ಕಥೆ

ಡಿಟೆಕ್ಟಿವ್ ಜಿಕೆ : ಕಲೆ (ಭಾಗ-೧)

ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದು ನನ್ನ ಅಭ್ಯಾಸ . ನಾನು ಸೇನೆ ಬಿಟ್ಟು ಹದಿನೈದು ವರ್ಷವೇ ಆದರೂ ಅಲ್ಲಿ ಕಲಿತ ಪಾಠಗಳನ್ನು ಇನ್ನೂ ಮರೆತಿಲ್ಲ. ಇಂದಿಗೂ ಇಪ್ಪತ್ತು ಮೈಲು ಓಡುವಷ್ಟು ಕಸು ನನ್ನಲ್ಲಿದೆ. ವ್ಯಾಯಾಮ ಮುಗಿಸಿ ಬರುವಷ್ಟರಲ್ಲಿ ನನ್ನ ಮೊಬೈಲಿಗೆ ಇಪ್ಪತ್ತೆರಡು ಮಿಸ್’ಕಾಲ್ ಬಂದು ಕುಳಿತಿತ್ತು . ಐಸಿಸ್’ನ ವೆಬ್ಸೈಟುಗಳನ್ನು ಧ್ವಂಸ ಮಾಡಿದ ನನ್ನಂತಹ ಒಬ್ಬ ಸ್ಪೈಗೆ ಒಂದು ನಂಬರ್ ಪತ್ತೆ ಹಚ್ಚುವುದು ಕಷ್ಟವಲ್ಲ. ತಕ್ಷಣವೇ ಅದು ಬೆಂಗಳೂರಿನ ಮಲ್ಲೇಶ್ವರದ ಸರ್ಕಲ್ ಇನ್ಸ್ಪೆಕ್ಟರ್ ಅವರದು ಎಂದು ತಿಳಿದು ಹೋಯಿತು. ಹತ್ತೇ ನಿಮಿಷದಲ್ಲಿ ನನ್ನ ಮನೆಯ ಮುಂದೆ ಪೋಲಿಸ್ ಜೀಪ್ ಬಂದು ನಿಂತಿತು . ಹತ್ತಿ ಕುಳಿತೆ, ಜೀಪು ಹೊರಟಿತು. .

ಪೋಲಿಸ್ ಸ್ಟೇಷನ್’ನಿಂದ ನಾನು ಹಾಗೂ ಇನ್ಸ್ಪೆಕ್ಟರ್ ಜೊತೆಗೇ ಹೊರೆಟೆವು. ‘ಶ್ರೀ ವರದ’ ಎಂಬ ಲಾಡ್ಜ್’ನಲ್ಲಿ ಕೊಲೆಯೊಂದು ನಡೆದಿತ್ತು. ಪತ್ತೆ ಹಚ್ಚಲು ಬಹು ಕ್ಲಿಷ್ಟವಾದ ಕೇಸು ಅದಾಗಿತ್ತು. ಗೃಹಮಂತ್ರಿಯವರು ನನ್ನ ಹೆಸರು ಸೂಚಿಸಿದ್ದರಂತೆ. ಆದರೆ ಪೊಲೀಸರಿಗೆ ಅದು ಸ್ವಲ್ಪವೂ ಇಷ್ಟವಿರಲಿಲ್ಲ ಎಂಬುದು ಅವರ ನಡವಳಿಕೆಯಲ್ಲೇ ತಿಳಿಯುತ್ತಿತ್ತು. ಎಂಟು ಗಂಟೆಯ ಸುಮಾರಿಗೆ ಹೋಟೆಲಿನ ಲಾಬಿ ತಲುಪಿದೆ. ರೂಂ ನಂಬರ್ ಹದಿಮೂರರಲ್ಲಿ ಕೊಲೆ ನಡೆದಿತ್ತು . ‘ಕ್ರೈಂ ಸೀನ್’ ಇಲ್ಲಿ ಒಬ್ಬ ಪತ್ತೇದಾರ ಎಷ್ಟು ಬುಧ್ಧಿವಂತಿಕೆ ತೋರಿಸುತ್ತಾನೋ ಅಷ್ಟು ಕೇಸು ಸುಲಭವಾಗುತ್ತದೆ. ಮತ್ತೆ ಮತ್ತೆ ಕ್ರೈಂ ಸೀನ್ ಕ್ರಿಯೇಟ್ ಮಾಡುವುದು ಅಸಾಧ್ಯವಾದ್ದರಿಂದ ಚುರುಕುತನ ಹಾಗೂ ಆಳ ಜ್ಞಾನ ಬೇಕು . ಫೋಟೋಗ್ರಾಫರ್’ನ್ನು ಬರಲು ಹೇಳಿ ಇಂಚು ಇಂಚಿನ ಫೋಟೋ ತೆಗೆಯಲು ಹೇಳಿದೆ. ನಾನು ರೂಮಿನ ಮೂಲೆ ಮೂಲೆಯನ್ನೂ ಜಾಲಾಡತೊಡಗಿದೆ.

ನೀವು ಎಂದಾದರೂ ಕೊಲೆಯನ್ನು ನೋಡಿದ್ದೀರಾ? ಮೊದಲ ಬಾರಿಗೆ ನೋಡಿದರೆ ಮೂರ್ಛೆ ಹೋಗಿಬಿಡುತ್ತೀರಿ. ನಾನೂ ಸಹ ಬಹಳ ಭಯಗೊಂಡಿದ್ದೆ, ಆದರೆ ಸೇನೆ ಎಲ್ಲವನ್ನೂ ಕಲಿಸಿಕೊಟ್ಟಿತ್ತು. ಮೊದಲ ಬಾರಿಗೆ ಶತ್ರು ಸೈನ್ಯದ ಗಾಯಾಳು ಸೈನಿಕ ನನ್ನ ಮುಂದೆ ಬಿದ್ದಿದ್ದ. ನಾನೇಕೆ ಆತನನ್ನು ಸಾಯಿಸಬೇಕು ? ಆತ ಯಾರೆಂದು ನನಗೆ ಗೊತ್ತಿಲ್ಲ, ನನಗೂ ಆತನಿಗೂ ಯಾವ ದ್ವೇಷವೂ ಇಲ್ಲ, ಆತನಿಗೂ ಒಂದು ಕುಟುಂಬ ಇರುತ್ತದೆ ಅಲ್ಲವೇ ?  ಆತನಿಗೆ ಏನೂ ಮಾಡದೇ ಮುಂದೆ ಹೋದೆ. ಆತನ ಗನ್ನು ಸದ್ದು ಮಾಡಿತು. ಅಂದು ನಾನು ಉಳಿದದ್ದೇ ಹೆಚ್ಚು, ಆತ ಗಾಯಗೊಂಡಿದ್ದರಿಂದ ಸರಿಯಾಗಿ ಗುರಿ ಹಿಡಿಯಲು ಸಾಧ್ಯವಾಗದೆ ಗುಂಡು  ನನ್ನ ಕಾಲಿಗೆ  ಬಡಿದಿತ್ತು. ನಾನು ತಿರುಗಿ ಸರಿಯಾಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ಕುದುರೆ ಎಳೆದೆ. ಹಣೆಯ ಮಧ್ಯೆ ಸರಿಯಾಗಿ ಗುಂಡು ಹೊಕ್ಕಿ ಮೆದುಳನ್ನು ಸೀಳಿ ಆಚೆ ಹೋಯಿತು. ಅಂದಿನಿಂದ ಹಿಂಸೆ , ಸಾವು , ಸಾಯಿಸುವುದರಲ್ಲಿ ವಿಲಕ್ಷಣ ಖುಷಿ ಅನುಭವಿಸುತ್ತೇನೆ.

ರಕ್ತ ಗಡ್ಡೆ ಗಡ್ದೆಯಾಗಿ ಹರಿದಿತ್ತು. ಕೊಲೆ ನಡೆದು ಮೂರ್ನಾಲ್ಕು ಗಂಟೆ ಆಗಿರುತ್ತದೆ. ಕೊಲೆಯಾದ ವ್ಯಕ್ತಿ ಬಲಶಾಲಿಯೇನೂ ಅಲ್ಲ, ಐದೂವರೆ ಅಡಿ ಇದ್ದ. ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಕಿಚನ್ ನೈಫ್’ನಿಂದ ಕೊಲೆ ಮಾಡಲಾಗಿತ್ತು. ಸುಪಾರಿ ಕಿಲ್ಲರ್’ಗಳು ಮಾಡಿದ  ಕೊಲೆಯಲ್ಲ , ಅವರು ಈ ರೀತಿ ಕೆಲಸ ಮಾಡುವುದೇ ಇಲ್ಲ. ಗಾಯ ಹೆಚ್ಚು ಆಳವಾಗಿರಲಿಲ್ಲ, ಮತ್ತೆ ಮತ್ತೆ ಇರಿದು ಸಾಯಿಸಿದ್ದರು. ಕೊಲೆಗಾರನಿಗೆ ದ್ವೇಷವಿದ್ದರೆ ಈ ರೀತಿ ಕೊಲೆ ಮಾಡುತ್ತಾರೆ. ರೂಮು ಗ್ರೌಂಡ್ ಫ್ಲೋರಿನಲ್ಲೇ ಇದ್ದರಿಂದ ಕೊಲೆಗಾರ ಕಿಟಕಿಯನ್ನು ಒಡೆದು ಸುಲಭವಾಗಿ ಒಳಗೆ ಬಂದಿದ್ದ. ರೂಂ ಬಾಯ್ ಬಂದು ಬಾಗಿಲನ್ನು ಬಡಿದನಂತೆ, ಬಾಗಿಲು ತೆಗೆಯಲಿಲ್ಲ. ಬಹಳ ಹೊತ್ತಿನ ನಂತರ ಅನುಮಾನ ಬಂದು ರೂಮಿನ ಬಾಗಿಲು ಒಡೆದರಂತೆ. ಅಲ್ಲಿ ಕೊಲೆ ನಡೆದಿತ್ತು. ಹೋಟೆಲಿನ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆ ಮಾಡಿದೆ, ಎಲ್ಲರೂ ಗಾಬರಿಗೊಂಡಿದ್ದರು. ಅವರು ನನಗೆ ನಿಷ್ಪ್ರಯೋಜಕ, ಗಾಬರಿಗೆ ಅಡ್ರಿನಲಿನ್ ಉತ್ಪತ್ತಿಯಾಗಿ ಅವರಿಗೆ ಏನೂ ಮನಸ್ಸಿನಲ್ಲಿ ಉಳಿದಿರುವುದಿಲ್ಲ, ಸೂಕ್ಷ್ಮವಾಗಿ ನೋಡಿರುವುದಿಲ್ಲ. ಸಿಸಿಟಿವಿಯ ರೆಕಾರ್ಡ್ ತೆಗೆಸಿದೆ, ಆದರೆ ಕೊಲೆಗಾರ ಬಹಳ ಚಾಲೂಕು. ಕ್ಯಾಮೆರಾದ ಮೇಲೆ ಎರಡು ತುಂಡು ಮ್ಯಾಗ್ನೆಟ್ ಇಟ್ಟಿದ್ದ. ಈ ರೀತಿ ಮ್ಯಾಗ್ನೆಟ್ ಇಡುವುದರಿಂದ ಕ್ಯಾಮೆರಾ ಕೆಲಸ ಮಾಡುವುದಿಲ್ಲ. ಆ ದಾರಿಯೂ ನನಗೆ ಮುಚ್ಚಿಹೋಗಿತ್ತು.

ಕೊಲೆಯಾದ ಚಿರಾಗ್ ಬಳ್ಳಾರಿಯವ, ಆತನ ಜೊತೆ ಅವನ ಸ್ನೇಹಿತೆ ಸಹ ಅದೇ ಹೋಟೆಲಿನಲ್ಲಿ ರೂಮು ಹಾಕಿದ್ದಳು. ಆಕೆಯನ್ನು ಕರೆದು ಕೂರಿಸಿಕೊಂಡೆ, ನಿಧಾನಕೆ ಮಾತಿಗೆ ಎಳೆದೆ. ಇಬ್ಬರೂ ಒಟ್ಟಿಗೆ ಬಂದದ್ದಂತೆ, ಮೆಡಿಕಲ್ ಮಾಡುತ್ತಿದ್ದಾರೆ. ಆದರೆ ಚಿರಾಗ್ ಡ್ರಾಪ್ ಔಟು, ದುಶ್ಚಟ ಹತ್ತಿಸಿಕೊಂಡು ಓದಿಗೆ ಗುಡ್ ಬೈ ಹೇಳಿದ್ದ. ಆದರೆ ಸ್ನೇಹ ಮಾತ್ರ ಮುಂದುವರೆದಿತ್ತು. ಆಕೆ ಶಾಕ್’ಗೆ ಒಳಗಾಗಿದ್ದಳು, ಅವಳನ್ನು ಮನೆಗೆ ಕಳುಹಿಸಿಕೊಟ್ಟೆ.

ಇನ್ಸ್’ಪೆಕ್ಟರ್ ವಿಕ್ರಮ್  ನನ್ನನ್ನು ತರಾಟೆಗೆ ತೆಗೆದುಕೊಂಡರು . ಈ ಕೊಲೆಯ ಸಸ್ಪೆಕ್ಟ್ ಅವಳೇ , ಯಾಕೆ ಬಿಟ್ಟಿರಿ ಎಂದು ಆಕ್ರೋಶಗೊಂಡರು.

“ಆಕೇನ ನೋಡಿದೀರಾ? ನಾಯಿಗೆ ಹೊಡೆಯುವ ಕೋಲಿನಂತೆ ಇದ್ದಾಳೆ, ಆಸ್ತಮಾ ಬೇರೆ. ಈ ಚಳಿಗಾಲದಲ್ಲಿ ಆಕೆ ಬೆಳಗಿನ ಜಾವ ಎದ್ದು ಬಂದು ಕೊಲೆಮಾಡುವುದು ಅಸಾಧ್ಯ. ಮೋಟಿವೇಶನ್ ಸಹ ಅವಳಿಗಿಲ್ಲ. ಕೊಲೆಯಾದವ ಶಾಸಕರ ಮಗ ಅವನನ್ನು ಕೊಲ್ಲುವಷ್ಟು ಧೈರ್ಯ, ಚಾಕಚಕ್ಯತೆ ಎರಡೂ ಅವಳಲ್ಲಿಲ್ಲ. ಅಷ್ಟಲ್ಲದೇ ಬೆಂಗಳೂರಿಗೆ ಕರೆದುಕೊಂಡು ಬಂದು ಸಾಯಿಸುವ ಅಗತ್ಯ ಇಲ್ಲವೇ ಇಲ್ಲ” ಎಂದು ವಾದಿಸಿದೆ.

ಅಷ್ಟರಲ್ಲಿ ಫೋಟೋಗ್ರಾಫರ್ ಬಂದು ಕರೆದ . ಆತನಿಗೆ ವಜ್ರದ ಹರಳೊಂದು ಸಿಕ್ಕಿತ್ತು. ನನಗೆ ಮನಸ್ಸಿನಲ್ಲಿ ಏನೋ ಹೊಳೆಯಿತು. ತಕ್ಷಣವೇ ದೇಹವನ್ನು ಸ್ಕ್ಯಾನ್ ಮಾಡಲು ಕಳುಹಿಸಿಕೊಟ್ಟೆ, ನಾನೂ ಸಹ ರಕ್ತದ ಸ್ಯಾಂಪಲ್ ತೆಗೆದುಕೊಂಡು, ಆಸ್ಪತ್ರೆಗೂ ಕಳುಹಿಸಿದೆ. ಕೇಸಿಗೆ ಹೊಸ ತಿರುವು ಸಿಕ್ಕಿತ್ತು.

ಅದೇ ಹೋಟೆಲಿನಲ್ಲಿ ತಿಂಡಿ ತಿಂದು, ವೈನ್ ಹೀರಿ ನನ್ನ ಸಿಗಾರಿಗೆ ಬೆಂಕಿ ಇಟ್ಟೆ. ಹಾಗೆಯೇ ಒಂದು ಜೊಂಪು ನನ್ನನ್ನು ಆವರಿಸಿಕೊಂಡಿತು. ವಿಕ್ರಂ , ಡಿಸಿ ಹಾಗೂ ಶಾಸಕರು ಬಂದಾಗ ನನಗೆ ಎಚ್ಚರವಾಯಿತು.

” ಸ್ವಲ್ಪ ಬೇಗನೆ ಸಾಲ್ವ್ ಮಾಡಿ ಸಾರ್ , ಪೊಲಿಟಿಕಲ್ ಪ್ರೆಷರ್ ಇದೆ ” ಎಂದರು ಡಿಸಿ. ಬುಲ್ ಶಿಟ್ , ನನಗೆ ಇವೆಲ್ಲಾ ಹಿಡಿಸುವುದಿಲ್ಲ. ಸತ್ತವ ಯಾರೇ ಆದರೂ ಜೀವ ಜೀವವೇ ಅಲ್ಲವೇ. ಶಾಸಕನ ಮಗ ಎಂದು ಬೇಗ ಸಾಲ್ವ್ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಸುಮ್ಮನೆ ಔಪಚಾರಿಕವಾಗಿ ಮಾತನಾಡಿಸಿ ಕಳುಹಿಸಿದೆ.

ಡಾಕ್ಟರ್ ರಿಪೋರ್ಟ್’ಗೆ ಕಾಯುತ್ತಾ ಕುಳಿತ .

(ಮುಂದುವರೆಯುವುದು …………………………..)

By Gurukiran

Facebook ಕಾಮೆಂಟ್ಸ್

ಲೇಖಕರ ಕುರಿತು

Gurukiran

ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!