರೈವರನ್ನು ನಾನು ಮನದಲ್ಲೇ ನೋಟ್ ಮಾಡಿಕೊಂಡೆ. ಅವನ ಕಾರ್ ನಂಬರ್ ಕೂಡಾ.

ಮತ್ತೆ ನನ್ನ ರೂಮಿನಲ್ಲಿ ಆಕೆ ಕೊಟ್ಟಿದ್ದ ಅಪ್ಲಿಕೇಶನ್, ಕೇಸ್ ಹಿನ್ನೆಲೆ ಇತ್ಯಾದಿ ಪತ್ರಗಳನ್ನೆಲ್ಲಾ ಓದಿದೆ. ನಂತರ ಸಂಜೆಯಾಗುತ್ತಿದೆ, ಇಲ್ಲಿನ ಕರ್ಪೂರಿನದಿಯ ಮೇಲಿನ ಸೇತುವೆ ಬಹಳ ಜನಪ್ರಿಯ ತಾಣವಂತೆ..ಒಮ್ಮೆ ಅಲ್ಲಿಗೆ ಹೋಗಿ ಬರೋಣಾ, ಎಂದೆನಿಸಿ ಲಾಡ್ಜ್ ಹೊರಗೆ ಕಾಯುತ್ತಿದ್ದ ಮೊದಲನೆಯ ಟ್ಯಾಕ್ಸಿ ಹತ್ತಿದೆ.

“ಅಲ್ಲಿಗೆ ಸಂಜೆ ಹೊತ್ತಲ್ಲಿ ಒಬ್ರೇ ಹೋಗುತ್ತೀರಾ , ಯಾರೂ ಇಲ್ಲವೆ ?”ಎಂದ ಡ್ರೈವರ್. ಮಹಾವಾಚಾಳಿಗಳು ಈ ಡ್ರೈವರ್ಸ್.

” ಯಾಕೆ, ನೀನು ಅಲ್ಲಿವರೆಗೆ ಬರುತ್ತಿದ್ದೀಯಲ್ಲಾ?”ಎಂದೆ.

“ಆಮೇಲೆ… ಇಳಿದ ಮೇಲೆ?” ಎನ್ನುತ್ತಾನೆ.

“ಅಲ್ಲಿ ಬೇರೆ ಯಾರೂ ಜನರೇ ಇರುವುದಿಲ್ಲವೆ, ತೆಪ್ಪಗಿರು !”ಎಂದು ಗದರಿಸುತ್ತೇನೆ. ನನಗಿಂತಾ ಹೆಚ್ಚು ತರಲೆಗಳು ನನಗೆ ಇಷ್ಟವಾಗುವುದಿಲ್ಲ ನೋಡಿ.

ಮತ್ತೆ ಊರಿನ ಹಾದಿ ಬಿಟ್ಟು ನದಿ ಸೇತುವೆಗೆ ಹತ್ತಿರವಾದಾಗ ಟ್ರಾಫಿಕ್ ಕಡಿಮೆಯಾಗುತ್ತದೆ. ಮತ್ತೆ ಆ ಹಳದಿ ಟಾಟಾನ್ಯಾನೋ ಕಾರ್ ನನ್ನ ಹಿಂದೆ ಎರಡು ಕಾರ್ ಬಿಟ್ಟು ಮೆತ್ತಗೆ ಹಿಂಬಾಲಿಸುತ್ತಿದೆ!.

“ಸ್ವಲ್ಪ ಮುಂದೆ ಹೋಗಿ ನಿಲ್ಲಿಸು” ಎಂದೆ ಡ್ರೈವರಿಗೆ, ಸೇತುವೆ ಬಳಿ ಬಂದಾಗ.
ಅಚ್ಚರಿಯಿಂದ ನನ್ನತ್ತ ತಿರುಗಿ, “ಇಲ್ಲ ಇಲ್ಲಾ..ಇಲ್ಲಿಂದಲೇ ‘ಸನ್ಸೆಟ್ ’ಚೆನ್ನಾಗಿ ಕಾಣಿಸೋದು! ಅಯ್ಯೋ!” ಎನ್ನುವನು.

“ನಾನು ಸನ್ಸೆಟ್ ಅಲ್ಲಾ, ಮೂನ್ ರೈಸ್ ನೋಡಲು ಮುಂದೆ ಹೋಗುತ್ತಿದ್ದೇನೆ, ಸುಮ್ಮನೆ ನೆಡಿಯಯ್ಯಾ…” ಎಂದು ಗದರಿದೆ, ಆ ಹಿಂದಿದ್ದ ಟಾಟಾನ್ಯಾನೋ ಕಾರನ್ನೇ ಗಮನಿಸುತ್ತಾ. ನನ್ನ ಡ್ರೈವರ್ ಅದನ್ನು ಗಮನಿಸಿರಲಿಲ್ಲ.

ಈಗ ಟ್ರಾಫಿಕ್ ಸಂದಣಿ ಕಡಿಮೆಯಾಗಿ ಈಗ ಅವನಿಗೆ ಬಚ್ಚಿಟ್ಟುಕೊಂಡು ಹಿಂಬಾಲಿಸಲು ಕವರ್ ಇಲ್ಲದಂತಾಯಿತು. ಆದರೂ ಭಂಡನಂತೆ ಜೋರಾಗಿ ಬಂದು ಎಡಗಡೆಯಿಂದ ನನ್ನ ಟ್ಯಾಕ್ಸಿಯನ್ನು ಹಿಮ್ಮೆಟ್ಟಿಸಿ ಮುಂದೆ ಧೂಳೆಬ್ಬಿಸುತ್ತಾ ಸಾಗಿಹೋದನು. ಅದೇ ಸಣಕಲು ದೇಹದ ವ್ಯಕ್ತಿ. ಹಳದಿ ಚಿಟ್ಟೆ ಬಣ್ಣದ ಟೀಶರ್ಟ್ ಹಾಕಿದ್ದಾನೆ.. ನನ್ನ ಕಡೆಗೆ ತಿರುಗಿ ನೋಡದೇ ಎಚ್ಚರಿಕೆಯಿಂದ ನೇರವಾಗಿ ನೊಡುತ್ತಲೇ ಹೋದನು.

” ಲೆಫ್ಟ್’ನಿಂದ ಓವರ್’ಟೇಕ್ ಮಾಡಿದ, ತಪ್ಪಲ್ಲವೆ?” ಎಂದು ಸಿಡಿಮಿಡಿಗೊಂಡ ನನ್ನ ಡ್ರೈವರ್ , ಟ್ಯಾಕ್ಸಿ ನಿಲ್ಲಿಸುತ್ತಾ.

“ತಪ್ಪು ವ್ಯಕ್ತಿಗಳು ತಪ್ಪನ್ನು ತಾನೇ ಮಾಡುವುದು?” ಎಂದು ಉತ್ತರಿಸಿ, ಇಳಿಯಹತ್ತಿದೆ.

” ನಿಮಗೆ ಗೊತ್ತೆ ಅವನು?” ಎಂದು ನಾನಿತ್ತ ನೂರು ರೂ ನೋಟನ್ನು ಕಿಸೆಯಲ್ಲಿ ತುರುಕಿಕೊಂಡ.

” ಇಲ್ಲ , ಆದರೆ ಕಂಡುಹಿಡಿಯುತ್ತೇನೆ” ಎಂದು ಹೇಳಿ ಸೇತುವೆ ಅಂಚಿಗೆ ನಡೆದೆ.

ನಿಜಕ್ಕೂ ಸೇತುವೆಯಿಂದ ಸೂರ್ಯಾಸ್ತದ ಸಮಯದಲ್ಲಿ ನದಿಯ ಸುತ್ತಮುತ್ತ ಪ್ರಕೃತಿ ಸುಂದರವಾಗಿತ್ತು. ನದಿಯ ನೀರೆಲ್ಲಾ ಸಂಜೆಗತ್ತಲಿನಲ್ಲಿ ಬಂಗಾರದ ರಂಗೇರಿತ್ತು. ಅಲ್ಲಿಲ್ಲಿ ಮೀನುಗಾರರ ತಮ್ಮ ಶ್ರಮಜೀವನದ ಮತ್ತೊಂದು ದಿನ ಕಳೆದು ಮನೆಗಳಿಗೆ ನಾವೆಯಲ್ಲಿ ಹಿಂತಿರುಗುತ್ತಿದ್ದರು, ತಮ್ಮ ಲೋಡ್’ಗಳೊಂದಿಗೆ..ಪ್ರವಾಸಿಗರ ಬೋಟ್’ಗಳು ತಮ್ಮ ಸಂಜೆಯ ಕೊನೆಯ ರೌಂಡ್ ಮಾಡುತ್ತಿದ್ದವೇನೋ ಅನಿಸಿತು. ನದಿಯ ಬದಿಯಲ್ಲಿ ಹಲವಾರು ಟೆಂಟ್’ಗಳಿದ್ದವು..ಆ ಗುಡಾರಗಳಲ್ಲಿ ಶ್ರೀಲಂಕಾ ದ್ವೀಪದಿಂದ ಬಂದಿದ್ದ ನಿರಾಶ್ರಿತರು ಮನೆಮಾಡಿಕೊಂಡಿದ್ದರು. ಹೆಂಗಸರು ಚಿಕ್ಕ-ಚಿಕ್ಕ ತಂತಿ ಕಟ್ಟಿ ಬಟ್ಟೆ ನೇತುಹಾಕಿದ್ದರು.. ಹರಕಲು ಚಡ್ಡಿಯ ಅರೆ ಬೆತ್ತಲೆ ಕಪ್ಪು ಮಕ್ಕಳು ಝೂಟಾಟ ಆಡುತ್ತ ಕೂಗುತ್ತಿದ್ದವು. ಇನ್ನೂ ದೂರದಲ್ಲಿ ದಿಗಂತದತ್ತ ಸಮುದ್ರದ ಆರಂಭದ ಅಲೆಗಳು ಕಾಣಹತ್ತಿದ್ದವು..ಅತ್ತಲಿಂದ ಎಲ್ಲ ಕಳೆದುಕೊಂಡು ಇತ್ತ ಓಡಿಬಂದವರಲ್ಲವೆ ಇವರು ಅನಿಸಿತು.

ಸಿಗರೇಟ್ ಬದಲು ವಿಕ್ರಮ್ ನೀಡಿದ್ದ ಮತ್ತೊಂದು ಚೂಯಿಂಗ್’ಗಮ್ ಬಾಯಿಗೆ ಹಾಕಿಕೊಂಡೆ.

ಆಗ.. ನನ್ನ ಪ್ಯಾಂಟ್ ಎಳೆದ ಒಬ್ಬ ನಿರಾಶ್ರಿತರ ಪುಟಾಣಿ… ಮೂಗಿನಲ್ಲಿ ಸಿಂಬಳ ಸುರಿವ ಹುಡುಗನತ್ತ ನೋಡಿದೆ.. ಕೈಚಾಚಿದ.

“ನಾನೊಂದು ಕೆಲಸ ಹೇಳುತ್ತೇನೆ, ಮಾಡಿದರೆ ೧೦ ರೂಪಾಯ್ ಕೊಡುತ್ತೇನೆ, ಆಯ್ತಾ?” ಎಂದೆ ಅರೆಬರೆ ತಮಿಳಿನಲ್ಲಿ.

” ಹತ್ತು ರುಪಾಯಾ.. ಏನೇಳಿ?..”ಎಂದ ಮೂಗು ಸೊರ್ ಎನ್ನಿಸುತ್ತಾ.

“ಈ ಸೇತುವೆಯ ಅಂಚಿನಲ್ಲಿ ಒಂದು ಟಾಟಾನ್ಯಾನೊ ಹಳದಿ ಕಾರ್ ನಿಂತಿರತ್ತೆ..ಅಲ್ಲೇ ಇದೆಯಾ, ಡ್ರೈವರ್ ಏನು ಮಾಡ್ತಿದಾನೆ ಅಂತಾ ನೋಡ್ಕೊಂಡು ಬಾ,ಆದರೆ ಅವನ್ನ ಮಾತಾಡಿಸಬಾರದು.. ಓಡು……ಟಾಟಾನ್ಯಾನೋ ಗೊತ್ತು ತಾನೆ?” ಎಂದೆ ಅನುಮಾನದಿಂದ

ಅವನು ನನ್ನತ್ತ ವಿಚಿತ್ರವಾಗಿ ನೋಡುತಾ, ” ಹೂಂ, ನಮ್ಮಪ್ಪನತ್ರ ಇದೆ ಒಂದು. ಗೊತ್ತಾಯ್ತು ಬಿಡಿ” ಎಂದು ಓಡಹತ್ತಿದ, ಬುರ್ರ್ ಎಂದು ಬಾಯಲ್ಲಿ ಕಾರಿನ ಸದ್ದುಮಾಡುತ್ತಾ…ಇವರಪ್ಪನ ಹತ್ರ ಕಾರ್ ಇದೆಯಂತೆ, ಸುಳ್ಳ!

ಐದೇ ನಿಮಿಷದಲ್ಲಿ ಮತ್ತೆ ತನ್ನ ಬಾಯಲ್ಲಿ ಕಾರ್ ನಾಲ್ಕನೆ ಗೇರ್ ಹಾಕಿದವನಂತೆ ಸ್ಪೀಡಾಗಿ ಬಂದು ನಿಂತ.

” ಸಾರ್, ಅಲ್ಲೆ ಮೂಲೆಯಲ್ಲಿ ಮರದ ಮರೆಯಲ್ಲಿ ಇದೆ ಆ ಕಾರ್..ಮೆತ್ತಗೆ ಹೋಗಿ ನೋಡಿದೆ, ಆಯಪ್ಪಾ ಕಣ್ಣಿಗೇನೋ ಇಟ್ಕೊಂಡಿದ್ದಾ , ಕನ್ನಡಕಗಿಂತ ದಪ್ಪ ಇದೆ… ಈ ಕಡೆಗೇ ನೊಡುತ್ತಿದ್ದಾನೆ..”ಎಂದು ವರದಿ ಒಪ್ಪಿಸಿದ

ಓಹೋ ಬೈನಾಕ್ಯುಲರ್’ನಲ್ಲಿ ನಾನೆಲ್ಲಿ ಹೊಗುತ್ತೇನೆ ಎಂದು ಗಮನಿಸುತ್ತಿರಬೇಕು!!

ಅವನಿಗೆ ಹತ್ತು ರೂಪಾಯ್ ಕೊಟ್ಟೆ..

“ಮುಂದಿನಸಲ ಬಂದ್ರೆ ಇಪ್ಪತ್ತು ರೂಪಾಯಿ ಕೊಡಿ ಸಾರ್” ಅಂದ.

“ಕೊಟ್ರೆ?”

“ಆಗ ಏರೋಪ್ಲೇನ್ ಹುಡುಕಿ ಕೊಡ್ತೀನಿ” ಎಂದು ಓಡಿದ…ಆಶಾಜೀವಿ, ಪಾಪ!

ನಾನೀಗ ವಾಪಸ್ ಹೋಟೆಲ್ ದಿಕ್ಕಿಗೆ ಕಾಲ್ನಡಿಗೆಯಲ್ಲಿ ಹೊರಟೆ..ಈಗವನು ನನ್ನ ಕಾರಿನಲ್ಲಿ ಹೇಗೆ ಹಿಂಬಾಲಿಸುತ್ತಾನೆ ಎಂಬುದನ್ನು ಪರೀಕ್ಷಿಸಲು!.

ಸ್ವಲ್ಪ ಹೊತ್ತು ನನ್ನನ್ನೆ ನೋಡುತ್ತಿದ್ದ ಎಂದು ಕಾಣುತ್ತೆ..’ಹಾಳಾಗಿ ಹೋಗಲಿ ತನ್ನ ಗುಪ್ತಕಾರ್ಯ’ ಎಂದುಕೊಳ್ಳುತ್ತಾ, ಜೋರಾಗಿ ಕಾರ್ ಬಿಟ್ಟುಕೊಂಡು ಬಂದು ನೆಡೆಯುತ್ತಿದ್ದ ನನ್ನನ್ನು ದಾಟಿ ಹೊರಟುಹೋದ.

ಇನ್ನು ನನ್ನ ಹೋಟೆಲ್ ಬಳಿ ಬಚ್ಚಿಟ್ಟುಕೊಂಡು ಮತ್ತೆ ಕಾಯುತ್ತಿರುತ್ತಾನೆ , ಅನುಮಾನವಿಲ್ಲ..

ಅರ್ಧಗಂಟೆಯಾಯ್ತು, ನಡೆದು ಬೆವೆತು ಸುಸ್ತಾಗುವಷ್ಟರಲ್ಲಿ ಹೋಟೆಲ್ ಬಳಿಗೆ ಬಂದಿದ್ದೆ.

ರೂಮಿಗೆ ಹೋಗಿ ಮೊದಲು ಲೂಸಿಯಾ ಮೊಬೈಲಿಗೆ ಫೋನ್ಮಾಡಿದೆ.

” ನನಗೆ ಸ್ವಲ್ಪ ವಿಷಯ ಪತ್ತೆ ಹಚ್ಚಿಕೊಡಿ, ಆಗುತ್ತಾ?” ಎಂದೆ

” ಏನು ಪತ್ತೆಮಾಡಿದಿರಿ, ಡಿಟೆಕ್ಟಿವ್ಸ ಸಾಹೇಬರು?” ಎಂದಳು ನಗುತ್ತಾ..ಲೂಸಿ ಅಲ್ಲ, ಕಿಸಿಕಿಸಿ ಎಂದಿಡಬೇಕು ಹೆಸರು ಇವಳಿಗೆ.

“ನಾನು ಪತ್ತೆ ಮಾಡುವುದೆಲ್ಲಿ?…ನನ್ನನ್ನೇ ಯಾರೋ ಪತ್ತೆ ಮಾಡುತ್ತಿರುವಂತಿದೆ” ..ಎಂದು ಆ ಟಾಟಾನ್ಯಾನೋ ಕಾರ್ ಲೈಸೆನ್ಸ್ ನಂಬರ್ ಕೊಟ್ಟು ಇದರ ಮಾಲೀಕನ ಪತ್ತೆ ಹಚ್ಚಿಕೊಡಲು ಸಾಧ್ಯವೆ ಎಂದೆ

“ನಮ್ಮ ಕಂಪನಿಗೆ ಆರ್ಟಿಓ/ ಪೋಲೀಸ್ ಕಡೆ ಎಲ್ಲಾ ಕಾಂಟ್ಯಾಕ್ಟ್ಸ್ ಇದ್ದೇ ಇರುತ್ತೆ…ಇಲ್ದಿದ್ರೆ ನಮ್ಮ ಲಾಯರ್ ಕೆಲಸ ನಡೆಯೋದು ಹೇಗೆ?..ಸರಿ, ನಾಳೆ ಬೆಳಿಗ್ಗೆ ಆಫೀಸ್ ಟೈಮಿನಲ್ಲಿ ಫೋನ್ಮಾಡಿ, ಹೇಳುತ್ತೇನೆ” ಎಂದಳು ವಿಶ್ವಾಸದಿಂದ.

” ಓಕೇ”ಎಂದೆ.

“ಸರಿ, ರಾತ್ರಿ ಊಟಕ್ಕೆ ಏನು ಮಾಡ್ತಿದೀರಿ?” ಎಂದಳು.

“ಗೊತ್ತಿಲ್ಲ, ಹೊರಗೆ ಹೋಗಬೇಕು” ಎಂದೆ.

“ಹೊಟೆಲ್ ರತನ್ ವಿಲಾಸ್’ಗೆ ಹೋಗಿ, ಚೆನ್ನಾಗಿರತ್ತೆ “ಎಂದಳು

“ಯಾಕೆ ಆ ಹೋಟೆಲ್ ನಿಮ್ಮ ಮನೆ ರೋಡಿನಲ್ಲಿದೆಯೆ?” ಎಂದೆ ಕಳ್ಳ ಕೊರಮನಂತೆ.

ಒಂದು ಕ್ಷಣಮೌನ… ಅವಳ ಮಿದುಳು ಕೆಲಸ ಮಾಡುವುದು ಕೇಳಿಸುತ್ತದೆ!

“ಇದೆ, ಆದರೆ ಆ ರಸ್ತೆ ನಮ್ಮ ಮನೆಯ ಒಳಗೆ ಹೋಗಲ್ಲ” ಅಂದಳು ಜಾಣೆ.

“ಹೋಗಬೇಕಾದರೆ?” ಅಂದೆ ಮುಗುಳ್ನಗುತ್ತಾ..ಛಲ ಬಿಡದ ತ್ರಿವಿಕ್ರಮನಂತೆ ನಾನು.

” ಅದಕ್ಕೆ ಇನ್ನೂ ಸಮಯವಾಗಬೇಕು, ಗುಡ್ನೈಟ್” ಎಂದಿಟ್ಟಳು.

ಸರಿ, ನನ್ನ ಲಾಡ್ಜ್ ಎದುರಿಗಿದ್ದ ವಿಷ್ಣುಭವನ್’ನಲ್ಲಿ ಪ್ಲೇಟ್’ಮೀಲ್ಸ್, ಐಸ್ಕ್ರೀಮ್ ತಿಂದು ವಾಪಸಾದೆ.

ರಾತ್ರಿಯಲ್ಲಿ ಹೇಗೆ ಈ ಕೇಸ್ ಬಗೆಹರಿಸುವುದು ಎಂದು ಯೋಚಿಸಲಾರಂಭಿಸಿದ್ದೆ..ಒಂದೆಡೆ, ಕಳೆದು ಹೋದ ಮೂರುವರೆ ದಶಕದ ಹಿಂದಿನ ಮೃದುಲಾರ ಹೆತ್ತ ತಂದೆ-ತಾಯಿಯರ ಪತ್ತೆಯಾಗಬೇಕು… ಇನ್ನೊಂದೆಡೆ ವಿಚಿತ್ರ ಬ್ಲಾಕ್’ಮೇಲ್ ಪತ್ರ ಬರೆವ ಇಲ್ಲಿನ ಲೋಕಲ್ ಊರಿನವ…ಅವನಿಗೆ ಗೊತ್ತಿರುವ ಕಹಿಸತ್ಯವೇನು?. ಮತ್ತು ಹೇಗೆ?..ನನ್ನ ಮೇಲೆ ಕಣ್ಣಿಟ್ಟಿರುವ ಟಾಟಾನ್ಯಾನೋನ ಅಮೆಚೂರ್ ವ್ಯಕ್ತಿ ಬೇರೆ?..ನಿದ್ದೆ ನಿಧಾನವಾಗಿಯೆ ಹತ್ತಿತ್ತು.

(  ಮುಂದುವರೆಯುವುದು)

ನಾಗೇಶ್ ಕುಮಾರ್ ಸಿ. ಎಸ್

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!