ಅಪ್ಪನನ್ನು ವಿಪರೀತ ಪ್ರೀತಿಸೋರು, ಅಪ್ಪನ ಇಗ್ನೋರ್ ಮಾಡಿದವರು, ಅಪ್ಪನ ಕನಸಿಗೆ ನೀರೆರೆಯುತ್ತಿವವರು ಎಲ್ಲರೂ ನೋಡಲೇಬೇಕಾದ ಸಿನಿಮಾ “ಗೋಧಿ ಬಣ್ಣ ಸಾಧಾರಣ ಮೈಕಟ್ಟು”. ಬಿಡುಗಡೆಗೆ ಮೊದಲೇ ಒಂದಿಷ್ಟು ಹಾಡುಗಳು ನನ್ನನ್ನೂ ವಿಪರೀತವಾಗಿ ಕಾಡಿತ್ತು. ರಕ್ಷಿತ್ ಶೆಟ್ಟಿ ಅವರು ಬರೆದ ” ಈ ಸಂಜೆಗೆ ಆ ಬಾನನು…” ಹಾಡು ಕೂಡ ಸ್ಮೃತಿ ಪಟಲದಲದಲಿ ಗಟ್ಟಿಯಾಗಿ ನೆಲೆ ನಿಂತು ಬಿಡುತ್ತದೆ. ಚರಣ್ ರಾಜ್ ಎಂಬ ಹೊಸ ಪ್ರತಿಭೆ ಸದಾ ಗುನುಗುವಂತ ಹಾಡನ್ನು ಸೃಷ್ಟಿಸಿದ್ದಾರೆ. ಮೊದಲಿನಿಂದಲೂ ಆ ಚಲನಚಿತ್ರದ ತಂಡದವರ ಪ್ರತೀ ನಡೆಯನ್ನು ಗಮನಿಸುತ್ತ ಅದರ ಬಿಡುಗಡೆಯ ದಿನಕ್ಕೆ ವಿಪರೀತ ಎಂಬಂತೆ ಕಾದಾಯಿತು. ಅಂತೂ ನಿನ್ನೆ ಅದಕ್ಕೆ ಮುಕ್ತಿ ಸಿಕ್ಕಾಯಿತು..ವಿಪರೀತ ನಿರೀಕ್ಷೆ ಇಟ್ಟುಕೊಂಡ ಚಿತ್ರವೆಲ್ಲ ಮಕಾಡೆ ಮಲಗಿರುವ ಅದೆಷ್ಟೋ ಸದ್ಯದ ಉದಾಹರಣೆಗಳ ನಡುವೆ ಈ ಚಿತ್ರ ಹಾಗಾಗದಿರಲಿ ಎಂಬ ಬೇಡಿಕೆಯನ್ನ ಆ ದೇವರಲ್ಲಿ ಇಡುತ್ತ ಚಿತ್ರಮಂದಿರ ಹೊಕ್ಕಾಯಿತು.
.
ಅನಂತನಾಗ್ ಎಂಬ ಅಭಿನಯ ಚಕ್ರವರ್ತಿಯ ಎದುರು ಯಾವ ಸ್ವಯಂ ಘೋಷಿತ “ಚಕ್ರವರ್ತಿ” ಯೂ ನಿಲ್ಲಲಾರ.ಒಂಟಿಯಾಗಿ ಕೂತ ಅನಂತನಾಗ್ ನಿಮ್ಮನ್ನು ನಿಮ್ಮಪ್ಪನ ಲೋಕಕ್ಕೆ ಕರೆದೊಯ್ಯುವುದರಲ್ಲಿ ಅನುಮಾನವೇ ಇಲ್ಲ..ಹೇಮಂತ ಕುಮಾರ್ ಒಂದು ಸಂದರ್ಶನದಲ್ಲಿ ಹೇಳಿದ್ದರು “ಅನಂತ್ ಸರ್ ಅಭಿನಯ ನೋಡುತ್ತ ಅವರಿಗೆ ಆಕ್ಷನ್ ಕಟ್ ಹೇಳಲೂ ಮರೆತು ಬಿಡುತ್ತಿದ್ದೆ” ಎಂದು. ಇದು ನಿಜವೇನೋ ಅನ್ನಿಸಲು ನನಗೆ ಅನ್ನಿಸಲು ಶುರುವಾದದ್ದು ಅನಂತನಾಗ್ ಎಂಬ “ನಟ”ನ ಅಭಿನಯವ ನೋಡಿ. ಅಲ್ಲೆಲ್ಲೋ ಆ ಪಾರ್ಕಿನ ಕಲ್ಲಿನ ಮೇಲೆ ಗಂಭಿರ ಮಗನ ಜೊತೆ ಮುಗ್ಧ ವೆಂಕೋಬ್ ರಾವ್ ಎಂಬ ಪಾತ್ರಧಾರಿ ಕಾಲಲ್ಲಾಡಿಸುತ್ತ ಕೂರುವುದನ್ನು ನೋಡುತ್ತಾ ಅದೇನೋ ಭಾವ ನಿಮ್ಮಲ್ಲಿ ಸೃಷ್ಟಿಯಾಗುತ್ತದೆ..ಮುಗ್ಧತೆಯ ಶಿಖರದಲ್ಲೂ ಮಗನ ಬೆನ್ನು ಸವರುವ ಆ ಸಮಯ ತುಂಬಾ ಆಪ್ತ ಎನ್ನಿಸುತ್ತದೆ.ಅಪ್ಪ ಸರಿ ಇರುವಾಗ ಅಪ್ಪನ ಭಾವನೆಗೆ ಬೆಲೆ ಕೊಡದ ಮಗ ಅಪ್ಪ ಮರೆವು ರೋಗಕ್ಕೆ ತುತ್ತಾಗಿ ಕಣ್ಮರೆಯಾದಾಗ ತನ್ನೊಳಗಿನ ಸ್ವಾರ್ಥ,ಸಿಟ್ಟು ಎಂಬ ಅಹಂ ಅನ್ನು ಸುಟ್ಟು ಹಾಕುತ್ತಾನೆ..
ಹೌದು ಎಲ್ಲೆಲ್ಲೂ ಅವರಿಸುವುದು ಅನಂತನಾಗ್ ಮಾತ್ರ..ಯಾರದ್ದೋ ಗೊತ್ತಿರದವರ ವಾಹನ ಹತ್ತಿ ಮುಗುಳ್ನಗೆ ಬೀರುವ ಆ ಕ್ಷಣ ಅಬ್ಬಾ! ಅದೇನೋ ಕಳೆದು ಕೊಂಡಂತೆ ಮತ್ತು ಅದೇನನ್ನೋ ಪಡೆದುಕೊಂಡ ಭಾವ ನಿಮ್ಮನ್ನು ಬಿಗಿದಪ್ಪಿ ಬಿಡುತ್ತದೆ..ವೆಂಕೋಬ್ ರಾವ್ ಎಂಬ ಅನಂತನಾಗ್ ಹೇಳುವ ಕಪ್ಪು ಬಿಳಿ ನಾಯಿಯ ಕಥೆಯನ್ನು ಅವರು ಮಾತ್ರ ಹೇಳಲು ಸಾಧ್ಯ.ಮರೆವು ರೋಗದ ನಡುವೆಯೂ ” ಪುಷ್ಪ” ಎಂಬ ತನ್ನ ಅರ್ಧಾಂಗಿಯನ್ನು ಹಾಗೂ “ಶಿವು” ಎಂಬ ತನ್ನ ಸೃಷ್ಟಿಯನ್ನು ಪದೇ ಪದೇ ನೆನಪಿಸಿಕೊಳ್ಳುವ ವೆಂಕೋಬ್ ರಾವ್ ಸಂಬಂಧಗಳ ಮೌಲ್ಯವನ್ನು ಸಾರಿ ಹೇಳಿದಂತಿದೆ..ಒಟ್ಟಿನಲ್ಲಿ ಎಲ್ಲೆಲ್ಲೂ ಅನಂತನಾಗ್..
ರಕ್ಷಿತ್ ಶೆಟ್ಟಿ ಎಂಬ ನೋ ಸ್ಟಾರ್ ನಟನ ಅಭಿನಯವ ಅನುಭವಿಸುವುದೇ ಖುಷಿ, ಇಂತಹ ನಟನೆ ಕೆಲವರಿಂದ ಮಾತ್ರ ಸಾಧ್ಯ.
ಕಾಯುವಿಕೆ,ಹುಡುಕಾಟ ಅಪ್ಪನಿಗಾಗಿ ಚಡಪಡಿಸುವಿಕೆ ಎಲ್ಲ ತರದಲ್ಲೂ ಚಂದದ ಅಭಿನಯ ಮಾಡಿರುವ ರಕ್ಷಿತ್ ಶೆಟ್ಟಿ ನಿಜವಾಗಲೂ ಕನ್ನಡದ ಆಶಾಕಿರಣ.ಜೊತೆಗೆ ಚಂದದ ಚಿತ್ರಕಥೆಯ ಸೃಷ್ಟಿಸಿರುವ ಹೇಮಂತಕುಮಾರ್ ಅವರಿಗೆ ಫುಲ್ ಮಾರ್ಕ್ಸ್ ಕೊಡಲೇಬೇಕು.ಜೊತೆಗೆ ಈ ಭಾರಿ ಶೃತಿ ಹರಿಹರನ್ ಎಂಬ ನಾಟ್ಯಮಯೂರಿಯ ಅದ್ಬುತ ನಟನೆ ನಿಮಗೆ ಒಂದು ಎಕ್ಸ್ ಟ್ರಾ ಬೋನಸ್.ವೆಂಕೋಬ್ ರಾವ್ ಎಂಬ ಮರೆವು ರೋಗಿಯ ನೆನಪಿಗೆ ಜೀವ ತುಂಬುವ ಕೆಲಸ ಮಾಡಿದ “ಸಹನಾ” ಪಾತ್ರದಾರಿ ಶೃತಿ ಹರಿಹರನ್ ನಟನೆ ಅದೇನೋ ಅದ್ಭುತ ಎನ್ನಿಸುವಂತಿದೆ.
ಇದರ ಅರ್ಧ ಪಾಲು ಹೆಗ್ಗಳಿಕೆ ಕಥೆಗಾರ ಮತ್ತು ಚಿತ್ರಕಥೆಗಾರನಿಗೆ ಸಲ್ಲಲೇ ಬೇಕು. ಹೇಮಂತಕುಮಾರ್ ಎಂಬ ನಿರ್ದೇಶಕ ಅರ್ಧ ಗೆದ್ದಿದ್ದು ಬಹುಷ: ಅವರ ಅದ್ಭುತವಾದ ಕಥೆ ಮತ್ತು ಪಾತ್ರಕ್ಕೆ ಅವಶ್ಯವಿರುವ ಕಲಾವಿದರ ಅಯ್ಕೆಯಿಂದ…ಮತ್ತೆ ಮತ್ತೆ ನಮ್ಮನ್ನು ಕಾಡುವ ಕಥೆಯ ಸೃಷ್ಟಿಸಿದವನೇ ನಿಜವಾದ ನಾಯಕ ಇಲ್ಲಿ. ನಿಮಿಷಕ್ಕೊಂದು ಬುಡಾಂಗ್ ಡೈಲಾಗ್ ಹೊಡೆಯುತ್ತ,ತನ್ನನ್ನು ತಾನೇ ಹೊಗಳಿಕೊಳ್ಳುವುದನ್ನೇ ಸಿನಿಮಾ ಎಂದು ತೋರಿಸುವ ಅದೆಷ್ಟೋ ಸ್ಟಾರ್ ನಟರುಗಳ ಚಲನಚಿತ್ರಕ್ಕಿಂತ ಇಂತಹ ಚಲನಚಿತ್ರಗಳು ಕನ್ನಡವನ್ನು ಗೆಲ್ಲಿಸುವುದರಲ್ಲಿ ಅನುಮಾನವೇ ಇಲ್ಲ.
ಒಂದು ಬೇಸರ ಏನೆಂದರೆ “ಅಲೆ ಮೂಡದೆ ನಿಂತಿದೆ ಸಾಗರ,ತುಸು ದೂರವೇ ನಿಂತನು ಚಂದಿರ…..” ಈ ಹಾಡನ್ನು
ಇಡೀ ಚಲನಚಿತ್ರದಲ್ಲಿ ಎಲ್ಲಿಯೂ ಬಳಸದೇ ಇರುವುದು.ಆ ಸಾಲುಗಳಿಗೆ ಪ್ರತೀಕ್ಷಣವೂ ನಮ್ಮನ್ನು ಆವರಿಸಿಬಿಡುವ ಅಗಾಧ ಶಕ್ತಿ ಇತ್ತು.
ಮಚ್ಚು ಲಾಂಗು,ಅಶ್ಲೀಲ ಸಂಭಾಷಣೆಗಳೇ ಚಲನಚಿತ್ರಗಳ ಮೂಲವಾಗಿರುವ ಈ ಸಂದರ್ಭಗಳಲ್ಲಿ ಸಂಬಂಧದ ಚೌಕಟ್ಟಿನೊಳಗೆ ಅಸಾಧಾರಣ ಕಥೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ ಕುಮಾರ್.ಅಪ್ಪನ ನೆನಪಿನಲ್ಲಿ ಮಿಂದೇಳಲು, ಅದ್ಯಾವುದನ್ನೋ ಕಳೆದುಕೊಂಡಿದ್ದೇವೆ ಎಂದುಕೊಳ್ಳಲು ಜೊತೆಗೆ ಭಾರವಾದ ಮನಸ್ಸಿನಿಂದ ಚೂರು ಹನಿ ಕಣ್ಣೀರು ಹಾಕಲು ಈ ಚಲನಚಿತ್ರ ಕಾರಣವಾಗುತ್ತದೆ..ದೂರದಲ್ಲೆಲ್ಲೋ ಇರುವ ಅಪ್ಪ ನಮಗಾಗಿ ಅದೆಷ್ಟು ಕಷ್ಟ ಪಟ್ಟಿದ್ದನೋ ಎಂಬ ಯೋಚನೆ ಟಾಕೀಸಿನಿಂದ ಹೊರಬರುವ ವೇಳೆಗೆ ನಿಮ್ಮನ್ನು ಕೊರೆಯಲು ಶುರು ಮಾಡುತ್ತದೆ..ಸಂಬಂಧಗಳ ಮೌಲ್ಯದ ಅದ್ಭುತ ಅನಾವರಣವೇ ಈ ಕಥೆ. ನೋಡದೇ ಇದ್ದರೆ ಏನೋ ಪ್ರಮುಖವಾದದ್ದನ್ನೇ ಕಳೆದುಕೊಳ್ಳುತ್ತೀರಿ,ನೋಡಿದರೆ ಭರಪೂರ ಭಾವನೆಗಳ ಉಡುಗೊರೆಯನ್ನು ಹೊತ್ತು ತರುತ್ತೀರಿ..ಸೋ ಡೋಂಟ್ ಮಿಸ್ ದಿಸ್ ಜೆಮ್..!!
ಮತ್ತೆ ಕೊನೆಯದಾಗಿ ನಿರಂತರವಾಗಿ ನನ್ನ ಕಾಡುವ ಸಾಲು:
” ನಿನ್ನೆಯಂತೆ ಇಂದು ಇಲ್ಲ ವೇಳೆಯ ವೇಗ.. ಸಾಗೋ ದಾರಿ ಮುಂಚೆಗಿಂತ ದೂರವೇ ಈಗ..?ಜಾರೋ ಸಂಜೆ ಕಾಣುತಿಲ್ಲ ನಿನ್ನೆಯ ಹಾಗೆ,ನಿಂತ ಜಾಗ ನಾಳೆ ಕೂಡ ಒಂಟಿಯೇ ಹೀಗೆ?…”