ಕಥೆ

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -2)

ಕೇಸಿನ ಬಗ್ಗೆ ಯೋಚಿಸಿದಷ್ಟೂ ಅದು ಕಗ್ಗಂಟಾಗುತ್ತಾ ಹೋಗುತಿತ್ತು . ಯಾವುದೇ ಸುಳಿವು ಹಿಡಿದು ಹೊರಟರೂ ಅದು ಕೊಲೆಗಾರನ ಬಳಿ ಹೋಗದೆ ಡೆಡ್ ಎಂಡ್ ತಲುಪುತ್ತಿತ್ತು . ನಾನು ತಿಪ್ಪರಲಾಗ ಹೊಡೆದರೂ ಇಪ್ಪತ್ನಾಲ್ಕು ಗಂಟೆಯೊಳಗೆ ಕೇಸು ಮುಗಿಸಲು  ಸಾಧ್ಯವೇ ಇರಲಿಲ್ಲ . ಆದರೆ ಒಂದೇ ಒಂದು ದಾರಿ ಮಾತ್ರ ನನಗೆ ಉಳಿದಿತ್ತು  , ಕೊಲೆ ಮಾಡಿ ವಜ್ರವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದ ಮೇಲೆ ಇದು ದುಡ್ಡಿಗಾಗಿ ನಡೆದ ಕೃತ್ಯವಲ್ಲ . ದ್ವೇಷಕ್ಕಾಗಿ ಎಂಬುದು ನೂರಕ್ಕೆ ನೂರರಷ್ಟು ಸ್ಪಷ್ಟ . ಒಬ್ಬ ಶಾಸಕ ಎಂದ ಮೇಲೆ ಶತ್ರುಗಳು ಇದ್ದೇ ಇರುತ್ತಾರೆ , ಒಂದು ಲೀಡ್ ನನಗೆ ಸಿಕ್ಕಿತು . ತಕ್ಷಣವೇ ನಾನು ಶಾಸಕರನ್ನು ಭೇಟಿ ಮಾಡಲು ಹೊರಟೆ .

ಮನೆಯ ಮುಂದೆ ಅದಾಗಲೇ ಕಾರು ಬಂದು ನಿಂತಿತ್ತು . ವಿಚಾರಿಸಿದಾಗ ಇನ್ಸ್ಪೆಕ್ಟರ್ ವಿಕ್ರಮ್ ಅವರು ನನ್ನನ್ನು ಕರೆದಿದ್ದರು . ಅವರಿಗೂ ಸಹ ಈ ಕೇಸಿನ ಬಗ್ಗೆ ಸಾಕಷ್ಟು ತಿಳಿದಿತ್ತು . ನನ್ನದು ಮೂರ್ಖ ಹೇಳಿಕೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು . ಎಷ್ಟಾದರೂ ನಾನು ಪ್ರೈವೇಟ್ ಡಿಟೆಕ್ಟಿವ್ ನನ್ನ ಮೇಲೆ ಪೊಲಿಟಿಕಲ್ ಪ್ರೆಷರ್ ಇರುವುದಿಲ್ಲ , ಆದರೆ ಅವರಿಗೆ ನನ್ನ ಹೇಳಿಕೆ ಪೀಕಲಾಟಕ್ಕೆ ಈಡು ಮಾಡಿತ್ತು . ಕೇಸು ಬಗೆಹರಿಯದಿದ್ದರೆ ಮೀಡಿಯಾ ಮಂದಿ ಅವರನ್ನು ಹುರಿದು ಮುಕ್ಕಿ ಬಿಡುತ್ತಾರೆ . ಮರು ಮಾತಾಡದೆ ಹತ್ತಿ ಕುಳಿತೆ . ಕಾರು ಹೊರಟಿತು .
” ಏನಪ್ಪಾ ? ಇಲ್ಲಿ ಎಲ್ಲಿ ವಿಕ್ರಮ್ ಅವರ  ಆಫೀಸ್ ಇದೆ ? ಮಲ್ಲೇಶ್ವರಂ ತಾನೇ ? “
” ಇಲ್ಲ ಸಾರ್ ಇದು ಅನ್-ಅಫಿಶಿಯಲ್ಲೂ , ನಿಮ್ಮ ಹತ್ರ ಅವರು ಪರ್ಸನಲ್ ಆಗಿ ಮಾತಾಡಬೇಕಂತೆ “
ಕಾರು ನಿರ್ಜನ ಗೋರಿಪಾಳ್ಯದ ಸ್ಮಶಾನ ಸೇರಿತು .  ಸ್ಮಶಾನ ನನ್ನ ಮನಸ್ಸಲ್ಲಿ ಪ್ರಶ್ನೆಗಳನ್ನು ಮೂಡಿಸುತ್ತದೆ . ಒಂದಿಷ್ಟು ಗುಂಡಿಗಳನ್ನು ತೆಗೆದು ಇಟ್ಟಿದ್ದರು . ಮತ್ತೊಂದಿಷ್ಟು ಫ್ರೆಶ್ ಎನಿಸುವ ಗೋರಿಗಳು . ಕಾರಿಳಿದು ನಾನು ನಡೆದು ಹೊರಟೆ . ಒಂದೊಂದೆ ಗೋರಿಗಳನ್ನು ದಾಟುತ್ತಾ ಮುನ್ನಡೆದೆ . ಆತನೂ ಕಾರಿನಿಂದ ಇಳಿದ ಸಪ್ಪಳವಾಯಿತು , ತಿರುಗಿ ನೋಡಿದೆ ಆತನ ಕೈಯಲ್ಲಿ ರಿವಾಲ್ವಾರ್ ಇತ್ತು . ತಕ್ಷಣ ನನ್ನ ರಿಫ್ಲೆಕ್ಸ್ ಕೆಲಸ ಮಾಡಿತು , ಆತನ ಕೈಯಲ್ಲಿ ಇದ್ದದ್ದು ಚೈನಾ ಮೇಡ್ ರಿವಾಲ್ವಾರ್ ಅದಕ್ಕೆ ಆರು ಬುಲೆಟ್ ಹಾಕಬಹುದು . ರಿವಾಲ್ವಾರ್ ಹೆಸರು ಅದಕ್ಕೆ ಬಂದದ್ದು , ಬುಲೆಟ್ ಕೂರಿಸುವ ಬೇರಿಂಗ್ ತಿರುಗಿ ಗುಂಡು ಹಾರುತ್ತದೆ . ಚೈನಾ ಮೇಡ್ ರಿವಾಲ್ವಾರ್  ಆಗಿದ್ದಲ್ಲಿ ಟ್ರಿಗರ್ ಗೆ ಅಳವಡಿಸಿದ ಸ್ಪ್ರಿಂಗು ತೆಳುವಾಗಿರುತ್ತದೆ . ಹಾರಿಸಿದ ಗುಂಡು ಸ್ವಲ್ಪವೇ ಸ್ವಲ್ಪ ಎಡಕ್ಕೆ ವಾಲುತ್ತದೆ . ಕ್ಷಣಾರ್ಧದಲ್ಲಿ ಆತ ನನ್ನೆಡೆಗೆ ಗುಂಡು ಹಾರಿಸಿದ , ನಾನು ನನ್ನ 0.32 ಪಿಸ್ಟಲ್ ಗೆ ಕೈ ಹಾಕಿ , ಆತ ಹಾರಿಸಿದ ಗುಂಡು ಎಡಕ್ಕೆ ವಾಲುವುದರಿಂದ ನಾನು ಬಲಕ್ಕೆ ಸರಿದುಕೊಂಡೆ .  ಗುಂಡು ಸರಿಯಾಗಿ ಪಕ್ಕೆಲುಬಿಗೆ ತಗುಲಿತು .
ನನಗೆ ಸಿಗುವುದು ಕೇವಲ ಮೂವತ್ತಾರು ಸೆಕೆಂಡ್ . ನಾನು ಸಾಯುವುದು ಎರಡೇ ಕಾರಣಕ್ಕೆ , ಗುಂಡು ಒಳಗಡೆ ಇರುವುದರಿಂದ ಮ್ಯಾಸಿವ್ ಇಂಟರ್ನಲ್ ಬ್ಲೀಡಿಂಗ್ ಆಗುತ್ತದೆ ಅದರಿಂದ ನಾನು ಸಾಯಬಹುದು ಅಥವಾ ಶಾಕ್ ನಿಂದ ಸಾಯಬಹುದು . ರಕ್ತಸ್ರಾವ ತಡೆಗಟ್ಟಲು ನನ್ನ ಎಡಗೈಯನ್ನು ಗಾಯದ ಮೇಲೆ ಒತ್ತಿ ಹಿಡಿದೆ . ಬಲಗೈಯಲ್ಲಿ ಪಿಸ್ಟಲ್ ತೆಗದು ಆತನ ಹೊಟ್ಟೆಗೆ ಫೈರ್ ಮಾಡಿದೆ . ಅದು ಮಾಮೂಲಿ  ಪೋಲಿಸನೊಬ್ಬನ  ಹೊಡೆತವಲ್ಲ . ಸರಿಯಾಗಿ ಅಭ್ಯಸಿಸಿದ ಕ್ಯಾಲ್ಕ್ಯುಲೇಟೆಡ್ ಹೊಡೆತ . ಆತನಿಗೆ ಆಗುವ ರಕ್ತಸ್ರಾವದಿಂದ ಆತ ಇನ್ನು ಎರಡು ದಿನ ಏಳಲಾರ , ಆದರೆ ಜೀವಕ್ಕೆ ಯಾವುದೇ ಅಪಾಯವಿಲ್ಲ .
ಆದರೆ ನನ್ನ ಜೀವದ ಬಗ್ಗೆ ಗ್ಯಾರಂಟಿ ಇಲ್ಲ . ಒಳಗೆ ರಕ್ತಸ್ರಾವ ಹೆಚ್ಚುತ್ತಿತ್ತು , ವಿಕ್ರಮ್ ಅವರಿಗೆ ಕಾಲ್ ಮಾಡಿ ” ಗೋರಿ , ಗೋರಿಪಾಳ್ಯ” ಎಂದಷ್ಟೇ ಹೇಳಲು ನನ್ನಿಂದ ಸಾಧ್ಯವಾಯಿತು . ನಾನು ಶಾಕ್ ಗೆ ಒಳಗಾಗಿದ್ದೆ ಅದರಿಂದ ಹೊರಬರಲು ನಾನು ಸ್ಥಿತ ಪ್ರಜ್ನನಾಗಬೇಕು . ಬೇರೇನಾದರೂ ಯೋಚಿಸಬೇಕು .
ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಸೇರಿದಾಗ ನನಗೆ 0.32 ಪಿಸ್ಟಲ್ ಕೊಟ್ಟರು . ನಾನು ನಕ್ಕು ಬಿಟ್ಟಿದ್ದೆ , ಸೇನೆಯಲ್ಲಿ ದೊಡ್ಡ ದೊಡ್ಡ ಆಯುಧ ಹ್ಯಾಂಡಲ್ ಮಾಡಿದ ನನಗೆ ಪಿಸ್ಟಲ್ ಕೊಡುತ್ತಿದ್ದಾರೆ ಎಂದು . ಆದರೆ ನಿಧಾನವಾಗಿ ನನಗೆ ಅದರ ಮಹತ್ವ ತಿಳಿಯಿತು . ಸೇನೆಯಲ್ಲಿ ಗುಪ್ತಚರ ಇಲಾಖೆಗೆ ಬೇಕಾಗುವಷ್ಟು ಚಾಕ-ಚಕ್ಯತೆ ಬೇಡ . ರೈಫಲ್ ಹಿಡಿದು ” ಹರ ಹರ ಮಹಾದೇವ್ ” ಎಂದು ಮುನ್ನುಗುವ ಭಂಡ ಧೈರ್ಯ ಸಾಕು . ಆದರೆ ‘ರಾ’ದಲ್ಲಿ ಹಾಗಲ್ಲ ಕಂಡೂ ಕಾಣದ ಹಾಗೆ ಕೆಲಸ ಮುಗಿಸಬೇಕು . ಪಿಸ್ಟಲ್ ಅನ್ನು ಕಿವಿಯ ಹಿಂದಿನ ಮೆದು ಚರ್ಮದ ಮೇಲೆ ಇಟ್ಟು ಕುದುರೆ ಎಳೆದರೆ ವ್ಯಕ್ತಿ ಕಮಕ್-ಕಿಮ್ಮಕ್ ಎನ್ನದೆ ಶಿವನ ಪಾದ ಸೇರುತ್ತಾನೆ .   ಶಬ್ದವೇ ಇಲ್ಲದೇ ಕೆಲಸ ಮುಗಿದಿರುತ್ತದೆ . ದುಬೈಯ ಪಂಚತಾರಾ ಹೋಟೆಲ್ ಒಂದರಲ್ಲಿ                    ಲಷ್ಕರ್-ಎ-ತೈಬಾದ  ಮುಖಂಡ  ಅಲ್-ಆಜಂ-ಬುಕಾರಿಯನ್ನು ಇದೇ ರೀತಿ ಮುಗಿಸಿದ್ದೇನೆ . ಆತ ಮುಂಬೈ ಅಟ್ಯಾಕ್ ನಡೆಸಿದ ಮುಖ್ಯ ರೂವಾರಿ . ಪಂಚತಾರ ಹೋಟೆಲಿನ ಲಿಫ್ಟಿನಲ್ಲಿ ಆತನ ತಲೆ ಸವುರುತ್ತಾ ನಾನು ನಿಂತಿದ್ದೆ , ಆತ ನನ್ನ ಮುಂದೆ ಮಂಡಿಯೂರಿ ಕುಳಿತು ಪ್ರಾಣ ಭಿಕ್ಷೆ ಬೇಡುತ್ತಿದ್ದ . ಸೈಲೆಂಸೆರ್ ಅಳವಡಿಸಿದ ನನ್ನ ಪಿಸ್ಟಲ್ ಸದ್ದು ಮಾಡಲಿಲ್ಲ . ಬುಕಾರಿ ಅನಾಥ ಶವವಾಗಿ ಬಿದ್ದಿದ್ದ .
” ಆಹ್ ………………………………..” ನಾನು ನೋವಿನಿಂದ ಚೀರಿದೆ , ಕೇಳಲು ಯಾರೂ ಇರಲಿಲ್ಲ . ನನ್ನ ಕಣ್ಣು ಮಂಜಾಗತೊಡಗಿತು . ಆತ ಯಾರು ? ನನ್ನನ್ನು ಯಾಕೆ ಮುಗಿಸಲು ಬಂದ ? , ಪ್ರಶ್ನೆಗಳು ಈಜಾಡುತ್ತಿದ್ದವು . ನನಗೆ ಪ್ರಜ್ಞೆ ತಪ್ಪಿತು .
( ಮುಂದುವರೆಯುವುದು……………………………..)

Facebook ಕಾಮೆಂಟ್ಸ್

ಲೇಖಕರ ಕುರಿತು

Gurukiran

ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!