ಕಥೆ

ನೆನಪಿನ ಬುತ್ತಿಯಿಂದ

ಅಂದು ಶನಿವಾರವಾಗಿತ್ತು .ಈ ಶಾಲೆ ,ಪಾಠ ರಗಳೆಗಳಿಂದ ಮುಕ್ತಿ ಯಾವಾಗ ಸಿಗುತ್ತೋ ಎಂದು ನಾನು  ಲಾಸ್ಟ್ ಪಿರಿಯಡ್ನಲ್ಲಿ ಕೂತಿದ್ದೆ. ಅಂತೂ -ಇಂತೂ ನೂರೆಂಟು ಸಲ ವಾಚ್ ನೋಡಿ ೧೨ ಗಂಟೆ  ಆಗಿತ್ತು. ಶಾಲೆ ಬಿಟ್ಟ ತಕ್ಷಣ  ಒಂದೇ ಓಟಕ್ಕೆ ಮನೆ ಸೇರಿದ್ದೆ. ಬೇಗ ಬೇಗ ಊಟ ಮುಗಿಸಿ ಕ್ರಿಕೆಟ್ ಆಡಲೆಬೇಕೆಂಬ ಪಣ ತೊಟ್ಟಿದ್ದೆ. ಮಳೆ ೩ ತಿಂಗಳಿನಿಂದ  ನಮ್ಮ ಆಟಕ್ಕೆ ಕಲ್ಲು ಹಾಕುತಿತ್ತು. ಮಲೆನಾಡಿನ ಮಳೆಯೇ  ಹಾಗೆ ಸಾಕಪ್ಪ ಅನಿಸುವಷ್ಟು ಬೇಸರ ತರಿಸುತ್ತದೆ. ಈ ಮಳೆಯಿಂದ ಮಲೆನಾಡಿಗರು ಅನುಭವಿಸುವ ಕಷ್ಟ ಒಂದೆರಡಲ್ಲ. ಕರೆಂಟ್ ಹೋದರೆ ವಾರಗಟ್ಟಲೆ ನಾಪತ್ತೆಯಾಗಿ ಬಿಡುತ್ತದೆ. ಎಲ್ಲಾದರೂ ಸುತ್ತಾಡೋಣ ಎಂದು ಹೊರಟರೆ, ಎಂತಾ ಬ್ರಾಂಡೆಡ್ ಛತ್ರಿ ಹಿಡಿದು ಹೊರಟರು ಅರ್ಧ ಮೈ ಒದ್ದೆಯಾಗುವುದು ಖಂಡಿತ. ಇನ್ನು ಜಿಗಣೆಗಳ ಕಾಟ ಬೇರೆ. ಹತ್ತತ್ತು ನಿಮಿಷಕ್ಕೊಮ್ಮೆ  ಕಾಲು ನೋಡಿಕೊಳ್ಳುತ್ತಿರಬೇಕು. ಇಲ್ಲದಿದ್ದರೆ ಜಿಗಣೆಗಳು ಹಾಯಾಗಿ ಹತ್ತಿ ಕುಳಿತು ಕಾಲಿಗೆ ಮುತ್ತುಕೊಡುತ್ತಿರುತ್ತದೆ. ಆದರೆ ಅಂದು ಮಳೆ ಸ್ವಲ್ಪ ತಗ್ಗಿತ್ತು. ಮೂರು ತಿಂಗಳ ಕ್ರಿಕೆಟ್ ಹಾಗೂ ಮಳೆಯ ನಡುವಿನ ಮ್ಯಾಚ್ ಸುಖಾಂತ್ಯ ಕಂಡಿತ್ತು. ಆದ್ದರಿಂದಲೇ ನಮ್ಮ ಸೈನ್ಯ ಊಟ ಮುಗಿಸಿ ಮೈದಾನದ ಕಡೆ ದಾಪುಗಾಲಿಡುತ್ತಿತ್ತು. ನಾನು ಮನಸ್ಸಿನಲ್ಲೇ  ಎಷ್ಟು ಸಿಕ್ಸರ್ ಹೊಡೆಯ ಬೇಕು ,ಎಷ್ಟು ವಿಕೆಟ್ ತೆಗೆಯಬೇಕು ಎಂದು ಕೂಡಿಕಳೆಯುತ್ತಿದ್ದೆ. ನಾವು ಆಟವಾಡುವ ಮೈದಾನ ನಮ್ಮ ಮನೆಯಿಂದ ಒಂದೆರಡು ಕಿಲೋಮೀಟರು ದೂರವಿತ್ತು. ಅದನ್ನು ಸೇರಲು ನಾವು ಕಾಡಿನ ಹಾದಿ ಸವೆಸಬೇಕಿತ್ತು. ಆದರೆ ಅಲ್ಲಿ ಒಂದು ಕಾರು ಭರ್ರೆಂದು ನಮ್ಮನ್ನು  ಹಿಂದಿಕ್ಕಿ  ದಿಣ್ಣೆಗಳನ್ನು ಹತ್ತಿಳಿಯುತ್ತಾ, ಹಾರನ್ ಮಾಡುತ್ತಾ  ಆತುರಾತುರವಾಗಿ ಹೋಯಿತು.

ಆ ದಾರಿಯಲ್ಲಿ ಮೋಟಾರು ವಾಹನಗಳು ಅಪರೂಪವೆಂದೇ ಹೇಳಬಹುದು. ಅಲ್ಲಿ ವಾಹನಗಳು ಓಡಾಡುವುದು ಕೇವಲ ಯಾರಿಗಾದರೂ ಹುಷಾರಿಲ್ಲದ್ದಿದ್ದಾಗ  ಮಾತ್ರ. ಆದ್ದರಿಂದ ನಾವು ಯಾರಿಗೋ ಹುಷಾರಿಲ್ಲ ಎಂದು ಸರ್ವ ಸಮ್ಮತ ವ್ಯಕ್ತಪಡಿಸಿದೆವು.

“ಆ ದಾರಿಯಲ್ಲಿ ಹೋಗಬೇಡ್ರಣ್ಣ ಅಲ್ಲಿ ಜೇನು ಐತೆ !”ಎಂದು ನನಗೆ ನಮ್ಮ ಮನೆಯ ಆಳು ಮಾರ ಹೇಳಿದ್ದು ನೆನಪಿಗೆ ಬಂತು. ಬಹುಶಃ ಯಾರಿಗೋ ಜೇನು ಕಚ್ಚಿದೆ ಎಂದು ನಾನು ಅನುಮಾನ ವ್ಯಕ್ತಪಡಿಸಿದೆ. ಅದೇ ದಾರಿಯಿಂದ ಬಂದ ನನ್ನ ಚಿಕ್ಕಪ್ಪ “ಏ ಅಲ್ಲಿ ಹೋಗಬೇಡ್ರೋ ಅಲ್ಲಿ ಜೇನು ಎದ್ದಿದೆ ” ಎಂದು ಎಚ್ಚರಿಕೆ ನೀಡಿದರು. ನಮ್ಮ ಕ್ರಿಕೆಟ್ ಆಡುವ ಕನಸಿಗೆ ತಣ್ಣೀರು ಬಿದ್ದಿತ್ತು . ಆದರೆ ನನ್ನ ಸ್ನೇಹಿತನೊಬ್ಬ ಒಂದು ಉಪಾಯಮಾಡಿದ, ಅದರಂತೆ ನಾವು ಬೇರೆ ದಾರಿ ಹಿಡಿದೆವು. ಆದರೆ ನನ್ನ ಮನಸ್ಸಿನಲ್ಲಿ ಭಯ ತಾಂಡವಾಡುತ್ತಿತ್ತು . ತಕ್ಷಣ ನನಗೆ ತೇಜಸ್ವಿ  ಕರ್ವಾಲೋ ಕೃತಿಯಲ್ಲಿ ಓದಿದ ‘ಮೌ ಮೌ ‘ ಬೀ ಗಳು ಜ್ಞಾಪಕವಾಯಿತು. ಸಾಮಾನ್ಯವಾಗಿ ಅವು ನೆಲ ಮಟ್ಟದ್ದಲ್ಲೇ ಗೂಡು ಕಟ್ಟುತ್ತವೆ, ಆದ್ದರಿಂದಲೇ ಗೂಡಿನ ರಕ್ಷಣೆ ಸ್ವಲ್ಪ ಕಷ್ಟ . ಅದರ ಗೂಡಿನ ಬಳಿ ಸುಳಿದಾಡಿದರೂ ಸಾಕು ರಪರಪ ಒಂದೊರ ಹಿಂದೊಂದು ಬಂದು ಹೊಡೆಯತೊಡಗುತ್ತವೆ. ಆದರೆ ಮೌ ಮೌ ಬೀ ಗಳನ್ನು ನಾನು ಮಲೆನಾಡಿನಲ್ಲಿ ಎಲ್ಲೂ ನೋಡಿರಲಿಲ್ಲ ಅದು ಸೌತ್ ಆಫ್ರಿಕಾ ಭಾಗದಲ್ಲಿ ಮಾತ್ರ ಇವೆ ಎಂದು ವಿಜ್ಞಾನಿಗಳು ಧೃಡಪಡಿಸಿದ್ದರು. ಆದರೆ ಯಾರಿಗೆ ಗೊತ್ತು ,ಈ ಕಗ್ಗಾಡಿನ ಮೂಲೆಯನ್ನು ಅವರು ನೋಡಿದ್ದಾರೆಯೇ ? ನನ್ನ ಆತಂಕ ಹೆಚ್ಚಾಗುತ್ತಿತ್ತು . ನಾನು ವಾಪಸ್ಸು ಹೋಗುವ ಮನಸ್ಸು ಮಾಡಿದೆ, ಆದರೆ ಗೆಳೆಯರ ಒತ್ತಾಯಕ್ಕೆ ಮುಂದುವರೆಯಬೇಕಾಯಿತು . ಇನ್ನೇನು ಮೈದಾನ ಬಂದಿತು ಎನ್ನುವಾಗ ಇದ್ದಕ್ಕಿದ್ದಂತೆ ‘ಗುಂಯ್’ ಎಂಬ ಶಬ್ದ ಮಾರ್ದನಿಸಿತು. ನಾವು ಒಬ್ಬರನ್ನೊಬರು ಲೆಕ್ಕಿಸದೆ ತಳ್ಳಾಡಿ ಹೊಳೆ,ಸೇತುವೆ ,ರೋಡ್ ಎಲ್ಲ ಒಂದೇ ನೆಗೆತಕ್ಕೆ ಹಾರಿ ಓಡತೊಡಗಿದೆವು. ಅಂತು ಜೇನು ನೊಣಗಳಿಂದ ತಪ್ಪಿಸಿಕೊಂಡು ಒಂದು ಮರದ ಕೆಳಗೆ  ನಿಂತುಕೊಂಡೆವು. ಜೇನಿನ ಕೊಂಬು ಬಹಳ ಆಳಕ್ಕೆ ಇಳಿದಿದ್ದರಿಂದ ನನಗೆ ಅಸಾಧ್ಯ ನೋವು ಶುರುವಾಗಿತ್ತು . ನನಗೆ ಜೇನಿನ ಮೇಲೆ ನಖಶಿಖಾಂತ ಕೋಪ ಬಂದಿತು . ಜೇನನ್ನು ಈ ಭೂಮಿಯಿಂದಲೇ ನಿರ್ನಾಮ ಮಾಡಿಬಿಡಬೇಕೆಂದು  ಅನಿಸುತ್ತಿತ್ತು . ಅದಕ್ಕೋಸ್ಕರ ಜೇನಿನ ಸವಿಯನ್ನು ತ್ಯಜಿಸಲು ಸಿದ್ದವಿದ್ದೆ  ಆದರೆ ನಿಧಾನವಾಗಿ ಮನವರಿಕೆಯಾಯಿತು, ಅವು ನಮ್ಮ ಜಾಗಕ್ಕೆ ಬಂದಿಲ್ಲ, ನಾವೇ  ಅವುಗಳ ಜಾಗ ಆಕ್ರಮಿಸಿಕೊಂಡಿದ್ದೇವೆ. ‘ಇರುವುದೊಂದೇ ಭೂಮಿ ಸಹಬಾಳ್ವೆ ಅನಿವಾರ್ಯ ‘.

Facebook ಕಾಮೆಂಟ್ಸ್

ಲೇಖಕರ ಕುರಿತು

Gurukiran

ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!